Thursday, 25 April 2019

ಪುಲ್ವಾಮಾ: ಮುಸ್ಲಿಮ್ ಸಮುದಾಯದ ಸ್ವಾಗತಾರ್ಹ ನಡೆ



ಪುಲ್ವಾಮ ಘಟನೆಯಲ್ಲಿ ಕೇಂದ್ರ ಸರಕಾರದ ವೈಫಲ್ಯಗಳು ಚರ್ಚೆಯಾಗದಂತೆ ನೋಡಿಕೊಳ್ಳಬೇಕಾದರೆ ಬಿಜೆಪಿ ಬೆಂಬಲಿಗರ ಮುಂದೆ ಎರಡು ಆಯ್ಕೆಗಳಿದ್ದುವು: 1. ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು. 2. ಪಾಕಿಸ್ತಾನದ ವಿರುದ್ಧ ತಕ್ಷಣ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವುದು. ಇದರಲ್ಲಿ 2ನೇ ಆಯ್ಕೆ ಈ ಬೆಂಬಲಿಗರ ಕೈಯಲ್ಲಿಲ್ಲ. ಅದನ್ನು ನಿರ್ಧರಿಸಬೇಕಾದುದು ಸರಕಾರ. ಆದ್ದರಿಂದ ಈ ದೇಶದ ಮುಸ್ಲಿಮರನ್ನೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸುವುದು ಮತ್ತು ಆ ಮುಖಾಂತರ ಬಿಜೆಪಿಯ `ನೋಟು ನಿಷೇಧದಿಂದ ತೊಡಗಿ ಮೆಹಬೂಬ್ ಮುಫ್ತಿಯವರ PDP ಪಕ್ಷದೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಅಧಿಕಾರದ ಸುಖವನ್ನು ಅನುಭವಿಸಿದುದರ ವರೆಗೆ’ ಯಾವುದೂ ಚರ್ಚೆಯ ಮುನ್ನೆಲೆಗೆ ಬರದಂತೆ ತಡೆಯುವುದು ಅವರ ಉದ್ದೇಶವಾಗಿತ್ತು. ಆದರೆ, ಭಾರತೀಯ ಮುಸ್ಲಿಮರು ಅದನ್ನು ವಿಫಲಗೊಳಿಸಿದರು. ಪುಲ್ವಾಮ ಘಟನೆಗೆ ಭಾರತೀಯ ಮುಸ್ಲಿಮರಿಂದ ವ್ಯಕ್ತವಾದಷ್ಟು ಖಂಡನಾ ಹೇಳಿಕೆ ಇನ್ನಾವ ಸಮುದಾಯದಿಂದಲೂ ವ್ಯಕ್ತವಾಗಿಲ್ಲ ಎಂದೇ ಹೇಳಬೇಕು. ಸಾಮಾನ್ಯವಾಗಿ,
ಶುಕ್ರವಾರವೆಂಬುದು ಮುಸ್ಲಿಮರ ಪಾಲಿಗೆ ಬಹುಮಹತ್ವದ ದಿನ. ಆ ದಿನದಂದು ಮಧ್ಯಾಹ್ನ ಮಸೀದಿಗೆ ಹೋಗುವುದಕ್ಕೆ ಮತ್ತು ಪ್ರವಚನವನ್ನು ಆಲಿಸುವುದಕ್ಕೆ ಬಹಳ ಪ್ರಾಮುಖ್ಯತೆಯಿದೆ. ಎಷ್ಟೇ ತುರ್ತು ಕೆಲಸವಿದ್ದರೂ ಮುಸ್ಲಿಮರು ಆ ಸಂದರ್ಭವನ್ನು ತಪ್ಪಿಸಿಕೊಳ್ಳುವುದಿಲ್ಲ. ಸುಮಾರು ಒಂದು ಗಂಟೆಯಷ್ಟು ಅವಧಿಯ ಈ ಧಾರ್ಮಿಕ ಕ್ರಿಯೆಯಲ್ಲಿ ರಾಜಕೀಯಕ್ಕೆ ಅವಕಾಶ ಇರುವುದೂ ಇಲ್ಲ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರೂ ಮಸೀದಿಯಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ಪ್ರವಚನ ಆಲಿಸುತ್ತಾರೆ. ನಮಾಝï ಮಾಡುತ್ತಾರೆ. ರಾಜಕೀಯ ರಹಿತವಾದ ಮತ್ತು ಅಪ್ಪಟ ಧಾರ್ಮಿಕ ಕ್ರಿಯೆಗೆ ಮೀಸಲಾದ ಈ ಸಂದರ್ಭವನ್ನು ಮುಸ್ಲಿಮ್ ಮೌಲಾನಗಳು ಪುಲ್ವಾಮ ಕ್ರೌರ್ಯವನ್ನು ಖಂಡಿಸುವುದಕ್ಕೆ ಬಳಸಿದರು. ಮಸೀದಿಯ ಪ್ರವಚನ ಪೀಠದಲ್ಲಿ ನಿಂತು ಯೋಧರ ಹತ್ಯೆಯನ್ನು ಖಂಡಿಸಿದರು. ಯೋಧರ ಕುಟುಂಬಗಳಿಗಾಗಿ ಪ್ರಾರ್ಥಿಸಿದರು. ಹಾಗಂತ, ಈ ಪ್ರಕ್ರಿಯೆ ಮಸೀದಿಗೆ ಮಾತ್ರ ಸೀಮಿತಗೊಳ್ಳಲೂ ಇಲ್ಲ. ಮಸೀದಿಯ ಹೊರಗೂ ಮುಸ್ಲಿಮರು ಯೋಧರ ಹತ್ಯೆಯನ್ನು ಖಂಡಿಸಿ ರಾಲಿ ನಡೆಸಿದರು. ವಿವಿಧ ಮುಸ್ಲಿಮ್ ಸಂಘಟನೆಗಳು ಮಾಧ್ಯಮಗಳಿಗೆ ಖಂಡನಾ ಹೇಳಿಕೆಯನ್ನು ನೀಡಿದುವು. ಅಷ್ಟಕ್ಕೂ,

`ಮುಸ್ಲಿಮರೇಕೆ ಪ್ರತ್ಯೇಕವಾಗಿ ಖಂಡನಾ ಹೇಳಿಕೆಗಳನ್ನು ನೀಡಬೇಕು, ಸ್ವತಃ ಖಂಡನಾರ್ಹವಾದ ಘಟನೆಯೊಂದಕ್ಕೆ ಮುಸ್ಲಿಮರು ಪ್ರತ್ಯೇಕವಾಗಿ ಖಂಡನಾ ಹೇಳಿಕೆಯನ್ನು ಹೊರಡಿಸುವುದು ಏನರ್ಥವನ್ನು ಕೊಡುತ್ತದೆ’ ಎಂಬ ಪ್ರಶ್ನೆಯಿದೆ. ಹಾಗಂತ, ಈ ಪ್ರಶ್ನೆ ಅಪ್ರಸ್ತುತವೂ ಅಲ್ಲ, ಅಸಂಬದ್ಧವೂ ಅಲ್ಲ. ಆದರೆ, ಈ ಪ್ರಶ್ನೆಯಾಚೆಗೆ ಕೆಲವು ಸತ್ಯಗಳಿವೆ. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿ ಬೆಳೆದುದರ ಹಿಂದೆ ‘ಮುಸ್ಲಿಮರು’ ಇದ್ದಾರೆ. ಮುಸ್ಲಿಮ್ ಸಮುದಾಯವನ್ನು ಪ್ರಶ್ನೆಯ ಮೊನೆಯಲ್ಲಿ ಇಟ್ಟೇ ಅವರು ರಾಜಕೀಯ ನಡೆಸಿದರು ಮತ್ತು ನಡೆಸುತ್ತಿದ್ದಾರೆ. ಮುಸ್ಲಿಮರ ಬಗ್ಗೆ, ಅವರ ದೇಶನಿಷ್ಠೆಯ ಬಗ್ಗೆ, ಅವರ ಕುಟುಂಬ ವ್ಯವಸ್ಥೆಯ ಬಗ್ಗೆ ಮತ್ತು ಅವರ ಪೂರ್ವಜರ ಬಗ್ಗೆ ವಿವಿಧ ಬಗೆಯ ನಕಾರಾತ್ಮಕ ಹೇಳಿಕೆಗಳನ್ನೂ ವ್ಯಾಖ್ಯಾನಗಳನ್ನೂ ನೀಡಿ, ಈ ದೇಶದ ನಿಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಅವರ ಮತ್ತು ಅವರ ಪಕ್ಷದ ರಾಜಕೀಯ ಅಜೆಂಡಾ. ತ್ರಿವಳಿ ತಲಾಕ್ ಅದಕ್ಕೆ ಇತ್ತೀಚಿನ ಸೇರ್ಪಡೆ. 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿ ಮತ್ತು ಅವರ ಬಳಗ ಮಾಡಿರುವ ಭಾಷಣ, ಬರಹ ಮತ್ತು ಪ್ರಚಾರ ಶೈಲಿಯನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಅವರಿಗೆ ಮುಸ್ಲಿಮರು ಬೇಕು. ಮುಸ್ಲಿಮರಲ್ಲಿರಬಹುದಾದ ದೌರ್ಬಲ್ಯಗಳು ಬೇಕು. ಅವರಿಂದ ಆಗಬಹುದಾದ ಪ್ರಮಾದಗಳು ಬೇಕು. ಈ ಪ್ರಮಾದ ಮತ್ತು ದೌರ್ಬಲ್ಯಗಳೇ ಅವರ ರಾಜಕೀಯ ಮೆಟ್ಟಿಲು. ಆದ್ದರಿಂದ,
ಈ ದೇಶದ ಇತರೆಲ್ಲ ಸಮುದಾಯಗಳಲ್ಲಿರದ ಎಚ್ಚರಿಕೆಯ ಪ್ರಜ್ಞೆಯೊಂದು ಮುಸ್ಲಿಮರಲ್ಲಿರಬೇಕಾಗುತ್ತದೆ. ನಿಜವಾಗಿ ಭಯೋತ್ಪಾದಕ ಕೃತ್ಯವೊಂದು ಜಿಹಾದೋ ಕೊಲೆಪಾತಕವೋ ಎಂದು ತೀರ್ಮಾನಿಸಬೇಕಾದುದು ಭಯೋತ್ಪಾದಕ ಅಲ್ಲ, ನಾಗರಿಕ ಸಮಾಜ. ಪುಲ್ವಾಮ ಘಟನೆಯ ಬಗ್ಗೆಯೂ ಹೇಳಬೇಕಾದುದು ಇದನ್ನೇ. ಅದು ಕ್ರೌರ್ಯ, ಹತ್ಯಾಕಾಂಡ, ಮನುಷ್ಯ ವಿರೋಧಿ ಕೃತ್ಯ. ಇದನ್ನು ಎಸಗಿದವ ಅರಬಿ ಭಾಷೆಯನ್ನು ಉಚ್ಚರಿಸಿದ ಮಾತ್ರಕ್ಕೇ ಅದು ಜಿಹಾದೂ ಆಗುವುದಿಲ್ಲ, ಧರ್ಮಬದ್ಧವೂ ಆಗುವುದಿಲ್ಲ. ಇದು ಎಲ್ಲರಿಗೂ ಗೊತ್ತು. ಆದರೆ, ಈ ಸಹಜ ಸತ್ಯವನ್ನು ವಿರೂಪಗೊಳಿಸಿ ಕ್ರೌರ್ಯಕ್ಕೆ ವಿಪರೀತ ಅರ್ಥವನ್ನು ಕಲ್ಪಿಸುವ ಪ್ರಯತ್ನಗಳನ್ನು ವಿಫಲಗೊಳಿಸುವುದಕ್ಕಾಗಿ ಖಂಡನೆ ವ್ಯಕ್ತಪಡಿಸಬೇಕಾಗಿದೆ. ಭಯೋತ್ಪಾದಕನೊಬ್ಬ ಎಸಗಿದ ಕ್ರೌರ್ಯಕ್ಕೆ ನಾವೇಕೆ ಪ್ರತಿಕ್ರಿಯಿಸಬೇಕು ಎಂಬ ಉದಾಸೀನ ಭಾವದ ಆಚೆಗೆ, ಅಲೋಚಿಸಬೇಕಾಗಿದೆ. ವಿಶೇಷ ಏನೆಂದರೆ, ಈ ಬಾರಿ ಮುಸ್ಲಿಮ್ ಸಮುದಾಯ ಈ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಇದರಲ್ಲಡಗಿರುವ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ಸ್ವತಃ ಖಂಡನಾರ್ಹವಾದ ಘಟನೆಯನ್ನು ಅವರು ಮತ್ತೊಮ್ಮೆ ಖಂಡಿಸುವ ಮತ್ತು ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಾವು ರಾಜಕೀಯ ದಾಳವಾಗದಂತೆ ನೋಡಿಕೊಂಡಿದ್ದಾರೆ. ಎಚ್ಚರಿಕೆಯ ಈ ನಡೆ ಸ್ವಾಗತಾರ್ಹ.

 ಯಾವುದೇ ಅಕ್ರಮವೂ ಧರ್ಮ ವಿರೋಧಿಯೇ. ಅದು ಯೋಧರ ಹತ್ಯೆಯೇ ಆಗಬೇಕಿಲ್ಲ. ಮಾತಿನಿಂದ ಇನ್ನೊಬ್ಬರನ್ನು ನೋಯಿಸುವುದೂ ಅಕ್ರಮವೇ. ಕಾನೂನನ್ನು ಕೈಗೆತ್ತಿಕೊಳ್ಳುವುದೂ ಅಕ್ರಮವೇ. ಅಪಪ್ರಚಾರವೂ ಅಕ್ರಮವೇ. ಈ ಮೌಲ್ಯ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ನಿಜವಾಗಿ, ಭಯೋತ್ಪಾದನೆಯಿಂದ ಅತ್ಯಂತ ಹೆಚ್ಚು ನಾಶ-ನಷ್ಟಗಳನ್ನು ಅನುಭವಿಸಿದವರು ಮುಸ್ಲಿಮರ ಆಗಿದ್ದಾರೆ. ಸಿರಿಯಾ, ಯಮನ್, ಪಾಕಿಸ್ತಾನ್, ಅಫಘಾನಿಸ್ತಾನ್‍ಗಳಿಂದ ಹಿಡಿದು ಕಾಶ್ಮೀರದವರೆಗೆ, ಉದ್ದಕ್ಕೂ ನಾಶ-ನಷ್ಟಗಳ ಪಟ್ಟಿಯ ಮೇಲ್ತುದಿಯಲ್ಲಿ ಮುಸ್ಲಿಮರೇ ಇದ್ದಾರೆ. ಕಾಶ್ಮೀರದಲ್ಲಿ ಉಗ್ರವಾದದಲ್ಲಿ ತೊಡಗಿರುವವರ ಸಂಖ್ಯೆ 150ರ ಒಳಗಿದೆ ಎಂದು ವರದಿಗಳು ಹೇಳುತ್ತವೆ. ಕಾಶ್ಮೀರಿಗಳನ್ನು ಅರ್ಥೈಸುವುದಕ್ಕೆ ಈ ಸಣ್ಣ ಸಂಖ್ಯೆಯೇ ಧಾರಾಳ ಸಾಕು. ಅವರೆಲ್ಲರೂ ಭಯೋತ್ಪಾದಕರಲ್ಲ ಮತ್ತು ಪ್ರತ್ಯೇಕ ರಾಷ್ಟ್ರದ ಬಯಕೆಯೂ ಅವರೆಲ್ಲರದ್ದಲ್ಲ. ಉಗ್ರವಾದಿ ಚಟುವಟಿಕೆಗಳಿಂದಾಗಿ ಅವರು ಎರಡು ಅಲುಗಿನ ಕತ್ತಿಯಲ್ಲಿ ಸಿಲುಕಿಕೊಂಡಿದ್ದಾರೆ. ಒಂದುಕಡೆ, ಉಗ್ರವಾದಿಗಳ ಕೆಂಗಣ್ಣು, ಇನ್ನೊಂದೆಡೆ, ಭದ್ರತಾ ಪಡೆಗಳ ಸಂದೇಹದ ದೃಷ್ಟಿ. ಈ ಎರಡನ್ನೂ ನಿಭಾಯಿಸಿಕೊಂಡು ಶಾಂತಿಯಿಂದ ಬದುಕುವುದೇ ಒಂದು ಸವಾಲು. ಇಂಥ ಸ್ಥಿತಿಯಲ್ಲಿ, ಕಾಶ್ಮೀರಿಗಳನ್ನೆಲ್ಲ ಭಯೋತ್ಪಾದಕರಂತೆ ಮತ್ತು ಭಾರತ ವಿರೋಧಿಗಳಂತೆ ಕಾಣುವುದರಿಂದ ಭಯೋತ್ಪಾಕದರು ಸಂತಸ ಪಡುವರೇ ಹೊರತು ಇನ್ನಾರಲ್ಲ. ಇದು ಭಯೋತ್ಪಾದಕರು ಬಯಕೆಯೂ ಹೌದು. ಭಾರತವು ಕಾಶ್ಮೀರಿಗಳನ್ನು ದ್ವೇಷಿಸುವ ಮೂಲಕ ಕಾಶ್ಮೀರಿಗಳಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡಬೇಕು ಎಂಬುದು ಅವರ ಮನದಾಸೆ. ಹಾಗಾದರೆ ಮಾತ್ರ ಜುಜುಬಿ ಸಂಖ್ಯೆಯಲ್ಲಿರುವ ತಮ್ಮ ತಂಡವನ್ನು ಬಲಗೊಳಿಸಬಹುದು ಎಂದು ಅವರು ತಿಳಿದಿದ್ದಾರೆ. ಅಂದಹಾಗೆ, ಅವರು ಬಹಿರಂಗವಾಗಿ ಯೋಧರನ್ನು ಗುರಿಮಾಡಿಕೊಂಡು ಬಾಂಬ್ ಸ್ಫೋಟ, ಗುಂಡು ಹಾರಾಟ ನಡೆಸುತ್ತಿರಬಹುದು. ಆದರೆ ಅವರ ನಿಜ ಗುರಿ ಯೋಧರಲ್ಲ, ಕಾಶ್ಮೀರಿಗಳು. ಯೋಧರನ್ನು ಸಾಯಿಸಿದರೆ ಯೋಧರು ಕಾಶ್ಮೀರಿಗಳ ವಿರುದ್ಧ ತಿರುಗಿ ಬೀಳುತ್ತಾರೆ ಮತ್ತು ಅದರಿಂದ ತಮ್ಮ ಉದ್ದೇಶ ಈಡೇರುತ್ತದೆ ಎಂದವರು ಭಾವಿಸಿದ್ದಾರೆ. ಆದ್ದರಿಂದ ಭಯೋತ್ಪಾದಕರ ಈ ಉದ್ದೇಶವನ್ನು ಈ ದೇಶ ವಿಫಲಗೊಳಿಸಬೇಕಾಗಿದೆ. ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ಪಡೆದು ಉಗ್ರವಾದಿಗಳನ್ನು ಪ್ರತ್ಯೇಕಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆಗೂ ಮಹತ್ವ ಇದೆ.
ಈ ಪ್ರಜ್ಞೆ ಸದಾ ಇರಲಿ.

No comments:

Post a Comment