ಕೇಂದ್ರ ಮಾಹಿತಿ ಹಕ್ಕು ಆಯೋಗವು ರಚನೆಯಾಗಿ 14 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಆಯೋಗದ ಅಧ್ಯಕ್ಷರು ಶಾಲು ಹೊದಿಸಿ ಸ್ವಾಗತಿಸುತ್ತಿರುವ ಚಿತ್ರವನ್ನು ಮಾಧ್ಯಮಗಳು ಕಳೆದವಾರ ಪ್ರಕಟಿಸಿವೆ. ಇದಕ್ಕಿಂತ ವಾರದ ಮೊದಲು ಕಾಶ್ಮೀರಕ್ಕೆ ಸಂಬಂಧಿಸಿ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಲಾದ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯವು ನೀಡಿದ ಉತ್ತರವನ್ನು ಮಾಧ್ಯಮಗಳು ಪ್ರಕಟಿಸಿದ್ದುವು. ಕಾಶ್ಮೀರದಲ್ಲಿ ಬಂಧನಕ್ಕೀಡಾದ ರಾಜಕೀಯ ನಾಯಕರುಗಳ ವಿವರಗಳು ಮತ್ತು ದೂರವಾಣಿ, ಇಂಟರ್ ನೆಟ್ ಮತ್ತು ಸಂಚಾರಕ್ಕೆ ಹೇರಲಾದ ನಿಯಂತ್ರಣದ ಕುರಿತಂತೆ ಮಾಹಿತಿಯನ್ನು ಅಪೇಕ್ಷಿಸಿ ಸಲ್ಲಿಸಲಾದ ಆ ಅರ್ಜಿಗೆ ಗೃಹ ಸಚಿವಾಲಯವು ‘ಮಾಹಿತಿಯಿಲ್ಲ’ ಎಂಬ ಅತ್ಯಂತ ಉಡಾಫೆಯ ಮತ್ತು ಸರ್ವಾಧಿಕಾರಿ ಸ್ವರೂಪದ ಉತ್ತರವನ್ನು ನೀಡಿತ್ತು. ಇದರ ಜೊತೆಗೇ ಇನ್ನೊಂದು ಮಾಹಿತಿಯನ್ನೂ ಇಲ್ಲಿ ಹಂಚಿಕೊಳ್ಳುವುದು ಸೂಕ್ತವೆನಿಸುತ್ತದೆ. ಕಳೆದ ಜುಲೈಯಲ್ಲಿ ಕೇಂದ್ರ ಸರಕಾರವು ಮಾಹಿತಿ ಹಕ್ಕು ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿತ್ತು. ನಿಜವಾಗಿ,
ಆ ಮಸೂದೆಗೆ ಹಲವು ಆರ್ ಟಿ ಐ ಪರಿಣತರೇ ವಿರೋಧ ವ್ಯಕ್ತಪಡಿಸಿದ್ದರು. ಈ ಮಸೂದೆಯು ಆರ್ ಟಿ ಐ ಯನ್ನು ದುರ್ಬಲಗೊಳಿಸುತ್ತದೆ ಮತ್ತು ಅದರ ಉಗುರು-ಹಲ್ಲುಗಳನ್ನು ಕಿತ್ತುಕೊಂಡು ಸಾಧು ಪ್ರಾಣಿಯಾಗಿಸುವ ಉದ್ದೇಶವನ್ನು ಈ ತಿದ್ದುಪಡಿ ಹೊಂದಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಇದೀಗ ಆ ಟೀಕೆಯನ್ನು ಸಮರ್ಥಿಸುವ ಅಂಕಿ ಅಂಶಗಳು ಬಿಡುಗಡೆಗೊಂಡಿವೆ. ಮಾಹಿತಿಯನ್ನು ಅಪೇಕ್ಷಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ಗೌಪ್ಯತೆಯ ಹೆಸರಲ್ಲೋ ವಿನಾಕಾರಣವೋ ತಿರಸ್ಕರಿಸುವ ಅಥವಾ ತಡೆದಿರಿಸುವ ಪ್ರಕರಣಗಳಲ್ಲಿ ಭಾರೀ ಸಂಖ್ಯೆಯ ಏರಿಕೆಯಾಗಿದೆ ಎಂಬ ಅಂಶ ಬಯಲಾಗಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಅರ್ಜಿಗೆ ನೀಡಲಾದ ಉತ್ತರವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು. ‘ಭಾರತದ ಮಾಹಿತಿ ಆಯೋಗದ ಕಾರ್ಯ ನಿರ್ವಹಣೆಯ ಮೇಲಿನ ರಿಪೋರ್ಟ್ ಕಾರ್ಡ್’ (Report card on the performance of information commission in India) ಎಂಬ ಹೆಸರಲ್ಲಿ ‘ಸ್ಟಾರ್ಕ್ ನಾಗರಿಕ್ ಸಂಘಟನ್’ ಮತ್ತು ‘ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್’ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಈ ಅಧ್ಯಯನ ವರದಿಯಲ್ಲಿ ಆರ್ ಟಿ ಐಯನ್ನು ಹೇಗೆ ನಿಧಾನವಾಗಿ ಸಾಯಿಸುತ್ತಾ ಬರಲಾಗುತ್ತಿದೆ ಎಂಬ ದಂಗುಬಡಿಸುವ ವಿವರಗಳಿವೆ. ರಾಜ್ಯ ಮತ್ತು ಕೇಂದ್ರದ ಒಟ್ಟು 22 ಮಾಹಿತಿ ಹಕ್ಕು ಆಯೋಗಗಳ ಕಾರ್ಯ ನಿರ್ವಹಣೆಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. 2018 ಜನವರಿಯಿಂದ 2019 ಮಾರ್ಚ್ ವರೆಗೆ ದಾಖಲಾದ ಒಟ್ಟು ಅರ್ಜಿಗಳ ಪೈಕಿ 1.17 ಲಕ್ಷ ಅರ್ಜಿಗಳನ್ನು ಈ ಅಧ್ಯಯನವು ಪರಿಶೀಲನೆಗೆ ಒಳಪಡಿಸಿದ್ದು, ಫಲಿತಾಂಶ ಅತ್ಯಂತ ನಿರಾಶಾಜನಕವಾದುದು.
ಆರ್.ಟಿ.ಐ. ಕಲಂ 20ರ ಪ್ರಕಾರ 68,900 ಪ್ರಕರಣಗಳಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆಯು ಕಠಿಣ ದಂಡನೆಗೆ ಅರ್ಹವಾಗಿದ್ದರೂ ಕೇವಲ 2091 ಪ್ರಕರಣಗಳಲ್ಲಿ ಮಾತ್ರ ದಂಡನಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿದೆ. ಈ ಅನುಪಾತ ಎಷ್ಟು ಜುಜುಬಿ ಎಂದರೆ, ಬರೇ 3%. ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ನಿರ್ಲಕ್ಷ್ಯ ತಾಳುವುದು, ವಿನಾಕಾರಣ ತಿರಸ್ಕರಿಸುವುದು ಮತ್ತು ಅವಧಿಗಿಂತ ಹೆಚ್ಚು ಕಾಲ ತಡೆದಿರಿಸುವುದು ಆರ್.ಟಿ.ಐ. ಕಾಯ್ದೆಯ ಪ್ರಕಾರ ದಂಡನಾರ್ಹ ಅಪರಾಧ. ಆದರೆ 2018ರ ಬಳಿಕ ಈ ದಂಡ ವಿಧಿಸುವ ಪ್ರಕ್ರಿಯೆ ಎಷ್ಟು ನಿಧಾನಗೊಂಡಿದೆಯೆಂದರೆ, ಅಧಿಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ತ್ರಿಪುರ, ತಮಿಳುನಾಡು, ಸಿಕ್ಕಿಮ್ ಮತ್ತು ಮಿಜೋರಾಮ್‍ಗಳಲ್ಲಿ ಕಾನೂನು ಉಲ್ಲಂಘಿಸಿದ ಒಬ್ಬನೇ ಒಬ್ಬ ಮಾಹಿತಿ ಹಕ್ಕು ಆಯೋಗದ ಅಧಿಕಾರಿಯ ವಿರುದ್ಧ ದಂಡನಾಕ್ರಮ ಕೈಗೊಳ್ಳಲಾಗಿಲ್ಲ. ನಿಜವಾಗಿ, ಈ ಬಗೆಯ ನಿರ್ಲಕ್ಷ್ಯವು ಅಧಿಕಾರಿಗಳಲ್ಲಿ ಉಡಾಫೆ ಭಾವವನ್ನು ಸೃಷ್ಟಿಸತೊಡಗಿದೆ. ಮಾಹಿತಿ ಕೋರಿ ಬರುವ ಯಾವುದೇ ಅರ್ಜಿಯನ್ನು ನಿರ್ಲಕ್ಷಿಸುವ ಮನೋಭಾವವನ್ನು ಅಧಿಕಾರಿಗಳಲ್ಲಿ ಬೆಳೆಸುವುದಕ್ಕೆ ಇದು ಕಾರಣವಾಗುತ್ತಿದೆ. ಅಂದಹಾಗೆ,
ಆರ್.ಟಿ.ಐ.ಯ ಯಶಸ್ಸು-ವೈಫಲ್ಯ ಅಡಗಿಕೊಂಡಿರುವುದೇ ಅದರ ಕಾಯ್ದೆ-ಕಲಂಗಳಲ್ಲಿ. ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿರ್ದಿಷ್ಟ ಅವಧಿಯೊಳಗೆ ವಿಲೇವಾರಿ ಮಾಡಲೇಬೇಕು ಎಂಬ ಕಠಿಣ ಷರತ್ತು ಆ ಕಾಯ್ದೆಯನ್ನು ಜನಪರಗೊಳಿಸಿದೆ. ಅರ್ಜಿದಾರರ ಮಾಹಿತಿ ಪಡೆಯುವ ಹಕ್ಕನ್ನು ಎತ್ತಿ ಹಿಡಿಯುವ ಮತ್ತು ಯಾವ ಶ್ರಮ ಪಟ್ಟಾದರೂ ಮಾಹಿತಿಯನ್ನು ಒದಗಿಸುವ ಅನಿವಾರ್ಯತೆಯನ್ನು ಕಾಯ್ದೆಯ ನಿಯಮಗಳು ಉಂಟು ಮಾಡುತ್ತವೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಶಿಕ್ಷಿಸುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ. ವಿಷಾದ ಏನೆಂದರೆ,
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆರ್‍ಟಿಐಗೆ ನಿಧಾನ ಸಾವನ್ನು ಕರುಣಿಸಲು ಪ್ರಯತ್ನಿಸುತ್ತಿದೆ ಅನ್ನುವುದು. ಆರ್.ಟಿ.ಐ. ಕಾಯ್ದೆಯನ್ನು ಉಲ್ಲಂಘಿಸುವ ಅಥವಾ ಮಾಹಿತಿ ಕೋರಿ ಸಲ್ಲಿಸಲಾದ ಅರ್ಜಿಗೆ ಚಿಕ್ಕಾಸಿನ ಬೆಲೆಯನ್ನೂ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಈ ಸಾಯಿಸುವ ಆಟದ ಬಹುಮುಖ್ಯ ಭಾಗ. ಜುಲೈಯಲ್ಲಿ ಜಾರಿಗೆ ತರಲಾದ ಆರ್.ಟಿ.ಐ. ತಿದ್ದುಪಡಿ ಮಸೂದೆಯನ್ನೂ ಇದೇ ಪಟ್ಟಿಯಲ್ಲಿಟ್ಟು ನೋಡಬೇಕು. ಮಾಹಿತಿ ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೇವಲ 2018ರಲ್ಲಿ 1.85 ಲಕ್ಷ ಅರ್ಜಿಗಳು ವಿಲೇವಾರಿಯಾಗದೇ ಬಿದ್ದುಕೊಂಡಿವೆ ಎಂದು ವರದಿಯಲ್ಲಿದೆ. ಅಲ್ಲದೇ ಕೇವಲ ಕೇಂದ್ರ ಮಾಹಿತಿ ಆಯೋಗವೊಂದರಲ್ಲೇ 2019 ಅಕ್ಟೋಬರ್ 11ರ ವರೆಗೆ 35 ಸಾವಿರ ಅರ್ಜಿಗಳು ವಿಲೇವಾರಿಯಾಗದೇ ಬಿದ್ದುಕೊಂಡಿವೆ. ಇದರ ಜೊತೆಜೊತೆಗೇ ಇನ್ನೊಂದು ವಿಷಾದಕರ ಸಂಗತಿಯೂ ಇದೆ. 11 ಕೇಂದ್ರ ಮಾಹಿತಿ ಆಯೋಗಗಳ ಪೈಕಿ 4 ಆಯೋಗಗಳ ಖಾಲಿ ಹುದ್ದೆಗಳನ್ನೇ ಇನ್ನೂ ತುಂಬಲಾಗಿಲ್ಲ.
ಮನ್‍ಮೋಹನ್ ಸಿಂಗ್ ಸರಕಾರದ ಬಹುಯಶಸ್ವಿ ಮತ್ತು ಕ್ರಾಂತಿಕಾರಿ ಕ್ರಮಗಳಲ್ಲಿ ಒಂದೆನಿಸಿರುವ ಮಾಹಿತಿ ಹಕ್ಕು ಕಾಯ್ದೆಯು ಆಡಳಿತವನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಬಹುಮುಖ್ಯವಾದದ್ದು. ನಾಗರಿಕನೋರ್ವ ತನಗೆ ಬೇಕಾದ ಯಾವುದೇ ಮಾಹಿತಿಯನ್ನು ಸರಕಾರದಿಂದ ಕೇಳಿ ಪಡೆದುಕೊಳ್ಳುವುದನ್ನು ಸಾಂವಿಧಾನಿಕ ಹಕ್ಕಾಗಿ ಈ ಕಾಯ್ದೆ ಪರಿಗಣಿಸುತ್ತದೆ. ನಾಗರಿಕರು ಕೇಳಿದ ಮಾಹಿತಿಯನ್ನು ಕೊಡಲೇಬೇಕಾದ ಒತ್ತಡವೊಂದನ್ನು ಅಧಿಕಾರಿಗಳ ಮೇಲೆ ಹೇರುತ್ತದೆ. ತಪ್ಪಿದರೆ ದಂಡ ಪ್ರಯೋಗಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ,
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸುವ ಸಲುವಾಗಿ ಆಯಾ ಅಧಿಕಾರಿಗಳು ಶ್ರಮ ಪಡಲೇಬೇಕಾದ ಒತ್ತಡ ನಿರ್ಮಾಣವಾಗಿತ್ತು. ನಿಜವಾಗಿ, ಆರ್‍ಟಿಐ ಕಾರ್ಯಕರ್ತರ ಜೀವ ಅಪಾಯಕ್ಕೆ ಸಿಲುಕತೊಡಗಿದ್ದು ಈ ಕಾರಣದಿಂದಲೇ. ಕಳೆದ ಜುಲೈಯಲ್ಲಿ ಕೇಂದ್ರ ಸರಕಾರವು ಆರ್‍ಟಿಐ ಕಾಯ್ದೆಗೆ ತಂದ ತಿದ್ದುಪಡಿಯು ಆಯೋಗದ ಈ ಸ್ವಾಯತ್ತ ಗುಣಕ್ಕೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಸರಕಾರದ ವಿವಿಧ ಟೆಂಡರ್ ಗಳು, ಕಾಮಗಾರಿಗಳು, ವಿವಿಧ ಯೋಜನೆಗಳು, ಒಪ್ಪಂದಗಳು ಸಹಿತ ಪ್ರತಿಯೊಂದರ ಮೇಲೆಯೂ ಮಾಹಿತಿಯನ್ನು ಅಪೇಕ್ಷಿಸಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಉತ್ತರವನ್ನು ಕೊಡುವುದೆಂದರೆ, ಅದು ಸರಳ ಅಲ್ಲ. ಹಾಗೆ ಕೊಡುವ ಉತ್ತರವು ಬಹುದೊಡ್ಡ ಅವ್ಯವಹಾರ ಮತ್ತು ಹಗರಣವನ್ನು ಬಹಿರಂಗಕ್ಕೆ ತರುವ ಸಾಧ್ಯತೆಯೂ ಇರುತ್ತದೆ. ನಾಗರಿಕನೋರ್ವ ಅತ್ಯಂತ ಕಡಿಮೆ ಖರ್ಚಿನಲ್ಲಿ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳುವ ವ್ಯವಸ್ಥೆ ಇದು. ಆದ್ದರಿಂದಲೇ, ಈ ಕಾಯ್ದೆ ಅತ್ಯಂತ ಜನಪ್ರಿಯವಾಯಿತು. ನಾಗರಿಕರು ತಮಗೆ ಬೇಕಾದ ಮಾಹಿತಿಯನ್ನು ಸಾಂವಿಧಾನಿಕ ಹಕ್ಕು ಎಂಬ ರೀತಿಯಲ್ಲಿ ಕೇಳಿ ಕೇಳಿ ಪಡೆಯತೊಡಗಿದರು. ಆದರೆ ಇದು ಹೀಗೆಯೇ ಮುಂದುವರಿದರೆ ಅಧಿಕಾರಕ್ಕೆ ಸಂಚಕಾರ ತರಬಹುದು ಎಂದು ಆಡಳಿತ ಭಾವಿಸಿರಬೇಕು. ಆದ್ದರಿಂದಲೇ,
ಮಾಹಿತಿ ಆಯೋಗದ ಅಧಿಕಾರಿಗಳಿಂದ ಅಸಹಕಾರ ಚಳವಳಿಯೊಂದು ಅನೌಪಚಾರಿಕವಾಗಿ ಆರಂಭವಾಗಿದೆ. ಆರ್.ಟಿ.ಐ. ಅರ್ಜಿದಾರರನ್ನು ಸುಸ್ತು ಹೊಡೆಸಿ, ನಿಧಾನಕ್ಕೆ ಅವರನ್ನು ಈ ದಾರಿಯಿಂದ ದೂರವಾಗಿಸುವ ಶ್ರಮ ನಡೆಯುತ್ತಿದೆ. ಇದು ಅತ್ಯಂತ ವಿಷಾದನೀಯ ಮತ್ತು ಖಂಡನಾರ್ಹ. 14ನೇ ವರ್ಷದ ಸಮಾರಂಭವು ಮಾಹಿತಿ ಆಯೋಗದ ಶ್ರದ್ಧಾಂಜಲಿ ಸಭೆ ಆಗದಿರಲಿ ಎಂದು ಹಾರೈಸೋಣ.
No comments:
Post a Comment