ಈ ದೇಶದ ರೈತರಿಗೂ ಕೃಷಿ ಉತ್ಪನ್ನ ಮಾರಾಟ ಸಮಿತಿಗಳಿಗೂ (ಎಪಿಎಂಸಿ) ಬಿಟ್ಟಿರಲಾರದ ನಂಟಿದೆ. ರೈತರು, ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಈ ಸಮಿತಿಗಳಿಂದ ರೈತರಿಗೆ ಆಗುವ ಲಾಭ ಏನೆಂದರೆ, ಅವರ ಬೆಳೆಗಳಿಗೆ ಖಚಿತ ಆದಾಯವನ್ನು ಇವು ಖಾತರಿ ಪಡಿಸುತ್ತವೆ. ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕೊಟ್ಟು ಈ ಮಂಡಿಗಳಿಂದ ಸರಕುಗಳನ್ನು ಖರೀದಿಸುತ್ತದೆ ಮತ್ತು ದೇಶದಾದ್ಯಂತದ ಮಾರುಕಟ್ಟೆಗಳಿಗೆ ವಿತರಿಸುತ್ತದೆ. ಇದು ಈಗಿನ ವ್ಯವಸ್ಥೆ. ಇಲ್ಲಿಂದ ಖರೀದಿಸಲಾದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಡುವುದು ಮತ್ತು ರಿಯಾಯಿತಿ ದರದಲ್ಲಿ ದೇಶದ ಜನರಿಗೆ ಒದಗಿಸುವ ವ್ಯವಸ್ಥೆಯನ್ನೂ ಸರಕಾರ ಮಾಡುತ್ತಿದೆ. ಈ ದೇಶದಲ್ಲಿ ಇಂಥ 7000 ಎಪಿಎಂಸಿಗಳಿವೆ. ಅಲ್ಲದೇ, ಗೋಧಿ ಮತ್ತು ಅಕ್ಕಿಯನ್ನು ಬೆಳೆಯುವ ಬಹುಮುಖ್ಯ ರಾಜ್ಯಗಳೆಂದರೆ ಪಂಜಾಬ್ ಮತ್ತು ಹರ್ಯಾಣ. ಪಂಜಾಬಿನ ಒಟ್ಟು ಗೋಧಿ ಮತ್ತು ಅಕ್ಕಿ ಉತ್ಪಾದನೆಯ ಪೈಕಿ 85% ಮತ್ತು ಹರ್ಯಾಣದ 75% ಉತ್ಪನ್ನವು ಮಾರಾಟವಾಗುವುದೇ ಎಪಿಎಂಸಿಗಳ ಮೂಲಕ. ಅಂದರೆ ಸರಕಾರದ ಕನಿಷ್ಠ ಬೆಂಬಲ ಬೆಲೆಯನ್ನು ಆಶ್ರಯಿಸಿಯೇ ರೈತರು ಬೆಳೆ ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೂ ಸರಕಾರವು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರನ್ನು ಆದರಿಸುವ ಕ್ರಮ ಎಪಿಎಂಸಿ ಮೂಲಕ ಮಾಡುತ್ತಿದೆ. ಆದ್ದರಿಂದಲೇ,
ಸದ್ಯ ಮೂರು ಮಸೂದೆಗಳ ಮೇಲೆ ಎದ್ದಿರುವ ಆಕ್ಷೇಪಗಳಲ್ಲಿ ಈ ಕನಿಷ್ಠ ಬೆಂಬಲ ಬೆಲೆಗೆ ಮುಖ್ಯ ಪಾತ್ರ ಇದೆ. ಈ ಮಸೂದೆಗಳ ಪ್ರಕಾರ, ಇನ್ನು ಮುಂದೆ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಎಪಿಎಂಸಿಯನ್ನು ಆಶ್ರಯಿಸಬೇಕಿಲ್ಲ. ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಹಾಗೆ ಮಾರಾಟ ಮಾಡುವ ರೈತರನ್ನು ಆಕ್ಷೇಪಿಸುವ ಯಾವ ಹಕ್ಕೂ ಎಪಿಎಂಸಿಗಳಿಗೆ ಇಲ್ಲ. ನಾಳೆ ಯಾವುದೇ ಕಾರ್ಪೋರೇಟ್ ಕಂಪೆನಿ ಬಂದು ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಹುದು. ಎಪಿಎಂಸಿಗಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಅವು ಖರೀದಿಸುವುದಕ್ಕೂ ಅವಕಾಶ ಇದೆ. ಒಂದುವೇಳೆ, ಈ ಕಂಪೆನಿಗಳು ಎಪಿಎಂಸಿ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯನ್ನು ನಿಗದಿ ಪಡಿಸಿದರೆ ರೈತ ತನ್ನ ಉತ್ಪನ್ನಗಳನ್ನು ಅವರಿಗೆ ಮಾರದೇ ಎಪಿಎಂಸಿಗಳ ಮೂಲಕವೇ ಮಾರಬಹುದು ಎಂಬ ಅವಕಾಶವೂ ಮಸೂದೆಯಲ್ಲಿದೆ. ಒಂದುರೀತಿಯಲ್ಲಿ, ಮುಕ್ತ ಮಾರುಕಟ್ಟೆಗೆ ರೈತರನ್ನು ದೂಡುವ ಪ್ರಯತ್ನ ಇದು ಎಂಬುದು ಸ್ಪಷ್ಟ. ಆದರೆ,
ರೈತರ ಆತಂಕವಿರುವುದೂ ಇಲ್ಲೇ. ಬೃಹತ್ ಕಾರ್ಪೋರೇಟ್ ಕಂಪೆನಿಗಳು ನಾಳೆ ರೈತರಿಂದ ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದ ಉತ್ತೇಜಿತಗೊಳ್ಳುವ ರೈತರು ಎಪಿಎಂಸಿಯ ನ್ನು ನಿರ್ಲಕ್ಷಿಸಿ ಕಂಪೆನಿಗಳನ್ನೇ ಆಶ್ರಯಿಸಬಹುದು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಎಪಿಎಂಸಿಗಳು ನಾಶವಾಗಬಹುದು. ಇದರ ಬಳಿಕ ಕಾರ್ಪೋರೇಟ್ ಕಂಪೆನಿಗಳು ತಮ್ಮ ನಿಜವಾದ ಮುಖವನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸಬಹುದು. ರೈತರ ಉತ್ಪನ್ನಗಳಿಗೆ ತೀರಾ ಕನಿಷ್ಠ ಬೆಲೆಯನ್ನು ನಿಗದಿಗೊಳಿಸಿ, ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ, ಇದನ್ನು ತಿರಸ್ಕರಿಸಿ ಎಪಿಎಂಸಿಗೆ ಹೋಗುವ ಅವಕಾಶವೂ ಇರುವುದಿಲ್ಲ. ಯಾಕೆಂದರೆ, ಅದು ಆ ಮೊದಲೇ ನಾಶವಾಗಿರುತ್ತದೆ. ಆ ಮೂಲಕ ಸರಕಾರ ಆವರೆಗೆ ರೈತ ಉತ್ಪನ್ನಗಳಿಗೆ ನೀಡುತ್ತಾ ಬಂದಿರುವ ಕನಿಷ್ಠ ಬೆಂಬಲ ಬೆಲೆಯೂ ತನ್ನಿಂತಾನೇ ನಿಂತು ಹೋಗಿರುತ್ತದೆ. ಆದ್ದರಿಂದ ರೈತ ಅನ್ಯದಾರಿಯಿಲ್ಲದೇ ಕಾರ್ಪೋರೇಟ್ ಕಂಪೆ ನಿಗಳು ನಿಗದಿಗೊಳಿಸಿದ ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಲೇಬೇಕಾಗುತ್ತದೆ. ಬೆಳೆಯನ್ನು ಬೆಳೆಯುವುದಕ್ಕೆ ತಗಲುವ ವೆಚ್ಚವು ಉತ್ಪನ್ನ ಮಾರಾಟದಲ್ಲಿ ಸರಿದೂಗದೇ ಹೋದಾಗ ರೈತ ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ತನ್ನ ಜಮೀನನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಬಿಟ್ಟುಕೊಟ್ಟು ಕೂಲಿಯಾಳಾಗಿ ದುಡಿಯಬೇಕು. ಒಂದುರೀತಿಯಲ್ಲಿ ಇದು ಪುನಃ ಹಿಮ್ಮುಖವಾಗಿ ಚಲಿಸಿದಂತೆ.
ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಳ್ಳುವ ಮೊದಲು ಈ ದೇಶದಲ್ಲಿ ಬೃಹತ್ ಜಮೀನ್ದಾರರು ಮತ್ತು ಕೂಲಿಯಾಳುಗಳು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ದಣಿ ಮತ್ತು ಒಕ್ಕಲು ಎಂಬುದಾಗಿ ಸಾಮಾನ್ಯವಾಗಿ ಅದು ಗುರುತಿಸಿಕೊಳ್ಳುತ್ತಿತ್ತು. ಜಮೀನ್ದಾರ ಕೂತು ಉಣ್ಣುತ್ತಿದ್ದ. ಆತನ ಜಮೀನಿನಲ್ಲಿ ಹಗಲೂ ರಾತ್ರಿ ಬೆವರು ಸುರಿಸುವ ರೈತ ಮತ್ತು ಕಾರ್ಮಿಕ ಋಣ ಸಂದಾಯದಲ್ಲೇ ಆಯುಷ್ಯವನ್ನು ಕಳೆಯುತ್ತಿದ್ದ. ಕೇಂದ್ರ ಸರಕಾರದ ಈ ಮಸೂದೆಗಳು ಸುಮಾರಾಗಿ ರೈತರನ್ನು ಅದೇ ಸ್ಥಿತಿಗೆ ದೂಡುವ ಎಲ್ಲ ಸಾಧ್ಯತೆಗಳಿವೆ ಅನ್ನುವುದು ರೈತರ ಆತಂಕ. ಅಲ್ಲದೇ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಯನ್ನು ಇದರ ಜೊತೆಗೇ ಅಂಗೀಕರಿಸಲಾಗಿದೆ. ರೈತರ ಕೃಷಿ ಭೂಮಿಯನ್ನು ಕಾರ್ಪೋರೇಟ್ ದೊರೆಗಳಿಗೆ ಖರೀದಿಸುವ ಅವಕಾಶ ಇನ್ನು ಮುಂದೆ ಈ ಕಾಯ್ದೆಯ ಮೂಲಕ ಲಭ್ಯವಾಗಲಿದೆ. ಒಂದುಕಡೆ ರೈತರ ಉತ್ಪನ್ನಗಳನ್ನು ನೇರವಾಗಿ ಈ ಕಂ ಪೆನಿಗಳಿಗೆ ಖರೀದಿಸಲು ಮುಕ್ತ ಅವಕಾಶ ನೀಡುತ್ತಾ, ಇನ್ನೊಂದು ಕಡೆ ಇದೇ ಕಂಪೆನಿಗಳಿಗೆ ರೈತರ ಕೃಷಿ ಭೂಮಿಯನ್ನು ಖರೀದಿಸುವುದಕ್ಕೂ ಬಾಗಿಲು ತೆರೆದುಕೊಂಡಂತಾಗುತ್ತದೆ. ಇದರಿಂದ ರೈತರಿಗೆ ಲಾಭವಾಗುವ ಬದಲು ಅಂತಿಮವಾಗಿ ಅವರನ್ನು ಶೋಷಿಸುವುದಕ್ಕೆ ಈ ಕಂಪೆನಿಗಳಿಗೆ ಅವಕಾಶ ಒದಗಬಹುದು ಎಂಬ ಭಯ ರೈತರಲ್ಲಿದೆ. ಈ ಆತಂಕ ನಿರ್ಲಕ್ಷಿಸುವಂಥದ್ದೂ ಅಲ್ಲ. ಆದ್ದರಿಂದ, ಸರಕಾರಕ್ಕೆ ರೈತರ ಮೇಲೆ ಕಾಳಜಿ ಇರುವುದೇ ಆಗಿದ್ದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಎಪಿಎಂಸಿಯಂತೆಯೇ ಎಪಿಎಂಸಿ ಹೊರಗೂ ನಿಗದಿಗೊಳಿಸಿದರೆ ಮತ್ತು ಸರಕಾರ ನಿಗದಿಪಡಿಸುವ ಬೆಲೆಗಿಂತ ಕಡಿಮೆ ಬೆಲೆಗೆ ಯಾವ ಕಾರ್ಪೋರೇಟ್ ಕಂಪೆನಿಯೂ ರೈತರಿಂದ ಉತ್ಪನ್ನ ಖರೀ ದಿಸದಂತೆ ಮಾಡುವ ನಿಯಮಗಳನ್ನು ಈ ಮಸೂದೆಗಳಲ್ಲಿ ಸೇರಿಸಬೇಕಿತ್ತು. ಹೀಗಾದರೆ ರೈತರನ್ನು ಶೋಷಿಸುವುದಕ್ಕೆ ಕಂಪೆನಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ವಿಪಕ್ಷಗಳೂ ಇದೇ ಬೇಡಿಕೆಯನ್ನು ಮುಂದಿಟ್ಟಿವೆ.
ಬಹುಶಃ ಕೇಂದ್ರ ಸರಕಾರದ ಈಗಿನ ಅವಸರವನ್ನು ಮತ್ತು ದಮನಕಾರಿ ನೀತಿಯನ್ನು ನೋಡಿದರೆ ಈ ಮೂಲ ಕಾನೂನುಗಳು ರೈತರ ಬದಲು ಕಾರ್ಪೋರೇಟ್ ಕಂಪೆನಿಗಳ ಹಿತವನ್ನು ದೃಷ್ಟಿಯ ಲ್ಲಿಟ್ಟುಕೊಂಡು ರೂಪಿಸಿರುವಂತಿದೆ. ರೈತರನ್ನು ದೇಶದ ಬೆನ್ನೆಲುಬು ಎಂದು ಕೊಂಡಾಡುತ್ತಲೇ ಉ ಪಾಯವಾಗಿ ಅವರ ಬೆನ್ನೆಲುಬನ್ನು ಮುರಿದು ಕಾರ್ಪೋರೇಟ್ ದಣಿಗಳ ಬೆನ್ನೆಲುಬನ್ನು ಮಾಲೀಶು ಮಾಡುವ ಉದ್ದೇಶ ಹೊಂದಿರುವಂತಿದೆ. ಈ ನಡೆ ಅಪಾಯಕಾರಿ.
No comments:
Post a Comment