Thursday, 23 September 2021

ಆತ್ಮಹತ್ಯೆ: ಮುಸ್ಲಿಮ್ ಸಮುದಾಯದ ಬಗ್ಗೆ ಅಧ್ಯಯನ ನಡೆಯಲಿ





ಹೊಸದಿಲ್ಲಿ


ಚಿಕ್ಕಮಗಳೂರು

ಈ ಎರಡೂ ನಗರಗಳ ನಡುವೆ ನೂರಾರು ಕಿಲೋ ಮೀಟರ್‌ಗಳಷ್ಟು ಅಂತರವಿದೆ. ಭಾಷೆ, ಆಹಾರ, ವೇಷ- ಭೂಷಣ ಮತ್ತು  ಸೌಲಭ್ಯಗಳ ದೊರಕುವಿಕೆಯಲ್ಲೂ ವ್ಯತ್ಯಾಸವಿದೆ. ವಾತಾವರಣವೂ ಭಿನ್ನವಾಗಿದೆ. ದೆಹಲಿಯಲ್ಲಿ ಸಿಗುವ ಪತ್ರಿಕೆಗಳ ಮುಖಪುಟ  ವಿಷಯಕ್ಕೂ ಚಿಕ್ಕಮಗಳೂರಿನಲ್ಲಿ ಲಭ್ಯವಾಗುವ ಪತ್ರಿಕೆಗಳ ಮುಖಪುಟ ಸಹಿತ ಬಹುತೇಕ ಎಲ್ಲ ಪುಟಗಳ ವಿಷಯಕ್ಕೂ ವ್ಯತ್ಯಾಸವಿರುತ್ತದೆ.  ಇಂಥ ಹಲವು ವ್ಯತ್ಯಾಸಗಳು ಹೊರತಾಗಿಯೂ ಒಂದು ವಿಷಯದಲ್ಲಿ ಮಾತ್ರ ಸಮಾನತೆಯಿದೆ. ಅದುವೇ ಆತ್ಮಹತ್ಯೆ. ಆಗಸ್ಟ್ 16 ರಂದು  ಸುಪ್ರೀಮ್ ಕೋರ್ಟಿನ ಹೊರಗೆ ಜೋಡಿಯೊಂದು ಆತ್ಮಹತ್ಯೆಗೆ ಪ್ರಯತ್ನಿಸಿತು. ಮೈಗೆ ಬೆಂಕಿ ಹಚ್ಚಿಕೊಂಡಿತು. ಬಳಿಕ ಆಗಸ್ಟ್ 21 ರಂದು  ಯುವಕ ಮೃತಪಟ್ಟ. ಆಗಸ್ಟ್ 24 ರಂದು ಯುವತಿಯೂ ಮೃತಪಟ್ಟಳು. ಇದಾಗಿ ಎರಡು ದಿನಗಳ ಬಳಿಕ ಚಿಕ್ಕಮಗಳೂರಿನಿಂದ  ಹೃದಯವಿದ್ರಾವಕ ಘಟನೆಯೊಂದು ವರದಿಯಾಯಿತು. ರಾತ್ರಿ ಕಾರಿನಲ್ಲಿ ನಿದ್ರೆಗೆ ಜಾರಿದ್ದ ಕುಟುಂಬವನ್ನು ಮಂಜುನಾಥ ಎಂಬವರು  ಭದ್ರಾನಾಲೆಗೆ ಚಲಾಯಿಸಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಮತ್ತು ಅವರ ಅತ್ತೆ ಸುನಂದಮ್ಮ ಸಾವಿಗೀಡಾಗಿದ್ದಾರೆ. ಪತ್ನಿ ಮತ್ತು 12  ವರ್ಷದ ಪುಟ್ಟ ಮಗ ಈಜಿ ದಡ ಸೇರಿದ್ದಾರೆ. ಹೀಗೆ ಕಾರನ್ನು ನಾಲೆಗೆ ಧುಮುಕಿಸುವ ಮೊದಲ ಮಂಜುನಾಥ್ ಅವರು ತನ್ನ ಅಣ್ಣನ  ಪತ್ನಿ ಮತ್ತು ಮಗನಲ್ಲಿ ಸಾಯುವ ನಿರ್ಧಾರವನ್ನು ತಿಳಿಸಿದ್ದಾರೆ. ದಯವಿಟ್ಟು ಅಂತಹ ನಿರ್ಧಾರ ಮಾಡಬೇಡಿ ಎಂದು ಪರಿಪರಿಯಾಗಿ  ಅವರು ಗೋಗರೆದ ಸಂಗತಿಯನ್ನೂ ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ಪ್ರಕಾರ, 2019ರಲ್ಲಿ ದೇಶದಲ್ಲಿ 1,39,123 ಆತ್ಮಹತ್ಯೆ ಗಳು ನಡೆದಿವೆ. ಅಂದರೆ ಪ್ರತಿದಿನ 381  ಮಂದಿ ಆತ್ಮಹತ್ಯೆಯ ಮೂಲಕ ಜೀವ ಕಳಕೊಂಡಿದ್ದಾರೆ. 2018 ರಲ್ಲಿ ಆತ್ಮಹತ್ಯೆಯ ಪ್ರಮಾಣ- 1,34,516 ಮತ್ತು 2017 ರಲ್ಲಿ 1,29,887  ಆಗಿತ್ತು. ಇದು ಆತಂಕಕಾರಿ. ಯಾಕೆಂದರೆ ವರ್ಷಂಪ್ರತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದೆ. ಪ್ರತಿ ವರ್ಷ ಜಾಗತಿಕವಾಗಿ 8  ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಿದೆ. ಅದರಲ್ಲಿ
17% ಪಾಲು ಭಾರತದ್ದೇ ಆಗಿದೆ. 1987 ರಿಂದ 2007ರ ನಡುವೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 7.9 ರಿಂದ 10.30ಕ್ಕೆ   ಏರಿಕೆಯಾಗಿದೆ. 18 ರಿಂದ 30 ವರ್ಷದ ಒಳಗಿನ 48 ಸಾವಿರ ಮಂದಿ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ  

ವಿದ್ಯಾರ್ಥಿಗಳ ಪಾಲಿಗಂತೂ 2019 ಘನಘೋರ. ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ವರದಿಯಂತೆ, 2019 ರಲ್ಲಿ  ಪ್ರತಿ ಒಂದು ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 10,335 ವಿದ್ಯಾರ್ಥಿಗಳು 2019ರಲ್ಲಿ ಆತ್ಮಹತ್ಯೆ  ಮಾಡಿಕೊಂಡಿದ್ದು ಕಳೆದ 25 ವರ್ಷಗಳಲ್ಲೇ ಇದು ಅತ್ಯಧಿಕ ಎಂದು ಹೇಳಲಾಗಿದೆ. 1995 ರಿಂದ 2019ರ ನಡುವೆ ಒಂದು ಲಕ್ಷದ 70  ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನಲ್ಲಿ 1995 ರಿಂದ 2008ರ ನಡುವೆ ಆತ್ಮಹತ್ಯೆ ಮಾಡಿಕೊಂಡವರ  ಸಂಖ್ಯೆಯೇ 85,824 ಆಗಿದೆ. ಅಷ್ಟಕ್ಕೂ,

ಈ ವರದಿಗಳೆಲ್ಲವೂ ಕೊರೋನಾ ಕಾಲಕ್ಕಿಂತ ಮೊದಲಿನವು. ಕೊರೋನಾ ಕಾಲವಂತೂ ಜನರನ್ನು ಎಲ್ಲಾ ರೀತಿಯಲ್ಲೂ ಹೈರಾಣಾಗಿಸಿದೆ.  ಆರ್ಥಿಕವಾಗಿಯೂ ಆರೋಗ್ಯದ ದೃಷ್ಟಿಯಿಂದಲೂ ಜನರನ್ನು ಒಗೆದೆಸೆದ ಅಪಕೀರ್ತಿ ಕೊರೋನಾಕ್ಕಿದೆ.
ಹೆಚ್ಚಿನ ಆತ್ಮಹತ್ಯೆಗಳು ಕ್ಷಣದ ಭಾವಾತಿರೇಕದ ಫಲಿತಾಂಶಗಳಾಗಿವೆ. ಆ ಕ್ಷಣದಲ್ಲಿ ಅವರನ್ನು ಸಕಾರಾತ್ಮಕ ಸಲಹೆಗಳು ಮತ್ತು ಸಾಂತ್ವನಗಳು  ಲಭ್ಯವಾದರೆ ಅದರಲ್ಲಿ ಆತ್ಮಹತ್ಯೆಯಿಂದ ವಿಮುಖಗೊಳಿಸ ಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, ಆತ್ಮಹತ್ಯೆ ಯಾವ  ಸಮಸ್ಯೆಗೂ ಪರಿಹಾರವಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. 

ಕಾಫಿ ಕೆಫೆ ಡೇಯ ಮಾಲಿಕ,  ಖ್ಯಾತ ಉದ್ಯಮಿ ಸಿದ್ಧಾರ್ಥ್ ಅವರು ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋಟ್ಯಂತರ  ಬೆಲೆಬಾಳುವ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿರುವ ಅವರಿಗೆ ಆತ್ಮಹತ್ಯೆ  ಪರಿಹಾರವಲ್ಲ ಎಂಬುದು ಗೊತ್ತಿರಲಿಲ್ಲ ಎಂದು ಹೇಳುವುದು ಅಪ್ರಬುದ್ಧತೆಯಾಗುತ್ತದೆ. ಮತ್ತೂ ಯಾಕೆ ಆತ್ಮಹತ್ಯೆ ಮಾಡಿಕೊಂಡರೆಂದರೆ,  ಆಪ್ತ ಸಮಾಲೋಚನೆಯ ಕೊರತೆ, ಸಮಸ್ಯೆಯನ್ನು ಇತರರಲ್ಲಿ ಹೇಳಿಕೊಳ್ಳದೇ ಮುಚ್ಚಿಟ್ಟು ಕೊರಗುವುದು ಮತ್ತು ಮರ್ಯಾದೆಗೆ  ಅಂಜುವುದು ಇತ್ಯಾದಿಗಳು ಕಾಣವಾಗಿರಬಹುದು. ಸಮಸ್ಯೆ ಎದುರಾದಾಗ ಸ್ವಯಂ ಕೊರಗುತ್ತಾ ಬದುಕುವುದರ ಬದಲು ಇತರರಲ್ಲಿ ಹಂಚಿಕೊಂಡು  ಪರಿಹಾರಗಳನ್ನು ಹುಡುಕುವುದು ಮತ್ತು ಯಾವ ಕ್ಷಣದಲ್ಲೂ ಧೈರ್ಯಗೆಡದಿರುವುದು ಬಹು ಅಗತ್ಯ. ಹಿರಿಯರನ್ನು  ನೋಡುತ್ತಾ ಕಿರಿಯರು ಬೆಳೆಯುತ್ತಾರೆ. ಹತ್ತನೇ ತರಗತಿಯಲ್ಲಿ ಫೇಲ್ ಅದುದಕ್ಕೋ ಕಡಿಮೆ ಅಂಕ ಪಡೆದುದಕ್ಕೋ ಬೇಸರ ಪಟ್ಟು  ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ದಿನದಲ್ಲಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು 2019ರ ಕ್ರೈಮ್ ವರದಿಯೇ ಹೇಳುತ್ತದೆ. ಹತ್ತನೇ ತರಗತಿ ವಿದ್ಯಾರ್ಥಿಯು ವಯಸ್ಸು ಹೆಚ್ಚೆಂದರೆ 16. ಈ ವಯಸ್ಸು ಆತ್ಮಹತ್ಯೆಯ ಬಗ್ಗೆ ಆಲೋಚಿಸು  ವಂತಹದ್ದೇ ಎಂದು ಒಮ್ಮೆ ಅವಲೋಕಿಸಿದರೂ ಹಿರಿಯರ ಆತ್ಮಹತ್ಯೆಗಳು ಕಿರಿಯರ ಮೇಲೆ ಬೀರುತ್ತಿರುವ ಪರಿಣಾಮವನ್ನು  ಅರಿತುಕೊಳ್ಳಬಹುದು. ಮೊಬೈಲ್ ಕೊಡಲಿಲ್ಲವೆಂದೋ, ಹೆತ್ತವರು ಗದರಿಸಿದರೆಂದೋ ಹೇಳಿಕೊಂಡು ಆತ್ಮಹತ್ಯೆ ಮಾಡುವ ಕಿರಿ  ವಯಸ್ಸಿನ ಮಕ್ಕಳಿದ್ದಾರೆ. ಮಕ್ಕಳಲ್ಲಿ ಸಿಟ್ಟು, ಸೆಡವು, ಹಠ ಸಾಮಾನ್ಯ. ಆದರೆ, ಆತ್ಮಹತ್ಯೆಯಂಥ ಅಪಾಯಕಾರಿ ಆಲೋಚನೆ ಅವರಲ್ಲಿ  ಹುಟ್ಟುವುದು ಹೇಗೆ? ಬಹುಶಃ ಹಿರಿಯರ ಆತ್ಮಹತ್ಯೆಯಿಂದಾದ ಪ್ರೇರಣೆಯೇ ಅವರಲ್ಲಿ ಇಂಥ ಭಯಾನಕ ಆಲೋಚನೆ ಹುಟ್ಟಲು ಸಾಧ್ಯ  ಎಂದೇ ಹೇಳಬೇಕಾಗುತ್ತದೆ. ಅಷ್ಟಕ್ಕೂ,

ಶಿಕ್ಷಿತರು ಹೆಚ್ಚಾದಂತೆಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲೂ ಹೆಚ್ಚಳವಾಗುತ್ತಿರುವುದಕ್ಕೆ ಏನು ಕಾರಣ? ಮೂರು ದಶಕಗಳ ಹಿಂದಿನ ಶೈಕ್ಷಣಿಕ  ಮಟ್ಟಕ್ಕೂ ಮತ್ತು ಜೀವನ ಸೌಲಭ್ಯಕ್ಕೂ ಹೋಲಿಸಿದರೆ ಇಂದು ಇವರಡೂ ರಂಗಗಳಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಬೌದ್ಧಿಕವಾಗಿ  ಸಮಾಜ ಬೆಳೆದಿದೆ. ಆರ್ಥಿಕವಾಗಿ ಸಬಲವಾಗುತ್ತಿದೆ. ಜನರ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಬಹುಮುಖ ಪಾತ್ರ ಇದೆ ಎಂದಾದರೆ,  ಮತ್ತೇಕೆ ಆತ್ಮಹತ್ಯೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತಿದೆ? ಶಿಕ್ಷಣಕ್ಕೂ ಆತ್ಮಹತ್ಯೆಗೂ ಸಂಬಂಧ ಇಲ್ಲವೇ ಅಥವಾ ಶಿಕ್ಷಣವು ವ್ಯಕ್ತಿಯಲ್ಲಿ  ಅಪರಿಮಿತ ಆಸೆಯನ್ನು ಹುಟ್ಟು ಹಾಕುತ್ತಿದೆಯೇ? ಸಲ್ಲದ ಬಯಕೆಗಳಿಗೆ ಪ್ರೇರೇಪಿಸುತ್ತಿದೆಯೇ ಅಥವಾ ವ್ಯಕ್ತಿಗಳನ್ನು ದುರ್ಬಲರ ನ್ನಾಗಿಸುತ್ತಿದೆಯೇ? ಸವಾಲಿನ ಸಂದರ್ಭವನ್ನು ಅನಕ್ಷರಸ್ಥರಾದ ಹಿರಿಯರು ಎದುರಿಸಿದಂತೆ ಇವತ್ತಿನ ಶಿಕ್ಷಿತ ಸಮಾಜ ಎದುರಿಸುವಲ್ಲಿ  ಯಾಕೆ ವಿಫಲವಾಗುತ್ತಿದೆ? ಇಲ್ಲಿ ಪ್ರಮುಖ ಅಂಶವೊಂದನ್ನು ಗಮನಿಸಬೇಕು-

ಮುಸ್ಲಿಮ್ ಸಮುದಾಯದಲ್ಲಿ ಆತ್ಮಹತ್ಯೆಯ ಪ್ರಮಾಣ ತೀರಾ ತೀರಾ ಕಡಿಮೆ. ಇತರ ಸಮುದಾಯ
ಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ  ಭಾರತೀಯ ಮುಸ್ಲಿಮ್ ಸಮುದಾಯ ತೀರಾ ಕೆಳಮಟ್ಟದಲ್ಲಿದ್ದರೂ ಆತ್ಮಹತ್ಯೆಗೆ ಹೋಲಿಸಿದರೆ, ಇತರೆಲ್ಲಾ ಸಮುದಾಯಗಳಿಗೆ ಮಾದರಿ  ಅನ್ನುವ ರೀತಿಯಲ್ಲಿದೆ. ಈ ಸ್ಥಿತಿಗೆ ಕಾರಣವೇನು? ಇದೊಂದು ಅಧ್ಯಯನಯೋಗ್ಯ ಸಂಗತಿ. ಎಂಥ ಕಷ್ಟಕಾಲ ಎದುರಾದರೂ,  ಸಮಸ್ಯೆಗಳಿಗೆ ಈಡಾದರೂ ಮುಸ್ಲಿಮ್ ಸಮುದಾಯ ಆತ್ಮಹತ್ಯೆಯನ್ನು ಆಯ್ಕೆಯಾಗಿ ಆರಿಸಿಕೊಳ್ಳುತ್ತಿಲ್ಲ. ಇದಕ್ಕೆ ಧಾರ್ಮಿಕ ಕಾರಣವೇ  ಪ್ರಧಾನವಾದುದು ಎಂದು ಹೇಳಬೇಕಾಗುತ್ತದೆ. ಆತ್ಮಹತ್ಯೆಯನ್ನು ಇಸ್ಲಾಮ್ ಪಾಪವೆಂದು ಪರಿಗಣಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವವರು  ನರಕವಾಸಿಗಳು ಎಂದು ಅದು ಹೇಳುತ್ತದೆ. ಇಸ್ಲಾಮಿನ ಈ ಕಟ್ಟುನಿಟ್ಟಿನ ನಿಲುವು ಮುಸ್ಲಿಮ್ ಸಮುದಾಯದ ಮೇಲೆ ಗಾಢ ಪರಿಣಾಮ  ಬೀರಿರುವುದನ್ನು ಆತ್ಮಹತ್ಯೆಯ ಗ್ರಾಫೇ ಹೇಳುತ್ತಿದೆ. ಈ ವಿಷಯದಲ್ಲಿ ಅಧ್ಯಯನಗಳು ನಡೆಯಲಿ. ಸಂಶೋಧನಾತ್ಮಕ ಪ್ರಬಂಧಗಳು  ಮಂಡನೆಯಾಗಲಿ. 

No comments:

Post a Comment