ಮಳೆಗೂ ಅನಾಹುತಕ್ಕೂ ನಡುವೆ ಏನು ಸಂಬಂಧ ಇದೆ? 2 ದಶಕಗಳ ಹಿಂದೆ ಕೇರಳ ಮತ್ತು ಕೊಡಗಿನ ಮೇಲೆ ಇಂದಿನಂತೆ ಮಳೆ ಸುರಿದಿರುತ್ತಿದ್ದರೆ, ಈ ಪರಿ ಗುಡ್ಡಗಳು ಕುಸಿಯುತ್ತಿತ್ತೇ? ಊರೇ ಮಾಯವಾಗುತ್ತಿತ್ತೇ? ಗ್ರಾಮಕ್ಕೆ ಗ್ರಾಮವೇ ಮುಳುಗಿ ಬಿಡುತ್ತಿತ್ತೇ?
ಇಲ್ಲ ಎಂಬುದೇ ಉತ್ತರ. ಯಾಕೆಂದರೆ, ಈ ಬಾರಿ ಮಳೆಯ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ ಅನಾಹುತ ತಂದೊಡ್ಡಬಲ್ಲಷ್ಟು ಮಳೆ ಸುರಿದಿಲ್ಲ ಎಂದೇ ತಜ್ಞರು ಅಭಿಪ್ರಾಯ ಪಡುತ್ತಾರೆ. ಭೂಮಿಯ ಮೇಲೆ ಮಾನವನ ಮಿತಿ ಮೀರಿದ ಚಟುವಟಿಕೆಯೇ ಅನಾಹುತಗಳ ಮೂಲ ಅನ್ನುತ್ತವೆ ಬೇರೆ ಬೇರೆ ವರದಿಗಳು.
ಪಶ್ಚಿಮ ಘಟ್ಟಗಳನ್ನು ಬಿಟ್ಟು ಕೊಡಗು ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಲ್ಲಿನ ಭೂಪದರದಲ್ಲಿ ವಿಶೇಷ ಗುಣವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಲ್ಲು ಮಣ್ಣಾಗುವ ಪ್ರಕ್ರಿಯೆ ಪಶ್ಚಿಮಘಟ್ಟಗಳಲ್ಲಿ ಹೆಚ್ಚು. ಆದ್ದರಿಂದ ಇಲ್ಲಿ ಮಣ್ಣಿನ ಪದರ ಹೆಚ್ಚು ದಟ್ಟವಾಗಿರುತ್ತದೆ. ಉಳಿದ ಕಡೆಗಳಿಗೆ ಹೋಲಿಸಿದರೆ, ಹೆಚ್ಚು ಆಳವಾಗಿ ಮಣ್ಣು ನೆಲೆಗೊಂಡಿರುತ್ತದೆ. ಸಾಮಾನ್ಯ ಮಳೆಯನ್ನು ತಾಳಿಕೊಳ್ಳಬಲ್ಲಷ್ಟು ಸಾಮಥ್ರ್ಯವಿರುವ ಈ ಮಣ್ಣಿಗೆ, ಭಾರೀ ಮಳೆಯು ಒತ್ತಡವನ್ನು ಹೇರುತ್ತದೆ. ಈ ಬಾರಿ ಕೊಡಗಿನ ಮೇಲೆ ಮಾಮೂಲಿಗಿಂತ ಮೂರು ಪಟ್ಟು ಅಧಿಕ ಮಳೆ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ಒಂದು ಕಡೆ ತುಂಬಾ ಆಳದವರೆಗೆ ಬರೇ ಮಣ್ಣಿನ ಪದರವೇ ಇರುವುದು ಮತ್ತು ಇನ್ನೊಂದು ಕಡೆ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿರುವುದು-ಇವೆರಡೂ ಜೊತೆಗೂಡಿದಾಗ ಉಂಟಾದ ಫಲಿತಾಂಶವೇ ಈಗಿನ ಅನಾಹುತ ಎಂಬುದೇ ಸರಿ.
ಭೂಮಿಯ ಮೇಲೆ ವಿವಿಧ ನಿರ್ಮಾಣ ಕಾಮಗಾರಿಗಳು ನಡೆಯುವುದೆಂದರೆ ಅದರರ್ಥ ಅಭಿವೃದ್ಧಿ ಎಂದಷ್ಟೇ ಅಲ್ಲ, ಭೂಮಿಯ ಹೊರ ಕವಚವನ್ನು ನಾಶಪಡಿಸಲಾಗುತ್ತಿದೆ ಎಂದೂ ಅರ್ಥವಿದೆ. ಅಭಿವೃದ್ಧಿಯ ಅತಿ ದೊಡ್ಡ ವಿರೋಧಿಗಳು ಯಾರೆಂದರೆ, ಅರಣ್ಯ-ಪೆÇದೆ, ಮರ, ಹುಲ್ಲು ಹಾಸುಗಳು, ಕಲ್ಲು-ಬಂಡೆಗಳು ಇತ್ಯಾದಿ. ವಿಶೇಷ ಏನೆಂದರೆ, ಇವ್ಯಾವುದಕ್ಕೂ ಪ್ರತಿಭಟಿಸುವ ಸಾಮಥ್ರ್ಯವಾಗಲಿ, ಮಾತಾಡುವ ಶಕ್ತಿಯಾಗಲಿ ಇಲ್ಲ. ಈ ದೌರ್ಬಲ್ಯವನ್ನು ಮಾನವ ಪದೇ ಪದೇ ದುರುಪಯೋಗಿಸುತ್ತಲೇ ಇದ್ದಾನೆ. ರಸ್ತೆ ನಿರ್ಮಾಣ, ಕಟ್ಟಡ, ತೋಟಗಳ ನಿರ್ಮಾಣಕ್ಕೆಂದು ಭೂಮಿಯ ಹೊರ ಕವಚದಲ್ಲಿರುವ ಇವುಗಳನ್ನು ಕತ್ತರಿಸುತ್ತಾನೆ. ಗುಡ್ಡಗಳನ್ನು ಸಮತಟ್ಟುಗೊಳಿಸುತ್ತಾನೆ. ಕಲ್ಲು ಕ್ವಾರಿಗಳಿಗಾಗಿ ಭೂಗರ್ಭವನ್ನೇ ಕೊರೆಯುತ್ತಾನೆ. ಕಾಡು ಕಡಿಯುತ್ತಾನೆ.
ಮಳೆಯಿಂದ ಅತ್ಯಂತ ಹೆಚ್ಚು ಹಾನಿ ಸಂಭವಿಸಿರುವ ಮಡಿಕೇರಿ ಮತ್ತು ಕೊಡಗು ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿ ಅಧಿಕೃತ ಹೋಮ್‍ಸ್ಟೇಗಳ ಸಂಖ್ಯೆಯೇ ಮೂರು ಸಾವಿರದಷ್ಟಿದೆ. ಈ ಹೋಮ್‍ಸ್ಟೇಗಳು ತಲೆ ಎತ್ತಿರುವುದೇ ಪ್ರವಾಸಿಗಳನ್ನು ಗುರಿಯಾಗಿಸಿಕೊಂಡು ಆರಂಭದಲ್ಲಿ ಗುಡ್ಡಗಳ ಅಡಿಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ಇದ್ದಿದ್ದ ರೆಸಾರ್ಟ್‍ಗಳು ಮತ್ತು ಹೋಮ್‍ಸ್ಟೇಗಳು ಬಳಿಕ ವಿಪರೀತವಾಗಿ ಹೆಚ್ಚಾದುವು. ಗುಡ್ಡಗಳನ್ನು ಕೊರೆದು ಅದರ ಮಧ್ಯ ಭಾಗದಲ್ಲೂ ರೆಸಾರ್ಟುಗಳು ತಲೆ ಎತ್ತಿದುವು. ನಿಜವಾಗಿ, ಮಳೆಯ ನೀರು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಭೂಮಿಯ ಒಳಗೆ ಸೇರದಂತೆ ತಡೆಯುವುದೇ ಭೂಮಿಯ ಮೇಲಿನ ಮರ-ಗಿಡಗಳು, ಹಲ್ಲು ಪೊದೆಗಳು. ಅಭಿವೃದ್ಧಿಯ ಹೆಸರಲ್ಲಿ ಇವುಗಳನ್ನು ನಾಶ ಮಾಡುವಾಗ ಭೂಮಿಯ ಒಳಗೆ ಸೇರಿಕೊಂಡಿರುವ ಬೇರುಗಳೂ ಅದುರುತ್ತವೆ ಮತ್ತು ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದಾಗಿ ಭೂಮಿಯ ಒಳಗಡೆಗೆ ನೀರು ಸೇರಿಕೊಳ್ಳುವುದಕ್ಕೆ ಸುಲಭ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಹೀಗೆ ಒಳ ಸೇರುವ ನೀರು ಭೂಮಿಯ ಒಳಗಡೆಗೆ ಒತ್ತಡವೊಂದನ್ನು ಸೃಷ್ಟಿಸುತ್ತದೆ. ಈ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಹೋದಾಗ ಕುಸಿತ ಉಂಟಾಗುತ್ತದೆ.
ಮಳೆಗೂ ಮನುಷ್ಯನಿಗೂ ನಡುವೆ ಎಷ್ಟೊಂದು ಆಪ್ತವಾದ ಸಂಬಂಧವೆಂದರೆ ಮಳೆಯಿಲ್ಲದೆ ಮನುಷ್ಯನೇ ಇಲ್ಲ ಅನ್ನುವಷ್ಟು. ವರ್ಷದ 12 ತಿಂಗಳಲ್ಲಿ ಮೂರ್ನಾಲ್ಕು ತಿಂಗಳನ್ನು ಮನುಷ್ಯ ಮಳೆಗೆಂದೇ ಮೀಸಲಿಟ್ಟಿದ್ದಾನೆ. ಮಳೆ ಬರುವುದಕ್ಕಿಂತ ಮೊದಲೇ ಅದರ ಸ್ವಾಗತಕ್ಕಾಗಿ ತಯಾರಿಯನ್ನೂ ನಡೆಸುತ್ತಾನೆ. ನಿರೀಕ್ಷೆಗಿಂತ ಕಡಿಮೆ ಮಳೆ ಬಿದ್ದರೆ ಆತಂಕ ಪಡುತ್ತಾನೆ. ಹೆಚ್ಚಾದರೂ ಆತಂಕ ಪಡುತ್ತಾನೆ. ಹಾಗಂತ, ಪ್ರತಿ ವರ್ಷವೂ ಏಕ ಪ್ರಕಾರವಾಗಿಯೇ ಮಳೆ ಬರುತ್ತದೆ ಎಂದಲ್ಲ. ಹೆಚ್ಚು- ಕಡಿಮೆ ಆಗುತ್ತಲೇ ಇರುತ್ತದೆ. ಈಗ ಸುರಿದಿರುವ ಮಳೆಯು ಎರಡು ದಶಕಗಳ ಹಿಂದೆ ಹೆಚ್ಚು ಎಂದು ಹೇಳುವ ಸಾಧ್ಯತೆಯೇ ಇಲ್ಲ. ಅಂದು ಮಳೆ ಅಧಿಕ ಸುರಿದರೂ ಅದು ಭೂಮಿಯೊಳಗಡೆ ಸೇರದಂತೆ ಮರ-ಗಿಡ, ಪೊದೆಗಳು ತಡೆದಿಟ್ಟುಕೊಳ್ಳುತ್ತಿದ್ದುದರಿಂದ ಭೂಕುಸಿತ, ಗ್ರಾಮಗಳ ಕಣ್ಮರೆಗೆ ಅಂದು ಅವಕಾಶ ಇದ್ದಿರಲಿಲ್ಲ. ಇವತ್ತು ಹಾಗಲ್ಲ. ಅಭಿವೃದ್ಧಿ ಎಲ್ಲವನ್ನೂ ನಾಶ ಮಾಡುತ್ತಿದೆ. ಅಭಿವೃದ್ಧಿ ಎಂಬ ನಾಲ್ಕಕ್ಷರ ಚಿಗುರುವುದೇ ಭೂಮಿಯ ಮೇಲೆ ಭೂಮಿಯಿಲ್ಲದೇ ಅಭಿವೃದ್ಧಿ ಸಾಧ್ಯವೂ ಇಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಎಂದರೆ ಭೂಮಿಯ ಮೇಲ್ಪದರವನ್ನು ನಾಶ ಮಾಡುವುದು ಎಂದೇ ಅರ್ಥ. ಕಲ್ಲು ಕ್ವಾರೆಗಳ ಹೆಸರಲ್ಲಿ ಗಣಿಯ ಹೆಸರಲ್ಲಿ ಭೂಮಿಯ ಒಡಲನ್ನು ಪ್ರತಿನಿತ್ಯ ಅಗೆಯುತ್ತಲೇ ಇದ್ದೇವೆ. ಭಾರೀ ಸ್ಫೋಟಕಗಳನ್ನು ಸಿಡಿಸಿ ಭೂಮಿಯ ಒಳಪದರವನ್ನು ಸಡಿಲಗೊಳಿಸುತ್ತಿದ್ದೇವೆ. ಬಹುಶಃ, ಭೂಮಿಯು ಇದರ ಪ್ರತೀಕಾರಕ್ಕಾಗಿ ಕಾಯುತ್ತಿರುವಂತೆ ಕಾಣಿಸುತ್ತಿದೆ.
ಮಳೆ ಮತ್ತು ಇಳೆ ಎರಡರ ನಡುವೆಯೂ ಆಪ್ತವಾದ ಸಂಬಂಧ ಇದೆ. ಮಳೆ ಮುನಿದರೆ ಇಳೆ ಬಾಡುತ್ತದೆ. ಇಳೆಯ ಹಚ್ಚಹಸುರಿನಲ್ಲಿ ಮಳೆಯ ಪಾತ್ರವೇ ದೊಡ್ಡದು. ಆದರೆ ಒಂದು ಹನಿ ಮಳೆ ಸೃಷ್ಟಿಸಲಾಗದ ಮನುಷ್ಯ ಇಳೆಯ ಮೇಲಂತೂ ದೌರ್ಜನ್ಯ ನಡೆಸುತ್ತಲೇ ಬಂದಿz್ದÁನೆ. ಇವತ್ತು ಭೂಮಿಯ ತಾಪಮಾನದಲ್ಲಿ ಭಾರೀ ಏರಿಕೆ ಉಂಟಾಗಿದೆ. ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುವುದೆಂದರೆ, ಮಳೆಯ ಸುರಿಯುವಿಕೆಯಲ್ಲಿ ಅನಿಶ್ಚಿತತೆ ನಿರ್ಮಾಣವಾಗುವುದು ಎಂದರ್ಥ. ಯಾವ ಭೂಭಾಗದಲ್ಲಿ ಮಳೆ ಬೀಳಬೇಕೋ ಆ ಭಾಗದಲ್ಲಿ ಮಳೆ ಬೀಳದೇ ಇರುವುದು ಮತ್ತು ಎಲ್ಲಿ ಬೀಳಬಾರದೋ ಅಲ್ಲಿ ಮಳೆ ಬೀಳುವುದು- ಭೂತಾಪಮಾನದಿಂದ ಹೀಗಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಮುದ್ರ ಬಿಸಿಯಾಗುವುದು ಭೂತಾಪಮಾನದ ಲಕ್ಷಣ. ಸಮುದ್ರದ ಒಳಗಡೆ ನಡೆಯುವ ಕ್ರಿಯೆಗಳಲ್ಲಿ ಏರುಪೇರಾದಾಗ ಮಳೆಯ ಮಾರುತಗಳಲ್ಲಿ ಏರುಪೇರಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಬೀಳಬೇಕಾದ ಕಡೆ ಮಳೆ ಬೀಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಏನೇ ಇದ್ದರೂ, ಅಂತಿಮವಾಗಿ ಇವೆಲ್ಲದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಮನುಷ್ಯ. ಭೂಮಿ ಬಾಯಿ ಬಿಟ್ಟರೂ ಗುಡ್ಡ ಕುಸಿದರೂ ನದಿ ಉಕ್ಕಿ ಹರಿದರೂ ಆತ ಒಗ್ಗಿಕೊಳ್ಳಲೇ ಬೇಕು. ಇದೀಗ ಅಂಥದ್ದೊಂದು ಸಂದರ್ಭ ಎದುರಾಗಿದೆ. ಮಾನವನಿಗೆ ಮಳೆ ಮುಖಾಮುಖಿ ನಿಂತಿದೆ. ಭೂಮಿಯು ಮಳೆಯ ಜೊತೆ ಸೇರಿಕೊಂಡಿದೆ. ಮಳೆ ಮತ್ತು ಭೂಮಿ ಎರಡೂ ಜೊತೆ ಸೇರಿಕೊಂಡರೆ ಮಾನವ ಎಲ್ಲಿ ಅನ್ನುವ ಪ್ರಶ್ನೆಯನ್ನು ಈಗನ ನೆರೆ ಹುಟ್ಟಿಹಾಕಿದೆ. ಪ್ರಕೃತಿಯೇ ಹುಟ್ಟುಹಾಕಿರುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿವೇಕವನ್ನು ಮನುಷ್ಯ ಪ್ರದರ್ಶಿಸಬೇಕು. ತಾನು ಏನು ಮತ್ತು ಪ್ರಕೃತಿಯ ಮೇಲೆ ತನಗೆ ಎಷ್ಟು ಹಕ್ಕು, ಕರ್ತವ್ಯವಿದೆ ಎಂಬ ಬಗ್ಗೆ ಅವಲೋಕನ ನಡೆಸಲು ಪ್ರತಿಯೊಬ್ಬರಿಗೂ ಈ ಮಳೆ ನೆಪವಾಗಿ ಬಳಕೆಯಾಗಬೇಕು.
ಪ್ರಕೃತಿಗೆ ಮುಖಾಮುಖಿ ನಿಂತು ಮಾನವ ಗೆಲ್ಲಲಾರ. ಕೇವಲ ಒಂದು ವಾರಗಳ ಕಾಲ ಸುರಿದ ಮಳೆಗೆ ಮಾನವ ತಬ್ಬಿಬ್ಬಾಗಿರುವುದೇ ಇದಕ್ಕೆ ಸಾಕ್ಷಿ. ಪ್ರಕೃತಿ ಮತ್ತು ಮನುಷ್ಯರ ನಡುವೆ ಗೆಳೆತನ ಬೆಳೆಯುವುದೇ ಇದಕ್ಕಿರುವ ಪರಿಹಾರ. ಮಾನವನು ಭೋಗ ಭಾವನೆಯನ್ನು ಕಳಚಿಟ್ಟು ಪ್ರಕೃತಿಯನ್ನು ನೋಡುವ ದಿನ ಬಂದಾಗ ಮಳೆಯೂ ಅನುಗ್ರಹವಾಗಬಹುದು. ಭೂಮಿಯೂ ಸುರಕ್ಷಿತವಾಗಬಹುದು.
No comments:
Post a Comment