Thursday, 25 April 2019

ಧರಣಿ ಮಂಡಲ ಮಧ್ಯಪ್ರದೇಶದೊಳಗೆ




ಮಧ್ಯಪ್ರದೇಶ ಸರಕಾರವು ಒಂದೇ ವಾರದೊಳಗೆ ಎರಡು ಪ್ರಕರಣಗಳಿಗೆ ಸಂಬಂಧಿಸಿ 5 ಮಂದಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA)ಯನ್ವಯ ಕೇಸು ದಾಖಲಿಸಿದೆ. ಈ 5 ಮಂದಿಯ ಮೇಲೆಯೂ ಗೋಮಾಂಸ ಸಾಗಾಟ ಮಾಡಿದ ಆರೋಪ ಇದೆ. ಗೋಹತ್ಯೆ ಮತ್ತು ಗೋಮಾಂಸಕ್ಕೆ ನಿಷೇಧ ಇರುವ ರಾಜ್ಯವೊಂದರಲ್ಲಿ ಆ ನಿಷೇಧವನ್ನು ಉಲ್ಲಂಘಿಸುವುದು ಖಂಡಿತ ಅಪರಾಧ. ಅಲ್ಲದೇ, ಕೋಮು ಸೂಕ್ಷ್ಮ  ಪ್ರದೇಶಗಳಾದ ಖಾಂಡ್ವಾ ಮತ್ತು ಅಗಾರ್ ಪ್ರದೇಶಗಳಲ್ಲಿ ಈ ಎರಡು ಪ್ರಕರಣಗಳು ನಡೆದಿವೆ ಎಂಬುದೂ ಮುಖ್ಯ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅಗಾರ್ ಪ್ರದೇಶ ಸ್ತಬ್ಧ ಆಗಿದೆ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ. ಸಂಘಪರಿವಾರವು ಪ್ರತಿಭಟನೆಯ ಬೆದರಿಕೆ ಹಾಕಿವೆ. ಆದ್ದರಿಂದಲೋ ಏನೋ, ಖಾಂಡ್ವಾ ಪ್ರಕರಣದ ಆರೋಪಿಗಳ ಮೇಲೆ ಮೊದಲು ಗೋಹತ್ಯೆ ನಿಷೇಧ ಕಾಯ್ದೆಯನ್ವಯ ದಾಖಲಿಸಿಕೊಳ್ಳಲಾಗಿದ್ದ ಕೇಸನ್ನು ಆ ಬಳಿಕ NSA ಅಡಿಯಲ್ಲಿ ಮರು ದಾಖಲಿಸಿಕೊಳ್ಳಲಾಗಿದೆ. ಅಗಾರ್ ಪ್ರದೇಶದಲ್ಲಿ ಗೋಮಾಂಸ ಸಾಗಾಟ ಮಾಡಿದ ಇಬ್ಬರು ಆರೋಪಿಗಳ ಮೇಲೆ ಈ ಹಿಂದೆಯೂ ಗೋಮಾಂಸ ಸಾಗಾಟ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಮೇಲೆ ನೇರವಾಗಿಯೇ NSA ಕಾಯ್ದೆಯನ್ನು ಪ್ರಯೋಗಿಸಲಾಗಿದೆ.
ತಕರಾರು ಇರುವುದು ಈ ಐವರನ್ನು ಬಂಧಿಸಿರುವುದರ ಮೇಲಲ್ಲ. ಕಾನೂನು ಉಲ್ಲಂಘಿಸಿದವರನ್ನು ಬಂಧಿಸಬಾರದು ಎಂದು ಹೇಳುತ್ತಲೂ ಇಲ್ಲ. ಆದರೆ ಗೋಹತ್ಯೆ ನಡೆಸಿದ ಆರೋಪಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಅನ್ವಯಿಸುವುದು ಸರಿಯೇ? ಭಯೋತ್ಪಾದಕರ ಮೇಲೆ ಹೇರಬೇಕಾದ ಕಾಯ್ದೆಯೊಂದನ್ನು ಭಯೋತ್ಪಾದನೆಯೊಂದಿಗೆ ಸಂಬಂಧವೇ ಇಲ್ಲದವರ ಮೇಲೆ ಹೇರುವುದು ನೈತಿಕವೇ? ಪಿಕ್‍ಪಾಕೆಟ್ ಕಳ್ಳನ ಮೇಲೆ ಫೋಕ್ಸೋ ಕಾಯ್ದೆಯನ್ನು ಹೇರುವಂತಿಲ್ಲ. ಯಾಕೆಂದರೆ, ಫೋಕ್ಸೋ ಕಾಯ್ದೆ ಅತ್ಯಾಚಾರಕ್ಕೆ ಸಂಬಂಧಿಸಿದ್ದು. ಅತ್ಯಾಚಾರ, ಹತ್ಯಾಯತ್ನ, ದರೋಡೆ, ಹತ್ಯೆ, ವಂಚನೆ ಇತ್ಯಾದಿ ಇತ್ಯಾದಿ ಪ್ರಕರಣಗಳೆಲ್ಲ ಸಮಾನ ಅಲ್ಲ. ಇವುಗಳಿಗೆಲ್ಲ ಬೇರೆ ಬೇರೆಯದೇ ಆದ ಕಾನೂನು ಸಂಹಿತೆಗಳಿವೆ. ಭಾರತೀಯ ದಂಡಸಂಹಿತೆಯ ಪ್ರಕಾರ ಇಂಥ ಪ್ರಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಲಾಗುತ್ತದೆ. ಅದರಂತೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಹತ್ಯಾಯತ್ನದ ಆರೋಪಿಗಳ ಮೇಲೆ ಭಾರತೀಯ ಅಪರಾಧ ದಂಡಸಂಹಿತೆ 307ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಬೇಕೇ ಹೊರತು ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಪನ್ 124 A ಯಂತೆ ಅಲ್ಲ.
ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಗುಂಡು ಹೊಡೆದ ಪ್ರಕರಣ ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆಯಿತು. ಹಿಂದೂ ಮಹಾಸಭಾದ ನಾಯಕಿ ಶಕುನ್ ಪೂಜಾ ಪಾಂಡೆಯವರು ಬಹಿರಂಗವಾಗಿಯೇ ಮತ್ತು ಮಾಧ್ಯಮ ಪ್ರತಿನಿಧಿಗಳ ಮುಂದೆಯೇ ಗಾಂಧಿ ಪ್ರತಿಕೃತಿಗೆ ಆಟಿಕೆಯ ಬಂದೂಕಿನಿಂದ ಗುಂಡು ಹೊಡೆದರು. ಆದರೆ, ಈ ಪಾಂಡೆಯ ವಿರುದ್ಧವಾಗಲಿ, ಅವರು ಪ್ರತಿನಿಧಿಸುವ ಸಂಘಟನೆಯ ಮೇಲಾಗಲಿ ಅಥವಾ ಅಲ್ಲಿ ಉಪಸ್ಥಿತರಿದ್ದು ಆ ಘಟನೆಯನ್ನು ಬೆಂಬಲಿಸಿದವರ ಮೇಲಾಗಲಿ ಪೊಲೀಸರು NSA ಅನ್ವಯ ಕೇಸು ದಾಖಲಿಸಿಕೊಳ್ಳಲಿಲ್ಲ. ರಾಷ್ಟ್ರಪಿತನ ಸಾವನ್ನು ಸಂಭ್ರಮಿಸುವುದರಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಬಹುದು ಎಂಬ ಭಾವನೆ ಪೊಲೀಸರಲ್ಲೂ ಮೂಡಲಿಲ್ಲ. ಸರಕಾರವನ್ನೂ ಕಾಡಲಿಲ್ಲ. ತೀರಾ ಸಾಮಾನ್ಯ ಕಾಯ್ದೆಗಳನ್ವಯ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಗಾಂಧೀಜಿಯನ್ನು ಈ ದೇಶ ಗೌರವಿಸುತ್ತದೆ. ರಾಷ್ಟ್ರಪಿತ ಎಂದು ನಾಮಕರಣ ಮಾಡಿ ಆದರಿಸುತ್ತದೆ. ಈ ದೇಶದ ಎಲ್ಲ ಶಾಲಾ-ಕಾಲೇಜುಗಳ ಪಠ್ಯಪದ್ಧತಿಯಲ್ಲಿ ಅವರ ಬಗ್ಗೆ ಪಾಠಗಳಿವೆ. ಅವರ ಹುಟ್ಟನ್ನು ಸಂಭ್ರಮಿಸುವ ಮತ್ತು ಸಾವಿಗೆ ಶೋಕ ವ್ಯಕ್ತಪಡಿಸುವ ಪರಂಪರೆ ಇಲ್ಲಿದೆ. ಹೀಗಿರುವಾಗ, ಅವರ ಸಾವನ್ನೇ ಸಂಭ್ರಮಿಸುವುದು ಮತ್ತು ಅವರ ಪ್ರತಿಕೃತಿಗೆ ಗುಂಡು ಹೊಡೆಯುವುದು ಯಾಕೆ ನಮ್ಮ ವ್ಯವಸ್ಥೆಗೆ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿ ಕಾಣಿಸಲಿಲ್ಲ? ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕಿದ ಪ್ರಕರಣ ನಡೆದದ್ದು ಉತ್ತರ ಪ್ರದೇಶದಲ್ಲಿ. ಇಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವಿದೆ. ಖಾಂಡ್ವಾ ಮತ್ತು ಅಗಾರ್ ಇರುವುದು ಮಧ್ಯಪ್ರದೇಶದಲ್ಲಿ. ಇಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವಿದೆ. ವಿಷಾದ ಏನೆಂದರೆ, ಎರಡೂ ಸರಕಾರಗಳು ಕಾನೂನನ್ನು ದುರುಪಯೋಗಿಸಿವೆ. ಗೋಹತ್ಯೆ ಆರೋಪಿಗಳ ಮೇಲೆ ಮಧ್ಯಪ್ರದೇಶದ ಈ ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಸರಕಾರವು 2007ರಿಂದ 2016ರ ಅವಧಿಯಲ್ಲಿ ಓSಂ ಕಾಯ್ದೆಯನ್ವಯ ಒಟ್ಟು 22 ಪ್ರಕರಣಗಳನ್ನು ದಾಖಲಿಸಿತ್ತು. ಕಮಲ್‍ನಾಥ್ ಅವರು ಚೌಹಾಣ್‍ರ ಪರಂಪರೆಯನ್ನು ಮುಂದುವರಿಸುವ ಸೂಚನೆಯನ್ನು ನೀಡಿದ್ದಾರೆ. ಇದು ಅತ್ಯಂತ ಅಪಾಯಕಾರಿ.
ಸರಕಾರ ಬದಲಾಗುವುದೆಂದರೆ ಬರೇ ಅಧಿಕಾರ ಹಸ್ತಾಂತರಗೊಳ್ಳುವುದು ಎಂದು ಅರ್ಥವಲ್ಲ. ಶಿವರಾಜ್ ಸಿಂಗ್ ಚೌಹಾಣ್‍ರ ಸರಕಾರವನ್ನು ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ಜನರು ತಿರಸ್ಕರಿಸಿದ್ದಾರೆ. ಕಮಲ್‍ನಾಥ್‍ರನ್ನು ಪುರಸ್ಕರಿಸಿದ್ದಾರೆ. ಈ ತಿರಸ್ಕಾರ ಮತ್ತು ಪುರಸ್ಕಾರ ಯಾವ ಕಾರಣಕ್ಕಾಗಿ ಅನ್ನುವುದು ಕಾಂಗ್ರೆಸ್‍ನ ಪಾಲಿಗೆ ಮುಖ್ಯವಾಗಬೇಕು. NSA ಯ ವಿಷಯದಲ್ಲಿ ಬಿಜೆಪಿಯ ಓಲೈಕೆ ನಿಲುವನ್ನೇ ಕಾಂಗ್ರೆಸ್ಸೂ ಮುಂದುವರಿಸುವುದಾದರೆ ಎರಡರ ನಡುವಿನ ವ್ಯತ್ಯಾಸವಾದರೂ ಏನು? ಗೋಹತ್ಯೆ ನಡೆಸುವವರ ವಿರುದ್ಧ ಗೋಹತ್ಯೆ ನಿಷೇಧ ಕಾನೂನಿನನ್ವಯ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಭಯೋತ್ಪಾದಕರಂತೆ ನಡೆಸಿಕೊಂಡರೆ ಹೇಗೆ? ಸದ್ಯ ಇಂಥದ್ದೊಂದು  ಪ್ರಶ್ನೆ ಕಾಂಗ್ರೆಸ್‍ನೊಳಗಡೆಯೇ ಕಾಣಿಸಿಕೊಂಡಿರುವುದು ಗಮನಾರ್ಹ. ಪಿ. ಚಿದಂಬರಂ, ಸಲ್ಮಾನ್ ಖುರ್ಷಿದ್, ರೋಷನ್ ಬೇಗ್, ದಿಗ್ವಿಜಯ್ ಸಿಂಗ್ ಇತ್ಯಾದಿ ನಾಯಕರು ಈ ಬೆಳವಣಿಗೆಯನ್ನು ಪ್ರಶ್ನಿಸಿದ್ದಾರೆ. ಕಮಲ್‍ನಾಥ್ ಸರಕಾರ ಈ ಬಗ್ಗೆ ಮರು ಅವಲೋಕನ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಗಾಂಧೀಜಿಗೆ ಗುಂಡಿಕ್ಕಿದ ಆರೋಪಿಗಳ ಮೇಲೆ ಜುಜುಬಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಬಿಜೆಪಿ ಈ ವರೆಗೂ ಮಾತಾಡಿಲ್ಲ.
ತಿಂಗಳುಗಳ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಗೋವಿಗೆ ಪ್ರಮುಖ ಸ್ಥಾನವಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಗೋಸಂರಕ್ಷಣೆಯ ಕುರಿತಂತೆ ಪರಸ್ಪರ ಪೈಪೋಟಿಯಲ್ಲಿ ಭರವಸೆ ನೀಡಿದ್ದುವು. ತಾನು ಅಧಿಕಾರಕ್ಕೆ ಬಂದರೆ, ಪ್ರತಿ ಪಂಚಾಯತ್‍ನಲ್ಲೂ ಗೋಶಾಲೆಗಳನ್ನು ನಿರ್ಮಿಸುವುದಾಗಿ ಮತ್ತು ಗೊಬ್ಬರ ಮತ್ತು ಗೋಮೂತ್ರದಿಂದ ಮಾರುಕಟ್ಟೆ ಉತ್ಪನ್ನಗಳನ್ನು ತಯಾರಿಸಲು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ  ಭರವಸೆ ನೀಡಿತ್ತು. ಅಲ್ಲದೇ, ಖಾಂಡ್ವಾ ಮತ್ತು ಅಗಾರ್‍ನ ಪ್ರಕರಣಕ್ಕಿಂತ ಮೂರು ದಿನಗಳ ಮೊದಲಷ್ಟೇ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಗೋವಿಗೆ ಸಂಬಂಧಿಸಿ ಮಹತ್ವದ ನಿರ್ಧಾರವನ್ನು ಘೋಷಿಸಿದ್ದರು. ಮುಂದಿನ ನಾಲ್ಕು ತಿಂಗಳೊಳಗೆ 1000 ಗೋಶಾಲೆಗಳನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಹಾಗಂತ,
ಗೋವಿನ ಸಂರಕ್ಷಣೆ, ಗೌರವ, ಆದರ ಇವಾವುದೂ ತಪ್ಪಲ್ಲ ಮತ್ತು ಈ ಸಂಬಂಧಿ ಕಾನೂನನ್ನು ಉಲ್ಲಂಘಿಸುವವರನ್ನು ದಂಡಿಸಬೇಕಾದುದು ಎಲ್ಲ ರೀತಿಯಲ್ಲೂ ಸರಿ. ಆದರೆ, ಇವು ಯಾವುವೂ ಓಲೈಕೆ ಆಗಬಾರದು. ಒಂದು ಸಮುದಾಯವನ್ನು ಕಡೆಗಣಿಸುವಂತೆಯೂ ಇರಬಾರದು. ಯಾವ ಅಪರಾಧಕ್ಕೆ ಯಾವ ಕಾನೂನೋ ಅದನ್ನೇ ಅನ್ವಯಿಸಬೇಕು. ಗೋಮಾಂಸ ಸಾಗಾಟಗಾರರನ್ನು ದೇಶದ ಭದ್ರತೆಗೆ ಅಪಾಯಕಾರಿಗಳಂತೆ ಮತ್ತು ಭಯೋತ್ಪಾದಕರಂತೆ ನೋಡುವುದು ಅನ್ಯಾಯ, ಅಸಂಬದ್ಧ, ಅವಿವೇಕತನ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಆರೋಪಿಗಳು ಹಿಂದೂವಾಗಿರಲಿ, ಮುಸ್ಲಿಮರಾಗಿರಲಿ.





No comments:

Post a Comment