Tuesday, 9 March 2021

ಜನಾಕ್ರೋಶಕ್ಕೆ ಕೊಚ್ಚಿ ಹೋಗಿರುವ ಕತೆಗಳ ನಡುವೆ...



ಸನ್ಮಾರ್ಗ ವಾರ್ತೆ 

ಸನ್ಮಾರ್ಗ ಸಂಪಾದಕೀಯ 

ಮಾರಾಟಕ್ಕೆಂದು ಸಂತೆಗೆ ತಂದಿದ್ದ ಹೋರಿಗಳನ್ನು ಯಾರೂ ಖರೀದಿಸದಿರುವುದರಿಂದ ಹತಾಶರಾದ ರೈತರು ಅವುಗಳನ್ನು  ಸಂತೆಯಲ್ಲೇ  ಬಿಟ್ಟು ಹೋದ ಸುದ್ದಿಯನ್ನು ಜನವರಿ 23ರ ಪ್ರಜಾವಾಣಿ ವೆಬ್ ಆವೃತ್ತಿಯಲ್ಲಿ ಚಿತ್ರಸಹಿತ ಪ್ರಕಟಿಸಲಾಗಿತ್ತು. ಘಟನೆ  ನಡೆದುದು ಹಾಸನದ ಸಮೀಪ. ಜನವರಿ 24ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಮಾಹಿತಿಪೂರ್ಣ ಬರಹವೊಂದು ಪ್ರಕಟವಾಗಿತ್ತು.  ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ದಾಖಲೀಕರಣ ಮಾಡುವ ಶ್ರೀನಿವಾಸ್  ಕೆ. ಎಂಬವರು ಈ ಬರಹವನ್ನು ಬರೆದಿದ್ದರು. ಅವರ ಪ್ರಕಾರ,
ಗೋಹತ್ಯೆ ನಿಷೇಧದಿಂದ ಮೃಗಾಲಯಗಳಿಗೆ ಆಹಾರದ ಅಭಾವ ತೀವ್ರ ರೂಪದಲ್ಲಿ ತಟ್ಟಲಿದೆ. ರಾಜ್ಯದಲ್ಲಿ 10ಕ್ಕೂ ಅಧಿಕ  ಮೃಗಾಲಯಗಳಿವೆ. ರಾಜ್ಯದಲ್ಲಿ 1,783 ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯಗಳು ದೇಶದಲ್ಲೇ  ಪ್ರಸಿದ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಪ್ರವಾಸೋದ್ಯಮದ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.  ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿದಿನ 350 ಕೆಜಿಯಷ್ಟು ಗೋಮಾಂಸ ಸರಬರಾಜಾಗುತ್ತಿದ್ದು ಬನ್ನೇರುಘಟ್ಟ ಉದ್ಯಾನವನಕ್ಕೆ  1300 ಕೆಜಿ ಗೋಮಾಂಸ ಸರಬರಾಜಾಗುತ್ತಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ 100 ಸಿಂಹಗಳು, 41 ಹುಲಿಗಳು ಮತ್ತು 30  ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯದಲ್ಲಿ 25 ಸಿಂಹ, 50 ಹುಲಿ ಮತ್ತು 100 ಚಿರತೆಗಳಿವೆ. ಹಾಗೆಯೇ ಗೊಡ್ಡು ಮೇಕೆ,  ಕುರಿಗಳ ಮಾಂಸವನ್ನು ಅಥವಾ ಕೋಳಿ ಮಾಂಸವನ್ನು ಈ ಪ್ರಾಣಿಗಳಿಗೆ ನೀಡಿದರೆ ಕಾಲು-ಬಾಯಿ ರೋಗಕ್ಕೆ ಕಾರಣವಾಗಬಹುದು  ಎನ್ನಲಾಗಿದೆ. ಒಂದುವೇಳೆ,
ಈ ಗೋಹತ್ಯೆ ನಿಷೇಧ ಕ್ರಮವನ್ನು ಇಡೀ ದೇಶಕ್ಕೆ ಅನ್ವಯಿಸಿದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ದೇಶದಲ್ಲಿ 190ರಷ್ಟು  ಮೃಗಾಲಯಗಳಿವೆ. ಹಾಗೆಯೇ 2019ರ ಗಣತಿಯಂತೆ ಈ ದೇಶದಲ್ಲಿ 2,967 ಹುಲಿಗಳಿವೆ. ಚಿರತೆಗಳ ಸಂಖ್ಯೆ 12,852. ಸಿಂಹಗಳು  674ರಷ್ಟಿವೆ. ಇನ್ನು, ಗೋವನ್ನು ವಧಿಸುವುದು ಕೇವಲ ಆಹಾರಕ್ಕಾಗಿ ಮಾತ್ರ ಎಂದು ಭಾವಿಸಬೇಡಿ. ವಧಿಸುವ ಗೋವು ಸಹಿತ ಜಾ ನುವಾರುಗಳ ಪೈಕಿ 50%ದಷ್ಟು ಅಂಶವು ಆಹಾರಕ್ಕಾಗಿ ಬಳಕೆಯಾದರೆ, ಇನ್ನರ್ಧ ಅಂಶವು ಸಕ್ಕರೆ ತಯಾರಿಸಲು, ಐಷಾರಾಮಿ  ಕಾರುಗಳ ಸೀಟು ತಯಾರಿಸಲು, ಚಪ್ಪಲಿಗಳು, ಬ್ಯಾಗುಗಳು, ಬೆಲ್ಟ್ ಸಹಿತ ಅನೇಕಾರು ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತದೆ.  ರಾಜ್ಯದಲ್ಲಿ ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದರಿAದ ಇದನ್ನೇ ವೃತ್ತಿಯಾಗಿಸಿಕೊಂಡ ಸುಮಾರು 40  ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ಅಂದಹಾಗೆ,
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿರುವುದು ಇದು ಮೊದಲೇನಲ್ಲ. ಈಗಿನ ಕಾಯ್ದೆಯು ಈಗಾಗಲೇ ಇದ್ದ  1964ರ ಕಾಯ್ದೆಗೆ ಬೇರೆಯದೇ ಸ್ವರೂಪವನ್ನಷ್ಟೇ ನೀಡಿದೆ. ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 1964ರಂತೆ ಎತ್ತು ಮತ್ತು  ಕೋಣಗಳನ್ನು ವಧಿಸುವುದಕ್ಕೆ ನಿರ್ಬಂಧ ಇರಲಿಲ್ಲ. ಅಲ್ಲದೇ 12 ವರ್ಷಕ್ಕಿಂತ ಮೇಲಿನ ಗೊಡ್ಡು ಹಸುಗಳನ್ನು ವಧಿಸುವುದಕ್ಕೆ ಅ ನುಮತಿ ಇತ್ತು. ಆದರೆ 2020ರ ಗೋಹತ್ಯೆ ನಿಷೇಧ ಕಾಯ್ದೆಯು ಈ ಎಲ್ಲ ಅವಕಾಶಕ್ಕೂ ತೆರೆ ಎಳೆದಿದೆ. ಯಾರಾದರೂ ಈ  ಕಾಯ್ದೆಯನ್ನು ಉಲ್ಲಂಘಿಸಿದರೆ 7 ವರ್ಷಗಳ ವರೆಗೆ ಜೈಲುವಾಸ ಮತ್ತು 5 ಲಕ್ಷ ರೂಪಾಯಿಯಷ್ಟು ದಂಡ ವಿಧಿಸುವುದಕ್ಕೆ ಅವಕಾಶ  ಇದೆ. ಗೋರಕ್ಷಕರಿಗೆ ರಕ್ಷಣೆಯನ್ನು ಕೊಡುವ ಸೂಚನೆ ಇದೆ. ಈ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ  ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ. ನಿಜವಾಗಿ,
ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೊದಲಾಗಿ ಜಾರಿಗೆ ತಂದಿರುವುದು ಯಡಿಯೂರಪ್ಪ ಸರ್ಕಾರ ಅಲ್ಲ. ಈ ಮೊದಲೇ  ಅಂಥದ್ದೊಂದು ಕಾಯ್ದೆಯೊಂದಿತ್ತು. ಆ ಕಾಯ್ದೆಯು ರೈತರಿಗೆ, ಹೈನುದ್ಯಮಿಗಳಿಗೆ ಮತ್ತು ಮೃಗಾಲಯದ ಪ್ರಾಣಿಗಳಿಗೆ  ಪೂರಕವಾಗಿತ್ತು. ಉಳುಮೆಗೆ ಬಾರದ ಎತ್ತುಗಳು ಮತ್ತು ಹಾಲು ನೀಡದ ಹಸುಗಳನ್ನು ಮಾರಿ, ಆ ಮೂಲಕ ಬರುವ ಆದಾಯ ದಿಂದ ಎಳೆಕರುಗಳನ್ನು ಮತ್ತು ಉಳುಮೆಗೆ ಸಾಮರ್ಥ್ಯವಿರುವ ಎತ್ತುಗಳನ್ನು ಖರೀದಿಸುವುದಕ್ಕೆ ಅವಕಾಶವಿತ್ತು. ನಿಜಕ್ಕೂ ಇದು  ರೈತಸ್ನೇಹಿ ಕಾಯ್ದೆ. ಆದ್ದರಿಂದಲೇ, ಈ ಕಾಯ್ದೆಯ ಹೊರತಾಗಿಯೂ ಗೋವು, ಎತ್ತುಗಳ ಕೊರತೆ ರಾಜ್ಯದಲ್ಲಿ ಕಂಡು ಬಂದಿಲ್ಲ.  ಹಾಲುತ್ಪಾದನೆಯಲ್ಲಿ ಇಳಿಕೆಯಾಗಿಲ್ಲ. ಒಂದುವೇಳೆ,
1964ರ ಜಾನುವಾರು ಕಾಯ್ದೆಯು ಗೋಸಂರಕ್ಷಣಾ ವಿರೋಧಿಯಾಗಿರುತ್ತಿದ್ದರೆ ಈ 5 ದಶಕಗಳಲ್ಲಿ ಗೋಸಂತತಿಯ ನಾಶಕ್ಕೆ ಈ  ರಾಜ್ಯ ಸಾಕ್ಷಿಯಾಗಬೇಕಿತ್ತು. ಹಾಲುತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬರಬೇಕಿತ್ತು. ಆದರೆ ಹೀಗೇನೂ ಆಗಿಲ್ಲ. ಅಂದರೆ, ಗೋಹತ್ಯೆ  ನಿಷೇಧ 2020ರ ಕಾಯ್ದೆಗಿಂತ ಮೊದಲಿನ 1964ರ ಕಾಯ್ದೆಯು ರೈತಸ್ನೇಹಿ ಮತ್ತು ಜಾನುವಾರು ಸ್ನೇಹಿಯಾಗಿತ್ತು ಎಂದೇ ಅರ್ಥ.  ಅಷ್ಟಕ್ಕೂ,
1964ರ ಕಾಯ್ದೆಯನ್ನು ರದ್ದುಗೊಳಿಸಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ರಾಜ್ಯದಲ್ಲಿ ರೈತರಾಗಲಿ  ಹೈನುದ್ಯಮದಲ್ಲಿ ತೊಡಗಿಸಿಕೊಂಡವರಾಗಲಿ ಬೇಡಿಕೆಯನ್ನಿಟ್ಟಿರುವುದೋ ವಿಧಾನಸೌಧ ಚಲೋ ನಡೆಸಿರುವುದೋ ಈವರೆಗೂ ನಡೆ ದಿಲ್ಲ. ಅಲ್ಲದೇ, ಈ ಬಗ್ಗೆ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶ ಇತ್ತು ನಿಜ.  ಆದರೆ, ಬಿಜೆಪಿಗೆ ರಾಜ್ಯದ ಜನತೆ ಓಟು ಹಾಕಿರುವುದಕ್ಕೆ ಆ ಒಂದೇ ಭರವಸೆ ಕಾರಣ ಆಗಿತ್ತೇ? ಒಂದುವೇಳೆ,
ಗೋಹತ್ಯೆ ನಿಷೇಧ ಕಾಯ್ದೆಯ ಏಕ ಭರವಸೆಯೊಂದನ್ನೇ ಪ್ರಣಾಳಿಕೆಯನ್ನಾಗಿಸಿ ಮತ್ತು ಇನ್ನಾವುದೂ ಪ್ರಣಾಳಿಕೆಯಲ್ಲಿ ಇಲ್ಲದೇ  ಇರುತ್ತಿದ್ದರೆ ಜನರು ಆ ಕಾರಣಕ್ಕಾಗಿ ಮಾತ್ರ ಮತ ನೀಡಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಹಾಗೆ ನಡೆದಿಲ್ಲ ಮತ್ತು  ನಡೆಯುವದಕ್ಕೆ ಸಾಧ್ಯವೂ ಇಲ್ಲ. ಜನರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಕ್ಕೂ ಬೇರೆ ಬೇರೆ ಸಂಗತಿಗಳು  ಕಾರಣವಾಗಿರುತ್ತವೆ. ಹೆಚ್ಚಿನ ಬಾರಿ ಪ್ರಣಾಳಿಕೆಗೂ ಜನರ ಮತ ಚಲಾವಣೆಗೂ ಸಂಬಂಧವೇ ಇರುವುದಿಲ್ಲ. ಗೆದ್ದ ಬಳಿಕ ರಾಜಕೀಯ  ಪಕ್ಷಗಳೂ ಹೆಚ್ಚಿನ ಬಾರಿ ಪ್ರಣಾಳಿಕೆಯತ್ತ ಮುಖವೆತ್ತಿ ನೋಡುವುದೂ ಇಲ್ಲ. ಪಕ್ಷವೊಂದಕ್ಕೆ ಬೀಳುವ ಮತಗಳಿಗೂ ಪ್ರಣಾಳಿಕೆಯಲ್ಲಿ  ಹೇಳಲಾಗುವ ಭರವಸೆಗಳಿಗೂ ಹೆಚ್ಚಿನ ಬಾರಿ ಯಾವ ಹೋಲಿಕೆಯೂ ಇರುವುದಿಲ್ಲ. ಆದ್ದರಿಂದ ಪ್ರಣಾಳಿಕೆಯನ್ನು ತೋರಿಸಿ ಬಿಜೆಪಿ  ಗೋಹತ್ಯಾ ನಿಷೇಧ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವುದು ಸಂದರ್ಭ ಸಾಧಕತನವೇ ಹೊರತು ಪ್ರಾಮಾಣಿಕತೆಯಲ್ಲ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಂತೆ ಈಗಾಗಲೇ ಪ್ರಥಮ ಕೇಸು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಯ  ನೇರ ಪರಿಣಾಮವನ್ನು ರೈತರು ಎದುರಿಸಬೇಕಿರುವುದರಿಂದ ರಾಜ್ಯ ಎರಡು ಸವಾಲುಗಳಿಗೆ ಸಾಕ್ಷಿಯಾಗಗಬಹುದು. 
1. ರೈತರು  ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಪ್ರತಿಭಟನೆ.
 2. ಹೈನುಗಾರಿಕೆಯಿಂದ ರೈತರು ನಿಧಾನವಾಗಿ ದೂರ  ಸರಿಯುವುದು. ಹಾಗಂತ,
ಇವು ಏನೇ ಆದರೂ ಅದರಿಂದ ಆಯಾ ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಲ್ಲ. ಹಾಲುತ್ಪಾದನೆಯಲ್ಲಿ ಕೊರತೆಯಿಂದ  ಹಿಡಿದು ಮಾಂಸದ ಅಲಭ್ಯತೆ ಮತ್ತು ಮಾಂಸದಿಂದ  ಉತ್ಪತ್ತಿಯಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಗೂ ಈ ಕಾಯ್ದೆಯು  ಕಾರಣವಾಗಲಿದೆ. ಮೃಗಾಲಯದ ಪ್ರಾಣಿಗಳ ಆಹಾರ ಬೇಡಿಕೆಗೂ ಪರ್ಯಾಯ ದಾರಿಗಳನ್ನು ಹುಡುಕಬೇಕಾಗುತ್ತದೆ. ಗೋಮಾಂಸ  ಹೊರತಾದ ಮಾಂಸಗಳು ದುಬಾರಿಯಾಗಿರುವುದರಿಂದ ಅದರ ಹೊರೆಯನ್ನು ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ಬೀಡಾಡಿ ಜಾ ನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಗೋಶಾಲೆಗಳ ನಿರ್ವಹಣೆಯೂ ಸವಾಲಾಗಲಿದೆ. ಈಗಿನ ಕಾಯ್ದೆಯನ್ನು ನೇರಾತಿನೇರ ಜಾರಿ  ಮಾಡಬೇಕಾದರೆ ಗ್ರಾಮಕ್ಕೆ ನಾಲ್ಕೈದು  ಗೋಶಾಲೆಗಳನ್ನಾದರೂ ತೆರೆಯಬೇಕಾಗಬಹುದು. ಮೇವು, ಹಿಂಡಿ ಸಹಿತ ಅದರ  ನಿರ್ವಹಣೆಗೆ ಬೇಕಾಗುವ ಹಣಕ್ಕೆ ಏನು ದಾರಿ? ಈ ಸವಾಲಿಗೆ ಒಂದು ನಯಾಪೈಸೆಯನ್ನೂ ತೆಗೆದಿಡದ ಸರಕಾರವೂ ಕೇವಲ  ಕಾಯ್ದೆ ತಂದು ಮಾಡುವುದೇನು? ಅಂದಹಾಗೆ,
ಜನಮರುಳು ಕಾಯ್ದೆಗಳು ಜನಾಕ್ರೋಶದ ಪ್ರವಾಹದಲ್ಲಿ ಕೋಚ್ಚಿಹೋದ ಕತೆಗಳು ಇತಿಹಾಸದಲ್ಲಿ ಧಾರಾಳ ಇವೆ.

No comments:

Post a Comment