ಹೀಗಾಗುವುದು ಸಾಧ್ಯವೇ, ದೇಶದ ಈಗಿನ ಜನನ ಅನುಪಾತ ಹೇಗಿದೆ ಎಂಬ ಬಗ್ಗೆ ಇಂಥವರು ಮಾಹಿತಿ ಹಂಚಿಕೊಳ್ಳುವುದಿಲ್ಲ. ಕಳೆದ ತಿಂಗಳು ಬಿಡುಗಡೆಗೊಂಡ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯು ಇಂಥ ಭೀತಿಗೆ ಆಧಾರವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಈ ವರದಿಯ ಪ್ರಕಾರ, ದೇಶದಲ್ಲಿ ಮೊದಲ ಬಾರಿ ಜನನ ದರ ಅನುಪಾತವು ಸಹಜ ದರಕ್ಕಿಂತಲೂ ಕೆಳಗಿಳಿದಿದೆ. ಸಾಮಾನ್ಯವಾಗಿ ಒಂದು ದಂಪತಿಯು ಎರಡು ಮಕ್ಕಳಿಗೆ ಸಮ ಎಂದು ಲೆಕ್ಕ ಹಾಕಲಾಗುತ್ತದೆ. ಒಂದುವೇಳೆ, ದಂಪತಿಯೊಂದು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅದು ಕ್ಷಿಪ್ರ ಜನಸಂಖ್ಯಾ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದು ಲೆಕ್ಕಾಚಾರ. ವಿಶ್ವಸಂಸ್ಥೆಯ ಲೆಕ್ಕಾಚಾರದಂತೆ ಸಹಜ ಜನನ ಪ್ರಮಾಣ ದರ 2:1. ಆದರೆ,
2021, ನವೆಂಬರ್‌ನಲ್ಲಿ ಬಿಡುಗಡೆಗೊಂಡ ಸಮೀಕ್ಷಾ ವರದಿಯ ಪ್ರಕಾರ, ಈ ದೇಶ ಕ್ಷಿಪ್ರವಾಗಿ ಈ ಸಹಜ ಜನನ ಪ್ರಮಾಣ ದರಕ್ಕಿಂತಲೂ ಕೆಳಗಿಳಿಯುತ್ತಿದೆ. ಸಿಕ್ಕಿಮ್‌ನಲ್ಲಿ ಈ ಜನನ ದರ 1:1 ಆಗಿದೆ. ಇದು ದೇಶದಲ್ಲೇ ಅತ್ಯಂತ ಕಡಿಮೆ. 1950ರಲ್ಲಿ ಈ ದೇಶದ ಜನನ ದರವು 5:90 ಆಗಿತ್ತು. ಅಂದರೆ, ಒಂದು ದಂಪತಿಗೆ ಸರಾಸರಿ 6 ಮಕ್ಕಳಿದ್ದರು. ಅಂದಿನಿಂದ ಈ 2021ರ ವರೆಗೆ ದೇಶದ ಜನನಾನುಪಾತವನ್ನು ವಿಶ್ಲೇಷಿಸಿದರೆ, ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ. ಸಿಕ್ಕಿಮ್‌ನಲ್ಲಿ ಇವತ್ತು ಸರಾಸರಿ ಒಂದು ದಂಪತಿಗೆ ಒಂದು ಮಗುವಷ್ಟೇ ಇದ್ದರೆ, ಲಡಾಕ್, ಗೋವಾ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಈ ದರವು ಸರಾಸರಿ ಒಂದೂವರೆ ಮಗುವಾಗಿರುತ್ತದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಸರಾಸರಿ ಒಂದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೇಶದ ಒಟ್ಟು ಸರಾಸರಿ ಒಂದು ದಂಪತಿಗೆ ಎರಡು ಮಕ್ಕಳೆಂಬಂತೆ ಇದ್ದಾರೆ. ಇದು ವಿಶ್ವಸಂಸ್ಥೆಯ ಆರೋಗ್ಯಕರ ಜನನ ಪ್ರಮಾಣ ದರಕ್ಕಿಂತಲೂ ಕಡಿಮೆ. ಅಂದಹಾಗೆ,
ಲ್ಯಾನ್ಸೆಟ್ ಪತ್ರಿಕೆಯು ನಡೆಸಿದ ಅಧ್ಯಯನವು ಇನ್ನೊಂದು ಸತ್ಯದತ್ತಲೂ ನಮ್ಮ ಗಮನ ಸೆಳೆಯುತ್ತದೆ. ಈಗಿನ ಜನನ ಪ್ರಮಾಣದ ಆಧಾರದಲ್ಲಿ ಹೇಳುವುದಾದರೆ ಮುಂದಿನ 80 ವರ್ಷಗಳ ಬಳಿಕ ದೇಶದ ಜನಸಂಖ್ಯೆ 100 ಕೋಟಿಗೆ ಇಳಿಯಲಿದೆ. ಮಾತ್ರವಲ್ಲ, 80 ವರ್ಷಗಳ ಬಳಿಕ ದೇಶದ ಜನನ ದರವು ಒಂದು ದಂಪತಿಗೆ ಒಂದು ಮಗು ಎಂಬಲ್ಲಿಗೆ ಬಂದು ನಿಲ್ಲಲಿದೆ ಎಂದೂ ಅದು ಹೇಳಿದೆ. ಅಷ್ಟಕ್ಕೂ,
1950ರಲ್ಲಿ ಒಂದು ದಂಪತಿಗೆ 6 ಮಕ್ಕಳು ಎಂಬಲ್ಲಿಂದ ಈ 2021ಕ್ಕಾಗುವಾಗ ಒಂದು ದಂಪತಿಗೆ ಎರಡು ಮಕ್ಕಳು ಎಂಬಲ್ಲಿಗೆ ದೇಶದ ಜನನ ಅನುಪಾತ ಇಳಿದಿರುವುದಕ್ಕೆ ಕಾರಣ ಏನು? 2005-06ರ ವರ್ಷದಲ್ಲಿ ದೇಶದ ಜನನ ದರ 2:7 ಇದ್ದರೆ 2015-16ರ ಅವಧಿಯಲ್ಲಿ 2:2ಕ್ಕೆ ಇಳಿದಿತ್ತು. ಇದೀಗ 2:0 ಅನುಪಾತಕ್ಕೆ ಇಳಿದಿದೆ. ಸದ್ಯ ಬಿಹಾರದಲ್ಲಿ ಒಂದು ದಂಪತಿಗೆ 3 ಮಕ್ಕಳು ಎಂಬ ಅನುಪಾತ ಇದ್ದರೆ, ಮೇಘಾಲಯ 2:9, ಉತ್ತರ ಪ್ರದೇಶ 2:7, ಜಾರ್ಖಂಡ್‌ನಲ್ಲಿ 2:4 ಮತ್ತು ಮಣಿಪುರದಲ್ಲಿ 2:2 ಎಂಬ ಸ್ಥಿತಿ ಇದೆ. ಈ ರಾಜ್ಯಗಳನ್ನು ಪಕ್ಕಕ್ಕಿಟ್ಟರೆ ಈ ದೇಶದ ಜನನ ದರ ಪ್ರಮಾಣ ಒಂದು ದಂಪತಿಗೆ ಒಂದೂವರೆ ಮಗು ಎಂಬಲ್ಲಿಗೆ ಬಂದು ನಿಲ್ಲುತ್ತದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನನ ಅನುಪಾತವು 1:1ರಿಂದ 1:9 ಮಾತ್ರ ಇದೆ ಎಂಬುದು ಇಲ್ಲಿ ಗಮನಾರ್ಹ. ಒಂದುರೀತಿಯಲ್ಲಿ,
ಜನನ ಪ್ರಮಾಣಕ್ಕೂ ಜನರ ಜೀವನ ಮಟ್ಟಕ್ಕೂ ಅಬೇಧ್ಯ ಸಂಬAಧ ಇದೆ ಎಂಬುದನ್ನು 1950ರ ಬಳಿಕದಿಂದ ಈವರೆಗಿನ ಜನನ ದರದ ಅಂಕಿಅಂಶ ಗಳು ಸಾರಿ ಹೇಳುತ್ತಿವೆ. 1950ರಲ್ಲಿದ್ದ ಭಾರತ ಈಗಿಲ್ಲ. ಹಸಿವು, ಬಡತನ, ಅಪೌಷ್ಟಿಕತೆ, ಅನಾರೋಗ್ಯ, ಅನಕ್ಷರತೆ ಇವುಗಳನ್ನೇ ಹೊದ್ದು ಮಲಗಿದ್ದ 1950ರ ಭಾರತಕ್ಕೆ ಹೋಲಿಸಿದರೆ 2021ರ ಭಾರತ ಸಾಕಷ್ಟು ಬದಲಾವಣೆಯಾಗಿದೆ. ಅಪೌಷ್ಟಿಕತೆಯ ನಿವಾರಣೆಯಲ್ಲಿ ಭಾರೀ ಪ್ರಗತಿ ಸಾಧ್ಯವಾಗಿದೆ. ಅನಕ್ಷರತೆಗೆ ಕಡಿವಾಣ ಬಿದ್ದಿದೆ. ಹಸಿವನ್ನು ನಿವಾರಿಸುವುದಕ್ಕಾಗಿ ಉಚಿತ ಪಡಿತರ ವಿತರಣೆಯಂಥ ಕಾರ್ಯಕ್ರಮಗಳು ದೊಡ್ಡಮಟ್ಟದ ಪರಿಣಾಮ ಬೀರುತ್ತಿವೆ. ಜನರ ಜೀವನ ಮಟ್ಟದ ಮೇಲೆ ನಿಧಾನಗತಿಯಲ್ಲಿ ಆಗುತ್ತಾ ಬಂದ ಪ್ರಗತಿಯ ಈ ಪರಿಣಾಮವು ಜನನ ಅನುಪಾತದ ಮೇಲೂ ಪ್ರಭಾವ ಬೀರುತ್ತಲೂ ಇದೆ. ಈ ಬದಲಾವಣೆ ಎಷ್ಟು ಕ್ಷಿಪ್ರಗತಿಯಲ್ಲಿ ಸಾಗುತ್ತಾ ಬಂದಿದೆ. ಎಷ್ಟೆಂದರೆ, ಕೇವಲ 70 ವರ್ಷಗಳೊಳಗೆ ಒಂದು ದಂಪತಿಗೆ 6 ಮಕ್ಕಳಿದ್ದಲ್ಲಿಂದ ಒಂದು ದಂಪತಿಗೆ 2 ಮಕ್ಕಳು ಎಂಬಲ್ಲಿವರೆಗೆ. ಹಾಗಂತ,
ಈ ಬದಲಾವಣೆಗೆ ಯಾವುದೇ ಕಾಯ್ದೆಯು ಕಾರಣವಲ್ಲ. ಜನನ ನಿಯಂತ್ರಣಕ್ಕಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ‘ಮಿಶನ್ ಪರಿವಾರ್ ವಿಕಾಸ್’ ಎಂಬಂಥ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದರೂ ಅದೂ ಕಾಯ್ದೆಯಲ್ಲ. ಜನರು ಸ್ವಯಂ ಪ್ರೇರಿತವಾಗಿ ಜನನ ನಿಯಂತ್ರಣ ಮಾಡಿಕೊಳ್ಳುವಂತೆ ಒಲಿಸುವುದೇ ಇದರ ಉದ್ದೇಶ. ಜನನ ನಿಯಂತ್ರಣಕ್ಕೆ ಸಂಬಂಧಿಸಿ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳು ಜಾರಿಯಾಗಿರಬಹುದಾದರೂ ಅವು ಯಾವುವೂ ಕಾಯಿದೆಯಾಗಿ ಗುರುತಿಸಿಕೊಂಡಿಲ್ಲ. ಅವೆಲ್ಲವೂ ಜನಜಾಗೃತಿಯ ಭಾಗವಾಗಿಯಷ್ಟೇ ಇದೆ. ಕಳೆದ 70 ವರ್ಷಗಳಲ್ಲಿ ಯಾವ ಕಾಯಿದೆಯನ್ನೂ ರೂಪಿಸದೆಯೇ ಜನಸಂಖ್ಯಾ ದರವನ್ನು 6 ಮಕ್ಕಳಿಂದ 2 ಮಕ್ಕಳಿಗೆ ಇಳಿಸಲು ಈ ದೇಶಕ್ಕೆ ಸಾಧ್ಯವಾಗಿದೆಯೆಂದಾದರೆ, ಮತ್ತೇಕೆ ಕಾಯಿದೆಯ ಮಾತು? ಜನಸಂಖ್ಯಾ ನಿಯಂತ್ರಣ ಕಾಯ್ದೆ ಎಂಬ ಗುಮ್ಮನನ್ನು ತೋರಿಸುತ್ತಿರುವುದರ ಹಿಂದಿನ ಉದ್ದೇಶವೇನು? ನಿಜವಾಗಿ,
ಜನನವನ್ನು ಕಾನೂನಿನ ಮೂಲಕ ಬಲವಂತದಿಂದ ತಡೆಯಲು ಹೊರಟ ಚೀನಾ ಇವತ್ತು ಕಂಗಾಲಾಗಿ ಕುಳಿತಿದೆ. ಎಲ್ಲಿಯವರೆಗೆಂದರೆ, ಒಂದೇ ಮಗು ಎಂಬ ನೀತಿಯನ್ನು ರದ್ದುಪಡಿಸಿ, ಮೂರು ಮಕ್ಕಳಿಗೂ ಅವಕಾಶ ಕೊಡುವಷ್ಟು ಉದಾರ ನೀತಿಗೆ ಅದು ಜೋತು ಬಿದ್ದಿದೆ. ಜಪಾನ್, ರಷ್ಯಾ, ಆಸ್ಟ್ರೆಲಿಯಾ ಸಹಿತ ಮುಂದುವರಿದಿರುವ ಸಾಕಷ್ಟು ರಾಷ್ಟ್ರಗಳು ಮಕ್ಕಳನ್ನು ಹೆಚ್ಚಿಸುವಂತೆ ತನ್ನ ನಾಗರಿಕರ ಮೇಲೆ ಒತ್ತಡ ಹೇರತೊಡಗಿವೆ. ಮಗು ಹೆರುವ ಹೆತ್ತವರಿಗೆ ಭಾರೀ ಮೊತ್ತದ ಬಹುಮಾನವನ್ನೂ ಘೋಷಿಸಿವೆ. ಭಾರತ ಸದ್ಯ ಆ ಒತ್ತಡದ ಸ್ಥಿತಿಯಲ್ಲಿಲ್ಲ. ಆದರೆ, ಜನನ ನಿಯಂತ್ರಣ ಕಾಯ್ದೆ ಜಾರಿಯಾದರೆ ಕ್ರಮೇಣ ಜನರಿಗೆ ಆ ನಿಯಂತ್ರಣ ಅಭ್ಯಾಸವಾಗುತ್ತದೆ. ಮುಂದೆ ಜನನಾನುಪಾತ ಅಪಾಯಕಾರಿ ಮಟ್ಟಕ್ಕೆ ಇಳಿದರೂ ಜನರು ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಹಿಂಜರಿಯುವ ಸಾಧ್ಯತೆ ಚೀನಾದಂತೆ ಇಲ್ಲೂ ತಲೆದೋರಬಹುದು. ಜನಸಂಖ್ಯೆಯನ್ನು ಹೊರೆ ಎಂದು ತಿಳಿದುಕೊಳ್ಳುವ ಯಾವುದೇ ದೇಶ, ಕ್ರಮೇಣ ವೃದ್ಧರನ್ನು ಹೊಂದಿದ ದೇಶವಾಗಿ ಮಾರ್ಪಾಡಬಲ್ಲುದು ಎಂಬುದಕ್ಕೆ ಈಗಿನ ಜಾಗತಿಕ ಬೆಳವಣಿಗೆಗಳಲ್ಲೇ ಉತ್ತರ ಇದೆ. ಅಂದಹಾಗೆ,
ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣ, ಜನಸಂಖ್ಯೆಯಲ್ಲ. ಅದು ಶುದ್ಧ ರಾಜಕೀಯದ ಬೇಡಿಕೆ. ಮುಸ್ಲಿಮರು ಬಹುಸಂಖ್ಯಾತರಾಗಲಿದ್ದಾರೆ ಎಂಬ ಅವರ ಹೇಳಿಕೆಗಳೇ ಇದಕ್ಕೆ ಪರಮ ಆಧಾರ. ಅವರಿಗೆ ಮುಸ್ಲಿಮ್ ಎಂಬುದು ರಾಜಕೀಯ ಆಯುಧ. ಈ ಆಯುಧವನ್ನು ಝಳಪಿಸಿದರೆ ಓಟುಗಳು ಉದುರುತ್ತವೆ ಎಂಬ ನಂಬಿಕೆ ಅವರಲ್ಲಿದೆ. ಆದ್ದರಿಂದ ಮುಸ್ಲಿಮರನ್ನು ಭೂತದಂತೆ ಬಿಂಬಿಸುವ ಅನಿವಾರ್ಯತೆ ಅವರಿಗಿದೆ. ನಿಜವಾಗಿ,
ಜನಸಂಖ್ಯೆಯ ಹೆಚ್ಚಳಕ್ಕೂ ಧರ್ಮಕ್ಕೂ ಸಂಬಂಧ ಇಲ್ಲ. ನಗರ ಪ್ರದೇಶದ ನಿವಾಸಿಗಳಲ್ಲಿ ಜನಸಂಖ್ಯಾ ದರವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಿದೆ. ಇದರಲ್ಲಿ ಹಿಂದೂ ಮುಸ್ಲಿಮ್ ಎಂಬ ಬೇಧವೂ ಇಲ್ಲ. ಜನರ ಜೀವನ ಮಟ್ಟವೇ ಜನನ ಪ್ರಮಾಣ ಏರಿಳಿತಕ್ಕಿರುವ ಬಹುಮುಖ್ಯ ಕಾರಣ. ಆದರೆ, ಬಿಜೆಪಿ ಮತ್ತು ಪರಿವಾರ ಈ ಕಟು ಸತ್ಯವನ್ನು ಅಡಗಿಸಿ ಸುಳ್ಳು ಹೇಳುತ್ತಿದೆ. ಅಷ್ಟೇ.
No comments:
Post a Comment