Friday, 27 March 2020

ಎಚ್ಚರ ಇರಲಿ, ಪ್ರಶ್ನಿಸುವುದೇ ಪರಿಹಾರ ಅಲ್ಲ



ಕೊರೋನಾದ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ನಮ್ಮಲ್ಲಿ ಪರ-ವಿರುದ್ಧ ಚರ್ಚೆ ನಡೆಯುತ್ತಿದ್ದರೆ, ಅತ್ತ ಬ್ರೆಝಿಲ್‍ನಲ್ಲಿ ಅದು ಆರಂಭದಲ್ಲಿ ಜೋಕ್ ಆಗಿ ಪರಿವರ್ತನೆಗೊಂಡು ಈಗ ಆಘಾತವಾಗಿ ಮಾರ್ಪಟ್ಟಿದೆ. ಕಳೆದವಾರ ಬ್ರೆಝಿಲ್‍ನ ಅಧ್ಯಕ್ಷ  ಜೈರ್ ಬೋಲ್ಸನಾರೋ ಅವರು ಅಮೇರಿಕಕ್ಕೆ ಭೇಟಿ ನೀಡಿದರು. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಡಿನ್ನರ್ ನಲ್ಲಿ ಭಾಗವಹಿಸುವುದಷ್ಟೇ ಆ ಭೇಟಿಯ ಉದ್ದೇಶ ಆಗಿರಲಿಲ್ಲ. ಪಕ್ಕದ ವೆನೆಝುವೇಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಉಚ್ಛಾಟಿಸುವುದು ಮತ್ತು ಅವರ ಸ್ಥಾನದಲ್ಲಿ ತಮ್ಮದೇ ಬೆಂಬಲಿಗನನ್ನು ಕೂರಿಸುವುದೇ ಆ ಡಿನ್ನರ್ ಪಾರ್ಟಿಯ ಮುಖ್ಯ ಉದ್ದೇಶವಾಗಿತ್ತು. ಆದ್ದರಿಂದಲೇ,

ಬೋಲ್ಸನಾರೋ ಅವರು ಅಮೇರಿಕಕ್ಕೆ ಪ್ರಯಾಣಿಸುವ ಮೊದಲು ವೆನೆಝುವೇಲಾದಲ್ಲಿರುವ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನೆಲ್ಲ ಹಿಂದಕ್ಕೆ ಕರೆಸಿಕೊಂಡರು. ಮಾತ್ರವಲ್ಲ, ಬ್ರೆಝಿಲ್‍ನಲ್ಲಿರುವ ವೆನೆಝುವೇಲಾದ ರಾಜತಾಂತ್ರಿಕರನ್ನೆಲ್ಲ ಹಿಂದಕ್ಕೆ ಕಳುಹಿಸಿದರು. ಈ ಕ್ರಮಕ್ಕೆ ಬಹುಮುಖ್ಯ ಕಾರಣ- ಮಡುರೋ ಅವರು ಎಡಪಂಥೀಯ ಮತ್ತು ಅಮೇರಿಕನ್ ಸಾಮ್ರಾಜ್ಯಶಾಹಿತ್ವದ ವಿರೋಧಿ ಎಂಬುದು. ವೆನೆಝುವೇಲಾದ ಅಧ್ಯಕ್ಷ ಹ್ಯೂಗೋ ಚಾವೇಝರ ನಿಧನದ ಬಳಿಕ ಮಡುರೋ ಅಧಿಕಾರಕ್ಕೇರಿದ್ದಾರೆ. ಚಾವೇಝರ ಅಮೇರಿಕನ್ ವಿರೋಧೀ ನೀತಿಯಂತೂ ಜನಜನಿತ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವದ ಎಲ್ಲ ನಾಯಕರ ಮುಂದೆಯೇ ಅಮೇರಿಕವನ್ನು ಪಿಶಾಚಿ ಎಂದು ಅವರು ಕರೆದಿದ್ದರು. ಅವರಿಗೆ ಬಾಧಿಸಿದ ಕ್ಯಾನ್ಸರ್ ನ ಹಿಂದೆ ಅಮೇರಿಕದ ಕೈವಾಡ ಇದೆ ಎಂಬ ನಂಬಿಕೆ ವೆನೆಝುವೇಲಾದಲ್ಲಿ ಈಗಲೂ ಇದೆ. ಮಡುರೋ ಅವರು ಚಾವೇಝರ ನೆರಳಿನಲ್ಲಿಯೇ ಬೆಳೆದು ಬಂದವರು. ಆದರೆ ಬೋಲ್ಸನಾರೋ ಇದಕ್ಕೆ ತದ್ವಿರುದ್ಧ. ಅವರು ಕಟು ಬಲಪಂಥೀಯರಾಗಿ ಗುರುತಿಸಿಕೊಂಡವರು. ಬಲಪಂಥೀಯ ವಿಚಾರಧಾರೆಯಲ್ಲಿ ಅವರು ಟ್ರಂಪ್‍ಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ  ಅನ್ನುವುದೂ ರಹಸ್ಯವಲ್ಲ. ಕಳೆದ ಜನವರಿ 26ರಂದು ಭಾರತದಲ್ಲಿ ನಡೆದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಮಂತ್ರಿತರಾದವರು ಇದೇ ಬೋಲ್ಸನಾರೋ. ತಾನು ಮತ್ತು ಟ್ರಂಪ್ ಅತೀ ಹತ್ತಿರದ ಗೆಳೆಯರು ಎಂದು ಅವರು ಹೇಳಿಕೊಳ್ಳುತ್ತಾರೆ. ಆದ್ದರಿಂದಲೇ,

ಕಳೆದವಾರ ಟ್ರಂಪ್ ಜೊತೆ ಬೋಲ್ಸನಾರೋ ಅವರ ಭೇಟಿಯು ಡಿನ್ನರ್ ಗಿಂತ  ಹೊರತಾದ ಕಾರಣಕ್ಕಾಗಿ ಮುಖ್ಯವಾಗಿತ್ತು. ನಿಕೋಲಸ್ ಮಡುರೋ ಅವರ ಸರಕಾರವನ್ನು ಬುಡಮೇಲುಗೊಳಿಸಿ ತಮಗೆ ತಲೆಬಾಗುವ ಸರಕಾರವೊಂದನ್ನು ವೆನೆಝುವೇಲಾದಲ್ಲಿ ಸ್ಥಾಪಿಸುವುದು ಆ ಡಿನ್ನರ್ ನ ಮುಖ್ಯ ಉದ್ದೇಶವೂ ಆಗಿತ್ತು. ಟ್ರಂಪ್‍ರನ್ನು ಬೋಲ್ಸನಾರೋ ಆಲಿಂಗಿಸಿದರು. ಹಸ್ತಲಾಘವ ಮಾಡಿದರು. ತಮ್ಮ ಮಾತುಕತೆ ಭಾರೀ ಯಶಸ್ವಿಯಾಗಿದೆ ಎಂದೂ ಹೇಳಿಕೊಂಡರು. ಇದಾಗಿ ಬ್ರೆಝಿಲ್‍ಗೆ ಮರಳಿದ ಅವರು ಕೊರೋನಾವನ್ನು ಮಾಧ್ಯಮ ಭ್ರಮೆ ಎಂದು ತಳ್ಳಿಹಾಕಿದರು. ಎರಡು ವಾರಗಳ ಮೊದಲೂ ಅವರು ಕೊರೋನಾವನ್ನು ಹೀಗೆಯೇ ತಮಾಷೆ ಮಾಡಿದ್ದರು. ಅದೊಂದು ದೊಡ್ಡ ಜೋಕ್ ಎಂದಿದ್ದರು. ಆದರೆ,

ಇದಾಗಿ ಗಂಟೆಗಳ ಬಳಿಕ ಬ್ರೆಝಿಲ್‍ನ ಒಟ್ಟು ವಾತಾವರಣವೇ ಬದಲಾಯಿತು. ಬೋಲ್ಸನಾರೋ ಅವರ ಜೊತೆಗೆ ಡಿನ್ನರ್ ಪಾರ್ಟಿಗೆ ತೆರಳಿದ್ದ ಸಂಪರ್ಕ ಸಚಿವ ಫ್ಯಾಬಿಯೋ ಅವರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿತು. ಇವರು ಅಮೇರಿಕದ ಅಧ್ಯಕ್ಷ ಟ್ರಂಪ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದು ಬಹಿರಂಗವಾಗುತ್ತಿರುವಂತೆಯೇ ಬೋಲ್ಸನಾರೋ ಅವರೂ ಕೊರೋನಾ ಪರೀಕ್ಷೆಗೆ ಒಳಗಾದರು. ಅವರಿಗೂ ಕೊರೋನಾ ಬಾಧಿಸಿದೆ ಎಂಬ ಸುದ್ದಿ ಹೊರಬಂತು. ಸ್ಥಳೀಯ ಸುದ್ದಿ ಮಾಧ್ಯಮಗಳು ಮತ್ತು ಅಮೇರಿಕ ಖ್ಯಾತ ಫಾಕ್ಸ್ ನ್ಯೂಸ್ ಈ ಸುದ್ದಿಯನ್ನು ದೃಢಪಡಿಸಿದುವು. ಆ ಬಳಿಕ ಬೋಲ್ಸನಾರೋ ಅದನ್ನು ಅಲ್ಲಗಳೆದರೂ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಮತ್ತು ಇನ್ನೊಮ್ಮೆ ಪರೀಕ್ಷೆಗೆ ಗುರಿಪಡಿಸಲು ತಯಾರಿ ನಡೆದಿದೆ ಎಂದೂ ಹೇಳಲಾಗುತ್ತಿದೆ. ಇತ್ತ ಟ್ರಂಪ್ ಅವರಿಗೂ ಕೊರೋನಾ ಭೀತಿ ಎದುರಾಯಿತು. ಅವರೂ ಪರೀಕ್ಷೆಗೆ ಒಳಪಟ್ಟರು. ಬಿಡುಬೀಸು ಹೇಳಿಕೆಗಳನ್ನೇ ಜನಪ್ರಿಯತೆಯ ಅಸ್ತ್ರವಾಗಿಸಿಕೊಂಡು ಬಂದಿದ್ದ ಬೋಲ್ಸನಾರೋ ಮತ್ತು ಟ್ರಂಪ್ ಇಬ್ಬರೂ ಈಗ ವೆನೆಝುವೇಲಾವನ್ನು ಮರೆತು ಕೊರೋನಾದ ಬಗ್ಗೆ ಚಿಂತಿತರಾಗಿದ್ದಾರೆ. ಅಮೇರಿಕದಲ್ಲಿ ಕೊರೋನಾ ವಿರುದ್ಧ ತುರ್ತು ಪರಿಸ್ಥಿತಿ ಹೇರಲಾಗಿದೆ. ಬ್ರೆಝಿಲ್‍ನಲ್ಲಂತೂ ನಾಗರಿಕರು ತೀವ್ರ ಭೀತಿಯಲ್ಲಿದ್ದಾರೆ. ಇದಕ್ಕೆ ಕೊರೋನಾ ಬಗ್ಗೆ ಬೋಲ್ಸನಾರೋ ಅವರ ಜವಾಬ್ದಾರಿ ರಹಿತ ನೀತಿಯೂ ಒಂದು ಕಾರಣ. ಈಗಾಗಲೇ ಕೊರೋನಾ ಪೀಡಿತರ ಸಂಖ್ಯೆ ನೂರರ ಗಡಿ ದಾಟಿದೆ. ಇದು ಹೀಗೆಯೇ ಮುಂದುವರಿದರೆ ಕೇವಲ ಸ್ಯಾನ್‍ಪೌಲೋ ಪಟ್ಟಣವೊಂದರಲ್ಲೇ  ಮುಂದಿನ ನಾಲ್ಕು ವಾರಗಳೊಳಗೆ ಪೀಡಿತರ ಸಂಖ್ಯೆ 45 ಸಾವಿರವನ್ನು ದಾಟಬಹುದು ಎಂದು ಆರೋಗ್ಯಾಧಿಕಾರಿಗಳು ಆತಂಕದಲ್ಲಿದ್ದಾರೆ. ಟ್ರಂಪ್ ಜೊತೆ ಡಿನ್ನರ್ ನಲ್ಲಿ ಭಾಗವಹಿಸಲೆಂದು ಬ್ರೆಝಿಲ್‍ನಿಂದ ಹೊರಡುವಾಗ ವೆನೆಝುವೇಲಾವನ್ನು ತಲೆ ತುಂಬಾ ತುಂಬಿಕೊಂಡಿದ್ದ ಮತ್ತು ಕೊರೋನಾವನ್ನು ಜೋಕ್ ಮಾಡಿದ್ದ ಬೋಲ್ಸನಾರೋ ಅವರು ಅಮೇರಿಕಾದಿಂದ ಹಿಂತಿರುಗಿದ ಬಳಿಕ ವೆನೆಝುವೇಲಾವನ್ನು ಕೈಬಿಟ್ಟು ಕೊರೋನಾವನ್ನು ತಲೆ ಮೇಲೆ ಹೊತ್ತುಕೊಂಡಿದ್ದಾರೆ.

ಕೊರೋನಾ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಪರ-ವಿರುದ್ಧ ಚರ್ಚಿಸುವವರಲ್ಲಿ ಇರಬೇಕಾದ ಎಚ್ಚರಿಕೆಗಳು ಏನೇನು ಅನ್ನುವುದಕ್ಕೆ ಬೋಲ್ಸನಾರೋ ಒಂದು ಉತ್ತಮ ಉದಾಹರಣೆ. ಕೊರೋನಾ ಜೋಕ್ ಅಲ್ಲ. ಅಮೇರಿಕ, ಫ್ರಾನ್ಸ್, ಇಟಲಿ, ಜಪಾನ್, ಚೀನಾ, ದಕ್ಷಿಣ ಕೊರಿಯಾ ಮುಂತಾದ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ರಾಷ್ಟ್ರಗಳನ್ನೂ ಕಂಗಾಲಾಗಿಸಿರುವ ವೈರಸ್ ಇದು. ಇಟಲಿ ಬಹುತೇಕ ಬಾಗಿಲು ಮುಚ್ಚಿದೆ. ಬೀದಿಗಳು ನಿರ್ಜನವಾಗಿವೆ. ಈ ಮೊದಲು ಚೀನಾದಲ್ಲೂ ಇದೇ ಪರಿಸ್ಥಿತಿ ಇತ್ತು. ವೈಜ್ಞಾನಿಕ ಸಂಶೋಧನೆಗಳು ಉಚ್ಛ್ರಾಯ ಸ್ಥಿತಿಯಲ್ಲಿರುವ ಈ ಕಾಲದಲ್ಲೂ ವೈರಸ್ ಒಂದು ಈ ಮಟ್ಟದ ತುರ್ತು ಸ್ಥಿತಿಯನ್ನು ಜಾಗತಿಕವಾಗಿ ಉಂಟು ಮಾಡುತ್ತದೆಂದಾದರೆ, ಭಾರತದಂತಹ ಕಿಕ್ಕಿರಿದ ಜನಸಂದಣಿಯ ರಾಷ್ಟ್ರವೊಂದು ಪೂರ್ವ ತಯಾರಿಯ ಭಾಗವಾಗಿ ಕಠಿಣ ನಿರ್ಬಂಧಗಳನ್ನು ತನ್ನ ಮೇಲೆ ಹೇರಿಕೊಳ್ಳುವುದು ಅಪರಾಧ ಆಗಬೇಕಿಲ್ಲ. ಸಾಮಾನ್ಯವಾಗಿ

ಕೊರೋನಾ ವೈರಸ್ 10-12 ದಿನಗಳ ಕಾಲ ಬದುಕಿರುತ್ತಿದೆ. ಆದ್ದರಿಂದ ನಿರ್ದಿಷ್ಟ ಅವಧಿವರೆಗೆ ಜನಸಂದಣಿಯನ್ನು ನಿಯಂತ್ರಿಸುವುದರಿಂದ ಕೊರೋನಾ ವಿರೋಧಿ ಹೋರಾಟಕ್ಕೆ ದೊಡ್ಡ ಬಲವನ್ನು ನೀಡಬಲ್ಲುದು. ಆದರೆ, ಜನರನ್ನು ಹೀಗೆ ನಿಯಂತ್ರಿಸುವುದೊಂದೇ ಕೊರೋನಾ ತಡೆಗಟ್ಟುವಿಕೆಗೆ ಏಕೈಕ ಪರಿಹಾರ ಅಲ್ಲ. ಕೊರೋನಾ ಶಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರುಗಳೇ ಭಯಪಡುತ್ತಿರುವುದು, ಪೀಡಿತರನ್ನು ಅಸ್ಪೃಶ್ಯರಂತೆ ಕಾಣುವುದು, ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುವುದು ಇತ್ಯಾದಿಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರತಿ ತಾಲೂಕುಗಳಲ್ಲೂ ಕೊರೋನಾ ಚಿಕಿತ್ಸೆಗೆ ಬೇಕಾದ ಏರ್ಪಾಟುಗಳನ್ನು ಮಾಡಬೇಕಿದೆ. ಜೊತೆಗೇ ಜನರು ಭೀತಿಗೊಳಗಾಗದಂತೆಯೂ ನೋಡಬೇಕಾಗಿದೆ.

ಟೀಕೆ ಮತ್ತು ಪ್ರಶ್ನೆಗಳಿಗೆ ನಿಂದನೆಯ ಮೂಲಕ ಉತ್ತರಿಸುವ ಮತ್ತು ನಿರ್ಲಕ್ಷಿಸುವ ಬೋಲ್ಸನಾರೋ ಹಾಗೂ ಟ್ರಂಪ್ ಅವರ ನೀತಿ ಎಷ್ಟು ಅಪಾಯಕಾರಿ ಅನ್ನುವುದಕ್ಕೆ ಬ್ರೆಝಿಲ್ ಮತ್ತು ಅಮೇರಿಕ ಇವತ್ತು ಎದುರಿಸುತ್ತಿರುವ ಪರಿಸ್ಥಿತಿಯೇ ಪುರಾವೆ. ಸೂಕ್ತ ಔಷಧಿಯೇ ಇಲ್ಲದ ಮತ್ತು ಅತೀ ಸುಲಭವಾಗಿ ಮಾನವ ದೇಹವನ್ನು ಪ್ರವೇಶಿಸಬಲ್ಲ ವೈರಾಣುವೊಂದನ್ನು ಎದುರಿಸುವುದಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದುದು ಜನಸಾಮಾನ್ಯರ ಹಿತದೃಷ್ಟಿಯಿಂದ ಬಹಳ ಅಗತ್ಯ. ಭಾರತದಲ್ಲಂತೂ ಆರೋಗ್ಯ ಸಂಬಂಧಿ ವಿಷಯಗಳ ಬಗ್ಗೆ ನಿಷ್ಕಾಲಜಿಯೇ ಹೆಚ್ಚು. ಅರ್ಧ ಭಾರತವೇ ಬಡತನ ರೇಖೆಗಿಂತ ಕೆಳಗಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯಂತೂ ಕೋಟ್ಯಂತರವಿದೆ. ಒಂದುವೇಳೆ, ಈ ಬಡ ಜನಸಂಖ್ಯೆಯ ಮೇಲೆ ಕೊರೋನಾ ದಾಳಿ ಮಾಡಿದರೆ ಆಗಬಹುದಾದ ಅನಾಹುತವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.  ಅಂದಹಾಗೆ,

ಭಾರತದ ವೈದ್ಯ ಮತ್ತು ರೋಗಿಯ ನಡುವಿನ  ಅನುಪಾತ 1:1,457 (ಅಲೋಪತಿ, ಹೋಮಿಯೋಪತಿ, ಆಯುರ್ವೇದಿಕ್ ಮುಂತಾದವರು ಸೇರಿ). ಅಂದರೆ, 1,457 ರೋಗಿಗಳಿಗೆ ಓರ್ವ ವೈದ್ಯರಿದ್ದಾರೆ.  2013ರಲ್ಲಿ ಈ ಅನುಪಾತ 1:1,167 ಇತ್ತು. ಇನ್ನು ಪ್ರತೀ 55,591 ರೋಗಿಗಳಿಗೆ ಬರೀ ಒಂದು ಸರಕಾರಿ ಆಸ್ಪತ್ರೆಯಷ್ಟೇ ಈ ದೇಶದಲ್ಲಿದೆ.   ಪ್ರತೀ 11,082 ರೋಗಿಗಳಿಗೆ ಕೇವಲಓರ್ವ  ಸರಕಾರಿ ವೈದ್ಯರಿದ್ದರೆ, 1,844 ರೋಗಿಗಳಿಗೆ ಒಂದೇ ಒಂದು  ಹಾಸಿಗೆ ಮಾತ್ರ ಈ ದೇಶದಲ್ಲಿದೆ. ಅಲ್ಲದೆ, ದೇಶದಲ್ಲಿ ಈಗ ಇಪ್ಪತ್ತು ಲಕ್ಷ ದಾದಿಯರ ಕೊರತೆಯಿದೆ.  ಏಳು ಲಕ್ಷ ವೈದ್ಯರ ಕೊರತೆಯಿದೆ ಎಂಬುದು ಅಧಿಕೃತ ಲೆಕ್ಕಾಚಾರ. ಹೀಗಿರುವಾಗ, ಮುನ್ನೆಚ್ಚರಿಕೆಯ ಭಾಗವಾಗಿ ಕೈಗೊಳ್ಳುವ ಕ್ರಮಗಳು ತುಸು ಅತಿ ಅನ್ನಿಸಿದರೂ ಅದನ್ನು ಸಾರಾಸಗಟು ವಿರೋಧಿಸಬೇಕಿಲ್ಲ.

No comments:

Post a Comment