Wednesday, 18 March 2020

48 ಗಂಟೆಗಳ ನಿರ್ಬಂಧವನ್ನು 14 ಗಂಟೆಗಳಲ್ಲೇ ಹಿಂಪಡೆದದ್ದೇಕೆ?



ಕಳೆದವಾರ ಎರಡು ಟಿ.ವಿ. ಚಾನೆಲ್‍ಗಳ ಮೇಲೆ ಕೇಂದ್ರ ಸರಕಾರವು ದಿಢೀರನೆ ಹೇರಿದ ನಿರ್ಬಂಧವು ಎರಡು ಮಹತ್ವಪೂರ್ಣ ಪ್ರಶ್ನೆಗಳನ್ನು ಎತ್ತುತ್ತದೆ.
1. ಎರಡೂ ಚಾನೆಲ್‍ಗಳು ಕೇರಳದ್ದಾಗಿರುವುದು ಕಾಕತಾಳೀಯವೋ ಅಲ್ಲ ಉದ್ದೇಶಪೂರ್ವಕವೋ?
2. ದೆಹಲಿ ಹಿಂಸಾಚಾರದ ಬಗ್ಗೆ ಎನ್‍ಡಿಟಿವಿ ಸೇರಿದಂತೆ ಕೆಲವು ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‍ಗಳು ದಿಟ್ಟವಾಗಿ ವರದಿ ಮಾಡಿರುವಾಗ ಹಾಗೂ ಇವುಗಳೆಲ್ಲವನ್ನೂ ಮೀರಿಸುವಂತೆ ವೆಬ್ ಪತ್ರಿಕೆಗಳು ವರದಿ ಪ್ರಕಟಿಸಿರುವಾಗ ಕೇಂದ್ರ ಸರಕಾರ ತನ್ನ ಗಮನವನ್ನು ಕೇರಳ ಮೇಲೆ ಮಾತ್ರ ಕೇಂದ್ರೀಕರಿಸಲು ಕಾರಣವೇನು?
ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಒಡೆತನದ ಏಷ್ಯಾನೆಟ್ ನ್ಯೂಸ್ ಮತ್ತು ಸ್ವತಂತ್ರ ಪತ್ರಿಕೋದ್ಯಮಕ್ಕೆ ಹೆಸರಾದ ಮೀಡಿಯಾ ವನ್ ಎಂಬೆರಡು ಮಲಯಾಳಂ ಭಾಷೆಯ ಟಿ.ವಿ. ಚಾನೆಲ್‍ಗಳ ಮೇಲೆ ಕಳೆದ ಶುಕ್ರವಾರ (ಮಾರ್ಚ್ 6) ಸಂಜೆ 7.30ರಿಂದ 48 ಗಂಟೆಗಳ ಕಾಲ ಪ್ರಸಾರ ನಿರ್ಬಂಧವನ್ನು ಹೇರಿದ ಕೇಂದ್ರ ಸರಕಾರವು ಅದಕ್ಕೆ ಕೊಟ್ಟ ಕಾರಣ ಹೀಗಿತ್ತು:
‘ದೆಹಲಿ ಹಿಂಸಾಚಾರದ ಕುರಿತಂತೆ ಈ ಎರಡೂ ಚಾನೆಲ್‍ಗಳು ಪ್ರಚೋದನಕಾರಿ ಮತ್ತು ಪಕ್ಷಪಾತದಿಂದ ಕೂಡಿದ ವರದಿಯನ್ನು ಪ್ರಸಾರ ಮಾಡಿವೆ. ಅಲ್ಲದೇ, ಸಿಎಎ ಬೆಂಬಲಿಗ ಪ್ರತಿಭಟನಾಕಾರರನ್ನು ಕೆಟ್ಟದಾಗಿ ಬಿಂಬಿಸಿವೆ ಮತ್ತು ಆರೆಸ್ಸೆಸ್ ಹಾಗೂ ದಿಲ್ಲಿ ಪೊಲೀಸರನ್ನು ಟೀಕಿಸಿವೆ’.
ಅಚ್ಚರಿಯ ಸಂಗತಿ ಏನೆಂದರೆ, ಹೀಗೆ ನಿರ್ಬಂಧ ಹೇರಿದ 5 ಗಂಟೆಯೊಳಗಡೆಯೇ ಏಷ್ಯಾನೆಟ್ ನ್ಯೂಸ್ ಚಾನೆಲ್ ಮೇಲಿನ ನಿರ್ಬಂಧವನ್ನು ಕೇಂದ್ರ ಸರಕಾರ ಹಿಂಪಡೆಯಿತು. 14 ಗಂಟೆಗಳ ಬಳಿಕ ಮೀಡಿಯಾ ವನ್ ಚಾನೆಲ್ ಮೇಲಿನ ನಿರ್ಬಂಧವನ್ನೂ ಹಿಂತೆಗೆದುಕೊಂಡಿತು. ಏಷ್ಯಾನೆಟ್ ನ್ಯೂಸ್ ಕ್ಷಮೆ ಯಾಚಿಸಿದೆ ಎಂಬ ಕಾರಣವನ್ನು ಕೊಟ್ಟ ಕೇಂದ್ರ ಸರಕಾರವು ಮೀಡಿಯಾ ವನ್ ನಿರ್ಬಂಧವನ್ನು ಅಕಾಲಿಕವಾಗಿ ಹಿಂಪಡೆದುದಕ್ಕೆ ಸ್ಪಷ್ಟವಾದ ಯಾವ ಕಾರಣವನ್ನೂ ಕೊಡಲಿಲ್ಲ. ಆದರೆ, ಈ ನಿರ್ಬಂಧದ ವಿರುದ್ಧ ಮೀಡಿಯಾ ವನ್ ಸ್ಪಷ್ಟ ಭಾಷೆಯಲ್ಲಿ ಮಾತಾಡಿತು. ನಿರ್ಬಂಧವನ್ನು ಕಾನೂನು ಪ್ರಕಾರ ಎದುರಿಸುವುದಾಗಿ ಹೇಳುವ ಮೂಲಕ ವ್ಯವಸ್ಥೆಯೊಂದಿಗೆ ರಾಜಿಗೆ ಸಿದ್ಧವಿಲ್ಲ ಎಂಬ ಪ್ರಬಲ ಸಂದೇಶವನ್ನು ರವಾನಿಸಿತು. ಇದಾದ ಬೆನ್ನಿಗೇ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಮಾತ್ರವಲ್ಲ, ಈ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಜಾವಡೇಕರ್ ಅವರ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಅವರ ಗಮನಕ್ಕೆ ತಾರದೆಯೇ ಇಲಾಖೆಯ ಅಧಿಕಾರಿಗಳು ಈ ನಿರ್ಬಂಧವನ್ನು ಹೇರಿರುವರೇ ಅನ್ನುವ ಶಂಕೆಯನ್ನು ಅವರ ಹೇಳಿಕೆಗಳು ಹುಟ್ಟುಹಾಕಿವೆ. ಅಷ್ಟಕ್ಕೂ,
ಹೇರಲಾದ ನಿರ್ಬಂಧವನ್ನು ಎಷ್ಟು ಗಂಟೆಯೊಳಗೆ ಹಿಂಪಡೆಯಲಾಗಿದೆ ಮತ್ತು ಯಾವ ಕಾರಣಕ್ಕಾಗಿ ಹಿಂಪಡೆಯಲಾಗಿದೆ ಎಂಬುದೆಲ್ಲ ಮುಖ್ಯವಲ್ಲ. ಇಲ್ಲಿ ನಿರ್ಬಂಧವೇ ಮುಖ್ಯ ಮತ್ತು ಅದಕ್ಕೆ ನೀಡಲಾದ ಕಾರಣಗಳು ಮತ್ತು ನಿರ್ಬಂಧಕ್ಕೆ ಆಯ್ಕೆ ಮಾಡಲಾದ ಚಾನೆಲ್‍ಗಳೇ ಮುಖ್ಯ. ದಿಲ್ಲಿ ಹಿಂಸಾಚಾರದ ಕುರಿತು ಈ ಎರಡೂ ಚಾನೆಲ್‍ಗಳ ವರದಿಯು ಮಾಧ್ಯಮ ನಿಯಮಾವಳಿಗಳನ್ನು ಮುರಿದಿವೆ ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಖಚಿತವಿದ್ದಲ್ಲಿ ತನ್ನ ಹೇಳಿಕೆಗಳಲ್ಲೂ ಆ ಖಚಿತತೆ ಇರಬೇಕು. ಆದರೆ ಈ ನಿಷೇಧ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿಯವರು ವಿಷಾದ ಸೂಚಿಸಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮಾತ್ರವಲ್ಲ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ. ಇದು ಆಘಾತಕಾರೀ ಹೇಳಿಕೆ. ಕೋಟ್ಯಂತರ ವೀಕ್ಷಕರಿರುವ ಎರಡು ಚಾನೆಲ್‍ಗಳ ಮೇಲೆ ಸಚಿವರ ಗಮನಕ್ಕೆ ತಾರದೆಯೇ ನಿಷೇಧ ಹೇರಲು ಸಾಧ್ಯವೇ? ನಿಷೇಧ ಎಂಬುದು ಮಕ್ಕಳಾಟಿಕೆಯಲ್ಲ. ಅದು ಸ್ವತಂತ್ರ ಮಾಧ್ಯಮವೊಂದರ ಸ್ವಾಭಿಮಾನದ ಪ್ರಶ್ನೆ. ಅದರ ಸಂವಿಧಾನ ಬದ್ಧತೆಯ ಪ್ರಶ್ನೆ. ವಿಶ್ವಾಸಾರ್ಹತೆಯ ಪ್ರಶ್ನೆ. ಇಂಥ ನಿರ್ಬಂಧಗಳಿಂದ ವೀಕ್ಷಕರು ಕಳವಳಗೊಳ್ಳುತ್ತಾರೆ. ತಾವು ವೀಕ್ಷಿಸುತ್ತಿರುವ ಚಾನೆಲ್ ನ್ಯಾಯನಿಷ್ಠವಾಗಿಲ್ಲವೇ ಮತ್ತು ಪೂರ್ವಾಗ್ರಹ ಪೀಡಿತವಾಗಿ ಮತ್ತು ಉದ್ದೇಶಪೂರ್ವಕ ಪ್ರಭುತ್ವ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದೆಯೇ ಎಂದು ಸಂಶಯಗೊಳ್ಳುತ್ತಾರೆ. ಅಲ್ಲದೇ, ಈ ನಿರ್ಬಂಧಕ್ಕೆ ನೀಡಲಾದ ಕಾರಣಗಳಂತೂ ಇಂಥ ಶಂಕೆಗೆ ಪೂರಕವಾಗಿಯೇ ಇದೆ. ಈ ಎರಡೂ ಚಾನೆಲ್‍ಗಳು ದೆಹಲಿ ಪೊಲೀಸರನ್ನು, ಆರೆಸ್ಸೆಸ್ಸನ್ನು ಮತ್ತು ಸಿಎಎ ಬೆಂಬಲಿಗರನ್ನು ಕೆಟ್ಟದಾಗಿ ಚಿತ್ರಿಸಿವೆ ಅಂದರೆ ಏನರ್ಥ? ನಿರ್ದಿಷ್ಟ ಗುಂಪು ಮತ್ತು ವಿಚಾರಧಾರೆಯ ವಿರುದ್ಧ ಈ ಚಾನೆಲ್‍ಗಳು ಹಗೆ ಸಾಧಿಸುತ್ತಿವೆ ಎಂದೇ ಅಲ್ಲವೇ? ಇಷ್ಟೊಂದು ಗಂಭೀರ ಆರೋಪವನ್ನು ಸಚಿವರ ಗಮನಕ್ಕೆ ತಾರದೆಯೇ ಕೇವಲ ಇಲಾಖೆಯ ಅಧಿಕಾರಿಗಳೇ ಹೊರಿಸುತ್ತಾರೆಂಬುದು ಎಷ್ಟರ ಮಟ್ಟಿಗೆ ನಿಜ? ಒಂದುವೇಳೆ,
ಇಷ್ಟೊಂದು ಕ್ರಿಯಾಶೀಲ ಅಧಿಕಾರಿಗಳು ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಇರುವುದು ನಿಜವೇ ಆಗಿದ್ದಲ್ಲಿ, ಡಿ. 19ರ ಮಂಗಳೂರು ಗೋಲಿಬಾರ್ ಘಟನೆಯ ಕುರಿತಂತೆ ಕನ್ನಡ ನ್ಯೂಸ್ ಚಾನೆಲ್‍ಗಳು ವರದಿ, ವಿಶ್ಲೇಷಣೆ ಮಾಡುತ್ತಿದ್ದಾಗ ಇವರೆಲ್ಲ ಎಲ್ಲಿದ್ದರು? ಜಾಮಿಯಾ ಮಿಲ್ಲಿಯಾ ವಿವಿಯ ಒಳನುಗ್ಗಿ ಪೊಲೀಸರು ನಡೆಸಿದ ದಾಂಧಲೆಯನ್ನು ಹೆಚ್ಚಿನ ಇಂಗ್ಲಿಷ್ ಮತ್ತು ಹಿಂದಿ ನ್ಯೂಸ್ ಚಾನೆಲ್‍ಗಳು ಮಾಡಿದ ವರದಿ-ವಿಶ್ಲೇಷಣೆಗಳಿದ್ದುವಲ್ಲ, ಅವೆಲ್ಲ ಹೇಗಿದ್ದುವು? ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಕತ್ತಲೆಯಲ್ಲಿ ಮಾಡಿದ ಆಕ್ರಮಣವನ್ನು ಯಾವೆಲ್ಲ ಚಾನೆಲ್‍ಗಳು ಹೇಗೆಲ್ಲ ವಿಶ್ಲೇಷಣೆಗೊಡ್ಡಿವೆ ಎಂಬ ಬಗ್ಗೆ ಈ ಅಧಿಕಾರಿಗಳಲ್ಲಿ ಯಾವ ಮಾಹಿತಿಯೂ ಇಲ್ಲವೇ? ಇಂಥ ಇನ್ನೂ ಅನೇಕಾರು ಪ್ರಶ್ನೆಗಳಿವೆ. ಅಲ್ಲದೇ, ಪುಟ್ಟ ರಾಜ್ಯವಾದ ಕೇರಳದ ಎರಡು ಚಾನೆಲ್‍ಗಳನ್ನು ಮಾತ್ರ ನಿರ್ಬಂಧಕ್ಕೆ ಆಯ್ದುಕೊಂಡಿರುವುದೇಕೆ ಎಂಬ ಪ್ರಶ್ನೆಯೂ ಮುಖ್ಯವೇ. ಬಿಜೆಪಿಯ ಪಾಲಿಗೆ ಗಂಟಲ ಮುಳ್ಳಾಗಿರುವ ರಾಜ್ಯಗಳ ಪೈಕಿ ಕೇರಳವೇ ಮುಂಚೂಣಿಯಲ್ಲಿದೆ. ಅಲ್ಲಿ ರಾಜಕೀಯ ಹಿಂಸಾಚಾರ ನಡೆಯುತ್ತಿದೆಯೇ ಹೊರತು ಕೋಮು ಹಿಂಸಾಚಾರದ ಇತಿಹಾಸ ಶೂನ್ಯ ಅನ್ನುವಷ್ಟು ಕಡಿಮೆ. ಬಿಜೆಪಿ ಪ್ರಣೀತ ಆಹಾರ ಕ್ರಮಕ್ಕೆ ಪ್ರಬಲ ಪ್ರತಿರೋಧ ಎದುರಾಗಿರುವುದು ಕೇರಳದಲ್ಲೇ. ಸಿಎಎ ವಿರುದ್ಧ ವಿಧಾನ ಸಭೆಯಲ್ಲಿ ಪ್ರಸ್ತಾಪ ಅಂಗೀಕರಿಸಿದ ಮೊದಲ ರಾಜ್ಯ ಕೇರಳ. ಎನ್‍ಪಿಆರ್ ಅನ್ನು ತಿರಸ್ಕರಿಸಿರುವ ರಾಜ್ಯಗಳ ಪಟ್ಟಿಯಲ್ಲೂ ಕೇರಳಕ್ಕೆ ಅಗ್ರಸ್ಥಾನವಿದೆ. ಬಿಜೆಪಿಯ ವಿಚಾರಧಾರೆಗೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಚಳವಳಿಯೊಂದು ಕೇರಳದಲ್ಲಿ ಯಶಸ್ವಿಯಾಗಿ ಬೆಳೆದಿದ್ದರೆ ಅದಕ್ಕೆ ಮಲಯಾಳಂ ಭಾಷೆಯ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಿಗೆ ಬಹುಮುಖ್ಯ ಪಾತ್ರವಿದೆ. ಅವು ಕೋಮು ಪಕ್ಷಪಾತ ಮತ್ತು ಪ್ರಭುತ್ವ ಗುಲಾಮತ್ವದಿಂದ ಮುಕ್ತವಾಗಿ ವರ್ತಿಸಿದ್ದೇ ಹೆಚ್ಚು. ಹಿಂದೂ-ಮುಸ್ಲಿಮ್ ಎಂದು ಸಮಾಜವನ್ನು ವಿಭಜಿಸುವ ಬದಲು ಸಮಾಜವಾದ, ಬಂಡವಾಳಶಾಹಿತ್ವ, ಫ್ಯಾಸಿಸಂ ಇತ್ಯಾದಿ ಸಿದ್ಧಾಂತ ಆಧಾರಿತ ಚರ್ಚೆಗಳಿಗೆ ಅವು ಹೆಚ್ಚು ಮಹತ್ವ ಕೊಟ್ಟವು ಮತ್ತು ಈಗಲೂ ಆ ಪರಂಪರೆಯನ್ನು ಉಳಿಸಿಕೊಂಡಿವೆ. ರಾಜಕೀಯವಾಗಿ ಬಿಜೆಪಿ ಕೇರಳದಲ್ಲಿ ಈವರೆಗೂ ಮಹತ್ವಪೂರ್ಣ ಸಾಧನೆಯನ್ನು ಮಾಡಿಲ್ಲದೇ ಇರುವುದಕ್ಕೆ ಅಲ್ಲಿನ ಮಾಧ್ಯಮ ಕ್ಷೇತ್ರದಲ್ಲಿರುವ ಈ ಪ್ರಜ್ಞಾವಂತಿಕೆಯೂ ಬಹುಮುಖ್ಯ ಕಾರಣ ಎಂದೂ ಹೇಳಬೇಕಾಗುತ್ತದೆ. ಬಹುಶಃ, ಪುಟ್ಟ ರಾಜ್ಯದಿಂದ ಎದುರಾಗಿರುವ ಈ ಪ್ರತಿರೋಧವನ್ನು ಸಹಿಸಿಕೊಳ್ಳಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಅಲ್ಲಿನ ಮಾಧ್ಯಮಗಳನ್ನು ನಿಯಂತ್ರಿಸದೇ ಹೋದರೆ ಕೇರಳ ಎಂದೆಂದೂ ಮರೀಚಿಕೆಯಾಗಿಯೇ ಉಳಿಯಲಿದೆ ಎಂಬುದು ಬಿಜೆಪಿಗೆ ಖಚಿತವಾಗಿ ಮನವರಿಕೆಯಾಗಿದೆ. ಇದರ ಭಾಗವಾಗಿಯೇ ನಿರ್ಬಂಧವನ್ನು ಹೇರಲಾಗಿದೆ. ಇದೊಂದು ಬೆದರಿಕೆಯ ತಂತ್ರ. ನಿಷೇಧಕ್ಕೆ ಎರಡೂ ಚಾನೆಲ್‍ಗಳ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಕೇರಳದ ನಾಗರಿಕರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎಂಬುದನ್ನು ನೋಡುವ ಉದ್ದೇಶವೂ ಕೇಂದ್ರ ಸರಕಾರಕ್ಕಿತ್ತು. ಪಕ್ಕದ ಕರ್ನಾಟಕದ ಪ್ರಮುಖ ಸುದ್ದಿವಾಹಿನಿಗಳು ಮತ್ತು ಹೆಚ್ಚಿನ ಪತ್ರಿಕೆಗಳು ಕೇಂದ್ರ ಸರಕಾರದ ಮುಂದೆ ತೆವಳುವುದನ್ನು ಗೌರವವೆಂದು ಬಗೆದಿರುವ ಈ ಹೊತ್ತಿನಲ್ಲಿ ಕೇರಳದ ಮಾಧ್ಯಮಗಳಿಂದ ಸಣ್ಣಮಟ್ಟದ ಜಿ ಹುಜೂರ್ ನೀತಿಯನ್ನು ಬಯಸುವುದೂ ಇದರ ಉದ್ದೇಶವಾಗಿತ್ತು. ಆದರೆ ಕೇರಳೀಯ ನಾಗರಿಕರು ಪಕ್ಷ  ಭೇದವಿಲ್ಲದೇ ಮತ್ತು ವಿಚಾರ ಭೇದವಿಲ್ಲದೇ ದೊಡ್ಡ ದನಿಯಲ್ಲಿ ಈ ನಿರ್ಬಂಧವನ್ನು ವಿರೋಧಿಸಿದರು. ಮೀಡಿಯಾ ವನ್ ಚಾನೆಲ್ ಅಂತೂ ಕಾನೂನು ಹೋರಾಟಕ್ಕೆ ಮುಂದಾಯಿತೇ ಹೊರತು ತೆವಳಲು ಸಿದ್ಧವಾಗಲಿಲ್ಲ. ಕೊನೆಗೆ ವಾರ್ತಾ ಇಲಾಖೆಯ ಅಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ ನಿರ್ಬಂಧವನ್ನು ಹಿಂತೆಗೆದುಕೊಳ್ಳುವ ಮೂಲಕ ಕೇಂದ್ರ ಸರಕಾರ ಕೈ ತೊಳೆದುಕೊಂಡಿತು.
ನಿಜಕ್ಕೂ, ಇದು ತೆವಳಲು ಸಿದ್ಧವಾಗಿರುವ ಮಾಧ್ಯಮ ಮಂದಿಗಾದ ಸೋಲು ಮತ್ತು ಉಳಿದವರ ಗೆಲುವು.

No comments:

Post a Comment