Thursday, 9 August 2018

ಮಲ ಪ್ರತಿಭಟನೆಯ ಔಚಿತ್ಯ ಮತ್ತು ಹಸಿವಿನ ಪ್ರಶ್ನೆ..

      ಕಳೆದವಾರ ಎರಡು ಹೃದಯ ವಿದ್ರಾವಕ ಘಟನೆಗಳು ನಡೆದುವು. ಎರಡರ ಕೇಂದ್ರ ಬಿಂದುವೂ ಹಸಿವೇ. ಒಂದು- ದೆಹಲಿಯಲ್ಲಿ ನಡೆದರೆ, ಇನ್ನೊಂದು ನಮ್ಮ ರಾಜ್ಯದ ಹುಬ್ಬಳಿಯಲ್ಲಿ ನಡೆಯಿತು. 8 ವರ್ಷದ ಮಾನ್ಸಿ, 4 ವರ್ಷದ ಶಿಖಾ ಮತ್ತು ಎರಡು ವರ್ಷದ ಪರೂಲ್ ಎಂಬ ಮೂವರು ಮಕ್ಕಳು ದೆಹಲಿಯಲ್ಲಿ ಹಸಿವಿನಿಂದ ಕಂಗೆಟ್ಟು ಸಾವಿಗೀಡಾದರು. ಅಪ್ಪ ಕುಡುಕ. ಅಮ್ಮ ಬುದ್ಧಿಮಾಂದ್ಯೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನೆ ಎಂಬ ನೆಲೆಯಲ್ಲಿ ಇದಕ್ಕೆ ಮಾಧ್ಯಮಗಳು ಸಾಕಷ್ಟು ಜಾಗ ಕೊಟ್ಟವು. ಆದರೆ, ರಾಜ್ಯದ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಈ ಭಾಗ್ಯ ಲಭಿಸಲಿಲ್ಲ. ಹುಬ್ಬಳಿ-ಧಾರಾವಾಡ ಮಹಾನಗರ ಪಾಲಿಕೆಯ ಕಚೇರಿ ಎದುರು ಸುಮಾರು ಒಂದು ಸಾವಿರದಷ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇವರಲ್ಲಿ ಇಬ್ಬರು ಕಾರ್ಮಿಕರು ತಮ್ಮ ಮೈ ಮೇಲೆ ಮಲವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ತಿಂಗಳಿನಿಂದ ಬಾಕಿ ಇರಿಸಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಕೆಲವು ಬೇಡಿಕೆಗಳನ್ನೂ ಅವರು ಮುಂದಿಟ್ಟರು. ಮೇಲಿನ ಈ ಎರಡೂ ಘಟನೆಗಳು ಮಾಧ್ಯಮಗಳಲ್ಲಿ ಒಂದೇ ದಿನ ಪ್ರಕಟವಾದುವು.
      ಬಾಹ್ಯ ನೋಟಕ್ಕೆ ಹಸಿವಿನಿಂದಾದ ಸಾವು ಮತ್ತು ಮಲ ಸುರಿದು ಮಾಡಿದ ಪ್ರತಿಭಟನೆ ಸಮಾನವಾಗಿ ಕಾಣುವುದಿಲ್ಲ. ಮಲವನ್ನು ಮೈ ಮೇಲೆ ಸುರಿದು ಪ್ರತಿಭಟಿಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯೂ ಇದೆ. ನಿಜ, ಪ್ರತಿಭಟನೆ ಎಂಬುದೂ ಒಂದು ಮಾಧ್ಯಮ. ತಮ್ಮ ಬೇಡಿಕೆಗಳನ್ನೋ ತಮ್ಮ ಮೇಲಾದ ಅನ್ಯಾಯವನ್ನೋ ತೆರೆದಿಡುವುದಕ್ಕೆ ಈ ಮಾಧ್ಯಮವನ್ನು ಜನರು ಬಳಸಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಇದು ನಡೆದು ಬಂದ ಕ್ರಮ. ಪುರಾತನ ಕಾಲದಲ್ಲಿ ಈಗಿನಂಥ ವ್ಯವಸ್ಥೆ ಇದ್ದಿರಲಿಲ್ಲ. ಮೇಲ್ವರ್ಗ-ಕೆಳವರ್ಗ, ಕರಿಯ-ಬಿಳಿಯ, ಮಾಲಿಕ-ಕಾರ್ಮಿಕ, ದಣಿ-ಒಕ್ಕಲು, ಯಜಮಾನ-ಗುಲಾಮ.. ಇತ್ಯಾದಿ ಭೇದಗಳಿಗೆ ತಕ್ಕಂತೆ ಪ್ರತಿಭಟನಾ ವಿಧಾನದಲ್ಲೂ ವ್ಯತ್ಯಾಸಗಳಿದ್ದುವು. ಯಜಮಾನನ ಎದುರು ಗುಲಾಮನೋರ್ವ ಧ್ವನಿ ಎತ್ತರಿಸಿ ಪ್ರತಿಭಟನೆ ಮಾಡುವುದು ಹಿಂದಿನ ಕಾಲದಲ್ಲಿ ಅತ್ಯಂತ ಅಪಾಯಕಾರಿ. ಆತನ ಜೀವಕ್ಕೇ ಕುತ್ತು ತಂದುಕೊಳ್ಳುವ ಪ್ರತಿಭಟನಾ ವಿಧಾನ ಅದು. ಆದ್ದರಿಂದ ಗುಲಾಮ ತನ್ನ ಪ್ರತಿಭಟನೆಯನ್ನು ಮೌನವಾಗಿಯೋ, ಕಣ್ಣೀರಿಳಿಸಿಯೋ ವ್ಯಕ್ತಪಡಿಸಿರಬಲ್ಲ. ಕೆಳವರ್ಗದ ವ್ಯಕ್ತಿಯೋರ್ವ ಮೇಲ್ವರ್ಗದ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುವಾಗಲೂ ಇಂಥ ಸುರಕ್ಷತಾ ವಿಧಾನಕ್ಕೆ ಮೊರೆ ಹೋಗಿರಬಲ್ಲ. ಆದರೆ ಆಧುನಿಕ ಕಾಲದಲ್ಲಿ ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ತಂತಮ್ಮ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಸಂಘಟಿತವಾಗಿಯೇ ತಮ್ಮ ಬೇಡಿಕೆಗಳನ್ನು ವ್ಯವಸ್ಥೆಯ ಮುಂದಿಡುತ್ತಿದ್ದಾರೆ. ಇದು ಆಕ್ಷೇಪಾರ್ಹವೂ ಅಲ್ಲ. ಆದರೆ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವುದು ಒಂದು ರೀತಿಯಲ್ಲಿ ವಿಲಕ್ಷಣವಾದ ಮತ್ತು ವಿಪರೀತವಾದ ಕ್ರಮ ಎಂದೇ ಹೇಳಬೇಕು. ಕೆಲವೊಮ್ಮೆ ಪ್ರತಿಭಟನೆಗಳು ಸುದ್ದಿಗೀಡಾಗುವುದೇ ಅದರ ವಿಲಕ್ಷಣತೆಯಿಂದ. ಸಾಮಾನ್ಯ ಪ್ರತಿಭಟನೆಗೆ ಸಿಗುವ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರವನ್ನು ಮಾಧ್ಯಮಗಳು ವಿಲಕ್ಷಣ  ಪ್ರತಿಭಟನೆಗಳಿಗೆ ನೀಡುತ್ತವೆ ಎಂಬ ನಂಬಿಕೆಯೂ ಮೈ ಮೇಲೆ ಮಲ ಸುರಿದವರಲ್ಲಿ ಇದ್ದಿರಬಹುದು. ಈ ಬಗೆಯ ಪ್ರತಿಭಟನೆಯನ್ನು ನಿರುತ್ತೇಜಿಸುತ್ತಲೇ ಆ ಪ್ರತಿಭಟನಾಕಾರರು ಎತ್ತಿರುವ ಪ್ರಶ್ನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಪೌರ ಕಾರ್ಮಿಕರೆಂದರೆ, ಅತ್ಯಂತ ಕಟ್ಟಕಡೆಯಲ್ಲಿ ನಿಲ್ಲುವ ಮನುಷ್ಯರು. ಅವರಿಗಿಂತ ಕೆಳಗೆ ಕಾರ್ಮಿಕ ವರ್ಗವೊಂದು ಇಲ್ಲ. ಆದರೆ ಇವರಿಗಿಂತ ಮೇಲೆ ಬೇರೆ ಬೇರೆ ಅಧಿಕಾರಿಗಳಿದ್ದಾರೆ. ಅವರೆಲ್ಲರ ವೇತನಗಳೂ ಪೌರ ಕಾರ್ಮಿಕರಿಗೆ ಹೋಲಿಸಿದರೆ ದುಪ್ಪಟ್ಟೋ ಮೂರ್ಪಟ್ಟೋ ಆಗಿರುತ್ತದೆ. ವಿಷಾದ ಏನೆಂದರೆ,

      ದುಬಾರಿ ವೇತನ ಪಡೆಯುವ ಅಧಿಕಾರಿಗಳಿಗೆ ಕ್ಲಪ್ತ ಸಮಯದಲ್ಲಿ ವೇತನ ಪಾವತಿಸುವ ನಮ್ಮ ವ್ಯವಸ್ಥೆಯು ಜುಜುಬಿ ವೇತನ ಪಡೆಯುವ ಪೌರ ಕಾರ್ಮಿಕರನ್ನು ಸತಾಯಿಸುತ್ತದೆ. ಉನ್ನತ ಅಧಿಕಾರಿಗಳಿಗೆ ಸಮಾಜದಲ್ಲಿ ವಿಶ್ವಾಸಾರ್ಹ ಗುರುತು ಇರುತ್ತದೆ. ಆ ಗುರುತೇ ಅವರಿಗೆ ಸಾಲವನ್ನೂ ಲಭ್ಯವಾಗಿಸುತ್ತದೆ. ಆಹಾರ ವಸ್ತುಗಳ ಖರೀದಿ ಸಹಿತ ಎಲ್ಲ ಸಂದರ್ಭಗಳಲ್ಲೂ ಈ ಗುರುತು ಅವರ ನೆರವಿಗೆ ಬರುತ್ತದೆ. ಆದರೆ ಪೌರ ಕಾರ್ಮಿಕರು ಹಾಗಲ್ಲ. ಜುಜುಬಿ ವೇತನವು ಅವರ ಮೊದಲ ಶತ್ರು. ಗುತ್ತಿಗೆ ಕಾರ್ಮಿಕರು ಎಂಬುದು ಇನ್ನೊಂದು ಶತ್ರು. ಈ ಗುರುತು ಅವರಿಗೆ ಸಾಲ ಲಭ್ಯವಾಗಿಸುವಾಗಲೂ ಅಡ್ಡ ಬರುತ್ತದೆ. ಆಹಾರ ವಸ್ತುಗಳ ಖರೀದಿಯ ವೇಳೆಯಲ್ಲೂ ಸಾಲ ಸಿಗದಂತೆ ತಡೆಯುತ್ತದೆ. ಆದ್ದರಿಂದ, ವ್ಯವಸ್ಥೆಯ ಪಟ್ಟಿಯಲ್ಲಿ ಕಟ್ಟಕಡೆಯ ಉದ್ಯೋಗಿಗಳಾಗಿ ಗುರುತಿಸಿಕೊಂಡಿರುವ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕಾದ ಜರೂರತ್ತು ವ್ಯವಸ್ಥೆಯ ಮೇಲಿದೆ. ಮೈಮೇಲೆ ಮಲ ಸುರಿದ ಕ್ರಮವನ್ನು ಪ್ರಶ್ನಿಸುವ ಭರದಲ್ಲಿ ಅವರೆತ್ತಿದ ಪ್ರಶ್ನೆಯನ್ನು ನಾವು ಲಘುವಾಗಿಸಿ ಪರಿಗಣಿಸಬಾರದು. ಪ್ರತಿಭಟನಾ ವಿಧಾನ ಆಕ್ಷೇಪಾರ್ಹವೇ ಆಗಿರಬಹುದು. ಆದರೆ, ಅಂಥದ್ದೊಂದು  ಆಕ್ಷೇಪಾರ್ಹ ಪ್ರತಿಭಟನೆಗೆ ಅವರನ್ನು ಒತ್ತಾಯಿಸಿದ್ದು ನಮ್ಮ ವ್ಯವಸ್ಥೆಯೇ ಎಂಬುದು ನಮ್ಮ ಗಮನದಲ್ಲಿರಬೇಕು. ಸಾಮಾನ್ಯವಾಗಿ, ಪ್ರತಿಭಟನಾಕಾರರ ಇಂಥ ಅತಿರೇಕದ ವಿಧಾನವನ್ನೇ ಮುಖ್ಯವಾಗಿಸಿ ಅವರು ಎತ್ತಿರುವ ಪ್ರಶ್ನೆಯನ್ನು ವ್ಯವಸ್ಥೆ ನಗಣ್ಯವಾಗಿಸುವುದಿದೆ. ದೆಹಲಿಯಲ್ಲಿ, ಸಾವಿಗೀಡಾದ ಮೂರು ಮಕ್ಕಳ ಪ್ರಕರಣದಲ್ಲೂ ಇಂಥದ್ದೊಂದು ಅಡ್ಡ ಸಮರ್ಥನೆಯನ್ನು ಮಾಡಲಾಗುತ್ತಿದೆ. ಅಪ್ಪ ಕುಡುಕ ಮತ್ತು ಅಮ್ಮ ಮನೋರೋಗಿ ಅನ್ನುವುದು ಮೂರು ಮಕ್ಕಳ ಹಸಿವನ್ನು ಸಮರ್ಥಿಸಿಕೊಳ್ಳುವುದಕ್ಕೆ ಕಾರಣ ಆಗಬಹುದೇ? ಹಾಗಂತ, ಆ ಕುಟುಂಬ ನಿರ್ಜನ ಪ್ರದೇಶದಲ್ಲೋ  ಕಾಡಲ್ಲೋ ಇರಲಿಲ್ಲ. ಅಕ್ಕ-ಪಕ್ಕ ಮನೆಗಳಿದ್ದುವು. ಆ ಮನೆಗಳಿಗೆ ಆ ಮಕ್ಕಳ ಅಳು ಕೇಳಿಸಿಯೇ ಇರಲಿಲ್ಲ ಎಂದು ನಂಬುವುದು ದಡ್ಡತನವಾದೀತು. ನಿಜವಾಗಿ, ಜವಾಬ್ದಾರಿ ಎಂಬುದು ಸರಕಾರಕ್ಕೆ ಮಾತ್ರ ಇರುವುದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ತನ್ನ ಅಕ್ಕ-ಪಕ್ಕದ ಮನೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಮತ್ತು ಕಳಕಳಿ ಇರಲೇಬೇಕು. ತಾನಾಯಿತು, ತನ್ನ ಮನೆಯಾಯಿತು ಅನ್ನುವ ರೀತಿಯಲ್ಲಿ ಬದುಕುವುದು ಜವಾಬ್ದಾರಿಯುತ ನಾಗರಿಕನ ಗುರುತಲ್ಲ. ತನ್ನ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಅನ್ನುವ ಬಗ್ಗೆ ಗಮನವಿಟ್ಟುಕೊಳ್ಳಬೇಕಾದ ಅಗತ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ.
    ನಿಜವಾಗಿ, ದೌರ್ಜನ್ಯ, ಅನ್ಯಾಯ, ಅತ್ಯಾಚಾರ ಮತ್ತು ಹಸಿವುಗಳು ತುಂಬಿರುವ ಸಾಮಾಜಿಕ ವಾತಾವರಣದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಪ್ರಾಣತ್ಯಾಗದ ಮೂಲಕ  ಆ ಮೂವರು ಕಂದಮ್ಮಗಳು ನಮ್ಮನ್ನು ಎಚ್ಚರಿಸಿ ಹೋಗಿವೆ. ನಿಮ್ಮ ಹೊಟ್ಟೆಯನ್ನಷ್ಟೇ ತಣಿಸಿದರೆ ಸಾಲದು, ಉಳಿದವರ ಹೊಟ್ಟೆಯ ಬಗೆಗೂ ಕಾಳಜಿ ವಹಿಸಿ ಎಂಬ ಮಾರ್ಮಿಕ ಸಂದೇಶವನ್ನು ಆ ಕಂದಮ್ಮಗಳು ಸಾರಿಹೋಗಿವೆ. ಹಸಿವು ಯಾರೊಬ್ಬನ ಸೊತ್ತೂ ಅಲ್ಲ. ಅದು ಎಲ್ಲರದು ಮತ್ತು ಎಲ್ಲರೂ ಹಸಿವಿನಿಂದ ಮುಕ್ತರಾಗಿ ಬದುಕಬೇಕಾದವರು. ಆದರೆ ಮಕ್ಕಳು ದೊಡ್ಡವರಷ್ಟು ಜಾಣರಲ್ಲವಲ್ಲ. ಅವುಗಳಿಗೆ ದೊಡ್ಡವರಂತೆ ಬೇಡಲು ಬರಲ್ಲ. ಗೊತ್ತಿರುವುದು ಅಳು ಒಂದೇ. ಆ ಮಕ್ಕಳು ಅಳುತ್ತಲೇ ಪ್ರಾಣ ಬಿಟ್ಟಿವೆ. ಆ ಅಳು ನಮ್ಮೊಳಗಿನ ನಿರ್ಲಕ್ಷ್ಯ ವೆಂಬ ಕ್ರೌರ್ಯಕ್ಕೆ ಬಿದ್ದ ಏಟು ಆಗಬೇಕು. ಆ ಮಕ್ಕಳಂಥ ಮಕ್ಕಳು ಪೌರ ಕಾರ್ಮಿಕರಿಗೂ ಇದ್ದಾವು. ನಮ್ಮ ಅಕ್ಕ-ಪಕ್ಕ ಕಟ್ಟಡ ಕಾಮಗಾರಿಗಾಗಿ ಬಂದ ಕುಟುಂಬಗಳಲ್ಲೂ ಇರಬಹುದು. ಅವು ಹಸಿವಿಗೆ ಬೀಳದಂತೆ ನೋಡಿಕೊಳ್ಳಬೇಕಾದುದು ವ್ಯವಸ್ಥೆಯ ಮತ್ತು ನಮ್ಮ ಆದ್ಯತೆಯಾಗಬೇಕು. ಹಸಿವು ರೋಗವಲ್ಲ. ಸಾವೂ ಅಲ್ಲ. ಆ ಮೂರು ಮಕ್ಕಳ ಸಾವಿಗೆ ಕಾರಣ ಹಸಿವಲ್ಲ, ನಾವು.

No comments:

Post a Comment