Tuesday, 12 April 2022

6ನೇ ತರಗತಿ ಮಕ್ಕಳಿಗೆ ಅನ್ವಯವಾಗುವ ದೇಶದ್ರೋಹ ಇವರಿಗೇಕಿಲ್ಲ?





ಹರಿದ್ವಾರದ ‘ಧರ್ಮಸಂಸದ್’ನಲ್ಲಿ ಮಾಡಲಾದ ದ್ವೇಷ ಭಾಷಣವು ದೇಶದ ಗಡಿಯನ್ನೂ ಮೀರಿ ಜಾಗತಿಕ ಗಮನ ಸೆಳೆದಿರುವುದು  ಒಂದೆಡೆಯಾದರೆ, ಇನ್ನೊಂದೆಡೆ ಸಂಸದ ತೇಜಸ್ವಿ ಸೂರ್ಯ ಉಡುಪಿ ಮಠದಲ್ಲಿ ಅತ್ಯಂತ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ.  ಇದರ ನಡುವೆ ಅಲ್ಲಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ಗುರಿಯಾಗಿಸಿ ಹಲ್ಲೆ ಮತ್ತು ಹಿಂಸಾಚಾರಗಳು ದಿನನಿತ್ಯವೆಂಬಂತೆ  ನಡೆಯುತ್ತಿವೆ.  ಮತಾಂತರ ನಿಷೇಧ ವಿಧೇಯಕವನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವುದಕ್ಕಿಂತ  ಮೊದಲು ರಾಜ್ಯದಲ್ಲಿ ಕ್ರೈಸ್ತರ ಮೇಲೆ ದಾಳಿ  ಆರಂಭವಾಯಿತು. ಇದಕ್ಕೆ ಅಧಿಕೃತ ಚಾಲನೆಯನ್ನು ಕೊಟ್ಟದ್ದು ಶಾಸಕ ಗೂಳಿಹಟ್ಟಿ ಶೇಖರ್. ತನ್ನ ತಾಯಿ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ  ಎಂದು ಅವರು ವಿಧಾನಸಭೆಯಲ್ಲಿ ಹೇಳುವ ಮೂಲಕ ಮತಾಂತರ ವಿರೋಧಿ ವಿಧೇಯಕದ ಅನಿವಾರ್ಯತೆಯನ್ನು ಸಾರುವ  ವಾತಾವರಣವನ್ನು ಹುಟ್ಟು ಹಾಕಿದರು. ಆ ಬಳಿಕದಿಂದ ಕ್ರೈಸ್ತ ಪ್ರಾರ್ಥನಾಲಯ ಮತ್ತು ಚರ್ಚ್ಗಳ ಮೇಲೆ ನಿರಂತರ ದಾಳಿಗಳು  ನಡೆಯತೊಡಗಿದುವು. ಇದೀಗ ಸ್ವತಃ ಗೂಳಿಹಟ್ಟಿ ಶೇಖರ್ ಅವರೇ ತನ್ನ ಮಾತನ್ನು ನುಂಗಿಕೊಂಡಿದ್ದಾರೆ. ತನ್ನ ತಾಯಿ ಕ್ರೈಸ್ತ ಧರ್ಮ  ಸ್ವೀಕರಿಸಿದ್ದಾರೋ ಇಲ್ಲವೋ ಎಂಬುದು ತನಗೆ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ದರೆ,

 ಅವರು ವಿಧಾನಸಭೆಯಲ್ಲಿ ಕಣ್ಣೀರಿಳಿಸಿ  ಹೇಳಿದ್ದು ಸುಳ್ಳೇ? ತನ್ನ ತಾಯಿಯ ಮತಾಂತರದ ಬಗ್ಗೆಯೇ ಖಚಿತವಾಗಿ ಹೇಳಲು ಓರ್ವ ಶಾಸಕನಿಗೆ ಆಗುತ್ತಿಲ್ಲ ಎಂದ ಮೇಲೆ, ಈ  ದಾಳಿ ಮಾಡುವ ಖಾಸಗಿ ಪಡೆಗಳಿಗೆ ಮತಾಂತರದ ಬಗ್ಗೆ ಎಷ್ಟು ಗೊತ್ತಿರಬಹುದು? ಇವರ ಆರೋಪಗಳೂ ಗೂಳಿಹಟ್ಟಿ  ಶೇಖರ್‌ರಂಥದ್ದೇ  ನಕಲಿಯೇ? ಕ್ರೈಸ್ತರನ್ನು ಗುರಿ ಮಾಡಲು ಬೊಮ್ಮಾಯಿ ಸರ್ಕಾರವೇ ಗೂಳಿಹಟ್ಟಿ ಶೇಖರ್‌ರನ್ನು ದಾಳವಾಗಿ  ಬಳಸಿಕೊಂಡಿತೇ? ಕ್ರಿಸ್‌ಮಸ್ ಆಚರಣೆಯ ಹೆಸರಲ್ಲಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಹಲವು ಕಡೆ ಕ್ರೈಸ್ತರ ಶಾಲೆ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಲಾಗಿದೆ. ಕ್ರೈಸ್ತರನ್ನು ಭೀತಿಯಲ್ಲಿ ಕೆಡಹುವುದು ಇದರ ಒಂದು ಭಾಗವಾದರೆ, ಮುಸ್ಲಿಮರನ್ನು ಪ್ರಚೋದಿಸುವುದು ದ್ವೇಷ ಭಾಷಣಗಳ ಗುರಿಯಾಗಿದೆ. ನಿಜವಾಗಿ,

ಧರ್ಮಸಂಸದ್‌ನಲ್ಲಿ ಇನ್ನೊಂದು ಧರ್ಮೀಯರನ್ನು ಕಡಿಯುವ, ಕೊಲ್ಲುವ ಮತ್ತು ಅವರ ವಿರುದ್ಧ ಶಸ್ತ್ರ  ಎತ್ತುವಂತಹ ಆಗ್ರಹ ಕೇಳಿ  ಬರುವುದೇ ಆಘಾತಕಾರಿ. ಧರ್ಮಸಂಸದ್ ಸಭೆ ನಡೆದ ಉತ್ತರಾಖಂಡದ ಹರಿದ್ವಾರವು ಆ ಸಭೆ ನಡೆಯುವುದಕ್ಕಿಂತ ಮೊದಲೇನೂ ಅಶಾಂತವಾಗಿರಲಿಲ್ಲ. ಹಿಂದೂ-ಮುಸ್ಲಿಮ್ ಘರ್ಷಣೆಗಳೂ ನಡೆದಿರಲಿಲ್ಲ. ಹೀಗಿರುವಾಗ, ಮುಸ್ಲಿಮರನ್ನು ಕಡಿಯಲು ಮತ್ತು ಕೊಲ್ಲಲು ಕರೆ  ಕೊಡುವ ಭಾಷಣಗಳು ಹರಿದ್ವಾರದ ಧರ್ಮಸಂಸದ್‌ನಲ್ಲಿ ಏಕೆ ನಡೆದುವು? ಯಾವ ಪ್ರಚೋದನೆಯೂ ಇಲ್ಲದೇ ಪ್ರಚೋದನಾತ್ಮಕ  ಭಾಷಣಗಳು ನಡೆಯುವುದೇಕೆ? ಅದರಲ್ಲೂ ಧಾರ್ಮಿಕ ಮುಖಂಡರೇ ಇಂಥ ಧರ್ಮದ್ವೇಷದ ಮಾತುಗಳನ್ನು ಪುಂಖಾನುಪುಂಖವಾಗಿ  ಹರಿಯಬಿಟ್ಟರೇಕೆ? ಯಾಕೆ  ಸಬ್ಕಾ ಸಾಥ್ ಎನ್ನುವ ಪ್ರಧಾನಿಯಾಗಲಿ, ಸರ್ವರಿಗೂ ಸಮಾನ ನ್ಯಾಯ ನೀಡಬೇಕಾದ ಉತ್ತರಾಖಂಡ  ಸರ್ಕಾರವಾಗಲಿ ಏನನ್ನೂ ಹೇಳುತ್ತಿಲ್ಲ? ಸುಮಾರು 20 ಕೋಟಿಯಷ್ಟಿರುವ ಸಮುದಾಯದ ವಿರುದ್ಧ ದಾಳಿಗೆ ಬಹಿರಂಗ ಕರೆ ಕೊಟ್ಟ  ಬೆಳವಣಿಗೆಯ ಬಳಿಕವೂ ಯಾಕೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ? ನಾಟಕ ಪ್ರದರ್ಶಿಸಿದ ಬೀದರ್‌ನ 6ನೇ  ತರಗತಿಯ ಮಕ್ಕಳು ಮತ್ತು ಹೆತ್ತವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವ ದೇಶವೊಂದರಲ್ಲಿ ಅಥವಾ ಹಾಸ್ಯಗೋಷ್ಠಿ ನಡೆಸುವ  ಕಾಮೆಡಿಯನ್‌ಗಳ ಮೇಲೆ ಯುಎಪಿಎ ಹೊರಿಸುವ ದೇಶದಲ್ಲಿ ಯಾಕೆ ನರಮೇಧಕ್ಕೆ ಕರೆ ಕೊಡುವುದು ದೇಶದ ಭದ್ರತೆಗೆ ಸವಾಲು ಅನ್ನಿಸುವುದಿಲ್ಲ? ಧರ್ಮಸಂಸದ್‌ನ ದ್ವೇಷ ಭಾಷಣದ ನಾಲ್ಕು ದಿನಗಳ ಬಳಿಕ ನಾರಾಯಣ್ ಸಿಂಗ್ ತ್ಯಾಗಿ ಎಂಬ ವಸೀಮ್ ರಿಝ್ವಿಯ  ಮೇಲೆ ತಕ್ಷಣ ಪ್ರಕರಣ ದಾಖಲಿಸಿಕೊಂಡದ್ದನ್ನು ಬಿಟ್ಟರೆ ಉಳಿದವರ ಬಗ್ಗೆ ವಿಳಂಬ ಮಾಡಲಾಗಿದೆ? ಒಂದುಕಡೆ, 

ಇದೇ ಸಂಘಪರಿವಾರ ಲವ್  ಜಿಹಾದ್‌ನ ಮಾತಾಡುತ್ತಿರುತ್ತದೆ. ಮುಸ್ಲಿಮ್ ಯುವಕರು ಹಿಂದೂ ಯುವತಿಯನ್ನು ಪ್ರೇಮಿಸಿ ಮದುವೆಯಾಗಿ ಬಳಿಕ ಭಯೋತ್ಪಾದನಾ  ಕೃತ್ಯಗಳಿಗೆ ಬಳಸುತ್ತಾರೆ ಎಂಬ ಮಾತನ್ನೂ ಅದು ಹೇಳುತ್ತಿರುತ್ತದೆ. ಹಾಗಿದ್ದರೆ,
ವಸೀಮ್ ರಿಝ್ವಿಯನ್ನು ಅದು ನಡೆಸಿಕೊಂಡದ್ದು ಹೇಗೆ? ಈ ಶಿಯಾ ನಾಯಕ ಇತ್ತೀಚೆಗಷ್ಟೇ ಹಿಂದೂ ಧರ್ಮಕ್ಕೆ ಮತಾಂತರವಾಗಿ ತನ್ನ  ಹೆಸರನ್ನು ನಾರಾಯಣ ಸಿಂಗ್ ತ್ಯಾಗಿ ಎಂದು ಬದಲಿಸಿಕೊಂಡರು ಮತ್ತು ಆ ಬಳಿಕ ಹರಿದ್ವಾರದ ಧರ್ಮಸಂಸದ್‌ನಲ್ಲಿ ಭಾಗವಹಿಸಿದರು.  ಇತರ ಅತಿಥಿಗಳಂತೆ ಅವರೂ ಭಾಷಣ ಮಾಡಿದರು. ಆದರೆ ಮುಸ್ಲಿಮರ ವಿರುದ್ಧ ಶಸ್ತ್ರ  ಎತ್ತುವಂತೆ ಕರೆಕೊಟ್ಟ ಇತರೆಲ್ಲರ ಬಗ್ಗೆಯೂ ಮೃದು ನೀತಿ ತೋರಿ ಕೇವಲ ರಿಝ್ವಿಯ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿರುವುದೇಕೆ? ಏನಿದರ ಅರ್ಥ? ರಿಝ್ವಿಯನ್ನು ಬಲಿಪಶು  ಮಾಡುವುದಕ್ಕಾಗಿಯೇ ಮತಾಂತರಗೊಳಿಸಲಾಯಿತೇ? ನಿಜವಾಗಿ,

ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿರುವಂತೆ ಕಾಣಿಸುತ್ತಿಲ್ಲ. ಅದೊಂದು ಅಸ್ತ್ರ  ಅಷ್ಟೇ. ಗೋಹತ್ಯಾ ನಿಷೇಧ ಕಾಯ್ದೆಯಂತೆ ಇದೂ ಒಂದು ನೆಪ. ಇವೆರಡರ ನಿಜವಾದ ಉದ್ದೇಶ- ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ  ಹಗೆ-ಧಗೆಯನ್ನು ಚಾಲ್ತಿಯಲ್ಲಿಡುವುದು. ಈಗಾಗಲೇ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆಯಿಂದ ಆಗಿರುವ ಲಾಭವೇನು  ಎಂದು ಪ್ರಶ್ನಿಸಿದರೆ ಸಮರ್ಪಕ ಉತ್ತರ ಯಾರಲ್ಲೂ ಇಲ್ಲ. ಗೋಮಾಂಸ ರಾಜ್ಯದ ಎಲ್ಲೆಡೆ ಲಭ್ಯವಿದೆ. ಗೋಮಾಂಸ ಅಲಭ್ಯತೆಯ ಬಗ್ಗೆ  ಹೊಟೇಲುಗಳೋ ನಾಗರಿಕರೋ ದೂರಿಕೊಂಡದ್ದು ಎಲ್ಲೂ ನಡೆದಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಗಿಂತ ಮೊದಲಿನ ಸ್ಥಿತಿ ಹೇಗಿತ್ತೋ  ಹಾಗೆಯೇ ಈಗಿನ ಸ್ಥಿತಿಯೂ ಇದೆ. ಹಾಗಿದ್ದರೆ, ಈ ಕಾಯ್ದೆಯನ್ನು ಜಾರಿಗೊಳಿಸುವುದರ ಉದ್ದೇಶವೇನಿತ್ತು? ಉದ್ದೇಶ ಒಂದೇ-  ಸರ್ಕಾರಕ್ಕೆ ತನ್ನ ಬೆಂಬಲಿಗರನ್ನು ತೃಪ್ತಿಪಡಿಸುವ ಅಗತ್ಯವಿತ್ತೇ ಹೊರತು ನಿರುಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯುವುದಲ್ಲ.  ಹಾಗೇನಾದರೂ ಮಾಡಿದರೆ ಇಡೀ ರೈತ ಸಮೂಹವೇ ತಂತಮ್ಮ ನಿರುಪಯುಕ್ತ ಜಾನುವಾರುಗಳನ್ನು ಅಟ್ಟಿಕೊಂಡು ಬಿಜೆಪಿ ಜನಪ್ರತಿನಿಧಿಗಳ ಮನೆ ಮುಂದೆ ನಿಲ್ಲಿಸಿಯಾರು ಎಂಬ ಭೀತಿ ಸರ್ಕಾರಕ್ಕೆ ಈಗಲೂ ಇದೆ. ಈ ಮತಾಂತರ ನಿಷೇಧ ಕಾಯ್ದೆಯ ಹಿಂದಿರುವುದೂ  ಇಂಥದ್ದೇ  ಒತ್ತಡ ನಿವಾರಣಾ ತಂತ್ರ. ತನ್ನ ಬೆಂಬಲಿಗರನ್ನು ತೃಪ್ತಿಪಡಿಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಅದಕ್ಕಾಗಿ ಕಾಯ್ದೆಯನ್ನು  ರೂಪಿಸಿ ಜಾರಿಗೆ ತರಲೇಬೇಕಿದೆ. ಹಾಗೆ ಮಾಡುವುದರಿಂದ ಆಗುವ ಲಾಭ ಏನೆಂದರೆ, 

ಮುಸ್ಲಿಮ್ ಮತ್ತು ಕ್ರೈಸ್ತರತ್ತ ಜನರ ಗಮನ  ಹರಿಯುತ್ತದೆ. ಸಂಘಪರಿವಾರದ ಮಂದಿ ಸರ್ಕಾರದ ವೈಫಲ್ಯದ ಕುರಿತು ಅಸಮಾಧಾನದ ಮಾತುಗಳನ್ನು ತಮ್ಮೊಳಗೇ ಹಂಚಿಕೊಂಡು   ಬುಸುಗುಡುತ್ತಾ ತಿರುಗುವುದನ್ನು ತಪ್ಪಿಸಿದಂತಾಗುತ್ತದೆ. ಈಗಾಗಲೇ ಬಿಜೆಪಿಯ ಒಳಗಡೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ  ಬದಲಾವಣೆಗೆ ಒತ್ತಡಗಳು ಹೆಚ್ಚುತ್ತಿವೆ. ಸರ್ಕಾರ ಪ್ರತಿ ಕ್ಷೇತ್ರದಲ್ಲೂ ವಿಫಲಗೊಂಡಿದೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿದೆ.  ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ತಮ್ಮವ ಎಂದು ಒಪ್ಪಿಕೊಳ್ಳಲು ಮೂಲ ನಿವಾಸಿ ಬಿಜೆಪಿಗರು ಈಗಲೂ ತಯಾರಿಲ್ಲ. ಮುಂದಿನ  ವಿಧಾನಸಭಾ ಚುನಾವಣೆಗಿಂತ ಮೊದಲು ಮುಖ್ಯಮಂತ್ರಿ ಬದಲಾವಣೆಯಾಗಬೇಕು ಎಂಬ ಒತ್ತಾಯ ಬಿಜೆಪಿಯ ಒಂದು ಗುಂಪಿನಿಂದ  ಬಲವಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಇನ್ನೊಂದೆಡೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು  ರಾಜ್ಯ ಸರ್ಕಾರದ ವಿರುದ್ಧ 40% ಕಮಿಶನ್ ಸಹಿತ ವಿವಿಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಸಕ್ರಿಯವಾಗಿದೆ. ಹೀಗಿರುವಾಗ,  ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲೇ  ಎದುರಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬಂಥ  ಮಾತುಗಳೂ  ಬಿಜೆಪಿಯೊಳಗೆ ಬಲವಾಗಿಯೇ ಕೇಳಿಬರುತ್ತಿವೆ. ಹೀಗಿರುವಾಗ,

ಈ ಎಲ್ಲ ಜಂಜಾಟಗಳಿಂದ  ಪಾರಾಗಬೇಕಾದರೆ ಜನರ ಗಮನ ಸೆಳೆಯಬಲ್ಲ ಮತ್ತು ಒಟ್ಟು ಚರ್ಚಾ ವಿಷಯವನ್ನೇ ಪಲ್ಲಟಗೊಳಿಸಬಲ್ಲ  ವಸ್ತುವೊಂದನ್ನು ಹುಡುಕುವುದು ಬಿಜೆಪಿಯ ಪಾಲಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ ಅದು ಮತಾಂತರ ನಿಷೇಧ ಕಾಯ್ದೆಯನ್ನು  ಜಾರಿಗೊಳಿಸುವ ತರಾತುರಿಯಲ್ಲಿ ಇದ್ದಂತಿದೆ. ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ಸಾರ್ವಜನಿಕ  ಚರ್ಚೆಯೊಂದನ್ನು ಹುಟ್ಟು ಹಾಕುವುದು ಅದರ ಉದ್ದೇಶ. ಇದಕ್ಕೆ ಪೂರಕವಾಗಿ ಬೇರೆಬೇರೆ ವ್ಯಕ್ತಿಗಳಿಂದ ಮುಸ್ಲಿಮ್ ಮತ್ತು ಕ್ರೈಸ್ತ  ವಿರೋಧಿ ಹೇಳಿಕೆಗಳನ್ನು ಹೊರಡಿಸುವುದು ಅದರ ಗುರಿ. ಈ ಚರ್ಚೆಯ ಕಾವು ಮುಗಿಯುವ ವೇಳೆಗೆ ಲವ್ ಜಿಹಾದ್ ಮಸೂದೆಯ ನ್ನು ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಬಹುದು. ಅದರ ಮೇಲೆ ಮತ್ತೊಂದಿಷ್ಟು ಚರ್ಚೆ. ಆಗ ಚುನಾವಣೆಯ ಸಮಯ ಬಂದಿರುತ್ತದೆ. ಹೀಗೆ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಗೆಲ್ಲಬಹುದು ಎಂಬುದು ಸರ್ಕಾರದ ತಂತ್ರ. ಅದರ ಭಾಗವೇ ಈ ತೇಜಸ್ವಿ  ಸೂರ್ಯ ಎಂದು ಹೇಳಬಹುದು.

No comments:

Post a Comment