Thursday, 9 August 2018

ಹೂ ಮಾಲೆ ಹಾಕುವ ಕೈಗೂ ಗೊತ್ತಿದೆ, ಒಡ್ಡುವ ಕೊರಳಿಗೂ ಗೊತ್ತಿದೆ

    ಜೀವಾವಧಿ ಶಿಕ್ಷೆಯ ಬಳಿಕದ ಶಿಕ್ಷೆಯೆಂದರೆ ಮರಣ ದಂಡನೆ. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ನೇಣನ್ನು ನಿರೀಕ್ಷಿಸುತ್ತಾ ಜೈಲಿನೊಳಗೆ ಬದುಕುತ್ತಿರುವವರ ಸಂಖ್ಯೆ ಈ ದೇಶದಲ್ಲಿ ನೂರರ ಒಳಗಷ್ಟೇ ಇದೆ. ಇವರಿಗೆ ಹೋಲಿಸಿದರೆ ಜೀವಾವಧಿ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಇದಕ್ಕಿಂತ ಕೆಲವು ಪಟ್ಟು ಅಧಿಕ ಇರಬಹುದು. ಅಂದರೆ, ವ್ಯಕ್ತಿಯೋರ್ವ ಜೀವಾವಧಿ ಶಿಕ್ಷೆಗೆ ಗುರಿಯಾಗುವುದೆಂದರೆ, ಅದು ಕಿಸೆಗಳ್ಳತನ, ಅಡಿಕೆ ಕಳ್ಳತನ, ಚಪ್ಪಲಿ ಕಳ್ಳತನದಂತೆ ಅಲ್ಲ. ಅದೊಂದು ಅಪರೂಪವಾದ ಮತ್ತು ಗಂಭೀರವಾದ ಪ್ರಕರಣ. ಇಂಥವರನ್ನು ಓರ್ವ ಜನಪ್ರತಿನಿಧಿ ಸನ್ಮಾನಿಸುವುದೆಂದರೆ ಅದು ರವಾನಿಸುವ ಸಂದೇಶವೇನು? ಕೇಂದ್ರ ಸಚಿವ ಜಯಂತ್ ಸಿನ್ಹ ಇಂಥದ್ದೊಂದು  ಪ್ರಶ್ನೆಗೆ ಚಾಲನೆಯನ್ನು ನೀಡಿದ್ದಾರೆ. ಗೋಮಾಂಸ ಸಾಗಾಟದ ಹೆಸರಲ್ಲಿ 2017 ಜೂನ್‍ನಲ್ಲಿ ಜಾರ್ಖಂಡ್‍ನ ರಾಮ್‍ಗಢದಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ಥಳಿಸಿ ಕೊಂದ ಅಪರಾಧಿಗಳನ್ನು ಹೂಮಾಲೆ ಹಾಕಿ ಸ್ವಾಗತಿಸುವ ವೇಳೆ ಅವರಿಗೆ ಈ ಮಂದಿಯ ಮೇಲಿರುವ ಆರೋಪ, ತ್ವರಿತಗತಿ ನ್ಯಾಯಾಲಯ ಅವರ ಮೇಲಿನ ಆರೋಪವನ್ನು ಎತ್ತಿ ಹಿಡಿದಿರುವುದು ಮತ್ತು ‘ಗೋರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆಗಳನ್ನು ಒಪ್ಪಲಾಗದು’ ಎಂದು ಸುಪ್ರೀಮ್ ಕೋರ್ಟು ಹೇಳಿರುವುದೆಲ್ಲ ಅರಿವಿಗೆ ಬಂದಿರಲಾರದು ಎಂದು ಭಾವಿಸುವುದು ಕಟು ಮೂರ್ಖತನವಾದೀತು. ತನ್ನ ಹೂಮಾಲೆಗೆ ಕೊರಳೊಡ್ಡುತ್ತಿರುವ 8 ಮಂದಿಯೂ ಅಪರಾಧಿಗಳು ಅನ್ನುವುದು ಅವರಿಗೆ ಗೊತ್ತಿದೆ. ತ್ವರಿತಗತಿ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿದವರಿಗೆ ಹೈಕೋರ್ಟು ಜಾಮೀನು ನೀಡುವುದರ ಅರ್ಥ ಅಪರಾಧ ಮುಕ್ತತೆಯಲ್ಲ ಅನ್ನುವುದೂ ಅವರಿಗೆ ಗೊತ್ತಿದೆ. ಗೋರಕ್ಷಣೆಯ ಹೆಸರಲ್ಲಿ ಹಲ್ಲೆ, ಹತ್ಯೆಯನ್ನು ಈ ಹೂಮಾಲೆ ಹಾಕುವ ಎರಡು ದಿನಗಳ ಮೊದಲು ಸುಪ್ರೀಮ್ ಕೋರ್ಟು ಖಂಡಿಸಿರುವುದನ್ನೂ ಅವರು ಬಲ್ಲರು. ಹಾಗಿದ್ದರೆ ಜಯಂತ್ ಸಿನ್ಹ ಹೀಗೇಕೆ ಮಾಡಿದರು? ಮನುಷ್ಯ ಸಹಜ ಭಾವನೆಗಳು ಒಪ್ಪದ ಮತ್ತು ಕಾನೂನು ಪುರಸ್ಕರಿಸದ ಕೃತ್ಯವೊಂದಕ್ಕೆ ಅವರೇಕೆ ನೇತೃತ್ವ ನೀಡಿದರು? ಈ ಬಗ್ಗೆ ಅವರ ಪP್ಷÀದ ಅಭಿಪ್ರಾಯವೇನು? ಅದು ಈ ಹೂಮಾಲೆ ಸಮಾರಂಭವನ್ನು ಸಮರ್ಥಿಸುತ್ತದೆಯೇ? ತನ್ನ ಪಕ್ಪದಿಂದ ಆರಿಸಿ ಬಂದ ಜನಪ್ರತಿನಿಧಿಯೊಬ್ಬ ಅಪರಾಧಿಗಳನ್ನು ಗೌರವಿಸುವುದು ಅದಕ್ಕೆ ಒಪ್ಪಿಗೆಯೇ? ಅದು ಸಮಾಜಕ್ಕೆ ಗುಣಾತ್ಮಕ ಸಂದೇಶವನ್ನು ರವಾನಿಸುತ್ತದೆಂಬ ನಿಲುವೇ ಬಿಜೆಪಿಯದು? ಕನಿಷ್ಠ ಒಂದು ಗೆರೆಯ ಅಧಿಕೃತ ಹೇಳಿಕೆಯನ್ನಾದರೂ ಬಿಡುಗಡೆಗೊಳಿಸದೇ ಬಿಜೆಪಿ ಮೌನವಾಗಿರುವುದರ ಹಿನ್ನೆಲೆ ಏನು?
   ಗೋಸಾಗಾಟದ ವಿಷಯದಲ್ಲಿ ಸಾಮಾನ್ಯವಾಗಿ ಎರಡು ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ.
1. ಗೋಸಾಗಾಟ ಕಾನೂನುಬದ್ಧವೋ ಅಲ್ಲವೋ?
2. ಕಾನೂನು ಬದ್ಧವಾದರೂ ಅಲ್ಲವಾದರೂ ಅಂಥ ಸಾಗಾಟಗಾರರ ಮೇಲೆ ಓರ್ವ ವ್ಯಕ್ತಿಗೆ ಅಥವಾ ಒಂದು ಗುಂಪಿಗೆ ದಾಳಿ ನಡೆಸುವ ಅಧಿಕಾರ ಇದೆಯೇ ಇಲ್ಲವೇ?
ಸಾಮಾನ್ಯವಾಗಿ, ಜಯಂತ್ ಸಿನ್ಹಾರ ಪಕ್ಷ ಇಂಥ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದು ಕಡಿಮೆ. ಅದು ನೇರವಾಗಿ ಮೂರನೆಯದಾದ ವಾದವೊಂದಕ್ಕೆ ನೆಗೆಯುತ್ತದೆ. ಅದು ಗೋವಿನ ಸುತ್ತ ಹೆಣೆಯಲಾದ ಭಾವನಾತ್ಮಕ ವಾದ. ಈ ವಾದವನ್ನು ಬಹುವಿಧ ಆಯಾಮಗಳೊಂದಿಗೆ ಚರ್ಚೆಯ ಮುನ್ನೆಲೆಗೆ ತಂದು ಹತ್ಯೆಯಂಥ ಅತಿ ಗಂಭೀರ ಕಾನೂನು ಭಂಗ ಕೃತ್ಯಗಳ ಕಾವನ್ನು ಅದು ತಗ್ಗಿಸುವ ಶ್ರಮ ನಡೆಸುತ್ತದೆ. ಶತಮಾನದ ವ್ಯಂಗ್ಯ ಏನೆಂದರೆ, ಗೋವಿನ ಸುತ್ತ ಇಂಥದ್ದೊಂದು ಭಾವನಾತ್ಮಕ ಚರ್ಚೆಯನ್ನು ಸಾರ್ವಜನಿಕವಾಗಿ ಜೀವಂತವಿಡುತ್ತಲೇ ಇನ್ನೊಂದು ಕಡೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅದು ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುತ್ತಲೇ ಇದೆ. ನಿಜವಾಗಿ, ಪರಮ ದ್ವಂದ್ವ ಇದು. ಬಿಜೆಪಿ ಆಡಳಿತದ ಕಳೆದ ನಾಲ್ಕು ವರ್ಷಗಳಿಂದ ಈ ದ್ವಂದ್ವ ನಡೆಯುತ್ತಿದ್ದರೂ ಜಯಂತ್ ಸಿನ್ಹರ ಪಕ್ಪದ ನಾಯಕರು, ಕಾರ್ಯಕರ್ತರು ಮತ್ತು ಹಿತೈಷಿಗಳು ಈ ಬಗ್ಗೆ ವಿರೋಧದ ಒಂದು ಮಾತನ್ನೂ ಆಡಿಲ್ಲ. ಬಹುಶಃ ಬಿಜೆಪಿಯ ಗೋಪ್ರೇಮ ಅಪ್ಪಟ ರಾಜಕೀಯ ಪ್ರೇರಿತ ಅನ್ನುವುದಕ್ಕೆ ಬಲವಾದ ಆಧಾರ ಇದು. ಆ ಪಕ್ಪಕ್ಕೆ ಅಲೀಮುದ್ದೀನ್ ಅನ್ಸಾರಿಯಂಥವರು ಮತ್ತೆ ಮತ್ತೆ ಒದಗುತ್ತಲೇ ಇರಬೇಕು. ಮಾತ್ರವಲ್ಲ, ಅಂಥವರನ್ನು ಥಳಿಸಿ ಕೊಂದು ಜೈಲು ಪಾಲಾಗುವ ಯುವಕರೂ ಬೇಕು. ಇಂಥದ್ದೊಂದು ವಾತಾವರಣವನ್ನು ನಿರಂತರ ಪ್ರಕ್ರಿಯೆಯಾಗಿ ಕಾಪಿಟ್ಟುಕೊಳ್ಳುವ ಅಪಾಯಕಾರಿ ತಂತ್ರವೊಂದನ್ನು ಅದು ಹೆಣೆದಿಟ್ಟುಕೊಂಡಿದೆ. ಈ ತಂತ್ರಕ್ಕೆ ತಿರುಗೇಟು ಕೊಡಬಲ್ಲವರು ಯಾರೆಂದರೆ, ಜಯಂತ್ ಸಿನ್ಹಾರ ಹೂಮಾಲೆಗೆ ಕೊರಳೊಡ್ಡಿದ ಯುವಕರು, ಇಂಥ ಆರೋಪದೊಂದಿಗೆ ಪ್ರತಿದಿನ ಕೋರ್ಟು ಮೆಟ್ಟಲು ಹತ್ತುತ್ತಿರುವವರು ಮತ್ತು ಗೋವಿನ ಮೇಲೆ ನಿಜಕ್ಕೂ ಭಾವನಾತ್ಮಕ ಸಂಬಂಧ ಇರುವ ಈ ದೇಶದ ಅಸಂಖ್ಯ ಜನಸಾಮಾನ್ಯರು. ‘ನೀವೇಕೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುತ್ತೀರಿ’ ಎಂಬ ಒಂದು ಗೆರೆಯ ಪ್ರಶ್ನೆಯನ್ನು ಜಯಂತ್ ಸಿನ್ಹರಂಥವರ ಮುಂದೆ ಈ ಮಂದಿ ಎಸೆದರೂ ಸಾಕು, ಅದು ಬಹುದೊಡ್ಡ ಫಲಿತಾಂಶವೊಂದಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ಆ ಪ್ರಶ್ನೆಯಿಂದ ನಿಜಕ್ಕೂ ಲಾಭವಾಗುವುದಾದರೆ ಅದು ಗೋವುಗಳಿಗೆ ಮಾತ್ರ. ಮಾಂಸದ ಉದ್ದೇಶದಿಂದ ದೇಶದೊಳಗೆ ಎಷ್ಟು ಜಾನುವಾರುಗಳ ವಧೆ ನಡೆಯುತ್ತದೋ ಅದರ ಎಷ್ಟೋ ಪಟ್ಟು ಅಧಿಕ ಪ್ರಮಾಣದಲ್ಲಿ ವಿದೇಶಿಯರ ಬಾಯಿ ರುಚಿಯನ್ನು ತಣಿಸುವುದಕ್ಕಾಗಿ ಜಾನುವಾರುಗಳ ವಧೆ ನಡೆಯುತ್ತದೆ. ಹೀಗಿರುವಾಗ, ಒಂದು ವಧೆ ಸಹ್ಯವೂ ಇನ್ನೊಂದು ವಧೆ ಅಸಹ್ಯವೂ ಆಗುವುದಕ್ಕೆ ಸಾಧ್ಯವೇ ಇಲ್ಲ. ಗೋವಿನ ಹೆಸರಲ್ಲಿ ಅಲೀಮುದ್ದೀನ್ ಅನ್ಸಾರಿಯನ್ನು ಹತ್ಯೆ ನಡೆಸಿರುವುದು ಹೂಮಾಲೆ ಹಾಕಿ ಸ್ವಾಗತಿಸುವಷ್ಟು ಗೌರವಾರ್ಹ ಕೃತ್ಯವೆಂದಾದರೆ, ಹೀಗೆ ಹತ್ಯೆ ನಡೆಸಬೇಕಾದವರ ದೊಡ್ಡದೊಂದು ಪಟ್ಟಿ ಜಯಂತ್ ಸಿನ್ಹರ ಕೈಯಲ್ಲೇ  ಇದೆ. ಆ ಪಟ್ಟಿಯಲ್ಲಿ ಅಲೀಮುದ್ದೀನ್ ಅನ್ಸಾರಿಯಂಥ ಬಡ ವ್ಯಾಪಾರಿ ಖಂಡಿತ ಇದ್ದಿರಲಾರ. ಆ ಪಟ್ಟಿಯಲ್ಲಿರುವವರೆಲ್ಲ ಕಾರು, ಹೆಲಿಕಾಪ್ಟರ್, ವಿಮಾನಗಳಲ್ಲಿ ಸುತ್ತಾಡುವವರು. ಅವರ ಒಡೆತನದ ಕಾರ್ಖಾನೆಗಳಲ್ಲಿ ದಿನನಿತ್ಯ ಅಸಂಖ್ಯ ಜಾನುವಾರುಗಳು ಹತ್ಯೆಗೊಳಗಾಗುತ್ತಿವೆ. ಅಲ್ಲಿಂದಲೇ ಅವು ವಿದೇಶಗಳಿಗೆ ರಫ್ತಾಗುತ್ತಿವೆ. ಹೀಗೆ ಮಾಡುವವರ ಪಟ್ಟಿಯಲ್ಲಿ ರಾಜಕಾರಣಿಗಳಿದ್ದಾರೆ. ಮಾಂಸ ರಫ್ತಿನ ಬಗ್ಗೆ ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಕೋಟು-ಬೂಟಿನ ವ್ಯಕ್ತಿಗಳಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕುವ ಸರಕಾರಿ ಅಧಿಕಾರಿಗಳಿದ್ದಾರೆ. ಅಲ್ಲದೇ, ದೇಶೀಯವಾಗಿ ಸರಕಾರವೇ ಅನುಮತಿಸಿರುವ ಸಾವಿರಾರು ವಧಾಗೃಹಗಳಿವೆ. ಅವುಗಳಿಗೆ ಅನುಮತಿ ಪತ್ರವನ್ನು ಕೊಡುವವರೂ ಈ ಪಟ್ಟಿಯಲ್ಲಿದ್ದಾರೆ. ವಧಾಗೃಹಗಳನ್ನು ವರ್ಷಂಪ್ರತಿ ನಗರ ಸಭೆಗಳ ಅಧಿಕಾರಿಗಳೇ ಏಲಂ ಮಾಡುತ್ತಾರೆ. ಜನಪ್ರತಿನಿಧಿಗಳ ಸಮ್ಮತಿಯಿಂದಲೇ ಆ ಏಲಂ ನಡೆಯುತ್ತದೆ. ಈ ವಧಾಗೃಹಗಳಿಗೆ ಜಾನುವಾರು ಸಾಗಾಟ ಮಾಡಲು ಈ ನಗರ ಪಾಲಿಕೆಗಳೇ ಅನುಮತಿ ಪತ್ರವನ್ನು ಮಂಜೂರು ಮಾಡುತ್ತವೆ. ಇವೆಲ್ಲ ನಡೆಯುವುದು ಅಧಿಕಾರಿಗಳು, ಜನಪ್ರತಿನಿಧಿಗಳೆಂಬ ಮನುಷ್ಯ ವರ್ಗದಿಂದಲೇ ಆಗಿರುತ್ತದೆ. ಆದರೆ ಇವರಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಗೋರಕ್ಷಕರಿಂದ ಹಲ್ಲೆಗೆ ಒಳಗಾದ ಒಂದೇ ಒಂದು ಘಟನೆ ಈವರೆಗೂ ನಡೆದಿಲ್ಲ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿಲ್ಲ. ಯಾಕೆ ಹೀಗೆ| ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿ ಮಾಂಸೋದ್ಯಮದಲ್ಲಿ ತೊಡಗಿರುವವರು ಸುರಕ್ಷಿತರಾಗಿರುವುದೂ ಜುಜುಬಿ ಸಾಗಾಟ-ಮಾರಾಟ ಮಾಡುವವರು ಹತ್ಯೆಗೊಳಗಾಗುವುದೂ ಏಕೆ? ಮಾಂಸೋದ್ಯಮದಲ್ಲಿ ತೊಡಗಿರುವ ಮತ್ತು ವಿದೇಶಕ್ಕೆ ರಫ್ತು ಮಾಡಿ ದುಡ್ಡು ಮಾಡುತ್ತಿರುವವರಿಗಿಂತ ಅಲೀಮುದ್ದೀನ್ ಅನ್ಸಾರಿಯಂಥವರು ಪರಮ ದ್ರೋಹಿಗಳಾಗಿ ಕಾಣಿಸುತ್ತಿರುವುದು ಯಾಕಾಗಿ?
    ನಿಜ ಏನು ಅನ್ನುವುದು ಹೂಮಾಲೆ ಹಾಕುವ ಜಯಂತ್ ಸಿನ್ಹಗೂ ಗೊತ್ತಿದೆ. ಕೊರಳೊಡ್ಡಿದ ಅಪರಾಧಿಗಳಿಗೂ ಗೊತ್ತಿದೆ. ಗೊತ್ತಿಲ್ಲದಿರುವುದು ಬಡಪಾಯಿ ಗೋವುಗಳಿಗೆ ಮಾತ್ರ.


No comments:

Post a Comment