ಅಮೇರಿಕದ ಹ್ಯೂಸ್ಟನ್‍ನಲ್ಲಿ ಸೇರಿದ್ದ ಅನಿವಾಸಿ ಭಾರತೀಯರು ಹೌಡಿ ಮೋದಿ (ಹೇಗಿದ್ದೀರಾ ಮೋದಿ) ಎಂದು ಕುಶಲ ವಿಚಾರಿಸುತ್ತಿರುವಾಗ ಅದಕ್ಕೆ ಉತ್ತರವೆಂಬಂತೆ ಗುಜರಾತ್‍ನ ನರ್ಮದಾ ತಟ ಪ್ರದೇಶದಿಂದ ನೂರಾರು ವೀಡಿಯೋಗಳು ಹೊರಬಿದ್ದುವು. ಎಲ್ಲವೂ ನೋವು-ಸಂಕಟ-ದುರ್ದೆಸೆಗಳನ್ನು ಹೇಳಿಕೊಳ್ಳುವ ವೀಡಿಯೋಗಳು. ಭಾವುಕತೆ ಮತ್ತು ಕಣ್ಣೀರಿನ ಹೊರತಾದ ಯಾವುದೂ ಆ ವೀಡಿಯೋಗಳಲ್ಲಿಲ್ಲ. ನರ್ಮದಾ ಅಣೆಕಟ್ಟಿನ ನೀರು ತನ್ನ ಮನೆಯನ್ನು ಅರ್ಧ ಮುಳುಗಿಸಿದ್ದರೂ ಅದರಿಂದ ಹೊರಬರಲೊಪ್ಪದ ಮಹಿಳೆಯ ವೀಡಿಯೋ ಇದರಲ್ಲಿ ಒಂದಾದರೆ ಇನ್ನೊಂದು- ಗೆಳೆಯರಾದ ಇಬ್ಬರು ಮಕ್ಕಳು ಪರಸ್ಪರ ಸಾಂತ್ವನಪಡಿಸುತ್ತಿರುವ ವೀಡಿಯೋ. ತಂತಮ್ಮ ಮನೆಗಳು ಮುಳುಗಡೆಯಾಗಿರುವುದರಿಂದ ಸ್ಥಳಾಂತರಗೊಂಡು ಪರಸ್ಪರ ಬೇರ್ಪಡಲೇಬೇಕಾದ ಸಂಕಟ ಈ ಮಕ್ಕಳದು. ಅಂದಹಾಗೆ, ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತನ್ನ 69ನೇ ಜನ್ಮದಿನವನ್ನು ಆಚರಿಸಿದುದನ್ನು ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದುವು. ಇದೇವೇಳೆ, ಈ ಅಣೆಕಟ್ಟನ್ನು ತುಂಬಿಸುವುದಕ್ಕಾಗಿ ನರ್ಮದಾ ನದಿಗೆ ಸಾಬರ್ಮತಿ ನದಿಯಿಂದ ನೀರು ಹರಿಸಿದುದನ್ನು ಮತ್ತು ಇದರಿಂದಾಗಿ ಸಂತ್ರಸ್ತರಾದವರನ್ನು ಪ್ರತಿನಿಧಿಸಲು ಮಾಧ್ಯಮಗಳು ವಿಫಲವಾದುವು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಪತ್ರಿಕೆಗಳಲ್ಲಿ ಕಾಣಿಸಿಕೊಂಡ ವೀಡಿಯೋ ಮತ್ತು ಬರಹಗಳ ಹೊರತಾಗಿ ಈ ಸಂತ್ರಸ್ತರ ಗೋಳನ್ನು ಅರಿತುಕೊಳ್ಳುವುದಕ್ಕೆ ಬೇಕಾದ ಮಾರ್ಗಗಳು ಹೊರ ಪ್ರಪಂಚಕ್ಕೆ ಇರಲಿಲ್ಲ.
ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಗೆ ದೀರ್ಘ ಇತಿಹಾಸವಿದೆ. ಈ ಇತಿಹಾಸದ ಪ್ರತಿ ಪುಟದಲ್ಲೂ ಮೇಧಾಪಾಟ್ಕರ್ ರಿಂದ ಹಿಡಿದು ನರ್ಮದಾ ತಟ ಪ್ರದೇಶದ ಅಸಂಖ್ಯ ರೈತರ, ಹೋರಾಟಗಾರರ ಹೆಸರಿದೆ. ಎಲ್ಲ ರೀತಿಯ ಪ್ರತಿರೋಧ-ಪ್ರತಿಭಟನೆಯನ್ನು ಗುಜರಾತ್ ಸರಕಾರವು ತನ್ನ ತೋಳ್ಬಲದಿಂದ ಮಟ್ಟ ಹಾಕಿದ ಕತೆ ಒಂದು ಕಡೆಯಾದರೆ, ಈ ಅಣೆಕಟ್ಟು ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟೇ ಕಾವಲು ನಿಂತ ಕತೆ ಇನ್ನೊಂದು ಕಡೆಯಿದೆ. ಸರಕಾರ ಜನರನ್ನು ಎಲ್ಲಿಯ ವರೆಗೆ ದಾರಿ ತಪ್ಪಿಸಿತ್ತೆಂದರೆ, ಮೇಧಾ ಪಾಟ್ಕರ್ ಮತ್ತು ಅವರ ತಂಡದ ಅಣೆಕಟ್ಟು ವಿರೋಧಿ ಚಳವಳಿಯ ವಿರುದ್ಧ ಸ್ಥಳೀಯರನ್ನೇ ಎತ್ತಿ ಕಟ್ಟಿತ್ತು. ಅಣೆಕಟ್ಟಿನಿಂದಾಗಿ ತಮ್ಮ ಜಮೀನಿಗೆ ಭರಪೂರ ನೀರು ಹರಿಯಲಿದೆ ಮತ್ತು ವರ್ಷಪೂರ್ತಿ ಬೆಳೆ ಬೆಳೆಯಬಹುದು ಎಂದು ನಂಬಿದ್ದ ಧೊಲೇರಾದ ರೈತರು ಅಣೆಕಟ್ಟು ವಿರೋಧಿ ಹೋರಾಟವನ್ನು ರೈತ ವಿರೋಧಿ ಎಂದು ಕರೆದಿದ್ದರು. ಇದೀಗ ಅವರ ಕನಸು ಭಗ್ನವಾಗಿದೆ. ಅವರ ಗದ್ದೆಗಳಿಗೆ ನರ್ಮದಾ ನೀರು ಇನ್ನೂ ತಲುಪಿಲ್ಲ. ಸದ್ಯೋ ಭವಿಷ್ಯದಲ್ಲಿ ತಲುಪುವ ಭರವಸೆಯೂ ಇಲ್ಲ. ಅದಲ್ಲದೇ, ಅಣೆಕಟ್ಟಿನಿಂದಾಗಿ ಸಮುದ್ರದ ಉಪ್ಪು ನೀರು ಹಲವು ಕಿಲೋಮೀಟರ್ ತನಕ ಒಳಪ್ರವೇಶಿಸಿದ್ದು ಧಲೇರಾದ ಕೃಷಿ ಭೂಮಿಯನ್ನು ಲವಣಯುಕ್ತಗೊಳಿಸಿಬಿಟ್ಟಿದೆ. ಇದರಿಂದಾಗಿ ಇಡೀ ಕೃಷಿ ಭೂಮಿಯೇ ನಿರುಪಯುಕ್ತಗೊಂಡಿದೆ. ಕ್ರೂರ ವ್ಯಂಗ್ಯ ಏನೆಂದರೆ, ಗುಜರಾತ್ ಸರಕಾರ ಈ ಸಮಸ್ಯೆಗೆ ಕಂಡುಕೊಂಡ ಅಸಂಗತ ಪರಿಹಾರ ರೂಪ. ಈ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವೆಂದು ಘೋಷಿಸಿ ರೈತರನ್ನು ಬೇರೆಡೆಗೆ ಸ್ಥಳಾಂತರಿಸಲು ಅದು ನಿರ್ಧರಿಸಿದೆ. ಪ್ರತಿಭಟನೆಯನ್ನು ಬಲವಂತದಿಂದ ದಮನಿಸುತ್ತಿದೆ. ಒಂದು ಕಾಲದಲ್ಲಿ ಸರಕಾರದ ಅಣೆಕಟ್ಟು ನೀತಿಗೆ ಬೆಂಗಾವಲಾಗಿ ನಿಂತವರು ಇವತ್ತು ಒಂಟಿಯಾಗಿ ನಿಲ್ಲಬೇಕಾದ ಸ್ಥಿತಿಗೆ ತಲುಪಿದ್ದಾರೆ. ಇದೇವೇಳೆ, ನರ್ಮದಾ ಅಣೆಕಟ್ಟಿನಿಂದ ಯಥೇಚ್ಛವಾಗಿ ಬೃಹತ್ ಕೈಗಾರಿಕೆಗಳಿಗೆ ನೀರು ಸರಬರಾಜಾಗುತ್ತಿದೆ. ವಿಶೇಷವಾಗಿ ಟಾಟಾ ಮತ್ತು ಕೋಕಾಕೋಲ ಕಂಪೆನಿಗಳ ಕಾರ್ಖಾನೆಗಳಿಗೆ. ಪಶ್ಚಿಮ ಬಂಗಾಳದಿಂದ ಹೊರಹಾಕಲ್ಪಟ್ಟ ಟಾಟಾ ಮೋಟಾರ್ಸ್ ಕಂಪೆನಿಯು ಇಲ್ಲಿನ ಸನಂದ್‍ನಲ್ಲಿ ಬಂದು ತಳವೂರಿಕೊಂಡಿತು. ಅದಕ್ಕೆ ಜಲಮೂಲವಿದ್ದುದು ಸರ್ದಾರ್ ಸರೋವರ್ ಅಣೆಕಟ್ಟು ಒಂದೇ. ಹಾಗೆಯೇ ಕೇರಳದ ಪ್ಲಾಚಿಮಾಡ ಮತ್ತು ಉತ್ತರ ಪ್ರದೇಶದ ವಾರಣಾಸಿಯಿಂದ ಹೊರಬಿದ್ದ ಕೋಕಾಕೋಲಕ್ಕೂ ಆಶ್ರಯ ಒದಗಿಸಿದ್ದು ಇದೇ ಗುಜರಾತ್. ಅದಕ್ಕೂ ಜಲಮೂಲ ಇದೇ ಅಣೆಕಟ್ಟು. ಸದ್ಯ ಇವೆರಡೂ ಕಂಪೆನಿಗಳು ಅಣೆಕಟ್ಟಿನ ಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ ತಮ್ಮ ಜಮೀನು, ಮನೆ, ಜೀವನೋಪಾಯ ಎಲ್ಲವನ್ನೂ ಅಣೆಕಟ್ಟಿಗಾಗಿ ಕಳಕೊಂಡ ಸ್ಥಳೀಯರು ಬೀದಿಪಾಲಾಗಿದ್ದಾರೆ. ನಿಜವಾಗಿ, ಸುಮಾರು 28 ಸಾವಿರ ಕುಟುಂಬಗಳು ಮುಳುಗಡೆ ಪ್ರದೇಶದಲ್ಲಿವೆ ಎಂಬುದೇ ಅಣೆಕಟ್ಟಿನ ಇನ್ನೊಂದು ಮುಖವನ್ನು ಹೇಳುತ್ತದೆ. ಇವರಿಗೆ ಪುನರ್ವಸತಿಯಾಗಲಿ, ಪರಿಹಾರವಾಗಲಿ ಇನ್ನೂ ಲಭಿಸಿಲ್ಲ. ಮೊನ್ನೆ ಪ್ರಧಾನಿಯವರ ಜನ್ಮ ದಿನಾಚರಣೆಯ ಸಮಯದಲ್ಲಿ ಕಾಣಿಸಿಕೊಂಡ ವೀಡಿಯೋಗಳು ಈ ಸಂತ್ರಸ್ತ ಕುಟುಂಬಗಳಿಗೆ ಸಂಬಂಧಿಸಿದುವು. ಅವರ ಬೆಳೆಗಳು ನಾಶವಾಗಿವೆ. ಕನಸುಗಳು ಭಗ್ನವಾಗಿವೆ. ಇಲ್ಲಿಂದ ಎದ್ದು ಹೋಗೋಣವೆಂದರೆ, ಪರ್ಯಾಯ ದಾರಿಗಳೂ ಸ್ಪಷ್ಟವಾಗಿಲ್ಲ. ಇದರ ಜೊತೆಗೇ ಸುಮಾರು 13,500 ಹೆಕ್ಟೇರ್ ಕಾಡು ಪ್ರದೇಶಗಳೂ ಮುಳುಗಡೆಯಾಗಲಿವೆ. ಆದರೆ, ಅಲ್ಲಿ ಪ್ರಾಣಿ, ಪಕ್ಷಿ ಜೀವಸಂಕುಲಗಳಿಗೆ ಪ್ರತಿಭಟನೆಯ ಮಾರ್ಗ ಗೊತ್ತಿಲ್ಲದಿರುವುದರಿಂದ ಅವು ಸುದ್ದಿಯಾಗಿಲ್ಲ. ಹೀಗೆ ಸುದ್ದಿಯಾಗದ ಸಂಗತಿಗಳಲ್ಲಿ ಭರೂಚ್ ಪ್ರದೇಶದ ಸಮಸ್ಯೆಯೂ ಒಂದು. ಮೀನುಗಾರರ ಕುಟುಂಬಗಳೇ ವಾಸವಿರುವ ಈ ಪ್ರದೇಶದ ಮಂದಿ ಇವತ್ತು ಜೀವನಾಧಾರವನ್ನೇ ಕಳಕೊಂಡಿದ್ದಾರೆ. ಇವರ ಸಂಖ್ಯೆ 30 ಸಾವಿರ. ಸರ್ದಾರ್ ಸರೋವರ್ ನಿರ್ಮಾಣದ ವೇಳೆ ಅಣೆಕಟ್ಟಿನ ಅಡ್ಡ ಪರಿಣಾಮಗಳ ಬಗ್ಗೆ ಸರಕಾರ ಯಾವ ಸೂಚನೆಗಳನ್ನೂ ಜನರಿಗೆ ನೀಡಿರಲಿಲ್ಲ. ಭರೂಚ್‍ನ ಜನರು ಕೂಡ ಅಣೆಕಟ್ಟನ್ನು ಆನಂದಿಸಿದರು. ಕಛ್ ಪ್ರದೇಶದ ರೈತರಲ್ಲೂ ಈ ಅಣೆಕಟ್ಟಿನ ಬಗ್ಗೆ ವಿಶೇಷ ಒಲವಿತ್ತು. ನೀರಿನ ಕೊರತೆಯನ್ನು ಎದುರಿಸುತ್ತಿರುವ ಕಛ್ ಪ್ರದೇಶಕ್ಕೆ ಸರ್ದಾರ್ ಸರೋವರ್ ಯೋಜನೆಯಿಂದ ಭಾರೀ ಪ್ರಮಾಣದ ಲಾಭವಾಗಲಿದೆ ಎಂದು ನಂಬಲಾಗಿತ್ತು. ಕಾಲುವೆಗಳ ಮೂಲಕ ಕಛ್‍ಗೆ ನೀರು ಹರಿಸುವ ಭರವಸೆಯನ್ನು ಸರಕಾರವೂ ನೀಡಿತ್ತು. ಅಲ್ಲದೇ, ಗುಜರಾತ್‍ನ ಒಣ ಪ್ರದೇಶಕ್ಕೆ ನೀರು ಹರಿಸಲು ಸರ್ದಾರ್ ಸರೋವರ್ ಯೋಜನೆಯ ಹೊರತು ಅನ್ಯ ದಾರಿಗಳಿಲ್ಲ’ ಎಂದು 2000 ಇಸವಿಯಲ್ಲಿ ಸುಪ್ರೀಮ್ ಕೋರ್ಟು ಹೇಳಿತ್ತು ಮತ್ತು ಅಣೆಕಟ್ಟನ್ನು ಎತ್ತರಿಸುವುದಕ್ಕೆ ಅನುಮತಿಯನ್ನೂ ನೀಡಿತ್ತು. ಇದೀಗ ಕಛ್ ಪ್ರದೇಶ ಈ ಹಿಂದಿನಂತೆ ಒಣಗಿಯೇ ಇದೆ. ನೀರು ಹರಿಸಬೇಕಾದ ಕಾಲುವೆಗಳ ಪತ್ತೆಯೇ ಇಲ್ಲ. ಬೃಹತ್ ಅಣೆಕಟ್ಟೆಗಿಂತ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು ಕಟ್ಟುವುದೇ ಉಪಯುಕ್ತ ಮತ್ತು ಇದುವೇ ಪರಿಸರ ಪ್ರೇಮಿ ಯೋಜನೆ ಎಂದು ಮೇಧಾ ಪಾಟ್ಕರ್ ಮತ್ತು ತಂಡವು ವಾದಿಸುವುದನ್ನು ತಮಾಷೆ ಮಾಡಿದವರು ಇವತ್ತು ಪಶ್ಚಾತ್ತಾಪ ಪಡತೊಡಗಿದ್ದಾರೆ. ಅಂದು ಮೇಧಾ ಪಾಟ್ಕರ್‍ರನ್ನು ವಿರೋಧಿಸಿದ ಸ್ಥಳೀಯರು ಇಂದು ಅಸಹಾಯಕರಾಗಿ ನಿಂತಿದ್ದಾರೆ. ಅಣೆಕಟ್ಟು ನಿರ್ಮಾಣದಿಂದಾಗಿ ಸಮುದ್ರದ ಉಪ್ಪು ನೀರಿನ ಒಳಹರಿವು ಉಂಟಾಗಿ 10 ಸಾವಿರ ಹೆಕ್ಟೇರ್ ಕೃಷಿಭೂಮಿ ಹಾಳಾಗಿದೆ. ಹಾಗಂತ,
ಗುಜರಾತಿನವರೇ ಆದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಇವೆಲ್ಲದರ ಅರಿವಿದ್ದೇ ಮೊನ್ನೆ ಸರ್ದಾರ್ ಸರೋವರ್ ಗೆ ಅವರು ಪೂಜೆ ಸಲ್ಲಿಸಿದ್ದಾರೆ. ಹ್ಯೂಸ್ಟನ್‍ನಲ್ಲಿ ಸೇರಿರುವ ಭಾರತೀಯರು ಹೌಡಿ ಮೋದಿ ಎಂದು ಕುಶಲ ವಿಚಾರಿಸುವಾಗಲೂ ಅವರಿಗೆ ನರ್ಮದೆಯ ಈ ಸಂಕಟ ನೆನಪಿಗೆ ಬಂದಿರಬಹುದು. ಆದರೆ ಕಾರ್ಪೋರೇಟ್ ದಣಿಗಳ ಬಿಗಿ ಮುಷ್ಠಿಯು ಈ ಬಡಪಾಯಿ ರೈತರ ಹಿತವನ್ನು ಕಡೆಗಣಿಸುವಷ್ಟು ಪ್ರಬಲವಾದುದು. ಉದ್ಯಮಿಗಳ ಹಿತ ಕಾಪಾಡದಿದ್ದರೆ ಜಿಡಿಪಿ ಕುಸಿಯುತ್ತದೆ. ಷೇರು ಮಾರುಕಟ್ಟೆ ಅಲುಗಾಡುತ್ತದೆ. ವಿದೇಶಿ ಹೂಡಿಕೆಗಳನ್ನು ಹಿಂಪಡೆಯಲಾಗುತ್ತದೆ. ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿ ಕೆಲಸ ಕಳಕೊಳ್ಳುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇದನ್ನು ನಿರ್ಲಕ್ಷಿಸಿಕೊಂಡು ಹೆಚ್ಚು ಸಮಯ ಅಧಿಕಾರದಲ್ಲುಳಿಯಲು ಸಾಧ್ಯವಿಲ್ಲ ಎಂಬುದು ಪ್ರಧಾನಿಯವರಿಗೆ ಗೊತ್ತು. ಮಾತ್ರವಲ್ಲ,
ರೈತರು ಮತ್ತು ಜನಸಾಮಾನ್ಯರಿಗೆ ಹೀಗೆ ಸುದ್ದಿಯಾಗುವ ಸಾಮರ್ಥ್ಯ ಇಲ್ಲ ಅನ್ನುವುದೂ ಅವರಿಗೆ ಗೊತ್ತು.
No comments:
Post a Comment