ಕಳೆದವಾರ ಎರಡು ಬೆಳವಣಿಗೆಗಳು ನಡೆದುವು. ಈ ಎರಡೂ ಬೆಳವಣಿಗೆಗಳು ತಳಕು ಹಾಕಿಕೊಂಡಿರುವುದು ರಫೇಲ್ ಒಪ್ಪಂದದ ಜೊತೆ. ಮಾತ್ರವಲ್ಲ, ಈ ಎರಡೂ ಬೆಳವಣಿಗೆಗಳು ಚೌಕಿದಾರನೇ ಕಳ್ಳ ಅನ್ನುವುದಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸಿವೆ. ಇದರಲ್ಲಿ ಒಂದು ಸುಪ್ರೀಮ್ ಕೋರ್ಟಿನ ತೀರ್ಪು.
ರಫೇಲ್ ವ್ಯವಹಾರಕ್ಕೆ ಸಂಬಂಧಿಸಿ ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರುಣ್ ಶೌರಿ, ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿದ್ದರು. ಇವರು ಹೀಗೆ ಮನವಿ ಮಾಡಿಕೊಳ್ಳುವುದಕ್ಕೆ ಕಾರಣ- ದ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ತನಿಖಾ ವರದಿ. ಮೂರು ದಶಕಗಳ ಹಿಂದೆ ರಾಜೀವ್ ಗಾಂಧಿಯವರ ಕಾಲದಲ್ಲಿ ಭಾರತ ಸರಕಾರ ಸ್ವೀಡನ್ನಿನ ಮದ್ದುಗುಂಡು ತಯಾರಕ ಕಂಪೆನಿಯಾದ ಬೋಫೋರ್ಸ್‍ನೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಆ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ದ ಹಿಂದೂ ಪತ್ರಿಕೆಯ ಎನ್. ರಾಮ್ ಎಂಬ ಪತ್ರಕರ್ತ ಅಂದು ದೇಶದ ಮುಂದಿಟ್ಟಿದ್ದರು. ಅವರ ಆ ತನಿಖಾ ಬರಹ ದೇಶದ ರಾಜಕೀಯ ವಾತಾವರಣವನ್ನೇ ಬದಲಿಸಿತ್ತು. ಇದೀಗ ಅದೇ ಎನ್. ರಾಮ್ ಅವರು ರಫೇಲ್ ಒಪ್ಪಂದದಲ್ಲಾಗಿರುವ ಅವ್ಯವಹಾರವನ್ನು ಇತ್ತೀಚೆಗೆ ದ ಹಿಂದೂ ಪತ್ರಿಕೆಯಲ್ಲಿ ಆಧಾರ ಸಮೇತ ಬರೆದರು. ಇದೇ ಬರಹಗಳನ್ನು ಆಧರಿಸಿಕೊಂಡು ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿದರು. ಕೋರ್ಟು ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ಮೋದಿ ಸರಕಾರ ಬಲವಾಗಿ ವಿರೋಧಿಸಿತು. ರಕ್ಷಣಾ ಇಲಾಖೆಯಿಂದ ಕಳವು ಮಾಡಲಾದ ದಾಖಲೆಗಳನ್ನಿಟ್ಟುಕೊಂಡು ಎನ್. ರಾಮ್ ಅವರು ಲೇಖನ ಬರೆದಿದ್ದು, ಅದನ್ನು ಸಾಕ್ಷ್ಯವಾಗಿ ಪರಿಗಣಿಸಬಾರದೆಂದು ಕೇಂದ್ರ ಸರಕಾರ ವಾದಿಸಿತು. ಮಾತ್ರವಲ್ಲ, ಬ್ರಿಟಿಷ್ ಕಾಲದ ಮತ್ತು ಇಂದಿಗೆ ಅಪ್ರಸ್ತುತವಾಗಿರುವ ಅಧಿಕೃತ ರಹಸ್ಯ ಕಾಯ್ದೆಯಂತೆ ದ ಹಿಂದೂ ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿತು. ಯಾವಾಗ ಕೇಂದ್ರ ಸರಕಾರ ರಫೇಲ್ ಒಪ್ಪಂದದ ದಾಖಲೆಗಳು ಕಳವಾಗಿವೆ ಮತ್ತು ದ ಹಿಂದೂ ಪ್ರಕಟಿಸಿದ ಬರಹಗಳು ಅವೇ ದಾಖಲೆಗಳ ಆಧಾರಿತವಾಗಿವೆ ಎಂದು ಸುಪ್ರೀಮ್ ಕೋರ್ಟಿನಲ್ಲಿ ಒಪ್ಪಿಕೊಂಡಿತೋ ಆಗಲೇ ಈ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಅನ್ನುವುದು ಸ್ಪಷ್ಟವಾಯಿತು. ಮಾತ್ರವಲ್ಲ, ಸುಪ್ರೀಮ್ ಕೋರ್ಟು ಮತ್ತು ಈ ದೇಶದ ಮುಂದೆ ತಾನು ಸುಳ್ಳು ಹೇಳಿದ್ದೇನೆ ಎಂದೂ ಕೇಂದ್ರ ಸರಕಾರ ಘೋಷಿಸಿದಂತಾಯಿತು. ಎನ್. ರಾಮ್ ಅವರ ತನಿಖಾ ಬರಹಗಳು ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗುವುದಕ್ಕಿಂತ ಮೊದಲು ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ವಿಚಾರಣೆ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ತನ್ನೆದುರು ಹಾಜರುಪಡಿಸುವಂತೆ ಕೋರ್ಟು ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಆ ದಾಖಲೆಗಳ ಆಧಾರದಲ್ಲಿ ರಫೇಲ್ ಒಪ್ಪಂದಕ್ಕೆ ಸುಪ್ರೀಮ್ ಕೋರ್ಟು ಕ್ಲೀನ್‍ಚಿಟ್ ನೀಡಿತ್ತು. ಆದರೆ, ದ ಹಿಂದೂ ಪತ್ರಿಕೆ ಯಾವಾಗ ಸರಣಿ ಲೇಖನಗಳನ್ನು ಪ್ರಕಟಿಸತೊಡಗಿತೋ, ಕೇಂದ್ರ ಸರಕಾರದ ಸುಳ್ಳುಗಳು ಒಂದೊಂದೇ ಬಹಿರಂಗಕ್ಕೆ ಬಹಿರಂಗತೊಡಗಿದುವು. ನಿಜವಾಗಿ, ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಿಂದ ಪ್ರಮುಖ ದಾಖಲೆಗಳನ್ನೇ ಮುಚ್ಚಿಟ್ಟಿತ್ತು. ತನಗೆ ಅನುಕೂಲಕರವಾದ ದಾಖಲೆಗಳನ್ನಷ್ಟೇ ಕೋರ್ಟಿನ ಮುಂದಿರಿಸಿತ್ತು. ರಕ್ಷಣಾ ಒಪ್ಪಂದಕ್ಕಾಗಿ ಕೇಂದ್ರ ಸರಕಾರವೇ ರಚಿಸಿದ ತಜ್ಞರ ತಂಡವು ಒಂದುಕಡೆ ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗ, ಇನ್ನೊಂದು ಕಡೆ ಪ್ರಧಾನಮಂತ್ರಿ ಕಚೇರಿಯೇ ಮಧ್ಯ ಪ್ರವೇಶಿಸಿತ್ತೆಂದು ದ ಹಿಂದೂ ಪತ್ರಿಕೆ ಪ್ರಕಟಿಸಿದ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಗಳು ಸ್ಪಷ್ಟಪಡಿಸಿದುವು. ಸುಪ್ರೀಮ್ ಕೋರ್ಟಿನ ಮುಂದೆ ಕೇಂದ್ರ ಸರಕಾರ ಈ ಅಂಶವನ್ನು ಮುಚ್ಚಿಟ್ಟಿತ್ತು. ಅಲ್ಲದೇ, ಕೇಂದ್ರದ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಅವರೂ ಈ ಒಪ್ಪಂದದಲ್ಲಿ ಮಧ್ಯಪ್ರವೇಶ ಮಾಡಿz್ದÁರೆ ಎಂದೂ ಈ ದಾಖಲೆಗಳು ಹೇಳಿದುವು. ಅವರ ಭಾಗೀದಾರಿಕೆಯ ಬಳಿಕವೇ ಒಪ್ಪಂದದಿಂದ ಬ್ಯಾಂಕ್ ಖಾತರಿಯ ಷರತ್ತನ್ನು ತೆಗೆದುಹಾಕಲಾಯಿತು ಮತ್ತು ಆ ಮೂಲಕ ಡಸಾಲ್ಟ್ ಕಂಪೆನಿಗೆ ಅನುಕೂಲ ಮಾಡಿಕೊಡಲಾಯಿತು ಎಂಬುದನ್ನೂ ದ ಹಿಂದೂ ಪ್ರಕಟಿಸಿದ ದಾಖಲೆಗಳು ವಿವರಿಸಿದುವು. ಇದನ್ನೂ ಸುಪ್ರೀಮ್ ಕೋರ್ಟ್‍ನಿಂದ ಕೇಂದ್ರ ಸರಕಾರ ಮುಚ್ಚಿಟ್ಟಿತ್ತು. ನಿಜವಾಗಿ, ಇವೆರಡೂ ಗಂಭೀರ ಅಂಶಗಳು. ರಫೇಲ್ ಯುದ್ಧ ವಿಮಾನವನ್ನು ತಯಾರಿಸುವ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ತಜ್ಞರ ತಂಡವನ್ನು ಕೇಂದ್ರ ಸರಕಾರವೇ ರಚಿಸಿರುವಾಗ ಮತ್ತು ಅದು ಮಾತುಕತೆಯಲ್ಲಿ ನಿರತವಾಗಿರುವಾಗ ಪ್ರಧಾನ ಮಂತ್ರಿ ಕಚೇರಿ ಮಧ್ಯ ಪ್ರವೇಶಿಸಿದ್ದೇಕೆ? ಯಾರಿಗೆ ಅನುಕೂಲ ಮಾಡಿಕೊಡುವುದಕ್ಕೆ ಈ ಮಧ್ಯಪ್ರವೇಶ? ಅಜಿತ್ ಧೋವಲ್ ಅವರ ಮಧ್ಯಪ್ರವೇಶವೂ ಇಂಥದ್ದೊಂದು ಅನುಮಾನವನ್ನು ಹುಟ್ಟು ಹಾಕುತ್ತದೆ. ಬ್ಯಾಂಕ್ ಖಾತರಿ ಎಂಬುದು ಯಾವುದೇ ಒಪ್ಪಂದದ ಬಹುದೊಡ್ಡ ಭಾಗ. ಧೋವಲ್ ಅವರು ಈ ಬ್ಯಾಂಕ್ ಖಾತರಿಯನ್ನೇ ರದ್ದುಪಡಿಸಿರುವುದು ಯಾಕೆ? ರಾಷ್ಟ್ರೀಯ ಭದ್ರತೆ, ದೇಶಭಕ್ತಿ ಎಂದೆಲ್ಲಾ ಹೇಳುತ್ತಾ ಬಂದ ಮೋದಿ ಮತ್ತು ಅವರ ತಂಡವು ಯಾಕೆ ದೇಶದ ಮುಂದೆ ಸುಳ್ಳುಗಳನ್ನು ಹೇಳಿದೆ? ತನ್ನ ಆಪ್ತ ಉದ್ಯಮಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ದೇಶರಕ್ಷಣೆಯಲ್ಲಿ ರಾಜಿ ಮಾಡಿಕೊಂಡರೇ ಮೋದಿ ಎಂಬ ಪ್ರಶ್ನೆಗಳು ಉದ್ಭವಿಸಿದುವು. ಇದನ್ನು ಸುಪ್ರೀಮ್ ಕೋರ್ಟು ಕೂಡ ಗಮನಿಸಿತು ಮತ್ತು ತನ್ನ ಈ ಹಿಂದಿನ ‘ಕ್ಲೀನ್‍ಚಿಟ್’ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಕೊಂಡಿತು.
ಕಳೆದವಾರ ನಡೆದ ಇನ್ನೊಂದು ಬೆಳವಣಿಗೆ ಏನೆಂದರೆ, ಫ್ರಾನ್ಸ್ ನ ಲೆ ಮಾಂಡೆ ಎಂಬ ಹೆಸರಿನ ಪತ್ರಿಕೆಯೊಂದು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ವರದಿಯೊಂದನ್ನು ಪ್ರಕಟಿಸಿದ್ದು. ಫ್ರಾನ್ಸ್ ನಲ್ಲಿರುವ ಅನಿಲ್ ಅಂಬಾನಿಯವರ ರಿಲಯನ್ಸ್ ಪ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ (ಎಸ್‍ಎಎಸ್) ಎಂಬ ಕಂಪೆನಿಗೆ ಫ್ರಾನ್ಸ್ ಸರಕಾರವು ರೂ. 1124.9 ಕೋಟಿಯಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದಕ್ಕೂ ರಫೇಲ್ ಒಪ್ಪಂದಕ್ಕೂ ಸಂಬಂಧ ಇದೆ ಎಂದು ಪತ್ರಿಕೆ ಹೇಳಿದೆ. ಡಸಾಲ್ಟ್ ಕಂಪೆನಿಯಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 6 ತಿಂಗಳ ಬಳಿಕ ಈ ತೆರಿಗೆ ವಿನಾಯಿತಿ ಬೆಳವಣಿಗೆ ನಡೆದಿದೆ ಎಂದು ಪತ್ರಿಕೆ ಬರೆದಿದೆ. ರಫೇಲ್ ಒಪ್ಪಂದಕ್ಕೆ ಮೊದಲು ತೆರಿಗೆ ಪಾವತಿಯಲ್ಲಿ ಯಾವ ವಿನಾಯಿತಿಯನ್ನು ಮಾಡಲೂ ಒಪ್ಪಿಕೊಳ್ಳದ ಫ್ರಾನ್ಸ್ ಸರಕಾರವು ಈ ಒಪ್ಪಂದದ ಬಳಿಕ ದಿಢೀರ್ ಆಗಿ ತೆರಿಗೆ ವಿನಾಯಿತಿ ಘೋಷಿಸಲು ಕಾರಣವೇನು ಅನ್ನುವ ಪ್ರಶ್ನೆಯನ್ನು ಲೆ ಮಾಂಡೆ ಪತ್ರಿಕಾ ವರದಿಯು ಸಹಜವಾಗಿಯೇ ಎತ್ತುತ್ತದೆ. ಇದಲ್ಲದೇ, ಸರಕಾರಿ ಸ್ವಾಮ್ಯದ ಮತ್ತು ಕರ್ನಾಟಕದಲ್ಲಿರುವ ಹೆಚ್‍ಎಎಲ್ ಕಂಪೆನಿಯನ್ನು ಕೈಬಿಟ್ಟು ಅನಿಲ್ ಅಂಬಾನಿಯ ಕಂಪೆನಿಗೆ ರಫೇಲ್ ಯುದ್ಧ ವಿಮಾನ ತಯಾರಿಯ ಗುತ್ತಿಗೆಯನ್ನು ಕೇಂದ್ರ ಸರಕಾರ ವಹಿಸಿಕೊಟ್ಟಿರುವುದೇಕೆ ಅನ್ನುವ ಪ್ರಶ್ನೆ ಈ ಮೊದಲೇ ಎದ್ದಿತ್ತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಈ ಒಪ್ಪಂದದ ಭಾರತೀಯ ಪಾಲುದಾರನಾಗಿ ಹೆಚ್‍ಎಎಲ್ ಅನ್ನು ಆರಿಸಿಕೊಳ್ಳಲಾಗಿತ್ತು. ಡಸಾಲ್ಟ್ ಮತ್ತು ಹೆಚ್‍ಎಎಲ್ ಜಂಟಿಯಾಗಿ ರಫೇಲ್ ಯುದ್ಧವಿಮಾನಗಳನ್ನು ನಿರ್ಮಿಸುವುದಾಗಿ ಒಪ್ಪಂದವಾಗಿತ್ತು. ಆದರೆ, ಮೋದಿಯವರು ಆ ಒಪ್ಪಂದವನ್ನು ರದ್ದುಗೊಳಿಸಿ ಹೆಚ್‍ಎಎಲ್‍ನ ಸ್ಥಾನದಲ್ಲಿ ಅನಿಲ್ ಅಂಬಾನಿಯನ್ನು ತಂದು ಕೂರಿಸಿದರು. ಸರಕಾರಿ ಸ್ವಾಮ್ಯದ ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಅನುಭವಿಯಾಗಿರುವ ಹೆಚ್‍ಎಎಲ್ ಅನ್ನು ಕೈಬಿಟ್ಟು ಅನನುಭವಿ ಅನಿಲ್ ಅಂಬಾನಿಯ ಕಂಪೆನಿಯನ್ನು ಆರಿಸಿಕೊಂಡಿದ್ದೇಕೆ ಎಂಬ ಈಗಾಗಲೇ ಇರುವ ಪ್ರಶ್ನೆಯ ಜೊತೆಗೇ ಲೆ ಮಾಂಡೆ ಪ್ರಕಟಿಸಿರುವ ‘ತೆರಿಗೆ ವಿನಾಯಿತಿ’ ವರದಿಯು ಇನ್ನಷ್ಟು ಪ್ರಶ್ನೆಗಳಿಗೆ ದಾರಿ ತೆರೆದಿದೆ. ಬಹುಕೋಟಿ ಅವ್ಯವಹಾರವೊಂದು ಈ ಒಪ್ಪಂದದ ಮೂಲಕ ನಡೆದಿದೆಯೇ? ಯಾರು ಇದರ ಫಲಾನುಭವಿಗಳು? ಈ ಅವ್ಯವಹಾರದಲ್ಲಿ ಪ್ರಧಾನಮಂತ್ರಿ ಕಚೇರಿಯವರ ಪಾತ್ರ ಏನು? ಅಜಿತ್ ಧೋವಲ್ ಅವರ ಪಾತ್ರ ಏನು? ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಹಳೇ ಒಪ್ಪಂದವನ್ನು ರದ್ದುಪಡಿಸಲಾಯಿತೇ? ಮೋದಿ ಸರಕಾರದ ದೇಶಪ್ರೇಮ, ಸೇನಾಪ್ರೇಮ, ರಾಷ್ಟ್ರೀಯ ಭದ್ರತೆ, ದೇಶರಕ್ಷಣೆ ಇತ್ಯಾದಿ ಇತ್ಯಾದಿ ಮಾತುಗಳೆಲ್ಲ ಬರೀ ಬೊಗಳೆಯೇ? ರಫೇಲ್ ಎಂಬುದು ಇನ್ನೊಂದು ಬೋಫೋರ್ಸ್ ಹಗರಣವೇ? ಚೌಕೀದಾರ ಕಳ್ಳನಾದ ಕತೆಯೇ?
ಈಗಾಗಲೇ ನಡೆದಿರುವ ಬೆಳವಣಿಗೆಗಳು ಮತ್ತು ಬಹಿರಂಗವಾಗಿರುವ ದಾಖಲೆಗಳಂತೂ ಚೌಕೀದಾರನನ್ನೇ ಕಳ್ಳ ಅನ್ನುತ್ತಿದೆ. ಉಳಿದುದನ್ನು ಸುಪ್ರೀಮ್ ಕೋರ್ಟೇ ಹೇಳಲಿ.