‘ಬಿಜೆಪಿಯನ್ನು ದೂರ ಇಡುವುದು’ ಅನ್ನುವ ಏಕೈಕ ಉದ್ದೇಶವೇ ಬಿಜೆಪಿಯೇತರ ಎರಡು ರಾಜಕೀಯ ಪಕ್ಷಗಳ ಮೈತ್ರಿಗೆ ಕಾರಣವಾದರೆ, ಅಂತಿಮವಾಗಿ ಆ ಮೈತ್ರಿಕೂಟದ ಪರಿಸ್ಥಿತಿ ಏನಾದೀತು ಅನ್ನುವುದಕ್ಕೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒಳ್ಳೆಯ ಉದಾಹರಣೆ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೂ ಈ ಮೈತ್ರಿಕೂಟ ಇಷ್ಟವಿಲ್ಲ. ಹಾಗಂತ, ಈ ಮೈತ್ರಿಯಿಂದ ಬಿಡುಗಡೆಗೊಳ್ಳುವುದಕ್ಕೂ ಧೈರ್ಯವಿಲ್ಲ. ವಾರಗಳ ಹಿಂದೆ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿಯವರು ರಾಜೀನಾಮೆ ನೀಡುವುದರ ಮೂಲಕ ಆರಂಭವಾದ ಈ ಹೊಸ ಬಿಕ್ಕಟ್ಟು ಇದೀಗ ಡಜನ್‍ಗಟ್ಟಲೆ ಶಾಸಕರ ರಾಜೀನಾಮೆಯೊಂದಿಗೆ ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಈ ಬಿಕ್ಕಟ್ಟಿಗೆ ಬಿಜೆಪಿಯನ್ನು ಹೊಣೆ ಮಾಡುವ ಮೂಲಕ ಕಳೆದೊಂದು ವರ್ಷದಿಂದ ಪಾಲಿಸಿಕೊಂಡು ಬಂದಿರುವ ಆರೋಪ ಸಂಪ್ರದಾಯವನ್ನು ಈಗಲೂ ಮುಂದುವರಿಸಿದೆ. ಅಂದಹಾಗೆ, ಇಷ್ಟೆಲ್ಲ ಪ್ರಾರಬ್ಧಗಳ ಬಳಿಕವೂ ಈ ಸರಕಾರ ಅಸ್ತಿತ್ವದಲ್ಲಿ ಇರಬೇಕೇ ಅನ್ನುವ ಪ್ರಶ್ನೆ ಇವತ್ತು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿದೆ. ಇದಕ್ಕೆ ಉತ್ತರ ಕೊಡಬೇಕಾದ ಮೈತ್ರಿಕೂಟ ಸ್ವತಃ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಓಡಾಡುತ್ತಿದೆ.
ವರ್ಷದ ಹಿಂದೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಾಗ ಕಾಂಗ್ರೆಸ್‍ಗೆ ಬಹುದೊಡ್ಡ ನಿರೀಕ್ಷೆ ಇತ್ತು. ಆ ನಿರೀಕ್ಷೆಗೆ ಇದ್ದ ಏಕೈಕ ಬಲ- ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಐದು ವರ್ಷಗಳ ಆಡಳಿತದಲ್ಲಿ ಜಾರಿಗೊಂಡ ವಿವಿಧ ಜನಪರ ಯೋಜನೆಗಳು ಮುಂದಿನ ಐದು ವರ್ಷಗಳಿಗೆ ಅವರಿಗೆ ಅಧಿಕಾರವನ್ನು ಮರಳಿ ಪಡೆಯುವುದಕ್ಕೆ ಆಧಾರವಾಗಬಹುದು ಎಂದು ನಂಬಲಾಗಿತ್ತು. ಆದರೆ, ಚುನಾವಣಾ ಫಲಿತಾಂಶವು ಈ ನಿರೀಕ್ಷೆಯನ್ನು ಬುಡಮೇಲುಗೊಳಿಸಿದ್ದು ಕಾಂಗ್ರೆಸ್‍ಗಾದ ಮೊದಲ ಆಘಾತವಾಗಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ವಿಜಯಿಯಾಗಿದ್ದರೆ ಕಾಂಗ್ರೆಸ್ 79 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಪಡೆದುಕೊಂಡಿತ್ತು. ಆ ಬಳಿಕದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಮೈತ್ರಿ ಮಾಡಿಕೊಂಡವು. ನಿಜವಾಗಿ, ಬಿಜೆಪಿಯು ಸರಕಾರ ರಚಿಸುವುದನ್ನು ತಡೆಯುವುದಕ್ಕಾಗಿ ಮಾಡಿಕೊಳ್ಳಲಾದ ತುರ್ತು ಮೈತ್ರಿ ಎಂಬ ಸ್ಥಿತಿಯಿಂದ ಹೊರಬಂದು ರಚನಾತ್ಮಕ ಮೈತ್ರಿ ಎಂಬ ಸ್ಥಿತಿಗೆ ಆ ನಂತರ ಹೊರಳಬೇಕಾದ ಬಹುದೊಡ್ಡ ಜವಾಬ್ದಾರಿ ಈ ಎರಡೂ ಪಕ್ಷಗಳಿಗಿತ್ತು. ಆದರೆ ಹಾಗಾಗಲಿಲ್ಲ ಎಂದು ಮಾತ್ರವಲ್ಲ, ಹಾಗೆ ಆಗದಿರುವುದಕ್ಕೆ ಎದ್ದು ಕಾಣುತ್ತಿರುವ ಕಾರಣಗಳಂತೂ ಅತ್ಯಂತ ಆಘಾತಕಾರಿ ರೀತಿಯದ್ದು. ಶಾಸಕರ ಅಸಮಾಧಾನಕ್ಕೆ ಇರುವ ಕಾರಣಗಳಲ್ಲಿ ಬಹುಮುಖ್ಯವಾದುದು ಏನೆಂದರೆ, ಸಚಿವ ಸ್ಥಾನ ಸಿಗದಿರುವುದು. ಈ ಮೈತ್ರಿ ಕೂಟದ ಎಲ್ಲ ಶಾಸಕರೂ ಸಚಿವರಾಗುವ ಬಯಕೆಯೊಂದಿಗೆ ಸಾಲುಗಟ್ಟಿ ನಿಂತಿರುವ ಸ್ಥಿತಿಯಲ್ಲಿರುವಾಗ ಒಂದು ಸರಕಾರ ನಡೆಯುವುದಾದರೂ ಹೇಗೆ? ಅದೇವೇಳೆ, ಇಂಥದ್ದೊಂದು ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು ಅನ್ನುವ ಪ್ರಶ್ನೆಯೂ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವರಿಷ್ಠರು ಈ ಮೈತ್ರಿಕೂಟದ ಉಳಿವಿನ ಬಗ್ಗೆ ಪ್ರಾಮಾಣಿಕರಾಗಿರುತ್ತಿದ್ದರೆ ಈ ಬಗೆಯ ಒಡಕು ಮೂಡುತ್ತಿತ್ತೇ ಎಂಬ ಪ್ರಶ್ನೆಗೂ ಅವಕಾಶ ಇದೆ. ಒಂದುವೇಳೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೆ ಮತ್ತು ಸರಕಾರ ರಚಿಸಿರುತ್ತಿದ್ದರೆ ಮಂತ್ರಿಸ್ಥಾನಕ್ಕಾಗಿ ಈ ಬಗೆಯ ಸಾಲು ಕಾಣಿಸಿಕೊಳ್ಳುತ್ತಿತ್ತೇ? ಅತೃಪ್ತರು ಸುದ್ದಿ ಮಾಡುತ್ತಿದ್ದರೆ? ಜೆಡಿಎಸ್‍ಗೂ ಇವೇ ಪ್ರಶ್ನೆಗಳು ಅನ್ವಯ. ಒಂದುವೇಳೆ, ಚುನಾವಣೆಯಲ್ಲಿ ಜೆಡಿಎಸ್‍ಗೆ ಬಹುಮತ ಲಭ್ಯವಾಗಿ ಸರಕಾರ ರಚಿಸಿರುತ್ತಿದ್ದರೆ ಭಿನ್ನಮತೀಯ ಸಮಸ್ಯೆ ಎದುರಾಗುತ್ತಿತ್ತೇ? ಶಾಸಕರು ರಾಜೀನಾಮೆ ಕೊಟ್ಟು ರೆಸಾರ್ಟ್‍ಗೆ ಹೋಗಿ ಕುಳಿತುಕೊಳ್ಳುತ್ತಿದ್ದರೇ? ಇಲ್ಲ ಅನ್ನುವುದೇ ಉತ್ತರ ಅನ್ನುವುದು ಎಲ್ಲರಿಗೂ ಗೊತ್ತು. ಅಂದರೆ, ಎರಡು ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಸರಕಾರ ನಡೆಸಲು ಮುಂದಾಗುವಾಗ ಅಲ್ಲೊಂದು ಅಸಹಜ ಸ್ಥಿತಿ ಏರ್ಪಟ್ಟಿರುತ್ತದೆ. ಬಾಹ್ಯನೋಟಕ್ಕೆ ಅಲ್ಲಿ ದೋಸ್ತಿ ವಾತಾವರಣ ಕಾಣಿಸಿಕೊಂಡಿದ್ದರೂ ಆಂತರಿಕವಾಗಿ ಎರಡೂ ಪಕ್ಷಗಳು ಆ ದೋಸ್ತಿಯನ್ನು ಜೀರ್ಣಿಸಿಕೊಂಡಿರುವುದಿಲ್ಲ. ಅವುಗಳಿಗೆ ಅವುಗಳದ್ದೇ ಆದ ರಾಜಕೀಯ ಹಿತಾಸಕ್ತಿ, ಗುರಿಗಳಿರುತ್ತವೆ. ಆ ಗುರಿಗಳು ಸಾಧ್ಯವಾಗಬೇಕಾದರೆ ಜೊತೆಗಿದ್ದೂ ಇಲ್ಲದಂತಿರಬೇಕಾದ ಮನಸ್ಥಿತಿಯನ್ನು ಬೆಳೆಸಿಕೊಂಡಿರಬೇಕಾಗುತ್ತದೆ. ಜೆಡಿಎಸ್‍ನ ವರ್ಚಸ್ಸು ಹೆಚ್ಚಬಾರದೆಂಬ ಉದ್ದೇಶ ಕಾಂಗ್ರೆಸ್‍ಗಿದ್ದರೆ, ಕಾಂಗ್ರೆಸ್ ಬೆಳೆಯಬಾರದೆಂಬ ಬಯಕೆ ಜೆಡಿಎಸ್‍ಗೂ ಇರುತ್ತದೆ. ಅಲ್ಲದೇ, ಈ ಮೈತ್ರಿ ಚುನಾವಣೋತ್ತರ ಅತಂತ್ರವನ್ನು ಬಗೆಹರಿಸುವುದಕ್ಕಾಗಿ ಮಾಡಿಕೊಳ್ಳಲಾದ ತುರ್ತು ತೇಪೆಯೇ ಹೊರತು ದೀರ್ಘಕಾಲದ ಗುರಿಯಿಟ್ಟುಕೊಂಡಿರುವ ಮೈತ್ರಿಯೂ ಅಲ್ಲ. ಚುನಾವಣಾ ಪೂರ್ವ ಮೈತ್ರಿಗೂ ಚುನಾವಣೋತ್ತರ ಮೈತ್ರಿಗೂ ನಡುವೆ ಇರುವ ಅನುಕೂಲ-ಅನನುಕೂಲಗಳು ತುಂಬಾ ಇವೆ. ಚುನಾವಣಾ ಪೂರ್ವ ಮೈತ್ರಿಯಲ್ಲಿ ಇರುವ ಪ್ರಾಮಾಣಿಕತೆ ಚುನಾವಣೋತ್ತರ ಮೈತ್ರಿಯಲ್ಲಿ ಇರುವುದಿಲ್ಲ. ಚುನಾವಣೋತ್ತರ ಮೈತ್ರಿ ಅನ್ನುವುದೇ ಒಂದು ಬಗೆಯ ಜೂಜು. ಇಲ್ಲಿ ಎರಡೂ ಪಕ್ಷಗಳು ಬೇರೆ ಬೇರೆಯಾಗಿ ಗೆಲ್ಲುವುದಕ್ಕೆ ಶ್ರಮಿಸುತ್ತವೆಯೇ ಹೊರತು ಜೊತೆಯಾಗಿ ಗೆಲ್ಲುವುದಕ್ಕಲ್ಲ. ಸರಕಾರದ ಸಾಧನೆಯನ್ನು ತಮ್ಮ ತಮ್ಮ ಪಕ್ಷಗಳ ಅನುಕೂಲಕ್ಕಾಗಿ ಬಳಸಿಕೊಳ್ಳಲು ಮೈತ್ರಿ ಪಕ್ಷಗಳು ಬಿಡಿಬಿಡಿಯಾಗಿ ಪ್ರಯತ್ನಿಸುತ್ತವೆ. ಇದೇವೇಳೆ, ಸರಕಾರದ ವೈಫಲ್ಯವನ್ನು ಇನ್ನೊಂದು ಪಕ್ಷದ ಮೇಲೆ ಹೇರಲು ಮುಂದಾಗುತ್ತವೆ. ಈ ಪ್ರಕ್ರಿಯೆಯು ಅಂತಿಮವಾಗಿ ಮೈತ್ರಿಯಲ್ಲಿ ಬಿರುಕು ಮೂಡಿಸುತ್ತದೆ.
ರಾಜ್ಯದ ಸದ್ಯದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಉದ್ದೇಶದ ಹೊರತಾಗಿ, ಈ ಸರಕಾರ ಇನ್ನೂ ಮುಂದುವರಿಯಬೇಕು ಎಂಬ ಇರಾದೆಗೆ ಇನ್ನಾವ ಉದ್ದೇಶವೂ ಇದ್ದಂತಿಲ್ಲ. ಒಂದು ರಾಜಕೀಯ ಪಕ್ಷವನ್ನು ಅಧಿಕಾರದಿಂದ ಹೊರಗಿಡುವುದೇ ಎರಡು ಬದ್ಧ ವಿರೋಧಿ ರಾಜಕೀಯ ಪಕ್ಷಗಳು ಜೊತೆಗೂಡುವುದಕ್ಕೆ ಮತ್ತು ಮೈತ್ರಿಕೂಟ ರಚಿಸಿಕೊಂಡು ಸರಕಾರ ನಡೆಸುವುದಕ್ಕೆ ಕಾರಣವಾಗುವುದು ತಾತ್ಕಾಲಿಕ ಸುಖವನ್ನು ಕೊಡಬಲ್ಲುದೇ ಹೊರತು ದೀರ್ಘಕಾಲೀನ ಪರಿಹಾರವನ್ನಲ್ಲ. ಆ ಮೈತ್ರಿಕೂಟ ದೀರ್ಘಕಾಲ ಬಾಳಿಕೆ ಬರಬೇಕಾದರೆ ತಾತ್ಕಾಲಿಕ ಸುಖಕ್ಕಿದ್ದ ಬಿಜೆಪಿ ಎಂಬ ಕಾರಣದಿಂದ ಅದು ಹೊರಬರಬೇಕು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಅನ್ನುವುದನ್ನು ಆ ಕ್ಷಣದ ಪರಿಹಾರವಾಗಿ ಪರಿಗಣಿಸಿಕೊಂಡು ದೀರ್ಘ ಕಾಲ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದಕ್ಕೆ ಆ ಬಳಿಕ ನೀಲನಕ್ಷೆಯನ್ನು ರೂಪಿಸಬೇಕು. ಅಂಥದ್ದೊಂದು ನೀಲನಕ್ಷೆ ಸಾಧ್ಯವಾಗಬೇಕಿದ್ದರೆ ಎರಡೂ ಪಕ್ಷಗಳು ತ್ಯಾಗಕ್ಕೆ ತಯಾರಾಗಬೇಕು. ಅಧಿಕಾರದಾಹ, ಪಕ್ಷಮೋಹ, ಸ್ವಪ್ರತಿಷ್ಠೆ, ವಿಶ್ವಾಸದ್ರೋಹ ಇತ್ಯಾದಿ ಇತ್ಯಾದಿ ರಾಜಕೀಯ ಸಹಜ ಮಾರಕ ಕಾಯಿಲೆಗಳಿಗೆ ಸ್ವತಃ ಔಷಧಿ ಸೇವಿಸಬೇಕು. ಅಧಿಕಾರವೇ ಮುಖ್ಯವಾಗುವ ಬದಲು ಬಿಜೆಪಿ ಪ್ರತಿಪಾದಿಸುವ ವಿಭಜಿತ ಸಿದ್ಧಾಂತಕ್ಕೆ ರಾಜ್ಯದಲ್ಲಿ ನೆಲೆ ಸಿಗದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು. ಹೀಗಾಗಬೇಕಾದರೆ, ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳಬೇಕು. ದುರಂತ ಏನೆಂದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಅಲಭ್ಯವಾಗಿರುವುದೇ ಇಂಥ ಗುಣಗಳು. ಅವೆರಡೂ ಕಾಗದದಲ್ಲಿ ಮಾತ್ರ ಮೈತ್ರಿ ಪಕ್ಷಗಳು. ಅದರಾಚೆಗೆ ಅವೆರಡೂ ಬಿಡಿಬಿಡಿ ಪಕ್ಷಗಳೇ. ಅವೆರಡೂ ಮೈತ್ರಿಯ ಮನಸ್ಥಿತಿಯೊಂದಿಗೆ ಆಲೋಚಿಸುವುದಿಲ್ಲ. ಮೈತ್ರಿಯ ಭಾಷೆಯಲ್ಲಿ ಮಾತಾಡುವುದಿಲ್ಲ. ಮೈತ್ರಿಯ ಕಣ್ಣಿನಲ್ಲಿ ಅವು ಪರಸ್ಪರ ನೋಡುವುದೂ ಇಲ್ಲ. ಹೀಗಿರುತ್ತಾ ಈ ಮೈತ್ರಿಕೂಟ ಸುಗಮ ಆಡಳಿತಕ್ಕಾಗಿ ಸುದ್ದಿಯಲ್ಲಿರಬೇಕು ಎಂದು ನಾವೇಕೆ ಬಯಸಬೇಕು? ಈ ಎರಡೂ ಪಕ್ಷಗಳು ವರ್ಷದ ಹಿಂದೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಕಾರಣವಾಗಿರಬಹುದು. ಆದರೆ, ಈಗ ಆ ಉದ್ದೇಶ ಕಣ್ಮರೆಯಾಗಿದೆ. ಇದ್ದಷ್ಟು ದಿನ ಅಧಿಕಾರವನ್ನು ಅನುಭವಿಸುವ ವಾಂಛೆ ಮೈತ್ರಿ ಪಕ್ಷಗಳ ಶಾಸಕರಲ್ಲಿ ಢಾಳಾಗಿ ಕಾಣಿಸುತ್ತಿದೆ. ಆದ್ದರಿಂದ, ಈ ಸರಕಾರ ಯಾವಾಗ ಬಿದ್ದರೂ ಅದಕ್ಕಾಗಿ ಮರುಗುವವರು ಈ ರಾಜ್ಯದಲ್ಲಿ ಯಾರೂ ಇರಲಾರರು.
No comments:
Post a Comment