ಮಾನವ ಯಾಕೆ ದೇವನಾಗಲಾರ ಮತ್ತು ದೇವನು ಮಾನವನಿಗಿಂತ ಹೇಗೆ ಭಿನ್ನ ಅನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು- ಮಾನವ ಮತ್ತು ದೇವನ ನಡುವಿನ ಅಂತರ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳ ಕುರಿತಂತೆ ಈಗಾಗಲೇ ಇರುವ ಚರ್ಚೆಗೆ ಇನ್ನೊಂದಷ್ಟನ್ನು ಸೇರ್ಪಡೆಗೊಳಿಸಿದೆ. ಶಿರೂರು ಸ್ವಾಮೀಜಿಗಳು ತಮ್ಮನ್ನು ದೇವಮಾನವ ಎಂದು ಘೋಷಿಸಿಕೊಂಡಿಲ್ಲ, ನಿಜ. ಅವರು, ಮೈಲಿಗೆ ಭಾವವಿಲ್ಲದೇ ಜನರೊಂದಿಗೆ ಬೆರೆಯುತ್ತಿದ್ದವರು ಮತ್ತು ಮನುಷ್ಯ ಸಹಜ ಬಯಕೆಗಳನ್ನು ಮುಕ್ತವಾಗಿ ಸಮಾಜದೊಂದಿಗೆ ಹಂಚಿಕೊಂಡವರು ಎಂಬ ಶ್ಲಾಘನೆಯೂ ಇದೆ. ಆದರೆ, ಭಕ್ತ ಸಮೂಹ ಅವರನ್ನು ಇಷ್ಟೇ ಸಹಜವಾಗಿ ಸ್ವೀಕರಿಸಿಕೊಂಡಿದೆ ಎಂದು ಹೇಳುವ ಹಾಗಿಲ್ಲ. ಅವರ ಮೇಲಿನ ಪ್ರೀತಿಯು ಭಕ್ತಿಯಾಗಿ, ಆ ಭಕ್ತಿಯು ಆರಾಧನೆಯಾಗಿ ಮತ್ತು ಆ ಆರಾಧನೆಯು ಅವರಿಗೆ ಅತೀಂದ್ರಿಯ ಶಕ್ತಿ-ಸಾಮರ್ಥ್ಯ ವನ್ನು ಕೊಟ್ಟುಕೊಂಡು ದೇವ ಮಾನವನಂತೆ ಪೂಜೆಗೊಂಡಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಊಹೆಗೆ ಆಧಾರ ಏನೆಂದರೆ, ಈ ದೇಶದಲ್ಲಿ ಈಗಾಗಲೇ ಇರುವ ದೇವ ಮಾನವರುಗಳು. ಸ್ವಘೋಷಿತ ದೇವ ಮಾನವರುಗಳ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಶಿರ್ಡಿಯ ಸತ್ಯ ಸಾಯಿ ಬಾಬರ ಸಾವು- ಮಾನವ ದೇವನಾಗಲಾರ ಎಂಬ ಸಂದೇಶವನ್ನು ಈ ಹಿಂದೆ ಬಹಳ ಬಲವಾಗಿ ಈ ದೇಶದಲ್ಲಿ ಸಾರಿತ್ತು. ದೇವನಿಗೆ ನಾವು ಕೆಲವು ಗುಣಗಳನ್ನು ಕೊಟ್ಟುಕೊಂಡಿದ್ದೇವೆ ಅಥವಾ ದೇವ ಎಂಬವ ಮಾನವ ದೌರ್ಬಲ್ಯಗಳಿಗಿಂತ ಅತೀತನಾದವ ಎಂಬ ನಂಬಿಕೆ ಸಾಮಾಜಿಕವಾಗಿ ಇದೆ. ಆದರೂ ದೇವಮಾನವರು ಮತ್ತೆ ಮತ್ತೆ ಉದ್ಭವವಾಗುತ್ತಲೇ ಇರುತ್ತಾರೆ. ಶೂನ್ಯದಿಂದ ವಿವಿಧ ವಸ್ತುಗಳನ್ನು ಸೃಷ್ಟಿಸುತ್ತಿರುವರೆಂಬ ನಂಬಿಕೆಯೊಂದು ಶಿರ್ಡಿ ಸತ್ಯ ಸಾಯಿಬಾಬರ ಸುತ್ತ ನಿರ್ಮಾಣವಾಗಿತ್ತು. ಅವರು ಪವಾಡ ಪುರುಷರಾಗಿ ಜನರ ಆದರ ಮತ್ತು ಪೂಜೆಗೆ ಒಳಗಾಗಿದ್ದರು. ಆದರೂ ಅವರಿಗೆ ಮೃತ್ಯುವನ್ನು ಜಯಿಸಲು ಸಾಧ್ಯವಾಗಲಿಲ್ಲ. ಅವರನ್ನು ದೇವರೆಂದು ಪೂಜಿಸುತ್ತಿದ್ದ ಜನರಂತೆಯೇ ಸಾಯಿಬಾಬರಲ್ಲೂ ಮಾನವ ಸಹಜ ದೌರ್ಬಲ್ಯಗಳಿದ್ದುವು. ಅವರಿಗೆ ಕಾಯಿಲೆ ಬರುತ್ತಿತ್ತು. ನಿದ್ದೆ ಮಾಡುತ್ತಿದ್ದರು. ಹಸಿವು, ಬಾಯಾರಿಕೆ, ದಣಿವು, ಬೆವರು ಇತ್ಯಾದಿಗಳಿಂದ ಅವರು ಮುಕ್ತರಾಗಿರಲಿಲ್ಲ. ಅವರು ದೇಹವನ್ನು ಮುಚ್ಚುವುದಕ್ಕಾಗಿ ಉಡುಪು ಧರಿಸುತ್ತಿದ್ದರು. ಚಪ್ಪಲಿ ಧರಿಸುತ್ತಿದ್ದರು. ಅವರ ಕೂದಲು, ಉಗುರು ಬೆಳೆಯುತ್ತಿತ್ತು. ಒಂದು ರೀತಿಯಲ್ಲಿ, ಅವರಿಗೂ ಅವರನ್ನು ದೇವರೆಂದು ಪೂಜಿಸುವ ಭಕ್ತ ವೃಂದಕ್ಕೂ ಬಾಹ್ಯನೋಟಕ್ಕೆ ಯಾವ ವ್ಯತ್ಯಾಸವೂ ಇರಲಿಲ್ಲ. ಹಾಗಂತ, ಇದು ಸಾಯಿಬಾಬರಿಗೆ ಸಂಬಂಧಿಸಿ ಮಾತ್ರ ಹೇಳುವಂಥದ್ದಲ್ಲ. ಶಿರೂರು ಸ್ವಾಮಿಜಿಯವರಿಗೂ ಇದು ಅನ್ವಯ. ಪೇಜಾವರ ಸ್ವಾಮೀಜಿಗಳಿಗೂ ಇದು ಅನ್ವಯ ಮತ್ತು ಈ ದೇಶದಲ್ಲಿರುವ ಎಲ್ಲ ಮಠ-ಮಂದಿರ, ಚರ್ಚ್, ಮಸೀದಿಯೊಳಗಿನ ಸ್ವಾಮೀಜಿ, ಫಾದರ್, ಮೌಲಾನರಿಗೂ ಅನ್ವಯ. ಹಾಗಿದ್ದರೆ ದೇವನೆಂದರೆ ಯಾರು? ಆತ ಹೇಗಿರಬೇಕು? ಮಾನವ ಸಹಜ ರೀತಿ-ನೀತಿಗಳಿಂದ ದೇವನೂ ಮುಕ್ತನಲ್ಲದಿದ್ದರೆ ಮತ್ತೆ ದೇವನಾದರೂ ಯಾಕೆ ಬೇಕು? ಸತ್ಯ ಸಾಯಿಬಾಬರಂಥ ದೇವ ಮಾನವರುಗಳ ಸಾವು ಈ ಬಗೆಯ ಪ್ರಶ್ನೆಯನ್ನು ಅವರ ಭಕ್ತ ವೃಂದದಲ್ಲಿ ಹುಟ್ಟಿಸಿರುವ ಸಾಧ್ಯತೆ ಖಂಡಿತ ಇದೆ.
ನಿಜವಾಗಿ, ದೇವನು ಮಾನವ ಆಗಿರುವುದಕ್ಕೆ ಸಾಧ್ಯವಿಲ್ಲ. ಮಾನವನಂತಿರುವವ ದೇವನಾಗಲಾರ. ಮಾನವನನ್ನು ಸೃಷ್ಟಿಸಿದವನೆಂದು ಹೇಳಲಾಗುವ ಮತ್ತು ಜಗತ್ತಿನ ಸರ್ವ ಕ್ರಿಯೆ-ಪ್ರಕ್ರಿಯೆಗಳ ಮೇಲೂ ನಿಯಂತ್ರಣವನ್ನು ಹೊಂದಿರುವನೆಂದು ಅಂದುಕೊಳ್ಳಲಾಗುವ ದೇವನಿಗೆ ಸಾವು ಇರಬಾರದು. ನಿದ್ದೆ ಬಾದಿಸಬಾರದು. ಆತ ಕಾಯಿಲೆ ಬೀಳಬಾರದು. ದಣಿವು ಬಾಯಾರಿಕೆ, ಹಸಿವುಗಳು ಆತನಲ್ಲಿ ಕಾಣಿಸಬಾರದು. ಆತ ಸಾವಿಲ್ಲದ, ಪತ್ನಿ-ಮಕ್ಕಳು, ಕುಟುಂಬವನ್ನು ಹೊಂದಿಲ್ಲದ ಮತ್ತು ಮಾನವ ಸಹಜ ಬಯಕೆ-ಬೇಡಿಕೆಗಳನ್ನು ಮೀರಿ ನಿಂತ ವಿಶೇಷ ಶಕ್ತಿಯಾಗಿರಬೇಕು. ಇಂಥ ಶಕ್ತಿಗೆ ಮಾತ್ರ ಜಗತ್ತಿನ ಸರ್ವದರ ಮೇಲೆ ಸದಾ ಗಮನವಿಡುವುದಕ್ಕೆ ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯ. ದುರಂತ ಏನೆಂದರೆ, ತಮ್ಮನ್ನು ದೇವ ಮಾನವರೆಂದು ಕರೆಸಿಕೊಂಡಿರುವ ಯಾರಲ್ಲೂ ಈ ಸಾಮರ್ಥ್ಯ ಇಲ್ಲವೇ ಇಲ್ಲ. ಅದರ ಬದಲು ಈ ದೇವ ಮಾನವರಲ್ಲಿ ಹೆಚ್ಚಿನವರು ದೇವನಿಗೆ ಸಹ್ಯವಲ್ಲದ ಮತ್ತು ದೇವನು ನಿಷೇಧಿಸಿರುವ ಹತ್ತು-ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಹಲವರು ಜೈಲಲ್ಲಿದ್ದಾರೆ. ಒಂದು ವೇಳೆ, ಮನುಷ್ಯರ ಪೈಕಿ ಕೆಲವರಲ್ಲಿ ದೇವರ ಸಾಮಥ್ರ್ಯ ಇದ್ದಿದ್ದೇ ಆಗಿದ್ದರೆ, ಅವರ ಮೇಲೆ ಆರೋಪಗಳು ಇರುವುದು ಬಿಡಿ, ಬರೇ ದೇವ ಗುಣಗಳನ್ನೇ ಅವರು ಪ್ರದರ್ಶಿಸಬೇಕಿತ್ತು. ಮುಪ್ಪಿಲ್ಲದ, ಸಾವಿಲ್ಲದ ಪವಾಡವನ್ನು ಅವರು ಪ್ರದರ್ಶಿಸಬೇಕಿತ್ತು. ಈ ಪವಾಡವನ್ನು ಈವರೆಗೂ ಯಾವ ದೇವ ಮಾನವರೂ ಪ್ರದರ್ಶಿಸಿಲ್ಲ ಅನ್ನುವುದೇ ಅವರ ಮಿತಿಯಲ್ಲಿ ಹೇಳುತ್ತದೆ.
ಅಂದಹಾಗೆ, ಮನುಷ್ಯನಿಗೂ ದೇವನಿಗೂ ನಡುವೆ ವ್ಯತ್ಯಾಸ ಇದೆ ಮತ್ತು ಇರಬೇಕು. ದೇವನ ಕುರಿತಂತೆ ಖಚಿತವಾದ ಪರಿಕಲ್ಪನೆ ಇರುವ ಸಮಾಜದಲ್ಲಿ ದೇವಮಾನವರಿಗೆ ಜಾಗ ಇರಲು ಸಾಧ್ಯವೇ ಇಲ್ಲ. ದೇವನ ಬಗ್ಗೆ ಸ್ಪಷ್ಟ ಪರಿಚಯ ಇಲ್ಲದ ಜನರು ಕೆಲವೊಮ್ಮೆ ತಮ್ಮಂತೆಯೇ ಇರುವ ಮನುಷ್ಯನನ್ನೇ ದೇವರನ್ನಾಗಿಸುತ್ತಾರೆ. ತಮ್ಮಲ್ಲಿಲ್ಲ ಯಾವುದೋ ಒಂದನ್ನು ಇನ್ನೊಬ್ಬರಲ್ಲಿ ಕಂಡಾಗ ಅದನ್ನು ಪವಾಡವೆಂಬಂತೆ ಭ್ರಮಿಸುತ್ತಾರೆ. ಸಾಮಾನ್ಯವಾಗಿ ಮನುಷ್ಯರ ನಡುವೆ ಪ್ರತಿಭೆಯ ಆಧಾರದಲ್ಲಿ ವ್ಯತ್ಯಾಸವಿದೆಯೇ ಹೊರತು ಸಮಾನತೆಯ ಆಧಾರದಲ್ಲಿ ವ್ಯತ್ಯಾಸ ಇಲ್ಲ. ಎಲ್ಲ ಮನುಷ್ಯರೂ ಸಮಾನರು. ಒಬ್ಬ ದೇವನಾಗುವುದು ಮತ್ತು ಇನ್ನೊಬ್ಬ ಭಕ್ತನಾಗುವುದು ದೇವನ ನಿಜ ಗುಣಕ್ಕೆ ವಿರುದ್ಧವಾದುದು. ಅಚ್ಚರಿ ಏನೆಂದರೆ, ಈ ದೇಶದಲ್ಲಿ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಿದ ಅನೇಕರಿದ್ದಾರೆ. ಜುಜುಬಿ ಬಂಡವಾಳವನ್ನು ಹೂಡಿ ಕೋಟ್ಯಾಧಿಪತಿಯಾದವರಿದ್ದಾರೆ. ಬಡ ಗುಡಿಸಲಿನ ಮಗುವೊಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದ ವೈದ್ಯ, ಅಥ್ಲೀಟ್, ಪಾಕ ಶಾಸ್ತ್ರ ಪ್ರವೀಣ ಆದದ್ದಿದೆ. ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಅನೇಕ ಪ್ರತಿಭಾವಂತರು ಈ ದೇಶದಲ್ಲಿದ್ದಾರೆ. ಆದರೆ, ಅವರಾರೂ ದೇವರಾಗಿಲ್ಲ ಅಥವಾ ಅವರನ್ನು ದೇವ ಮಾನವರೆಂದು ಪೂಜಿಸುವ ವಾತಾವರಣ ನಿರ್ಮಾಣವಾಗಿಲ್ಲ. ಅದರ ಬದಲು ಈ ಬಗೆಯ ಯಾವ ಪ್ರತಿಭೆಯನ್ನೂ ಪ್ರದರ್ಶಿಸದ ಅನೇಕರು ದೇವಮಾನವರಾಗಿ ಪೂಜೆಗೆ ಒಳಗಾದ ಮತ್ತು ಒಳಗಾಗುತ್ತಿರುವ ವಿಚಿತ್ರ ಸ್ಥಿತಿಯೊಂದು ನಮ್ಮ ನಡುವೆಯಿದೆ. ದೇವನ ಸ್ಪಷ್ಟ ಪರಿಚಯ ಇಲ್ಲದ ಮುಗ್ಧರೇ ಈ ಮಂದಿಯ ಬಂಡವಾಳ. ಅವರ ಮುಗ್ಧತನವು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದುರುಪಯೋಗಕ್ಕೆ ಒಳಗಾಗುತ್ತಿದೆ. ಜನರು ಮತ್ತೆ ಮತ್ತೆ ವಂಚನೆಗೆ ಒಳಗಾಗುತ್ತಲೂ ಇದ್ದಾರೆ ಮತ್ತು ಹೊಸ ಹೊಸ ದೇವ ಮಾನವರು ಹುಟ್ಟುತ್ತಲೂ ಇದ್ದಾರೆ.
ಶಿರೂರು ಸ್ವಾಮೀಜಿಗಳು ತನ್ನನ್ನು ಸ್ವತಃ ದೇವ ಮಾನವರಾಗಿ ಘೋಷಿಸಿರಲಿಲ್ಲ ಎಂಬುದು ಸ್ಪಷ್ಟವೇ ಆಗಿದ್ದರೂ ಭಕ್ತ ವೃಂದರಿಂದ ಅವರಿಗೆ ಸಲ್ಲುತ್ತಿದ್ದ ಗೌರವಾದಾರಗಳಲ್ಲಿ ಪೂಜಾ ಭಾವವೂ ಇತ್ತು ಅನ್ನುವ ಅಭಿಪ್ರಾಯವೂ ಇದೆ. ಶಿರೂರು ಸ್ವಾಮೀಜಿಗಳು ಇದಕ್ಕೆ ಕಾರಣ ಅಲ್ಲದೇ ಇರಬಹುದು. ಆದರೆ, ಸಾಮಾಜಿಕವಾಗಿ ಇವತ್ತು ಇಂಥದ್ದೊಂದು ವಾತಾವರಣ ಬೆಳೆದು ನಿಂತಿದೆ. ಮನುಷ್ಯರನ್ನೇ ದೇವರೆಂದು ಪೂಜಿಸುವ ಮತ್ತು ಷರತ್ತುರಹಿತವಾಗಿ ಅವರನ್ನು ನಂಬುವ ಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಈ ಸ್ಥಿತಿಯಿಂದ ಸಮಾಜವನ್ನು ಮುಕ್ತಗೊಳಿಸಬೇಕಾದ ತುರ್ತು ಅಗತ್ಯ ಇದೆ. ನಿಜವಾದ ದೇವನನ್ನು ಜನರಿಗೆ ಪರಿಚಯಿಸುವುದೇ ಇದಕ್ಕಿರುವ ಉತ್ತಮ ಪರಿಹಾರ. ಶಿರೂರು ಸ್ವಾಮೀಜಿಯವರಾಗಲಿ, ಫಾದರ್ ಆಗಲಿ, ಮೌಲಾನವಾಗಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ದೇವನು ಮಾನವನಲ್ಲ, ಮಾನವ ದೇವನೂ ಅಲ್ಲ. ದೇವ ಈ ಎರಡರ ಆಚೆಗಿದ್ದಾನೆ.
ಶಿರೂರು ಸ್ವಾಮಿಜಿಗಳ ಸಾವು ಈ ಸತ್ಯವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಅಷ್ಟೇ.
No comments:
Post a Comment