1. ಮುಸ್ಲಿಮ್ ಸಂಸದರೋರ್ವರು ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವಾಗ ಬಿಜೆಪಿ ಸಂಸದರು ಜೈ ಶ್ರೀರಾಮ್ ಎಂದು ಕೂಗುವುದೇಕೆ?
2. ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ನಡೆಯುತ್ತಿರುವ ಥಳಿತ ಮತ್ತು ಹತ್ಯೆಗಳು ಉತ್ತರ ಭಾರತವನ್ನೇ ಕೇಂದ್ರೀಕರಿಸಿರುವುದೇಕೆ?
ಈ ಎರಡೂ ಪ್ರಶ್ನೆಗಳಿಗೆ ಸಿಗುವ ಉತ್ತರವೇ ಸದ್ಯದ ಭಾರತ. ಸಂಸತ್ತಿನಲ್ಲಿ ಬಿಜೆಪಿ ಸಂಸದರು ಕೂಗಿದ ಜೈ ಶ್ರೀರಾಮ್‍ಗೂ ಹಿಂದೂ ಸಮುದಾಯದ ಸಾಧು-ಸಂತರು, ಸನ್ಯಾಸಿಗಳು, ಸ್ವಾಮೀಜಿಗಳು ಮತ್ತು ಶ್ರೀರಾಮನ ನಿಜ ಭಕ್ತರು ಹೇಳುವ ಜೈ ಶ್ರೀರಾಮ್‍ಗೂ ನಡುವೆ ಸಾಮ್ಯತೆ ಇರುವುದಕ್ಕೆ ಸಾಧ್ಯವೇ ಇಲ್ಲ. ಮುಸ್ಲಿಮರು ಪರಸ್ಪರರನ್ನು ಎದುರುಗೊಳ್ಳುವಾಗ ಅಸ್ಸಲಾಮು ಅಲೈಕುಮ್ ಎಂದು ಹೇಳುವಂತೆಯೇ ಹಿಂದೂಗಳು ರಾಮ್ ರಾಮ್ ಎಂದು ಹೇಳುವುದಿದೆ. ಶ್ರೀರಾಮನು ಇನ್ನೊಬ್ಬರನ್ನು ಪ್ರೀತಿಸುವ ಮತ್ತು ಅವರನ್ನು ಮುದಗೊಳಿಸುವ ವ್ಯಕ್ತಿ ಎಂಬುದು ಇದರರ್ಥ. ಅದು ದಾಳಿಯ ಘೋಷಣೆ ಅಲ್ಲ. ಕಿಚಾಯಿಸುವ ಪದವೂ ಅಲ್ಲ. ಅಸ್ಸಲಾಮು ಅಲೈಕುಮ್ (ನಿಮಗೆ ದೇವನು ಶಾಂತಿ ಮತ್ತು ನೆಮ್ಮದಿಯನ್ನು ಅನುಗ್ರಹಿಸಲಿ) ಎಂಬ ಪದದಲ್ಲಿ ಹೇಗೆ ಮಾನವೀಯ ಕಾಳಜಿ ಮತ್ತು ಸಹೋದರತೆಯ ಭಾವ ಅಡಕವಾಗಿದೆಯೋ ಅದರಾಚೆಗಿನ ಅರ್ಥವನ್ನು ರಾಮ್ ರಾಮ್‍ನಲ್ಲಿ ಅಥವಾ ಜೈ ಶ್ರೀರಾಮ್‍ನಲ್ಲಿ ಗುರುತಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ಅಸ್ಸಲಾಮು ಅಲೈಕುಮ್ ಎಂಬುದನ್ನು ಮುಸ್ಲಿಮರು ಮುಸ್ಲಿಮೇತರರಲ್ಲಿ ಬಿಡಿ ಮುಸ್ಲಿಮರಲ್ಲಿಯೇ ಬಲವಂತವಾಗಿ ಹೇಳಿಸುವುದಿಲ್ಲ. ಓರ್ವ ಮುಸ್ಲಿಮನು ಇನ್ನೋರ್ವ ಮುಸ್ಲಿಮನನ್ನು ಭೇಟಿಯಾಗುವಾಗ ಅಸ್ಸಲಾಮು ಅಲೈಕುಮ್ ಎಂದು ಹೇಳದಿದ್ದರೆ ಆತನನ್ನು ಥಳಿಸುವುದಿಲ್ಲ. ಜರೆಯುವುದಿಲ್ಲ. ಬೆದರಿಕೆ ಹಾಕುವುದಿಲ್ಲ. ಯಾಕೆಂದರೆ, ಅದು ಗುಣನಾಮ. ಇನ್ನೊಬ್ಬರಲ್ಲಿ ಹೊಡೆದು ಬಡಿದು ಥಳಿಸಿ ಹೇಳಿಸಬೇಕಾದ ಪದಗುಚ್ಛ ಅದಲ್ಲ. ಆದ್ದರಿಂದಲೇ, ಮೇಲಿನ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಬೇಕಾಗಿದೆ:
ಸಂಸತ್ತಿನಲ್ಲಿ ಕೂಗಲಾದ ಘೋಷಣೆಯಲ್ಲಿ ಈ ಭಾವ ಇತ್ತೇ? ಇದ್ದಿದ್ದರೆ, ಅದೇಕೆ ಮುಸ್ಲಿಮ್ ಸಂಸದ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವಾಗಲೇ ಕಾಣಿಸಿಕೊಂಡಿತು? ಯಾಕೆ ಮುಸ್ಲಿಮೇತರ ಸಂಸದರ ಪ್ರಮಾಣ ವಚನ ಸಂದರ್ಭದಲ್ಲಿ ಈ ಕೂಗು ಕಾಣಿಸಿಕೊಳ್ಳಲಿಲ್ಲ? ಜೈ ಶ್ರೀರಾಮ್ ಎಂಬುದು ಮುಸ್ಲಿಮರಿಂದ ಹೇಳಿಸಬೇಕಾದ ಘೋಷಣೆಯೇ? ಇದೇ ಪ್ರಶ್ನೆಯನ್ನು ಜಾರ್ಖಂಡ್ ಮತ್ತು ಉತ್ತರ ಭಾರತದಲ್ಲಿ ನಡೆಯುತ್ತಿರುವ ಹಲ್ಲೆ - ಹತ್ಯೆಗಳಿಗೆ ಸಂಬಂಧಿಸಿಯೂ ಕೇಳಬೇಕಾಗಿದೆ:
ಹಿಂದೀ ಭಾಷಿಕ ರಾಜ್ಯಗಳಲ್ಲೇ ಈ ಬಗೆಯ ಗುಂಪು ಹಲ್ಲೆ ಯಾಕೆ ನಡೆಯುತ್ತಿದೆ? ಬಿಜೆಪಿಗೆ ಈ ರಾಜ್ಯಗಳಲ್ಲಿ ಪ್ರಾಬಲ್ಯ ಇರುವುದಕ್ಕೂ ಈ ಬೆಳವಣಿಗೆಗೂ ಸಂಬಂಧ ಇದೆಯೇ?
ಶ್ರೀರಾಮ ಸಜ್ಜನ. ಎಷ್ಟರ ಮಟ್ಟಿಗೆ ಸಜ್ಜನ ಎಂದರೆ, ಅಗಸನೋರ್ವ ತನ್ನ ಪತ್ನಿ ಸೀತೆಯ ಮೇಲೆ ಅಪಮಾನಕರ ಮಾತನ್ನು ಆಡಿದಾಗಲೂ ಆತನ ಮೇಲೆ ಏರಿ ಹೋಗದೇ ಅಗಸನ ಮಾತಿನಲ್ಲಿ ಪ್ರಾಮಾಣಿಕತೆಯನ್ನು ಹುಡುಕುವಷ್ಟು ಸಜ್ಜನ. ತಾನು ವನವಾಸಕ್ಕೆ ಹೋಗಬೇಕಾದ ಸನ್ನಿವೇಶ ಎದುರಾದಾಗ ಆ ಬೆಳವಣಿಗೆಯ ಹಿಂದಿರಬಹುದಾದ ಸಂಚು-ಒಳಸಂಚು, ಸತ್ಯ-ಅಸತ್ಯಗಳ ಕುರಿತಾದ ಪ್ರಶ್ನೆಯನ್ನು ಹುಟ್ಟುಹಾಕದೇ ತಲೆ ಬಾಗಿ ಒಪ್ಪಿಕೊಂಡವ. ಆ ಸನ್ನಿವೇಶಕ್ಕೆ ತಿರುಗಿ ಬೀಳುವ ಅವಕಾಶ ಮತ್ತು ಸಾಮರ್ಥ್ಯ ಇದ್ದೂ ಅದನ್ನು ಬಳಸಿಕೊಳ್ಳದವ. ರಾಮ್ ರಾಮ್ ಮತ್ತು ಜೈ ಶ್ರೀರಾಮ್‍ಗಳು ಈ ದೇಶದಲ್ಲಿ ಸಾಂಸ್ಕೃತಿಕ ಪರಂಪರೆಯ ಭಾಗವಾದುದು ಈ ಹಿನ್ನೆಲೆಯಲ್ಲಿ. ಶ್ರೀರಾಮನ ಸಜ್ಜನಿಕೆಯನ್ನು, ಪ್ರಾಮಾಣಿಕತೆಯನ್ನು ಮತ್ತು ಇನ್ನೊಬ್ಬರ ಮೇಲೆ ಏರಿಹೋಗದ ಈ ಪ್ರೇಮಭಾವವನ್ನೇ ಒಟ್ಟು ಸೇರಿಸಿ ರಾಮ್ ರಾಮ್ ಎನ್ನಲಾಗುತ್ತದೆ. ಸದ್ಯ ಈ ದೇಶದ ಸಂಸತ್ತಿನಲ್ಲಿ ಮತ್ತು ಉತ್ತರ ಭಾರತದ ಬೀದಿ ಬೀದಿಗಳಲ್ಲಿ ಮುಸ್ಲಿಮರ ಎದುರು ಮೊಳಗುತ್ತಿರುವ ಜೈಶ್ರೀರಾಮ್‍ನಲ್ಲಿ ಈ ಭಾವ ಸ್ಫುರಿಸುತ್ತಿದೆಯೇ? ಸಂಸತ್ತಿನಲ್ಲಿ ಬಿಜೆಪಿ ಸಂಸದರು ಅಸದುದ್ದೀನ್ ಉವೈಸಿಯ ಎದುರು ಕೂಗಿದ್ದು ಈ ಭಾವದ ಘೋಷಣೆಯನ್ನಲ್ಲ. ಅದರಲ್ಲಿ ಪ್ರೇಮ ಭಾವ ಇರಲಿಲ್ಲ. ದಾಳಿಭಾವ ಇತ್ತು. ಕಿಚಾಯಿಸುವ ಭಾವ ಇತ್ತು. ಅದು ಉದ್ರೇಕಭಾವದ ಕೂಗು ಆಗಿತ್ತೇ ವಿನಃ ಶ್ರೀರಾಮ ಪ್ರತಿನಿಧಿಸುವ ಪ್ರೇಮಭಾವಕ್ಕೂ ಅದಕ್ಕೂ ಸಂಬಂಧವೇ ಇರಲಿಲ್ಲ. ಇವತ್ತು ಉತ್ತರ ಭಾರತದ ಬೀದಿಗಳಲ್ಲಿ ಮುಸ್ಲಿಮರನ್ನು ಕಂಡಾಗ ಮಾತ್ರ ಮೊಳಗುತ್ತಿರುವ ಕೂಗಲ್ಲೂ ಬಿಜೆಪಿ ಸಂಸತ್ತಿನಲ್ಲಿ ಕೂಗಿದ ಘೋಷಣೆಯ ಆ ಆಕ್ರಮಣಕಾರಿ ಭಾವವಷ್ಟೇ ಇದೆ. ಒಂದುಕಡೆ, ಪ್ರಧಾನಿ ನರೇಂದ್ರ ಮೋದಿಯವರು ತನ್ನನ್ನು ಸರ್ವರ ಹಿತ ಕಾಯುವ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ, ಅವರ ಪಕ್ಷದ ಜನಪ್ರತಿನಿಧಿಗಳು ಅವರ ಸಮ್ಮುಖದಲ್ಲೇ ಮುಸ್ಲಿಮ್ ಜನಪ್ರತಿನಿಧಿಯನ್ನು ಕಿಚಾಯಿಸುತ್ತಾರೆ. ಜೈ ಶ್ರೀರಾಮ್ ಅನ್ನುವ ಅಪ್ಪಟ ಧಾರ್ಮಿಕ ಮತ್ತು ಸಮಭಾವದ ಘೋಷಣೆಯನ್ನು ಆಕ್ರಮಣಕಾರಿ ಶೈಲಿಯಲ್ಲಿ ಅವರ ವಿರುದ್ಧ ಕೂಗುತ್ತಾರೆ. ನಿಜವಾಗಿ, ಉತ್ತರ ಭಾರತದ ಬೀದಿಗಳಲ್ಲಿ ನಡೆಯುತ್ತಿರುವ ಥಳಿತದ ಘಟನೆಗಳು ಪ್ರಧಾನಿಯವರಿಗೆ ಹೇಗೆ ನೋವು ತರುತ್ತದೋ ಅದಕ್ಕಿಂತ ಹೆಚ್ಚಿನ ನೋವು ಮತ್ತು ದುಃಖವನ್ನು ಸಂಸತ್ತಿನ ಈ ಬೆಳವಣಿಗೆಯು ಅವರಲ್ಲಿ ತರಬೇಕಿತ್ತು. ಅದನ್ನವರು ಖಂಡಿಸಬೇಕಿತ್ತು. ಮುಸ್ಲಿಮರನ್ನು ಕಿಚಾಯಿಸುವುದಕ್ಕೆ ಮತ್ತು ಅವರ ಮೇಲೆ ದಾಳಿ ನಡೆಸುವುದಕ್ಕೆ ಶ್ರೀರಾಮನನ್ನು ಬಳಸಿಕೊಳ್ಳುವುದು ಶ್ರೀರಾಮನ ನಿಜ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವೆಂದು ಹೇಳಬೇಕಿತ್ತು. ಹೀಗೆ ನಿರೀಕ್ಷಿಸುವುದಕ್ಕೆ ಇರುವ ಎರಡು ಕಾರಣಗಳಲ್ಲಿ ಒಂದು ಏನೆಂದರೆ, ಅವರು ಈ ದೇಶದ 120 ಕೋಟಿ ಜನರ ಹಿತ ಕಾಯುವ ಹೊಣೆಗಾರಿಕೆ ಉಳ್ಳವರು ಎಂಬುದು ಮತ್ತು ಇನ್ನೊಂದು, ಅವರು ಪಕ್ಷ ಪ್ರೇಮದ ಸೆಳೆತದಿಂದ ಹೊರಗಿರಬೇಕಾದವರು ಎಂಬುದಾಗಿದೆ. ಓರ್ವ ಸಂಸದನ ಮುಂದೆ ಇರುವ ಗುರಿ ಮತ್ತು ಓರ್ವ ಪ್ರಧಾನಿಯ ಮುಂದೆ ಇರುವ ಗುರಿ ಇವೆರಡೂ ಸಮಾನ ಅಲ್ಲ. ಸಂಸದ ಅನೇಕ ಬಾರಿ ತನ್ನ ದೃಷ್ಟಿಕೋನವನ್ನು ತನ್ನ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಬಲ್ಲ. ಒಟ್ಟು ಜನರ ಹಿತಕ್ಕಿಂತ ತನಗೆ ಓಟು ದಕ್ಕಿಸಿಕೊಡುವ ವಿಷಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬಲ್ಲ. ಇನ್ನೊಂದು ಅವಧಿಗೆ ಚುನಾಯಿತನಾಗಿ ಆಯ್ಕೆಯಾಗುವುದಕ್ಕೆ ಏನೆಲ್ಲ ಮಾಡಬೇಕೋ ಅವನ್ನೆಲ್ಲ ಮಾಡುವ ಗುರಿಯೊಂದಿಗೆ ಮಾತಾಡಬಲ್ಲ. ತನ್ನ ಕ್ಷೇತ್ರಕ್ಕೆ ಸಂಬಂಧ ಪಡದವರ ಹಿತವನ್ನು ಕಡೆಗಣಿಸಲೂ ಆತ ಮುಂದಾಗಬಲ್ಲ. ಆದರೆ ಪ್ರಧಾನಿಗೆ ಹಾಗಲ್ಲ. ಈ ದೇಶವೇ ಅವರ ಕ್ಷೇತ್ರ. ಈ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಅವರ ಮತದಾರರೇ. ಆದ್ದರಿಂದ, ಅವರು ಆಡುವ ಮಾತು- ಅವರು ಸ್ಪರ್ಧಿಸಿದ ಕ್ಷೇತ್ರದ ಮತ್ತು ಅವರು ಪ್ರತಿನಿಧಿಸುವ ಪಕ್ಷದ ವ್ಯಾಪ್ತಿಯಿಂದ ಹೊರಗಿರಬೇಕಾಗುತ್ತದೆ ಮತ್ತು ಸಮಷ್ಟಿ ಭಾವದಿಂದ ಕೂಡಿರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಈ ದೇಶ ಈ ಬಗೆಯ ನಿಲುವನ್ನು ನಿರೀಕ್ಷಿಸುತ್ತದೆ.
ಜೈ ಶ್ರೀರಾಮ್ ಮತ್ತು ಅಲ್ಲಾಹು ಅಕ್ಬರ್ ಗಳು ಹಿಂದೂ ಮತ್ತು ಇಸ್ಲಾಮ್ ಧರ್ಮಗಳ ಸಮಗ್ರತೆಯನ್ನು, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು, ಮೂಲಭೂತ ತತ್ವ ಸಿದ್ಧಾಂತಗಳನ್ನು ಮತ್ತು ಧಾರ್ಮಿಕ ಸ್ಫೂರ್ತಿಯನ್ನು ಪ್ರತಿನಿಧಿಸುತ್ತವೆಯೇ ಹೊರತು ಪರಮತ ದ್ವೇಷವನ್ನಾಗಲಿ ಅಸಹಿಷ್ಣುತೆಯನ್ನಾಗಲಿ ಅಲ್ಲವೇ ಅಲ್ಲ. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ (ಪವಿತ್ರ ಕುರ್‍ಆನ್ 2:56) ಎಂದು ಪ್ರತಿಪಾದಿಸುವ ಇಸ್ಲಾಮ್ ಧರ್ಮದ ಅನುಯಾಯಿಯೊಬ್ಬ ಮುಸ್ಲಿಮರೇ ಬಹುಸಂಖ್ಯಾತರಿರುವ ರಾಷ್ಟ್ರದಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳುವಂತೆ ಮುಸ್ಲಿಮೇತರ ವ್ಯಕ್ತಿಯನ್ನು ಬಲವಂತಪಡಿಸುವುದು ಹೇಗೆ ಧರ್ಮವಿರೋಧಿಯೋ ಜೈ ಶ್ರೀರಾಮ್ ಎಂದು ಘೋಷಿಸುವಂತೆ ಮುಸ್ಲಿಮರನ್ನು ಬಲವಂತಪಡಿಸುವುದೂ ಅಷ್ಟೇ ಧರ್ಮವಿರೋಧಿ. ಶ್ರೀರಾಮ ಮತ್ತು ಅಲ್ಲಾಹು ಪರಸ್ಪರ ವೈರಿಗಳೂ ಅಲ್ಲ, ಸ್ಪರ್ಧಿಗಳೂ ಅಲ್ಲ.
No comments:
Post a Comment