Saturday, 16 January 2021

ಬಾಬರಿ: ರಚನಾತ್ಮಕ ಪ್ರತಿಕ್ರಿಯೆಯ ಸಂಕೇತ- ಧನ್ನಿಪುರ

 



ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಬಾಬರಿ ಮಸೀದಿ  ಇದ್ದ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಸುಪ್ರೀಮ್ ಕೋರ್ಟು, ಅದಕ್ಕೆ ಬದಲಿಯಾಗಿ 5 ಎಕರೆ ಭೂಮಿಯನ್ನು  ಮಸೀದಿ ನಿರ್ಮಾಣಕ್ಕೆ ನೀಡುವ ಪ್ರಸ್ತಾಪ ಮುಂದಿಟ್ಟಿತು. ಈ ಪ್ರಸ್ತಾಪಕ್ಕೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದುವು.  ಕೋರ್ಟು ಮುಂದಿರಿಸಿರುವ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಒಂದು ಬಣ ವಾದಿಸಿದರೆ, ಇನ್ನೊಂದು ಬಣ ಅದನ್ನು  ಸ್ವೀಕರಿಸುವ ಇರಾದೆ ವ್ಯಕ್ತಪಡಿಸಿತು. ಅದರಂತೆ ಧನ್ನಿಪುರದಲ್ಲಿ ಸರಕಾರ ಕೊಡಮಾಡಿದ 5 ಎಕರೆ ಭೂಮಿಯನ್ನು ಸ್ವೀಕರಿಸಿತು. ಇ ದೀಗ ಆ ಕುರಿತಂತೆ ಇನ್ನಷ್ಟು ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ. ಈ ವಿವರಗಳು ಬಹಳ ಚೇತೋಹಾರಿ.  ಸಾಮಾನ್ಯವಾಗಿ,

ಬಾಬರಿ ಮಸೀದಿಗೆ ಪರ್ಯಾಯವಾಗಿ ಅಂಥದ್ದೇ  ಇನ್ನೊಂದು ಮಸೀದಿ ನಿರ್ಮಾಣವಾಗುತ್ತದೆ ಎಂದು ಅನೇಕರು ಭಾವಿಸಿದ್ದರು.  ಸುಪ್ರೀಮ್ ಕೊಡಮಾಡಿರುವ 5 ಎಕರೆ ಭೂಮಿಯನ್ನು ಸ್ವೀಕರಿಸಬಾರದು ಎಂದು ವಾದಿಸುತ್ತಿದ್ದುದಕ್ಕೆ ಈ ಭಾವನೆಯೂ ಒಂದು  ಕಾರಣವಾಗಿತ್ತು.

ಧ್ವಂಸಗೊಳಿಸಲಾದ ಬಾಬರಿ ಮಸೀದಿಯನ್ನು ಮತ್ತೆ ಅಲ್ಲೇ  ನಿರ್ಮಾಣ ಮಾಡಬೇಕು ಎಂಬ ವಾದದ ಹಿಂದಿದ್ದುದು ಕೇವಲ ಮಸೀ ದಿಯೊಂದರ ನಿರ್ಮಾಣದ ಆಗ್ರಹವಲ್ಲ, ತೋಳುಬಲದ ಮೂಲಕ ಸಂವಿಧಾವನ್ನು ಹಾಡುಹಗಲೇ ಅವಮಾನಿಸಲಾದ ಘಟನೆಗೆ  ನ್ಯಾಯ ಸಲ್ಲಬೇಕು ಎಂಬ ಕಾರಣದಿಂದಾಗಿತ್ತು. ಈ ದೇಶದ ನ್ಯಾಯವ್ಯವಸ್ಥೆಯನ್ನು ಒಪ್ಪುವ ಯಾರೂ 1992 ಡಿಸೆಂಬರ್ 6ರಂದು  ನಡೆಸಲಾದ ಕೃತ್ಯವನ್ನು ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ಅದು ನ್ಯಾಯದ ಅಣಕ. ನ್ಯಾಯಾಂಗಕ್ಕೆ ಮಾಡಲಾದ ಅಗೌರವ. ಸ್ವಾತಂತ್ರ‍್ಯ  ಲಭ್ಯವಾಗಿ 6 ದಶಕಗಳು ಕಳೆದ ಬಳಿಕವೂ ಸಂವಿಧಾನವನ್ನು ಯಥಾರೂಪದಲ್ಲಿ ಜಾರಿಗೆ ತರಲು ನಮ್ಮ ಆಡಳಿತ ವ್ಯವಸ್ಥೆಗಳು ಹೇಗೆ  ವಿಫಲವಾಗುತ್ತಿವೆ ಎಂಬುದಕ್ಕೆ ಸಾಕ್ಷ್ಯ  ಒದಗಿಸಿದ ಘಟನೆ.

ಯಾವುದೇ ಮಸೀದಿ ಅಥವಾ ಮಂದಿರ ವಿವಾದಕ್ಕೆ ಒಳಗಾಗುವುದು ಬೇರೆ, ಆ ವಿವಾದವನ್ನು ತೋಳುಬಲದಿಂದ ಬಗೆಹರಿಸುವೆವು  ಎಂದು ಸಾರುವುದು ಬೇರೆ. ಈ ದೇಶ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ವಿವಾದ ಪರಿಹರಿಸುವುದಕ್ಕೆ ನ್ಯಾಯಾಲಯವನ್ನು ಆ ಶ್ರಯಿಸಬೇಕಾದುದು ಪ್ರತಿಯೋರ್ವ ಪ್ರಜೆಯ ಹೊಣೆಗಾರಿಕೆ. ಆದ್ದರಿಂದ ನ್ಯಾಯಾಲಯವೆಂಬುದು ದುರ್ಬಲರು ಎಡತಾಕುವ ಜಾಗ  ಮತ್ತು ಪ್ರಬಲರಿಗೆ ಅದರ ಅಗತ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಬಾಬರಿ  ಮಸೀದಿ ವಿವಾದವು ನ್ಯಾಯಾಲಯದಲ್ಲಿತ್ತು ಮತ್ತು ವಿಚಾರಣೆಯ ಹಂತದಲ್ಲೂ ಇತ್ತು. ಈ ನಡುವೆಯೇ ತೋಳುಬಲದ ಮೂಲಕ  ಅದನ್ನು ಉರುಳಿಸಲಾಯಿತು. ವಿರೋಧ ಎದುರಾದದ್ದು ಈ ಧ್ವಂಸಕಾರ್ಯದ ಬಗ್ಗೆ. ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು  ಬರೆದ ಸುಪ್ರೀಮ್ ಕೋರ್ಟು ಕೂಡ ಈ ಧ್ವಂಸವನ್ನು ತಪ್ಪು ಎಂದಿತ್ತು. ಇದೀಗ ಸುಪ್ರೀಮ್ ನೀಡಿರುವ 5 ಎಕರೆ ಭೂಮಿಯು ಮತ್ತೆ  ದೇಶದ ಗಮನ ಸೆಳೆದಿದೆ. ನಿಜವಾಗಿ,

ಆ ಭೂಮಿಯಲ್ಲಿ ಒಂದು ಭವ್ಯ ಮಸೀದಿಯೊಂದನ್ನು ಮಾತ್ರ ಕಟ್ಟಿರುತ್ತಿದ್ದರೆ ಅದು ಸುದ್ದಿಯ ಕೇಂದ್ರವಾಗುವ ಸಾಧ್ಯತೆ ಕಡಿಮೆಯಿತ್ತು.  ಆದರೆ ಭೂಮಿಯನ್ನು ಸ್ವೀಕರಿಸಿದವರು ಬಿಡುಗಡೆಗೊಳಿಸಿರುವ ನೀಲನಕ್ಷೆಯ ವಿವರಗಳು ಕುತೂಹಲಕಾರಿಯಾಗಿವೆ. ಇಲ್ಲಿ 2000  ಮಂದಿ ಒಮ್ಮೆಗೇ ನಮಾಝï ಮಾಡಬಹುದಾದಷ್ಟು ವಿಸ್ತಾರವುಳ್ಳ ಮಸೀದಿಯ ನಿರ್ಮಾಣದ ಜೊತೆಜೊತೆಗೇ 300 ಹಾಸಿಗೆಗಳುಳ್ಳ  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ ಮತ್ತು ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಒಂದುರೀತಿಯಲ್ಲಿ, 1992  ಡಿಸೆಂಬರ್ 6ರಂದು ನಡೆದ ಐತಿಹಾಸಿಕ ಅನ್ಯಾಯಕ್ಕೆ ನೀಡಲಾದ ರಚನಾತ್ಮಕ ತಿರುಗೇಟು ಇದು. ಅಂದಹಾಗೆ,

ಮುಸ್ಲಿಮರಿಗೆ ಮಸೀದಿಯ ಕೊರತೆಯಿಲ್ಲ. ಹಾಗೆಯೇ ಮಸೀದಿಗಳೆಂದರೆ ಮುಸ್ಲಿಮರು ಮಾತ್ರ ಆರಾಧಿಸುವ ಜಾಗವೂ ಹೌದು.  ಆದ್ದರಿಂದ ಮಸೀದಿಗಳು ಹೆಚ್ಚೆಚ್ಚು ನಿರ್ಮಾಣವಾಗುವುದರಿಂದ ನಮಾಝï‌ನ ಸ್ಥಳಗಳು ಹೆಚ್ಚಾಗಬಹುದೇ ಹೊರತು ಅದರಿಂದ  ಮುಸ್ಲಿಮೇತರರಿಗೆ ಪ್ರಯೋಜನವಾಗುವುದಕ್ಕೆ ಸಾಧ್ಯವಿಲ್ಲ. ಇದು ಮಂದಿರ, ಚರ್ಚ್, ಗುರುದ್ವಾರಗಳಿಗೂ ಅನ್ವಯಿಸುತ್ತದೆ. ಆದ್ದರಿಂದ  ಉರುಳಿದ ಬಾಬರಿ ಮಸೀದಿಗೆ ಬದಲಾಗಿ ಒಂದು ಮಸೀದಿ ಕಟ್ಟುವುದು ಮುಸ್ಲಿಮ್ ಸಮುದಾಯದ ತುರ್ತು ಅಗತ್ಯವೇನೂ  ಆಗಿರಲಿಲ್ಲ. ಆದರೆ, ಆಸ್ಪತ್ರೆ, ಮ್ಯೂಸಿಯಂಗಳು ಹಾಗಲ್ಲ. ಆಸ್ಪತ್ರೆಯೆಂಬುದು ಧರ್ಮಾತೀತ. ಬಾಬರಿ ಮಸೀದಿಯನ್ನು  ಉರುಳಿಸಿದವರನ್ನೂ ಅದನ್ನು ಬೆಂಬಲಿಸಿದವರನ್ನೂ ಬೆಂಬಲಿಸದವರನ್ನೂ ಸಮಾನವಾಗಿ ಸ್ವೀಕರಿಸಿಕೊಳ್ಳುವ ಜಾಗ. ಮುಂದೊಂದು  ದಿನ ಅಂಥದ್ದೊಂದು ವಾತಾವರಣ ನಿರ್ಮಾಣವಾಗಲೂ ಬಹುದು. ಉರುಳಿಸಿದುದನ್ನು ಬೆಂಬಲಿಸಿದವರು ಅಥವಾ ಉರುಳಿಸಿದವರ  ಪೀಳಿಗೆಯೇ ಮುಂದೊಂದು ದಿನ ಈ ಆಸ್ಪತ್ರೆಯನ್ನು ಪ್ರವೇಶಿಸುವಾಗ ಹಳತು ನೆನಪಾಗಲೂಬಹುದು. ರಚನಾತ್ಮಕ ಪ್ರತಿಕ್ರಿಯೆ ಅ ನ್ನುವುದು ಇದಕ್ಕೆ. ಅವರನ್ನು ಮರು ಅವಲೋಕನಕ್ಕೆ ಮತ್ತು ಪಶ್ಚಾತ್ತಾಪಕ್ಕೆ ಇಂಥ ಬೆಳವಣಿಗೆಗಳು ಪ್ರೇರಣೆಯನ್ನು ನೀಡುತ್ತವೆ. ಇದರ  ಜೊತೆಜೊತೆಗೇ ಮ್ಯೂಸಿಯಂ ನಿರ್ಮಾಣವನ್ನೂ ಇಟ್ಟು ನೋಡಬೇಕು. ಮ್ಯೂಸಿಯಂನಲ್ಲಿ ಏನೆಲ್ಲ ಇರಲಿವೆ ಎಂಬುದು ಇನ್ನೂ  ಸ್ಪಷ್ಟವಾಗಿಲ್ಲವಾದರೂ ಆ ಮ್ಯೂಸಿಯಂ ಧ್ವಂಸಗೊಳಿಸಲಾದ ಬಾಬರಿ ಮಸೀದಿ ವಿವರಗಳನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ  ಮತ್ತು ಅದು ಅತೀ ಅಗತ್ಯ ಕೂಡ. ಅಷ್ಟಕ್ಕೂ,

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರಿಗೆ ಮತ್ತು ಅದರ ಸಂಚು ಹೆಣೆದವರಿಗೆ ಶಿಕ್ಷೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಕೋರ್ಟು  ತೀರ್ಪು ಬರುವಾಗ ಅವರೆಲ್ಲ ಜೀವಂತ ಇರುತ್ತಾರೋ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಈಗಾಗಲೇ ಆ ಧ್ವಂಸ ಘಟನೆಗೆ 3 ದ ಶಕಗಳಾಗುತ್ತಾ ಬಂದಿವೆ. ಆರೋಪಿಗಳಲ್ಲಿ ಹಲವರು ಸಹಜ ಸಾವಿಗೂ ಒಳಗಾಗಿದ್ದಾರೆ. ಮಾತ್ರವಲ್ಲ, ಒಂದೆರಡು ತಲೆಮಾರುಗಳ  ಬಳಿಕ ಆ ಧ್ವಂಸ ಘಟನೆಯ ನೆನಪೇ ಅಳಿದು ಹೋಗುವುದಕ್ಕೂ ಅವಕಾಶ ಇದೆ. ಆದ್ದರಿಂದ ಮ್ಯೂಸಿಯಂ ನಿರ್ಮಾಣ ಬಹಳ  ಪ್ರಾಮುಖ್ಯವಾದದ್ದು ಅನ್ನಿಸುತ್ತದೆ. ಬಾಬರಿ ಮಸೀದಿಯ ಆರಂಭದಿಂದ ಹಿಡಿದು 1992 ಡಿಸೆಂಬರ್ 6ರಂದು ಧ್ವಂಸಗೈಯಲಾದ  ಘಟನೆಯವರೆಗೆ ಎಲ್ಲ ವಿವರಗಳನ್ನೂ ವೀಕ್ಷಕರಿಗೆ ಒದಗಿಸುವ ಮ್ಯೂಸಿಯಂ ರಚನೆಯಾದರೆ ಅದರಿಂದ ಭವಿಷ್ಯದ ಪೀಳಿಗೆಯು  ವಿಸ್ಮೃತಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಯಾವುದೇ ಒಂದು ಸಮುದಾಯ ಸಶಕ್ತವಾಗಿ ಬೆಳೆಯಬೇಕೆಂದರೆ ಅದಕ್ಕೆ ಗತ ಇತಿಹಾಸದ ಅರಿವು ಇರಬೇಕಾಗುತ್ತದೆ. ಗತ  ತಲೆಮಾರು ಎದುರಿಸಿದ ಸವಾಲು, ಸಂಘಟಿಸಿದ ಹೋರಾಟ ಮತ್ತು ಮಾಡಿದ ತ್ಯಾಗವನ್ನು ತಿಳಿದುಕೊಂಡಿರಬೇಕಾಗುತ್ತದೆ. ಬೈತುಲ್  ಮಕ್ದಿಸ್‌ನ ಪ್ರಸ್ತಾಪ ಆದಾಗಲೆಲ್ಲ ಸಲಾಹುದ್ದೀನ್ ಅಯ್ಯೂಬಿಯವರು ನೆನಪಿಗೆ ಬರುವುದಕ್ಕೆ ಕಾರಣ ಈ ಇತಿಹಾಸದ ಅರಿವು. ಅವರ  ಹೋರಾಟದ ಯಾವ ಮಗ್ಗುಲೂ ದಾಖಲುಗೊಳ್ಳದೇ ಇರುತ್ತಿದ್ದರೆ ಇವತ್ತು ಬೈತುಲ್ ಮಕ್ದಿಸ್‌ನ ಜೊತೆ ಅವರ ನೆನಪು ಆಗುವುದಕ್ಕೆ  ಸಾಧ್ಯವಿರಲಿಲ್ಲ. ಆದ್ದರಿಂದ ಹೊಸ ತಲೆಮಾರಿಗೆ ಹಳೆ ಇತಿಹಾಸವನ್ನು ತಿಳಿಸಬೇಕಾದುದು ಅವರ ಸಶಕ್ತ ಬೆಳವಣಿಗೆಯ ದೃಷ್ಟಿಯಿಂದ  ತುಂಬಾ ಅಗತ್ಯ. ಈ ಹಿನ್ನೆಲೆಯಲ್ಲಿ ಧನ್ನಿಪುರದಲ್ಲಿ ನಿರ್ಮಾಣವಾಗುವ ಮ್ಯೂಸಿಯಂ ಮತ್ತು ಆಸ್ಪತ್ರೆ ಅತ್ಯಂತ ಬುದ್ಧಿವಂತಿಕೆಯ ನಡೆ.  ಇದು ಸ್ವಾಗತಾರ್ಹ.

ಆ ಬಿ.ಎಡ್. ವಿದ್ಯಾರ್ಥಿ ಹಾಗೇಕೆ ಮಾಡಿದ?




ಪ್ರೀತಿ, ಪ್ರೇಮವೆಂಬ ಹರೆಯದ ತಲ್ಲಣಗಳಿಗೆ ಈ ದೇಶದಲ್ಲಿ ಬಲಿಯಾಗುತ್ತಿರುವ ಜೀವಗಳ ಸಂಖ್ಯೆ ಸಣ್ಣದಲ್ಲ. ‘ಪ್ರೇಮ ನಿರಾಕರಣೆ:  ಪ್ರೇಮಿಯಿಂದ ಚೂರಿ ಇರಿತ’, ‘ಯುವತಿಗೆ ಆ್ಯಸಿಡ್ ಎರಚಿದ ಯುವಕ’, ‘ಹೆತ್ತವರ ವಿರೋಧ: ಪ್ರೇಮಿಗಳ ಆತ್ಮಹತ್ಯೆ’,  ‘ಪ್ರೇಮಿಗಳಿಬ್ಬರೂ ಪರಾರಿ..’ ಇತ್ಯಾದಿ ಶೀರ್ಷಿಕೆಗಳಲ್ಲಿ ಪ್ರತಿದಿನ ವಾರ್ತೆಗಳನ್ನು ನಾವು ಓದುತ್ತಿರುತ್ತೇವೆ. ನಮ್ಮದೇ ಕಣ್ಣೆದುರು ಬೆಳೆದ  ಯುವಕ-ಯುವತಿಯರು ಹತ್ಯೆ, ಆತ್ಮಹತ್ಯೆ, ಪರಾರಿಯಂಥ ತೀವ್ರ ನಿರ್ಧಾರಕ್ಕೆ ಹೇಗೆ ಬಂದರು ಎಂಬುದಾಗಿ ಸ್ವಲ್ಪ ದಿನ ಚರ್ಚಿಸಿ  ಬಳಿಕ ಮರೆತು ಬಿಡುತ್ತೇವೆ. ಆದರೂ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯೇನೂ ಆಗುತ್ತಿಲ್ಲ. ಕಳೆದವಾರ ಇಂಥದ್ದೇ  ಒಂದು  ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟು ವಿಶ್ಲೇಷಣೆ ನಡೆಸಿದೆ. 2009ರಲ್ಲಿ ಕಲಬುರ್ಗಿ ಜಿಲ್ಲೆಯ ಅಲಂದ ತಾಲೂಕಿನಲ್ಲಿ ನಡೆದ ದುರಂತ  ಪ್ರೇಮಕತೆಯನ್ನು ವಿಚಾರಣೆ ನಡೆಸುತ್ತಾ ಪ್ರೇಮ ನಿವೇದನೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹೆಣ್ಣಿನ ಸ್ವಾತಂತ್ರ್ಯದ ಸುತ್ತ  ಚರ್ಚೆ ನಡೆಸಿದೆ.

ಅಳಂದ ತಾಲೂಕಿನ ನವಲಗದಲ್ಲಿ ವಾಸಿಸುತ್ತಿದ್ದ ಬಿಎಡ್ ವಿದ್ಯಾರ್ಥಿ ವಿಜೇಂದ್ರ ಎಂಬವನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು  18 ವರ್ಷದ ಪುಷ್ಪಾ ಎಂಬ ಯುವತಿಯ ಮನೆ ಪ್ರವೇಶಿಸಿದ್ದ. ಆ ಸಂದರ್ಭದಲ್ಲಿ ಓರ್ವ ಮಹಿಳೆಯೂ ಅಲ್ಲಿದ್ದರು. ತನ್ನನ್ನು  ಮದುವೆಯಾಗು ಎಂದು ಆತ ಪುಷ್ಪಾಳನ್ನು ಒತ್ತಾಯಿಸಿದ. ಆಕೆ ನಿರಾಕರಿಸಿದಳು. ಆತ ಚೂರಿಯಿಂದ ಪುಷ್ಪಾಳನ್ನು ಇರಿದ. ಆಕೆ  ಸಾವಿಗೀಡಾದಳು.

ತನ್ನ ಮೇಲೆ ಕರುಣೆ ತೋರಬೇಕು ಎಂದು ಅಪರಾಧಿ ಇದೀಗ ಕೋರ್ಟಿನ ಮುಂದೆ ಕೋರಿಕೊಂಡಿದ್ದ. ತಕ್ಷಣದ ಪ್ರಚೋದನೆಯು  ತನ್ನನ್ನು ಆ ರೀತಿ ವರ್ತಿಸುವಂತೆ ಪ್ರೇರೇಪಿಸಿತು. ಆಕೆಯ ನಿರಾಕರಣೆಯಿಂದ ಅಚಾನಕ್ಕಾಗಿ ಆ ಅಪರಾಧ ಸಂಭವಿಸಿಬಿಟ್ಟಿತು ಎಂಬ  ಆತನ ಕೋರಿಕೆಯನ್ನು ಕೋರ್ಟು ವಿವಿಧ ರೂಪದಲ್ಲಿ ವಿಮರ್ಶೆಗೆ ಒಡ್ಡಿತು. ವಿಜೇಂದ್ರನ ಕೋರಿಕೆ ಯಾಕೆ ತಪ್ಪು ಅಂದರೆ, ಅದು  ಸಂತ್ರಸ್ತೆಗೆ ಆಯ್ಕೆಯ ಸ್ವಾತಂತ್ರ್ಯವನ್ನೇ ನಿರಾಕರಿಸುತ್ತದೆ. ತಾನು ಯಾರನ್ನು ಮದುವೆಯಾಗಬೇಕು, ಮದುವೆಯಾಗಬಾರದು ಎಂಬುದು  ವೈಯಕ್ತಿಕ ಸ್ವಾತಂತ್ರ್ಯ. ತಕ್ಷಣದ ಪ್ರಚೋದನೆಯ ಹೆಸರಲ್ಲಿ ಪುಷ್ಪಾಳಿಗೆ ಆ ಸ್ವಾತಂತ್ರ್ಯವನ್ನು ನಿರಾಕರಿಸಲಾಗದು. ಈ ಕೃತ್ಯದಲ್ಲಿ ಇ ನ್ನೊಂದು ಭಾವವೂ ಇದೆ. ಅದೇನೆಂದರೆ, ತಾನು ಗಂಡು ಎಂಬ ಅಹಮಿಕೆ. ಈ ಭಾವಕ್ಕೂ ಆ ಕ್ರೌರ್ಯದಲ್ಲಿ ಪಾಲು ಇದೆ.  ಒಂದುವೇಳೆ, ಪುಷ್ಪಾಳ ಹೆತ್ತವರು ಒಪ್ಪಿಕೊಳ್ಳದಿದ್ದರೂ ಆಕೆಯ ಪತಿ ಯಾರಾಗಬೇಕೆಂಬ ನಿರ್ಧಾರ ಸ್ವಾತಂತ್ರ್ಯವನ್ನು ಆಕೆಯಿಂದ  ನಿರಾಕರಿಸಲಾಗದು. ಆದ್ದರಿಂದ ತಕ್ಷಣದ ಪ್ರಚೋದನೆ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ...’ ಎಂಬ ರೀತಿಯಲ್ಲಿ ಅಭಿಪ್ರಾಯ  ಹಂಚಿಕೊಂಡ ಕೋರ್ಟು, ಅಪರಾಧಿ ವಿಜೇಂದ್ರನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.

ಹೆಣ್ಣು ಮತ್ತು ಗಂಡಿನ ನಡುವೆ ಆಕರ್ಷಣೆ ಹೊಸತಲ್ಲ ಮತ್ತು ತನ್ನ ಮಗ ಅಥವಾ ಮಗಳಿಗೆ ಅತ್ಯುತ್ತಮ ಸಂಗಾತಿ ಸಿಗಲಿ ಎಂದು  ಪ್ರತಿ ಹೆತ್ತವರು ಬಯಸುವುದೂ ಹೊಸತಲ್ಲ. ಹೊಸತು ಏನೆಂದರೆ, ಹರೆಯದ ಆಕರ್ಷಣೆಯೇ ಎಲ್ಲವೂ ಅಲ್ಲ ಮತ್ತು ಈ  ಆಕರ್ಷಣೆಯ ಆಚೆಗೂ ಬದುಕು ಇದೆ ಎಂಬುದನ್ನು ವಿವಿಧ ಆಧುನಿಕ ಮಾಧ್ಯಮಗಳ ಮೂಲಕ ಪ್ರತಿ ಸೆಕೆಂಡೂ ಸಾರುತ್ತಿರುವುದರ  ಹೊರತಾಗಿಯೂ ಪ್ರೇಮದ ಹೆಸರಲ್ಲಿ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ ಎಂಬುದು. 5 ದಶಕಗಳ ಹಿಂದಿಗೂ ಇಂದಿಗೂ ತಂತ್ರಜ್ಞಾನಗಳಿಗೆ ಸಂಬಂಧಿಸಿ ಬಹುದೊಡ್ಡ ಅಂತರವಿದೆ. ಸಿನಿಮಾ, ನಾಟಕ, ಕಾದಂಬರಿ, ಕತೆ, ಟಿ.ವಿ.  ಧಾರಾವಾಹಿ, ರಿಯಾಲಿಟಿ ಶೋಗಳು, ಧಾರ್ಮಿಕ ಬೋಧನಗೆಳೆಲ್ಲ ಶರವೇಗದಲ್ಲಿ ಜನರನ್ನು ತಲುಪುವ ಕಾಲ ಇದು. ಇವತ್ತಿನ ಯುವ  ಸಮೂಹವೂ ಹಿಂದಿನಂತಲ್ಲ. ಕೆರಿಯರ್, ಅದೂ-ಇದೂ ಎಂದು ಚಿಕ್ಕಂದಿನಿಂದಲೇ ಗುರಿ ನಿಗದಿಪಡಿಸಿಕೊಂಡು ಓಡಾಡುತ್ತಿರುತ್ತವೆ.  ವಯಸ್ಸಿಗಿಂತ ಹೆಚ್ಚು ಪ್ರೌಢತೆಯನ್ನು ಆಧುನಿಕ ತಂತ್ರಜ್ಞಾನಗಳು ಯುವ ಸಮೂಹಕ್ಕೆ ತುಂಬಿಸುತ್ತಲೂ ಇವೆ. ಹಾಗಿದ್ದೂ ಪ್ರೇಮದ  ವಿಷಯದಲ್ಲಿ ಯುವ ಸಮೂಹ ಅಪ್ರಬುದ್ಧತೆಯಿಂದ ವರ್ತಿಸಲು ಕಾರಣವೇನು?

ವಿಜೇಂದ್ರ ಬಿಎಡ್ ವಿದ್ಯಾರ್ಥಿ. ಆದ್ದರಿಂದ ಶಿಕ್ಷಣ ಕೊರತೆ ಇದಕ್ಕೆ ಕಾರಣ ಎಂದು ಹೇಳುವಂತಿಲ್ಲ. ಬಹುಶಃ ಪ್ರೇಮದ ಕುರಿತಂತೆ  ಅಥವಾ ಮಕ್ಕಳ ಮನಸ್ಸಿನಲ್ಲಾಗುವ ಪರಿವರ್ತಿನೆಯ ಸುತ್ತ ಹೆತ್ತವರು ಸೂಕ್ಷ್ಮವಾಗಿ ಗಮನಿಸದಿರುವುದಕ್ಕೂ ಇದರಲ್ಲಿ ಪಾತ್ರ  ಇರಬಹುದು ಎಂದು ತೋರುತ್ತದೆ. ಸುಮಾರು 17ರಿಂದ 22ರ ವರೆಗಿನ ಪ್ರಾಯ ಬಹಳ ನಾಜೂಕಿನದ್ದು. ದೈಹಿಕವಾಗಿ ಮಕ್ಕಳು ಇನ್ನೊಂದು ಮಜಲಿಗೆ ಪ್ರವೇಶಿಸುತ್ತಿರುವ ಮತ್ತು ವಿರುದ್ಧ ಲಿಂಗಗಳ ಬಗ್ಗೆ ಆಕರ್ಷಣೆಗೆ ಒಳಗಾಗುತ್ತಿರುವ ವಯಸ್ಸು. ಆ ಸಂದರ್ಭದಲ್ಲಿ  ಹೆತ್ತವರು ಮಕ್ಕಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕಾದ ಅಗತ್ಯ ಇದೆ. ಅವರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಿ,  ಅವರು ಅಮ್ಮನಲ್ಲೋ  ಅಪ್ಪನಲ್ಲೋ  ಎಲ್ಲವನ್ನೂ ಹೇಳಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯ ಇದೆ. ಮಕ್ಕಳು  ಹಾಗೆ ಹೆತ್ತವರಲ್ಲಿ ಹೇಳಿಕೊಳ್ಳಬೇಕೆಂದರೆ, ಮೊದಲು ಹೆತ್ತವರು ಸ್ವತಃ ಮಾನಸಿಕವಾಗಿ ಸಜ್ಜುಗೊಳ್ಳಬೇಕು. ಮಗ ಅಥವಾ ಮಗಳು  ಆಕರ್ಷಣೆಗೆ ಒಳಗಾಗಿರುವುದನ್ನು ಹೇಳಿಕೊಂಡಾಗ ಅವರು ಆ ಸಂಗತಿಯನ್ನು ಸಹಜವಾಗಿ ಸ್ವೀಕರಿಸಿ ಪ್ರಬುದ್ಧವಾಗಿ ವರ್ತಿಸುವುದಕ್ಕೆ  ತನ್ನನ್ನು ತಾನು ಸಜ್ಜುಗೊಳಿಸಬೇಕು. ಮಕ್ಕಳು ಆ ಕ್ಷಣದಲ್ಲಿ ತಾವೇ ಸರಿ ಎಂಬ ಭಾವದಲ್ಲಿರುತ್ತಾರೆ. ಹೆತ್ತವರು ತಮ್ಮ ಸರಿಯನ್ನು  ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಸಿಟ್ಟಲ್ಲಿರುತ್ತಾರೆ. ಅದು ಆ ಹರೆಯದ ಸಮಸ್ಯೆ. ಅದಕ್ಕೆ ನಾಜೂಕಿನಿಂದ ಸ್ಪಂದಿಸಬೇಕೇ ಹೊರತು  ಕಡ್ಡಿಮುರಿದಂತೆ ಉತ್ತರಿಸುವುದರಿಂದ ಕೆಲವೊಮ್ಮೆ ಅನಾಹುತಕ್ಕೂ ಅದು ಕಾರಣವಾದೀತು.

ಸಾಮಾನ್ಯವಾಗಿ ಪ್ರೇಮದ ಕಾರಣಕ್ಕಾಗಿ ಆತ್ಮಹತ್ಯೆಯೋ ಹತ್ಯೆಯೋ ನಡೆದಾಗ ಅದಕ್ಕೆ ಯುವ ಸಮೂಹದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ  ಮತ್ತು ಹಿರಿಯರಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳಲ್ಲಿ ಯಾವಾಗಲೂ ವ್ಯತ್ಯಾಸ ಇರುತ್ತದೆ. ಯುವಸಮೂಹದ ಪ್ರತಿಕ್ರಿಯೆಯಲ್ಲಿ ಆವೇಶ  ಇದ್ದರೆ ಹಿರಿಯ ತಲೆಮಾರಿನ ಪ್ರತಿಕ್ರಿಯೆಯಲ್ಲಿ ಸಹನೆ ಮತ್ತು ಕಾಳಜಿ ವ್ಯಕ್ತವಾಗುತ್ತದೆ. ಹಿರಿಯರು ಮತ್ತು ಕಿರಿಯರ ನಡುವಿನ  ಪ್ರಾಯದ ವ್ಯತ್ಯಾಸ ಮತ್ತು ಅನುಭವದ ವ್ಯತ್ಯಾಸವೇ ಈ ಪ್ರತಿಕ್ರಿಯೆಗಳ ವ್ಯತ್ಯಾಸಕ್ಕೆ ಕಾರಣ. ಸದ್ಯ ಹಿರಿಯರ ಈ ಅನುಭವದ ಪಾಠವು  ಕಿರಿಯ ತಲೆಮಾರಿಗೆ ಪರಿಣಾಮಕಾರಿಯಾಗಿ ವರ್ಗಾವಣೆಯಾಗುವುದಕ್ಕೆ ರಂಗ ಸಜ್ಜುಗೊಳ್ಳಬೇಕಿದೆ. ಪ್ರೇಮದ ವಿಷಯದಲ್ಲಿ  ಕಿರಿಯರಿಗೆ ತರಬೇತಿ ಕೊಡುವುದಕ್ಕಿಂತಲೂ ಹಿರಿಯರಿಗೆ ತರಬೇತಿ ಕೊಡುವ ಅಗತ್ಯವಿದೆ. ತಮ್ಮ ಮನೆಯ ಮಕ್ಕಳನ್ನು ಹೇಗೆ  ವಿಶ್ವಾಸಕ್ಕೆ ಪಡೆದುಕೊಳ್ಳಬೇಕು, ಅವರು ಎಲ್ಲವನ್ನೂ ಮನೆಯಲ್ಲಿ ಹಂಚಿಕೊಳ್ಳುವಂತಹ ವಾತಾವರಣವನ್ನು ಹೇಗೆ ನಿರ್ಮಿಸಬೇಕು  ಮತ್ತು ಅಂಥ ಸಂದರ್ಭದಲ್ಲಿ ಹೆತ್ತವರಾಗಿ ತಾವು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಹಿರಿಯರಿಗೆ ತರಬೇತಿ ನೀಡಬೇಕಾದ  ಅಗತ್ಯವಿದೆ. 

ಹಿರಿಯರಲ್ಲಿ ಅನುಭವವಿದೆ. ಆದರೆ ಅದರ ಸಂಪೂರ್ಣ ಲಾಭವು ಕಿರಿಯರಿಗೆ ಲಭ್ಯವಾಗುತ್ತಿಲ್ಲ. ಅನುಭವದ ಪಾಠವನ್ನು  ಕಿರಿಯರಿಗೆ ತಲುಪಿಸುವುದಕ್ಕೆ ಪೂರಕವಾಗಿ ಮನೆಯ ವಾತಾವರಣವನ್ನು ಸಜ್ಜುಗೊಳಿಸುವುದಕ್ಕೆ ಹೆಚ್ಚಿನ ಬಾರಿ ಹಿರಿಯರು  ವಿಫಲವಾಗುತ್ತಲೂ ಇದ್ದಾರೆ. ಈ ದಿಸೆಯಲ್ಲಿ ಗಂಭೀರ ಪ್ರಯತ್ನಗಳಾಗಬೇಕಿದೆ. ಯುವಸಮೂಹ ಅಪಾಯಕಾರಿ ನಿರ್ಧಾರಗಳನ್ನು  ತೆಗೆದುಕೊಳ್ಳದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರೇಮವೇ ಬದುಕಲ್ಲ ಎಂಬುದನ್ನು ಯುವಸಮೂಹಕ್ಕೆ ಅರ್ಥ  ಮಾಡಿಸಬೇಕಿದೆ.

ಕಾಂಗ್ರೆಸ್: ಬಿಜೆಪಿಯ ಬಿ ಪಕ್ಷವಾಗುವುದು ಪರಿಹಾರವಲ್ಲ



ತಾನು ಹೇಗೆ ಗುರುತಿಸಿಕೊಳ್ಳಬೇಕು ಎಂಬ ಸೈದ್ಧಾಂತಿಕ ಗೊಂದಲವೊಂದನ್ನು ಕಾಂಗ್ರೆಸ್‍ನೊಳಗೆ ಹುಟ್ಟು ಹಾಕಲು ಬಿಜೆಪಿ ಯಶಸ್ವಿಯಾಗಿದೆ ಎಂಬುದಕ್ಕೆ ಆಗಾಗ್ಗೆ ಸಾಕ್ಷ್ಯಗಳು ಲಭ್ಯವಾಗುತ್ತಲೇ ಇವೆ. ಇಂಥದ್ದೊಂದು  ಸಾಕ್ಷ್ಯ ಇದೀಗ ಉತ್ತರ ಪ್ರದೇಶದಿಂದ  ಲಭ್ಯವಾಗಿದೆ. ಉತ್ತರ ಪ್ರದೇಶದಾದ್ಯಂತ ಕಾಂಗ್ರೆಸ್ ಪಕ್ಷವು ಗಾಯಿ ಬಚಾವೋ, ಕಿಸಾನ್ ಬಚಾವೊ ಪಾದಯಾತ್ರೆಯನ್ನು  ಕೈಗೊಂಡಿದೆಯಲ್ಲದೇ ತಿರಂಗಾ ಯಾತ್ರೆಗೂ ಚಾಲನೆ ನೀಡಿದೆ. ಹಾಗೆಯೇ ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ಎಂಬ ಆನ್‍ಲೈನ್ ಅಭಿಯಾನವನ್ನೂ ಆರಂಭಿಸಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲದ ವಿರೋಧ ಪಕ್ಷ. ಅಖಿಲೇಶ್ ಯಾದವ್ ಮತ್ತು ಮಾಯಾವತಿಯಧ್ವಯರ ನಡುವೆ  ನಜ್ಜುಗುಜ್ಜಾಗಿರುವ ಕಾಂಗ್ರೆಸ್‍ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ವಿಶಿಷ್ಟ ತಂತ್ರಗಳ ಅಗತ್ಯವಿದೆಯೆಂಬುದು ಒಪ್ಪತಕ್ಕ ಮಾತು.  ಅಂದಹಾಗೆ, ಹಾಥರಸ್ ಪ್ರಕರಣದಲ್ಲಿ ಕಾಂಗ್ರೆಸ್‍ನ ನಡೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ದೇಶದಲ್ಲೇ  ಮೆಚ್ಚುಗೆಯನ್ನು ಪಡೆಯಿತು.  ಉತ್ತರ ಪ್ರದೇಶದ ಪೊಲೀಸ್ ಪಡೆಯನ್ನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಎದುರಿಸಿ ನಿಂತ ರೀತಿ ಸರ್ವರ ಗಮನವನ್ನೂ ಸೆಳೆದಿತ್ತು. ಮೊದಲ ಬಾರಿ ಯೋಗಿ ಸರಕಾರ ಕಾಂಗ್ರೆಸ್‍ನ ಮುಂದೆ ಶರಣಾಗಿತ್ತು. ನಿಜವಾಗಿ, ಕಾಂಗ್ರೆಸ್ ಈ ದೇಶದಲ್ಲಿ  ಗುರುತಿಸಿಕೊಳ್ಳಬೇಕಾದದ್ದೇ  ಹೀಗೆ. ಪ್ರಭುತ್ವದ ಜನವಿರೋಧಿ ನೀತಿಗಳನ್ನು ಎತ್ತಿಕೊಂಡು ಜನ ಚಳವಳಿ ಕಟ್ಟುವುದು ಅನುಭವಿ  ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ಅದರ ಹೊಣೆಗಾರಿಕೆ. ಆದರೆ,
2014ರ ಬಳಿಕ ದೇಶದಲ್ಲಾದ ರಾಜಕೀಯ ಬದಲಾವಣೆಯು ಮಿಕ್ಕೆಲ್ಲ ಪಕ್ಷಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದ್ದು  ಕಾಂಗ್ರೆಸ್ ಪಕ್ಷದ ಮೇಲೆ. ಮನ್‍ಮೋಹನ್ ಸಿಂಗ್ ಪರದೆಯ ಹಿಂದೆ ಸರಿದರು. ಮಾರ್ಗದರ್ಶನ ಮಾಡಬೇಕಿದ್ದ ಪ್ರಣವ್  ಮುಖರ್ಜಿ ರಾಷ್ಟ್ರಪತಿಯಾದರು. ಮಾತ್ರವಲ್ಲ, ಕಾಂಗ್ರೆಸ್‍ನೊಂದಿಗೆ ಅಂತರವನ್ನು ಕಾಯ್ದುಕೊಂಡರು. ಚಿದಂಬರಂ, ಶಶಿ  ತರೂರ್‍ರಂತಹವರನ್ನು ಕಾನೂನು ಬೆನ್ನಟ್ಟಿತು. ಸೋನಿಯಾ ಗಾಂಧಿಯವರನ್ನು ಅನಾರೋಗ್ಯ ಇನ್ನಿಲ್ಲದಂತೆ ಕಾಡತೊಡಗಿತು.  ರಾಹುಲ್ ಗಾಂಧಿಯವರು ಪಕ್ಷದ ಚುಕ್ಕಾಣಿ ಹಿಡಿದರಾದರೂ ಅವರ ಬೆನ್ನಿಗೆ ನಿಲ್ಲುವಲ್ಲಿ ಉಳಿದ ಹಿರಿಯ ನಾಯಕರು ಹಿಂಜರಿಕೆ  ತೋರಿದರು. ರಾಹುಲ್ ಮೇಲೆ ಬಿಜೆಪಿಯ ಹಿರಿ ನಾಯಕರಿಂದ ಹಿಡಿದು ಮರಿ ನಾಯಕರ ವರೆಗೆ ಎಲ್ಲರೂ ಪ್ರತಿದಿನ ವ್ಯಂಗ್ಯ,  ಟೀಕೆ, ಭತ್ರ್ಸನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾಗ್ಯೂ ಈ ನಾಯಕರು ಅವರ ರಕ್ಷಣೆಗೆ ನಿಲ್ಲುವ ಬದಲು ತಮ್ಮದೇ  ವಿಚಾರಧಾರೆಯನ್ನು ಟ್ವೀಟ್ ಮಾಡುತ್ತಾ, ಅವಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರು. ಒಂದೋ ರಾಹುಲ್ ಗಾಂಧಿ  ಪಕ್ಷಾಧ್ಯಕ್ಷ ಹುದ್ದೆ ವಹಿಸಿಕೊಳ್ಳುವುದನ್ನು ಇವರು ಒಪ್ಪಬಾರದಿತ್ತು ಅಥವಾ ಒಪ್ಪಿಕೊಂಡ ಮೇಲೆ ಬೆಂಬಲಿಸಬೇಕಿತ್ತು. ಆದರೆ,
ಇವಾವುವೂ ನಡೆಯಲಿಲ್ಲ. ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದಾಗ ಅಥವಾ ತ್ರಿವಳಿ ತಲಾಕ್‍ಗೆ ಅತ್ಯಂತ  ಅಸಮರ್ಪಕ ಮತ್ತು ಮಹಿಳಾ ವಿರೋಧಿಯಾದ ಕಾನೂನನ್ನು ಜಾರಿಗೆ ತಂದಾಗ ಅಥವಾ ಬಾಬರಿ ಮಸೀದಿ ಪ್ರಕರಣದಲ್ಲಿ  ಸುಪ್ರೀಮ್ ತೀರ್ಪು ಬಂದಾಗ... ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರು ತಮ್ಮದೇ ಆದ ಬೇರೆ ಬೇರೆ ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದರೇ ಹೊರತು ಒಂದು ಪಕ್ಷವಾಗಿ ಭಾರತೀಯರ ಮುಂದೆ ಕಾಣಿಸಿಕೊಳ್ಳಲಿಲ್ಲ. ಒಬ್ಬೊಬ್ಬ ನಾಯಕರು ಒಂದೊಂದು  ಅಭಿಪ್ರಾಯ ಹಂಚಿಕೊಂಡರು. ಅದೇವೇಳೆ, ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರ  ಅಭಿಪ್ರಾಯಗಳಲ್ಲೂ ಎಷ್ಟು ಸಾಮ್ಯತೆ ಇತ್ತೆಂದರೆ,
ಗೊಂದಲದ ಸಣ್ಣ ಎಳೆಯೂ ಅಲ್ಲಿರಲಿಲ್ಲ. ಕಾಂಗ್ರೆಸ್‍ನ ವೈಚಾರಿಕ ಸ್ವಾತಂತ್ರ್ಯವನ್ನು ಈ ಭಿನ್ನ ಅಭಿಪ್ರಾಯ ಸ್ಪಷ್ಟಪಡಿಸುತ್ತದೆ ಮತ್ತು  ಇದು ಪ್ರಜಾತಂತ್ರದ ಸೌಂದರ್ಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ಮುಖ್ಯ ವಿಷಯಗಳಲ್ಲಿ ಈ ಮಟ್ಟದ ಭಿನ್ನಾಭಿಪ್ರಾಯವು  ಪಕ್ಷವನ್ನು ಎಲ್ಲಿಗೆ ತಲುಪಿಸೀತು ಎಂಬ ಪ್ರಶ್ನೆಗೂ ಕಾರಣವಾಗುತ್ತದೆ. ಜನರಲ್ಲೂ ಈ ಭಿನ್ನ ಅಭಿಪ್ರಾಯಗಳು ಗೊಂದಲವನ್ನು ಹುಟ್ಟು  ಹಾಕುತ್ತದೆ. ಕಾಂಗ್ರೆಸ್‍ನ ಇಂದಿನ ದಯನೀಯ ಸ್ಥಿತಿಯಲ್ಲಿ ಈ ವೈಚಾರಿಕ ಅಸ್ಪಷ್ಟತೆಗೂ ಬಹುದೊಡ್ಡ ಪಾಲಿದೆ. ಈ ಗೊಂದಲದಿಂದ  ಲಾಭವಾದದ್ದು ಬಿಜೆಪಿಗೆ. ಅದು ರಾಹುಲ್ ಗಾಂಧಿಯನ್ನೇ ಪ್ರಶ್ನೆಯ ಮೊನೆಯಲ್ಲಿಟ್ಟು ಪ್ರತಿದಿನ ಚುಚ್ಚತೊಡಗಿತು. ಅವರನ್ನು  ನಾಲಾಯಕ್ ಎಂಬಂತೆ ಪದೇ ಪದೇ ಬಿಂಬಿಸಿತು. ಈ ನಡುವೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಪದೇ ಪದೇ ಜಾರಿಗೆ  ತರುತ್ತಿರುವ ಕಾಯಿದೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲ ಕಾಂಗ್ರೆಸ್‍ನಲ್ಲಿ ದಿನೇದಿನೇ ಜಟಿಲವಾಗತೊಡಗಿತು. ಎಲ್ಲಾದರೂ  ಕಾಯಿದೆಯನ್ನು ವಿರೋಧಿಸಿದರೆ ಬಿಜೆಪಿಯಿಂದ ಎಲ್ಲಿ ಮುಸ್ಲಿಮ್ ಓಲೈಕೆಯ ಪಟ್ಟ ದಕ್ಕುವುದೋ ಎಂಬ ಭಯ. ಹಾಗಂತ,  ವಿರೋಧಿಸದಿದ್ದರೆ ತನ್ನ ಅಗತ್ಯವೇನು ಎಂಬ ಪ್ರಶ್ನೆ. 2014ರಲ್ಲಿ ಆರಂಭವಾದ ಈ ಗೊಂದಲವು ಬರಬರುತ್ತಾ ತೀವ್ರ ರೂಪವನ್ನು  ಪಡೆದುಕೊಳ್ಳತೊಡಗಿತು. ಈ ಕಾರಣದಿಂದಾಗಿ ತೀವ್ರ ಟೀಕೆಗೂ ಗುರಿಯಾಯಿತು.
ಇದೀಗ ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಗಾಯಿ ಬಚಾವೋ ಅಭಿಯಾನವು ಇಂಥದ್ದೇ  ಒಂದು ಗೊಂದಲದ ಕೂಸು  ಎಂದೇ ಹೇಳಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಗೋವುಗಳು ಬೀದಿಗೆ ಬಿದ್ದಿವೆ ಮತ್ತು ಅವುಗಳ ಪೋಷಣೆಯಲ್ಲಿ ಗೋಶಾಲೆಗಳು  ವಿಫಲವಾಗಿವೆ ಎಂಬುದು ಈ ಗಾಯಿ ಬಚಾವೋ ಅಭಿಯಾನಕ್ಕೆ ಕಾರಣವೆಂದು ಹೇಳಬಹುದಾದರೂ ಈ ಕಾರಣವನ್ನು ಮೀರಿ  ನಿಲ್ಲುವುದಕ್ಕೆ ಬಿಜೆಪಿಗೆ ಸಾಧ್ಯವಿದೆ. ಗೋವನ್ನು ಮುಂದಿಟ್ಟು ರಾಜಕೀಯ ಪ್ರಾರಂಭಿಸಿದ್ದು ಬಿಜೆಪಿ. ಗೋಹತ್ಯಾ ನಿಷೇಧ ಕಾಯ್ದೆಯನ್ನು  ಉತ್ತರ ಪ್ರದೇಶದಲ್ಲಿ ಕಠಿಣವಾಗಿ ಜಾರಿಗೊಳಿಸುತ್ತಿರುವುದಾಗಿ ಹೇಳುತ್ತಿರುವುದೂ ಬಿಜೆಪಿ. ಆದ್ದರಿಂದ ಕಾಂಗ್ರೆಸ್‍ನ ಗಾಯಿ  ಬಚಾವೋದಿಂದ ಜನರು ಪ್ರಭಾವಿತರಾಗಿ ಬಿಜೆಪಿ ವಿರೋಧಿಯಾಗುತ್ತಾರೆಂದು ನಂಬುವುದು ಅಸೂಕ್ತ. ಗೋವಿಗೆ ಸಂಬಂಧಿಸಿ  ಈಗಾಗಲೇ ಓಟು ಪೇಟೆಂಟ್ ಪಡೆದುಕೊಂಡಿರುವ ಬಿಜೆಪಿಯನ್ನು ಗಾಯಿ ಬಚಾವೋದಿಂದ ಅಲುಗಾಡಿಸಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ.  ಅಲ್ಲದೇ ಜನರಿಗೆ ಇನ್ನೊಂದು ಬಿಜೆಪಿಯ ಅಗತ್ಯವೂ ಇಲ್ಲ. ಕಾಂಗ್ರೆಸನ್ನು ಇನ್ನೊಂದು ಬಿಜೆಪಿಯಾಗಿ ಜನರು ಸ್ವೀಕರಿಸುವುದಕ್ಕೂ  ಸಾಧ್ಯವಿಲ್ಲ. ಸದ್ಯದ ಅಗತ್ಯ ಏನೆಂದರೆ,
ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಸುಳ್ಳುಗಳನ್ನು ಜನರಿಗೆ ತಿಳಿಸುವ ಅಭಿಯಾನ ಕೈಗೊಳ್ಳುವುದು. ವಿದೇಶಕ್ಕೆ ಗೋಮಾಂಸ ರಫ್ತು  ಮಾಡುವುದರಲ್ಲಿ ಭಾರತ ಜಾಗತಿಕವಾಗಿಯೇ ಈಗಲೂ ಪ್ರಥಮ ಅಥವಾ ದ್ವಿತೀಯ ಸ್ಥಾನಗಳಲ್ಲಿ ಸ್ಥಿರವಾಗಿರುವುದನ್ನು  ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ಮುಟ್ಟಿಸುವುದು. ಹಾಗೆಯೇ ಉತ್ತರ ಪ್ರದೇಶದ ಸರಕಾರ ಜಾರಿಗೆ ತರುತ್ತಿರುವ ಸಂವಿಧಾನ  ವಿರೋಧಿ ಕಾಯ್ದೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು. ಹಾಥರಸ್ ಪ್ರಕರಣದಲ್ಲಿ ತೋರಿದಂಥ ನಿರ್ಭೀತಿ ಚಳವಳಿಯನ್ನು  ಹಮ್ಮಿಕೊಳ್ಳುವುದು. ಹಾಗಂತ,
ಇದು ಉತ್ತರ ಪ್ರದೇಶಕ್ಕೆ ಮಾತ್ರ ಅನ್ವಯವಾಗುವ ಮಾತಲ್ಲ. ಕಾಂಗ್ರೆಸ್ ಮೊಟ್ಟಮೊದಲು ಬಿಜೆಪಿಯ ಬಿ ಪಕ್ಷವಾಗುವ ಇರಾದೆಯನ್ನು  ಕೈಬಿಡಬೇಕು. ಸಂವಿಧಾನವನ್ನು ಎತ್ತಿ ಹಿಡಿಯುವ ವೇಳೆ, ಬಿಜೆಪಿ ಏನು ಹೇಳುತ್ತೋ ಎಂಬ ಅಳುಕು ಅದನ್ನು ಕಾಡಬಾರದು. ಈ  ದೇಶಕ್ಕೆ ಈಗ ಪ್ರಬಲ ಜಾತ್ಯತೀತ ಮತ್ತು ಸರ್ವರನ್ನೂ ಜೊತೆಗೆ ಕೊಂಡೊಯ್ಯುವ ಪಕ್ಷವೊಂದರ ಅಗತ್ಯವಿದೆ. ರೈತ ಪ್ರತಿಭಟನೆ  ಇವತ್ತು ಇಷ್ಟು ದೀರ್ಘ ಅವಧಿವರೆಗೆ ಸಾಗಿಯೂ ಪರಿಹಾರಗೊಳ್ಳದೇ ಹೋಗಿದ್ದರೆ ಮತ್ತು ಕೇಂದ್ರ ಸರಕಾರ ರೈತರನ್ನು  ಸತಾಯಿಸುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ದುರ್ಬಲವಾಗಿರುವುದೂ ಒಂದು ಕಾರಣವಾಗಿದೆ. ರೈತರ ಪರ ದೇಶದಾದ್ಯಂತ ಜನಬೆಂಬಲವ ನ್ನು ಹುಟ್ಟು ಹಾಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ವೈಚಾರಿಕ ಅಸ್ಪಷ್ಟತೆಯನ್ನು ಮೊದಲು ಸರಿಪಡಿಸಿಕೊಳ್ಳಲಿ. ಬಿಜೆಪಿಯ  ಪ್ರಭಾವಳಿಯಿಂದ ಹೊರಬರಲಿ. 

ಪಾಕ್‌ನಲ್ಲಿ ದೇಗುಲ ಒಡೆದರು...




ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಪರಮ ಸುಖಿಗಳಾಗಿ ಮತ್ತು ಸಂಪೂರ್ಣ ಹಕ್ಕು ಸ್ವಾತಂತ್ರ್ಯದೊಂದಿಗೆ ಬದುಕುತ್ತಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತರ ಅಹಂ ಸವಾರಿ ಮಾಡುತ್ತಿರುವ ಸುದ್ದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಆದರೆ ಕಳೆದವಾರ ನಡೆದ ಘಟನೆಯೊಂದು ಪಾಕ್ ಟೀಕಾಕಾರರನ್ನೇ ನಿಬ್ಬೆರಗುಗೊಳಿಸಿದೆ. ಪಾಕ್‌ನ ಖೈಬರ್ ಫಖ್ತೂನ್ ಪ್ರಾಂತದ ತರ‍್ರಿ ಎಂಬಲ್ಲಿಯ ಸಂತ ಪರಮ ಹಂಸಜೀ ಮಹಾರಾಜ್‌ರ ಮಂದಿರವನ್ನು ಭಾರೀ ಸಂಖ್ಯೆಯಲ್ಲಿದ್ದ ದುಷ್ಕರ್ಮಿಗಳು ಬೆಂಕಿಕೊಟ್ಟು ಸುಟ್ಟು ಹಾಕಿದ್ದರು. ಈ ಮಂದಿರ ಬಹಳ ಹಳೆಯದು. ಸ್ವಾತಂತ್ರ್ಯ  ಪೂರ್ವದ್ದು. 1947ರಲ್ಲಿ ಭಾರತವು ವಿಭಜನೆಯಾದಾಗ ಈ ಮಂದಿರದೊಂದಿಗೆ ಧಾರ್ಮಿಕ ಸಂಬಂಧ  ಇಟ್ಟುಕೊಂಡಿದ್ದ ಹಿಂದೂಗಳೆಲ್ಲ ಭಾರತಕ್ಕೆ ಓಡಿ ಬಂದರು. ಈ ಕಾರಣದಿಂದಾಗಿ ಈ ಮಂದಿರ 1947ರ ಬಳಿಕ ಪೂಜೆ-ಪುರಸ್ಕಾರಗಳಿಲ್ಲದೇ ಅನಾಥವಾಗಿತ್ತು. 4 ವರ್ಷಗಳ ಹಿಂದಷ್ಟೇ ಈ ಮಂದಿರವನ್ನು ಪಾಕ್ ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಆ ಬಳಿಕ ಈ ಮಂದಿರವು ಯಾತ್ರಾ ಸ್ಥಳವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಮಂದಿರದ ಜೀರ್ಣೋದ್ದಾರ ಮತ್ತು ವಿಸ್ತರಣಾ ಕಾರ್ಯವೂ ಇತ್ತೀಚೆಗೆ ನಡೆಯುತ್ತಿತ್ತು. ಇದನ್ನು ಸಹಿಸದ ಮುಸ್ಲಿಮರ ದೊಡ್ಡದೊಂದು ಗುಂಪು ಮಂದಿರಕ್ಕೆ ದಾಳಿ ಮಾಡಿ ಸುಟ್ಟು ಹಾಕಿತು. ಆದರೆ ಈ ಘಟನೆಯ ಮೂರೇ ದಿನಗಳೊಳಗೆ ಪಾಕ್ ಸುಪ್ರೀಮ್ ಕೋರ್ಟ್ ಮತ್ತು ಖೈಬರ್ ಫಖ್ತೂನ್‌ನ ಸರಕಾರ ತೆಗೆದುಕೊಂಡ ಕ್ರಮ ಸರ್ವರ ಪ್ರಶಂಸೆಗೂ ಪಾತ್ರವಾಗಿದೆ. ಸುಪ್ರೀಮ್ ಕೋರ್ಟು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತಲ್ಲದೇ, ತನಿಖೆ ನಡೆಸುವುದಕ್ಕಾಗಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಪಾಕ್ ಪಾರ್ಲಿಮೆಂಟ್ ಸದಸ್ಯ ಡಾ| ರಮೇಶ್ ಕುಮಾರ್ ಜೊತೆ ಪಾಕ್ ಸುಪ್ರೀಮ್‌ನ ಮುಖ್ಯ ನ್ಯಾಯಾಧೀಶ ಗುಲ್ಝಾರ್ ಅಹ್ಮದ್ ಮಾತುಕತೆ ನಡೆಸುವ ಮೂಲಕ ಅಭೂತಪೂರ್ವ ಕಾಳಜಿ ಪ್ರಕಟಿಸಿದರು. ಪಾಕ್ ಸರಕಾರವು 100 ಮಂದಿಯನ್ನು ಬಂಧಿಸಿತಲ್ಲದೇ ಎಫ್‌ಐಆರ್‌ನಲ್ಲಿ 350 ಮಂದಿಯನ್ನು ಹೆಸರಿಸಿತು. ಅಲ್ಲದೆ ಸರಕಾರಿ ವೆಚ್ಚದಲ್ಲಿ ಸಂತ ಪರಮ ಹಂಸಜೀ ಮಹಾರಾಜ್ ಅವರ ಮಂದಿರವನ್ನು ಪುನರ್ ನಿರ್ಮಿಸಿಕೊಡುವುದಾಗಿ ವಾಗ್ದಾನ ಮಾಡಿತು. ಹಾಗಂತ,
ಇದು ಮೊದಲ ಪ್ರಕರಣ ಅಲ್ಲ.
2016 ರಲ್ಲೂ ಇಂಥದ್ದೇ ಧ್ವಂಸ ಕಾರ್ಯ ನಡೆದಿತ್ತು. ಕಮರ್ಷಿಯಲ್ ಕಟ್ಟಡ ಕಟ್ಟುವ ಉದ್ದೇಶದಿಂದ ರಹಸ್ಯವಾಗಿ ಮಂದಿರವೊಂದನ್ನು ಉರುಳಿಸಲಾಗಿದೆ ಎಂದು ಪೇಶಾವರದ ಹೈಕೋರ್ಟ್ ಗೆ  ಮುಜೀಬರ‍್ರಹ್ಮಾನ್ ಮತ್ತು ವಾಕಿಫ್ ಅಹ್ಮದ್‌ರು ದೂರು ಕೊಟ್ಟಿದ್ದರು. ಅಲ್ಪಸಂಖ್ಯಾತರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಈ ಸಂದರ್ಭದಲ್ಲಿ ಖೈಬರ್ ಫಖ್ತೂನ್‌ನ ಸರಕಾರವು ವಾಗ್ದಾನ ಮಾಡಿತ್ತು. ನಿಜವಾಗಿ,
ಪ್ರಜಾತಂತ್ರ ಗಣರಾಜ್ಯವಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಇಸ್ಲಾಮಿಕ್ ರಾಷ್ಟçವಾಗಿ ಗುರುತಿಸಿಕೊಂಡಿರುವ ಪಾಕಿಸ್ತಾನವು ಅಲ್ಪಸಂಖ್ಯಾತರಿಗೆ ನ್ಯಾಯವನ್ನು ಕೊಡುವಲ್ಲಿ ಪದೇ ಪದೇ ವಿಫಲವಾಗುತ್ತಿವೆ ಎಂಬುದಕ್ಕೆ 1947ರ ಬಳಿಕದ ಹತ್ತು ಹಲವು ಘಟನೆಗಳೇ ಸಾಕ್ಷಿ. ಭಾರತವು ವಿಭಜನೆಯಾದಾಗ ಸಾವಿರಾರು ಹಿಂದೂಗಳು ಪಾಕ್‌ನಿಂದ ಭಾರತಕ್ಕೆ ಓಡೋಡಿ ಬಂದರು. ಭಾರತದಿಂದ ಅತ್ತ ಪಾಕಿಸ್ತಾನಕ್ಕೆ ಅಂಥದ್ದೇ ಒಂದು ಪಲಾಯನ ಮುಸ್ಲಿಮರಿಂದಲೂ ನಡೆಯಿತು. ಈ ಎರಡೂ ಪಲಾಯನಗಳ ಹಿಂದೆ ಇದ್ದುದೂ ಭೀತಿ. ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳು ನಮ್ಮನ್ನು ಕ್ಷೇಮದಿಂದ ಇರಲು ಬಿಡಲಾರರು ಎಂದು ಮುಸ್ಲಿಮರೂ, ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಮುಸ್ಲಿಮರು ತಮ್ಮ ಸುಖಕ್ಕೆ ಅಡ್ಡಿಯಾದಾರು ಎಂದು ಹಿಂದೂಗಳೂ ಭಾವಿಸಿದರು. ಹಾಗಂತ, ಇಂಥದ್ದೊಂದು  ಭೀತಿ ಅಕಾರಣವಾಗಿ ಹುಟ್ಟಿಕೊಂಡಿತು ಎಂದು ಹೇಳುವಂತಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೇ ಭಾರತದಲ್ಲಿ ಹಿಂದೂ-ಮುಸ್ಲಿಮರ ನಡುವೆ ತಕರಾರುಗಳಿದ್ದುವು. ಕೋಮುಸಂಘರ್ಷಗಳಾಗಿದ್ದುವು. ಭಾರತವನ್ನು ತುಂಡರಿಸಿ ಪಾಕ್ ಎಂಬ ಭೂಪ್ರದೇಶ ಹುಟ್ಟಿಕೊಂಡದ್ದೇ  ಈ ಹಿನ್ನೆಲೆಯಲ್ಲಿ. ಆದರೆ ಮುಸ್ಲಿಮರ ಪೈಕಿ ದೊಡ್ಡದೊಂದು ಗುಂಪು ಭಆರತದ ಹಿಂದೂಗಳ ಮೇಲೆ ಭರವಸೆ ಇಟ್ಟಿತು. ಭಾರತವು ತಮ್ಮ ಜನ್ಮ ಮತ್ತು ಕರ್ಮಭೂಮಿ ಎಂದು ಘೋಷಿಸಿತು. ಧರ್ಮದ ಆಧಾರದಲ್ಲಿ ರಚನೆಯಾದ ಪಾಕ್‌ಗಿಂತ ಜಾತ್ಯಾತೀತತೆಯ ಆಧಾರದಲ್ಲಿ ರಚನೆಯಾಗುವ ಭಾರತದಲ್ಲೇ  ಇರಬಯಸಿತು. ಅತ್ತ ಪಾಕ್‌ನಲ್ಲೂ ಇಂಥದ್ದೇ  ಬೆಳವಣಿಗೆ ನಡೆಯಿತು. ಹಿಂದೂಗಳು ಪಾಕ್ ಮುಸ್ಲಿಮರ ಮೇಲೆ ಭರವಸೆ ಇರಿಸಿದರು. ತಾವು ಹುಟ್ಟಿದ ನೆಲದಲ್ಲೇ  ಬದುಕಲು ಪಣ ತೊಟ್ಟರು. ನಿಜವಾಗಿ,
ಈ ಎರಡೂ ದೇಶಗಳ ಬಹುಸಂಖ್ಯಾತರ ಬಹುದೊಡ್ಡ ಜವಾಬ್ದಾರಿ ಏನೆಂದರೆ, ತಮ್ಮ ಮೇಲೆ ಭರವಸೆ ಇಟ್ಟ ಈ ಜುಜುಬಿ ಸಂಖ್ಯೆಯ ಜನರ ರಕ್ಷಕರಾಗಿ ಪರಿವರ್ತಿತವಾಗುವುದು. ಅವರ ಹಕ್ಕು, ಸ್ವಾತಂತ್ರ‍್ಯಕ್ಕೆ ಕಾವಲು ನಿಲ್ಲುವುದು, ಯಾವ ಕಾರಣಕ್ಕೂ ಅವರ ಆರಾಧನಾ ಕೇಂದ್ರಗಳು, ಧಾರ್ಮಿಕ ವಿಧಿ-ವಿಧಾನಗಳು. ಹಕ್ಕುಗಳಿಗೆ ಭಂಗ ಬಾರದಂತೆ ನೋಡಿಕೊಳ್ಳುವುದು. ಇಸ್ಲಾಮಿಕ್ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಪಾಕ್‌ನ ಮೇಲಂತೂ ಈ ಜವಾಬ್ದಾರಿ ಇನ್ನಷ್ಟು ಹೆಚ್ಚು. ಯಾಕೆಂದರೆ, ಇಸ್ಲಾಮಿಕ್ ದೇಶವೊಂದರಲ್ಲಿ ನಡೆಯುವ ಪ್ರತಿ ಬೆಳವಣಿಗೆಯನ್ನೂ ಇಸ್ಲಾಮಿಕ್ ಕನ್ನಡಕದೊಂದಿಗೆ ನೋಡಲಾಗುತ್ತದೆ. ಆ ದೇಶದಲ್ಲಿ ನಡೆಯುವ ತಪ್ಪುಗಳನ್ನು ಇಸ್ಲಾಮಿಕ್ ತಪ್ಪುಗಳಾಗಿ ಪರಿಗಣಿಸಲಾಗುತ್ತದೆ. ಹಿಂದೂಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳದಿದ್ದರೆ ಅದು ಇಸ್ಲಾಮಿನ ನೀತಿ ನಿಯಮಗಳಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಪಾಕ್‌ನ ಹೆಸರು ಈಗಾಗಲೇ ಈ ದಿಶೆಯಲ್ಲಿ ಸಾಕಷ್ಟು ಹಾಳಾಗಿದೆ. ವಿಷಾದ ಏನೆಂದರೆ,
ಯಾವುದೇ ಧರ್ಮದ ರಾಷ್ಟ್ರವಾಗಿ ಗುರುತಿಸಿಕೊಳ್ಳದ ಮತ್ತು ಸರ್ವರನ್ನೂ ಒಳಗೊಳ್ಳುವ ಸಂವಿಧಾನವನ್ನೇ ರಾಷ್ಟ್ರ  ಧರ್ಮವಾಗಿ ಅಂಗೀಕರಿಸಿಕೊಂಡ  ಈ ದೇಶದಲ್ಲೂ ಅಲ್ಪಸಂಖ್ಯಾತರನ್ನು ಭೀತಿಗೆ ತಳ್ಳುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದು. ಅಲ್ಪಸಂಖ್ಯಾತರನ್ನು ದೇಶದ್ರೋಹಿಗಳಂತೆ, ವಂಚಕರಂತೆ, ಮತಾಂತರಿಗಳಂತೆ ಬಿಂಬಿಸುವ ಮತ್ತು ಅಪಪ್ರಚಾರ ನಡೆಸುವ ಪ್ರಯತ್ನಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಹತ್ಯೆ, ಅವರ ಆರಾಧನಾ ಕೇಂದ್ರಗಳ ಮೇಲೆ ದಾಳಿಯೂ ನಡೆಯುತ್ತಿದೆ. ಹಾಗಂತ,
ಅಲ್ಪಸಂಖ್ಯಾತರ ರಕ್ಷಣೆಗೆ ಇಲ್ಲಿನ ಹಿಂದೂಗಳು ನಿಂತೇ ಇಲ್ಲ ಎಂದಲ್ಲ. ಇಂಥ ಬೆಳವಣಿಗೆಗಳು ಸಾವಿರಾರು ನಡೆದಿವೆ. ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಬಂದವರಿಗೆ ಹಿಂದೂಗಳು ಆಶ್ರಯ ಕೊಟ್ಟಿದ್ದಾರೆ. ಆರ್ಥಿಕ ಸಹಾಯ ಮಾಡಿದ್ದಾರೆ. ಮುಸ್ಲಿಮರ ಹಕ್ಕು, ಸ್ವಾತಂತ್ರ‍್ಯದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಹಿಂದೂಗಳು ಅಸಂಖ್ಯ ಇದ್ದಾರೆ. ಅಂಥ ಬೆಳವಣಿಗೆಗಳು ಈಗಲೂ ನಡೆಯುತ್ತಿವೆ. ಆದರೆ, ಅದರ ಜೊತೆಜೊತೆಗೇ ಇಂಥ ಪ್ರೇಮಮಯಿ ಸಂಬಂಧಕ್ಕೆ ಕನ್ನ ಕೊರೆಯುವ ಪ್ರಯತ್ನವೂ ಬಿರುಸಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಪಸಂಖ್ಯಾತರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಾ, ದ್ವೇಷ ಭಾವವನ್ನು ಹುಟ್ಟು ಹಾಕುತ್ತಾ ನಡೆಯುವ ಗುಂಪೂ ಇದೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಸರಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಾಕ್‌ನ ಸುಪ್ರೀಮ್ ಕೋರ್ಟ್ ತಳೆದ ನಿಲುವು ಶ್ಲಾಘನಾರ್ಹ. ನ್ಯಾಯದ ಮುಂದೆ ಎಲ್ಲರೂ ಸಮಾನರಾದಾಗಲೇ ಶಾಂತಿಪೂರ್ಣ ಸಮಾಜ ನಿರ್ಮಾಣವಾಗಬಲ್ಲುದು.
ನ್ಯಾಯ ನಿಮ್ಮ ಹೆತ್ತವರ ವಿರುದ್ಧವಿದ್ದರೆ ನೀವು ನ್ಯಾಯಪರ ನಿಲ್ಲಬೇಕು ಎಂದು ಪವಿತ್ರ ಕುರ್‌ಆನ್ (4:135) ಹೇಳಿರುವುದನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.