ನಿಜಕ್ಕೂ ಆ ಬಾಲಕ ಥಳಿತಕ್ಕೆ ಅರ್ಹನೇ? ನೀರು ಕುಡಿಯುವುದು ಥಳಿಸಬೇಕಾದಷ್ಟು ಕ್ರೂರ ಅಪರಾಧವೇ? ಬಾಲಕನ ತಂದೆಯ ಪ್ರ ಶ್ನೆಯೂ ಇಲ್ಲಿ ಊರ್ಜಿತ- ನೀರಿಗೆ ಧರ್ಮವನ್ನು ಬೆರೆಸಿದವರು ಯಾರು? ಮಂದಿರದಿಂದ ಓರ್ವ ಮುಸ್ಲಿಮ್ ಬಾಲಕ ನೀರು ಕುಡಿಯುವುದು ಅಪರಾಧ ಏಕಾಗಬೇಕು? ಇಂಜಿನಿಯರ್ ಆಗಿರುವ ಶೃಂಗಿ ಯಾದವ್‌ಗೆ ಇಷ್ಟು ಪರಿಜ್ಞಾನವೂ ಇಲ್ಲವೇ? ಬೇಡ, ಆತ ನೊಳಗೆ ದ್ವೇಷ ತುಂಬಿಕೊಂಡಿದೆಯೆಂದೇ ಹೇಳೋಣ ಮತ್ತು ತನ್ನ ಪರಿವಾರದಲ್ಲಿ ಹೀರೋಯಿಸಂ ತೋರ್ಪಡಿಸಲು ಅಥವಾ ಪ್ರಚಾರದ ಗೀಳಿಗಾಗಿ ಆ ಬಾಲಕನನ್ನು ಥಳಿಸಿದನೆಂದೇ ಒಪ್ಪೋಣ. ಆದರೆ, ಆ ಮಂದಿರದ ಆಡಳಿತ ಸಮಿತಿಗೇನಾಗಿದೆ? ಇಡೀ ಬೆಳವಣಿಗೆಯನ್ನು ಸಾವಧಾನದಿಂದ ಪರಿಶೀಲಿಸಿ ಹೇಳಿಕೆ ನೀಡುವುದಕ್ಕೆ ಅವಕಾಶವಿದ್ದೂ ಅದು ಮಾಡಿದ್ದೇನು? ಶೃಂಗಿ ಯಾದವ್‌ನ ಬೆಂಬಲಕ್ಕೆ ಅದು ನಿಂತದ್ದೇಕೆ? ಆತನ ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಅದು ಘೋಷಿಸಿದ್ದೇಕೆ? ಆ ಬಾಲಕ ನೀರು ಕುಡಿದದ್ದನ್ನು ಸಂಚು ಎಂದು ಹೇಳುವಷ್ಟು, ಸ್ಥಳೀಯ ವಾತಾವರಣವನ್ನು ಕೆಡಿಸಲು ಮಾಡಲಾದ ಯತ್ನವೆಂದು ವಾದಿಸುವಷ್ಟು ಮತ್ತು ಆ ಬಾಲಕ ಒಂಟಿಯಲ್ಲ, ಆತನ ಹಿಂದೆ ಸಂಚುಕೋರರಿದ್ದಾರೆ ಎಂದು ಸಮರ್ಥಿಸುವಷ್ಟು ಹೀನ ಹಂತಕ್ಕೆ ತಲುಪಿದ್ದೇಕೆ? ನಿಜವಾಗಿ,
ಆಸಿಫ್ ಎಂಬ ಆ ಬಾಲಕನಿಗೆ ಥಳಿಸಿರುವುದಕ್ಕಿಂತಲೂ ಮಂದಿರದ ಈ ಸಮರ್ಥನೆ ಹೆಚ್ಚು ಆಘಾತಕಾರಿ. ಉತ್ತರ ಪ್ರದೇಶದ ಘಾಸಿಯಾಬಾದ್‌ನಲ್ಲಿರುವ ದಾಸ್ನಾದೇವಿ ಮಂದಿರದಲ್ಲಿ ಯತಿಯಾಗಿರುವ ನರಸಿಂಗಾನಂದ್ ಸರಸ್ವತಿ ಮತ್ತು ಅವರ ಶಿಷ್ಯನಾಗಿ ಗುರುತಿಸಿಕೊಂಡಿರುವ ಆರೋಪಿ ಶೃಂಗಿ ಯಾದವ್ ಇಬ್ಬರೂ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡವರು. ಶೃಂಗಿ ಯಾದವ್ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ಫೋಟೋಗಳು ಈಗ ಮುನ್ನೆಲೆಗೆ ಬರುತ್ತಿವೆ. ಚೂರಿ, ಬಂದೂಕು ಮತ್ತು ಇನ್ನಿತರ ಆಯುಧಗಳನ್ನು ಹಿಡಿದ ಫೋಟೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಪ್ರಚೋದನಾತ್ಮಕ ಮತ್ತು ತೀವ್ರ ಬಲಪಂಥೀಯ ಮಾತುಗಳಿಂದ ನರಸಿಂಗಾನಂದ್ ಸರಸ್ವತಿ ಪರಿಚಿತರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಒಂದು ಕೋಣೆಯ ಪುಟ್ಟ ಗೂಡಿನಂಥ ಮನೆಯಲ್ಲಿ ವಾಸಿಸುವ ಆಸಿಫ್ ಮತ್ತು ಆತನ ಹೆತ್ತವರು ನೀರು ಕುಡಿದು ಮಾಡುವ ಸಂಚಾದರೂ ಏ ನು? ಮನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕೆಲಸ ಮಾಡುವ ಈ ಬಾಲಕನನ್ನು ಥಳಿಸಿರುವುದನ್ನು ಒಂದು ಮಂದಿರ ಸಮಿತಿ ಬೆಂಬಲಿಸುವುದೆಂದರೆ, ನಿಜಕ್ಕೂ ಅದಕ್ಕೆ ಧಾರ್ಮಿಕ ದ್ವೇಷವಲ್ಲದೇ ಬೇರೇನಾದರೂ ಕಾರಣ ಇದ್ದೀತೆ? ದೇಶದಲ್ಲಿ ಉಳಿದೆಲ್ಲ ಕ್ಷೇತ್ರಗಳು ಸಂಪೂರ್ಣ ಧರಾಶಾಹಿಯಾಗಿರುವಾಗಲೂ ಈ ಧರ್ಮದ್ವೇಷದ ಜಿಡಿಪಿಯಲ್ಲಿ ಈ ಮಟ್ಟದ ಏರಿಕೆಯಾಗಿರುವುದು ಏನನ್ನು ಸೂಚಿಸುತ್ತದೆ?
ಕಳೆದ ಒಂದು ವರ್ಷದಲ್ಲಿ 10,113 ಕಂಪೆನಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದನ್ನು ಪ್ರತಿದಿನದ ಬೆಳವಣಿಗೆಗಳೇ ಹೇಳುತ್ತಿವೆ. ರಾಜ್ಯದ ಜಿಎಸ್‌ಟಿ ಪಾಲನ್ನು ನೀಡದೇ ಇರುವುದರಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ದಿನನಿತ್ಯವೆಂಬಂತೆ ಏರಿಕೆಯಾಗುತ್ತಿದೆ. ನಿರುದ್ಯೋಗದ ಪ್ರಮಾಣವಂತೂ ಸ್ಫೋಟಕ ಸ್ಥಿತಿಯಲ್ಲಿದೆ. 14 ವರ್ಷದ ಆಸಿಫ್‌ನನ್ನು ಥಳಿಸಿದ ಶೃಂಗಿ ಯಾದವ್‌ನೂ ನಿರುದ್ಯೋಗಿ. ಎಂಜಿನಿಯರ್ ಆಗಿದ್ದೂ ಕೆಲಸ ಸಿಗದೇ ಕೊನೆಗೆ ದಾಸ್ನಾದೇವಿ ಮಂದಿರ ಸೇರಿಕೊಂಡವ. ಕೊರೋನಾ ಲಾಕ್‌ಡೌನ್‌ಗಿಂತ ಮೊದಲು ಯಾರ‍್ಯಾರು ಯಾವೆಲ್ಲ ಉದ್ಯೋಗದಲ್ಲಿದ್ದರೋ ಅವರಲ್ಲಿ ಅರ್ಧಾಂಶದಷ್ಟು ಮಂದಿ ಇವತ್ತು ನಿರುದ್ಯೋಗಿಗಳಾಗಿ ಕಷ್ಟಪಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ದಿಂದ ತೊಡಗಿ ಶಿಕ್ಷಣ, ಕಾರ್ಪೊರೇಟ್ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಊಹಿಸದಷ್ಟು ಪ್ರಮಾಣದಲ್ಲಿ ನಡೆದಿದೆ. ತಮ್ಮ ಉದ್ಯೋಗವನ್ನು ನಂಬಿಕೊಂಡು ಮನೆ, ವಾಹನ, ಜಾಗ ಇತ್ಯಾದಿಗಳಿಗಾಗಿ ಬ್ಯಾಂಕಿನಿಂದ ಸಾಲ ಪಡೆದವರು ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ತಿಂಗಳು ತಿಂಗಳು ಕಟ್ಟಬೇಕಾದ ಇಎಂಐ ಭೂತ ಅವರನ್ನು ಪ್ರತಿದಿನವೂ ಕಾಡುತ್ತಿದೆ. ಒಂದುರೀತಿಯಲ್ಲಿ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಡಲಾಗುತ್ತಿರುವ ಸುಳ್ಳುಗಳೇ ಜನರನ್ನು ಇನ್ನೂ ತಾಳ್ಮೆಯಿಂದಿರುವಂತೆ ಮಾಡಿದೆ. ಆರ್ಥಿಕ ಸ್ಥಿತಿಯ ಬಗ್ಗೆ ಮತ್ತು ದೇಶದ ಬಗ್ಗೆ ಪ್ರಭುತ್ವದ ಕಾಲಾಳುಗಳು ಹರಿಬಿಡುತ್ತಿರುವ ವೈಭವೀಕೃತ ಸುಳ್ಳುಗಳು ಜನರನ್ನು ಭ್ರಮಾಧೀ ನರನ್ನಾಗಿ ಮಾಡಿದೆ. ಒಂದುವೇಳೆ ಈ ಮಾಧ್ಯಮ ಇಲ್ಲದೇ ಹೋಗಿರುತ್ತಿದ್ದರೆ ಈಗಾಗಲೇ ಜನಾಕ್ರೋಶಕ್ಕೆ ದೇಶ ತತ್ತರಿಸಿ ಹೋಗಿರುತ್ತಿತ್ತು. ದುರಂತ ಏನೆಂದರೆ,
ಈ ಎಲ್ಲ ಕುಸಿತಗಳ ನಡುವೆಯೂ ಮುಸ್ಲಿಮ್ ದ್ವೇಷವೆಂಬ ಕ್ರೌರ್ಯಭಾವದ ಅಭಿವೃದ್ಧಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು. ಅಂದಹಾಗೆ, ಒಂದು ವ್ಯವಸ್ಥಿತ ಸಂಚಿನ ಹೊರತು ಈ ದ್ವೇಷಭಾವವನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀರು ಕುಡಿದ ಬಾಲಕನನ್ನು ಸಂಚುಕೋರ ಎಂದು ಮಂದಿರ ಸಮಿತಿಯೇ ಹೇಳುತ್ತದೆಂದರೆ, ಏನೆಂದು ಹೇಳುವುದು? ನಿಜವಾಗಿ, ಸಂಚಿರುವುದು ಆ ಬಾಲಕನಲ್ಲಲ್ಲ, ಆತನನ್ನು ಥಳಿಸಿದವನಲ್ಲಿ. ಹಾಗೆ ಥಳಿಸುವಂತೆ ಪ್ರಚೋದನೆ ನೀಡಿದವರಲ್ಲಿ ಮತ್ತು ಇಂಥ ಥಳಿತದಲ್ಲೇ ತಮ್ಮ ಅಸ್ತಿತ್ವವಿದೆ ಎಂದು ನಂಬಿಕೊಂಡವರಲ್ಲಿ.
ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸದಾ ದ್ವೇಷಿಸುತ್ತಾ ಬದುಕಬೇಕೆಂದು ಯಾವುದೇ ಪ್ರಭುತ್ವ ಬಯಸುವುದಾದರೆ, ಅದಕ್ಕೆ ಎರಡು ಕಾರಣಗಳಿವೆ.
ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸದಾ ದ್ವೇಷಿಸುತ್ತಾ ಬದುಕಬೇಕೆಂದು ಯಾವುದೇ ಪ್ರಭುತ್ವ ಬಯಸುವುದಾದರೆ, ಅದಕ್ಕೆ ಎರಡು ಕಾರಣಗಳಿವೆ.
1. ದೀರ್ಘಕಾಲೀನ ರಾಜಕೀಯ ಅಧಿಕಾರದ ಬಯಕೆ.
2. ಸರಕಾರಿ ವೈಫಲ್ಯವನ್ನು ಮುಚ್ಚಿಡುವುದು.
ಸದ್ಯದ ವಾತಾವರಣ ಈ ಎರಡನ್ನೂ ಸಮರ್ಥಿಸುವಂತಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಇನ್ನೊಂದೆಡೆ ಅಧಿಕಾರವನ್ನು ಬಿಟ್ಟು ಕೊಡುವುದಕ್ಕೆ ಈಗಿನ ಪ್ರಭುತ್ವಕ್ಕೆ ಸುತಾರಾಂ ಇಷ್ಟವಿಲ್ಲ. ಹಾಗಂತ, ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಇರುವ ಪ್ರಾಮಾಣಿಕ ದಾರಿಯೆಂದರೆ ಅಭಿವೃದ್ಧಿ. ಜನರಿಗೆ ನೆಮ್ಮದಿಯ ಬದುಕನ್ನು ನೀಡುವುದರಿಂದ ಜನರು ಮತ್ತೆ ಅದೇ ಸರಕಾರವನ್ನು ಆರಿಸುತ್ತಾರೆಂಬುದು ವಾಡಿಕೆ. ಆದರೆ, ಸೌಖ್ಯ ರಾಷ್ಟ್ರವನ್ನು ಕಟ್ಟುವಲ್ಲಿ ಯಾವುದೇ ಪ್ರಭುತ್ವ ವಿಫಲವಾದರೆ ಅದು ಏನು ಮಾಡಬಹುದು? ಈ ಪ್ರಶ್ನೆಗೆ ಉತ್ತರವೇ ದ್ವೇಷ. ಜನರು ಈ ವೈಫಲ್ಯವನ್ನು ಚರ್ಚಿಸದಂತೆ ನೋಡಿಕೊಳ್ಳುವುದು. ಇದು ಸಾಧ್ಯವಾಗಬೇಕೆಂದರೆ, ಜನರನ್ನು ಧಾರ್ಮಿಕವಾಗಿ ವಿಭಜಿಸುವುದು. ಅವರ ನಡುವೆ ಅನುಮಾನ, ಸಂದೇಹ, ದ್ವೇಷಭಾವವನ್ನು ಬಿತ್ತುವುದು ಮತ್ತು ತನ್ನನ್ನು ಧರ್ಮೋದ್ಧಾರಕ ಎಂದು ಬಿಂಬಿಸಿಕೊಂಡು ಹುಸಿ ವರ್ಚಸ್ಸನ್ನು ಸೃಷ್ಟಿಸಿಕೊಳ್ಳುವುದು. ಧರ್ಮ ಅಪಾಯದಲ್ಲಿದೆ ಎಂದು ನಂಬಿಸಿಬಿಟ್ಟು ಅದುವೇ ದಿನೇ ದಿನೇ ಚರ್ಚೆಯಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾದರೆ ಆ ಬಳಿಕ ಅದು ಅಫೀಮಿನಂತೆ ಜನರನ್ನು ಭ್ರಮೆಯಲ್ಲಿ ತೇಲಿಸಿ ಬಿಡುತ್ತದೆ. ಪ್ರತಿ ಘಟನೆಯೂ ಧರ್ಮದ ದೃಷ್ಟಿಯಲ್ಲಿ ಚರ್ಚೆಗೊಳಗಾಗುತ್ತದೆ. ಪ್ರಭುತ್ವವನ್ನು ವಿಮರ್ಶಿಸುವ ಯಾವ ಬರಹ, ಭಾಷಣ, ಕತೆಗಳೂ ಧರ್ಮವಿರೋಧಿಯೆಂದೋ ಸಂಚೆಂದೊ ಗುರುತಿಸಲ್ಪಟ್ಟು ಧರ್ಮ ಧ್ರುವೀಕರಣಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ. ಸದ್ಯ ನಡೆಯುತ್ತಿರುವುದೂ ಇದುವೇ. ನಿಜವಾಗಿ,
ದಾಸ್ನಾದೇವಿ ಮಂದಿರವು ಆ ಬಾಲಕನ ಪರ ನಿಲ್ಲಬೇಕಿತ್ತು. ಮಂದಿರದ ಒಳಗಡೆ ಇರುವ ನೀರಿನ ಟ್ಯಾಪನ್ನು ಮಂದಿರದ ಹೊರಗಡೆಗೂ ವಿಸ್ತರಿಸಿ ನೀರು ಎಲ್ಲರಿಗಾಗಿ ಎಂದು ಘೋಷಿಸಬೇಕಿತ್ತು. ಶೃಂಗಿ ಯಾದವ್‌ನನ್ನು ಮಂದಿರದಿಂದ ಹೊರಹಾಕಿ ಪ್ರತೀಕಾರ ತೀರಿಸಬೇಕಿತ್ತು. ಆಸಿಫ್ ಕುಟುಂಬವನ್ನು ಮಂದಿರಕ್ಕೆ ಕರೆದು ವಿಶ್ವಾಸ ತುಂಬಬೇಕಿತ್ತು. ಆದರೆ ಇವಾವುವೂ ಆಗಿಲ್ಲ ಎಂಬುದಕ್ಕೆ ವಿಷಾದವಿದೆ.