ಜನಪ್ರಿಯತೆಯ ಸಮೀಕ್ಷೆಯೊಂದನ್ನು ನಡೆಸಿದರೆ ಫಲಿತಾಂಶ ಪಟ್ಟಿಯ ಅತ್ಯಂತ ಕೆಳತುದಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕೋಮು ಹಿಂಸೆಗೆ ಪ್ರಚೋದನೆ ಕೊಡುವ ಸರಣಿ ಘಟನೆಗಳು ನಡೆಯುತ್ತಿವೆ. ಧಾರವಾಡದ ನುಗ್ಗಿಕೇರಿಯ ಹನುಮ ದೇವಾಲಯದ ಆವರಣದಲ್ಲಿ ಕಲ್ಲಂಗಡಿ ಮಾರಾಟಗಾರ ನಬಿಸಾಬ್ ಜೊತೆಗೆ ನಡೆದ ದುರ್ವರ್ತನೆ ಈ ಪ್ರಚೋದನಕಾರಿ ಕೃತ್ಯದ ತುತ್ತತುದಿಯಾದರೆ, ಹಿಜಾಬ್ ಇದರ ಆರಂಭ. ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆದಾಗ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ತುಟಿ ಬಿಚ್ಚಿದ್ದ ಮುಖ್ಯಮಂತ್ರಿಗಳು, ಆ ಬಳಿಕ ಮಾತಾಡಬೇಕಾದ ಸಂದರ್ಭಗಳಲ್ಲೆಲ್ಲಾ ಮೌನಕ್ಕೆ ಜಾರಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರು ಪ್ರತಿದಿನವೆಂಬಂತೆ ಹಿಂಸೆಗೆ ಗುರಿಯಾಗಿದ್ದಾರೆ. ಅವರದೇ ಪರಿವಾರ ದಿನಂಪ್ರತಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಅಷ್ಟಕ್ಕೂ,
ಅವರು ಈ ಹಿಂದೊಮ್ಮೆ ಧರಿಸಿ ಸದ್ಯ ಹ್ಯಾಂಗರ್‌ನಲ್ಲಿ ತೂಗಿ ಹಾಕಿರುವ ಸಮಾಜವಾದಿ ಬಟ್ಟೆಯನ್ನು ಬೊಟ್ಟು ಮಾಡಿಕೊಂಡು, ‘ಅವರು ಬಿಜೆಪಿಯಲ್ಲಿದ್ದರೂ ಮನುಷ್ಯ ವಿರೋಧಿ ಆಗಲಾರರು..’ ಎಂಬಂತಹ ಮೃದು ಮಾತುಗಳು ಮುಖ್ಯಮಂತ್ರಿ ಹುದ್ದೆ ಸ್ವೀಕಾರದ ಸಂದರ್ಭದಲ್ಲಿ ಕೇಳಿಬಂದಿತ್ತು. ಆದರೆ ಈಗ ಈ ಕಳಚಿಟ್ಟ ಪೂರ್ವಕಾಲದ ಬಟ್ಟೆಯೇ ನೂರಾರು ಸಂದೇಹಗಳನ್ನು ಹುಟ್ಟು ಹಾಕುತ್ತಿವೆ. ಅವರು ಈ ಹಿಂದೆ ಧರಿಸಿಕೊಂಡಿದ್ದ ಸಮಾಜವಾದಿ ಬಟ್ಟೆ ನಕಲಿಯಾಗಿತ್ತೇ? ಅವರು ಹೊರಗಡೆ ಸಮಾಜವಾದಿಯಾಗಿ ಮತ್ತು ಒಳಗಡೆ ಅತ್ಯಂತ ಮನುಷ್ಯ ವಿರೋಧಿಯಾಗಿ- ಹೀಗೆ ದ್ವಿಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದರೇ? ಅವರ ಈ ದ್ವಿಮುಖ ಪಾತ್ರವನ್ನು ಚೆನ್ನಾಗಿ ಅರಿತುಕೊಂಡ ಕಾರಣಕ್ಕಾಗಿಯೇ ಬಿಜೆಪಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತೇ? ಇಲ್ಲದಿದ್ದರೆ ಜನತಾದಳದ ಕುಡಿಯೊಂದು ಬಿಜೆಪಿಗೆ ಹಾರಿದ ತಕ್ಷಣ ಬಿಜೆಪಿಯ ಕರ್ಮಠ ಅನುಯಾಯಿಗಿಂತಲೂ ತೀವ್ರವಾಗಿ ಅದರ ವಿಚಾರಧಾರೆಯನ್ನು ಸಹಿಸಿಕೊಂಡಿರಲು ಬೊಮ್ಮಾಯಿಗೆ ಹೇಗೆ ಸಾಧ್ಯವಾಯಿತು? ಇಂಥ ಪ್ರಶ್ನೆಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ನಿಜವಾಗಿ,
ಹಿಜಾಬ್‌ಗೆ ಅವಕಾಶ ಕೊಡುವಂತೆ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮುಂದಿಟ್ಟ ಬೇಡಿಕೆಯನ್ನು ತಿರಸ್ಕರಿಸಿರುವುದರ ಹಿಂದೆ ಸಂಚು ಅಡಗಿತ್ತೇ ಎಂಬುದು ಆ ಬಳಿಕದ ಬೆಳವಣಿಗೆಗಳನ್ನು ನೋಡುವಾಗ ಸಂಶಯ ಎದುರಾಗುತ್ತದೆ. ಹಿಜಾಬ್ ಎಂಬುದು ಹಿಂದೂ-ಮುಸ್ಲಿಮ್ ಸಂಗತಿಯಲ್ಲ. ಇದು ಸರ್ಕಾರ ಮತ್ತು ವಿದ್ಯಾರ್ಥಿನಿಯರ ನಡುವಿನ ತಗಾದೆ. ಉಡುಪಿಯ ಕಾಲೇಜು ಆಡಳಿತ ಮಂಡಳಿ ಮತ್ತು ಮುಸ್ಲಿಮ್ ವಿದ್ಯಾರ್ಥಿನಿಯರ ನಡುವಿನ ವಿಷಯವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಉದ್ದೇಶದಿಂದಲೇ ಹಿಜಾಬ್ ಬೇಡಿಕೆಯನ್ನು ತಿರಸ್ಕರಿಸಲಾಯಿತೇ? ಸರ್ಕಾರದ ಸುತ್ತೋಲೆ ಸಮವಸ್ತ್ರದ ವಿರುದ್ಧವಾಗಿದ್ದರೂ ಶಾಲಾಭಿವೃದ್ಧಿ ಮಂಡಳಿಯು ಸಮವಸ್ತ್ರ ಕಡ್ಡಾಯಗೊಳಿಸಿರುವುದನ್ನು ಸರ್ಕಾರ ಪ್ರಶ್ನಿಸಲಿಲ್ಲವೇಕೆ? ‘ಯಾವುದಾದರೂ ಕಾಲೇಜು ಸುತ್ತೋಲೆ ಉಲ್ಲಂಘಿಸಿ ಸಮವಸ್ತ್ರ ನಿಯಮ ಜಾರಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ..’ ಎಂದು ಸರ್ಕಾರದ ಸುತ್ತೋಲೆಯಲ್ಲೇ ಇರುವಾಗ ಶಾಲಾಭಿವೃದ್ಧಿ ಮಂಡಳಿಯನ್ನು ತರಾಟೆಗೆತ್ತಿಕೊಳ್ಳುವ ಬದಲು ಸರ್ಕಾರ ವಿದ್ಯಾರ್ಥಿನಿಯರನ್ನೇ ಅಪರಾಧಿಗಳೆಂಬಂತೆ ನಡೆಸಿಕೊಂಡಿತೇಕೆ? ಮತ್ತು ಶಾಲಾಭಿವೃದ್ಧಿ ಮಂಡಳಿಯ ಮಾನ ಕಾಪಾಡುವುದಕ್ಕಾಗಿ ಬಳಿಕ ಈ ಹಿಂದಿನ ಸುತ್ತೋಲೆಯನ್ನೇ ತಿದ್ದಿತೇಕೆ? ಎಲ್ಲ ಕಾಲೇಜುಗಳೂ ತಮ್ಮ ಶೈಕ್ಷಣಿಕ ವರ್ಷವನ್ನು ಆರಂಭಿಸಿದ್ದು, ‘ಸಮವಸ್ತ್ರ ಇಲ್ಲ’ ಎಂಬ ಸರ್ಕಾರಿ ಸುತ್ತೋಲೆಯ ಆಧಾರದಲ್ಲಿ. ಹಾಗೆಯೇ ಉಡುಪಿ ವಿದ್ಯಾರ್ಥಿನಿಯರು ಹಿಜಾಬ್‌ನ ಬೇಡಿಕೆಯಿರಿಸಿದ್ದು ಶೈಕ್ಷಣಿಕ ವರ್ಷದ ಕೊನೆಯಲ್ಲಿ. ಅಲ್ಲಿವರೆಗೆ ಸಮವಸ್ತ್ರವೇ ತಪ್ಪು ಎಂದು ಹೇಳುತ್ತಿದ್ದ ಸರ್ಕಾರ, ಆ ಬಳಿಕ, ‘ಸಮವಸ್ತçದ ಭಾಗವಲ್ಲದಿರುವುದರಿಂದ ಹಿಜಾಬ್ ಧರಿಸುವಂತಿಲ್ಲ’ ಎಂಬ ಶಾಲಾಭಿವೃದ್ಧಿ ಮಂಡಳಿಯ ಮಾತಿಗೆ ಪೂರಕವಾಗಿ ಆ ಸುತ್ತೋಲೆಯನ್ನೇ ತಿದ್ದಿರುವುದರ ಅರ್ಥವೇನು? ಈ ಸಮಸ್ಯೆಯನ್ನು ದೀರ್ಘಕಾಲ ಎಳೆಯುವುದು ಸರ್ಕಾರದ ಉದ್ದೇಶವಾಗಿತ್ತೇ? ಆ ಮೂಲಕ ಹಿಂದೂ-ಮುಸ್ಲಿಮ್ ಆಗಿ ರಾಜ್ಯವನ್ನು ಒಡೆಯುವ ಹುನ್ನಾರ ನಡೆದಿತ್ತೇ? ಅದರ ಭಾಗವಾಗಿಯೇ ಕೇಸರಿ ಶಾಲು ರಂಗಕ್ಕಿಳಿಯಿತೇ? ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ಈ ಹಿಜಾಬ್ ಮತ್ತು ಕೇಸರಿ ಶಾಲುಗಳ ಮರೆಯಲ್ಲಿ ಅಡಗಿಸಿಡುವುದು ಇದರ ಹಿಂದಿನ ತಂತ್ರವಾಗಿತ್ತೇ? ಅಂದಹಾಗೆ,
ಈ ಹಿಜಾಬ್‌ನ ಬಳಿಕದಿಂದ ಧಾರಾವಾಡದ ನಬಿಸಾಬ್ ವರೆಗಿನ ಬೆಳವಣಿಗೆಗಳನ್ನು ನೋಡಿದರೆ ಸಂಶಯಿಸುವುದಕ್ಕೆ ಅನೇಕ ಪುರಾವೆಗಳು ಸಿಗುತ್ತವೆ. ಹಿಜಾಬ್ ವಿವಾದವು ಎರಡ್ಮೂರು ತಿಂಗಳವರೆಗೆ ರಾಜ್ಯದ ಗಮನವನ್ನು ಶಾಲಾ ಕ್ಯಾಂಪಸ್ಸು ಮತ್ತು ಕೋರ್ಟು ಕಲಾಪದ ಕಡೆಗೆ ಸೆಳೆಯಿತು. ನ್ಯಾಯಾಲಯದ ವಿಚಾರಣೆಯನ್ನು ಟಿ.ವಿ. ಚಾನೆಲ್‌ಗಳು ಲೈವ್ ಆಗಿ ಬಿತ್ತರಿಸಿದುವು. ಚರ್ಚೆಯ ಮೇಲೆ ಚರ್ಚೆ. ಆ ಬಳಿಕ ತೀರ್ಪು ಬಂತು ಮತ್ತು ಮುಸ್ಲಿಮರು ತೀರ್ಪಿಗೆ ಅಸಮಾಧಾನ ಸೂಚಿಸಿ ಸ್ವಯಂ ಪ್ರೇರಿತ ಬಂದ್ ಆಚರಿಸಿದರು. ಈ ಇಡೀ ಬೆಳವಣಿಗೆ ಮುಸ್ಲಿಮರು, ಸರ್ಕಾರ ಮತ್ತು ಕೋರ್ಟಿಗೆ ಸಂಬಂಧಿಸಿದುದೇ ಹೊರತು ಹಿಂದೂ ಮತ್ತು ಮುಸ್ಲಿಮ್ ಸಂಗತಿಯೇ ಅಲ್ಲ. ಆದರೆ ಸರ್ಕಾರದ ಸಚಿವರು ಮತ್ತು ಬೆಂಬಲಿಗರು ಈ ಇಡೀ ಬೆಳವಣಿಗೆಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದರು. ಮುಸ್ಲಿಮರಿಗೆ ಬಹಿಷ್ಕಾರ ಪರ್ವ ಆರಂಭವಾಯಿತು. ಹಲಾಲ್ ಚರ್ಚೆಯನ್ನು ಮುನ್ನೆಲೆಗೆ ತರಲಾಯಿತು. ಕುರ್‌ಆನನ್ನು ಪ್ರಶ್ನೆಗೊಳಪಡಿಸಲಾಯಿತು. ಲೌಡ್ ಸ್ಪೀಕರ್‌ನಲ್ಲಿ ಕೊಡುವ ಬಾಂಗನ್ನು ಪ್ರಶ್ನಿಸಲಾಯಿತು. ಅಂದಹಾಗೆ, ಸರ್ಕಾರಿ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿನಿಯರ ನಡುವಿನ ಖಾಸಗಿ ಸ್ವರೂಪದ ಸಂಗತಿಯೊಂದು ಈ ಹಂತಕ್ಕೆ ಬಂದು ನಿಂತಿರುವುದನ್ನು ಹೇಗೆ ಸಹಜ ಎಂದು ಒಪ್ಪಿಕೊಳ್ಳುವುದು? ಅಷ್ಟಕ್ಕೂ,
ಹಿಜಾಬ್ ವಿವಾದಕ್ಕಿಂತ ಮೊದಲು ರಾಜ್ಯ ಸರ್ಕಾರ ನಾಲ್ಕೂ ಕಡೆಯಿಂದ ಪ್ರಶ್ನೆಗೆ ಒಳಗಾಗಿತ್ತು. ಹಿಜಾಬ್ ಬೇಡಿಕೆಯ ಸಮಯದಲ್ಲಿ ಪಂಚರಾಜ್ಯಗಳಲ್ಲಿ ಚುನಾವಣಾ ತಯಾರಿ ನಡೆಯುತ್ತಿದ್ದುದರಿಂದ ತೈಲ ಬೆಲೆ ಏರಿಕೆಯೂ ಸ್ಥಗಿತಗೊಂಡಿತ್ತು. ಗ್ಯಾಸ್ ಸಿಲಿಂಡರೂ ತಣ್ಣಗಾಗಿತ್ತು. ಆಗ ರಾಜ್ಯ ಸರ್ಕಾರದ ವೈಫಲ್ಯಗಳೇ ಚರ್ಚೆಯ ಮುನ್ನೆಲೆಯಲ್ಲಿತ್ತು. ಆದರೆ ಇದೀಗ ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಚುನಾವಣೆಯ ಉದ್ದೇಶದಿಂದಲೇ ದೀರ್ಘ ನಾಲ್ಕೂವರೆ ತಿಂಗಳ ಕಾಲ ತೈಲ ಮತ್ತು ಗ್ಯಾಸ್ ಬೆಲೆಯನ್ನು ಏರಿಸದೇ ಸ್ಥಿರತೆ ಕಾಪಾಡಿಕೊಂಡಿದ್ದ ಕೇಂದ್ರ ಸರ್ಕಾರ, ಕಳೆದ ಎರಡೂವರೆ ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 10 ರೂಪಾಯಿಗಿಂತಲೂ ಅಧಿಕ ಏರಿಸಿದೆ. ಅಡುಗೆ ಅನಿಲದ ಬೆಲೆಯನ್ನು ಒಮ್ಮೆಲೇ 50 ರೂಪಾಯಿಗೆ ಏರಿಸಿದ ಕೇಂದ್ರ ಸರ್ಕಾರ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ 250 ರೂಪಾಯಿಯನ್ನು ಹೆಚ್ಚಿಸಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲಾಗುತ್ತಿದೆ. ಹೊಟೇಲುಗಳು ತಮ್ಮ ತಿನಿಸುಗಳ ಮೇಲೆ 10% ಬೆಲೆ ಹೆಚ್ಚಿಸಿದೆ. ತೈಲ ಬೆಲೆಯೇರಿಕೆಯಿಂದಾಗಿ ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 100 ರೂಪಾಯಿಯನ್ನೂ ದಾಟಿ ಮುಂದುವರಿದಿದೆ. ಆದರೆ, ರಾಜ್ಯದಲ್ಲಿ ಮಾತ್ರ ಹಿಂದೂ-ಮುಸ್ಲಿಮ್ ವಿಷಯಗಳೇ ಮುಖ್ಯ ಚರ್ಚಾ ವಿಷಯವಾಗಿದೆ. ದಿನಬೆಳಗಾದರೆ ಸಿ.ಟಿ. ರವಿಯಿಂದ ಹಿಡಿದು ಬಿಜೆಪಿ ಬೆಂಬಲಿಗ ಪರಿವಾರದ ಮುಖಂಡರ ಮತ್ತು ಕೆಲವು ಸ್ವಾಮೀಜಿಗಳ ವರೆಗೆ ಮುಸ್ಲಿಮ್ ಮತ್ತು ಇಸ್ಲಾಮ್ ವಿರೋಧಿ ಹೇಳಿಕೆಗಳೇ ಸುದ್ದಿಯಲ್ಲಿವೆ. ಈ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿ, ಸುಡುವ ಹೊಟೇಲು ತಿನಿಸುಗಳಾಗಲಿ ಯಾವುದೂ ಸಾರ್ವಜನಿಕ ಚರ್ಚೆಗೆ ಒಳಗಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನೆಲ್ಲ ಸಹಜ ಎಂದು ಹೇಗೆ ನಂಬುವುದು? ಸರ್ಕಾರವೊಂದು ತನ್ನ ವೈಫಲ್ಯದ ಭಾರಕ್ಕೆ ಕುಸಿದು ಕುಳಿತಿರುವಾಗ ಆ ಬಗ್ಗೆ ಒಂದೇ ಒಂದು ಪ್ರಶ್ನೆ ಹುಟ್ಟದಂತೆ ಮಾಡುವ ಹುನ್ನಾರದ ಭಾಗವೇ ಹಿಜಾಬ್‌ನಿಂದ ಈ ನಬಿಸಾಬ್ ವರೆಗಿನ ಬೆಳವಣಿಗೆ ಎಂದು ಹೇಗೆ ವಾದಿಸದೇ ಇರುವುದು?
ಬೊಮ್ಮಾಯಿ ಹಿಂದೆಯೂ ಸಮಾಜವಾದಿ ಆಗಿರಲಿಲ್ಲ. ಈಗಲೂ ಅಲ್ಲ. ಅವರು ಸಮಾಜವಾದಿ ಬಟ್ಟೆಯನ್ನಷ್ಟೇ ತೊಟ್ಟಿದ್ದರು. ಆದರೆ ಕನ್ನಡಿಗರು ಆ ಬಟ್ಟೆಯನ್ನು ನೋಡಿಕೊಂಡು ಇದುವೇ ನಿಜವಾದ ಬೊಮ್ಮಾಯಿ ಅಂದುಕೊಂಡರು. ತಪ್ಪು ಕನ್ನಡಿಗರದ್ದು. ಅಷ್ಟೇ.
No comments:
Post a Comment