ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಗೋಲೀಬಾರ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಂಡುಬಂದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಈವರೆಗೂ ಯಾವ ಕ್ರಮವನ್ನೂ ಕೈಗೊಳ್ಳದಿರಲು ಕಾರಣವೇನು? ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‍ರ ನೇತೃತ್ವದ ಮ್ಯಾಜಿಸ್ಟೀರಿಯಲ್ ತನಿಖೆಯ ಬದಲು ನ್ಯಾಯಾಂಗ ತನಿಖೆ ನಡೆಸಬೇಕೆಂಬ ಜಿಲ್ಲೆಯ ಬಹುಜನರ ಬೇಡಿಕೆಯನ್ನು ಸರಕಾರವೇಕೆ ಈವರೆಗೆ ಮಾನ್ಯ ಮಾಡಿಲ್ಲ? ಅದರ ಬದಲು ಪೊಲೀಸರ ಬಂದೂಕಿಗೆ ಬಲಿಯಾದ ಕುಟುಂಬಕ್ಕೆ ಖುದ್ದು ಮುಖ್ಯಮಂತ್ರಿಯವರೇ ಘೋಷಿಸಿದ ಪರಿಹಾರವನ್ನು ಹಿಂಪಡೆಯಲಾಗಿದೆ. ಘಟನೆಯ ಕುರಿತು ಅಧ್ಯಯನ ನಡೆಸಲು ಬಂದ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡರನ್ನು ಅವಮಾನಕರವಾಗಿ ನಡೆಸಿಕೊಳ್ಳಲಾಗಿದೆ. ವಿಕ್ಟಿಮ್ಸ್ ಜಸ್ಟಿಸ್ ಫೋರಂ ಸಂಸ್ಥೆಯು ಕಳೆದವಾರ ಪತ್ರಿಕಾಗೋಷ್ಠಿ ನಡೆಸುವುದಕ್ಕೂ ಆರಂಭದಲ್ಲಿ ಪೊಲೀಸರು ತಡೆ ಒಡ್ಡಿ ಆತಂಕ ಸೃಷ್ಟಿಸಿದ್ದಾರೆ. ಇನ್ನೊಂದು ಕಡೆ,
ಬೀದರ್ ನ ಶಾಹೀನ್ ಶಾಲೆಯಲ್ಲಿ ಪ್ರದರ್ಶಿಸಲಾದ ನಾಟಕದ ನೆಪದಲ್ಲಿ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ನಾಲ್ಕೈದು ದಿನಗಳ ಕಾಲ ಪ್ರಾಥಮಿಕ ಶಾಲೆಯ ಮಕ್ಕಳನ್ನು ಹೆತ್ತವರ ಅನುಪಸ್ಥಿತಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಓರ್ವ ಶಿಕ್ಷಕಿ ಮತ್ತು ಓರ್ವ ತಾಯಿಯನ್ನು ಜೈಲಿಗಟ್ಟಿದ್ದಾರೆ. ಈ ಕ್ರಮಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪರಾಗಲಿ, ಗೃಹಸಚಿವ ಬೊಮ್ಮಾಯಿಯಾಗಲಿ ಏನನ್ನೂ ಮಾಡುತ್ತಿಲ್ಲ. ಇವೆಲ್ಲ ಏನು? ಪೊಲೀಸರು ತಪ್ಪನ್ನೇ ಮಾಡಿಲ್ಲ ಅನ್ನುವುದು ಸರಕಾರದ ನಿಲುವೇ? ಅಥವಾ ಸರಕಾರದ ಸೂಚನೆ ಪ್ರಕಾರವೇ ಇವೆಲ್ಲ ನಡೆದಿದೆಯೇ?
ಪ್ರಜಾತಾಂತ್ರಿಕ ರಾಷ್ಟ್ರವಾಗಿದ್ದೂ ಅತ್ಯಂತ ಕನಿಷ್ಠ ಪ್ರಜಾಪ್ರಭುತ್ವ ಅವಕಾಶಗಳನ್ನು ಹೊಂದಿರುವ 165 ರಾಷ್ಟ್ರಗಳ ಪಟ್ಟಿಯನ್ನು ಇತ್ತೀಚೆಗೆ ಬ್ರಿಟನ್ನಿನ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ಬಿಡುಗಡೆಗೊಳಿಸಿತ್ತು. ಇದರಲ್ಲಿ ಭಾರತಕ್ಕೆ ದಕ್ಕಿರುವ ಸ್ಥಾನ 51ನೆಯದು. ಇದು ಕಳೆದ ವರ್ಷಕ್ಕಿಂತ 10 ಸ್ಥಾನಗಳಷ್ಟು ಕಡಿಮೆ. ಇದಕ್ಕೆ ಕಾಶ್ಮೀರದ ಪರಿಸ್ಥಿತಿ ಮತ್ತು ಸಿಎಎ ಮತ್ತು ಎನ್‍ಆರ್ ಸಿಗಳೇ ಕಾರಣವೆಂದು ಅದು ಒತ್ತಿ ಹೇಳಿದೆ. ಈ ಕಾಯ್ದೆಗಳು ಪ್ರಜಾತಾಂತ್ರಿಕ ಗುಣವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಜನರ ಸಹಜ ಹಕ್ಕುಗಳನ್ನು ಮಾನ್ಯ ಮಾಡುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಸುದ್ದಿ ಸಂಸ್ಥೆಯು ವ್ಯಕ್ತಪಡಿಸಿದೆ. ನಿಜವಾಗಿ,
ಈ ದೇಶದಲ್ಲಿ ಇವತ್ತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಜಗತ್ತಿನ ಯಾವ ರಾಷ್ಟ್ರವೂ ತೃಪ್ತಿಯನ್ನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 100ರಷ್ಟು ವಿದೇಶ ಯಾತ್ರೆ ಮಾಡಿದ್ದರೂ ಇವತ್ತು ಅವುಗಳಲ್ಲಿ ಯಾವೊಂದು ರಾಷ್ಟ್ರವೂ ಸಿಎಎ ಅಥವಾ ಎನ್‍ಆರ್ ಸಿ ಪ್ರಕ್ರಿಯೆಗೆ ಬೆಂಬಲ ಸೂಚಿಸಿಲ್ಲ. ಅದರ ಬದಲು ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್‍ನಲ್ಲಿ ಈ ಬಗ್ಗೆ ಚರ್ಚೆಯಾಗುವಂತಹ ಅತ್ಯಂತ ಅಭೂತಪೂರ್ವ ಘಟನೆ ನಡೆಯಿತು. ಯುರೋಪಿಯನ್ ಯೂನಿಯನ್‍ನ ಬಹುತೇಕ ಎಲ್ಲ ರಾಷ್ಟ್ರಗಳಿಗೂ ಪ್ರಧಾನಿ ಮೋದಿ ಭೇಟಿ ಕೊಟ್ಟ ಬಳಿಕ ನಡೆದಿರುವ ಘಟನೆ ಇದು. ಯುರೋಪಿಯನ್ ಯೂನಿಯನ್‍ನ ಕೆಲವು ಸಂಸದರು ಕಾಶ್ಮೀರಕ್ಕೆ ಭೇಟಿ ಕೊಟ್ಟ ಬಳಿಕದ ಬೆಳವಣಿಗೆ ಇದು ಎಂಬುದೂ ಗಮನಾರ್ಹ.
ಐದು ಟ್ರಿಲಿಯನ್ ಡಾಲರ್ ಮೊತ್ತದ ಅರ್ಥವ್ಯವಸ್ಥೆಯನ್ನು ಹೊಂದುವ ಕನಸಿನೊಂದಿಗೆ ಮರಳಿ ಅಧಿಕಾರಕ್ಕೇರಿದ ಪ್ರಧಾನಿ ಮೋದಿಯವರು ಸದ್ಯ ದೇಶದ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದ ಸ್ಥಿತಿಗೆ ತಲುಪಿಸಿದ್ದಾರೆ. ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಅತ್ತ ಪಾರ್ಲಿಮೆಂಟ್‍ನಲ್ಲಿ ಬಜೆಟ್ ಮಂಡಿಸುತ್ತಿದ್ದಾಗ ಇತ್ತ ಶೇರು ಮಾರುಕಟ್ಟೆಯಲ್ಲಿ ಅಚ್ಚರಿದಾಯಕ ಕುಸಿತ ಉಂಟಾಯಿತು. ಯಾವುದೇ ಸರಕಾರದ ಪಾಲಿಗೆ ಇಂಥ ಬೆಳವಣಿಗೆ ಆತಂಕಕಾರಿ. ದೇಶದ ಆರ್ಥಿಕ ಸ್ಥಿತಿಗೆ ಉತ್ತೇಜನವನ್ನು ನೀಡಲು ಬಜೆಟ್ ವಿಫಲವಾಗಿದೆ ಎಂಬುದರ ಸೂಚನೆ ಇದು. ಔದ್ಯೋಗಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಕೃಷಿ, ಕೈಗಾರಿಕೆ, ಚಿಲ್ಲರೆ ಮಾರಾಟ ಕ್ಷೇತ್ರ.. ಇತ್ಯಾದಿ ಎಲ್ಲವೂ ಮಂಕು ಕವಿದ ಸ್ಥಿತಿಯಲ್ಲಿರುವಾಗ ಅದಕ್ಕೆ ಗಮನ ಕೊಡುವ ಬದಲು ಆಂತರಿಕ ಕ್ಷೋಭೆಗೆ ಕಾರಣವಾಗುವ ಕಾಯ್ದೆಗಳ ಹಿಂದೆ ಕೇಂದ್ರ ಸರಕಾರ ಬಿದ್ದಿರುವುದೇಕೆ? ಒಂದೋ, ಕೆಟ್ಟು ಹೋಗಿರುವ ಅರ್ಥವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಕೇಂದ್ರ ಸರಕಾರದ ಬಳಿ ಯಾವುದೇ ಯೋಜನೆಗಳಿಲ್ಲ ಅಥವಾ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್ ಸಿಗಳಿಗೆ ಭಾರತೀಯರಿಂದ ಈ ಮಟ್ಟಿಗೆ ಪ್ರತಿರೋಧವನ್ನು ಸರಕಾರ ನಿರೀಕ್ಷಿಸಿರಲಿಲ್ಲ ಎಂದೇ ಇದರ ಅರ್ಥ. ಸಿಎಎ ಮೂಲಕ ಭಾರತೀಯರನ್ನು ಹಿಂದೂ ಮುಸ್ಲಿಮ್ ಆಗಿ ವಿಭಜಿಸಬಹುದು ಮತ್ತು ದೀರ್ಘಕಾಲೀನ ರಾಜಕೀಯ ಫಸಲನ್ನು ಈ ಮೂಲಕ ಪಡೆಯಬಹುದು ಎಂಬ ಭರವಸೆಯಲ್ಲಿದ್ದ ಪ್ರಭುತ್ವಕ್ಕೆ ಇವತ್ತು ದೇಶದ ಬೀದಿ ಬೀದಿಗಳು ಉತ್ತರ ಹೇಳುತ್ತಿವೆ. ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದಿರುವುದೂ ಇಂಥದ್ದೇ ಒಂದು ನಾಗರಿಕ ಅಸಂತೃಪ್ತಿ.
ಇವತ್ತು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳೊಂದಿಗೆ ಡಿಸೆಂಬರ್ 19ರ ಮಂಗಳೂರಿನ ಪ್ರತಿಭಟನೆಯನ್ನು ಹೋಲಿಸಿ ನೋಡಿದರೆ ಅದು ಗುಂಡಿಕ್ಕಿ ನಿಯಂತ್ರಿಸಬೇಕಾದ ಪ್ರತಿಭಟನೆಯಾಗಿತ್ತು ಎಂದು ಯಾರೂ ಹೇಳಲಾರರು. ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳ ಜಾಥಾದ ಮೇಲೆ ಪೊಲೀಸರ ಎದುರೇ ನಡುಬೀದಿಯಲ್ಲಿ ನಿಂತು ಗುಂಡು ಹಾರಿಸಿದ ಭಕ್ತ ರಾಮಗೋಪಾಲನನ್ನೇ ಸುರಕ್ಷಿತವಾಗಿ ಬಂಧಿಸಿದ ಮತ್ತು ಆತನ ಮೇಲೆ ಗುಂಡು ಹಾರಿಸದೇ ಸಂಯಮವನ್ನು ಕಾಯ್ದುಕೊಂಡ ಘಟನೆ ರಾಜಧಾನಿ ದೆಹಲಿಯಲ್ಲೇ ನಡೆದಿರುವಾಗ ಮಂಗಳೂರಿನ ನಿರಾಯುಧ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬಂದೂಕಿನ ಮೊರೆ ಹೋದದ್ದೇಕೆ ಎಂಬ ಪ್ರಶ್ನೆ ಬಾಲಿಶ ಅಲ್ಲ. ಡಿಸೆಂಬರ್ 19ರ ಬಳಿಕದಿಂದ ಇಂದಿನವರೆಗೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿದಿನ ನೂರಾರು ಪ್ರತಿಭಟನಾ ಸಭೆಗಳು, ರ್ಯಾಲಿಗಳು ನಡೆಯುತ್ತಿವೆ. ಲಕ್ಷಾಂತರ ಮಂದಿ ಭಾಗವಹಿಸುತ್ತಲೂ ಇದ್ದಾರೆ. ಆದರೆ, ಅಲ್ಲೆಲ್ಲೂ ನಿಯಂತ್ರಣಾತೀತವೆನಿಸದ ಪ್ರತಿಭಟನೆಗಳು ಮಂಗಳೂರಿನ ಜುಜುಬಿ 200ರಷ್ಟು ಪ್ರತಿಭಟನಾಕಾರರೇಕೆ ಅಪಾಯಕಾರಿ ಎನಿಸಿದರು? ಬಂದೂಕಿನ ಹೊರತು ಇವರನ್ನು ನಿಯಂತ್ರಿಸಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದರೆ, ಅದನ್ನು ಯಾಕಾಗಿ ನಂಬಬೇಕು?
ಈ ಘಟನೆಯ ಬಳಿಕ ಎರಡು ಹಂತಗಳಲ್ಲಿ ಸಿಸಿಟಿವಿ ಫೂಟೇಜ್‍ಗಳು ಬಿಡುಗಡೆಯಾಗಿವೆ. ಪೊಲೀಸರ ಕ್ರಮ ಅತಿರೇಕದ್ದಾಗಿತ್ತು ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಮಾತುಗಳು ತೀವ್ರ ಜನಾಂಗೀಯ ಹಾಗೂ ಹತ್ಯಾ ಮನಸ್ಥಿತಿಯದ್ದಾಗಿತ್ತು ಅನ್ನುವುದನ್ನು ಆ ಫೂಟೇಜ್‍ಗಳು ಸ್ಪಷ್ಟಪಡಿಸಿದ್ದುವು. ಪೊಲೀಸ್ ಆಯುಕ್ತರು ಮಾಧ್ಯಮಗಳ ಮುಂದೆ ಏನೆಲ್ಲ ಸಮರ್ಥನೆಗಳನ್ನು ಕೊಟ್ಟಿದ್ದರೋ ಅವೆಲ್ಲವನ್ನೂ ಸಿಸಿಟಿವಿ ಫೂಟೇಜ್‍ಗಳು ಪ್ರಶ್ನೆಗೊಳಪಡಿಸಿದ್ದುವು. ಪೊಲೀಸರು ಕರ್ತವ್ಯಲೋಪ ಎಸಗಿದ್ದಾರೆ ಅನ್ನುವುದನ್ನು ಸಾಮಾನ್ಯ ನಾಗರಿಕನೂ ಅಂದುಕೊಳ್ಳುವುದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಇವು ಒದಗಿಸಿದ್ದುವು. ಅಲ್ಲದೇ, ಮೇಲ್ನೋಟಕ್ಕೆ ಪೊಲೀಸರ ಕರ್ತವ್ಯಲೋಪ ಮನದಟ್ಟಾದುದರಿಂದಲೇ ಮುಖ್ಯಮಂತ್ರಿಯವರೂ ಸ್ಥಳದಲ್ಲೇ ಪರಿಹಾರವನ್ನು ಘೋಷಿಸಿದ್ದು. ಆದರೆ ಆ ಬಳಿಕ ಇಡೀ ಪ್ರಕರಣವನ್ನು ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ನೋಡಲಾಯಿತು. ಪೊಲೀಸರನ್ನು ರಕ್ಷಿಸುವುದಕ್ಕೆ ಷಡ್ಯಂತ್ರ ರೂಪಿಸಲಾಯಿತು. ಎಲ್ಲಿಯವರೆಗೆಂದರೆ, ಪೊಲೀಸ್ ಆಯುಕ್ತರನ್ನು ಮತ್ತು ಹತ್ಯೆಗೆ ಪ್ರಚೋದನೆ ಕೊಟ್ಟ ಪೊಲೀಸರನ್ನು ಕನಿಷ್ಠ ಅಮಾನತುಗೊಳಿಸದೆಯೇ ಉಳಿಸಿಕೊಳ್ಳಲಾಯಿತು. ನಿಜವಾಗಿ,
ತನಿಖೆ ಮುಗಿಯುವವರೆಗೆ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸುವುದು ನ್ಯಾಯಯುತ ಬೇಡಿಕೆ ಆಗಿದ್ದರೂ ಅದನ್ನು ಸರಕಾರ ಲೆಕ್ಕಿಸಲಿಲ್ಲ. ಘಟನೆಯ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನೂ ತಳ್ಳಿ ಹಾಕಲಾಯಿತು. ಇದರಿಂದ ಪ್ರೇರಣೆಗೊಂಡ ಪೊಲೀಸರು ವ್ಯವಸ್ಥೆಯು ನಿವೃತ್ತ ಸುಪ್ರೀಮ್ ನ್ಯಾಯಾಧೀಶರನ್ನೇ ಅವಮಾನಿಸುವ ಧೈರ್ಯ ತೋರಿದರು. ಘಟನೆಯ ಕುರಿತು ಅಧ್ಯಯನ ನಡೆಸುವ, ಸಂತ್ರಸ್ತರ ಅಹವಾಲುಗಳನ್ನು ಆಲಿಸುವ ಯಾವುದೇ ಪ್ರಯತ್ನವನ್ನೂ ವಿಫಲಗೊಳಿಸುವುದಕ್ಕೆ ಮುಂದಾದರು. ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡದಂತೆ ಹೊಟೇಲುಗಳಿಗೆ ಎಚ್ಚರಿಕೆಗಳನ್ನು ನೀಡಿದರು. ಒಂದು ರೀತಿಯಲ್ಲಿ,
ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಏನು ನಡೆದಿದೆಯೋ ಅದಕ್ಕೆ ಪೊಲೀಸರೇ ನೇರ ಹೊಣೆ ಎಂಬುದಕ್ಕೆ ಇವೆಲ್ಲ ಬಲವಾದ ಸಾಕ್ಷ್ಯಗಳು. ಆದ್ದರಿಂದ, ನ್ಯಾಯಾಂಗ ತನಿಖೆ ಅತ್ಯಂತ ಅಗತ್ಯವಾಗಿದೆ. ತಪ್ಪಿತಸ್ಥರ ಪರ ಪ್ರಭುತ್ವವೇ ನಿಂತರೆ ಅದು ಇನ್ನಷ್ಟು ತಪ್ಪುಗಳನ್ನು ಮಾಡುವುದಕ್ಕಷ್ಟೇ ಪೊಲೀಸರಿಗೆ ಪ್ರಚೋದನೆಯನ್ನು ನೀಡುತ್ತದೆ. ಬೀದರ್ ನ ಶಾಹೀನ್ ಘಟನೆ ಇದನ್ನೇ ಹೇಳುತ್ತಿದೆ.
No comments:
Post a Comment