ಸನ್ಮಾರ್ಗ ಸಂಪಾದಕೀಯ
ದೇಶದಲ್ಲಿ ನಿಜಕ್ಕೂ ಗಂಭೀರ ಚರ್ಚೆಗೆ ಒಳಗಾಗಬೇಕಾದ ವಿಷಯಗಳು ಯಾವುವು? ಗೋಡ್ಸೆಯೋ, ಮಂದಿರ-ಮಸೀದಿಯೋ, ಹಿಂದೂ-ಮುಸ್ಲಿಮರೋ? ನಿಜವಾಗಿ, ಸಾಮಾನ್ಯ ಜನರ ಬದುಕು ಮತ್ತು ಭಾವಗಳು ಇವುಗಳ ಸುತ್ತ ಇಲ್ಲವೇ ಇಲ್ಲ. ಮಧ್ಯಮ ಮತ್ತು ಅದಕ್ಕಿಂತ ಕೆಳಗಿನ ವರ್ಗದ ಜನರೇ 90% ಇರುವ ದೇಶದಲ್ಲಿ ಇವರ ಸಂಕಟಗಳೇ ಬೇರೆ. ಮಾಧ್ಯಮದ ಮಂದಿ ನಿರ್ದಿಷ್ಟ ಪ್ರಶ್ನೆಯನ್ನು ಕೇಳದೇ ನೇರವಾಗಿ ಅವರ ಮುಂದೆ ಮೈಕನ್ನಿಟ್ಟರೆ ನಿರುದ್ಯೋಗ, ತೈಲ ಬೆಲೆ ಏರಿಕೆ, ದುಬಾರಿಯಾಗಿರುವ ಅಗತ್ಯ ವಸ್ತುಗಳು, ಕೆಟ್ಟು ಹೋಗಿರುವ ರಸ್ತೆಗಳು, ಶಾಲಾ ಫೀಸು, ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಲಾದ ಚಡಪಡಿಕೆ... ಇತ್ಯಾದಿಗಳ ಸುತ್ತವೇ ಮಾತು ಪ್ರಾರಂಭಿಸುತ್ತಾರೆ. ಆದರೆ, ಮಾಧ್ಯಮ ಮಂದಿಯ ಬಾಯಲ್ಲಿ ಗೋಡ್ಸೆ, ದೇವಸ್ಥಾನ, ಬಿಜೆಪಿ, ಕಾಂಗ್ರೆಸ್ಸು, ತಾಲಿಬಾನು, ಹಿಂದೂ-ಮುಸ್ಲಿಮ್ ಇತ್ಯಾದಿಗಳೇ ಇರುವುದರಿಂದ ಮತ್ತು ಜನರನ್ನು ಉನ್ಮಾದಗೊಳಿಸಲು ಈ ಬೆಲೆ ಏರಿಕೆ, ನಿರುದ್ಯೋಗ, ರಸ್ತೆ ಅವ್ಯವಸ್ಥೆ ಇತ್ಯಾದಿಗಳಿಂದ ಸಾಧ್ಯವಿಲ್ಲದೇ ಇರುವುದರಿಂದ ಅವರು ಜನರ ಈ ಎದೆಯ ಧ್ವನಿಗಿಂತ ಗೋಡ್ಸೆ, ದೇವಸ್ಥಾನ, ಮುಸ್ಲಿಮ್, ಹಿಂದೂ ಇತ್ಯಾದಿ ನಾಲಗೆಯ ಧ್ವನಿಗಾಗಿ ಪೀಡಿಸುತ್ತಾರೆ. ಇದರಿಂದಾಗಿ ನಿಜಕ್ಕೂ ದೇಶದಲ್ಲಿ ನಡೆಯಬೇಕಿರುವ ಮುಖ್ಯ ಚರ್ಚಾ ವಿಷಯಗಳು ಬದಿಗೆ ಸರಿದು, ಅಮುಖ್ಯ ಮತ್ತು ಉನ್ಮಾದಿತ ವಿಷಯಗಳೇ ಮುನ್ನೆಲೆಗೆ ಬರುತ್ತವೆ. ಅಂದಹಾಗೆ,
ಕಳೆದವಾರ ಹಿಂದೂ ಮಹಾಸಭಾದ ಮುಖಂಡ ಧರ್ಮೇಂದ್ರರ ಹೇಳಿಕೆ, ಮೈಸೂರಿನ ದೇವಸ್ಥಾನ ಧ್ವಂಸ, ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಮತ್ತು ಸಂಸದರೊಬ್ಬರ ಅಶ್ಲೀಲ ವೀಡಿಯೋದ ಸುತ್ತ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಆದಷ್ಟು ಚರ್ಚೆಯು ದೇಶದಿಂದ ಕಾಲು ಕಿತ್ತ ಡೆಪ್ರಾಯಿಟ್ ಮೂಲದ ವಾಹನ ಉತ್ಪಾದಕ ಕಂಪೆನಿ ಫೋರ್ಡ್ ಮೋಟಾರ್ಸ್ ನ ಬಗ್ಗೆ ಆಗಿಲ್ಲ. ಹಾಗಂತ, ಕೇವಲ ಈ ಫೋರ್ಡ್ ಮೋಟಾರ್ಸ್ ಕಂಪೆನಿ ಮಾತ್ರ ಬಾಗಿಲು ಮುಚ್ಚಿ ಈ ದೇಶದಿಂದ ಹೊರಟು ಹೋಗಿ ದ್ದಿದ್ದರೆ ಅದನ್ನು ಆ ಕಂಪೆನಿಯ ಒರಟುತನವಾಗಿಯೋ ಭಾರತೀಯ ಕಾನೂನುಗಳಿಗೆ ಬೆಲೆ ಕೊಡದ ಹುಂಬತನವಾಗಿಯೋ ಪರಿಗಣಿಸಬಹುದಿತ್ತು. ಆದರೆ 2017ರಿಂದ ಈ 2021ರ ನಡುವೆ 8ರಷ್ಟು ಬಹುಪ್ರಸಿದ್ಧ ಬಹುರಾಷ್ಟ್ರೀಯ ಕಂಪೆನಿಗಳು ಭಾರತವನ್ನು ಬಿಟ್ಟು ಹೋಗಿವೆ. ಈ ಸರತಿಯಲ್ಲಿ ಫೋರ್ಡ್ ಮೋಟಾರ್ಸ್ ಇತ್ತೀಚಿನದ್ದು.
1995ರಲ್ಲಿ ದೇಶಕ್ಕೆ ಕಾಲಿಟ್ಟ ಫೋರ್ಡ್ ಕಂಪೆನಿಯು ಆರಂಭದಲ್ಲಿ 250 ಕೋಟಿ ಡಾಲರ್‌ನಷ್ಟು ಭಾರೀ ಮೊತ್ತವನ್ನು ಹೂಡಿಕೆ ಮಾಡಿತ್ತು. ವರ್ಷಕ್ಕೆ 4 ಲಕ್ಷ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದ ಫೋರ್ಡ್, ಅದೇ ಉದ್ದೇಶಕ್ಕಾಗಿ ದೇಶದಲ್ಲಿ ಎರಡು ಬೃಹತ್ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸಿತ್ತು. ಈ ಎರಡೂ ಘಟಕಗಳಲ್ಲಿ 4 ಸಾವಿರದಷ್ಟು ನೇರ ಉದ್ಯೋಗಿಗಳಿದ್ದರು ಮತ್ತು 170 ಡೀಲರ್‌ಗಳಿದ್ದರು. ಪರೋಕ್ಷ ಉದ್ಯೋಗಿಗಳನ್ನು ಲೆಕ್ಕ ಹಾಕಿದರೆ ಒಟ್ಟು 40 ಸಾವಿರ ಉದ್ಯೋಗಿಗಳೆನ್ನಬಹುದು. ಆದರೆ, ಫೋರ್ಡ್ ಮೋಟಾರ್ಸ್ ಇದೀಗ ಬಾಗಿಲು ಮುಚ್ಚಿರುವುದರಿಂದ ಈ ಉದ್ಯೋಗಿಗಳೆಲ್ಲ ಅತಂತ್ರರಾಗಿದ್ದಾರೆ. ದೇಶಕ್ಕೆ ಐಕಾನ್, ಮೊಡೆಓ, ಫ್ಯೂಶನ್, ಫಿಗೋ, ಫಿಯೆಸ್ತಾ, ಎಂಡೀವರ್, ಇಕೋಸ್ಪೋರ್ಟ್ಸ್ ನಂಥ ಸಾಮಾನ್ಯ ಮತ್ತು ಐಶಾರಾಮಿ ಕಾರುಗಳನ್ನು ತಯಾರಿಸಿ ಕೊಟ್ಟ ಕಂಪೆನಿಯೊಂದು ಹೀಗೆ ಬಾiಗಿಲು ಮುಚ್ಚುವುದೆಂದರೆ, 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವ ಲಕ್ಷಕ್ಕಿಂತಲೂ ಅಧಿಕ ಮಂದಿಯನ್ನು ನಡುನೀರಲ್ಲಿ ಬಿಟ್ಟಂತೆ. ಅಷ್ಟಕ್ಕೂ, ಫೋರ್ಡ್ ನಂತೆ ಈ ದೇಶವನ್ನು ಬಿಟ್ಟ ಕಾರು ಕಂಪೆನಿಗಳು ಇನ್ನೂ ಹಲವಿವೆ-
2017ರಲ್ಲಿ ಅಮೇರಿಕದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಜನರಲ್ ಮೋಟಾರ್ಸ್ ಭಾರತವನ್ನು ಬಿಟ್ಟು ತೆರಳಿತು. 2018ರಲ್ಲಿ ವೋಕ್ಸ್ ವ್ಯಾಗನ್ ಗುಂಪಿನ ಎಂಎಎನ್ ಡ್ರಿಕ್ಸ್ ಕಂಪೆನಿಯು ಬಾಗಿಲು ಮುಚ್ಚಿತು. ಇದರ ಜೊತೆಗೇ ಇದೇ ವರ್ಷದಲ್ಲಿ ಈಷರ್ ಪೊಲಾರಿಸ್ ಎಂಬ ಬಹುರಾಷ್ಟ್ರೀಯ ಕಂಪೆನಿಯೂ ದೇಶ ತೊರೆಯಿತು. 2019ರಲ್ಲಿ ಯುಎಂ ಮೋಟಾರ್ ಸೈಕಲ್ಸ್ ಮತ್ತು ಫಿಯೆಟ್ ಕಂಪೆನಿ ಕೂಡ ಬಾಗಿಲು ಎಳೆದು ದೇಶದಿಂದ ಹೊರಟು ಹೋಯಿತು. ಬೈಕ್ ತಯಾರಿಕೆಯಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿರುವ ಹಾರ್ಲೆ ಡೇವಿಡ್‌ಸನ್ 2020ರಲ್ಲಿ ಬೈಕ್ ತಯಾರಿಕೆಯನ್ನು ಸ್ಥಗಿತಗೊಳಿಸಿ ಹೊರಟು ಹೋಯಿತು. ಅಂದಹಾಗೆ,
ಯಾವುದೇ ಒಂದು ಬೃಹತ್ ಕಂಪೆನಿ ಬಾಗಿಲು ಮುಚ್ಚುವುದರಿಂದ ಅದರ ಮಾಲಕರಿಗಷ್ಟೇ ತೊಂದರೆಯಾಗಿರುತ್ತಿದ್ದರೆ, ಅದಕ್ಕಾಗಿ ಅತೀವ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವರು ಒಂದರಲ್ಲಾದ ನಷ್ಟವನ್ನು ಇನ್ನೊಂದರಲ್ಲಿ ಸರಿ ತೂಗಿಸಬಲ್ಲರು. ಇನ್ನೊಂದು ದೇಶಕ್ಕೆ ಹೋಗಿ ಅಲ್ಲಿಯ ಬ್ಯಾಂಕುಗಳಿಂದ ಸಾಲ ಪಡೆದು, ಬಳಿಕ ಪ್ರಭುತ್ವದ ಮೇಲೆ ಪ್ರಭಾವ ಬೀರಿ ಒಂದೋ ಬಡ್ಡಿ ಮನ್ನಾ ಅಥವಾ ಸಾಲ ಮನ್ನಾವನ್ನೇ ಮಾಡಿಕೊಳ್ಳಬಲ್ಲರು. ಆದರೆ, ಅದರಲ್ಲಿದ್ದ ಸಾಮಾನ್ಯ ಉದ್ಯೋಗಿಗಳು ಮತ್ತು ಅವರನ್ನು ಅವಲಂಬಿಸಿರುವವರಲ್ಲಿ ಈ ಸಾಮರ್ಥ್ಯ ಇರುವುದಿಲ್ಲ. ಅವರು ಕಂಗಾಲಾಗುತ್ತಾರೆ. ಇನ್ನೊಂದು ಉದ್ಯೋಗವೂ ಕಷ್ಟವಾದಾಗ ಆತ್ಮಹತ್ಯೆಯಂಥ ಅತಿ ದಾರುಣ ಆಯ್ಕೆಗೂ ಮುಂದಾಗುತ್ತಾರೆ. ನೋಟ್ ಬ್ಯಾನ್ ಬಳಿಕದ ಆತ್ಮಹತ್ಯೆ ಪ್ರಕರಣಗಳನ್ನು ವಿಶ್ಲೇಷಿಸಿದರೆ ಹೀಗೆ ಉದ್ಯೋಗ ನಷ್ಟವಾಗಿರುವವರೂ ಆ ಪಟ್ಟಿಯಲ್ಲಿರುವುದು ಕಾಣ ಸಿಗುತ್ತದೆ. ನಿಜವಾಗಿ,
ದೇಶದ ಅರ್ಥವ್ಯವಸ್ಥೆಗೆ ಮಂಕು ಕವಿಯಲು ಪ್ರಾರಂಭವಾದದ್ದು ಕೊರೋನಾ ಕಾಲದ ಬಳಿಕದಿಂದಲ್ಲ. ನೋಟ್ ಬ್ಯಾನ್ ಇದರ ಆರಂಭವಾಗಿತ್ತು. ಆಗಲೇ ರಘುರಾಮ್ ರಾಜನ್‌ರಂಥ ಪ್ರಮುಖ ಆರ್ಥಿಕ ತಜ್ಞರು ಈ ನಿರ್ಧಾರದ ಅಪಾಯವನ್ನು ಗುರುತಿಸಿದ್ದರು. ಭವಿಷ್ಯದಲ್ಲಿ ಭಾರೀ ಆರ್ಥಿಕ ಹೊಡೆತ ನೀಡುವ ಅವೈಜ್ಞಾನಿಕ ನಿರ್ಧಾರ ಇದು ಎಂದೂ ಹೇಳಿದ್ದರು. ಇದು ನಿಧಾನಕ್ಕೆ ಸಾಬೀತಾ ಗುತ್ತಲೂ ಬಂತು. ಬೃಹತ್ ಉದ್ಯಮಗಳು ಮಾತ್ರವಲ್ಲ, ಸಣ್ಣ ಸಣ್ಣ ಕೈಗಾರಿಕೆಗಳು, ಗುಡಿ ಕಸುಬುಗಳು ಬಾಗಿಲು ಮುಚ್ಚಿದುವು. ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೈಬಿಡುವ ಪ್ರಕ್ರಿಯೆಯನ್ನು ಕಂಪೆನಿಗಳೇ ಮಾಡತೊಡಗಿದುವು. ಆರ್ಥಿಕ ಹಿಮ್ಮುಖ ಆರಂಭವಾಯಿತು. ಅಂದಿನಿಂದ ಆರಂಭವಾದ ಈ ಬಿಕ್ಕಟ್ಟು ಕೊರೋನಾದ ಈ ಕಾಲದಲ್ಲಂತೂ ಬಿಗಡಾಯಿಸಿದೆ. ಇಂಥ ಸಮಯದಲ್ಲಿ ಜನರ ಜೊತೆ ನಿಲ್ಲಬೇಕಾದ ಸರ್ಕಾರವಂತೂ ಖಜಾನೆ ತುಂಬಿಸುವ ತರಾತುರಿಯಲ್ಲಿದೆ. ಪೆಟ್ರೋಲ್, ಡೀಸೆಲ್‌ಗಳ ಬೆಲೆಗಳಂತೂ ಆಕಾಶ ಮುಟ್ಟಿವೆ. ಸ್ವತಂತ್ರ ಭಾರತದ ಈ 7 ದಶಕಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು ಇದೇ ಮೊದಲು. ಡೀಸೆಲ್ ಬೆಲೆಯೂ ಎಗ್ಗಿಲ್ಲದೇ ಏರಿರುವುದರಿಂದ ಅಗತ್ಯ ವಸ್ತುಗಳು ಬೆಂಕಿ ಕೆಂಡವಾಗಿವೆ. ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ನಡುವೆ ಕನಿಷ್ಠ 20 ರೂಪಾಯಿಗಳಷ್ಟಾದರೂ ಅಂತರವನ್ನು ಕಾಯ್ದಿಟ್ಟುಕೊಳ್ಳುತ್ತಿತ್ತು. ಪೆಟ್ರೋಲ್ ಬೆಲೆ 70 ರೂಪಾಯಿಯಾದರೆ ಡೀಸೆಲ್ 50 ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿತ್ತು. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿರಲಿಲ್ಲ. ಯಾಕೆಂದರೆ,
ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವುದು ಲಾರಿಗಳಾದ್ದರಿಂದ ಮತ್ತು ಅವು ಡೀಸೆಲ್ ಉಪಯೋಗಿಸುತ್ತಿದ್ದುದರಿಂದ ಜನಸಾಮಾನ್ಯರ ಬದುಕು ಅಷ್ಟರ ಮಟ್ಟಿಗೆ ನೆಮ್ಮದಿಯದ್ದಾಗಿತ್ತು. ಈಗ ಡೀಸೆಲ್ ಬೆಲೆಯೇ ನೂರರಲ್ಲಿದೆ. ಸಹಜವಾಗಿ ಇದರ ಪರಿಣಾಮ ಅಗತ್ಯ ವಸ್ತುಗಳ ಮೇಲಾಗುತ್ತಿದೆ. ಇನ್ನು, ಹೊಟೇಲುಗಳಿಗೆ ಪ್ರವೇಶಿಸದಿರುವುದೇ ಉತ್ತಮ ಎಂಬ ವಾತಾವರಣ ಇದೆ. ಗೃಹಬಳಕೆ ಮತ್ತು ಕಮರ್ಷಿಯಲ್ ಬಳಕೆ- ಎರಡೂ ರೀತಿಯ ಗ್ಯಾಸ್‌ಗಳಿಗೂ ಸರ್ಕಾರ ವಿಪರೀತ ಬೆಲೆ ಏರಿಸಿರುವುದರಿಂದ ಹೊಟೇಲಿನ ಚಾ-ತಿಂಡಿ ತಿನಿಸುಗಳು ಮತ್ತು ಊಟಗಳು ಭಯ ತರಿಸುತ್ತಿವೆ. ಅಂದಹಾಗೆ,
ಮಂದಿರ-ಮಸೀದಿ, ಹಿಂದೂ-ಮುಸ್ಲಿಮ್‌ಗಳು ಯಾರ ಹೊಟ್ಟೆಯನ್ನೂ ತುಂಬಿಸಲ್ಲ. ಇವೆಲ್ಲವನ್ನೂ ಆಡಳಿತ ಮತ್ತು ಅದರ ಬೆಂಬಲಿಗರು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿರುವುದರ ಉದ್ದೇಶವೇ ಮುನ್ನೆಲೆಯಲ್ಲಿರುವ ಹಸಿವು, ಬಡತನ, ಬೆಲೆಏರಿಕೆ, ನಿರುದ್ಯೋಗದಂಥ ಬಹುಮುಖ್ಯ ಮತ್ತು ನಿಜ ಸಮಸ್ಯೆಗಳನ್ನು ಹಿನ್ನೆಲೆಗೆ ತಳ್ಳುವುದಕ್ಕೆ. ಇದರಲ್ಲಿ ಪ್ರಭುತ್ವ ಯಶಸ್ವಿಯಾದಷ್ಟೂ ಜನರು ಹೈರಾಣಾಗುತ್ತಲೇ ಹೋಗುತ್ತಾರೆ. ಬೃಹತ್ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿದ್ದರೂ ಮಾಧ್ಯಮಗಳು ಮಾತ್ರ ಹಿಂದೂ-ಮುಸ್ಲಿಮ್‌ಗಳ ಸುತ್ತವೇ ಗಿರಕಿ ಹೊಡೆಯುತ್ತಿರುವುದು ಪ್ರಭುತ್ವ ಹೆಣೆದ ಸಂಚಿನ ಭಾಗ. ಜನರು ಬೀದಿಗಿಳಿದು ಪ್ರಶ್ನಿಸುವುದೇ ಪರಿವರ್ತನೆಗಿರುವ ದಾರಿ.
No comments:
Post a Comment