ದೇಶಪ್ರೇಮ ಎಂದರೇನು, ಯಾವುದು ದೇಶದ್ರೋಹ ಎಂಬ ಪ್ರಶ್ನೆಗೆ ಬಿಜೆಪಿ ಪ್ರಣೀತ ಉತ್ತರಗಳು ಎಷ್ಟು ಅಪ್ರಾಯೋಗಿಕ ಮತ್ತು ಅಪಾಯಕಾರಿ ಎಂಬುದಕ್ಕೆ ದೇಶದಲ್ಲಿ ಸದ್ಯ ನಡೆಯುತ್ತಿರುವ ವಿವಿಧ ಬೆಳವಣಿಗೆಗಳು ಸ್ಪಷ್ಟ ಉದಾಹರಣೆಗಳಾಗಿವೆ. ಪಾಕಿಸ್ತಾನವನ್ನು ದ್ವೇಷಿಸುವುದೇ ದೇಶಪ್ರೇಮ ಎಂಬುದಾಗಿ ದೊಡ್ಡ ದನಿಯಲ್ಲಿ ಹೇಳಲು ಪ್ರಾರಂಭಿಸಿದ್ದೇ ಬಿಜೆಪಿ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನೇ ಮುಖ್ಯ ಚುನಾವಣಾ ವಸ್ತುವಾಗಿಸಿದ್ದರು. ಮನ್‍ಮೋಹನ್ ಸಿಂಗ್ ಅವರು ಪಾಕ್‍ಗೆ ಲವ್ ಲೆಟರ್ ಬರೆಯುತ್ತಿದ್ದಾರೆ ಎಂದು ಅಣಕಿಸಿದ್ದರು. ಗಡಿಯಲ್ಲಿ ಉರುಳಿದ ನಮ್ಮ ಓರ್ವ ಯೋಧನ ತಲೆಯ ಬದಲಿಗೆ ಪಾಕ್ ಯೋಧರ ಹತ್ತು ತಲೆಗಳನ್ನು ಉರುಳಿಸಲಾಗುವುದು ಎಂಬ ಹೇಳಿಕೆಯನ್ನೂ ಬಿಜೆಪಿ ನಾಯಕರು ನೀಡಿದ್ದರು. ಮುಂಬೈ ದಾಳಿಯ ರೂವಾರಿ ಅಜ್ಮಲ್ ಕಸಬ್‍ನನ್ನು ಜೈಲಲ್ಲಿರಿಸಿ ಕಾಂಗ್ರೆಸ್ ಬಿರಿಯಾನಿ ತಿನ್ನಿಸುತ್ತಿದೆ ಎಂದೂ ಹೇಳಿದ್ದರು. ಆದರೆ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಅವರು ಅದೇ ಪಾಕಿಸ್ತಾನಕ್ಕೆ ಆಹ್ವಾನವಿಲ್ಲದೆಯೇ ಭೇಟಿಕೊಟ್ಟು ಅಚ್ಚರಿ ಮೂಡಿಸಿದರು. ಮಾತ್ರವಲ್ಲ, ಪಾಕ್‍ಗೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಗೌರವವನ್ನು 2019ರ ಪುಲ್ವಾಮಾ ದಾಳಿಯ ವರೆಗೂ ಹಾಗೆಯೇ ಉಳಿಸಿಕೊಂಡರು. ಪುಲ್ವಾಮಕ್ಕಿಂತ ಮೊದಲು ಪಠಾಣ್‍ಕೋಟ್‍ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಕಾಶ್ಮೀರದ ಗಡಿಯಲ್ಲಿ ಪ್ರತಿನಿತ್ಯ ಗುಂಡಿನ ಚಕಮಕಿ ನಡೆಯುತ್ತಿತ್ತು. ಆದರೂ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಪ್ರಧಾನಿ ಮೋದಿಯವರು ರದ್ದುಪಡಿಸಿರಲಿಲ್ಲ. ಪುಲ್ವಾಮ ದಾಳಿಯ ಬಳಿಕ ಈ ಗೌರವವನ್ನು ರದ್ದುಪಡಿಸಿದರಾದರೂ ಪಾಕ್ ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳದೇ ಉಳಿಸಿಕೊಂಡರು. 2020ರ ಪ್ರಥಮ ತ್ರೈಮಾಸಿಕದಲ್ಲಿ ಭಾರತವು 7.13 ಮಿಲಿಯನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ಪಾಕ್‍ನಿಂದ ಆಮದು ಮಾಡಿಕೊಂಡಿದೆ. 2019ರಲ್ಲಿ (ಫಿಸ್ಕಲ್ ಇಯರ್) ಒಟ್ಟು 495 ಮಿಲಿಯನ್ ಡಾಲರ್ ಮೊತ್ತದ ಉತ್ಪನ್ನಗಳನ್ನು ಪಾಕ್‍ನಿಂದ ಭಾರತ ಆಮದು ಮಾಡಿಕೊಂಡಿದೆ. ಪಾಕ್ ದ್ವೇಷವನ್ನೇ ಚುನಾವಣಾ ವಸ್ತುವಾಗಿಸಿಕೊಂಡ ಪಕ್ಷದ ಸ್ಥಿತಿ ಇದು. ಹಾಗಂತ,
ಪುಲ್ವಾಮಾ ದಾಳಿ ನಡೆದು ಒಂದುವರ್ಷ ಕಳೆದರೂ ಕನಿಷ್ಠ ಚಾರ್ಜ್‍ಶೀಟನ್ನೇ ಈ ವರೆಗೂ ಸಲ್ಲಿಸಲಾಗಿಲ್ಲ. ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವುದು- ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ). 2019 ಫೆಬ್ರವರಿ 14ರಂದು ಜಮ್ಮು-ಶ್ರೀನಗರದ ಹೆದ್ದಾರಿಯ ಪುಲ್ವಾಮ ಎಂಬಲ್ಲಿ ಸಿಆರ್‍ಪಿಎಫ್ ವಾಹನದ ಮೇಲೆ ಕಾರನ್ನು ನುಗ್ಗಿಸಿ ಸ್ಫೋಟಿಸಿದುದರ ಪರಿಣಾಮ 40 ಯೋಧರು ಹುತಾತ್ಮರಾದರು. ಅಚ್ಚರಿ ಏನೆಂದರೆ, ಕಠಿಣ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುವ ಈ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಸ್ಫೋಟಕಗಳನ್ನು ತುಂಬಿರುವ ಕಾರು ಹೇಗೆ ಪ್ರವೇಶಿಸಿತು ಎಂಬುದು. ಆ ಕಾರಲ್ಲಿದ್ದ ಸ್ಫೋಟಕಗಳಂತೂ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುವಂಥದ್ದಾಗಿರಲಿಲ್ಲ. ಅವು ಮಿಲಿಟರಿ ಮದ್ದುಗುಂಡುಗಳ ಸಂಗ್ರಹಾರದಲ್ಲಿ ಇರುವ ಮತ್ತು ಯುದ್ಧ ಸಂದರ್ಭದಲ್ಲಿ ಬಳಸಲಾಗುವ ಉನ್ನತ ದರ್ಜೆಯ ಸ್ಫೋಟಕಗಳಾಗಿದ್ದುವು. ಈ ಸ್ಫೋಟಕಗಳನ್ನು ಅಮೋನಿಯಂ ನೈಟ್ರೇಟ್, ನೈಟ್ರೋ ಗ್ಲಿಸರಿನ್ ಮತ್ತು ಆರ್ ಡಿ ಎಕ್ಸ್ ನಿಂದ ಪ್ಯಾಕ್ ಮಾಡಲಾಗಿತ್ತು. ಇವೆಲ್ಲ ಮಾಹಿತಿಯನ್ನು ತನಿಖಾಧಿಕಾರಿಗಳೇ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಕಾರಿನ ಎಂಜಿನ್ ಬ್ಲಾಕ್ ಈವರೆಗೂ ಪತ್ತೆಯಾಗಿಲ್ಲ. ಕಾರನ್ನು ಚಲಾಯಿಸಿದ ಆದಿಲ್ ಅಹ್ಮದ್ ಧಾರ್ ಸಹಿತ ಆರೋಪಿಗಳೆಂದು ನಂಬಲಾಗಿರುವ ಎಲ್ಲ ಐವರೂ ವಿವಿಧ ಸಂದರ್ಭಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆ. ದಾಳಿಗೆ ಬಳಸಲಾದ ಕಾರನ್ನು ಗೊತ್ತುಪಡಿಸಿದ್ದು ಯಾರು, ಸ್ಫೋಟಕಗಳನ್ನು ಎಲ್ಲಿಂದ ಪಡೆದುಕೊಳ್ಳಲಾಯಿತು ಮತ್ತು ಇದಕ್ಕೆ ಹಣಕಾಸಿನ ನೆರವು ಲಭ್ಯವಾದುದು ಎಲ್ಲಿಂದ ಇತ್ಯಾದಿ ಬಹುಮುಖ್ಯ ಪ್ರಶ್ನೆಗಳೂ ಉತ್ತರವಿಲ್ಲದೇ ಹಾಗೆಯೇ ಬಿದ್ದುಕೊಂಡಿದೆ. ನಿಜಕ್ಕೂ ಅಚ್ಚರಿಯ ಬೆಳವಣಿಗೆ ಇದು. ಈ ಭಯಾನಕ ಕೃತ್ಯದ ಹಿಂದೆ ಪಾಕಿಸ್ತಾನ ಇದೆ ಎಂದು ಹೇಳಿದ ಕೇಂದ್ರ ಸರಕಾರ, ಅದರಾಚೆಗೆ ತನಿಖಾ ವರದಿಯನ್ನು ಬಿಡುಗಡೆಗೊಳಿಸುವುದಕ್ಕಾಗಲಿ, ಚಾರ್ಜ್‍ಶೀಟ್ ಸಲ್ಲಿಸುವುದಕ್ಕಾಗಲಿ ಯಾಕೆ ಆಸಕ್ತಿಯನ್ನು ತೋರಿಸುತ್ತಿಲ್ಲ? ಇದೇವೇಳೆ, ಹುತಾತ್ಮ ಯೋಧರ ಕುಟುಂಬಕ್ಕೆ ಸೂಕ್ತ ಪರಿಹಾರದ ಮೊತ್ತ ಇನ್ನೂ ತಲುಪಿಲ್ಲ ಎಂಬ ತನಿಖಾ ವರದಿಯನ್ನು ದಿ ಕ್ವಿಂಟ್, ದಿ ವೈರ್ ಇತ್ಯಾದಿ ವೆಬ್ ಪತ್ರಿಕೆಗಳು ಪ್ರಕಟಿಸಿವೆ. ಸಂತ್ರಸ್ತ ಯೋಧರ ಕುಟುಂಬಗಳ ಸಂದರ್ಶನವನ್ನೂ ಅವು ಬಿಡುಗಡೆಗೊಳಿಸಿವೆ. ಇವೆಲ್ಲ ಏನು? ಇನ್ನೊಂದು ಕಡೆ,
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿರುವುದಾಗಿ ಆರೋಪಿಸಿ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ದೇಶದ್ರೋಹದಡಿ ಬಂಧಿಸಿದ್ದ ಪೋಲೀಸರು ಒಂದೇ ದಿನದೊಳಗೆ ಸ್ಟೇಷನ್ ಜಾಮೀನಿನ ಮೂಲಕ ಬಿಡುಗಡೆಗೊಳಿಸಿದ್ದಾರೆ. ಇದೇವೇಳೆ, ಬೀದರ್ ನ ಶಾಹೀನ್ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದ ನೆಪದಲ್ಲಿ ಶಿಕ್ಷಕಿ ಮತ್ತು ಓರ್ವ ತಾಯಿಯ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕಿಂತ ಮೊದಲು ಕಲ್ಲಡ್ಕದ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ಬಾಬರಿ ಮಸೀದಿಯ ಧ್ವಂಸವನ್ನು ಮರು ಪ್ರದರ್ಶಿಸಿದ್ದರು. ಬಾಬರಿ ಮಸೀದಿಯ ಧ್ವಂಸ ಕಾನೂನುಬಾಹಿರ ಮತ್ತು ತಪ್ಪು ಎಂದು ಸುಪ್ರೀಮ್ ಕೋರ್ಟ್ ಹೇಳಿದ್ದರೂ ಈ ಶಾಲೆಯಲ್ಲಿ ಬಾಬರಿ ಮಸೀದಿಯ ಪ್ರಾತ್ಯಕ್ಷಿಕೆಯನ್ನು ತಯಾರಿಸಿ ಧ್ವಂಸಗೊಳಿಸಲಾಗಿತ್ತು. ಆದರೆ, ಇದನ್ನು ನ್ಯಾಯಾಂಗ ನಿಂದನೆಯಾಗಿಯೋ ಅಥವಾ ದೇಶದ್ರೋಹವಾಗಿಯೋ ಪೊಲೀಸ್ ಇಲಾಖೆ ಪರಿಗಣಿಸಲೇ ಇಲ್ಲ. ವಿಷಾದ ಏನೆಂದರೆ,
ಇವೆಲ್ಲವೂ ಬಿಜೆಪಿ ಆಡಳಿತದಲ್ಲೇ ನಡೆದಿದೆ ಮತ್ತು ನಡೆಯುತ್ತಿದೆ ಎಂಬುದು. ಒಂದುಕಡೆ, ಪಾಕಿಸ್ತಾನವನ್ನು ದ್ವೇಷಿಸುವುದು ಮತ್ತು ಅದನ್ನೇ ದೇಶಪ್ರೇಮದ ಮಾನದಂಡವಾಗಿ ಬಿಂಬಿಸುವುದು ಹಾಗೂ ಇನ್ನೊಂದು ಕಡೆ, ಅದೇ ಪಾಕ್‍ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಇಟ್ಟುಕೊಳ್ಳುವುದು, ಅದೇ ಪಾಕ್‍ನ ಕೃತ್ಯವೆಂದು ನಂಬಲಾಗಿರುವ ಪುಲ್ವಾಮ ಘಟನೆಯ ತನಿಖಾ ವರದಿಯನ್ನೇ ಬಿಡುಗಡೆಗೊಳಿಸದಿರುವುದು, ಚಾರ್ಜ್ ಸಲ್ಲಿಸದಿರುವುದು... ಇವೆಲ್ಲ ಏನು? ನಿಜವಾಗಿ,
ಪಾಕಿಸ್ತಾನ್ ದ್ವೇಷ ಎಂಬುದು ಬಿಜೆಪಿಯ ರಾಜಕೀಯ ತಂತ್ರವೇ ಹೊರತು ಇನ್ನೇನೂ ಅಲ್ಲ. ಎಲ್ಲಿಯವರೆಗೆ ಪಾಕಿಸ್ತಾನ ದ್ವೇಷದಿಂದ ಓಟುಗಳು ಹುಟ್ಟುತ್ತೋ ಅಲ್ಲಿಯವರೆಗೆ ಈ ದೇಶದಲ್ಲಿ ದೇಶಪ್ರೇಮದ ಪರ್ಯಾಯ ಪದವಾಗಿ ಪಾಕಿಸ್ತಾನ ಇದ್ದೇ ಇರುತ್ತದೆ. ಪಾಕಿಸ್ತಾನದ ವಿರುದ್ಧ ಭಾರತ ಮಾತಾಡುವುದರಿಂದ ರಾಜಕೀಯ ಕ್ಷೇತ್ರದ ಹೊರತಾಗಿ ಇನ್ನಾವ ಕ್ಷೇತ್ರಕ್ಕೂ ಯಾವ ಲಾಭವೂ ಇಲ್ಲ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ದುರ್ಬಲ ರಾಷ್ಟ್ರ. ಅದು ಭಾರತದ ವಿರುದ್ಧ ಯುದ್ಧ ಮಾಡಿ ಜಯಿಸುವ ಸ್ಥಿತಿಯಲ್ಲೇ ಇಲ್ಲ. ಇಂಥದ್ದೊಂದು ದುರ್ಬಲ ರಾಷ್ಟ್ರವನ್ನು ಹಗಲೂ ರಾತ್ರಿ ಭಾರತದಲ್ಲಿ ಗುಮ್ಮನಂತೆ ಬಿಂಬಿಸುವುದು ಬಾಲಿಶತನ. ಅಂದಹಾಗೆ,
124ಂ ಕಲಂನಡಿ ಬರುವ ದೇಶದ್ರೋಹವೆಂಬ ಅಪಾಯಕಾರಿ ತೂಗುಗತ್ತಿಯ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕಾದ ಅಗತ್ಯ ಇದೆ. ದೇಶದ್ರೋಹ ಕಲಂನಡಿ ಯಾವೆಲ್ಲ ಚಟುವಟಿಕೆಗಳು ಬರುತ್ತವೆ, ಪಾಕಿಸ್ತಾನ್ ಜಿಂದಾಬಾದ್ ಎಂಬ ಬರೇ ಘೋಷಣೆಯು (ಅದರ ಅಗತ್ಯವಿದೆಯೇ ಎಂಬುದು ಬೇರೆ ಚರ್ಚೆ) ದೇಶದ್ರೋಹವೆನಿಸುತ್ತದೆಯೇ, ದೇಶದ್ರೋಹದ ವ್ಯಾಖ್ಯಾನ ಏನು, ಇದೇ ರೀತಿ, ನೇಪಾಳ, ಶ್ರೀಲಂಕಾ, ಅಮೇರಿಕ ಜಿಂದಾಬಾದ್ ಎನ್ನಬಹುದೇ ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಮೇಲೂ ಸೂಕ್ತ ಪರಾಮರ್ಶೆ ನಡೆಯಬೇಕಿದೆ. ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ಒಂದು ಘೋಷಣೆ, ಒಂದು ನಾಟಕದ ಸಂಭಾಷಣೆ, ಒಂದು ಭಿತ್ತಿಪತ್ರ, ಒಂದು ಕವನದ ಸಾಲು ದೇಶದ್ರೋಹವಾಗುವುದು ಅಪಾಯಕಾರಿ ಬೆಳವಣಿಗೆ. ಇದು ಪ್ರಜಾತಂತ್ರ ಸರ್ವಾಧಿಕಾರದತ್ತ ಹೊರಳಿರುವುದರ ಲಕ್ಷಣ.
No comments:
Post a Comment