Tuesday, 28 September 2021

2017-2021: ಹಿಂದೂ ಮುಸ್ಲಿಮ್ ಉನ್ಮಾದ ಯಾರ ಅಗತ್ಯ?


ಸನ್ಮಾರ್ಗ ಸಂಪಾದಕೀಯ 

ದೇಶದಲ್ಲಿ ನಿಜಕ್ಕೂ ಗಂಭೀರ ಚರ್ಚೆಗೆ ಒಳಗಾಗಬೇಕಾದ ವಿಷಯಗಳು ಯಾವುವು? ಗೋಡ್ಸೆಯೋ, ಮಂದಿರ-ಮಸೀದಿಯೋ, ಹಿಂದೂ-ಮುಸ್ಲಿಮರೋ? ನಿಜವಾಗಿ,

 ಸಾಮಾನ್ಯ ಜನರ ಬದುಕು ಮತ್ತು ಭಾವಗಳು ಇವುಗಳ ಸುತ್ತ ಇಲ್ಲವೇ ಇಲ್ಲ. ಮಧ್ಯಮ ಮತ್ತು ಅದಕ್ಕಿಂತ ಕೆಳಗಿನ ವರ್ಗದ ಜನರೇ 90% ಇರುವ ದೇಶದಲ್ಲಿ ಇವರ ಸಂಕಟಗಳೇ ಬೇರೆ. ಮಾಧ್ಯಮದ ಮಂದಿ ನಿರ್ದಿಷ್ಟ ಪ್ರಶ್ನೆಯನ್ನು ಕೇಳದೇ ನೇರವಾಗಿ ಅವರ ಮುಂದೆ ಮೈಕನ್ನಿಟ್ಟರೆ ನಿರುದ್ಯೋಗ, ತೈಲ ಬೆಲೆ ಏರಿಕೆ, ದುಬಾರಿಯಾಗಿರುವ ಅಗತ್ಯ ವಸ್ತುಗಳು, ಕೆಟ್ಟು ಹೋಗಿರುವ ರಸ್ತೆಗಳು, ಶಾಲಾ ಫೀಸು, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಲಾದ ಚಡಪಡಿಕೆ... ಇತ್ಯಾದಿಗಳ ಸುತ್ತವೇ ಮಾತು ಪ್ರಾರಂಭಿಸುತ್ತಾರೆ. ಆದರೆ, ಮಾಧ್ಯಮ ಮಂದಿಯ ಬಾಯಲ್ಲಿ ಗೋಡ್ಸೆ, ದೇವಸ್ಥಾನ, ಬಿಜೆಪಿ, ಕಾಂಗ್ರೆಸ್ಸು, ತಾಲಿಬಾನು, ಹಿಂದೂ-ಮುಸ್ಲಿಮ್ ಇತ್ಯಾದಿಗಳೇ ಇರುವುದರಿಂದ ಮತ್ತು ಜನರನ್ನು ಉನ್ಮಾದಗೊಳಿಸಲು ಈ ಬೆಲೆ ಏರಿಕೆ, ನಿರುದ್ಯೋಗ, ರಸ್ತೆ ಅವ್ಯವಸ್ಥೆ ಇತ್ಯಾದಿಗಳಿಂದ ಸಾಧ್ಯವಿಲ್ಲದೇ ಇರುವುದರಿಂದ ಅವರು ಜನರ ಈ ಎದೆಯ ಧ್ವನಿಗಿಂತ ಗೋಡ್ಸೆ, ದೇವಸ್ಥಾನ, ಮುಸ್ಲಿಮ್, ಹಿಂದೂ ಇತ್ಯಾದಿ ನಾಲಗೆಯ ಧ್ವನಿಗಾಗಿ ಪೀಡಿಸುತ್ತಾರೆ. ಇದರಿಂದಾಗಿ ನಿಜಕ್ಕೂ ದೇಶದಲ್ಲಿ ನಡೆಯಬೇಕಿರುವ ಮುಖ್ಯ ಚರ್ಚಾ ವಿಷಯಗಳು ಬದಿಗೆ ಸರಿದು, ಅಮುಖ್ಯ ಮತ್ತು ಉನ್ಮಾದಿತ ವಿಷಯಗಳೇ ಮುನ್ನೆಲೆಗೆ ಬರುತ್ತವೆ. ಅಂದಹಾಗೆ,

ಕಳೆದವಾರ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರರ ಹೇಳಿಕೆ, ಮೈಸೂರಿನ ದೇವಸ್ಥಾನ ಧ್ವಂಸ, ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಮತ್ತು ಸಂಸದರೊಬ್ಬರ ಅಶ್ಲೀಲ ವೀಡಿಯೋದ ಸುತ್ತ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಆದಷ್ಟು ಚರ್ಚೆಯು ದೇಶದಿಂದ ಕಾಲು ಕಿತ್ತ ಡೆಪ್ರಾಯಿಟ್ ಮೂಲದ ವಾಹನ ಉತ್ಪಾದಕ ಕಂಪೆನಿ ಫೋರ್ಡ್ ಮೋಟಾರ್ಸ್ ನ   ಬಗ್ಗೆ ಆಗಿಲ್ಲ. ಹಾಗಂತ, ಕೇವಲ ಈ ಫೋರ್ಡ್ ಮೋಟಾರ್ಸ್ ಕಂಪೆನಿ ಮಾತ್ರ ಬಾಗಿಲು ಮುಚ್ಚಿ ಈ ದೇಶದಿಂದ ಹೊರಟು ಹೋಗಿ ದ್ದಿದ್ದರೆ ಅದನ್ನು ಆ ಕಂಪೆನಿಯ ಒರಟುತನವಾಗಿಯೋ ಭಾರತೀಯ ಕಾನೂನುಗಳಿಗೆ ಬೆಲೆ ಕೊಡದ ಹುಂಬತನವಾಗಿಯೋ ಪರಿಗಣಿಸಬಹುದಿತ್ತು. ಆದರೆ 2017ರಿಂದ ಈ 2021ರ ನಡುವೆ 8ರಷ್ಟು ಬಹುಪ್ರಸಿದ್ಧ ಬಹುರಾಷ್ಟ್ರೀಯ ಕಂಪೆನಿಗಳು ಭಾರತವನ್ನು ಬಿಟ್ಟು ಹೋಗಿವೆ. ಈ ಸರತಿಯಲ್ಲಿ ಫೋರ್ಡ್ ಮೋಟಾರ್ಸ್ ಇತ್ತೀಚಿನದ್ದು. 

1995ರಲ್ಲಿ ದೇಶಕ್ಕೆ ಕಾಲಿಟ್ಟ ಫೋರ್ಡ್ ಕಂಪೆನಿಯು ಆರಂಭದಲ್ಲಿ 250 ಕೋಟಿ ಡಾಲರ್‌ನಷ್ಟು ಭಾರೀ ಮೊತ್ತವನ್ನು ಹೂಡಿಕೆ ಮಾಡಿತ್ತು. ವರ್ಷಕ್ಕೆ 4 ಲಕ್ಷ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದ ಫೋರ್ಡ್, ಅದೇ ಉದ್ದೇಶಕ್ಕಾಗಿ ದೇಶದಲ್ಲಿ ಎರಡು ಬೃಹತ್ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸಿತ್ತು. ಈ ಎರಡೂ ಘಟಕಗಳಲ್ಲಿ 4 ಸಾವಿರದಷ್ಟು ನೇರ ಉದ್ಯೋಗಿಗಳಿದ್ದರು ಮತ್ತು 170 ಡೀಲರ್‌ಗಳಿದ್ದರು. ಪರೋಕ್ಷ ಉದ್ಯೋಗಿಗಳನ್ನು ಲೆಕ್ಕ ಹಾಕಿದರೆ ಒಟ್ಟು 40 ಸಾವಿರ ಉದ್ಯೋಗಿಗಳೆನ್ನಬಹುದು. ಆದರೆ, ಫೋರ್ಡ್ ಮೋಟಾರ್ಸ್ ಇದೀಗ ಬಾಗಿಲು ಮುಚ್ಚಿರುವುದರಿಂದ ಈ ಉದ್ಯೋಗಿಗಳೆಲ್ಲ ಅತಂತ್ರರಾಗಿದ್ದಾರೆ. ದೇಶಕ್ಕೆ ಐಕಾನ್, ಮೊಡೆಓ, ಫ್ಯೂಶನ್, ಫಿಗೋ, ಫಿಯೆಸ್ತಾ, ಎಂಡೀವರ್, ಇಕೋಸ್ಪೋರ್ಟ್ಸ್ ನಂಥ  ಸಾಮಾನ್ಯ ಮತ್ತು ಐಶಾರಾಮಿ ಕಾರುಗಳನ್ನು ತಯಾರಿಸಿ ಕೊಟ್ಟ ಕಂಪೆನಿಯೊಂದು ಹೀಗೆ ಬಾiಗಿಲು ಮುಚ್ಚುವುದೆಂದರೆ, 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವ ಲಕ್ಷಕ್ಕಿಂತಲೂ ಅಧಿಕ ಮಂದಿಯನ್ನು ನಡುನೀರಲ್ಲಿ ಬಿಟ್ಟಂತೆ. ಅಷ್ಟಕ್ಕೂ, ಫೋರ್ಡ್ ನಂತೆ  ಈ ದೇಶವನ್ನು ಬಿಟ್ಟ ಕಾರು ಕಂಪೆನಿಗಳು ಇನ್ನೂ ಹಲವಿವೆ-

2017ರಲ್ಲಿ ಅಮೇರಿಕದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಜನರಲ್ ಮೋಟಾರ್ಸ್ ಭಾರತವನ್ನು ಬಿಟ್ಟು ತೆರಳಿತು. 2018ರಲ್ಲಿ ವೋಕ್ಸ್ ವ್ಯಾಗನ್  ಗುಂಪಿನ ಎಂಎಎನ್ ಡ್ರಿಕ್ಸ್ ಕಂಪೆನಿಯು ಬಾಗಿಲು ಮುಚ್ಚಿತು. ಇದರ ಜೊತೆಗೇ ಇದೇ ವರ್ಷದಲ್ಲಿ ಈಷರ್ ಪೊಲಾರಿಸ್ ಎಂಬ ಬಹುರಾಷ್ಟ್ರೀಯ ಕಂಪೆನಿಯೂ ದೇಶ ತೊರೆಯಿತು. 2019ರಲ್ಲಿ ಯುಎಂ ಮೋಟಾರ್ ಸೈಕಲ್ಸ್ ಮತ್ತು ಫಿಯೆಟ್ ಕಂಪೆನಿ ಕೂಡ ಬಾಗಿಲು ಎಳೆದು ದೇಶದಿಂದ ಹೊರಟು ಹೋಯಿತು. ಬೈಕ್ ತಯಾರಿಕೆಯಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿರುವ ಹಾರ್ಲೆ ಡೇವಿಡ್‌ಸನ್ 2020ರಲ್ಲಿ ಬೈಕ್ ತಯಾರಿಕೆಯನ್ನು ಸ್ಥಗಿತಗೊಳಿಸಿ ಹೊರಟು ಹೋಯಿತು. ಅಂದಹಾಗೆ,

ಯಾವುದೇ ಒಂದು ಬೃಹತ್ ಕಂಪೆನಿ ಬಾಗಿಲು ಮುಚ್ಚುವುದರಿಂದ ಅದರ ಮಾಲಕರಿಗಷ್ಟೇ ತೊಂದರೆಯಾಗಿರುತ್ತಿದ್ದರೆ, ಅದಕ್ಕಾಗಿ ಅತೀವ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವರು ಒಂದರಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಸರಿ ತೂಗಿಸಬಲ್ಲರು. ಇನ್ನೊಂದು ದೇಶಕ್ಕೆ ಹೋಗಿ ಅಲ್ಲಿಯ ಬ್ಯಾಂಕುಗಳಿಂದ  ಸಾಲ ಪಡೆದು, ಬಳಿಕ ಪ್ರಭುತ್ವದ ಮೇಲೆ ಪ್ರಭಾವ ಬೀರಿ ಒಂದೋ ಬಡ್ಡಿ ಮನ್ನಾ ಅಥವಾ ಸಾಲ ಮನ್ನಾವನ್ನೇ ಮಾಡಿಕೊಳ್ಳಬಲ್ಲರು. ಆದರೆ, ಅದರಲ್ಲಿದ್ದ ಸಾಮಾನ್ಯ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವವರಲ್ಲಿ ಈ ಸಾಮರ್ಥ್ಯ ಇರುವುದಿಲ್ಲ. ಅವರು ಕಂಗಾಲಾಗುತ್ತಾರೆ. ಇನ್ನೊಂದು ಉದ್ಯೋಗವೂ ಕಷ್ಟವಾದಾಗ ಆತ್ಮಹತ್ಯೆಯಂಥ ಅತಿ ದಾರುಣ ಆಯ್ಕೆಗೂ ಮುಂದಾಗುತ್ತಾರೆ. ನೋಟ್ ಬ್ಯಾನ್ ಬಳಿಕದ ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಿಸಿದರೆ ಹೀಗೆ ಉದ್ಯೋಗ ನಷ್ಟವಾಗಿರುವವರೂ ಆ ಪಟ್ಟಿಯಲ್ಲಿರುವುದು ಕಾಣ ಸಿಗುತ್ತದೆ. ನಿಜವಾಗಿ,

ದೇಶದ ಅರ್ಥವ್ಯವಸ್ಥೆಗೆ ಮಂಕು ಕವಿಯಲು ಪ್ರಾರಂಭವಾದದ್ದು ಕೊರೋನಾ ಕಾಲದ ಬಳಿಕದಿಂದಲ್ಲ. ನೋಟ್ ಬ್ಯಾನ್ ಇದರ ಆರಂಭವಾಗಿತ್ತು. ಆಗಲೇ ರಘುರಾಮ್ ರಾಜನ್‌ರಂಥ ಪ್ರಮುಖ ಆರ್ಥಿಕ ತಜ್ಞರು ಈ ನಿರ್ಧಾರದ ಅಪಾಯವನ್ನು ಗುರುತಿಸಿದ್ದರು. ಭವಿಷ್ಯದಲ್ಲಿ ಭಾರೀ ಆರ್ಥಿಕ ಹೊಡೆತ ನೀಡುವ ಅವೈಜ್ಞಾನಿಕ ನಿರ್ಧಾರ ಇದು ಎಂದೂ ಹೇಳಿದ್ದರು. ಇದು ನಿಧಾನಕ್ಕೆ ಸಾಬೀತಾ ಗುತ್ತಲೂ ಬಂತು. ಬೃಹತ್ ಉದ್ಯಮಗಳು ಮಾತ್ರವಲ್ಲ, ಸಣ್ಣ ಸಣ್ಣ ಕೈಗಾರಿಕೆಗಳು, ಗುಡಿ ಕಸುಬುಗಳು ಬಾಗಿಲು ಮುಚ್ಚಿದುವು. ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೈಬಿಡುವ ಪ್ರಕ್ರಿಯೆಯನ್ನು ಕಂಪೆನಿಗಳೇ ಮಾಡತೊಡಗಿದುವು. ಆರ್ಥಿಕ ಹಿಮ್ಮುಖ ಆರಂಭವಾಯಿತು. ಅಂದಿನಿಂದ ಆರಂಭವಾದ ಈ ಬಿಕ್ಕಟ್ಟು ಕೊರೋನಾದ ಈ ಕಾಲದಲ್ಲಂತೂ ಬಿಗಡಾಯಿಸಿದೆ. ಇಂಥ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಾದ ಸರ್ಕಾರವಂತೂ ಖಜಾನೆ ತುಂಬಿಸುವ ತರಾತುರಿಯಲ್ಲಿದೆ. ಪೆಟ್ರೋಲ್, ಡೀಸೆಲ್‌ಗಳ ಬೆಲೆಗಳಂತೂ ಆಕಾಶ ಮುಟ್ಟಿವೆ. ಸ್ವತಂತ್ರ ಭಾರತದ ಈ 7 ದಶಕಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು ಇದೇ ಮೊದಲು. ಡೀಸೆಲ್ ಬೆಲೆಯೂ ಎಗ್ಗಿಲ್ಲದೇ ಏರಿರುವುದರಿಂದ ಅಗತ್ಯ ವಸ್ತುಗಳು ಬೆಂಕಿ ಕೆಂಡವಾಗಿವೆ. ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ನಡುವೆ ಕನಿಷ್ಠ 20 ರೂಪಾಯಿಗಳಷ್ಟಾದರೂ ಅಂತರವನ್ನು ಕಾಯ್ದಿಟ್ಟುಕೊಳ್ಳುತ್ತಿತ್ತು. ಪೆಟ್ರೋಲ್ ಬೆಲೆ 70 ರೂಪಾಯಿಯಾದರೆ ಡೀಸೆಲ್ 50 ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿತ್ತು. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿರಲಿಲ್ಲ. ಯಾಕೆಂದರೆ, 

ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವುದು ಲಾರಿಗಳಾದ್ದರಿಂದ ಮತ್ತು ಅವು ಡೀಸೆಲ್ ಉಪಯೋಗಿಸುತ್ತಿದ್ದುದರಿಂದ ಜನಸಾಮಾನ್ಯರ ಬದುಕು ಅಷ್ಟರ ಮಟ್ಟಿಗೆ ನೆಮ್ಮದಿಯದ್ದಾಗಿತ್ತು. ಈಗ ಡೀಸೆಲ್ ಬೆಲೆಯೇ ನೂರರಲ್ಲಿದೆ. ಸಹಜವಾಗಿ ಇದರ ಪರಿಣಾಮ ಅಗತ್ಯ ವಸ್ತುಗಳ ಮೇಲಾಗುತ್ತಿದೆ. ಇನ್ನು, ಹೊಟೇಲುಗಳಿಗೆ ಪ್ರವೇಶಿಸದಿರುವುದೇ ಉತ್ತಮ ಎಂಬ ವಾತಾವರಣ ಇದೆ. ಗೃಹಬಳಕೆ ಮತ್ತು ಕಮರ್ಷಿಯಲ್ ಬಳಕೆ- ಎರಡೂ ರೀತಿಯ ಗ್ಯಾಸ್‌ಗಳಿಗೂ ಸರ್ಕಾರ ವಿಪರೀತ ಬೆಲೆ ಏರಿಸಿರುವುದರಿಂದ ಹೊಟೇಲಿನ ಚಾ-ತಿಂಡಿ ತಿನಿಸುಗಳು ಮತ್ತು ಊಟಗಳು ಭಯ ತರಿಸುತ್ತಿವೆ. ಅಂದಹಾಗೆ,

ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್‌ಗಳು ಯಾರ ಹೊಟ್ಟೆಯನ್ನೂ ತುಂಬಿಸಲ್ಲ. ಇವೆಲ್ಲವನ್ನೂ ಆಡಳಿತ ಮತ್ತು ಅದರ ಬೆಂಬಲಿಗರು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿರುವುದರ ಉದ್ದೇಶವೇ ಮುನ್ನೆಲೆಯಲ್ಲಿರುವ ಹಸಿವು, ಬಡತನ, ಬೆಲೆಏರಿಕೆ, ನಿರುದ್ಯೋಗದಂಥ ಬಹುಮುಖ್ಯ ಮತ್ತು ನಿಜ ಸಮಸ್ಯೆಗಳನ್ನು ಹಿನ್ನೆಲೆಗೆ ತಳ್ಳುವುದಕ್ಕೆ. ಇದರಲ್ಲಿ ಪ್ರಭುತ್ವ ಯಶಸ್ವಿಯಾದಷ್ಟೂ ಜನರು ಹೈರಾಣಾಗುತ್ತಲೇ ಹೋಗುತ್ತಾರೆ. ಬೃಹತ್ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿದ್ದರೂ ಮಾಧ್ಯಮಗಳು ಮಾತ್ರ ಹಿಂದೂ-ಮುಸ್ಲಿಮ್‌ಗಳ ಸುತ್ತವೇ ಗಿರಕಿ ಹೊಡೆಯುತ್ತಿರುವುದು ಪ್ರಭುತ್ವ ಹೆಣೆದ ಸಂಚಿನ ಭಾಗ. ಜನರು ಬೀದಿಗಿಳಿದು ಪ್ರಶ್ನಿಸುವುದೇ ಪರಿವರ್ತನೆಗಿರುವ ದಾರಿ.

Friday, 24 September 2021

2014ರ ಮೊದಲಿನ ಚಿತ್ರಗಳು ಹೇಳುತ್ತಿರುವ ಕತೆ

 


ಸನ್ಮಾರ್ಗ ಸಂಪಾದಕೀಯ 

2020 ಮೇ ತಿಂಗಳಿನಲ್ಲಿ ಈ ದೇಶದಲ್ಲಿ ಅಡುಗೆ ಅನಿಲದ ಬೆಲೆ 581 ರೂಪಾಯಿಯಿತ್ತು. ಈಗ 925 ರೂಪಾಯಿ. 2014ರಲ್ಲಿ ಅಡುಗೆ  ಅನಿಲದ ಬೆಲೆ 414 ರೂಪಾಯಿಯಷ್ಟೇ ಇತ್ತು. ಆಗ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಇದೇ ಅವಧಿಯಲ್ಲಿ ಪೆಟ್ರೋಲ್ ಬೆಲೆ  71 ರೂಪಾಯಿ ಇತ್ತು. ಇವತ್ತು 106 ರೂಪಾಯಿಯನ್ನೂ ದಾಟಿ ಹೋಗಿದೆ. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ  ಬೆಲೆ ಬ್ಯಾರಲೊಂದಕ್ಕೆ 109 ಡಾಲರ್‌ಗಳಿದ್ದಾಗಲೂ ಪ್ರಧಾನಿ ಮನ್‌ಮೋಹನ್ ಸಿಂಗ್‌ರು ಅದರ ಹೊರೆಯನ್ನು ಭಾರತೀಯರ ಮೇಲೆ  ಹೊರಿಸದೆಯೇ 71 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದಕ್ಕುವಂತೆ ಮಾಡಿದ್ದರು. ಇವತ್ತು ಅಂತಾರಾಷ್ಟ್ರೀ ಯ ತೈಲ  ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬರೇ 78 ಡಾಲರ್. ಆದರೆ, ಅದರ ಲಾಭವನ್ನು ಭಾರತೀಯರಿಗೆ ವರ್ಗಾಯಿಸುವ ಬದಲು  ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರಕಾರ 100 ರೂಪಾಯಿಯ ಗಡಿ ದಾಟಿಸಿ ಖಜಾನೆ ತುಂಬಿಸುತ್ತಿದೆ. ಪ್ರಶ್ನಿಸಿದರೆ ಎಲ್ಲ ಆರೋಪವನ್ನೂ  ಮನ್‌ಮೋಹನ್ ಸಿಂಗ್ ಸರಕಾರದ ಮೇಲೆ ಹೊರಿಸಿ ತಾನು ಶುದ್ಧ ಹಸ್ತ ಎಂದು ಬಿಂಬಿಸಿಕೊಳ್ಳುತ್ತಿದೆ. ಮನ್‌ಮೋಹನ್ ಸಿಂಗ್ ಸರ್ಕಾರ  ಆಯಿಲ್ ಬಾಂಡ್‌ನ ಹೆಸರಲ್ಲಿ ಮಾಡಿರುವ ಸಾಲವನ್ನು ಸಂದಾಯಿಸಲು ಈ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ ಎಂಬ ಸಬೂಬು ಕೇಂದ್ರ  ಸರಕಾರದ್ದು. ಆದರೆ, 

ಅದೂ ನಿಜವಲ್ಲ. ಆಯಿಲ್ ಬಾಂಡ್‌ನ ಹೆಸರಲ್ಲಿ ಇದ್ದ ಸಾಲ ಹೆಚ್ಚೆಂದರೆ 1.34 ಲಕ್ಷ  ಕೋಟಿ ರೂಪಾಯಿ. ಅಲ್ಲದೇ,  ಈ ಆಯಿಲ್ ಬಾಂಡ್ ಪದ್ಧತಿಯನ್ನು ಆರಂಭಿಸಿದ್ದೂ ಮನ್‌ಮೋಹನ್ ಸಿಂಗ್ ಸರಕಾರವಲ್ಲ, ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ  ಎಂಬ ವಾದವೂ ಇದೆ. ಅದೇನಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಕಳೆದ 7 ವರ್ಷಗಳಲ್ಲಿ ಸುಂಕದ ರೂಪದಲ್ಲಿ 25 ಲಕ್ಷ   ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಈಗಾಗಲೇ ಸಂಗ್ರಹಿಸಿದೆ. ಆದರೆ ಇಷ್ಟು ಅಗಾಧ ಮೊತ್ತ ಸಂಗ್ರಹಿಸಿದ್ದರೂ ಬರೇ 35  ಸಾವಿರ ಕೋಟಿ ರೂಪಾಯಿಯನ್ನು ಮಾತ್ರ ಆಯಿಲ್ ಬಾಂಡ್ ಸಾಲದ ಮರುಪಾವತಿ ಮಾಡಿದೆ. ಹಾಗಿದ್ದರೆ ಇಷ್ಟು ಬೃಹತ್  ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ತೆರಿಗೆ ಹಣ ಏನಾದುವು? ಆಯಿಲ್ ಬಾಂಡ್‌ನ ಸಾಲದ 25 ಪಟ್ಟು ಅಧಿಕ ಹಣವನ್ನು ತೆರಿಗೆ  ರೂಪದಲ್ಲಿ ಸಂಗ್ರಹಿಸಿದ ಹೊರತಾಗಿಯೂ ತೈಲ ಬೆಲೆಯನ್ನು ಇಳಿಸದಿರುವುದು ಏಕೆ?

2020 ಮೇ ತಿಂಗಳಿನಿಂದ  ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಯಾವ ಸೂಚನೆಯನ್ನೂ ನೀಡದೆಯೇ  ದಿಢೀರಿರ್ ಸ್ಥಗಿತಗೊಳಿಸಿದೆ. ದೇಶದಲ್ಲಿ ಸುಮಾರು 29 ಕೋಟಿ ಅಡುಗೆ ಅನಿಲದ ಗ್ರಾಹಕರಿದ್ದಾರೆ. 2016ರಲ್ಲಿ ಕೇಂದ್ರ ಸರಕಾರವು  ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿತು. ಅದರ ಮುಖ್ಯ ಗುರಿ ಇದ್ದುದು ತೆರೆದ ಒಲೆಯ ಮೂಲಕ ಅಡುಗೆ  ಮಾಡುವ ಸಾಂಪ್ರದಾಯಿಕ ವಿಧಾನಕ್ಕೆ ಇತಿಶ್ರೀ ಹಾಡುವುದು. ಗ್ರಾಮೀಣ ಪ್ರದೇಶದ ಮಂದಿ ಅಡುಗೆ ಅನಿಲಕ್ಕಿಂತ ಉರುವಲು ಮತ್ತು  ಕಟ್ಟಿಗೆಗಳನ್ನು ಉರಿಸಿಯೇ ಅಡುಗೆ ಮಾಡುವುದರಿಂದ ಅದರ ಹೊಗೆಯು ಅವರ ಹೃದಯ, ಶ್ವಾಸಕೋಶಗಳ ಮೇಲೆ ಅಡ್ಡಪರಿಣಾಮವನ್ನು ಬೀರುತ್ತಿದೆ, ಇದರಿಂದಾಗಿಯೇ ಭಾರತದಲ್ಲಿ ಪ್ರತಿವರ್ಷ 5 ಲಕ್ಷ  ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ  ವರದಿಯನ್ನೂ ಆ ಸಂದರ್ಭದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಆದ್ದರಿಂದ,

 ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಕಾರ 8  ಕೋಟಿ ಗ್ರಾಮೀಣ ಭಾರತದ ಬಡ ಜನರಿಗೆ ಅಡುಗೆ ಅನಿಲ ತಲುಪಿಸುವುದನ್ನು ಕೇಂದ್ರ ಸರಕಾರ ಗುರಿಯಾಗಿ ಇಟ್ಟುಕೊಂಡಿತ್ತು. ಆದರೆ  ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕಂಡ ಈ ಯೋಜನೆಯು ಬರಬರುತ್ತಾ ಜನರ ಆಕರ್ಷಣೆಯನ್ನು ಕಳಕೊಂಡಿದೆ. ಈ ಯೋಜನೆಯನ್ವಯ ಸಿಲಿಂಡರ್ ಪಡೆದವರು ಮರು ಭರ್ತಿ ಮಾಡುವ ಪ್ರಕ್ರಿಯೆಯನ್ನೇ ನಿಲ್ಲಿಸುತ್ತಾ ಬಂದಿದ್ದಾರೆ ಮತ್ತು ಉರುವಲು ಆಧಾರಿತ  ಅಡುಗೆಗೆ ಮರಳಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅನ್ವಯ ಸಿಲಿಂಡರ್ ಪಡೆದ ಒಟ್ಟು 3.18 ಕೋಟಿ ಗ್ರಾಹಕರ ಪೈಕಿ ಶೇ.  17.4ರಷ್ಟು ಮಂದಿ ಒಮ್ಮೆಯೂ ಮರು ಬುಕಿಂಗ್ ಮಾಡಿಲ್ಲ. ಅಲ್ಲದೇ, ಇಡೀ ಒಂದು ವರ್ಷದಲ್ಲಿ ಶೇ. 34ರಷ್ಟು ಮಂದಿ ಬರೇ 1ರಿಂದ 3  ಸಿಲಿಂಡರ್‌ನಷ್ಟು ಮಾತ್ರ ಮರು ಬುಕಿಂಗ್ ಮಾಡಿದ್ದಾರೆ. ಅಂದರೆ ವರ್ಷವೊಂದರಲ್ಲಿ ಅತೀ ಹೆಚ್ಚೆಂದರೆ 3 ಸಿಲಿಂಡರ್‌ಗೆ ಬುಕಿಂಗ್  ಮಾಡಿದ್ದಾರೆ. ಇದರರ್ಥ ಅವರು ಉರುವಲು ಆಧಾರಿತ ಅಡುಗೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದೇ ಆಗಿದೆ. ಇದಷ್ಟೇ ಅಲ್ಲ,

2014ರ ಚುನಾವಣಾ ಭಾಷಣಗಳ ವೇಳೆ ನರೇಂದ್ರ ಮೋದಿ ದೊಡ್ಡದೊಂದು ನಿರೀಕ್ಷೆ ಹುಟ್ಟಿಸಿ ದ್ದರು. ಅದರಲ್ಲಿ ವರ್ಷಂಪ್ರತಿ 2 ಕೋಟಿ  ಉದ್ಯೋಗ ಸೃಷ್ಟಿ ಒಂದಾದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ  ತುಂಬುವುದೂ ಸೇರಿತ್ತು. ಇದಾಗಿ 7 ವರ್ಷಗಳು ಸಂದಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಬಿಡಿ, ಇರುವ ಉದ್ಯೋಗಗಳೇ  ಇವತ್ತು ನಷ್ಟ ಹೊಂದುತ್ತಿವೆ. ಇತ್ತೀಚಿನ ಬೆಳವಣಿಗೆ ಏನೆಂದರೆ, ಜನಪ್ರಿಯ ಕಾರು ತಯಾರಿಕಾ ಕಂಪೆನಿಯಾದ ಫೋರ್ಡ್, ಭಾರತದ ತನ್ನ  ಉತ್ಪಾದನಾ ಘಟಕವನ್ನು ಮುಚ್ಚುವುದಾಗಿ ಘೋಷಿಸಿದೆ. ಇದರಿಂದಾಗಿ ಸುಮಾರು 4 ಸಾವಿರ ಮಂದಿ ನೇರ ಉದ್ಯೋಗ ಕಳಕೊಳ್ಳಲಿದ್ದಾರೆ.  ಕೊರೋನಾ ಪೂರ್ವದಲ್ಲಿ ಮಾಡಲಾದ ನೋಟ್‌ಬ್ಯಾನ್, ಜಿಎಸ್‌ಟಿಗಳು ಮತ್ತು ಹಾಗೆಯೇ, ಕೊರೋನಾ ಕಾಲದ ಸಂಕಷ್ಟಗಳೂ  ಸೇರಿಕೊಂಡು ಲಕ್ಷಾಂತರ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಈ ಮೂಲಕ ಅಸಂಖ್ಯ ಮಂದಿ ನಿರುದ್ಯೋಗಿಗಳಾಗಿದ್ದಾರೆ. 2014ರಲ್ಲಿ  ರೈಲ್ವೆಯಲ್ಲಿ ಮಾತ್ರ ಸುಮಾರು 14 ಲಕ್ಷ ಉದ್ಯೋಗಿಗಳಿದ್ದರು. ಆದರೆ, ಈಗ ಈ ಉದ್ಯೋಗಿಗಳ ಸಂಖ್ಯೆಯು ಸುಮಾರು 12.53 ಲಕ್ಷಕ್ಕೆ  ಇಳಿಕೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ 7 ವರ್ಷಗಳ ಹಿಂದೆ 4 ಲಕ್ಷ  ಇದ್ದ ಉದ್ಯೋಗಿಗಳ ಪೈಕಿ ಈಗ 3.66 ಲಕ್ಷ  ಮಂದಿಯಷ್ಟೇ ಇದ್ದಾರೆ.  ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಎಂಬ ಭರವಸೆಯಂತೆ ಕೇಂದ್ರ ಸರಕಾರವು ಈ ಕಳೆದ 7 ವರ್ಷಗಳಲ್ಲಿ 14 ಕೋಟಿ  ಉದ್ಯೋಗವನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 36 ಲಕ್ಷ  ಹುದ್ದೆಗಳು ಖಾಲಿ  ಇವೆ ಎಂಬುದು ಈಗಿನ ಅಂಕಿಅಂಶ. ಇನ್ನು ಸ್ವಿಸ್ ಬ್ಯಾಂಕ್‌ನಿಂದ  ಭಾರತಕ್ಕೆ ಕಪ್ಪು ಹಣವನ್ನು ತರುವುದು ಬಿಡಿ, ಭಾರತದ ಬ್ಯಾಂಕುಗಳಿಗೆ  ಸಾವಿರಾರು ಕೋಟಿ ರೂಪಾಯಿ ವಂಚಿಸಿ ಈ ಸರಕಾರದ ಕಣ್ಣ ಮುಂದೆಯೇ ವಿದೇಶಕ್ಕೆ ತೆರಳಿದವರನ್ನೂ ಮರಳಿ ಇಲ್ಲಿಗೆ ಕರೆತರಲು  ಸಾಧ್ಯವಾಗಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಬಡಜನರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗಿದೆ. 7 ವರ್ಷಗಳ ಹಿಂದೆ ಇದೇ ಬಿಜೆಪಿಯ  ನಾಯಕರು ಮತ್ತು ಕಾರ್ಯಕರ್ತರು ಬೆಲೆ ಏರಿಕೆಯನ್ನು ಪ್ರಶ್ನಿಸಿ ಮಾಡಿರುವ ಪ್ರತಿಭಟನೆಗಳಿಗೆ ಲೆಕ್ಕ ಮಿತಿಯಿಲ್ಲ. ಖಾಲಿ ಸಿಲಿಂಡರನ್ನು  ರಸ್ತೆಯಲ್ಲಿಟ್ಟು, ನಿತ್ಯ ಬಳಕೆಯ ವಸ್ತುಗಳ ಹಾರವನ್ನು ತಯಾರಿಸಿ, ಕೊರಳಿಗೆ ತೂಗು ಹಾಕಿ ಪ್ರತಿಭಟಿಸಿದ ಚಿತ್ರಗಳೆಲ್ಲ ಗೂಗಲ್‌ನಲ್ಲಿ  ಹುಡುಕಾಡಿದರೆ ರಾಶಿಗಟ್ಟಲೆ ಸಿಗುತ್ತಿವೆ. ಇವತ್ತು ಅದೇ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ ತಿರುಗಾಡುತ್ತಿದ್ದಾರೆ. ದುರಂತ ಏ ನೆಂದರೆ,

2014ರಲ್ಲಿ ಯಾವುದನ್ನು ಜನದ್ರೋಹಿಯೆಂದು ಇದೇ ನಾಯಕರು ಹೇಳಿದ್ದರೋ ಅದನ್ನೇ ಈ 2021 ರಲ್ಲಿ ಅನಿವಾರ್ಯವೆಂದು  ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವತ್ತು ಈ ದೇಶ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶವಾಗಿ ಮಾರ್ಪಟ್ಟಿದೆ. 2014ರಲ್ಲಿ  ಅತೀವ ನಿರೀಕ್ಷೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಕಳೆದ 7 ವರ್ಷಗಳಲ್ಲಿ ಆ ನಿರೀಕ್ಷೆಗೆ ನ್ಯಾಯ ನೀಡುವಲ್ಲಿ ಸಂ ಪೂರ್ಣ ವಿಫಲವಾಗಿದೆ. ಸರಕಾರವನ್ನು ಈವರೆಗೆ ಉಳಿಸಿರುವುದು ಹಿಂದೂ-ಮುಸ್ಲಿಮ್, ಮಂದಿರ-ಮಸೀದಿ ಸುತ್ತ ಹೆಣೆದಿರುವ  ಧ್ರುವೀಕರಣ ರಾಜಕಾರಣವೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಧ್ರುವೀಕರಣ ರಾಜ ಕೀಯವು ಉನ್ಮಾದ ಆಧಾರಿತವಾದುದು. ಅದು  ಹೊಟ್ಟೆ ತುಂಬಿಸಲ್ಲ. ಅದು ಹೊಟ್ಟೆ ತುಂಬಿದವರಂತೆ  ನಟಿಸುವವರನ್ನಷ್ಟೇ ತಯಾರಿಸಬಲ್ಲುದು. ಈ ನಟನೆಗೂ ದೀರ್ಘಾಯುಷ್ಯವಿಲ್ಲ.

ಸನ್ಮಾರ್ಗಕ್ಕೆ 43: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಕಠಿಣ ಹಾದಿ

 



ವಿಶೇಷ ಸಂಪಾದಕೀಯ


ಕುರ್‌ಆನನ್ನು ಧಾರಾವಾಹಿಯಾಗಿ ಕನ್ನಡದಲ್ಲಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಬುಖಾರಿ ಹದೀಸ್ ಗ್ರಂಥವನ್ನು ಕನ್ನಡ ದಲ್ಲಿ  ಧಾರಾವಾಹಿಯಾಗಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಪ್ರವಾದಿ ಚರಿತ್ರೆಯನ್ನು, ಇಸ್ಲಾಮೀ ಇತಿಹಾಸವನ್ನು, ಖಲೀಫರುಗಳ ಇತಿಹಾಸವನ್ನು.. ಹೀಗೆ ಹತ್ತು ಹಲವು ಪ್ರಥಮಗಳ ಮೈಲಿಗಲ್ಲನ್ನು ನೆಟ್ಟ ಹೆಮ್ಮೆ ಸನ್ಮಾರ್ಗಕ್ಕಿದೆ ಮತ್ತು ಕನ್ನಡದ ಮಣ್ಣಿನಲ್ಲಿ ಈ ಗರಿ ಸನ್ಮಾರ್ಗಕ್ಕೆ  ಮಾತ್ರವೇ ಇದೆ.

1978 ಎಪ್ರಿಲ್ 23ರಂದು ಹುಟ್ಟಿಕೊಂಡ ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಮಾಧ್ಯಮ ರಂಗಕ್ಕೆ ಕೊಟ್ಟಿರುವ ಕೊಡುಗೆಗಳ ಪಟ್ಟಿ  ಬಹುದೊಡ್ಡದಿದೆ. ಅದರಲ್ಲಿ ಅತ್ಯಂತ ಎತ್ತರದಲ್ಲಿರುವುದು- ಸತ್ಯ, ಮೌಲ್ಯಾಧಾರಿತ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ  ಆಧಾರಿತ ಪತ್ರಿಕೋದ್ಯಮ. ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾರಿಂದ ಹಿಡಿದು ಅನೇಕ ಪತ್ರಕರ್ತರನ್ನು ಅದು  ತಯಾರಿಸಿದೆ. ತಜ್ಞ ಪತ್ರಕರ್ತರನ್ನು ಮಾಧ್ಯಮ ರಂಗಕ್ಕೆ ಧಾರೆಯೆರೆದಿದೆ. ಅನೇಕಾರು ಬರಹಗಾರರನ್ನು ಅದು ಸೃಷ್ಟಿಸಿದೆ.

ಮುಸ್ಲಿಮ್ ಮಹಿಳೆಯರು ಮಾಧ್ಯಮ ರಂಗದಲ್ಲಿ ಬೆರಳೆಣಿಕೆಯಷ್ಟಿದ್ದ ಕಾಲದಲ್ಲೇ  ಮಹಿಳಾ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದ  ಸನ್ಮಾರ್ಗವು ಅಂತಿಮವಾಗಿ ಎರಡು ದಶಕಗಳ ಹಿಂದೆ ಅನುಪಮ ಎಂಬ ಮಹಿಳೆಯರಿಂದಲೇ ನಡೆಸಲ್ಪಡುವ ಪತ್ರಿಕೆಗೂ ಜನ್ಮ ನೀಡಿದೆ.  ಬರಹಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿರುವ ಸಾಮಾಜಿಕ ಜಾಲತಾಣಗಳ ಇಂದಿನ ದಿನಗಳಲ್ಲಿ ಇವ್ಯಾವುವೂ ಇಲ್ಲದ ಕಾಲಕ್ಕೆ  ಹೊರಳಿ ನೋಡುವಾಗ ಸನ್ಮಾರ್ಗ ಯುವ ಪ್ರತಿಭೆಗಳಿಗೆ ನೀಡಿದ ಬೆಂಬಲ ಮತ್ತು ಅವಕಾಶ ಖಂಡಿತ ಸ್ಮರಣೀಯ.

ಅಂದು ಮುಖ್ಯ ವಾಹಿನಿಯ ಕನ್ನಡ ಪತ್ರಿಕೆಗಳಂತೂ ಹೊಸಬರ ಬರಹಗಳಿಗೆ ಜಾಗ ನೀಡುತ್ತಿದ್ದುದು ಅಪರೂಪದಲ್ಲಿ ಅಪರೂಪ. ಏನೇ ಬರೆದರೂ ಪತ್ರ ವಿಭಾಗಕ್ಕಿಂತ ಮೇಲೇರಲು ಬಿಡದ ಅಲಿಖಿತ ಸಂಪಾದಕೀಯ ನಿಯಮವೊಂದು ಆ ಪತ್ರಿಕೆಗಳಲ್ಲಿತ್ತು. ಅದರಲ್ಲೂ  ಮುಸ್ಲಿಮ್ ಬರಹಗಾರರಂತೂ ಇಂಥ ಅಲಿಖಿತ ನಿಯಮದಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದರು. ಬರೆಯುವ ಹುರುಪಿದ್ದರೂ  ಮತ್ತು ಪ್ರತಿಭೆ ಇದ್ದರೂ ಅದನ್ನು ಪ್ರಕಟಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವಂತಹ ಪತ್ರಿಕೆಗಳ ಅಭಾವ ಸಾಕಷ್ಟಿತ್ತು. ಮುಸ್ಲಿಮರ ಆಚಾರ,  ವಿಚಾರ, ಧಾರ್ಮಿಕ ನಿಯಮಗಳು, ಸಂಸ್ಕೃತಿ, ಸಾಂಪ್ರದಾಯಿಕತೆ, ಧರ್ಮಗ್ರಂಥ.. ಇತ್ಯಾದಿಗಳ ಬಗ್ಗೆ ತಿಳಿದಿಲ್ಲದ ಮತ್ತು ತಿಳಿಯಲೂ  ಪ್ರಯತ್ನಿಸದ ಪತ್ರಕರ್ತರು ಸನ್ಮಾರ್ಗ ಹುಟ್ಟಿಕೊಂಡ ಕಾಲದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರಿಂದಾಗಿ ಮುಸ್ಲಿಮರ ವರ್ಚಸ್ಸಿಗೆ ಆಗಾಗ  ಹಾನಿಯಾಗುತ್ತಲೂ ಇತ್ತು. ಅವರು ಮಾಡುತ್ತಿದ್ದ ವರದಿ, ಸುದ್ದಿ, ವಿಶ್ಲೇಷಣೆ ಎಲ್ಲವುಗಳೂ ಇಸ್ಲಾಮಿಗೆ ಸಂಬಂಧಿಸಿ ಶತದಡ್ಡತನವಾಗಿದ್ದರೂ  ಅದಕ್ಕೆ ಬರಹದಲ್ಲೇ  ಉತ್ತರ ಕೊಡಬಲ್ಲ ಸಮರ್ಥರು ಮುಸ್ಲಿಮರಲ್ಲಿ ಕಡಿಮೆಯಿದ್ದರು. ಇದಕ್ಕೆ ಪತ್ರಿಕೋದ್ಯಮದಲ್ಲಿ ಕಲಿಯುತ್ತಿರುವ  ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದುದು ಒಂದು ಕಾರಣವಾದರೆ, ಕುರ್‌ಆನನ್ನು ಮತ್ತು ಇಸ್ಲಾಮೀ ತತ್ವಸಂಹಿತೆಯನ್ನು ಕನ್ನಡದಲ್ಲಿ ಅಧ್ಯಯನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣವಾಗಿತ್ತು. ಹಾಗೆಯೇ,

ಒಂದುವೇಳೆ, ಯಾರಾದರೂ ಬರೆದರೂ ಅದನ್ನು ಪ್ರಕಟಿಸುವ ಸೌಜನ್ಯವನ್ನು ಆ ಪತ್ರಿಕೆಗಳು ತೋರುತ್ತಲೂ ಇರಲಿಲ್ಲ. ಪತ್ರಿಕಾ ರಂಗದಲ್ಲಿ  ಸನ್ಮಾರ್ಗದ ಕೊಡುಗೆ ಏನು ಎಂಬುದು ಸ್ಪಷ್ಟವಾಗುವುದೇ ಇಲ್ಲಿ.

ಸನ್ಮಾರ್ಗ ಹುಟ್ಟಿಕೊಂಡಾಗ ಇದ್ದ ಎಣಿಕೆಯ ನಾಲ್ಕೈದು  ಬರಹಗಾರರ ಸಂಖ್ಯೆ ಪತ್ರಿಕೆ ಹುಟ್ಟಿ ವರ್ಷವಾಗುತ್ತಲೇ ದ್ವಿಗುಣವಾಯಿತು.  ಅದ್ಭುತ ಎನ್ನಬಹುದಾದ ಪ್ರತಿಭೆಗಳು ಸನ್ಮಾರ್ಗದ ಮೂಲಕ ಬೆಳಕಿಗೆ ಬಂದುವು. ಲೇಖನ, ವಿಶ್ಲೇಷಣೆ, ಪ್ರಬಂಧ, ಕತೆ, ಕವನ, ವಿಮರ್ಶೆ  ಇತ್ಯಾದಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳಿಗೆ ಸಡ್ಡು ಹೊಡೆಯುವಷ್ಟು ಪ್ರಬುದ್ಧವಾಗಿ ಬರೆಯುವ ಬರಹಗಾರರು  ನಿರ್ಮಾಣವಾಗತೊಡಗಿದರು. ಅಲ್ಲಲ್ಲಿ ಬರಹಗಾರರನ್ನು ತಯಾರಿಸುವ ಕಮ್ಮಟಗಳೂ ನಡೆಯತೊಡಗಿದುವು. ಇದರ ಜೊತೆಗೇ ಕನ್ನಡ  ಭಾಷೆಯಲ್ಲಿ ಪವಿತ್ರ ಕುರ್‌ಆನ್‌ನ ಅನುವಾದವೂ ಸನ್ಮಾರ್ಗದಲ್ಲಿ ಧಾರಾವಾಹಿಯಾಗಿ ಬರತೊಡಗಿತು.

ಆವರೆಗೆ ಕನ್ನಡ ಮಣ್ಣಿಗೆ ಅರಬಿ ಭಾಷೆಯ ಕುರ್‌ಆನ್ ತಲುಪಿತ್ತೇ ಹೊರತು ಅದರ ಅನುವಾದ ತಲುಪಿರಲಿಲ್ಲ. ಅರಬಿಯಲ್ಲಿರುವ  ಕುರ್‌ಆನ್ ಹೇಳುವುದೇನು ಎಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳಿರಲಿಲ್ಲ. ಸನ್ಮಾರ್ಗ ಆ  ಬರವನ್ನು ನೀಗಿಸುವ ಮೂಲಕ ಮುಖ್ಯವಾಹಿನಿ ಪತ್ರಿಕೆಗಳಲ್ಲಿದ್ದ ಹಲವು ಪತ್ರಕರ್ತರ ಅಜ್ಞಾನವನ್ನು ನೀಗಿಸಲೂ ಯಶಸ್ವಿಯಾಯಿತು.  ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರಲ್ಲಿದ್ದ ಅಜ್ಞಾನವನ್ನೂ ನೀಗಿಸಿತು. ಅವರಲ್ಲಿ ಅಕ್ಷರ ಪ್ರೀತಿಯನ್ನು ಕಲಿಸಿತು. ಮಾಧ್ಯಮ ಕ್ಷೇತ್ರಕ್ಕೆ ಮುಸ್ಲಿಮರನ್ನು ಸನ್ಮಾರ್ಗ  ಕೈಬೀಸಿ ಕರೆಯಿತು. ಅವರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿತು. ಜೊತೆಗೇ ಮುಸ್ಲಿಮೇತರ ಬರಹಗಾರರಿಗೂ ಸರಿಸಮಾನ ಅವಕಾಶಗಳನ್ನು ಕೊಟ್ಟು ನಿಜ ಪತ್ರಿಕಾ ಗುಣವನ್ನು ಮೆರೆಯಿತು. ಮುಸ್ಲಿಮೇತರರನ್ನು ಅಂಕಣ ಬರಹಗಾರರಾಗಿಯೂ ಅದು ಗೌರವಿಸಿತು.

ಹೀಗೆ ಸಾಗಿ ಬಂದ ಸನ್ಮಾರ್ಗಕ್ಕೆ ಇದೀಗ 43 ವರ್ಷಗಳು ತುಂಬಿವೆ. ಇದು 44ನೇ ವರ್ಷದ ಪ್ರಥಮ ಸಂಚಿಕೆ. ಮುಖ್ಯವಾಹಿನಿಯ  ಪತ್ರಿಕೆಗಳಿಗೆ ಹೋಲಿಸಿದರೆ, ಅನೇಕ ‘ಇಲ್ಲ’ಗಳನ್ನು ತನ್ನ ಮೌಲ್ಯವಾಗಿ ಆರಂಭದಿಂದಲೂ ನೆಚ್ಚಿಕೊಂಡು ಬಂದಿರುವುದರಿಂದಲೋ ಏನೋ  ಇವತ್ತೂ ಕೆಲವು ಪ್ರಶ್ನೆ ಮತ್ತು ಸವಾಲುಗಳ ಜೊತೆಗೆಯೇ ಸನ್ಮಾರ್ಗ ಬದುಕುತ್ತಿದೆ. ಈ ಪತ್ರಿಕೆ ನಂಬಿಕೊಂಡ ಮೌಲ್ಯದ ಕಾರಣಕ್ಕಾಗಿ  ಹೆಚ್ಚಿನ ಜಾಹೀರಾತುಗಳು ತಿರಸ್ಕೃತವಾಗುತ್ತಾ ಬಂದಿವೆ. ಬ್ಯಾಂಕ್, ಮದ್ಯದ ಜಾಹೀರಾತು, ತಂಬಾಕು, ಜೂಜು, ಸಿನಿಮಾ ಜಾಹೀರಾತು,  ಅಶ್ಲೀಲತೆ, ಜ್ಯೋತಿಷ್ಯ ಮತ್ತು ವಿಶ್ವಾಸಾರ್ಹವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗದ ಯಾವುದನ್ನೂ ಸನ್ಮಾರ್ಗ ಜಾಹೀರಾತಾಗಿ  ಸ್ವೀಕರಿಸಿಕೊಂಡೇ ಇಲ್ಲ. ಬಡ್ಡಿ, ಮದ್ಯ, ಜೂಜು, ಅಶ್ಲೀಲತೆಯ ವಿರುದ್ಧ ಸನ್ಮಾರ್ಗ ತನ್ನ ಆರಂಭ ಕಾಲದಿಂದ ಇಂದಿನವರೆಗೂ ಸಮರ  ಸಾರುತ್ತಲೇ ಬಂದಿದೆ. ಹಾಗಂತ,

ಮೌಲ್ಯಕ್ಕೆ ಇಷ್ಟೂ ನಿಷ್ಠವಾಗಿ ಅಂಟಿ ಕುಳಿತರೆ ಅದರ ಪರಿಣಾಮ ಏನು ಅನ್ನುವುದು ಎಲ್ಲರಿಗೂ ಗೊತ್ತು. ಆದಾಯದ ಮೇಲೆ ಅದು ತೀವ್ರ  ಅಡ್ಡ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಜಾಹೀರಾತುಗಳು ಮೌಲ್ಯನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸುವ ರೂಪದ್ದಾಗಿರುವುದರಿಂದ ಅವನ್ನು ತಿರಸ್ಕರಿಸದೆ ಅನ್ಯ ದಾರಿಯೇ ಇಲ್ಲ. ಆದರೆ ಇಂಥ ಮೌಲ್ಯನಿಷ್ಠೆಯು ಅಂತಿಮವಾಗಿ ಪತ್ರಿಕೆಯ ಆಯುಷ್ಯದ  ಮೇಲೆ ಏಟು ಕೊಡತೊಡಗುತ್ತದೆ. ಮತ್ತೆ ಮತ್ತೆ ಬೀಳುವ ಇಂಥ ಏಟುಗಳು ಪತ್ರಿಕೆಯನ್ನು ದಣಿಯುವಂತೆ ಮಾಡಬಲ್ಲಷ್ಟು ಪ್ರಬಲವಾಗುತ್ತಾ  ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಸನ್ಮಾರ್ಗಕ್ಕೆ ಆಸರೆಯಾಗುವುದು- ಸಹೃದಯಿ ಬೆಂಬಲಿಗರು ಮತ್ತು ಓದುಗರು ಮಾತ್ರ.

ಇವತ್ತಿನ ದಿನಗಳಲ್ಲಂತೂ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕೊರೋನಾ ಈ ಅಸಾಮರ್ಥ್ಯದ ಮೇಲೆ ಇನ್ನಷ್ಟು  ಬರೆಯನ್ನು ಎಳೆದಿದೆ. ಈ ಬರೆ ಸನ್ಮಾರ್ಗದ ಮೇಲೂ ಪರಿಣಾಮ ವನ್ನು ಬೀರಿದೆ. ಇದರಿಂದ ಪಾರಾಗುವುದಕ್ಕೆ ಓದುಗರ ಬೆಂಬಲದ  ಅಗತ್ಯ ಇದೆ. ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ಪತ್ರಿಕೆಯೊಂದನ್ನು ನಡೆಸಲು ಸಾಧ್ಯ ಎಂಬುದನ್ನು ಕಳೆದ 4 ದಶಕಗಳಿಂದ ಸಾಧಿಸಿ  ತೋರಿಸುತ್ತಾ ಬಂದ ಸನ್ಮಾರ್ಗವು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾದಂಥ ವಾತಾವರಣ ಇದೆ.  ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಸನ್ಮಾರ್ಗ ಹಿತೈಷಿಗಳು ಜಾಹೀರಾತು ಮತ್ತು ಬೆಂಬಲ ಧನವನ್ನು ನೀಡುವ ಮೂಲಕ ಊರುಗೋಲಾಗಿ  ನಿಲ್ಲಬೇಕಾದ ಅಗತ್ಯ ಇದೆ.

ಕಳೆದುಹೋದ ನಾಲ್ಕು ದಶಕಗಳು ಸನ್ಮಾರ್ಗ ಮತ್ತು ಅದರ ಓದುಗರ ಪಾಲಿಗೆ ವೈಭವಯುತವಾದದ್ದು. ಈ ಅವಧಿಯಲ್ಲಿ ಅದು  ಪ್ರಭುತ್ವವನ್ನು ಎದುರು ಹಾಕಿಕೊಂಡಿದೆ. ಹಲವು ಕೇಸುಗಳನ್ನು ಜಡಿಸಿಕೊಂಡಿದೆ. ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ವರ್ಷಗಟ್ಟಲೆ  ನ್ಯಾಯಾಲಯಕ್ಕೆ ಅಲೆದಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಪತ್ರಿಕೆ ಗುರಿಯಾಗಿದೆ. ಅಂಧಶ್ರದ್ಧೆ ಮತ್ತು ಅಸತ್ಯವನ್ನು ಪ್ರಶ್ನಿಸಿದ್ದಕ್ಕಾಗಿ  ಸಂಪಾದಕರ ಮೇಲೆ ಹಲ್ಲೆಯೂ ನಡೆದಿದೆ. ಸಂಪಾದಕೀಯ ಬಳಗ ಜೀವ ಬೆದರಿಕೆಯನ್ನೂ ಎದುರಿಸಿದೆ. ಹಾಗೆಯೇ, ಸನ್ಮಾರ್ಗ  ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಮತ್ತು ಈ ಪತ್ರಿಕೆಗಾಗಿ ಎಲ್ಲವನ್ನೂ ಧಾರೆಯೆರೆದ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು  ನೂರ್ ಮುಹಮ್ಮದ್‌ರನ್ನೂ ಈ ಪಯಣದಲ್ಲಿ ಅದು ಕಳಕೊಂಡಿದೆ. ಇವರ ಜೊತೆಗೇ ಈ ಪತ್ರಿಕೆಯ ಏಳಿಗೆಗಾಗಿ ಹಗಲೂ ರಾತ್ರಿ ದುಡಿದ  ಮತ್ತು ತನು-ಮನ-ಧನದಿಂದ ಬೆಂಬಲಿಸಿದ ಹಲವರನ್ನೂ ಪತ್ರಿಕೆ ಕಳಕೊಂಡಿದೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ  ಸ್ಮರಿಸುತ್ತದೆ. ಅವರೆಲ್ಲರಿಗೆ ಅಲ್ಲಾಹನು ಸೂಕ್ತ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸುತ್ತದೆ. ಜೊತೆಗೇ,

ಈ ನಾಲ್ಕು ದಶಕಗಳ ಅವಧಿಯಲ್ಲಿ ಸನ್ಮಾರ್ಗ ಇನ್ನೆರಡು ಮಹತ್ವಪೂರ್ಣ ಹೆಜ್ಜೆಗಳನ್ನೂ ಇರಿಸಿದೆ. ಒಂದು- ಸನ್ಮಾರ್ಗ ವೆಬ್‌ ಪೋರ್ಟಲ್, ಇನ್ನೊಂದು- ಸನ್ಮಾರ್ಗ ನ್ಯೂಸ್ ಚಾನೆಲ್. ತೀರಾ ಸಣ್ಣ ಅವಧಿಯಲ್ಲಿ ಅತ್ಯಂತ ದೊಡ್ಡ ಪರಿಣಾಮವನ್ನು ಬೀರಿದ ಮತ್ತು ಬೀರುತ್ತಿರುವ  ಇವೆರಡೂ ಸನ್ಮಾರ್ಗದ ಬಹುನಿರೀಕ್ಷೆಯ ಹೆಜ್ಜೆಗಳು. ಇವನ್ನೂ ಓದುಗರಾದ ಮತ್ತು ಸಹೃದಯಿ ದಾನಿಗಳಾದ ನೀವೇ ಬೆಳೆಸಬೇಕಾಗಿದೆ.  ಸನ್ಮಾರ್ಗ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಾ ಮತ್ತು ಗೆಳೆಯರಲ್ಲಿ ಹಂಚುತ್ತಾ ಸಬ್‌ ಸ್ಕ್ರೈಬ್   ಆಗುವಂತೆ ಒತ್ತಾಯಿಸಬೇಕಾಗಿದೆ. ಸನ್ಮಾರ್ಗ ಪತ್ರಿಕೆಯನ್ನೂ ಅವರಿಗೆ ಪರಿಚಯಿಸಬೇಕಾಗಿದೆ.

ಕಳೆದ 4 ದಶಕಗಳು ಸನ್ಮಾರ್ಗದ ಪಾಲಿಗೆ ಸಿಹಿಯನ್ನಷ್ಟೇ ನೀಡಿರುವುದಲ್ಲ, ಕಹಿಯನ್ನೂ ನೀಡಿದೆ. ಈ ಸಂದರ್ಭದಲ್ಲಿ ಓದುಗರು ನೀಡಿದ  ಬೆಂಬಲದಿಂದಲೇ ಕಹಿಯನ್ನು ಸಿಹಿಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಬೆಂಬಲ ನಿರಂತರವಾಗಿರಲಿ ಎಂಬ  ಹಾರೈಕೆಯೊಂದಿಗೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.

Thursday, 23 September 2021

ಆತ್ಮಹತ್ಯೆ: ಮುಸ್ಲಿಮ್ ಸಮುದಾಯದ ಬಗ್ಗೆ ಅಧ್ಯಯನ ನಡೆಯಲಿ





ಹೊಸದಿಲ್ಲಿ


ಚಿಕ್ಕಮಗಳೂರು

ಈ ಎರಡೂ ನಗರಗಳ ನಡುವೆ ನೂರಾರು ಕಿಲೋ ಮೀಟರ್‌ಗಳಷ್ಟು ಅಂತರವಿದೆ. ಭಾಷೆ, ಆಹಾರ, ವೇಷ- ಭೂಷಣ ಮತ್ತು  ಸೌಲಭ್ಯಗಳ ದೊರಕುವಿಕೆಯಲ್ಲೂ ವ್ಯತ್ಯಾಸವಿದೆ. ವಾತಾವರಣವೂ ಭಿನ್ನವಾಗಿದೆ. ದೆಹಲಿಯಲ್ಲಿ ಸಿಗುವ ಪತ್ರಿಕೆಗಳ ಮುಖಪುಟ  ವಿಷಯಕ್ಕೂ ಚಿಕ್ಕಮಗಳೂರಿನಲ್ಲಿ ಲಭ್ಯವಾಗುವ ಪತ್ರಿಕೆಗಳ ಮುಖಪುಟ ಸಹಿತ ಬಹುತೇಕ ಎಲ್ಲ ಪುಟಗಳ ವಿಷಯಕ್ಕೂ ವ್ಯತ್ಯಾಸವಿರುತ್ತದೆ.  ಇಂಥ ಹಲವು ವ್ಯತ್ಯಾಸಗಳು ಹೊರತಾಗಿಯೂ ಒಂದು ವಿಷಯದಲ್ಲಿ ಮಾತ್ರ ಸಮಾನತೆಯಿದೆ. ಅದುವೇ ಆತ್ಮಹತ್ಯೆ. ಆಗಸ್ಟ್ 16 ರಂದು  ಸುಪ್ರೀಮ್ ಕೋರ್ಟಿನ ಹೊರಗೆ ಜೋಡಿಯೊಂದು ಆತ್ಮಹತ್ಯೆಗೆ ಪ್ರಯತ್ನಿಸಿತು. ಮೈಗೆ ಬೆಂಕಿ ಹಚ್ಚಿಕೊಂಡಿತು. ಬಳಿಕ ಆಗಸ್ಟ್ 21 ರಂದು  ಯುವಕ ಮೃತಪಟ್ಟ. ಆಗಸ್ಟ್ 24 ರಂದು ಯುವತಿಯೂ ಮೃತಪಟ್ಟಳು. ಇದಾಗಿ ಎರಡು ದಿನಗಳ ಬಳಿಕ ಚಿಕ್ಕಮಗಳೂರಿನಿಂದ  ಹೃದಯವಿದ್ರಾವಕ ಘಟನೆಯೊಂದು ವರದಿಯಾಯಿತು. ರಾತ್ರಿ ಕಾರಿನಲ್ಲಿ ನಿದ್ರೆಗೆ ಜಾರಿದ್ದ ಕುಟುಂಬವನ್ನು ಮಂಜುನಾಥ ಎಂಬವರು  ಭದ್ರಾನಾಲೆಗೆ ಚಲಾಯಿಸಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಮತ್ತು ಅವರ ಅತ್ತೆ ಸುನಂದಮ್ಮ ಸಾವಿಗೀಡಾಗಿದ್ದಾರೆ. ಪತ್ನಿ ಮತ್ತು 12  ವರ್ಷದ ಪುಟ್ಟ ಮಗ ಈಜಿ ದಡ ಸೇರಿದ್ದಾರೆ. ಹೀಗೆ ಕಾರನ್ನು ನಾಲೆಗೆ ಧುಮುಕಿಸುವ ಮೊದಲ ಮಂಜುನಾಥ್ ಅವರು ತನ್ನ ಅಣ್ಣನ  ಪತ್ನಿ ಮತ್ತು ಮಗನಲ್ಲಿ ಸಾಯುವ ನಿರ್ಧಾರವನ್ನು ತಿಳಿಸಿದ್ದಾರೆ. ದಯವಿಟ್ಟು ಅಂತಹ ನಿರ್ಧಾರ ಮಾಡಬೇಡಿ ಎಂದು ಪರಿಪರಿಯಾಗಿ  ಅವರು ಗೋಗರೆದ ಸಂಗತಿಯನ್ನೂ ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ಪ್ರಕಾರ, 2019ರಲ್ಲಿ ದೇಶದಲ್ಲಿ 1,39,123 ಆತ್ಮಹತ್ಯೆ ಗಳು ನಡೆದಿವೆ. ಅಂದರೆ ಪ್ರತಿದಿನ 381  ಮಂದಿ ಆತ್ಮಹತ್ಯೆಯ ಮೂಲಕ ಜೀವ ಕಳಕೊಂಡಿದ್ದಾರೆ. 2018 ರಲ್ಲಿ ಆತ್ಮಹತ್ಯೆಯ ಪ್ರಮಾಣ- 1,34,516 ಮತ್ತು 2017 ರಲ್ಲಿ 1,29,887  ಆಗಿತ್ತು. ಇದು ಆತಂಕಕಾರಿ. ಯಾಕೆಂದರೆ ವರ್ಷಂಪ್ರತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದೆ. ಪ್ರತಿ ವರ್ಷ ಜಾಗತಿಕವಾಗಿ 8  ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಿದೆ. ಅದರಲ್ಲಿ
17% ಪಾಲು ಭಾರತದ್ದೇ ಆಗಿದೆ. 1987 ರಿಂದ 2007ರ ನಡುವೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 7.9 ರಿಂದ 10.30ಕ್ಕೆ   ಏರಿಕೆಯಾಗಿದೆ. 18 ರಿಂದ 30 ವರ್ಷದ ಒಳಗಿನ 48 ಸಾವಿರ ಮಂದಿ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ  

ವಿದ್ಯಾರ್ಥಿಗಳ ಪಾಲಿಗಂತೂ 2019 ಘನಘೋರ. ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ವರದಿಯಂತೆ, 2019 ರಲ್ಲಿ  ಪ್ರತಿ ಒಂದು ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 10,335 ವಿದ್ಯಾರ್ಥಿಗಳು 2019ರಲ್ಲಿ ಆತ್ಮಹತ್ಯೆ  ಮಾಡಿಕೊಂಡಿದ್ದು ಕಳೆದ 25 ವರ್ಷಗಳಲ್ಲೇ ಇದು ಅತ್ಯಧಿಕ ಎಂದು ಹೇಳಲಾಗಿದೆ. 1995 ರಿಂದ 2019ರ ನಡುವೆ ಒಂದು ಲಕ್ಷದ 70  ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನಲ್ಲಿ 1995 ರಿಂದ 2008ರ ನಡುವೆ ಆತ್ಮಹತ್ಯೆ ಮಾಡಿಕೊಂಡವರ  ಸಂಖ್ಯೆಯೇ 85,824 ಆಗಿದೆ. ಅಷ್ಟಕ್ಕೂ,

ಈ ವರದಿಗಳೆಲ್ಲವೂ ಕೊರೋನಾ ಕಾಲಕ್ಕಿಂತ ಮೊದಲಿನವು. ಕೊರೋನಾ ಕಾಲವಂತೂ ಜನರನ್ನು ಎಲ್ಲಾ ರೀತಿಯಲ್ಲೂ ಹೈರಾಣಾಗಿಸಿದೆ.  ಆರ್ಥಿಕವಾಗಿಯೂ ಆರೋಗ್ಯದ ದೃಷ್ಟಿಯಿಂದಲೂ ಜನರನ್ನು ಒಗೆದೆಸೆದ ಅಪಕೀರ್ತಿ ಕೊರೋನಾಕ್ಕಿದೆ.
ಹೆಚ್ಚಿನ ಆತ್ಮಹತ್ಯೆಗಳು ಕ್ಷಣದ ಭಾವಾತಿರೇಕದ ಫಲಿತಾಂಶಗಳಾಗಿವೆ. ಆ ಕ್ಷಣದಲ್ಲಿ ಅವರನ್ನು ಸಕಾರಾತ್ಮಕ ಸಲಹೆಗಳು ಮತ್ತು ಸಾಂತ್ವನಗಳು  ಲಭ್ಯವಾದರೆ ಅದರಲ್ಲಿ ಆತ್ಮಹತ್ಯೆಯಿಂದ ವಿಮುಖಗೊಳಿಸ ಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, ಆತ್ಮಹತ್ಯೆ ಯಾವ  ಸಮಸ್ಯೆಗೂ ಪರಿಹಾರವಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. 

ಕಾಫಿ ಕೆಫೆ ಡೇಯ ಮಾಲಿಕ,  ಖ್ಯಾತ ಉದ್ಯಮಿ ಸಿದ್ಧಾರ್ಥ್ ಅವರು ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋಟ್ಯಂತರ  ಬೆಲೆಬಾಳುವ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿರುವ ಅವರಿಗೆ ಆತ್ಮಹತ್ಯೆ  ಪರಿಹಾರವಲ್ಲ ಎಂಬುದು ಗೊತ್ತಿರಲಿಲ್ಲ ಎಂದು ಹೇಳುವುದು ಅಪ್ರಬುದ್ಧತೆಯಾಗುತ್ತದೆ. ಮತ್ತೂ ಯಾಕೆ ಆತ್ಮಹತ್ಯೆ ಮಾಡಿಕೊಂಡರೆಂದರೆ,  ಆಪ್ತ ಸಮಾಲೋಚನೆಯ ಕೊರತೆ, ಸಮಸ್ಯೆಯನ್ನು ಇತರರಲ್ಲಿ ಹೇಳಿಕೊಳ್ಳದೇ ಮುಚ್ಚಿಟ್ಟು ಕೊರಗುವುದು ಮತ್ತು ಮರ್ಯಾದೆಗೆ  ಅಂಜುವುದು ಇತ್ಯಾದಿಗಳು ಕಾಣವಾಗಿರಬಹುದು. ಸಮಸ್ಯೆ ಎದುರಾದಾಗ ಸ್ವಯಂ ಕೊರಗುತ್ತಾ ಬದುಕುವುದರ ಬದಲು ಇತರರಲ್ಲಿ ಹಂಚಿಕೊಂಡು  ಪರಿಹಾರಗಳನ್ನು ಹುಡುಕುವುದು ಮತ್ತು ಯಾವ ಕ್ಷಣದಲ್ಲೂ ಧೈರ್ಯಗೆಡದಿರುವುದು ಬಹು ಅಗತ್ಯ. ಹಿರಿಯರನ್ನು  ನೋಡುತ್ತಾ ಕಿರಿಯರು ಬೆಳೆಯುತ್ತಾರೆ. ಹತ್ತನೇ ತರಗತಿಯಲ್ಲಿ ಫೇಲ್ ಅದುದಕ್ಕೋ ಕಡಿಮೆ ಅಂಕ ಪಡೆದುದಕ್ಕೋ ಬೇಸರ ಪಟ್ಟು  ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ದಿನದಲ್ಲಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು 2019ರ ಕ್ರೈಮ್ ವರದಿಯೇ ಹೇಳುತ್ತದೆ. ಹತ್ತನೇ ತರಗತಿ ವಿದ್ಯಾರ್ಥಿಯು ವಯಸ್ಸು ಹೆಚ್ಚೆಂದರೆ 16. ಈ ವಯಸ್ಸು ಆತ್ಮಹತ್ಯೆಯ ಬಗ್ಗೆ ಆಲೋಚಿಸು  ವಂತಹದ್ದೇ ಎಂದು ಒಮ್ಮೆ ಅವಲೋಕಿಸಿದರೂ ಹಿರಿಯರ ಆತ್ಮಹತ್ಯೆಗಳು ಕಿರಿಯರ ಮೇಲೆ ಬೀರುತ್ತಿರುವ ಪರಿಣಾಮವನ್ನು  ಅರಿತುಕೊಳ್ಳಬಹುದು. ಮೊಬೈಲ್ ಕೊಡಲಿಲ್ಲವೆಂದೋ, ಹೆತ್ತವರು ಗದರಿಸಿದರೆಂದೋ ಹೇಳಿಕೊಂಡು ಆತ್ಮಹತ್ಯೆ ಮಾಡುವ ಕಿರಿ  ವಯಸ್ಸಿನ ಮಕ್ಕಳಿದ್ದಾರೆ. ಮಕ್ಕಳಲ್ಲಿ ಸಿಟ್ಟು, ಸೆಡವು, ಹಠ ಸಾಮಾನ್ಯ. ಆದರೆ, ಆತ್ಮಹತ್ಯೆಯಂಥ ಅಪಾಯಕಾರಿ ಆಲೋಚನೆ ಅವರಲ್ಲಿ  ಹುಟ್ಟುವುದು ಹೇಗೆ? ಬಹುಶಃ ಹಿರಿಯರ ಆತ್ಮಹತ್ಯೆಯಿಂದಾದ ಪ್ರೇರಣೆಯೇ ಅವರಲ್ಲಿ ಇಂಥ ಭಯಾನಕ ಆಲೋಚನೆ ಹುಟ್ಟಲು ಸಾಧ್ಯ  ಎಂದೇ ಹೇಳಬೇಕಾಗುತ್ತದೆ. ಅಷ್ಟಕ್ಕೂ,

ಶಿಕ್ಷಿತರು ಹೆಚ್ಚಾದಂತೆಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲೂ ಹೆಚ್ಚಳವಾಗುತ್ತಿರುವುದಕ್ಕೆ ಏನು ಕಾರಣ? ಮೂರು ದಶಕಗಳ ಹಿಂದಿನ ಶೈಕ್ಷಣಿಕ  ಮಟ್ಟಕ್ಕೂ ಮತ್ತು ಜೀವನ ಸೌಲಭ್ಯಕ್ಕೂ ಹೋಲಿಸಿದರೆ ಇಂದು ಇವರಡೂ ರಂಗಗಳಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಬೌದ್ಧಿಕವಾಗಿ  ಸಮಾಜ ಬೆಳೆದಿದೆ. ಆರ್ಥಿಕವಾಗಿ ಸಬಲವಾಗುತ್ತಿದೆ. ಜನರ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಬಹುಮುಖ ಪಾತ್ರ ಇದೆ ಎಂದಾದರೆ,  ಮತ್ತೇಕೆ ಆತ್ಮಹತ್ಯೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತಿದೆ? ಶಿಕ್ಷಣಕ್ಕೂ ಆತ್ಮಹತ್ಯೆಗೂ ಸಂಬಂಧ ಇಲ್ಲವೇ ಅಥವಾ ಶಿಕ್ಷಣವು ವ್ಯಕ್ತಿಯಲ್ಲಿ  ಅಪರಿಮಿತ ಆಸೆಯನ್ನು ಹುಟ್ಟು ಹಾಕುತ್ತಿದೆಯೇ? ಸಲ್ಲದ ಬಯಕೆಗಳಿಗೆ ಪ್ರೇರೇಪಿಸುತ್ತಿದೆಯೇ ಅಥವಾ ವ್ಯಕ್ತಿಗಳನ್ನು ದುರ್ಬಲರ ನ್ನಾಗಿಸುತ್ತಿದೆಯೇ? ಸವಾಲಿನ ಸಂದರ್ಭವನ್ನು ಅನಕ್ಷರಸ್ಥರಾದ ಹಿರಿಯರು ಎದುರಿಸಿದಂತೆ ಇವತ್ತಿನ ಶಿಕ್ಷಿತ ಸಮಾಜ ಎದುರಿಸುವಲ್ಲಿ  ಯಾಕೆ ವಿಫಲವಾಗುತ್ತಿದೆ? ಇಲ್ಲಿ ಪ್ರಮುಖ ಅಂಶವೊಂದನ್ನು ಗಮನಿಸಬೇಕು-

ಮುಸ್ಲಿಮ್ ಸಮುದಾಯದಲ್ಲಿ ಆತ್ಮಹತ್ಯೆಯ ಪ್ರಮಾಣ ತೀರಾ ತೀರಾ ಕಡಿಮೆ. ಇತರ ಸಮುದಾಯ
ಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ  ಭಾರತೀಯ ಮುಸ್ಲಿಮ್ ಸಮುದಾಯ ತೀರಾ ಕೆಳಮಟ್ಟದಲ್ಲಿದ್ದರೂ ಆತ್ಮಹತ್ಯೆಗೆ ಹೋಲಿಸಿದರೆ, ಇತರೆಲ್ಲಾ ಸಮುದಾಯಗಳಿಗೆ ಮಾದರಿ  ಅನ್ನುವ ರೀತಿಯಲ್ಲಿದೆ. ಈ ಸ್ಥಿತಿಗೆ ಕಾರಣವೇನು? ಇದೊಂದು ಅಧ್ಯಯನಯೋಗ್ಯ ಸಂಗತಿ. ಎಂಥ ಕಷ್ಟಕಾಲ ಎದುರಾದರೂ,  ಸಮಸ್ಯೆಗಳಿಗೆ ಈಡಾದರೂ ಮುಸ್ಲಿಮ್ ಸಮುದಾಯ ಆತ್ಮಹತ್ಯೆಯನ್ನು ಆಯ್ಕೆಯಾಗಿ ಆರಿಸಿಕೊಳ್ಳುತ್ತಿಲ್ಲ. ಇದಕ್ಕೆ ಧಾರ್ಮಿಕ ಕಾರಣವೇ  ಪ್ರಧಾನವಾದುದು ಎಂದು ಹೇಳಬೇಕಾಗುತ್ತದೆ. ಆತ್ಮಹತ್ಯೆಯನ್ನು ಇಸ್ಲಾಮ್ ಪಾಪವೆಂದು ಪರಿಗಣಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವವರು  ನರಕವಾಸಿಗಳು ಎಂದು ಅದು ಹೇಳುತ್ತದೆ. ಇಸ್ಲಾಮಿನ ಈ ಕಟ್ಟುನಿಟ್ಟಿನ ನಿಲುವು ಮುಸ್ಲಿಮ್ ಸಮುದಾಯದ ಮೇಲೆ ಗಾಢ ಪರಿಣಾಮ  ಬೀರಿರುವುದನ್ನು ಆತ್ಮಹತ್ಯೆಯ ಗ್ರಾಫೇ ಹೇಳುತ್ತಿದೆ. ಈ ವಿಷಯದಲ್ಲಿ ಅಧ್ಯಯನಗಳು ನಡೆಯಲಿ. ಸಂಶೋಧನಾತ್ಮಕ ಪ್ರಬಂಧಗಳು  ಮಂಡನೆಯಾಗಲಿ. 

Monday, 6 September 2021

ತಾಲಿಬಾನ್ ಪ್ರಶ್ನೆ: ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು

 



ಉಡುಪಿಯ ಕೋಟೇಶ್ವರ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟುವಿನ ಹರೀಶ್ ಬಂಗೇರ ಅವರು ಕಳೆದವಾರ ಮಾಧ್ಯಮಗಳಲ್ಲಿ ಸು ದ್ದಿಗೊಳಗಾಗಿದ್ದಾರೆ. ಅಫಘಾನಿಸ್ತಾನದಿಂದ ಮರಳಿದ ಭಾರತೀಯರ ಅನುಭವಗಳ ಜೊತೆಜೊತೆಗೇ ಈ ಹರೀಶ್ ಬಂಗೇರರ ಅ ನುಭವಗಳನ್ನೂ ಮುದ್ರಣ ಮಾಧ್ಯಮಗಳು ಪ್ರಕಟಿಸಿವೆ. ಚಾನೆಲ್‌ಗಳು ಬಿತ್ತರಿಸಿವೆ. ಉಡುಪಿಗೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯನ್ನೂ  ನಡೆಸಿದ್ದಾರೆ. ಹಾಗಂತ,

ಅವರು ಆಗಮಿಸಿರುವುದು ಅಫಘಾನಿಸ್ತಾನದಿಂದ ಅಲ್ಲ, ಸೌದಿ ಅರೇಬಿಯಾದಿಂದ. ಒಂದು ವರ್ಷ ಎಂಟು ತಿಂಗಳ ಕಾಲ ಸೌದಿ  ಅರೇಬಿಯಾದ ಜೈಲಲ್ಲಿದ್ದು ಮರಳಿದ ಅವರಿಗೆ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಒಡಲಿನ ಬೇಗುದಿಯನ್ನು ಇಳಿಸಿಕೊಳ್ಳುವುದಕ್ಕೆ ಸಾಕಷ್ಟು  ಸಂಗತಿಗಳಿದ್ದುವು. ಅವರು ಜೈಲು ಪಾಲಾಗಿರುವುದಕ್ಕೆ ಇಬ್ಬರು ಮುಸ್ಲಿಮ್ ಯುವಕರು ಕಾರಣವಾಗಿದ್ದರೆ, ಅವರು ಜೈಲಿನಿಂದ  ಬಿಡುಗಡೆಗೊಂಡು ಭಾರತಕ್ಕೆ ತಲುಪುವುದಕ್ಕೂ ಇಬ್ಬರು ಮುಸ್ಲಿಮ್ ಗೆಳೆಯರು ಕಾರಣರಾಗಿದ್ದರು. ಇವನ್ನು ಹೇಳಿಕೊಂಡದ್ದೂ ಅವರೇ.  ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಆವೇಶದಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮತ್ತು ಇತರರ ಅಭಿಪ್ರಾಯಗಳಿಗೆ ಲೈಕ್  ಮತ್ತು ಕಮೆಂಟ್ ಮಾಡುವ ಬಿಸಿ ರಕ್ತದ ಯುವಕರಿಗೆ ಹರೀಶ್ ಬಂಗೇರ ಪ್ರಕರಣದಲ್ಲಿ ಸಾಕಷ್ಟು ಪಾಠಗಳಿವೆ.

2019 ಡಿಸೆಂಬರ್ 19ರಂದು ಹರೀಶ್ ಬಂಗೇರ ತನ್ನ ಫೇಸ್‌ಬುಕ್ ಪುಟದಲ್ಲಿ ಒಂದು ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾರೆ.  ಸಿಎಎ-ಎನ್‌ಆರ್‌ಸಿ ಕಾಯ್ದೆಯ ಪರ ಮತ್ತು ವಿರುದ್ಧ ದೇಶದಲ್ಲಿ ಚರ್ಚೆಗಳಾಗುತ್ತಿದ್ದ ದಿನಗಳವು. ಇನ್ನಾರದೋ ವೀಡಿಯೋವನ್ನು ಶೇರ್  ಮಾಡಿದ ಹರೀಶ್ ಬಂಗೇರರಿಗೆ ಬೆದರಿಕೆಯ ಕರೆಗಳು ಬರುತ್ತವೆ. ಅವರಿಗೂ ತಪ್ಪಿನ ಮನವರಿಕೆಯಾಗುತ್ತದೆ. ಆದ್ದರಿಂದ ತಕ್ಷಣ ಅವರು  ಆ ವೀಡಿಯೋವನ್ನು ತನ್ನ ಪುಟದಿಂದ ಡಿಲೀಟ್ ಮಾಡುತ್ತಾರಲ್ಲದೇ, ಕ್ಷಮೆ ಯಾಚಿಸುವ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್  ಮಾಡುತ್ತಾರೆ. ಮಾತ್ರವಲ್ಲ, ಅದೇ ದಿನ ರಾತ್ರಿ ತನ್ನ ಫೇಸ್‌ಬುಕ್ ಖಾತೆಯನ್ನೇ ನಿಷ್ಕ್ರಿಯಗೊಳಿಸುತ್ತಾರೆ. ಇದನ್ನು ಹೇಳಿದ್ದೂ ಅವರೇ.  ಆದರೆ ಮರುದಿನ ಅವರದೇ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಸೌದಿ ದೊರೆ ಮತ್ತು ಮಕ್ಕಾದ ಮಸ್ಜಿದುಲ್  ಹರಮ್‌ನ ಬಗ್ಗೆ ಅವಹೇಳನಕಾರಿಯಾಗಿರುವ ಪೋಸ್ಟ್ ಹಾಕಲಾಗುತ್ತದೆ. ಅದಕ್ಕಾಗಿ ಅವರ ಮೇಲೆ ಕೇಸು ದಾಖಲಾಗುತ್ತದಲ್ಲದೇ, ಬಂಧ ನವಾಗುತ್ತದೆ. ಇದನ್ನು ಹೇಳಿದ್ದೂ ಅವರೇ. ಅಂದಹಾಗೆ,

ಮಾಡದ ತಪ್ಪಿಗೆ ತಾನು ಅನ್ಯಾಯವಾಗಿ ಜೈಲು ಪಾಲಾದೆ ಎಂಬ ನೋವು ಅವರ ಮಾತಿನಲ್ಲಿದೆ. ಅದರ ಜೊತೆಗೇ ತಾನು ಕೆಲಸ  ಮಾಡುತ್ತಿದ್ದ ಸಂಸ್ಥೆಯ ಇಬ್ಬರು ಮುಸ್ಲಿಮ್ ಗೆಳೆಯರು ಮತ್ತು ಇತರರು ತನ್ನ ನೆರವಿಗೆ ಬರದೇ ಇರುತ್ತಿದ್ದರೆ ತಾನು ಜೀವಂತ  ಉಳಿಯುತ್ತಿರಲಿಲ್ಲ ಎಂಬ ಕೃತಜ್ಞತಾ ಭಾವವೂ ಅವರಲ್ಲಿದೆ. ಅವರ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅವರನ್ನು ಜೈಲು  ಪಾಲಾಗುವಂತೆ ನೋಡಿಕೊಂಡ ಆರೋಪಿಗಳು ಅವರದೇ ಊರಿನ ಇಬ್ಬರು ಮುಸ್ಲಿಮ್ ಯುವಕರಾಗಿದ್ದರೆ, ಸೌದಿಯಲ್ಲಿ ಅವರು ಕೆಲಸ  ಮಾಡುತ್ತಿದ್ದ ಕಂಪೆನಿಗೆ ನುಗ್ಗಿ ಅವರ ಮೇಲೆ ದಾಳಿ ನಡೆಸಲು ಮುಂದಾದ 50ರಷ್ಟಿದ್ದ ಗುಂಪಿನಿಂದ  ರಕ್ಷಿಸಿದ್ದೂ ಇಬ್ಬರು ಮುಸ್ಲಿಮ್  ಯುವಕರೇ ಆಗಿದ್ದಾರೆ. ಒಂದು ರೀತಿಯಲ್ಲಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಬಯಸುವ ಪ್ರತಿಯೊಬ್ಬರೂ ಕ್ಷಣ ಹೊತ್ತು ಆಲೋಚಿಸಬೇಕಾದ ಸಂಗತಿ ಇದು.  ಆರೋಪಿ ಮುಸ್ಲಿಮ್ ಯುವಕರನ್ನು ಮತ್ತು ಆಪದ್ಭಾಂಧವರಾದ ಮುಸ್ಲಿಮ್ ಯುವಕರನ್ನು ಪರಸ್ಪರ ಮುಖಾಮುಖಿಯಾಗಿಸಿದಾಗ  ಸಿಗುವ ಫಲಿತಾಂಶವೇನು? ಒಳಿತು ಮತ್ತು ಕೆಡುಕಿಗೆ ಧರ್ಮದ ಭೇದ ಇಲ್ಲ. ಒಳಿತು ಒಂದು ಸಾರ್ವತ್ರಿಕ ಮೌಲ್ಯ. ಕೆಡುಕು ಕೂಡ  ಸಾರ್ವತ್ರಿಕ ಅಪಮೌಲ್ಯ. ಗಾಳಿ, ಬೆಳಕು, ನೀರು ಹೇಗೆ ಸರ್ವರಿಗೂ ಮುಕ್ತವಾಗಿ ಲಭ್ಯವಿದೆಯೋ ಮತ್ತು ಆಯ್ಕೆ ಸ್ವಾತಂತ್ರ‍್ಯವೂ  ಮುಕ್ತವಾಗಿದೆಯೋ ಹಾಗೆಯೇ ಒಳಿತು ಮತ್ತು ಕೆಡುಕುಗಳೂ ಮುಕ್ತ. ಯಾರಿಗೂ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಹರೀಶ್  ಬಂಗೇರರಿಗೆ ಸಂಬಂಧಿಸಿ, ಇಬ್ಬರು ಮುಸ್ಲಿಮ್ ಯುವಕರು ಕೆಡುಕನ್ನು ಆಯ್ಕೆ ಮಾಡಿಕೊಂಡ ಆರೋಪವನ್ನು ಹೊತ್ತುಕೊಂಡರೆ,  ಮುದಸ್ಸಿರ್ ಮತ್ತು ಜಲಾಲ್ ಎಂಬವರು ಒಳಿತನ್ನು ಆಯ್ಕೆ ಮಾಡಿಕೊಂಡರು. ದುರಂತ ಏನೆಂದರೆ, ಕೆಡುಕನ್ನು ಆಯ್ಕೆ ಮಾಡಿಕೊಂಡ ಆ  ಯುವಕರನ್ನು ತರಾಟೆಗೆತ್ತಿಕೊಂಡವರು ಮತ್ತು ಕಟು ಭಾಷೆಗಳಲ್ಲಿ ಟೀಕಿಸಿದವರಲ್ಲಿ ಒಂದು ಶೇಕಡಾ ಮಂದಿಯೂ ಒಳಿತನ್ನು ಆಯ್ಕೆ  ಮಾಡಿಕೊಂಡ ಮುಸ್ಲಿಮ್ ಯುವಕರನ್ನು ಶ್ಲಾಘಿಸಲಿಲ್ಲ. ಕೆಡುಕು ಮಾಡುವುದಕ್ಕೆ ಆ ಯುವಕರ ಧರ್ಮ ಕಾರಣವೆಂದಾದರೆ, ಒಳಿತು  ಮಾಡಿರುವುದಕ್ಕೂ ಆ ಮುಸ್ಲಿಮ್ ಯುವಕರ ಧರ್ಮ ಕಾರಣವಾಗಿರಬೇಕಲ್ಲವೇ? ಈ ಬಗೆಯ ವಿಶ್ಲೇಷಣೆ ನಡೆದಾಗಲೇ ಮನುಷ್ಯ ಪರಿ ಪೂರ್ಣತೆಯತ್ತ ಸಾಗುತ್ತಾನೆ. ನಮ್ಮೊಳಗೆ ಎಲ್ಲೆಲ್ಲಿಂದಲೋ ಹೇಗೇಗೋ ಯಾವ್ಯಾವ ಕಾರಣದಿಂದಲೋ ಸೇರಿಕೊಂಡ ಧರ್ಮದ್ವೇಷ,  ಅಸಹನೆ, ದ್ವೇಷಭಾವಗಳು ಇಂಥ ವಿಶ್ಲೇಷಣೆಗಳಿಂದ ಕರಗಲು ಪ್ರಾರಂಭಿಸುತ್ತದೆ. ನಿಜವಾಗಿ,

ಮುಸ್ಲಿಮ್ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಒಳಿತು ಮಾಡುವುದಿಲ್ಲ. ಹಿಂದೂ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಕೆಡುಕೂ  ಮಾಡುವುದಿಲ್ಲ. ಅವೆರಡೂ ಮನುಷ್ಯನ ಆಯ್ಕೆ. ಧರ್ಮ ಹೇಗೆ ಆಯ್ಕೆಯೋ ಹಾಗೆಯೇ ಇದು. ಆದ್ದರಿಂದ ಕೆಡುಕನ್ನು ಕೆಡುಕಾಗಿ  ನೋಡಬೇಕೇ ಹೊರತು ಅದನ್ನು ಹಿಂದೂ ಕೆಡುಕು, ಮುಸ್ಲಿಮ್ ಕೆಡುಕು ಎಂದು ವಿಭಜಿಸುವುದೇ ಕ್ರೌರ್ಯ. ನಿಜವಾಗಿ, ಕೆಡುಕ ನ್ನೆಸಗಿದವರು ಹಿಂದುವೋ ಮುಸ್ಲಿಮೋ ಧರ್ಮದಲ್ಲಿರುವುದು ಆ ಧರ್ಮದ ಪಾಲಿಗೇ ಕೆಡುಕು. ಯಾಕೆಂದರೆ, ಕೆಡುಕನ್ನು ಬಯಸುವುದು  ಧರ್ಮವಾಗಲು ಸಾಧ್ಯವಿಲ್ಲ. ಅಂದಹಾಗೆ,

ತಾಲಿಬಾನನ್ನು ಉಲ್ಲೇಖಿಸುತ್ತಾ ಇಸ್ಲಾಮನ್ನು ಮತ್ತು ಷರಿಯಾವನ್ನು ಪ್ರಶ್ನಿಸುವ ಮತ್ತು ಅತ್ಯಂತ ಅವಹೇಳನಕಾರಿಯಾಗಿ ಟೀಕಿಸುವವರು  ನಮ್ಮ ನಡುವೆಯಿದ್ದಾರೆ. ಪ್ರಶ್ನೆ ತಪ್ಪಲ್ಲ. ಆದರೆ ಇಸ್ಲಾಮ್ ಅಂದರೆ ತಾಲಿಬಾನ್ ಎಂದು ಷರಾ ಬರೆಯುವುದು ತಪ್ಪು. ಜಗತ್ತಿನಲ್ಲಿ  ಇಂಡೋನೇಷ್ಯಾದಿAದ ಹಿಡಿದು ಟರ್ಕಿಯ ವರೆಗೆ 60ಕ್ಕಿಂತಲೂ ಅಧಿಕ ಮುಸ್ಲಿಮ್ ಬಹುಸಂಖ್ಯಾತ ರಾಷ್ಟçಗಳಿವೆ. ಇವುಗಳಲ್ಲಿ ಹೆಚ್ಚಿನವು  ಇಸ್ಲಾಮಿಕ್ ರಾಷ್ಟçಗಳೆಂದು ಘೋಷಿಸಿಕೊಂಡಿವೆ. ಷರಿಯಾವನ್ನು ತಮ್ಮ ಆಡಳಿತ ನೀತಿಯೆಂದು ಹೇಳಿಕೊಳ್ಳುತ್ತಿವೆ. ತಾಲಿಬಾನ್  ಎಸಗುತ್ತಿರುವ ಅನಾಹುತಕ್ಕೆ ಷರಿಯಾವೇ ಕಾರಣ ಎಂದು ತೀರ್ಪು ನೀಡುವವರು ತಾಲಿಬಾನ್ ಮತ್ತು ಈ 60ಕ್ಕಿಂತಲೂ ಅಧಿಕ  ರಾಷ್ಟçಗಳನ್ನು ಯಾಕೆ ಮುಖಾಮುಖಿಯಾಗಿಟ್ಟು ವಿಶ್ಲೇಷಿಸುವುದಿಲ್ಲ? ತಾಲಿಬಾನ್‌ನದ್ದು ಷರಿಯಾ ಎಂದಾದರೆ ಮತ್ತು ಇಸ್ಲಾಮ್ ಅವರನ್ನು  ಬೆಂಬಲಿಸುತ್ತದೆಯೆAದಾದರೆ, ಉಳಿದ ರಾಷ್ಟçಗಳದ್ದು ಏನು?

ಓರ್ವನು ತನ್ನನ್ನು ಮುಹಮ್ಮದ್ ಎಂದೋ ರಘುರಾಮ ಎಂದೋ ಗುರುತಿಸಿಕೊಂಡಾಕ್ಷಣ ಆತ ಅಪ್ಪಟ ಮುಸ್ಲಿಮೋ ಅಪ್ಪಟ ಹಿಂದುವೋ  ಆಗುವುದಿಲ್ಲ. ಹೆಸರು ಒಂದು ಗುರುತು ಮಾತ್ರ. ಆತ ಅಪ್ಪಟ ಹಿಂದುವೋ ಮುಸ್ಲಿಮೋ ಆಗುವುದು ಆತನ ಕರ್ಮದಿಂದ. ಬದುಕುವ  ವಿಧಾನದಿಂದ. ದುರಂತ ಏನೆಂದರೆ, ಈ ದೇಶದ ಸುಮಾರು 15 ಕೋಟಿಯಷ್ಟಿರುವ ಮುಸ್ಲಿಮರನ್ನು ಕೆಡುಕು ಮಾಡುವ ಬೆರಳೆಣಿಕೆಯ  ಮುಸ್ಲಿಮರಿಂದ ಅಳೆಯಲಾಗುತ್ತದೆ. ಅತ್ಯಾಚಾರಿ ಮುಸ್ಲಿಮ್ ಹೆಸರಿನವರಾದರೆ, ದರೋಡೆ, ಕಳ್ಳತನ, ಹತ್ಯೆ, ವಂಚನೆ ಪ್ರಕರಣಗಳಲ್ಲಿ  ಮುಸ್ಲಿಮ್ ಹೆಸರು ಕಾಣಿಸಿಕೊಂಡರೆ ಅದರ ಹೊಣೆಯನ್ನು 15 ಕೋಟಿ ಮುಸ್ಲಿಮರ ತಲೆಗೆ ಕಟ್ಟಲಾಗುತ್ತದೆ. ಅವರ ಧರ್ಮವೇ ಹಾಗೆ,  ಅದುವೇ ಅದಕ್ಕೆ ಕಾರಣ...  ಎನ್ನುತ್ತಾರೆ. ಇದೇವೇಳೆ, ಇಂಥವರ ಮನೆಯ ಅಕ್ಕ-ಪಕ್ಕ ಮತ್ತು ಪರಿಸರ ಪ್ರದೇಶಗಳಲ್ಲಿ ನೂರಾರು ಮುಸ್ಲಿಮ್  ಮನೆಗಳಿರುತ್ತವೆ. ಮುಸ್ಲಿಮ್ ಗೆಳೆಯರೂ ಇಂಥವರಿಗೆ ಇರುತ್ತಾರೆ. ಅವರಾರೂ ಕೆಟ್ಟವರಲ್ಲ ಎಂಬುದೂ ಅವರಿಗೆ ಗೊತ್ತಿರುತ್ತದೆ. ಮತ್ತೇಕೆ  ಇಂಥ ಸಾರ್ವತ್ರಿಕ ಟೀಕೆ ಮಾಡುತ್ತಾರೆಂದಾದರೆ, ಅದರ ಹಿಂದೆ ಒಂದು ಸಂಚಿದೆ. ರಾಜಕೀಯ ಬಿತ್ತಿದ ಈ ಸಂಚಿನಲ್ಲಿ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾಗಿಯಾಗಿದ್ದಾರೆ. ತನಗೆ ಗೊತ್ತಿರುವ ಮತ್ತು ತನ್ನ ಪರಿಚಯದಲ್ಲಿರುವ ಮುಸ್ಲಿಮರೆಲ್ಲ ಒಳ್ಳೆಯವರೇ.  ಆದರೆ ತನಗೆ ಗೊತ್ತಿಲ್ಲದ ಇನ್ನೆಲ್ಲೋ  ಇರುವ ಮುಸ್ಲಿಮರು ಕೆಟ್ಟವರು ಎಂಬ ಈ ಭಾವನೆಯ ಮೂಲ ಅವರಲ್ಲ. ಅವರೊಳಗೆ  ಇಂಥದ್ದೊಂದು  ಭಾವವನ್ನು ಇನ್ನಾರೋ ತುಂಬಿದ್ದಾರೆ ಅಥವಾ ಇನ್ನಾವುದೋ ರೂಪದಲ್ಲಿ ಅವರೊಳಗೆ ಅದು ತುಂಬಿಕೊಂಡಿದೆ. ‘ತಾಲಿಬಾನ್‌ನ ಬಗ್ಗೆ ಏನು ಹೇಳುತ್ತೀರೀ ...’ ಎಂದು ಇಲ್ಲಿನ ಮುಸ್ಲಿಮರಲ್ಲಿ ಪ್ರಶ್ನಿಸುವವರ ಪೈಕಿ ಹೆಚ್ಚಿನವರೊಳಗೂ ಇಂಥದ್ದೊಂದು  ಭಾವವಿದೆ.  ತಾಲಿಬಾನನ್ನು ತೋರಿಸಿ ಇಲ್ಲಿನ ಮುಸ್ಲಿಮರನ್ನು ತಿವಿಯುವುದು ಅವರ ಉದ್ದೇಶ. ಇಂಥ ಕಾಯಿಲೆಗೆ ಹರೀಶ್ ಬಂಗೇರ ಪ್ರಕರಣದಲ್ಲಿ  ಒಳ್ಳೆಯ ಔಷಧವಿದೆ.

ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು.