ಶಬರಿಮಲೆ ಮತ್ತು ತ್ರಿವಳಿ ತಲಾಕ್‍ನ ವಿಷಯದಲ್ಲಿ ಕೇಂದ್ರ ಸರಕಾರದ ಉದ್ದೇಶಶುದ್ಧಿಯನ್ನು ಶಂಕಿತಗೊಳಿಸುವ ಮತ್ತು ಅದರ ನಿಲುವನ್ನು ಪ್ರಶ್ನಾರ್ಹಗೊಳಿಸುವ ಸಂದರ್ಭಗಳು ಸೃಷ್ಟಿಯಾಗುತ್ತಲೇ ಇವೆ. ಶಬರಿಮಲೆ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರ ತಂಡದಲ್ಲಿ ಇಂದೂ ಮಲ್ಹೋತ್ರ ಎಂಬ ಮಹಿಳೆಯೂ ಇದ್ದರು. ಅವರು ಈ ಪ್ರಕರಣವನ್ನು ನಂಬಿಕೆಯ ದೃಷ್ಟಿಕೋನದಿಂದ ನೋಡಿದರು. ನಂಬಿಕೆಯ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸದಿರುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಆದರೆ ಈ ನಿಲುವನ್ನು ಉಳಿದ ನ್ಯಾಯಾಧೀಶರು ಮಾನ್ಯ ಮಾಡಲಿಲ್ಲ. ಆದ್ದರಿಂದ, ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳಬಹುದು ಎಂಬ ತೀರ್ಪು ಸುಪ್ರೀಮ್ ಕೋರ್ಟಿನಿಂದ ಹೊರಬಿತ್ತು. ಇದಕ್ಕಿಂತ ಒಂದು ವರ್ಷ ಮೊದಲು ತ್ರಿವಳಿ ತಲಾಕ್‍ಗೆ ಸಂಬಂಧಿಸಿಯೂ ಸುಪ್ರೀಮ್ ಕೋರ್ಟು ಇಂಥದ್ದೊಂದು ಮಹತ್ವದ ತೀರ್ಪನ್ನು ಪ್ರಕಟಿಸಿತ್ತು. ದೂರು ದಾಖಲಿಸಿದ್ದು ಶಾಯರಾಬಾನು. ಈ ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ಐವರು ನ್ಯಾಯಾಧೀಶರ ಪೈಕಿ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರು. ಈ ವಿಷಯದಲ್ಲಿ ಕೋರ್ಟಿನ ಮಧ್ಯಪ್ರವೇಶವನ್ನು ಅವರಿಬ್ಬರೂ ಬಯಸಲಿಲ್ಲ. ಆದರೆ ಉಳಿದ ಮೂವರು ನ್ಯಾಯಾಧೀಶರು ಈ ಅಭಿಪ್ರಾಯಕ್ಕೆ ವಿರುದ್ಧವಿದ್ದುದರಿಂದ ತ್ರಿವಳಿ ತಲಾಕನ್ನು ಅಂತಿಮವಾಗಿ ಅಸಾಂವಿಧಾನಿಕ ಮತ್ತು ಅನೂರ್ಜಿತವೆಂದು ಘೋಷಿಸಲಾಯಿತು. ಇದರರ್ಥ ಏನೆಂದರೆ, ತ್ರಿವಳಿ ತಲಾಕ್ ಸಂವಿಧಾನಬದ್ಧವಲ್ಲ. ಯಾರಾದರೂ ತ್ರಿವಳಿ ತಲಾಕ್ ಹೇಳಿದರೆ ಅದರಿಂದ ವಿಚ್ಛೇದನ ಏರ್ಪಡುವುದೂ ಇಲ್ಲ. ತ್ರಿವಳಿ ತಲಾಕ್ ಹೇಳುವುದರಿಂದ ಪತಿ-ಪತ್ನಿ ಸಂಬಂಧಕ್ಕೆ ಮತ್ತು ಅವರ ಸ್ಥಾನಮಾನಕ್ಕೆ ಧಕ್ಕೆ ಬರುವುದೂ ಇಲ್ಲ. ಆದ್ದರಿಂದ, ಇನ್ನು ವಿಚ್ಛೇದನಕ್ಕೆ ಯಾರೂ ಈ ಕ್ರಮವನ್ನು ಅನುಸರಿಸುವಂತಿಲ್ಲ... ಸುಪ್ರೀಮ್ ಕೋರ್ಟು ಹೇಳಿದ್ದು ಇಷ್ಟೇ. ಆದರೆ,
ಈ ತೀರ್ಪಿನ ಆರಂಭದಿಂದ ಕೊನೆಯ ವರೆಗೆ ಕಣ್ಣಿಗೆ ಎಣ್ಣೆ ಬಿಟ್ಟು ಪರಿಶೀಲಿಸಿದರೂ ಎಲ್ಲೂ ತ್ರಿವಳಿ ತಲಾಕನ್ನು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಬೇಕೆಂದು ಕೋರ್ಟು ಹೇಳಿದ್ದು ಎಲ್ಲೂ ಸಿಗುವುದಿಲ್ಲ. ತ್ರಿವಳಿ ತಲಾಕ್ ಹೇಳುವ ಪುರುಷನನ್ನು ಮೂರು ವರ್ಷಗಳ ವರೆಗೆ ಜೈಲಿಗೆ ತಳ್ಳುವಂತಹ ‘ತಲಾಕ್ ಮಸೂದೆಯನ್ನು’ ಜಾರಿಗೊಳಿಸಿ ಎಂದು ಕೇಂದ್ರ ಸರಕಾರಕ್ಕಾಗಲಿ, ಪಾರ್ಲಿಮೆಂಟ್‍ಗಾಗಲಿ ಕೋರ್ಟು ಆದೇಶಿಸಿಲ್ಲ. ಪಾರ್ಲಿಮೆಂಟ್‍ನಲ್ಲಿ ಇಂಥದ್ದೊಂದು ಮಸೂದೆ ಅಂಗೀಕಾರಗೊಳ್ಳದಿದ್ದರೆ ಸುಗ್ರೀವಾಜ್ಞೆಯ ಮೂಲಕವಾದರೂ ಜಾರಿಗೆ ತನ್ನಿ ಎಂದೂ ಅದು ಹೇಳಿಲ್ಲ. ತ್ರಿವಳಿ ತಲಾಕ್ ಕ್ರಮವನ್ನು ಅದು ಅಸಾಂವಿಧಾನಿಕ ಎಂದಷ್ಟೇ ಹೇಳಿದೆ. ಹಾಗೆ ತಲಾಕ್ ಹೇಳುವುದಕ್ಕೆ ಕಾನೂನಿನ ಪ್ರಕಾರ ಮಾನ್ಯತೆ ಇಲ್ಲ ಎಂದು ಇದರರ್ಥ. ಹೀಗಿರುವಾಗ, ಇದನ್ನು ಕ್ರಿಮಿನಲ್ ಅಪರಾಧವಾಗಿ ಕೇಂದ್ರ ಸರಕಾರ ಪರಿವರ್ತಿಸಿದ್ದು ಏಕೆ? ಮುಸ್ಲಿಮ್ ಸಮುದಾಯದ ಮಹಿಳೆಯರ ಮೇಲೆ ಸುಪ್ರೀಮ್ ಕೋರ್ಟಿಗಿಂತಲೂ ಹೆಚ್ಚಾಗಿ ಕೇಂದ್ರ ಸರಕಾರಕ್ಕೆ ‘ಕಾಳಜಿ’ ಮೂಡಲು ಕಾರಣವೇನು? ತ್ರಿವಳಿ ತಲಾಕ್‍ಗೊಳಗಾದ ಮಹಿಳೆ ನ್ಯಾಯ ಕೇಳಿದ್ದು ಸುಪ್ರೀಮ್ ಕೋರ್ಟಿನಲ್ಲಿ. ತಾನು ತ್ರಿವಳಿ ತಲಾಕ್‍ನ ಸಂತ್ರಸ್ತೆ ಎಂದು ಶಾಯರಾ ಬಾನು ಕೋರ್ಟಿನ ಮುಂದೆ ನಿವೇದಿಸಿಕೊಂಡಿದ್ದರು. ನ್ಯಾಯಾಧೀಶರೆಂದರೆ ರಾಜಕಾರಣಿಗಳಲ್ಲವಲ್ಲ. ಯಾವುದೇ ದೂರನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡುವ ಪರಿಪಾಠವೂ ನ್ಯಾಯಾಧೀಶರಿಗಿಲ್ಲ, ಇರಬಾರದು ಕೂಡ. ದೂರುದಾರೆಯ ದೂರಿನಲ್ಲಿರುವ ಅಂಶ ನ್ಯಾಯಾಂಗೀಯ ಪರಿಧಿಗೆ ಒಳಪಡುತ್ತದೋ ಇಲ್ಲವೋ, ದೂರು ಸಮರ್ಪಕವೋ ಅಲ್ಲವೋ, ದೂರಿನ ಮೇಲೆ ವಿಚಾರಣೆ ನಡೆಸಬೇಕೋ ಬೇಡವೋ, ದೂರಿನ ಮೇಲಿನ ವಿಚಾರಣೆಯನ್ನು ಯಾವ ವಿಚಾರಣಾ ಪೀಠಕ್ಕೆ ಒಪ್ಪಿಸಬೇಕು, ಆ ಪೀಠದಲ್ಲಿ ಯಾವ ನ್ಯಾಯಾಧೀಶರಿರಬೇಕು, ಹೆಣ್ಣೆಷ್ಟು-ಗಂಡೆಷ್ಟು ಇತ್ಯಾದಿ ಇತ್ಯಾದಿಗಳು ಕೋರ್ಟಿಗೆ ಮುಖ್ಯವಾಗುತ್ತದೆಯೇ ಹೊರತು ಇನ್ನೇನೂ ಅಲ್ಲ. ದೂರುದಾರರು ಸಂತ್ರಸ್ತರು ಎಂದು ಸಾಬೀತಾದರೆ ಅವರಿಗೆ ನ್ಯಾಯದಾನ ಮಾಡಬೇಕು, ಅನ್ಯಾಯ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು... ನ್ಯಾಯಾಲಯದಲ್ಲಿ ನಡೆಯುವ ನ್ಯಾಯ ಪ್ರಕ್ರಿಯೆಯ ಮೂಲ ಉದ್ದೇಶ ಇದು. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಶಾಯರಾ ಬಾನು ಅವರ ದೂರನ್ನು ವಿಚಾರಣೆಗೆ ಎತ್ತಿಕೊಂಡಿದೆ. ಅವರ ಅಹವಾಲನ್ನು ಆಲಿಸಿದೆ. ಬಳಿಕ ನ್ಯಾಯವನ್ನೂ ನೀಡಿದೆ. ಹಾಗಾದರೆ, ಈ ನ್ಯಾಯ ವಿಧಾನ ಸರಿಯಲ್ಲ ಅನ್ನುವುದು ಕೇಂದ್ರ ಸರಕಾರದ ವಾದವೇ? ತ್ರಿವಳಿ ತಲಾಕ್ ಹೇಳಿದ ಪುರುಷನನ್ನು ಮೂರು ವರ್ಷ ಜೈಲಿಗಟ್ಟುವ ಸುಗ್ರೀವಾಜ್ಞೆಯು ಕೊಡುವ ಸಂದೇಶವಾದರೂ ಏನು? ಸುಪ್ರೀಮ್ ಕೋರ್ಟು ಇಡೀ ಪ್ರಕರಣವನ್ನು ನೋಡಿದ್ದು ಸಿವಿಲ್ ಪ್ರಕರಣದ ರೂಪದಲ್ಲಿ. ಆದರೆ ಕೇಂದ್ರ ಸರಕಾರ ಅದಕ್ಕೆ ಕ್ರಿಮಿನಲ್ ಸ್ವರೂಪವನ್ನು ನೀಡಿತು. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ಒಂದುವೇಳೆ, ಅದುವೇ ಬಯಕೆಯಾಗಿದ್ದರೆ, ತೀರ್ಪಿನಲ್ಲಿ ಅದನ್ನೂ ಹೇಳಬೇಕಿತಲ್ಲವೇ? ತ್ರಿವಳಿಯನ್ನು ನಿಗ್ರಹಿಸುವುದಕ್ಕಾಗಿ ಶಿಕ್ಷಾ ಕಾನೂನೊಂದನ್ನು ಜಾರಿಗೊಳಿಸಿ ಎಂದು ಆದೇಶಿಸಬೇಕಿತ್ತಲ್ಲವೇ? ಅಂದಹಾಗೆ,
ತ್ರಿವಳಿಯನ್ನು ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಸುಪ್ರೀಮ್ ಕೋರ್ಟು ಸ್ಪಷ್ಟವಾಗಿ ಹೇಳಿರುವಾಗ ಇಷ್ಟು ಸಾಕಾಗಲ್ಲ ಎಂದು ಕೇಂದ್ರ ಸರಕಾರ ತೀರ್ಮಾನಿಸಿದುದು ಯಾವ ಕಾರಣಕ್ಕೆ? ಯಾರ ಹಿತಾಸಕ್ತಿಯನ್ನು ಕಾಪಾಡಲು? ಅಲ್ಲದೇ, ತ್ರಿವಳಿ ತಲಾಕನ್ನು ಖಂಡಿಸಿ ಪ್ರತಿಭಟಿಸಿದ ಯಾವ ಮುಸ್ಲಿಮ್ ಮಹಿಳೆಯರೂ ಅದನ್ನು ಕ್ರಿಮಿನಲ್ ಪ್ರಕರಣವಾಗಿಸಬೇಕೆಂದು ಬೇಡಿಕೆಯಿಟ್ಟಿರಲಿಲ್ಲ. ಪತಿಯನ್ನು ಜೈಲಿಗಟ್ಟುವ ಕಾನೂನು ಜಾರಿಗೆ ತನ್ನಿ ಎಂದು ಒತ್ತಾಯಿಸಿರಲಿಲ್ಲ. ಸ್ವತಃ ಶಾಯರಾ ಬಾನು ಕೂಡ ಇಂಥದ್ದೊಂದು ಬೇಡಿಕೆಯನ್ನು ಇಟ್ಟಿರಲಿಲ್ಲ. ಹಾಗಂತ, ಯಾರೂ ಬೇಡಿಕೆ ಇಟ್ಟಿರದಿದ್ದರೂ ಮತ್ತು ಮುಸ್ಲಿಮ್ ಮಹಿಳೆಯರ ಬಯಕೆ ಅದಾಗಿರದಿದ್ದರೂ ಅದರ ಅಗತ್ಯ ಇದೆ ಎಂದು ಸುಪ್ರೀಮ್ ಕೋರ್ಟಿಗೆ ಅನಿಸಿದ್ದಿದ್ದರೆ ಖಂಡಿತ ಅಂಸಾವಿಧಾನಿಕ ಮತ್ತು ಅನೂರ್ಜಿತ ಎಂದು ಹೇಳುವುದರ ಜೊತೆಜೊತೆಗೇ ‘ಇಷ್ಟು ವರ್ಷಗಳ ಶಿಕ್ಷಾರ್ಹ ಅಪರಾಧ’ ಎಂದೂ ಹೇಳುತ್ತಿತ್ತು. ಆದರೆ ಸುಪ್ರೀಮ್ ಕೋರ್ಟು ಹಾಗೆ ತೀರ್ಪು ನೀಡುವುದು ಬಿಡಿ, ಸೂಚ್ಯವಾಗಿಯೂ ಹೇಳಲಿಲ್ಲ. ಇದರರ್ಥವೇನು? ತ್ರಿವಳಿ ತಲಾಕ್ ಕ್ರಮವನ್ನು ಮುಸ್ಲಿಮ್ ಸಮುದಾಯ ತಿರಸ್ಕರಿಸಬೇಕು ಮತ್ತು ವಿಚ್ಛೇದನದ ಸಾಂವಿಧಾನಿಕ ರೂಪಕ್ಕೆ ಮರಳಬೇಕು ಎಂದು ಸುಪ್ರೀಮ್ ಕೋರ್ಟು ಬಯಸಿದೆ ಎಂದೇ ಅಲ್ಲವೇ? ಸಮುದಾಯದ ಒಳಗೆ ಈ ಬಗೆಯ ಜಾಗೃತಿ ಮೂಡಲಿ ಮತ್ತು ಸ್ವತಃ ಸಮುದಾಯವೇ ಈ ತೀರ್ಪಿನ ಆಧಾರದಲ್ಲಿ ಸುಧಾರಣೆಗೊಳ್ಳಲಿ ಎಂದಲ್ಲವೇ?
ಶಬರಿಮಲೆಯನ್ನು ನಂಬಿಕೆಯ ಪ್ರಶ್ನೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಅದಕ್ಕಾಗಿ ನ್ಯಾಯಾಧೀಶೆ ಇಂದು ಮಲ್ಹೋತ್ರಾ ಅವರ ಅಭಿಪ್ರಾಯದ ಮೇಲೆ ಹೆಚ್ಚಿನ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲ ದರ್ಶನಕ್ಕೆ ಅರ್ಹರು’ ಎಂಬ ಕೋರ್ಟಿನ ತೀರ್ಪನ್ನು ವಿರೋಧಿಸುತ್ತಿರುವ ಬಿಜೆಪಿಯ ನಡೆಯನ್ನು ಅವರು ಈ ಮೂಲಕ ಸಮರ್ಥಿಸಿಕೊಂಡಿz್ದÁರೆ. ಆದರೆ, ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅವರು ಈ ಮಾನದಂಡವನ್ನು ಅಳವಡಿಸಿಕೊಳ್ಳುವುದೇ ಇಲ್ಲ. ತ್ರಿವಳಿ ತಲಾಕನ್ನು ಧಾರ್ಮಿಕ ಚೌಕಟ್ಟಿನಲ್ಲಿಟ್ಟು ನೋಡಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ಅಬ್ದುಲ್ ನಝೀರ್ ರ ಅಭಿಪ್ರಾಯಗಳ ಮೇಲೆ ಇನ್ನಷ್ಟು ಚರ್ಚೆ ನಡೆಯಬೇಕೆಂದು ಅವರು ಎಲ್ಲೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಒಳಗೆ ಈ ಬಗ್ಗೆ ಜಾಗೃತಿ ನಡೆಯಲಿ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿಲ್ಲ. ಅದರ ಬದಲು ಸುಪ್ರೀಮ್ ಕೋರ್ಟಿನ ಆಶಯವನ್ನೇ ತಪ್ಪಾಗಿ ವ್ಯಾಖ್ಯಾನಿಸುವ ಸಾಹಸಕ್ಕೆ ಅವರು ಮುಂದಾಗಿದ್ದಾರೆ. ಸುಪ್ರೀಮ್ ಕೋರ್ಟು ಬಯಸದೇ ಇರುವ ಕ್ರಿಮಿನಲ್ ಕಾನೂನೊಂದನ್ನು ಏಕಪಕ್ಷೀಯವಾಗಿ ರೂಪಿಸಿ ಸುಗ್ರೀವಾಜ್ಞೆಯ ಮೂಲಕ ಅವರು ಅನುಷ್ಠಾನಕ್ಕೆ ತಂದಿದ್ದಾರೆ. ಇದು ಸುಪ್ರೀಮ್ ಕೋರ್ಟಿನ ಬಯಕೆಯಲ್ಲ. ದೂರುದಾರೆ ಶಾಯರಾ ಬಾನು ಅವರ ಬಯಕೆಯೂ ಅಲ್ಲ. ಮುಸ್ಲಿಮ್ ಸಮುದಾಯದ ಬೇಡಿಕೆಯೂ ಅಲ್ಲ. ಆದ್ದರಿಂದ ಇದು ಸಂಚು, ದಾಷ್ಟ್ರ್ಯತನ, ದುರುದ್ದೇಶ ನೀತಿ, ಕ್ರೌರ್ಯ, ಅರಾಜಧರ್ಮ, ಇಬ್ಬಂದಿತನ.
ಪ್ರಧಾನಿ ಮೋದಿಯವರು ರಾಜಧರ್ಮವನ್ನು ಪಾಲಿಸುತ್ತಿಲ್ಲ ಅನ್ನುವುದಕ್ಕೆ ಶಬರಿಮಲೆ ಮತ್ತು ತ್ರಿವಳಿ ತಲಾಕ್ ಮತ್ತೊಂದು ಪುರಾವೆ.
No comments:
Post a Comment