ಜಾಹೀರಾತನ್ನು ಅವಲಂಬಿಸಿಕೊಳ್ಳದೇ ಕೇವಲ ಮೌಲ್ಯಕ್ಕೆ ಮಾತ್ರ ನಿಷ್ಠವಾಗಿದ್ದುಕೊಂಡು 42 ವರ್ಷಗಳಿಂದ ಪತ್ರಿಕೆಯೊಂದು ನಿರಂತರ ಪ್ರಕಟವಾಗುತ್ತಿದೆಯೆಂದರೆ, ಆ ಪತ್ರಿಕೆಯ ಪಾಲಿಗೆ ಅದುವೇ ಬಹುದೊಡ್ಡ ಸಾಧನೆ. ಸನ್ಮಾರ್ಗ ಪತ್ರಿಕೆಗೆ 42 ವರ್ಷಗಳು ತುಂಬಿವೆ. 8 ಪುಟಗಳು ಮತ್ತು 40 ಪೈಸೆಯ ಬೆಲೆಯೊಂದಿಗೆ 1978 ಎಪ್ರಿಲ್ 23ರಂದು ಆರಂಭವಾದ ಪತ್ರಿಕೆಯು ಈಗ 16 ಪುಟಗಳು ಮತ್ತು 15 ರೂಪಾಯಿಗೆ ಓದುಗರ ಕೈ ಸೇರುತ್ತಿದೆ. ಮಾತ್ರವಲ್ಲ, ಸನ್ಮಾರ್ಗ ವೆಬ್‍ಸೈಟ್‍ನ ಮೂಲಕ ಕ್ಷಣಕ್ಷಣದ ಸುದ್ದಿಗಳನ್ನೂ ಓದುಗರಿಗೆ ತಲುಪಿಸಲಾಗುತ್ತಿದೆ. ಇದೇವೇಳೆ, ಸನ್ಮಾರ್ಗ ಆರಂಭವಾಗುವಾಗ ಇದರ ಬೆನ್ನಿಗೇ ನಿಂತವರು, ವಿವಿಧ ರೀತಿಯಲ್ಲಿ ಬೆಂಬಲ ನೀಡಿದವರು, ಪತ್ರಿಕೆಯನ್ನು ಜನಪ್ರಿಯಗೊಳಿಸಲು ರಾಜ್ಯದುದ್ದಕ್ಕೂ ಪ್ರವಾಸ ಮಾಡಿದವರಲ್ಲಿ ಅನೇಕರು ಇವತ್ತು ಪತ್ರಿಕೆಯ 43ನೇ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದಕ್ಕೆ ನಮ್ಮ ಜೊತೆ ಇಲ್ಲ. ಪತ್ರಿಕೆಯನ್ನು ಪ್ರತಿವಾರ ಚಾತಕ ಪಕ್ಷಿಯಂತೆ ಕಾಯುತ್ತಿದ್ದವರು ಮತ್ತು ಪತ್ರಿಕೆ ತಲುಪಲು ಒಂದುದಿನ ತಡವಾದರೂ ಕರೆ ಮಾಡಿ ಬೇಸರ ತೋಡಿಕೊಳ್ಳುತ್ತಿದ್ದ ಓದುಗರಲ್ಲಿ ಅನೇಕರು ಇವತ್ತು ನಮ್ಮ ಜೊತೆ ಇಲ್ಲ. ಪತ್ರಿಕೆಯ ಪ್ರಧಾನ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು ನೂರ್ ಮುಹಮ್ಮದ್ ಕೂಡಾ ಪತ್ರಿಕೆಯ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ನಮ್ಮ ಜೊತೆ ಇಲ್ಲ. 42 ವರ್ಷಗಳ ದೀರ್ಘ ಪಯಣದ ಹಾದಿಯಲ್ಲಿ ಇವೆಲ್ಲ ಸಹಜ ಮತ್ತು ಅನಿವಾರ್ಯ ಎಂಬುದು ನಿಜವೇ ಆಗಿದ್ದರೂ ಅವರಿಲ್ಲ ಅನ್ನುವ ಸಂಕಟವೂ ಅಷ್ಟೇ ಸಹಜ ಅನ್ನಬೇಕಾಗುತ್ತದೆ.
ಪತ್ರಿಕಾ ವೃತ್ತಿಯು ಉದ್ಯಮವಾಗಿ ಮಾರ್ಪಾಟುಗೊಂಡು ಪತ್ರಿಕೋದ್ಯಮ ಎಂಬ ನೇಮ್ ಪ್ಲೇಟನ್ನು ಅಂಟಿಸಿಕೊಂಡು ತಿರುಗುತ್ತಿರುವ ಈ ಕಾಲದಲ್ಲಿ ಸತ್ಯ, ನ್ಯಾಯ, ಮೌಲ್ಯ, ಮಾನವ ಏಕತೆ, ಸಮಾನತೆ, ಭ್ರಾತೃತ್ವ, ಸೇವೆ ಇತ್ಯಾದಿ ಇತ್ಯಾದಿ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಿಕೊಂಡು ಮತ್ತು ಅದಕ್ಕೆ ಮಾತ್ರ ನಿಷ್ಠವಾಗಿದ್ದುಕೊಂಡು ಪ್ರಕಟವಾಗುತ್ತಿರುವ ಪತ್ರಿಕೆಯ ಪಾಲಿಗೆ 42 ವರ್ಷಗಳು ಬಿಡಿ, ಪ್ರತಿದಿನವೂ ಸಾಧನೆಯ ಹೆಜ್ಜೆಗಳೇ. ಮುದ್ರಣ ಮಾಧ್ಯಮ ಇವತ್ತು ಈ ಹಿಂದೆಂದೂ ಕಂಡಿರದಷ್ಟು ತೀವ್ರ ಸವಾಲುಗಳನ್ನು ಎದುರಿಸುತ್ತಿವೆ. ಸನ್ಮಾರ್ಗವೂ ಇದಕ್ಕೆ ಹೊರತಲ್ಲ. ಸುದ್ದಿಮೂಲಗಳಾಗಿ ಬರೇ ಪತ್ರಿಕೆಗಳು ಮಾತ್ರ ಇದ್ದ ಕಾಲದಲ್ಲಿ, ಪತ್ರಿಕೆಗಳು ಓದುಗರ ಪಾಲಿಗೆ ಅನಿವಾರ್ಯವಾಗಿತ್ತು ಮತ್ತು ಮಾಹಿತಿ ಜಾಲವಾಗಿ ಪತ್ರಿಕೆಯನ್ನು ಬಿಟ್ಟು ಇನ್ನಾವುದೂ ಇರಲಿಲ್ಲ. ಅವತ್ತು ರೇಡಿಯೋ ಮತ್ತು ದೂರದರ್ಶನ ಇವು ಇನ್ನೆರಡು ಅವಲಂಬನೀಯ ಮಾಹಿತಿ ಜಾಲಗಳಾಗಿದ್ದುವು. ಆ ಬಳಿಕ ಈ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾದುವು. ಆದರೆ, ಈ ಬದಲಾವಣೆಗಳು ಓದುಗರಿಗೆ ಸುದ್ದಿಯನ್ನು ಒದಗಿಸುವುದರಲ್ಲಿ ಮಾತ್ರ ಕ್ರಾಂತಿಯನ್ನು ಉಂಟು ಮಾಡಿದುದಲ್ಲ, ಅಸತ್ಯ, ಕೋಮು ಪ್ರಚೋದಕ ಮತ್ತು ಏಕಪಕ್ಷೀಯ ಸುದ್ದಿಗಳನ್ನು ಒದಗಿಸುವುದರಲ್ಲೂ ಕ್ರಾಂತಿಯನ್ನು ಮಾಡಿದುವು. ಯಾವುದೇ ಸುದ್ದಿಯನ್ನು ಅಳೆದೂ ತೂಗಿ, ಅದರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡು ಮತ್ತು ಯಾವುದೇ ಧಾರ್ಮಿಕ, ರಾಜಕೀಯ ಹಾಗೂ ಉದ್ಯಮ ಪಕ್ಷಪಾತಿತ್ವದಿಂದ ಹೊರಗಿದ್ದುಕೊಂಡು ಪ್ರಕಟಿಸಲಾಗುತ್ತಿದ್ದ ಸುದ್ದಿಗಳಿಗೂ ಮತ್ತು ಪತ್ರಿಕೆಗಳು ಔದ್ಯಮೀಕರಣಗೊಂಡ ಬಳಿಕ ಪ್ರಕಟವಾಗುತ್ತಿರುವ ಸುದ್ದಿಗಳಿಗೂ ಭಾರೀ ವ್ಯತ್ಯಾಸವಿದೆ. ಇವತ್ತಂತೂ ಕ್ಷಣಕ್ಷಣದ ಸುದ್ದಿಗಳೂ ಜನರ ಸ್ಮಾರ್ಟ್‍ಫೋನ್‍ನಲ್ಲಿ ಪ್ರತಿದಿನ ರಾಶಿ ಬೀಳುತ್ತಿವೆ. ದೇಶದಾದ್ಯಂತ ನೂರಾರು ವೆಬ್‍ಸೈಟ್‍ಗಳು ಅಸಂಖ್ಯ ಸಂಖ್ಯೆಯಲ್ಲಿ ಸುದ್ದಿಯನ್ನು ಮೊಗೆದು ಕೊಡುತ್ತಿವೆ. ಈ ಎಲ್ಲ ಸುದ್ದಿಗಳ ವಿಶ್ವಾಸಾರ್ಹತೆ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ಪ್ರಶ್ನೆಗಳೇನೇ ಇದ್ದರೂ ಇವುಗಳಿಂದಾಗಿ ಮುದ್ರಣ ಮಾಧ್ಯಮಗಳ ಮೇಲೆ ಕರಿಛಾಯೆ ಆವರಿಸಿರುವುದು ಸುಳ್ಳಲ್ಲ. ಸುದ್ದಿಗಾಗಿ ಇವತ್ತು ಬರೇ ಪತ್ರಿಕೆಗಳನ್ನೇ ಯಾರೂ ಅವಲಂಬಿಸಿ ಕೂರಬೇಕಿಲ್ಲ. ಮಾತ್ರವಲ್ಲ, ಸುದ್ದಿ ವಿಶ್ಲೇಷಣೆಯೆಂಬ ಒಂದಿಷ್ಟು ದೀರ್ಘ ಬರಹವನ್ನು ಓದುವ ಸಹನೆಯನ್ನು ವೆಬ್‍ಸೈಟ್‍ನ ಪುಟ್ಟ ಪುಟ್ಟ ಸುದ್ದಿಗಳು ಓದುಗರಿಂದ ನಿಧಾನಕ್ಕೆ ಕಸಿದುಕೊಳ್ಳುತ್ತಲೂ ಇವೆ. ದಿನಪತ್ರಿಕೆಗಳ ಪಾಲಿಗೆ ಇದು ಖಂಡಿತ ಸವಾಲು. ಆದರೆ,
ಸನ್ಮಾರ್ಗ ಪತ್ರಿಕೆ ಈ ಮಾದರಿಯದ್ದಲ್ಲ. ಸುದ್ದಿ ವಿಶ್ಲೇಷಣೆಯೇ ಇದರ ಪ್ರಮುಖ ಆಯುಧ. ಸಾಮಾಜಿಕ ನ್ಯಾಯವನ್ನು ಮತ್ತು ಮಾನವ ಏಕತೆಯನ್ನು ಸಾರುವುದು ಹಾಗೂ ಓದುಗರನ್ನು ಸತ್ಯದ ಬೆನ್ನತ್ತಿಕೊಂಡು ಹೋಗುವಂತೆ ಮಾಡುವುದೇ ಇದರ ಮುಖ್ಯ ಗುರಿ. ಧರ್ಮಗಳ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಇಸ್ಲಾಮಿನ ಬಗ್ಗೆ ಪವಿತ್ರ ಕುರ್‍ಆನನ್ನು ಆಧರಿಸಿಕೊಂಡು ನಿಜವನ್ನು ಸಾರುವುದೇ ಸನ್ಮಾರ್ಗ ಈ ವರೆಗೂ ಅಳವಡಿಸಿಕೊಂಡು ಬಂದಿರುವ ಮಾಧ್ಯಮ ನೀತಿ. ಸುದ್ದಿಗಳನ್ನು ಒದಗಿಸುವುದಕ್ಕೆ ವೆಬ್ ಪೋರ್ಟಲ್‍ಗಳಿರಬಹುದು ಮತ್ತು ರಾಜಕೀಯ, ಸಾಮಾಜಿಕ ಸುದ್ದಿ ವಿಶ್ಲೇಷಣೆಯನ್ನು ಒದಗಿಸುವುದಕ್ಕೆ ಪತ್ರಿಕೆಗಳಿರಬಹುದು. ಆದರೆ, ಇವತ್ತು ಅತ್ಯಂತ ಅಗತ್ಯವಾಗಿರುವ ಧಾರ್ಮಿಕ ಸೌಹಾರ್ದ, ಭ್ರಾತೃತ್ವ ಮತ್ತು ಧರ್ಮಗಳ ಕುರಿತಾಗಿ ನಿಜವನ್ನು ಹೇಳುವ ಹಾಗೂ ಸುಳ್ಳುಗಳನ್ನು ತಡೆಯುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿರುವ ಪತ್ರಿಕೆಯಿದ್ದರೆ ಅದು ಸನ್ಮಾರ್ಗ ಅನ್ನುವುದಕ್ಕೆ ಕಳೆದ 42 ವರ್ಷಗಳಲ್ಲಿ ಪ್ರಕಟವಾಗಿರುವ ಅದರ ಪ್ರತಿ ಪುಟಗಳೇ ಸಾಕ್ಷಿ. ಅಂದಹಾಗೆ,
ಸುಳ್ಳುಗಳನ್ನು ಮುದ್ರಿಸಿ ಹಂಚುವುದಕ್ಕೆ ಸುಲಭ. ಅದಕ್ಕೆ ಶ್ರಮದ ಅಗತ್ಯ ಕಡಿಮೆ. ಸುಳ್ಳನ್ನು ಉತ್ಪಾದಿಸಲು ಗೊತ್ತಿದ್ದರಷ್ಟೇ ಇದಕ್ಕೆ ಸಾಕಾಗುತ್ತದೆ. ಸುಳ್ಳನ್ನು ರಸವತ್ತಾಗಿ ಹೇಳುವ ಸಾಮರ್ಥ್ಯ ಇದ್ದರೆ, ಓದುಗರು ಸಿಗುತ್ತಾರೆ. ಆದರೆ, ಸತ್ಯ ಹಾಗಲ್ಲ. ಅದನ್ನು ಉತ್ಪಾದಿಸಲು ಆಗುವುದಿಲ್ಲ. ಅದು ಸಹಜವಾದುದು. ಸುಳ್ಳು ಸುದ್ದಿಯೊಂದನ್ನು ಕ್ಷಣಮಾತ್ರದಲ್ಲಿ ಉತ್ಪಾದಿಸಿ ಹಂಚಬಹುದು. ಆದರೆ, ಆ ಸುದ್ದಿ ಸುಳ್ಳು ಎಂಬುದನ್ನು ಸಾಬೀತುಪಡಿಸಬೇಕಾದರೆ ವಾರ ಅಥವಾ ತಿಂಗಳುಗಟ್ಟಲೆ ಶ್ರಮಿಸಬೇಕಾದ ಅಗತ್ಯ ಇರುತ್ತದೆ. ಸುದ್ದಿಯ ಬೆನ್ನತ್ತಿ ಹೋಗಬೇಕಾಗುತ್ತದೆ. ಆ ಸುದ್ದಿಯಲ್ಲಿ ಹೇಳಲಾದ ಸಂಗತಿಯನ್ನು ಮತ್ತು ಅದು ನಡೆದಿರಬಹುದಾದ ಸ್ಥಳವನ್ನು ಸಂದರ್ಶಿಸಬೇಕಾಗುತ್ತದೆ. ಪತ್ತೆಕಾರ್ಯ ಕೈಗೊಳ್ಳಬೇಕಾಗುತ್ತದೆ. ಐತಿಹಾಸಿಕ ಘಟನೆಗಳ ಸುತ್ತ ಸುಳ್ಳು ಸುದ್ದಿಯನ್ನು ಉತ್ಪಾದಿಸಲಾಗಿದೆಯೆಂದಾದರೆ, ಆ ಇತಿಹಾಸವನ್ನು ಮರು ಓದಿಗೆ ಒಳಪಡಿಸಬೇಕಾಗುತ್ತದೆ. ಸಾಕ್ಷ್ಯ ಸಮೇತ ಸುಳ್ಳನ್ನು ಜನರ ಮುಂದಿಡಬೇಕಾಗುತ್ತದೆ. ಪವಿತ್ರ ಕುರ್‍ಆನ್ ಆಗಲಿ, ಪ್ರವಾದಿ ಮುಹಮ್ಮದರ ಕುರಿತಾದ ಸಂಗತಿಗಳಿಗಾಗಲಿ ಅಥವಾ ಇಸ್ಲಾಮಿನ ಐತಿಹಾಸಿಕ ಘಟನೆಗಳು, ಮುಸ್ಲಿಮ್ ರಾಜರ ಕಾಲದ ಚರಿತ್ರೆಗಳು ಮತ್ತು ಇನ್ನಿತರ ರಾಜಕೀಯ, ಆರ್ಥಿಕ, ಶೈಕ್ಷಣಿಕ ವಿಷಯಗಳಲ್ಲೂ ಭರಪೂರ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಅಷ್ಟೇ ಪ್ರಖರವಾಗಿ ನಿರಾಕರಿಸುವುದಕ್ಕೆ ಸುಳ್ಳನ್ನು ಬೆನ್ನತ್ತಿಕೊಂಡು ಹೋಗಿ ಸತ್ಯವನ್ನು ಸಾಬೀತುಪಡಿಸುವ ಕೆಲಸ ನಡೆಯಬೇಕು. ಅದಕ್ಕೆ ಶ್ರಮದ ಅಗತ್ಯವಿದೆ. ಪತ್ರಿಕೆಯ ಅಗತ್ಯವೂ ಇದೆ. ಸನ್ಮಾರ್ಗ ಕಳೆದ 42 ವರ್ಷಗಳಿಂದ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದು ಇದೇ ಕಾರಣಕ್ಕೆ. ಮುಂದೆ ಅದು ಉಳಿದುಕೊಳ್ಳುವುದಾದರೂ ಇದೇ ಕಾರಣಕ್ಕೆ. ಸನ್ಮಾರ್ಗವನ್ನು ಖರೀದಿಸಿ ಓದದ ಹೊರತು ಈ ಪತ್ರಿಕೆ ಉಳಿದುಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಓದುಗರಾದ ನಿಮ್ಮ ಬೆಂಬಲವನ್ನು ಸನ್ಮಾರ್ಗ ಈ ಹಿಂದಿಗಿಂತಲೂ ಹೆಚ್ಚಾಗಿ ಇವತ್ತು ಬಯಸುತ್ತಿದೆ. ಸನ್ಮಾರ್ಗ ವೆಬ್‍ಸೈಟ್ ಸುದ್ದಿಗಳನ್ನು ತಪ್ಪದೇ ಓದುವ ಮತ್ತು ಪತ್ರಿಕೆಯನ್ನು ಖರೀದಿಸುವ ಮೂಲಕ ನೀವು ಸದಾ ಬೆಂಬಲಿಸುತ್ತಿರಿ ಎಂದು ವಿನಂತಿಸುತ್ತೇವೆ.
No comments:
Post a Comment