ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರೇ ಹೆಚ್ಚಾಗಿರುವ ಅಡಿಕೆ ಬೆಳೆಗಾರರಲ್ಲಿ ಮಂಕು ಕವಿದಿದೆ. ಇದಕ್ಕೆ ಕಾರಣ- ಆಗ್ನೇಯ ಏಷ್ಯಾದ 16 ದೇಶಗಳ ನಡುವೆ ಆಗಲಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವೆಂಬ (RCEP) ಒಪ್ಪಂದ. ಈ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲವಾದರೂ ಈ ಒಪ್ಪಂದದ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಾದ ಮತ್ತು ಒಪ್ಪಂದದ ಜೊತೆ ನಿಲ್ಲಲೇಬೇಕಾದ ಮುಲಾಜಿನ ಧೋರಣೆಯೊಂದನ್ನು ಕೇಂದ್ರ ಸರಕಾರ ಪ್ರದರ್ಶಿಸುತ್ತಿದೆ. ದಕ್ಷಿಣೇಶ್ಯ ರಾಷ್ಟ್ರಗಳ ಸಂಘಟನೆ(ASEAN)ಯಲ್ಲಿರುವ 10 ರಾಷ್ಟ್ರಗಳೂ ಸೇರಿದಂತೆ ಭಾರತ, ಚೀನಾ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಮುಕ್ತ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವ ಈ RCEP ಒಪ್ಪಂದವು ಒಂದುವೇಳೆ ಜಾರಿಯಾದರೆ, ಭಾರತದ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರಗಳ ಮೇಲೆ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಅಡಿಕೆ ಮಾರುಕಟ್ಟೆಗೆ ಈಗಾಗಲೇ ಬಿಸಿ ತಟ್ಟಿರುವುದು ಇದಕ್ಕೊಂದು ಪುರಾವೆ ಅಷ್ಟೇ. ನವೆಂಬರ್ 4ರಂದು ಥಾಯ್ಲೆಂಡ್‍ನ ಬ್ಯಾಂಕಾಕ್‍ನಲ್ಲಿ ಈ ರಾಷ್ಟ್ರಗಳ ನಾಯಕರುಗಳ ಸಭೆ ನಡೆಯಲಿದೆ. ಅದಕ್ಕಿಂತ ಮೊದಲು ಒಪ್ಪಂದದ ಕರಡು ರಚನೆಯಾಗಬೇಕಾಗುತ್ತದೆ. ನವೆಂಬರ್ 4ರ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬಂದು ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ. ಈ 16 ರಾಷ್ಟ್ರಗಳಲ್ಲಿ ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರರಿರುವುದರಿಂದ ಒಂದುವೇಳೆ ಈ ಒಪ್ಪಂದ ಜಾರಿಗೆ ಬಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ವ್ಯತ್ಯಾಸವಾಗಬಹುದೆಂಬ ಅಂದಾಜೂ ಇದೆ. ನಿಜವಾಗಿ,
ಸಮಸ್ಯೆ ಇರುವುದು ಈ ಒಪ್ಪಂದ ಯಾವಾಗ ಜಾರಿಗೆ ಬರುತ್ತದೆ ಎಂಬುದರಲ್ಲಲ್ಲ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕುವುದಾದರೆ, ಆ ಸಹಿಯಿಂದಾಗಿ ಈ ದೇಶದ ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕಾ ಕ್ಷೇತ್ರದ ಮೇಲೆ ಅದು ತಂದೊಡ್ಡಬಹುದಾದ ಅಪಾಯಗಳನ್ನು ಎದುರಿಸಲು ಏನು ಮಾಡುತ್ತದೆ ಅನ್ನುವುದು. ಮುಖ್ಯವಾಗಿ RCEP ಎಂಬ ಪರಿಕಲ್ಪನೆಯ ಬಗ್ಗೆ ಮತ್ತು ಅದು ಪ್ರಸ್ತುತಪಡಿಸುವ ವ್ಯಾಪಾರ ನೀತಿಯ ಬಗ್ಗೆ ಜನಸಾಮಾನ್ಯರಿಗೆ ಇನ್ನೂ ಗೊತ್ತಿಲ್ಲ. ಅದನ್ನು ವಿವರಿಸಿಕೊಡುವ ಶ್ರಮಗಳೂ ದೊಡ್ಡ ಮಟ್ಟದಲ್ಲಿ ನಡೆದಿಲ್ಲ. ನವೆಂಬರ್ 4ಕ್ಕೆ ಇನ್ನಿರುವುದು ಕೆಲವೇ ದಿನಗಳು. ಈ ದಿನಗಳೊಳಗೆ RCEP ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸುವ ಮತ್ತು ದೇಶವ್ಯಾಪಿ RCEP ಪರಿಕಲ್ಪನೆಯನ್ನು ಜನರಿಗೆ ಮುಟ್ಟಿಸುವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಕೇಂದ್ರ ಸರಕಾರ RCEPಗೆ ಸಹಿ ಹಾಕದೇ ಇರಬೇಕಾದರೆ ದೇಶೀಯವಾಗಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಬಲ ಚಳವಳಿಗಳು ನಡೆಯಬೇಕು. ಆ ಪರಿಕಲ್ಪನೆಯಲ್ಲಿರುವ ನಿಯಮ-ನಿರ್ದೇಶನಗಳು ಮತ್ತು ರೈತ ವಿರೋಧಿ ಷರತ್ತುಗಳ ಮೇಲೆ ಚರ್ಚೆ-ಸಂವಾದಗಳು ನಡೆಯಬೇಕು. ಸರಕಾರಕ್ಕೆ ಮನವಿ ಸಲ್ಲಿಕೆಯಾಗಬೇಕು. ಈ ಒಪ್ಪಂದದ ಪ್ರಕಾರ, ಒಪ್ಪಂದ ವ್ಯಾಪ್ತಿಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ ಭಾರೀ ಸುಂಕ ವಿನಾಯಿತಿಯನ್ನು ನೀಡಬೇಕಾಗುತ್ತದೆ. ಮುಖ್ಯವಾಗಿ, ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯಾಗಳಿಂದ ಆಮದಾಗುವ ವಸ್ತುಗಳಿಗೆ 86% ಸುಂಕ ವಿನಾಯಿತಿಯನ್ನು ನೀಡಬೇಕಾಗುತ್ತದೆ. ASEANನ 10 ರಾಷ್ಟ್ರಗಳು ಮತ್ತು ಜಪಾನ್, ಕೊರಿಯಾಗಳಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ 90% ರಿಯಾಯಿತಿ ನೀಡಬೇಕಾಗುತ್ತದೆ. ಮುಖ್ಯವಾಗಿ ಉಕ್ಕು ಇಂಜಿನಿಯರಿಂಗ್, ಕೆಮಿಕಲ್ ವಸ್ತುಗಳ ಸುಂಕವನ್ನು ಶೂನ್ಯಕ್ಕೆ ಇಳಿಸಬೇಕಾದ ಅನಿವಾರ್ಯತೆ ಇದೆ.
ಅಂದಹಾಗೆ, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‍ಗಳು ಹೈನುತ್ಪನ್ನಕ್ಕೆ ಹೆಸರುವಾಸಿ. ಅಲ್ಲಿಂದ ಬಹುತೇಕ ಶೂನ್ಯ ಸುಂಕದೊಂದಿಗೆ ಹೈನುತ್ಪನ್ನಗಳು ಭಾರತಕ್ಕೆ ಲಗ್ಗೆ ಇಡುವುದೆಂದರೆ, ಹಾಲಿನಲ್ಲಿ ಹಾಲಾಹಲ ಸೃಷ್ಟಿಯಾಗುವುದೆಂದೇ ಅರ್ಥ. ಹಾಲು ಮತ್ತು ಹಾಲಿನ ಉತ್ಪನ್ನಗಳು ಈ ಎರಡು ರಾಷ್ಟ್ರಗಳಿಂದ ತೀರಾ ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರಿಂದಾಗಿ ಸ್ಥಳೀಯ ಹೈನುದ್ಯಮದ ಮೇಲೆ ಅತಿ ಕೆಟ್ಟ ಪರಿಣಾಮ ಬೀರಲಿದೆ. ಈ ಹಿಂದೆ ಅಡಿಕೆ ಮಾರುಕಟ್ಟೆಯ ಮೇಲೆ ಇಂಥದ್ದೇ ಅಡ್ಡ ಪರಿಣಾಮ ಬಿದ್ದಿತ್ತು. ಅಡಿಕೆಯ ಬೆಲೆ ಕ್ವಿಂಟಾಲ್‍ಗೆ 1ಲಕ್ಷ ರೂಪಾಯಿಯಷ್ಟು ಏರಿಕೆಯಾದಾಗ ಸ್ಥಳೀಯ ವರ್ತಕರು ಶ್ರೀಲಂಕಾದಿಂದ ಅಡಿಕೆಯನ್ನು ಆಮದು ಮಾಡಲು ನಿರ್ಧರಿಸಿದರು. ಅಲ್ಲಿ 15 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಅಡಿಕೆ ದೊರೆಯುತ್ತಿತ್ತು. ಇದರಿಂದಾಗಿ ದೇಶೀಯ ಅಡಿಕೆಗೆ ಬೇಡಿಕೆ ಕುಸಿದು ರೈತರು ಕಂಗಾಲಾದರು. ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವು ಆಮದು ಅಡಿಕೆಗೆ ಸುಂಕವನ್ನು ಹೆಚ್ಚಿಸಿ ಅಡಿಕೆ ಧಾರಣೆಯಲ್ಲಿ ಸ್ಥಿರತೆಯನ್ನು ತರುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದೀಗ ಈ 16 ರಾಷ್ಟ್ರಗಳ ಪಟ್ಟಿಯಲ್ಲಿರುವ ಲಾವೋಸ್, ಇಂಡೋನೇಶ್ಯಾ ಮಲೇಶ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಬ್ರೂನೈ, ಕಾಂಬೋಡಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಅಡಿಕೆ ಬೆಳೆಯುವ ರಾಷ್ಟ್ರಗಳೂ ಇವೆ. ಮುಖ್ಯವಾಗಿ ಚೀನಾ ಮತ್ತು ಮ್ಯಾನ್ಮಾರ್ ಗ ಳು ಅಡಿಕೆ ಬೆಳೆಗೆ ಪ್ರಸಿದ್ಧವಾಗಿವೆ. ಹೀಗಿರುವಾಗ, ಮ್ಯಾನ್ಮಾರ್ ನಿಂದ ಅಗ್ಗದ ಬೆಲೆಗೆ ಅಥವಾ ಸುಂಕ ರಹಿತವಾಗಿ ಭಾರತದ ಮಾರುಕಟ್ಟೆಗೆ ದಾಳಿಯಿಡುವ ಅಡಿಕೆಯಿಂದ ಸ್ಥಳೀಯ ಅಡಿಕೆ ಬೆಳೆಗಾರರಿಗೆ ಸವಾಲು ಎದುರಾಗುವುದು ಖಂಡಿತ. ಈ ಭಯದಿಂದಾಗಿ ಕಳೆದ ವಾರವೇ ಅಡಿಕೆ ಧಾರಣೆಯಲ್ಲಿ ಕ್ವಿಂಟಲ್ ಒಂದಕ್ಕೆ 3 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದು ಒಪ್ಪಂದಕ್ಕಿಂತ ಮೊದಲೇ ಉಂಟಾದ ಸಂಚಲನೆ. ಮುಖ್ಯವಾಗಿ ದೇಶದಲ್ಲಿ ಬೆಳೆಯಲಾಗುವ ಒಟ್ಟು ಅಡಿಕೆಯ ಪೈಕಿ 60% ಅಡಿಕೆಯು ಕರ್ನಾಟಕವೊಂದರಲ್ಲೇ ಉತ್ಪಾದಿಸಲಾಗುತ್ತದೆ ಎಂಬ ಅಂಶವೂ ಇಲ್ಲಿ ಗಮನೀಯ. ರಾಜ್ಯದಲ್ಲಿ ಪ್ರತಿವರ್ಷ 4 ಟನ್ ಅಡಿಕೆ ಉತ್ಪಾದಿಸಲಾಗುತ್ತದೆ ಎಂಬ ಲೆಕ್ಕಾಚಾರವಿದೆ. ಅದರಲ್ಲೂ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಕೃಷಿ ಸಮೃದ್ಧವಾಗಿದೆ. ಆದ್ದರಿಂದ ರಾಜ್ಯದ ಜನಪ್ರತಿನಿಧಿಗಳು ಈ RCEP ಒಪ್ಪಂದದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಬೇಕು. ಹೈನುದ್ಯಮ ಮತ್ತು ಅಡಿಕೆ ಉದ್ಯಮಕ್ಕೆ ಮಾರಕವಾಗಬಹುದಾದ ಷರತ್ತುಗಳನ್ನು ಕರಡು ಪ್ರತಿಯಿಂದ ಕಿತ್ತು ಹಾಕುವುದಕ್ಕೆ ಮತ್ತು ಸ್ಥಳೀಯ ಕೃಷಿಕರ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಹಾಗಂತ, ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಆಗುವ ಕೆಲಸ ಇದಲ್ಲ. ಹೈನು ಮತ್ತು ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರನ್ನು ಸಂಘಟಿಸಿ ಅವರಿಗೆ ಮುಂಬರುವ ಕರಾಳ ಪರಿಸ್ಥಿತಿಯನ್ನು ವಿವರಿಸಿಕೊಡಬಹುದಾದ ಜನ ಚಳವಳಿಗಳು ತುರ್ತಾಗಿ ನಡೆಯಬೇಕು. ಸಾಮಾಜಿಕ ಸಂಘಟನೆಗಳು ಮತ್ತು ತಜ್ಞರು ಈ ಕರಡು ಒಪ್ಪಂದದಲ್ಲಿರಬಹುದಾದ ರೈತ ವಿರೋಧಿ ಅಂಶಗಳನ್ನು ಎತ್ತಿ ಹೇಳಿ ಸಾರ್ವಜನಿಕರ ಗಮನ ಸೆಳೆಯಬೇಕು. ಅಮೇರಿಕವು RCEP ಒಪ್ಪಂದದಿಂದ ಚೀನಾವನ್ನು ಹೊರಗಿಟ್ಟ ಸೇಡನ್ನು ತೀರಿಸಲು ಚೀನಾದ ಮುತುವರ್ಜಿಯಿಂದ ಈ ಒಪ್ಪಂದ ಏರ್ಪಡಿಸಲಾಗುತ್ತಿದೆ ಎನ್ನಲಾಗುತ್ತದೆ. ಅಮೇರಿಕ ಮತ್ತು ಚೀನಾಗಳ ನಡುವೆ ವ್ಯಾಪಾರ ಬಿಕ್ಕಟ್ಟು ನಡೆಯುತ್ತಿರುವ ಈ ಹೊತ್ತಿನಲ್ಲೇ ಜಾರಿಯಾಗಲಿರುವ ಈ ಒಪ್ಪಂದವು ಭಾರತಕ್ಕೆ ಚೀನಾದ ಜೊತೆ ಸೇರಲೇಬೇಕಾದ ಅನಿವಾರ್ಯತೆಯನ್ನೂ ತಂದೊಡ್ಡಿದೆ. ಇದು ಚೀನಾ ಹೆಣೆದ ತಂತ್ರದ ಭಾಗವಾಗಿರಲೂ ಬಹುದು. ಈ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸಗಳು ಆಗಬೇಕಾಗಿದೆ.