ವರದಕ್ಷಿಣೆ ಎಂಬುದು ಮುಸ್ಲಿಮ್ ಸಮುದಾಯಕ್ಕೆ ಅಪರಿಚಿತ ಪದ ಅಲ್ಲ. ಇಂಥ ಪದ ಭಾರತೀಯ ಮುಸ್ಲಿಮರಿಗೆ ಪರಿಚಿತವಾಗಿ ಹಲವು ದಶಕಗಳೇ ಕಳೆದಿವೆ. ಆಯಿಷಾರಂಥ ಹಲವು ಜೀವಗಳು ಈ ಕೆಡುಕಿಗೆ ಬಲಿಯಾಗಿವೆ. ಆಯಿಷಾ ಸ್ವತಃ ತನ್ನ ಬದುಕನ್ನು ಕೈಯಾರೆ ಮುಗಿಸಿಕೊಂಡರೆ, ಇನ್ನಷ್ಟು ಆಯಿಷಾರು ಪತಿ ಮನೆಯವರ ಸೀಮೆ ಎಣ್ಣೆಗೋ, ವಂಚನೆಯ ಹತ್ಯೆಗೋ ಬಲಿಯಾಗಿದ್ದಾರೆ. ಈ ಕೆಡುಕಿಗೆ ಸಿಲುಕಿ ಕಣ್ಣೀರಾದ ಹೆತ್ತವರ ಸಂಖ್ಯೆ ಅಗಾಧವಿದೆ. ಇದೀಗ ಅಹ್ಮದಾಬಾದ್‌ನ ಆಯಿಷಾ ಈ ಪಿಡುಗಿನ ಕುರಿತಂತೆ ನಮ್ಮ ಪ್ರಜ್ಞೆಯನ್ನು ಮತ್ತೊಮ್ಮೆ ಕೆದಕಿದ್ದಾರೆ. ಅಷ್ಟಕ್ಕೂ,
ಓರ್ವ ಹೆಣ್ಣು ಮಗಳ ಮತ್ತು ಆಕೆಯ ಹೆತ್ತವರ ಸಂಕಟವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಬಲಿಯೊಂದರ ಅಗತ್ಯವಿತ್ತೇ ಎಂಬ ಪ್ರಶ್ನೆ ಗಮನಾರ್ಹ. ಇದೇ ಸಂದರ್ಭದಲ್ಲಿ ಪ್ರತಿ ಪ್ರಶ್ನೆಯೂ ಮೂಡುತ್ತದೆ. ಆಕೆ ಹಾಗೆ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದೇ ಹೋಗಿರುತ್ತಿದ್ದರೆ ವರದಕ್ಷಿಣೆಯ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿರುವ ಇವತ್ತಿನ ತಲ್ಲಣ ಮತ್ತು ಸಂಕಟ ವ್ಯಕ್ತವಾಗುವುದಕ್ಕೆ ಸಾಧ್ಯವಿತ್ತೇ? ಹಾಗಂತ, ಆಕೆಗೆ ಆತ್ಮಹತ್ಯೆಗೆ ಹೊರತಾದ ಇನ್ನಷ್ಟು ದಾರಿಗಳಿದ್ದುವು ಎಂಬ ಸಮರ್ಥನೆಗೆ ಅರ್ಥವಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಮಸೀದಿ ಕಮಿಟಿಯನ್ನು ಸಂಪರ್ಕಿಸಿ ಪರಿಹಾರ ಕೋರಬಹುದಿತ್ತು. ಮತ್ತೂ ಪರಿಹಾರ ಕಾಣಲಿಲ್ಲವೆಂದರೆ ಹಣದಾಹದ ಪತಿಯಿಂದ ಖುಲಾ ಕೇಳಬಹುದಿತ್ತು ಮತ್ತು ಆತ ಅದಕ್ಕೂ ನಿರಾಕರಿಸಿದರೆ ಫಸ್ಕ್ ಮಾಡಿಕೊಳ್ಳಬಹುದಿತ್ತು. ಆತ್ಮಹತ್ಯೆಯನ್ನು ಪಾಪ ಎಂದು ಪರಿಗಣಿಸುವ ಧರ್ಮದ ಹೆಣ್ಣೊಬ್ಬಳ ಆತ್ಮಹತ್ಯೆಯು ತಪ್ಪಾದ ಆಯ್ಕೆಯತ್ತ ಇತರರನ್ನು ಪ್ರಚೋದಿಸಬಹುದು ಎಂಬ ಆತಂಕದಲ್ಲಿ ಕಾಳಜಿಯೂ ಇದೆ.
ಇವೆಲ್ಲ ಒಪ್ಪಿತವೇ ಆದರೆ,
ಎರಡ್ಮೂರು ದಶಕಗಳ ಹಿಂದಿನ ಸಾಮಾಜಿಕ ವಾತಾವರಣಕ್ಕೂ ಇಂದಿಗೂ ಆನೆ-ಇಲಿಯಷ್ಟು ವ್ಯತ್ಯಾಸವಿದೆ. ಈ ಹಿಂದಿನ ಕಾಲದಲ್ಲೂ ವರದಕ್ಷಿಣೆ ಇತ್ತು ಮತ್ತು ಸಾಮಾಜಿಕ ಸಂಯಮವೂ ಇತ್ತು. ಶೈಕ್ಷಣಿಕವಾಗಿ ಹೆಣ್ಮಕ್ಕಳು ಹಿಂದುಳಿದಿದ್ದರು. ಸಕಲ ಸಂಕಷ್ಟಗಳನ್ನೂ ಹಿಂಸೆ, ಅವಮಾನಗಳನ್ನೂ ಅವುಡುಗಟ್ಟಿ ಸಹಿಸಿಕೊಳ್ಳುವ ಅಪಾರ ಸಂಯಮ ಅವರಲ್ಲಿತ್ತು. ಶಿಕ್ಷಣ ವಂಚಿತರಾಗಿದ್ದ ಹೆಣ್ಮಕ್ಕಳಲ್ಲಿ ಪ್ರಶ್ನಿಸುವ ಧೈರ್ಯವೂ ಕಡಿಮೆ ಇತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಪ್ರಶ್ನಿಸಿದ ಹೆಣ್ಮಕ್ಕಳಿದ್ದಾರೆ. ಅವರ ಸಂಖ್ಯೆ ಅಪರೂಪದ್ದಾಗಿದ್ದರೂ ಅವರ ಪ್ರಶ್ನೆಯು ಆ ಬಳಿಕ ಸಮುದಾಯದಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನದಂಥ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ. ಇದೊಂದು ಹಂತ. ಈ ಹಂತವನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಬೆಳವಣಿಗೆಯನ್ನು ನಾವು ಪರಾಮರ್ಶೆಗೆ ಒಡ್ಡಬೇಕು.
ಇದು ಮಾಧ್ಯಮ ಕ್ರಾಂತಿಯ ಕಾಲ. ಬೆರಳಿನ ತುದಿಯಲ್ಲೇ ಇವತ್ತು ಎಲ್ಲವೂ ಇದೆ. ಮಾನವ ಸಹಜವಾಗಿ ಇರಬೇಕಾದ ಸಂಯಮವನ್ನು ಬಹುತೇಕ ಧರಾಶಾಹಿಗೊಳಿಸಿದ್ದೇ ಇಂದಿನ ಮಾಧ್ಯಮ ಕ್ರಾಂತಿ. ಮೊಬೈಲ್ ಎಂಬುದು ಚಟವಾಗಿ ಬಿಟ್ಟಿದೆ. ಪ್ರತಿಯೊಬ್ಬರಿಗೂ ಐಡೆಂಟಿಟಿಯನ್ನು ಕೊಡಮಾಡಬಲ್ಲ ಶಕ್ತಿ ಇದಕ್ಕಿದೆ. ತನಗೇನು ಹೇಳಬೇಕು, ಯಾರೊಂದಿಗೆ ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ಹೇಳಬೇಕು ಇತ್ಯಾದಿಗಳನ್ನು ನಿರ್ಬಿಢೆಯಿಂದ ತೀರ್ಮಾನಿಸಿ ಅದನ್ನು ವ್ಯಕ್ತಗೊಳಿಸುವುದಕ್ಕೆ ಇವತ್ತು ಕಷ್ಟವಲ್ಲ. ಆಯಿಷಾಳಂತೆ ಕಷ್ಟಪಟ್ಟವರು ಎರಡ್ಮೂರು ದಶಕಗಳ ಹಿಂದೆ ಖಂಡಿತ ಇದ್ದಿರಬಹುದು. ಆದರೆ, ಅವರಾರೂ ನಮ್ಮ ಗಮನದಲ್ಲಿರದೇ ಇರಲು ಏಕೈಕ ಕಾರಣ- ಆಯಿಷಾಳಲ್ಲಿದ್ದಂತಹ ಸಂವಹನ ಮಾಧ್ಯಮ ಅವರಲ್ಲಿದ್ದಿರಲಿಲ್ಲ ಎಂಬುದು ಮಾತ್ರ. ಇದೇವೇಳೆ,
ಈ ಸಂವಹನ ಮಾಧ್ಯಮವು ಆಯಿಷಾರಂಥ ಕೋಟ್ಯಂತರ ಮಂದಿಯಿಂದ ಸಹನೆಯೆಂಬ ಬಹುಮೂಲ್ಯ ಶಕ್ತಿಯನ್ನೂ ಕಸಿದುಕೊಂಡಿದೆ. ಇವತ್ತಿನ ಪೀಳಿಗೆಗೆ ದೀರ್ಘ ಲೇಖನವೋ ಭಾಷಣವೋ ಪ್ರಬಂಧವೋ ಬೋರು ಬೋರು. ಅಂಥದ್ದನ್ನು ಮೆಚ್ಚದ ಒಂದು ಪೀಳಿಗೆ ಇವತ್ತು ತಯಾರಾಗಿದ್ದರೆ ಅದರ ಹಿಂದೆ ಈ ಮೊಬೈಲು ಕೆಲಸ ಮಾಡಿದೆ. ಯುವ ಪೀಳಿಗೆಯಿಂದ ಸಂಯಮವನ್ನೇ ಕಸಿದುಕೊಂಡು ಆ ಜಾಗದಲ್ಲಿ ಅಸಹನೆಯನ್ನು ಊರಿದೆ. ವಿವೇಚನೆಯಿಲ್ಲದೇ ನಿರ್ಧಾರ ಕೈಗೊಳ್ಳುವ, ಪ್ರತಿಕ್ರಿಯಿಸುವ, ಧುಮುಕುವ ಪೀಳಿಗೆಯನ್ನು ತಯಾರು ಅದು ಮಾಡಿದೆ. ಆಯಿಷಾಳ ನಿರ್ಧಾರದಲ್ಲಿ ಇಂಥದ್ದೊಂದು ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆತ್ಮಹತ್ಯೆಗಿಂತ ಹೊರತಾದ ಹಲವು ದಾರಿಗಳು ಮುಕ್ತವಾಗಿದ್ದರೂ ಆಕೆ ಅವನ್ನು ಆಯ್ಕೆ ಮಾಡಿಕೊಳ್ಳದೇ ಇರುವುದರಲ್ಲಿ ಈ ಸಂಯಮರಾಹಿತ್ವಕ್ಕೆ ಪಾಲು ಇರಬಹುದು. ಹಾಗಂತ,
ಆತ್ಮಹತ್ಯೆಯನ್ನು ಉಲ್ಲೇಖಿಸಿಕೊಂಡು ಆಕೆ ಎತ್ತಿರುವ ಪ್ರಶ್ನೆ ಮತ್ತು ರವಾನಿಸಿರುವ ಸಂದೇಶವನ್ನು ನಗಣ್ಯವಾಗಿ ಕಾಣುವುದು ಅತಿದೊಡ್ಡ ಪಾಪವಾಗಬಹುದು. ಆಕೆ ಪ್ರತಿಭಟನೆಯೊಂದನ್ನು ಸಲ್ಲಿಸಿ ಹೋಗಿದ್ದಾಳೆ. ಅದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿರುವ ದಾರಿ ಸರಿಯೋ ತಪ್ಪೋ ಎಂಬುದರ ಆಚೆಗೆ ಆಕೆ ಎತ್ತಿರುವ ಪ್ರಶ್ನೆ ಸಮುದಾಯದಲ್ಲಿ ಚರ್ಚೆಗೊಳಗಾಗಬೇಕು. ಇಸ್ಲಾಮಿನಲ್ಲಿ ಅತಿ ವಿಶಿಷ್ಟವಾದ ಮತ್ತು ಮಹಿಳಾ ಪರವಾದ ವಧುದನ ಎಂಬ ನಿಯಮವೊಂದಿದೆ ಎಂದು ವಾದಿಸುವುದರಿಂದ ‘ವಧು’ವಿನ ಸಂಕಟ ಕೊನೆಯಾಗಲಾರದು. ನಿಯಮವೊಂದು ಜನಪರವೋ ಜನದ್ರೋಹಿಯೋ ಆಗುವುದು ಅದು ಕಟ್ಟುನಿಟ್ಟಾಗಿ ಜಾರಿಗೊಂಡಾಗ. ವಧುಧನ ಅಥವಾ ಮಹ್ರ್ ವಧುವಿನ ಸೊತ್ತು. ವಧುವಿಗೆ ಈ ಮೊತ್ತವನ್ನು ಪಾವತಿಸುವ ಮೂಲಕ ವರನು ಆ ವಧುವನ್ನು ಜೋ ಪಾನವಾಗಿ ನೋಡಿಕೊಳ್ಳುವ, ಆಕೆಯ ಸಕಲ ಹಕ್ಕುಗಳನ್ನು ಗೌರವಿಸುವ ಮತ್ತು ತವರು ಮನೆಯಲ್ಲಿ ಏನೆಲ್ಲ ಸವಲತ್ತುಗಳಿದ್ದುವೋ ಅವೆಲ್ಲವನ್ನೂ ತನ್ನ ಮನೆಯಲ್ಲೂ ಆಕೆಗೆ ಒದಗಿಸುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಇದೊಂದು ಬಲವಾದ ಕರಾರು. ಓರ್ವನು ತನ್ನ ನಿಕಾಹ್‌ಗಿಂತ ಮೊದಲೇ ಈ ಮಹ್ರನ್ನು ತನ್ನ ವಧುವಿಗೆ ತಿಳಿಸಬೇಕು. ಅದನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಸ್ವಾತಂತ್ರ‍್ಯ ಅವಳದ್ದು. ಆದರೆ,
ಇವತ್ತು ಮಹ್ರ್ ಪರಿಕಲ್ಪನೆ ದುರ್ಬಲವಾಗಿ ವರದಕ್ಷಿಣೆ ಬಲ ಪಡೆದಿರುವುದಕ್ಕೆ ಧಾರ್ಮಿಕ ಅಜ್ಞಾನವೊಂದೇ ಕಾರಣ ಅಲ್ಲ, ಧಾರ್ಮಿಕ ವಿದ್ವಾಂಸರ ಅಖಚಿತ ನಿಲುವುಗಳಿಗೂ ಈ ಪಾಪದಲ್ಲಿ ಪಾಲಿದೆ. ವರದಕ್ಷಿಣೆಯನ್ನು ಖಂಡಿಸುವ ಮತ್ತು ವರದಕ್ಷಿಣೆಯ ಮದುವೆಯಲ್ಲಿ ಪಾಲ್ಗೊಳ್ಳದೇ ಇರುವ ನಿಷ್ಠುರ ನಿಲುವನ್ನು ವಿದ್ವಾಂಸ ವಲಯ ಒಕ್ಕೊರಳಿನಿಂದ ಕೈಗೊಳ್ಳುತ್ತಿದ್ದರೆ ಈ ಪಿಡುಗು ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಮಸೀದಿ ಕಮಿಟಿಗಳ ನಿರ್ಲಕ್ಷ್ಯ ಧೋರಣೆಗೂ ಈ ಪಾಪದಲ್ಲಿ ಪಾಲಿದೆ. ಸದ್ಯ ಸಮುದಾಯದ ಗುರಿ ಏನೆಂದರೆ, ಆಗಿಹೋದ ಪಾಪಗಳಿಗೆ ದೇವನಲ್ಲಿ ಕ್ಷಮೆ ಯಾಚಿಸುತ್ತಾ ವರದಕ್ಷಿಣೆಯ ವಿರುದ್ಧ ಕಠಿಣ ನಿಲುವನ್ನು ಪ್ರತಿ ಮಸೀದಿಯ ವಿದ್ವಾಂಸರೂ ಕೈಗೊಳ್ಳುವುದು.
ವರದಕ್ಷಿಣೆಯನ್ನು ಇವತ್ತು ನೇರವಾಗಿ ಕೇಳುವ ಪದ್ಧತಿಯಿಲ್ಲ. ನನ್ನ ಮಗಳಿಗೆ ಇಷ್ಟು ಚಿನ್ನ ಹಾಕಿರುವೆ ಅಥವಾ ನನ್ನ ಮಗನಿಗೆ ಇಂತಿಂಥ ಕಾರು ಇಷ್ಟ ಎಂಬಲ್ಲಿಂದ ಹಿಡಿದು ಬೇರೆ ಬೇರೆ ಪರೋಕ್ಷ ರೂಪದಲ್ಲಿ ಅದು ಜಾರಿಯಲ್ಲಿದೆ. ಇಂಥ ಸರ್ವ ಪಿಡುಗಿನ ವಿರುದ್ಧವೂ ಪ್ರಬಲ ಹೋರಾಟ ಸಂಘಟಿಸಬೇಕಾದುದು ಬಹು ಅಗತ್ಯ. ಆಗಿ ಹೋದ ತಪ್ಪುಗಳನ್ನು ಮತ್ತೆ ಮತ್ತೆ ಕೆದಕುತ್ತಾ ಗಾಯವನ್ನು ವ್ರಣವಾಗಿಸುವುದಕ್ಕಿಂತ ಮುಂದಿನ ದಿನಗಳ ಕಡೆಗೆ ಸಕಾರಾತ್ಮಕವಾಗಿ ಚಿಂತಿಸುವುದೇ ಇಂದಿನ ಅನಿವಾರ್ಯತೆ. ತಪ್ಪು ಮಾನವ ಸಹಜ. ಅದರಲ್ಲಿ ಗಟ್ಟಿಯಾಗಿ ನಿಲ್ಲುವುದಷ್ಟೇ ಕ್ರೌರ್ಯ.
ಆಯಿಷಾಳ ಕೃತ್ಯವನ್ನು ವಿಮರ್ಶಿಸುವುದಕ್ಕಾಗಿ ನಮ್ಮ ಸಮಯ, ಧಾರ್ಮಿಕ ಜ್ಞಾನ, ಮೊಬೈಲ್ ಜಿಬಿಯನ್ನು ವ್ಯಯಿಸುವುದಕ್ಕಿಂತ ಆಕೆ ಎತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ವ್ಯಯಿಸಿದರೆ ಸಮುದಾಯದ ಹೆಣ್ಮಕ್ಕಳ ಮತ್ತು ಹೆಣ್ಣು ಹೆತ್ತವರ ಪ್ರಾರ್ಥನೆ ನಮ್ಮ ಮೇಲಿದ್ದೀತು.
No comments:
Post a Comment