ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ಸಿದ್ಧತೆಯು ಎಷ್ಟು ಸಿನಿಕತನದ್ದು ಮತ್ತು ದೂರದೃಷ್ಟಿರಹಿತವಾದದ್ದು ಅನ್ನುವುದಕ್ಕೆ ಅದು ಮಂಡಿಸಿರುವ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಗಳೇ ಉತ್ತಮ ಪುರಾವೆ. ಈ ಎರಡೂ ಮಸೂದೆಗಳನ್ನು ಪಾರ್ಲಿಮೆಂಟ್‍ನಲ್ಲಿ ಒಂದೇ ವಾರದೊಳಗೆ ಮಂಡಿಸಲಾಗಿದೆ. ಅದರಲ್ಲೂ ಪೌರತ್ವ ಮಸೂದೆಯನ್ನು ಅದು ಸಮರ್ಥಿಸುತ್ತಿರುವ ರೀತಿಯಂತೂ ಅತ್ಯಂತ ದಯನೀಯ. 2014 ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಫಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮುಸ್ಲಿಮರನ್ನು ಯಾಕೆ ಹೊರಗಿಟ್ಟಿರಿ ಅನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ. ಅದಕ್ಕೆ ಅವರು ಕೊಟ್ಟ ಉತ್ತರ ಏನೆಂದರೆ ಹಿಂದೂ, ಬೌದ್ಧ, ಜೈನ ಮುಂತಾದ ಧರ್ಮೀಯರಿಗೆ ನೆಲೆಸಲು ಭಾರತ ಬಿಟ್ಟರೆ ಬೇರೆ ದೇಶಗಳಿಲ್ಲ ಅನ್ನುವುದಾಗಿತ್ತು. ಅದರ್ಥ, ಮೇಲಿನ ಮೂರು ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರು ಅನ್ಯ ರಾಷ್ಟ್ರಗಳಲ್ಲಿ ಹೋಗಿ ನೆಲೆಸಲಿ ಎಂದೇ ಆಗುತ್ತದೆ. ಸಂವೇದನೆ ಸತ್ತು ಹೋದ ರಾಜಕಾರಣಿಯ ಹೊರತು ಇನ್ನಾರಿಗೂ ಈ ರೀತಿಯಲ್ಲಿ ಮಾತಾಡಲು ಸಾಧ್ಯವಿಲ್ಲ. ನಿಜವಾಗಿ, ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಆಂತರಿಕ ಸ್ಥಿತಿಯಿಂದ ಸಂಕಷ್ಟಕ್ಕೆ ಒಳಗಾಗಿರುವುದು ಮುಸ್ಲಿಮೇತರರಷ್ಟೇ ಅಲ್ಲ ಅನ್ನುವುದಕ್ಕೆ ಅಲ್ಲಿಂದ ಭಾರತಕ್ಕೆ ದೊಡ್ಡ ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ಮುಸ್ಲಿಮರೇ ಸಾಕ್ಷಿ. ಹಿಂದೂ, ಸಿಖ್, ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ವಲಸಿಗರಂತೆಯೇ ಮುಸ್ಲಿಮರೂ ಭಾರತವನ್ನು ಸುರಕ್ಷಿತ ರಾಷ್ಟ್ರವಾಗಿ ಪರಿಗಣಿಸಿದ್ದಾರೆ. ಹೀಗಿರುವಾಗ, ಇವರಿಂದ ಮುಸ್ಲಿಮರನ್ನು ಮಾತ್ರ ಬೇರ್ಪಡಿಸಿ ಹೊರಕ್ಕಟ್ಟುವುದು ಮತ್ತು ಉಳಿದವರನ್ನೆಲ್ಲ ಇಲ್ಲಿಯೇ ಉಳಿಸಿಕೊಳ್ಳುವುದು ಅಂದರೆ ಏನರ್ಥ? ಇವರೆಲ್ಲ, ತಾವಿರುವ ರಾಷ್ಟ್ರ ತಮಗೆ ಸುರಕ್ಷಿತವಲ್ಲ ಎಂಬ ಕಾರಣದಿಂದಲೇ ಭಾರತಕ್ಕೆ ಬಂದಿದ್ದಾರೆ. ಒಂದು ವೇಳೆ, ಇವರಲ್ಲಿ ಮುಸ್ಲಿಮರಿಗೆ ಹೋಗಲು ಅನ್ಯ ರಾಷ್ಟ್ರವಿದೆ ಎಂದಾದರೆ, ಬೌದ್ಧರಿಗೂ ಅನ್ಯ ರಾಷ್ಟ್ರವಿದೆಯಲ್ಲ? ಶ್ರೀಲಂಕಾ, ಮ್ಯಾನ್ಮಾರ್, ಬರ್ಮಾ, ಜಪಾನ್‍ಗಳು ಬೌದ್ಧರೇ ಬಹುಸಂಖ್ಯಾತರಾಗಿರುವ ರಾಷ್ಟ್ರಗಳು. ಅವರನ್ನೂ ಪೌರತ್ವ ವಿಧೇಯಕ ಮಸೂದೆಯಿಂದ ಹೊರಗಿಡಬಹುದಲ್ಲ? ಹಿಂದೂಗಳು ಬಹುಸಂಖ್ಯಾತರಾಗಿರುವ ನೇಪಾಲವು ನಮ್ಮ ಪಕ್ಕದಲ್ಲೇ ಇದೆ. ಮೇಲಿನ ಮೂರು ರಾಷ್ಟ್ರಗಳಿಂದ ಬಂದ ಹಿಂದೂಗಳನ್ನು ನಾವು ಇಲ್ಲೇ ಯಾಕೆ ಉಳಿಸಿಕೊಳ್ಳಬೇಕು? ಅವರಿಗೆ ಇನ್ನೊಂದು ರಾಷ್ಟ್ರವಾಗಿ ನೇಪಾಲ ಇದೆಯಲ್ಲ? ಕ್ರೈಸ್ತರಿಗೆ ಹೋಗಲು ಜಗತ್ತಿನಾದ್ಯಾಂತ ಧಾರಾಳ ರಾಷ್ಟ್ರಗಳಿವೆ. ಅವರನ್ನೇಕೆ ಇಲ್ಲಿಯೇ ಉಳಿಸಿಕೊಳ್ಳಬೇಕು..? ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋಗಬಹುದು. ಮಾತ್ರವಲ್ಲ, ಇದಕ್ಕೆ ಸಮರ್ಪಕ ಉತ್ತರವನ್ನು ಕೊಡುವುದಕ್ಕೆ ಕೇಂದ್ರ ಸರಕಾರಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ,
ವಲಸೆ ಅನ್ನುವುದೇ ಅತಿ ದೊಡ್ಡ ಹಿಂಸೆ. ಒಂದು ರಾಷ್ಟ್ರದಲ್ಲಿ ಆನಂದದಿಂದ ಜೀವಿಸುವ ಯಾವ ಕುಟುಂಬವೂ ಇನ್ನೊಂದು ರಾಷ್ಟ್ರಕ್ಕೆ ತೆರಳಿ ಅಕ್ರಮವಾಗಿ ನೆಲೆಸಲು ಬಯಸುವುದಿಲ್ಲ. ಹುಟ್ಟಿ ಬೆಳೆದ ರಾಷ್ಟ್ರವನ್ನು ಬದಲಿಸುವುದೆಂದರೆ, ಬಟ್ಟೆ ಬದಲಿಸಿದಷ್ಟು ಸುಲಭವೂ ಅಲ್ಲ. ತಾನು ನೆಲೆಸುವ ಆ ಇನ್ನೊಂದು ರಾಷ್ಟ್ರದಲ್ಲಿ ಹೊಸದಾಗಿ ಮನೆ, ಉದ್ಯೋಗ, ಬದುಕು ಕಂಡುಕೊಳ್ಳಬೇಕು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಅಪರಿಚಿತರಾದ ಜನರೊಂದಿಗೆ ಸಂಬಂಧ ಬೆಳೆಸಬೇಕು. ಇವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿಕೊಂಡು ನೆಲೆಸ ಬಯಸುವವರು ಇದ್ದಾರೆಂದರೆ ಅವರು ತನ್ನ ಮೂಲ ರಾಷ್ಟ್ರದಲ್ಲಿ ಅದಕ್ಕಿಂತಲೂ ತೀವ್ರ ತೆರನಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದೇ ಅರ್ಥ. ಹೀಗಿರುವಾಗ ಇಂಥವರನ್ನು ಹಿಂದೂ-ಮುಸ್ಲಿಮ್, ಜೈನ ಎಂದು ಮುಂತಾಗಿ ವಿಭಜಿಸುವುದು ಸರಿಯೇ? ಇವರಲ್ಲಿ ಮುಸ್ಲಿಮರನ್ನು ಹೆಕ್ಕಿ ತೆಗೆದು ಹೊರಕ್ಕಟ್ಟುವುದು ನ್ಯಾಯವೇ? ಹಾಗಂತ,
ಬಿಜೆಪಿ ನೇತೃತ್ವದ ಮೋದಿ ಸರಕಾರವು ಅತ್ಯಂತ ಅವಿವೇಕತನದಿಂದ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅದು ಆರಂಭದಿಂದಲೇ ವಿಭಜನವಾದಿ ಮತ್ತು ಭಾವಾವೇಶದ ರಾಜಕಾರಣವನ್ನು ಜೊತೆ ಸೇರಿಸಿಕೊಂಡೇ ಆಟ ಆಡುತ್ತಿದೆ. ಇದಕ್ಕೆ ಪ್ರಥಮ ಉದಾಹರಣೆ ಏನೆಂದರೆ, ರಾತ್ರೋರಾತ್ರಿ ನೋಟು ನಿಷೇಧ ಮಾಡಿದ ರೀತಿ. ಆ ಬಳಿಕ ಜಿಎಸ್‍ಟಿಯ ಹೇರಿಕೆ. ಅಚ್ಚರಿ ಏನೆಂದರೆ, ಈ ಎರಡಕ್ಕೂ ಪೂರ್ವ ತಯಾರಿ ಎಂಬುದು ಇರಲೇ ಇಲ್ಲ. ದೂರ ದೃಷ್ಟಿಯೂ ಇರಲಿಲ್ಲ. ಇನ್ನು, ಸರ್ವ ಸೌಲಭ್ಯಗಳಿಗೂ ಆಧಾರ್ ಸಂಪರ್ಕ ಕಲ್ಪಿಸಬೇಕೆಂಬ ಬಿಜೆಪಿ ಸರಕಾರದ ನಿರ್ದೇಶನವನ್ನಂತೂ ಸುಪ್ರೀಮ್ ಕೋರ್ಟೇ ತಳ್ಳಿ ಹಾಕಿತು. ತ್ರಿವಳಿ ತಲಾಕೂ ಇಂಥದ್ದೇ ಒಂದು ಎಡವಟ್ಟು. ಇದೀಗ ಒಂದೇ ವಾರದಲ್ಲಿ ಪೌರತ್ವ ಮಸೂದೆ ಮತ್ತು ಮೇಲ್ಜಾತಿ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮೋದಿ ಸರಕಾರ ಮಂಡಿಸಿದೆ. ಹಾಗಂತ, ಪೌರತ್ವ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಬಹುದು ಎಂಬುದು ಬಿಜೆಪಿಗೆ ಗೊತ್ತಿರಲಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಸಾಹಸಕ್ಕೆ ಕೈ ಹಾಕಿದೆ. ಯಾಕೆಂದರೆ, ಈ ಮಸೂದೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮುದಾಯವನ್ನು ಧ್ರುವೀಕರಿಸಬಹುದು. ಮುಸ್ಲಿಮರನ್ನು ದೇಶದಿಂದ ಹೊರಕ್ಕಟ್ಟುತ್ತಿದ್ದೇವೆ ಎಂಬ ಸಂದೇಶವನ್ನು ಸೂಚ್ಯವಾಗಿ ಸಾರಬಹುದು. ಒಂದು ವೇಳೆ,
ವಲಸಿಗರಿಗೆ ನೆಮ್ಮದಿಯನ್ನು ಕೊಡುವುದೇ ಬಿಜೆಪಿಯ ಉದ್ದೇಶವಾಗಿರುತ್ತಿದ್ದರೆ ಅದು 1985ರಲ್ಲಿ ಮಾಡಿಕೊಳ್ಳಲಾಗಿರುವ ಅಸ್ಸಾಂ ಒಪ್ಪಂದವನ್ನು ಯಥೋಚಿತವಾಗಿ ಜಾರಿಗೆ ತರುವುದಕ್ಕೆ ಮುಂದಾಗಬೇಕಿತ್ತು. ನಿಜವಾಗಿ, ವಲಸಿಗರ ಸಮಸ್ಯೆ ಇರುವುದೇ ಅಸ್ಸಾಮ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ ಮುಂತಾದ ಈಶಾನ್ಯ ರಾಜ್ಯಗಳಲ್ಲಿ. ಇವು ಪಾಕಿಸ್ತಾನ, ಬಾಂಗ್ಲಾ ಮತ್ತು ಅಫಘಾನಿಸ್ತಾನದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಗಡಿಯನ್ನು ಹಂಚಿಕೊಂಡಿರುವುದರಿಂದ ವಲಸಿಗರ ಸಮಸ್ಯೆ ಸ್ವಾಭಾವಿಕ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿಯೇ 1985ರಲ್ಲಿ ಅಸ್ಸಾಂ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಅದರ ಪ್ರಕಾರ 1971ರ ಮಾರ್ಚ್ 31ರ ವರೆಗೆ ಭಾರತಕ್ಕೆ ಬಂದು ನೆಲೆಸಿದ ಎಲ್ಲ ಹಿಂದೂ, ಮುಸ್ಲಿಮರೂ ಭಾರತೀಯ ಪೌರತ್ವಕ್ಕೆ ಅರ್ಹರು. ಆದರೆ ಈಗಿನ ಹೊಸ ಪೌರತ್ವ ಮಸೂದೆಯ ಪ್ರಕಾರ 1971 ಮಾರ್ಚ್‍ನ ನಂತರ 2014 ಡಿ. 31ರ ವರೆಗೆ ವಲಸೆ ಬಂದ ಮುಸ್ಲಿಮೇತರ ವಲಸಿಗರು ಮಾತ್ರ ಪೌರತ್ವಕ್ಕೆ ಅರ್ಹರಾಗುತ್ತಾರೆ. ಈಶಾನ್ಯ ರಾಜ್ಯಗಳ ಪ್ರತಿಭಟನೆಗೆ ಮುಖ್ಯ ಕಾರಣವೇ ಇದು. 1971 ಮಾರ್ಚ್ 31ರ ನಂತರ ಬಂದ ಯಾರಿಗೂ ಪೌರತ್ವ ನೀಡಬಾರದು ಎಂಬುದು ಅವುಗಳ ಬೇಡಿಕೆ. ಹಾಗೆ ಪೌರತ್ವ ಕೊಡುವುದರಿಂದ ಅಲ್ಲಿನ ಪ್ರಾದೇಶಿಕ ಅಸ್ಮಿತೆ ಮತ್ತು ಸ್ಥಳೀಯತೆಗೆ ಧಕ್ಕೆ ಬರಬಹುದು, ಬುಡುಕಟ್ಟು ಸಮುದಾಯಗಳ ಬದುಕು-ಭಾವಕ್ಕೆ ಅಪಾಯ ಒದಗಬಹುದು ಎಂಬುದು ಅವುಗಳ ವಾದ. ಅಂದಹಾಗೆ,
ಈ ಮಸೂದೆ ವಿಭಜನವಾದಿ ರಾಜಕಾರಣದ ಕೂಸು ಅನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಅಷ್ಟಕ್ಕೂ, ಪ್ರತಿಭಟನೆಗಿಳಿದಿರುವ ಈಶಾನ್ಯದ ನಾಲ್ಕೈದು ಪುಟ್ಟ ರಾಜ್ಯಗಳಲ್ಲಿ ರಾಜಕೀಯವಾಗಿ ಬಿಜೆಪಿ ಕಳಕೊಳ್ಳುವಂಥದ್ದೇನೂ ಇಲ್ಲ. ಅಲ್ಲಿರುವ ಒಟ್ಟು ಲೋಕಸಭಾ ಸ್ಥಾನಗಳು ಒಂದು ಉತ್ತರ ಪ್ರದೇಶದಷ್ಟೂ ಇಲ್ಲ. ಆದ್ದರಿಂದ ಅಲ್ಲಿನ ಮತದಾರರ ಭಾವನೆಗಳಿಗೆ ಬೆಲೆಕೊಡುವುದಕ್ಕಿಂತ ಉಳಿದ ಭಾರತವನ್ನು ಕೈವಶಮಾಡಿಕೊಳ್ಳುವುದಕ್ಕೆ ಪೂರಕವಾದ ಕ್ರಮ ಕೈಗೊಳ್ಳುವುದೇ ಉತ್ತಮ ಎಂದು ಬಿಜೆಪಿ ಭಾವಿಸಿದೆ. ಪೌರತ್ವ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ತರಾತುರಿಯಿಂದ ಮಂಡಿಸಿ ಪಾಸು ಮಾಡಿಕೊಂಡಿರುವುದು ಇದೇ ಕಾರಣಕ್ಕೆ. ಮುಸ್ಲಿಮರನ್ನು ನಗಣ್ಯರಾಗಿ ಮತ್ತು ಅವಮಾನಿತರಾಗಿ ನಡೆಸಿಕೊಂಡಷ್ಟೂ ತನ್ನ ಓಟ್ ಬ್ಯಾಂಕ್ ವೃದ್ಧಿಸುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿ ಈಗಲೂ ಇದೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಅತ್ಯಂತ ಕೆಟ್ಟದಾದ ಮತ್ತು ಮುಸ್ಲಿಮ್ ಕುಟುಂಬಗಳ ವಿಭಜನೆಗೆ ಕಾರಣವಾಗಬಹುದಾದ ಕಾನೂನನ್ನು ರಚಿಸಿ ಸುಗ್ರೀವಾಜ್ಞೆಯೊಂದಿಗೆ ಜಾರಿಗೊಳಿಸಿರುವುದೂ ಇದೇ ನಂಬಿಕೆಯ ಕಾರಣದಿಂದ.
ಪೌರತ್ವ ಮಸೂದೆಯ ಮೂಲಕ ಬಿಜೆಪಿ ತಾನು ಬಹುಸಂಸ್ಕೃತಿಯ ದೇಶವನ್ನಾಳಲು ಅಸಮರ್ಥ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
No comments:
Post a Comment