Tuesday, 12 April 2022

ಸ್ಕಾರ್ಫ್ ವಿವಾದ: ನಿರುಪದ್ರವಿ ಸಂಕೇತಗಳು ಮತ್ತು ಅಪಾಯಕಾರಿ ವ್ಯಾಖ್ಯಾನಗಳು



ಸನ್ಮಾರ್ಗ ಸಂಪಾದಕೀಯ 

ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣು ಮಾರುತ್ತಾ ತಿರುಗಾಡಿದ ದ.ಕ. ಜಿಲ್ಲೆಯ ಮಂಗಳೂರಿನ ರಸ್ತೆಗೆ ಅವರದೇ ಹೆಸರಿಡಲು ಜಿಲ್ಲಾಡಳಿತ  ನಿರ್ಧರಿಸಿದ ಅದೇ ಸಮಯದಲ್ಲಿ ಪಕ್ಕದ ಉಡುಪಿ ಜಿಲ್ಲೆಯಲ್ಲಿ ಹಾಜಬ್ಬರದೇ ಸಮುದಾಯ ಧರಿಸುವ ಸ್ಕಾರ್ಫ್ ವಿವಾದದಲ್ಲಿದೆ. ಇಲ್ಲಿನ  ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಸ್ಕಾರ್ಫ್ ಧರಿಸುವ ಅನುಮತಿಗಾಗಿ ಕಾಯುತ್ತಿದ್ದಾರೆ. ಸುಮಾರು  10ರಷ್ಟು ವಿದ್ಯಾರ್ಥಿನಿಯರು ತರಗತಿಗೆ ಸ್ಕಾರ್ಫ್ ಧರಿಸಿಕೊಂಡು ಹೋಗಿರುವುದು ಮತ್ತು ಪ್ರಾಂಶುಪಾಲರು ಅದಕ್ಕೆ ಅನುಮತಿ  ನಿರಾಕರಿಸಿರುವುದು ರಾಜ್ಯಮಟ್ಟದಲ್ಲಿ ಚರ್ಚೆಗೀಡಾಗಿದೆ. ಪದ್ಮಶ್ರೀ ಹಾಜಬ್ಬರ ಮನೆ ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಮೌಲಾನಾರ ಮನೆ  ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಅಷ್ಟೇ ಅಲ್ಲ, ಶಿಕ್ಷಕ, ಇಂಜಿನಿಯರ್, ವೈದ್ಯ, ಉದ್ಯಮಿ, ಕಾರ್ಮಿಕ, ಶ್ರೀಮಂತ ಸಹಿತ ಎಲ್ಲ ಮುಸ್ಲಿಮ್  ಮನೆಗಳ ಮಕ್ಕಳೂ ಸ್ಕಾರ್ಫ್ ಧರಿಸುತ್ತಾರೆ. ಇದಕ್ಕೆ ಅಪವಾದಗಳು ಶೂನ್ಯ ಅನ್ನುವಷ್ಟು ಕಡಿಮೆ. ಯಾಕೆಂದರೆ, ಸ್ಕಾರ್ಫ್ ಗೆ   ಸಾಂಸ್ಕೃತಿಕವಾದ ಹಿನ್ನೆಲೆ ಮಾತ್ರ ಇರುವುದಲ್ಲ, ಬಹುಮುಖ್ಯವಾಗಿ ಧಾರ್ಮಿಕ ಮಹತ್ವ ಇದೆ. ಆದ್ದರಿಂದಲೇ,

ಕಡು ಬಡವರ ಮನೆಯ ಮಕ್ಕಳೂ ಅತಿ ಶ್ರೀಮಂತ ಮನೆಯ ಮಕ್ಕಳೂ ಏಕಪ್ರಕಾರವಾಗಿ ಸ್ಕಾರ್ಫ್ ಧರಿಸುತ್ತಾರೆ. ಆದರೆ ಬುರ್ಖಾದ  ಬಗ್ಗೆ ಹೀಗೆ ಹೇಳುವ ಹಾಗಿಲ್ಲ. ಅದೊಂದು ಮೇಲುಡುಗೆ. ಐಚ್ಛಿಕ. ಆದರೆ ತಲೆಗೂದಲನ್ನು ಮರೆಮಾಚುವ ಸ್ಕಾರ್ಫ್ ಗೆ  ಧಾರ್ಮಿಕವಾಗಿ  ಈ ರಿಯಾಯಿತಿಗಳಿಲ್ಲ. ಆದ್ದರಿಂದ ಉಡುಪಿ ವಿದ್ಯಾರ್ಥಿನಿಯರ ಸ್ಕಾರ್ಫ್ ಬೇಡಿಕೆಯನ್ನು ಮಾಮೂಲು ಬುರ್ಖಾ ಮತ್ತು ಮುಖ  ಮುಚ್ಚುವ ನಕಾಬ್‌ನ ಪಟ್ಟಿಯಲ್ಲಿಟ್ಟು ವಿಶ್ಲೇಷಿಸುವುದು ತಪ್ಪಾಗುತ್ತದೆ.

ಬುರ್ಖಾ ಮತ್ತು ನಕಾಬ್ ಧರಿಸುವ ಬಗ್ಗೆ ಮುಸ್ಲಿಮ್ ಸಮುದಾಯದ ಒಳಗಡೆಯೇ ಭಿನ್ನ ಭಿನ್ನ ನಿಲುವುಗಳಿವೆ. ಬುರ್ಖಾ  ಧರಿಸುವವರು ಇರುವಂತೆಯೇ ಧರಿಸದವರೂ ಇದ್ದಾರೆ. ನಕಾಬ್‌ಗೆ ಸಂಬಂಧಿಸಿಯೂ ಇದೇ ಮಾತನ್ನು ಹೇಳಬಹುದು. ವಿಶೇಷ ಏನೆಂದರೆ, ಉಡುಪಿ ವಿದ್ಯಾರ್ಥಿನಿಯರ ಬೇಡಿಕೆಗೆ ಸಂಬಂಧಿಸಿ ಚರ್ಚಿಸುವ ಹೆಚ್ಚಿನವರಲ್ಲಿ ಈ ಕುರಿತಂತೆ ಸ್ಪಷ್ಟತೆಯ ಕೊರತೆ ಬಹಳವೇ  ಇದೆ. ತಲೆ ಮುಚ್ಚುವ ಶಿರವಸ್ತ್ರದ ಬಗ್ಗೆ ಸಾಕಷ್ಟು ಮಂದಿ ಅಪಾರ್ಥ ಮಾಡಿಕೊಂಡಿದ್ದಾರೆ. ಸ್ಕಾರ್ಫನ್ನು ಮೈಮುಚ್ಚುವ ಕಪ್ಪು ಬುರ್ಖಾ  ಮತ್ತು ಮುಖ ಮುಚ್ಚುವ ನಕಾಬ್ ಎಂದು ಭಾವಿಸಿದ್ದಾರೆ ಮತ್ತು ಈ ತಪ್ಪಾದ ಅರಿವಿನ ಮೇಲೆಯೇ ತಮ್ಮ ಅಭಿಪ್ರಾಯವನ್ನೂ ಅವರು  ವ್ಯಕ್ತಪಡಿಸುತ್ತಿದ್ದಾರೆ. ಬುರ್ಖಾ ಧರಿಸಿ, ಮುಖ ಮುಚ್ಚಿ ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿನಿಯರನ್ನು ಕಲ್ಪಿಸಿಕೊಂಡು ಅವರು  ತಮ್ಮ ವಿರೋಧಕ್ಕೆ ಆಧಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದು ಒಟ್ಟು ಚರ್ಚೆಯಲ್ಲಿ ಕಂಡು ಬರುತ್ತಿರುವ ಒಂದು ಸಮಸ್ಯೆಯಾದರೆ, ಇನ್ನೊಂದು ಹಿಂದೂ ಸಮುದಾಯ ಪಾಲಿಸಿಕೊಂಡು ಬರುತ್ತಿರುವ ಹಣೆಬೊಟ್ಟು, ಕೈ ಬಳೆಗೆ ಈ ಸ್ಕಾರ್ಫನ್ನು ತುಲನೆ ಮಾಡಿ  ವಿಶ್ಲೇಷಿಸುವುದು.

ಸ್ಕಾರ್ಫ್ ಗೂ  ಹಿಂದೂ ಸಮುದಾಯದ ಮಹಿಳೆಯರು ಧರಿಸುವ ಬಿಂದಿ ಮತ್ತು ಕೈಬಳೆಗೂ  ಏಕ ಪ್ರಕಾರವಾದ ಮಹತ್ವ ಇದೆ ಎಂದು  ಹೇಳುವ ಹಾಗಿಲ್ಲ. ಹಿಂದೂ ಸಮುದಾಯದಲ್ಲಿ ಬಿಂದಿ, ಕೈಬಳೆ ಇತ್ಯಾದಿಗಳನ್ನು ಒಂದು ರೀತಿಯಲ್ಲಿ ಐಚ್ಛಿಕವೆಂಬಂತೆ  ಬಳಸಲಾಗುತ್ತಿದೆ.  ಸಾಮಾಜಿಕ ಬದುಕಿನಲ್ಲಿ ಇವುಗಳನ್ನು ಧರಿಸುವವರ ಸಂಖ್ಯೆಯಷ್ಟೇ ಧರಿಸದವರ ಸಂಖ್ಯೆಯೂ ಇದೆ. ಇವುಗಳನ್ನು ಒಂದು ಕಡ್ಡಾಯ  ಧಾರ್ಮಿಕ ಪದ್ಧತಿಯಾಗಿ ಸ್ವೀಕರಿಸುವವರ ಸಂಖ್ಯೆ ಬಹಳ ಕಡಿಮೆಯಿರುವಂತೆ ಕಾಣಿಸುತ್ತಿದೆ. ಹಿಂದೂ ಧಾರ್ಮಿಕ ಆಚಾರ ಪದ್ಧತಿಯಲ್ಲಿ  ಬಿಂದಿ, ಕೈಬಳೆಗಳಿಗೆ ಎಷ್ಟು ಮಹತ್ವವಿದೆ ಎಂಬುದು ಸ್ಪಷ್ಟವಿಲ್ಲದಿದ್ದರೂ ಇವುಗಳನ್ನು ಧಾರ್ಮಿಕ ಪದ್ಧತಿಯಾಗಿ ಬಳಸುವವರ ಸಂಖ್ಯೆ  ತೀರಾ ಕಡಿಮೆ. ಆದರೆ
ಸ್ಕಾರ್ಫ್ ಹಾಗಲ್ಲ. ಅದು ಇವತ್ತಿಗೂ ಮುಸ್ಲಿಮ್ ಸಮುದಾಯದ ಅವಿಭಾಜ್ಯ ಅಂಗ. ಬುರ್ಖಾ ಮತ್ತು ನಕಾಬನ್ನು ಧರಿಸದವರೂ ಸ್ಕಾ ರ್ಫನ್ನು ಧರಿಸುವುದಕ್ಕೆ ಕಾರಣವೂ ಇದುವೇ. ಆದ್ದರಿಂದ ತರಗತಿಯಲ್ಲಿ ಸ್ಕಾರ್ಫ್ ಧರಿಸುವುದಕ್ಕೆ ಅನುಮತಿಸಬೇಕೋ ಬೇಡವೋ ಎಂದು  ನಿರ್ಧರಿಸುವ ಮೊದಲು ಮತ್ತು ಸರ್ವರಿಗೂ ಸಮಾನ ನಿಯಮ ಎಂದು ಒಂದು ವಾಕ್ಯದಲ್ಲಿ ಹೇಳಿ ಮುಗಿಸುವ ಮೊದಲು ಈ ಎಲ್ಲ  ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವ ಸಾವಧಾನವನ್ನು ಎಲ್ಲರೂ ಪ್ರದರ್ಶಿಸುವ ಅಗತ್ಯ ಇದೆ.

ಧರ್ಮ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಈ ವಾಸ್ತವವನ್ನು ತಿರಸ್ಕರಿಸಿಯೋ ಅದಕ್ಕೆ ಬೆನ್ನು ಹಾಕಿಯೋ ಮಾತಾಡುವುದರಿಂದ  ಯಾವ ಪ್ರಯೋಜನವೂ ಇಲ್ಲ ಮತ್ತು ಯಾರದೇ ಸಾಧನೆಗೂ ಯಾರದೇ ಕಲಿಕೆಗೂ ಧರ್ಮ ಅಡ್ಡ ಬಂದದ್ದೂ ಇಲ್ಲ. ಇದಕ್ಕೆ ಅತ್ಯುತ್ತಮ  ಉದಾಹರಣೆ, ಹರೇಕಳ ಹಾಜಬ್ಬ. ಅವರು ನಮಾಜ್, ಉಪವಾಸ ಸೇರಿದಂತೆ ಧಾರ್ಮಿಕ ಆಚಾರ-ವಿಚಾರಗಳನ್ನು ಪಾಲಿಸುತ್ತಾರೆ.  ಸದಾ ಬಿಳಿ ಲುಂಗಿ ಮತ್ತು ಬಿಳಿ ಷರಟಿನಲ್ಲೇ  ಕಿತ್ತಳೆ ಹಣ್ಣು ಮಾರುತ್ತಾರೆ. ಆದರೆ ಅವರನ್ನು ಓರ್ವ ಅಮೋಘ ಸಾಧಕನನ್ನಾಗಿ  ಮಾಡುವುದಕ್ಕೆ ಈ ನಮಾಜ್, ಉಪವಾಸ, ಬಿಳಿ ಲುಂಗಿ, ಷರಟುಗಳು ಯಾವ ತಡೆಯನ್ನೂ ಒಡ್ಡಿಲ್ಲ. ಸಮಸ್ಯೆ ಏನೆಂದರೆ, ಧರ್ಮವನ್ನು  ತಪ್ಪಾಗಿ ಆಚರಿಸುವವರು ಮತ್ತು ಆಡುವವರನ್ನು ಕಂಡು ಇದುವೇ ನಿಜ ಧರ್ಮ ಎಂದು ಅಂದುಕೊಳ್ಳುವುದು. ಅವರ ಮಾತಿನ  ಮೇಲೆಯೇ ಧರ್ಮಕ್ಕೆ ವ್ಯಾಖ್ಯಾನವನ್ನು ಕಟ್ಟುವುದು. ಧಾರ್ಮಿಕ ನಾಯಕರೆನಿಸಿಕೊಂಡ ಯಾವುದೇ ಧರ್ಮದ ವ್ಯಕ್ತಿ ವೇದಿಕೆ ಏರಿಯೋ  ಸೋಶಿಯಲ್ ಮೀಡಿಯಾದ ಮೂಲಕವೋ ತನ್ನ ವಿಚಾರಧಾರೆಯನ್ನು ಧರ್ಮದ ವಿಚಾರಧಾರೆಯೆಂದು ತಿರುಚಿ ಹೇಳುತ್ತಾ  ತಿರುಗಾಡುತ್ತಿರುವುದೇ ಇಲ್ಲಿನ ನಿಜವಾದ ಸಮಸ್ಯೆ.

ಯಾವುದೇ ಧರ್ಮಕ್ಕೆ ಅದರದ್ದೇ  ಆದ ಪ್ರತ್ಯೇಕತೆಯಿದೆ. ಆಚರಣೆ, ಆರಾಧನೆ, ಗ್ರಂಥ, ವ್ಯಾಖ್ಯಾನ, ವಿಶಿಷ್ಟ ಪದಗಳು ಮತ್ತು  ಇವುಗಳಿಗಿರುವ ಐತಿಹಾಸಿಕ ಹಿನ್ನೆಲೆಗಳು, ಅರ್ಥೈಸುವಿಕೆಯ ರೀತಿ, ನಿಯಮ ನಿರ್ದೇಶಗಳು ಇತ್ಯಾದಿ ಅನೇಕ ಸಂಗತಿಗಳಲ್ಲಿ ಧರ್ಮ- ಧರ್ಮಗಳ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಇದೇ ಮಣ್ಣಿನಲ್ಲಿ ಹುಟ್ಟಿ ಬೆಳೆದ ಬೌದ್ಧ ಧರ್ಮವನ್ನಾಗಲಿ, ಬಸವ ಪಂಥವನ್ನಾಗಲಿ ಸಂಪೂರ್ಣ ಮನನ ಮಾಡಿಕೊಳ್ಳಬೇಕಾದರೆ ಕೇವಲ ತ್ರಿಪಿಟಿಕವನ್ನು ಓದುವುದರಿಂದಲೋ ಬಸವ ವಚನಗಳನ್ನು ಕಲಿಸುವುದರಿಂದಲೋ  ಸಾಧ್ಯವಿಲ್ಲ. ಯಾವುದೇ ವಚನಕ್ಕೂ ಅದರದ್ದೇ  ಆದ ಹಿನ್ನೆಲೆಯಿರುತ್ತದೆ. ಅದು ತಿಳಿದಾಗ ಆ ವಚನದ ಅರ್ಥ ಮತ್ತು ನಿಜ ಉದ್ದೇಶ  ಸ್ಪಷ್ಟವಾಗುತ್ತದೆ. ಗೌತಮ ಬುದ್ಧನ ಹುಟ್ಟು ಮತ್ತು ಸಾವಿನ ವರೆಗಿನ ಯಾವ ಬೆಳವಣಿಗೆಗಳನ್ನೂ ತಿಳಿದಿಲ್ಲದ ವ್ಯಕ್ತಿಯೋರ್ವ ತ್ರಿಪಿಟಿಕವನ್ನು  ಓದಿ ಅರ್ಥೈಸುವುದಕ್ಕೂ ಬುದ್ಧನ ಬಗ್ಗೆ ಸಂಪೂರ್ಣ ತಿಳುವಳಿಕೆಯಿರುವ ವ್ಯಕ್ತಿಯೋರ್ವ ತ್ರಿಪಿಟಿಕವನ್ನು ಓದಿ ಅರ್ಥೈಸುವುದಕ್ಕೂ ಹಗಲು  ರಾತ್ರಿಯಷ್ಟು ವ್ಯತ್ಯಾಸವಿರುತ್ತದೆ. ಕುರ್‌ಆನ್‌ನನ್ನಾಗಲಿ, ವೇದ, ಬೈಬಲ್, ಗ್ರಂಥ ಸಾಹೇಬನ್ನಾಗಲಿ ಓದುವಾಗ ಮತ್ತು ಈ ಗ್ರಂಥಗಳು ಪ್ರತಿನಿಧಿಸುವ ಧರ್ಮವನ್ನು ವಿಶ್ಲೇಷಿಸುವಾಗ ನಮ್ಮಲ್ಲಿ ಇರಬೇಕಾದ ಎಚ್ಚರಿಕೆಗಳಿವು. ದುರಂತ ಏನೆಂದರೆ,ಈ ಎಚ್ಚರಿಕೆಗಳನ್ನೆಲ್ಲ ಕಡೆಗಣಿಸಿ ಮಾಡುವ ಚರ್ಚಾ ವಿಧಾನವೊಂದು ಸಾರ್ವಜನಿಕವಾಗಿ ಇವತ್ತು ಚಾಲ್ತಿಯಲ್ಲಿದೆ. ಇದು ಅತ್ಯಂತ ಅಪಾಯಕಾರಿ. ಈ ಮಾದರಿಯ ಚರ್ಚೆಗೆ ಧರ್ಮದ ಆಳ ಅಧ್ಯಯನದ ಅಗತ್ಯವಿಲ್ಲ. ಬಾಹ್ಯವಾಗಿ ಏನು ಕಾಣುತ್ತದೋ ಅದುವೇ ಧರ್ಮ  ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಏನು ಸಿಗುತ್ತದೋ ಅದುವೇ ಧರ್ಮದ ವ್ಯಾಖ್ಯಾನ. ಆದ್ದರಿಂದಲೇ, ಸ್ಕಾರ್ಫ್ ಗೂ  ವಿರೋಧ  ವ್ಯಕ್ತವಾಗುತ್ತದೆ. ಕೇಸರಿ ಬಣ್ಣವನ್ನೂ  ಅನುಮಾನದಿಂದ ನೋಡಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧವಾಗುವ ವೇದಿಕೆಗಳೂ   ಭಯ ಮೂಡಿಸುತ್ತವೆ. ಪ್ರತಿಯೊಂದರಲ್ಲೂ ಮತಾಂತರದ್ದೋ  ಆಮಿಷದ್ದೋ  ಸಂಚಿನದ್ದೋ ಸಂದೇಹಗಳನ್ನು ಹರಡಲಾಗುತ್ತದೆ. ಈ ಬಗ್ಗೆ  ಬೀದಿ ವ್ಯಾಖ್ಯಾನಗಳು ನಡೆಯುತ್ತವೆ. ಪ್ರತಿಭಟನೆ, ಬೈಗುಳ-ನಿಂದನೆಗಳು ಪ್ರಾರಂಭವಾಗುತ್ತವೆ. ನಿಜವಾಗಿ,

ತರಗತಿಯಲ್ಲಿ ಸರ್ವರೂ ಸಮಾನರು ಎಂಬ ನಿಯಮವನ್ನು ಜಾರಿಗೊಳಿಸುವುದೆಂದರೆ, ಅದು ಧಾರ್ಮಿಕ ಸಂಕೇತಗಳನ್ನೆಲ್ಲ  ಸಾಯಿಸಿಯೇ ಆಗಬೇಕಿಲ್ಲ. ಜನರ ಬದುಕಿನ ಭಾಗವೇ ಆಗಿರುವ ಮತ್ತು ಯಾರ ಪಾಲಿಗೂ ಉಪದ್ರವಕಾರಿಯಾಗಿಲ್ಲದ ಸಂಕೇತಗಳನ್ನು  ತರಗತಿಯಿಂದ ಬಹಿಷ್ಕರಿಸಿ ಸಮಾನತಾ ತತ್ವವನ್ನು ಪಾಲಿಸಿದ್ದೇ ವೆ ಎಂದು ಬೀಗಬೇಕಾಗಿಯೂ ಇಲ್ಲ. ನಿರುಪದ್ರವಿ ಸಂಕೇತಗಳು  ತರಗತಿಯೊಳಗಿನ ಸೌಂದರ್ಯವೇ ಹೊರತು ಅಸಮಾನತೆ ಅಲ್ಲ.

No comments:

Post a Comment