ಯಾವುದೇ ಹೋರಾಟವನ್ನು ದಮನಿಸುವುದಕ್ಕೆ ಪ್ರಭುತ್ವ ಸಾಮಾನ್ಯವಾಗಿ ಎರಡು ತಂತ್ರಗಳನ್ನು ಹೆಣೆಯುತ್ತದೆ.
1. ಹೋರಾಟದ ಮುಂಚೂಣಿಯಲ್ಲಿರುವವರನ್ನು ಖರೀದಿಸುವುದು.
2. ಪೋಲೀಸ್ ಬಲವನ್ನು ಪ್ರಯೋಗಿಸುವುದು.
ಪ್ರಭುತ್ವದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಹುಟ್ಟಿಕೊಳ್ಳುವ ಎಲ್ಲ ಹೋರಾಟಗಳಿಗೂ ಎದುರಾಗುವ ಸವಾಲು ಇದು. ಅನೇಕ ಹೋರಾಟಗಳು ಈ ಸವಾಲಿನ ಮುಂದೆ ಮಂಡಿಯೂರಿವೆ. ಶರಣಾಗಿವೆ. ಪ್ರಭುತ್ವದ ಆಮಿಷವನ್ನು ಒಪ್ಪಿಕೊಂಡು ಹೋರಾಟದ ಕಣದಿಂದಲೇ ಮಾಯವಾದ ಹೋರಾಟಗಾರರೂ ಇದ್ದಾರೆ. ಇದೇವೇಳೆ, ಯಾವ ಕಾರಣಕ್ಕೂ ಪ್ರಭುತ್ವದೊಂದಿಗೆ ರಾಜಿಯಾಗದೇ ಮತ್ತು ಖರೀದಿಗೆ ಒಳಗಾಗದೇ ಉಳಿದ ಹೋರಾಟಗಳೂ ಇವೆ. ಹೋರಾಟಗಾರರೂ ಇದ್ದಾರೆ. ಇಂಥವರನ್ನು ಬಗ್ಗುಬಡಿಯುವುದಕ್ಕೆ ಪ್ರಭುತ್ವ ಕಳ್ಳ ದಾರಿಯನ್ನು ಹಿಡಿಯುತ್ತದೆ. ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುತ್ತದೆ. ಸಂಬಂಧವೇ ಇಲ್ಲದ ಪ್ರಕರಣಗಳನ್ನು ಅವರಿಗೆ ಜೋಡಿಸಿ ಕಿರುಕುಳ ಕೊಡುತ್ತದೆ.
ಉತ್ತರ ಪ್ರದೇಶದ ಡಾ. ಕಫೀಲ್ ಖಾನ್ ಇದಕ್ಕೊಂದು ಇತ್ತೀಚಿನ ಉದಾಹರಣೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರ ಮೇಲೆ ಸುಳ್ಳು ಕೇಸನ್ನು ದಾಖಲಿಸುವಾಗ, ಇದು ಸುಳ್ಳು ಎಂಬುದು ಪೊಲೀಸರಿಗೂ ಗೊತ್ತಿರಲೇ ಬೇಕು. ಆದರೆ ಅಂಥದ್ದೊಂದು ಕೇಸನ್ನು ದಾಖಲಿಸದೇ ಅವರ ಮುಂದೆ ಅನ್ಯ ದಾರಿ ಇರುವುದಿಲ್ಲ. ಆ ಕೇಸು ಪ್ರಭುತ್ವದ ಬಯಕೆ. ಆ ಬಯಕೆಯನ್ನು ತಿರಸ್ಕರಿಸುವುದರಿಂದ ಮುಂದೆ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ. ಒಂದೋ ಸಸಿಕಾಂತ್ ಸೆಂಥಿಲ್‍ರಂತೆ ಅಥವಾ ಕಣ್ಣನ್ ಗೋಪಿನಾಥ ನ್‍ರಂತೆ ಆ ವರ್ತುಲದಿಂದ ಹೊರಬರಬೇಕು. ಇದು ಆಡಿದಷ್ಟು ಸುಲಭ ಅಲ್ಲ ಮತ್ತು ಹಾಗೆ ಹೊರಬರುವುದು ಸಮಸ್ಯೆಗೆ ಪರಿಹಾರವೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಮಿಥ್ಯವೇ ತುಂಬಿಕೊಂಡಿರುವ ಮನೆಯಲ್ಲಿ ಸತ್ಯ ಅವಮಾನವನ್ನಲ್ಲದೇ ಯಶಸ್ಸನ್ನು ಸಾಧಿಸದು ಎಂದು ವಾದಿಸುವವರು ಇರುವಂತೆಯೇ ಸತ್ಯ ಅಲ್ಲೇ ಇದ್ದು ತನಗಿರುವ ಸೀಮಿತ ಅವಕಾಶವನ್ನು ಬಳಸಿಕೊಂಡೇ ಮಿಥ್ಯದ ವಿರುದ್ಧ ಸಮರ ಸಾರಬೇಕು ಎಂದು ವಾದಿಸುವವರೂ ಇದ್ದಾರೆ. ಇವೆರಡೂ ತಿರಸ್ಕರಿಸಲಾಗದ ವಾದಗಳು. ಡಾ. ಕಫೀಲ್ ಖಾನ್‍ರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಾಗ ಪೊಲೀಸರ ಒಳಮನಸ್ಸನ್ನು ಇವು ಕಾಡಿರಬಹುದು. ತಾವು ಅಸತ್ಯಕ್ಕೆ ಸಾಕ್ಷ್ಯ ವಹಿಸುತ್ತಿದ್ದೇವೆ ಎಂಬ ಅಪರಾಧಿ ಭಾವ ಸುಳಿದು ಹೋಗಿರಲೂ ಬಹುದು. ಆದರೆ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು ಸುಲಭವಲ್ಲ. ಹಾಗಂತ,
ಇದು ಕೇವಲ ಕಫೀಲ್ ಖಾನ್‍ಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪ್ರಭುತ್ವ ಶತ್ರುಗಳಂತೆ ಬೆನ್ನಟ್ಟುತ್ತಿದೆ. ಸಿಎಎ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದವರನ್ನು ದೆಹಲಿ ಸಂಘರ್ಷದೊಂದಿಗೆ ಜೋಡಿಸಿ ಬಂಧಿಸುತ್ತಿದೆ. ದೆಹಲಿ ಗಲಭೆಗೆ ಸಿಎಎ ವಿರೋಧಿ ಪ್ರತಿಭಟನಾಕಾರರೇ ಕಾರಣ ಎಂಬ ರೀತಿಯಲ್ಲಿ ಪ್ರಭುತ್ವ ವರ್ತಿಸುತ್ತಿದೆ. ಸೆಪ್ಟೆಂಬರ್ ಒಂದರಂದು ಅಲಿಘರ್ ಜೈಲಿನಿಂದ ಬಿಡುಗಡೆಗೊಂಡ ಶರ್ಜೀಲ್ ಉಸ್ಮಾನಿಯ ಪ್ರಕರಣ ಇದರಲ್ಲಿ ಒಂದು. ಸಿಎಎ ಪ್ರತಿಭಟನೆಯ ವೇಳೆ ಅಲೀಘರ್ ವಿವಿಯ ವಿದ್ಯಾರ್ಥಿಗಳನ್ನು ಉಸ್ಮಾನಿ ಪ್ರಚೋದಿಸಿದ್ದಾನೆ ಎಂಬ ಆರೋಪದಲ್ಲಿ ಜುಲೈಯಲ್ಲಿ ಪೊಲೀಸರು ಬಂಧಿಸಿದ್ದರು. 10 ವರ್ಷದ ಹಿಂದೆ ಭಾರತದ ಗುಪ್ತಚರ ಇಲಾಖೆಯು ನೇಪಾಳದಲ್ಲಿ ಭಯೋತ್ಪಾದಕರನ್ನು ಸೆರೆ ಹಿಡಿದಿತ್ತು. ಅವರ ಬಗ್ಗೆ ನಿನಗೆ ಎಷ್ಟು ಗೊತ್ತಿದೆ, ಅವರೆಲ್ಲ ನಿನ್ನ ಊರಿನವರಾಗಿದ್ದಾರೆ.. ಎಂಬಿತ್ಯಾದಿ ಪ್ರಶ್ನೆಗಳನ್ನು ನನ್ನಲ್ಲಿ ಕೇಳಲಾಗಿತ್ತು ಎಂದಾತ ದಿ ಹಿಂದೂ ಪತ್ರಿಕೆಯೊಂದಿಗೆ ಮಾತಾಡುತ್ತಾ ಹೇಳಿದ್ದಾರೆ. ಮಾತ್ರವಲ್ಲ, ಸಿಎಎ ಅಥವಾ ಅಲೀಘರ್ ವಿವಿಯ ಹಿಂಸೆಯ ಬಗ್ಗೆ ನನ್ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ ಎಂದೂ ಆತ ಹೇಳಿದ್ದಾನೆ. ಅಂದರೆ ಇದೊಂದು ಬಗೆಯ ದಬ್ಬಾಳಿಕೆ. ಭೀತಿ ಹುಟ್ಟಿಸುವ ಪ್ರಕ್ರಿಯೆ. ಮುಂದೆಂದೂ ಇಂಥ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಪರೋಕ್ಷ ಎಚ್ಚರಿಕೆ. ಅಂದಹಾಗೆ,
ಸಿಎಎ ವಿರೋಧಿ ಹೋರಾಟಕ್ಕೆ ಆಮ್ಲಜನಕ ದೊರಕಿದ್ದೇ ವಿಶ್ವವಿದ್ಯಾಲಯಗಳಿಂದ. ಅಲಿಘರ್ ವಿವಿಯಲ್ಲಿ ಹುಟ್ಟಿಕೊಂಡ ಹೋರಾಟದ ಈ ಕಿಡಿ ಆ ಬಳಿಕ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದಲ್ಲಿ ಬೃಹದಾಕಾರವನ್ನು ಪಡೆದುಕೊಂಡು ಅಲ್ಲಿಂದ ದೇಶವ್ಯಾಪಿಯಾಗಿ ಹರಡಿಕೊಂಡಿತು. ಮುಸ್ಲಿಮರ ಹೋರಾಟವಾಗಿ ಮಾರ್ಪಡಬೇಕಾದ ಪ್ರತಿಭಟನೆಯೊಂದು ವಿದ್ಯಾರ್ಥಿಗಳ ಚಳವಳಿಯಾಗಿ ನಿಧಾನಕ್ಕೆ ರೂಪಾಂತರ ಹೊಂದುತ್ತಿರುವುದನ್ನು ಕಂಡು ಪ್ರಭುತ್ವ ಭಯಕ್ಕೆ ಬಿತ್ತು. ಈ ಹೋರಾಟದ ನೊಗವನ್ನು ವಿದ್ಯಾರ್ಥಿಗಳು ಎತ್ತಿಕೊಳ್ಳುವುದೆಂದರೆ, ಅದಕ್ಕೆ ಪಕ್ಷರಹಿತ ಮತ್ತು ಧರ್ಮರಹಿತ ವರ್ಚಸ್ಸು ಲಭ್ಯವಾಗಬಹುದು ಎಂಬ ಆತಂಕ ಎದುರಾಯಿತು. ಆದ್ದರಿಂದಲೇ, ಚಳವಳಿಯ ನೇತೃತ್ವವನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದರೂ ಅದನ್ನು ಬರೇ ಮುಸ್ಲಿಮರ ಹೋರಾಟವೆಂಬಂತೆ ಬಿಂಬಿಸುವುದಕ್ಕೆ ಪ್ರಭುತ್ವ ತಂತ್ರ ಹೂಡಿತು. ಪ್ರಭುತ್ವವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕೇವಲ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ಹೇಳಿಕೆ ನೀಡತೊಡಗಿದರು. ದೆಹಲಿಯ ಶಾಹೀನ್‍ಭಾಗ್‍ನ ಪ್ರತಿಭಟನೆಯನ್ನು ನಿರಂತರ ಪ್ರಶ್ನೆಗೆ ಗುರಿಪಡಿಸಲಾಯಿತು. ಶಾಹೀನ್‍ಬಾಗ್ ಪ್ರತಿಭಟನೆಯನ್ನು ಮತ್ತೆ ಮತ್ತೆ ಉಲ್ಲೇಖಿಸುವುದರಿಂದ ಮತ್ತು ಅಲ್ಲಿನ ಪ್ರತಿಭಟನಾ ನಿರತರನ್ನು ಪದೇ ಪದೇ ಟಿ.ವಿ. ಮಾಧ್ಯಮಗಳಲ್ಲಿ ತೋರಿಸುವುದರಿಂದ ಪ್ರತಿಭಟನೆಗೆ ನಿರ್ದಿಷ್ಟ ಧರ್ಮದ ಬಣ್ಣ ಬಳಿಯಲು ಸುಲಭ ಎಂಬುದಾಗಿ ಪ್ರಭುತ್ವ ಭಾವಿಸಿಕೊಂಡಿತು. ಕೊನೆಗೆ,
ಶಾಹೀನ್‍ಬಾಗ್, ಜಾಫ್ರಾಬಾದ್ ಇತ್ಯಾದಿ ಪ್ರತಿಭಟನಾ ನಿರತರನ್ನು ಆರೋಪಿ ಸ್ಥಾನದಲ್ಲಿ ಕೂರಿಸಿಕೊಂಡೇ ದೆಹಲಿ ಗಲಭೆಗೆ ಕಾರಣಗಳನ್ನು ಹುಡುಕಲಾಯಿತು. ಸಿಎಎ ವಿರೋಧಿ ಪ್ರತಿಭಟ ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೇ ಗುರಿ ಮಾಡಿಕೊಂಡು ಬಂಧಿಸಲಾಯಿತು. ಸಫೂರಾ ಝರ್ಗರ್, ನತಾಶಾ ನರ್ವಾಲ್, ದೇವಾಂಗನಾ ಕಲಿಟ್ರಾ, ಮೀರಾನ್ ಹೈದರ್, ಗುಲ್‍ಫಿಶಾ ಖಾತೂನ್, ಇಕ್ಬಾಲ್ ತನ್ಹಾ ಮುಂತಾದ ಅನೇಕರು ಬಂಧನಕ್ಕೊಳಗಾದರು. ಅಲ್ಲದೇ, ಉಮರ್ ಖಾಲಿದ್ ಸಹಿತ ಅನೇಕ ವಿದ್ಯಾರ್ಥಿ ಹೋರಾಟಗಾರರಿಗೆ ದೆಹಲಿ ಪೆÇಲೀಸರು ನಿರಂತರ ಸಮನ್ಸ್ ಕಳುಹಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಯೋಗೇಂದ್ರ ಯಾದವ್, ಹರ್ಷ ಮಂದರ್, ಕವಲ್‍ಪ್ರೀತ್ ಕೌರ್, ಉಮರ್ ಖಾಲಿದ್ ಮುಂತಾದವರು ವಿವರಗಳನ್ನು ಹಂಚಿಕೊಂಡಿದ್ದಾರೆ.
ಪ್ರಭುತ್ವ ಮತ್ತು ಪ್ರತಿಭಟನೆ- ಇವೆರಡೂ ಶತ್ರುಗಳಲ್ಲ. ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರಿಗೆ ಮಾತ್ರ ಪ್ರತಿಭಟನೆಯನ್ನು ಶತ್ರುವಿನಂತೆ ಕಾಣುವುದಕ್ಕೆ ಸಾಧ್ಯ. ಪ್ರತಿಭಟನೆಗೆ ಅವಕಾಶ ಇಲ್ಲದ ಕಡೆ ನಿರಂಕುಶತೆ ಬೆಳೆಯುತ್ತದೆ. ನಿಜವಾಗಿ, ಸಿಎಎ ಕಾಯ್ದೆಯನ್ನು ರಚಿಸುವ ಸ್ವಾತಂತ್ರ್ಯ ಪ್ರಭುತ್ವಕ್ಕೆ ಇರುವಂತೆಯೇ ಅದನ್ನು ವಿರೋಧಿಸುವ ಸ್ವಾತಂತ್ರ್ಯ ಆ ಪ್ರಭುತ್ವವನ್ನು ಚುನಾಯಿಸಿದ ನಾಗರಿಕರಿಗೂ ಇದೆ. ಆ ಪ್ರತಿಭಟನಾ ಧ್ವನಿಯನ್ನು ಸಂಯಮದಿಂದ ಆಲಿಸಬೇಕಾದುದು ಪ್ರಭುತ್ವದ ಕರ್ತವ್ಯ. ಆದರೆ, ಸಿಎಎ ಕಾಯ್ದೆಯನ್ನು ಜಾರಿಗೆ ತಂದ ಪ್ರಭುತ್ವವನ್ನು ಅದಕ್ಕೆ ಎದುರಾದ ವಿರೋಧವನ್ನು ಸಹಿಸಿಕೊಳ್ಳಲು ಸಿದ್ಧವಾಗಲಿಲ್ಲ. ವಿರೋಧವನ್ನೇ ದೇಶದ್ರೋಹದಂತೆ ಮತ್ತು ಷಡ್ಯಂತ್ರದಂತೆ ಬಿಂಬಿಸಲು ಯತ್ನಿಸಿತು. ಗೋಲೀಬಾರನ್ನು ನಡೆಸಿತು. ತನ್ನದೇ ನಾಗರಿಕರನ್ನು ಇಷ್ಟೊಂದು ಕೆಟ್ಟದಾಗಿ ನಡೆಸಿಕೊಂಡ ಘಟನೆ ತುರ್ತುಸ್ಥಿತಿಯ ಬಳಿಕದ ಭಾರತದಲ್ಲಿ ಬಹುಶಃ ಇದೇ ಮೊದಲು. ತಾನು ಮಾಡಿದ್ದೇ ಕಾನೂನು ಮತ್ತು ಹೇಳಿದ್ದೇ ನ್ಯಾಯ ಎಂಬ ರೀತಿಯಲ್ಲಿ ಯಾವುದೇ ಪ್ರಭುತ್ವ ವರ್ತಿಸುವುದು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಪ್ರಜಾತಂತ್ರದಲ್ಲಿ ನಾಗರಿಕರ ಅಭಿಪ್ರಾಯವೇ ಅಂತಿಮ. ನಾಗರಿಕರನ್ನು ಹೊರತುಪಡಿಸಿ ಪ್ರಭುತ್ವವೇ ಇಲ್ಲ. ಇದೊಂದು ಉದಾತ್ತ ಪರಿಕಲ್ಪನೆ. ಆದರೆ
ಕೆಲವೊಮ್ಮೆ ಪ್ರಭುತ್ವ ಪ್ರಜಾತಂತ್ರದ ಈ ಮೂಲ ಆಶಯವನ್ನೇ ತಾರುಮಾರುಗೊಳಿಸಿ ಬೀಗುವುದಿದೆ. ನಾಗರಿಕರ ಮೇಲೆಯೇ ದಬ್ಬಾಳಿಕೆ, ದೌರ್ಜನ್ಯ ನಡೆಸುವುದಿದೆ. 1975ರಲ್ಲಿ ಇಂದಿರಾಗಾಂಧಿ ಈ ಸಾಹಸಕ್ಕೆ ಕೈ ಹಾಕಿದ್ದರು ಮತ್ತು ಬಳಿಕ ಎಂದೂ ಮರೆಯಲಾಗದ ಉತ್ತರವನ್ನೂ ಈ ದೇಶದ ನಾಗರಿಕರು ಕೊಟ್ಟಿದ್ದರು. ಇದರಾಚೆಗೆ ಏನೂ ಹೇಳಬೇಕಿಲ್ಲ.
No comments:
Post a Comment