ಕಳೆದವಾರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯ 10ನೇ ತರಗತಿಯ ದಲಿತ ಬಾಲಕ ಚೇತನ್ ಇದಕ್ಕೆ ಹಸಿಹಸಿ ಸಾಕ್ಷ್ಯವನ್ನು ನೀಡಿದ. ಸೆಪ್ಟೆಂಬರ್ 8ರಂದು ರಾತ್ರಿ ಗ್ರಾಮ ದೇವತೆ ಬೂತ್ಯಾಮ್ಮ ದೇವಿಯ ಉತ್ಸವದಲ್ಲಿ ದೇವರನ್ನು ಹೊತ್ತುಕೊಂಡು ಹೋಗುವಾಗ ಗುಜ್ಜುಕೋಲು ನೆಲಕ್ಕೆ ಬಿದ್ದಿದ್ದು, ಅದನ್ನು ಗಮನಿಸಿದ ಚೇತನ್, ತಕ್ಷಣ ಆ ಕೋಲನ್ನು ಎತ್ತಿ ಕೊಟ್ಟಿದ್ದಾನೆ. ಆದರೆ ಮೇಲ್ಜಾತಿಯ ಮಂದಿ ಅದನ್ನು ಕಂಡು ಕೆಂಡವಾದರು. ನ್ಯಾಯ ಪಂಚಾಯಿತಿ ಸೇರಿದರು. ಬೂತ್ಯಾಮ್ಮ ದೇವಿಗೆ ದಲಿತ ಬಾಲಕನಿಂದ ಮೈಲಿಗೆಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಕೋಲು ಮುಟ್ಟಿ ದೇವಿಗೆ ಮೈಲಿಗೆ ಮಾಡಿದ ಅಪರಾಧಕ್ಕಾಗಿ ಅಕ್ಟೋಬರ್ 1ರ ಒಳಗೆ 60 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಫರ್ಮಾನು ಹೊರಡಿಸಿದರು. ತಪ್ಪಿದರೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು. ವಿಷಾದ ಏನೆಂದರೆ,
ದಂಡದ ಮೊತ್ತವನ್ನು ಸಂಗ್ರಹಿಸಲು ಚೇತನ್‌ನ ತಾಯಿ ಇದ್ದ ಬದ್ದ ಪ್ರಯತ್ನವನ್ನೆಲ್ಲ ಮಾಡಿದ್ದಾರೆ. ಮನೆಗೆಲಸ ಮಾಡಿ ದಿನದನ್ನ ಉಣ್ಣುವ ಈ ತಾಯಿ, ಸವರ್ಣೀಯರ ಈ ನ್ಯಾಯ ಪಂಚಾತಿಕೆಗೆ ಬೆದರಿದ್ದಾರೆ. ಬಹಿಷ್ಕಾರ ಹಾಕಿದರೆ ಏನು ಮಾಡುವುದು ಎಂಬ ಭೀತಿಗೆ ಒಳಗಾಗಿದ್ದಾರೆ. ಪೊಲೀಸರಿಗೆ ದೂರು ಕೊಡುವ ಬದಲು ದಂಡದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿ ಎಂದು ಸವರ್ಣೀಯರ ಮುಂದೆ ಅಂಗಲಾಚಿದ್ದಾರೆ. ಆದರೆ, ಅವರ ಮನಸ್ಸು ಕರಗಿಲ್ಲ. ಸೆ. 8ರಂದು ನಡೆದ ಈ ಘಟನೆ 12 ದಿನಗಳ ಬಳಿಕ ಪೊಲೀಸು ಠಾಣೆಯ ಮೆಟ್ಟಿಲೇರಿದೆ ಎಂಬುದೇ ಆ ತಾಯಿ ಎದುರಿಸಿರಬಹುದಾದ ಮಾನಸಿಕ ಮತ್ತು ಬಾಹ್ಯ ಒತ್ತಡಕ್ಕೆ ಕನ್ನಡಿ ಹಿಡಿಯುತ್ತದೆ. ಅದೂ ಅಂಬೇಡ್ಕರ್ ಸೇವಾ ಸಮಿತಿಯ ಗಮನಕ್ಕೆ ಈ ಘಟನೆ ಬಾರದೇ ಇರುತ್ತಿದ್ದರೆ, ಇವತ್ತಿಗೂ ಆ ತಾಯಿ ಒಳಗೊಳಗೇ ಕರಗುತ್ತಾ ಕಾಣೆಯಾಗುತ್ತಿದ್ದರೋ ಏನೋ? ಸೇವಾ ಸಮಿತಿ ತಕ್ಷಣ ಕಾರ್ಯಪ್ರವೃತ್ತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತದೆ. ಆ ಬಳಿಕ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಗೀಡಾಗುತ್ತದೆ. ಅಷ್ಟಕ್ಕೂ,
ಆರೋಪಿಗಳಾರೂ ಕಾನೂನು, ಕಾಯ್ದೆ, ಸಂವಿಧಾನದ ಗಂಧಗಾಳಿ ಇಲ್ಲದವರಲ್ಲ. ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ನಾರಾಯಣ ಸ್ವಾಮಿ ಕೂಡಾ 8 ಮಂದಿ ಆರೋಪಿಗಳಲ್ಲಿ ಓರ್ವ. ಅರ್ಚಕ ಮೋಹನ್ ರಾವ್ ಕೂಡಾ ಆರೋಪಿಗಳಲ್ಲಿ ಓರ್ವ. ಅಂದಹಾಗೆ,
ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಒಳ್ಳೆಯ ಬೆಳವಣಿಗೆಗಳಾಗಿವೆ. ವಿವಿಧ ಸಂಘಟನೆಗಳಿಂದ ‘ಮುಳ್ಳೇರ ಹಳ್ಳಿ ಚಲೋ’ ಎಂಬ ಹೆಸರಿನಲ್ಲಿ ಬೃಹತ್ ಜಾಥಾ ನಡೆದಿದೆ. ಸುಮಾರು 3 ಸಾವಿರಕ್ಕಿಂತಲೂ ಅಧಿಕ ಮಂದಿ ಈ ಜಾಥಾದಲ್ಲಿ ಭಾಗಿಯಾದರಲ್ಲದೇ, ದಲಿತ ಸಂಘಟನೆಯ ಸದಸ್ಯರು ಭೂತ್ಯಾಮ್ಮ ದೇವಿಯ ಮಂದಿರದ ಎದುರು ಧರಣಿ ನಡೆಸಿದರು. ಬಳಿಕ ದೇಗುಲದಿಂದ ಗುಜ್ಜಕೋಲು ಹೊರತಂದರು ಮತ್ತು ದೇಗುಲದ ಮೇಲೆ ಧ್ವಜ ಕಟ್ಟಿದರು. ಇದೇವೇಳೆ, ಸರ್ಕಾರ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿತು. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಮಾಡಿಕೊಂಡಿರುವ ಈ ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತ ತಕ್ಷಣವೇ ಹಕ್ಕು ಪತ್ರ ನೀಡಿ ಧೈರ್ಯ ತುಂಬಿತು. ಜಿಲ್ಲಾಧಿಕಾರಿ ವೆಂಕಟರಾಜು ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 25 ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಸಂಸದ ಮುನಿಸ್ವಾಮಿ 50 ಸಾವಿರ ರೂಪಾಯಿಯ ಚೆಕ್ ನೀಡಿದರು. ನಿಜವಾಗಿ,
ಈ ಬಾಲಕ ಚೇತನ್ ಅಥವಾ ಅವನ ತಾಯಿ ಶೋಭಾ- ಅಸ್ಪೃಶ್ಯ ಆಚರಣೆಗೆ ಒಳಗಾದವರಲ್ಲಿ ಮೊದಲಿಗರಲ್ಲ. 43 ವರ್ಷಗಳ ಹಿಂದೆ ಇದೇ ಗ್ರಾಮದ ಪಕ್ಕದ ಹುಣಸಿಕೋಟೆಯಲ್ಲಿ ಇಂಥದ್ದೇ ಪ್ರಕರಣ ನಡೆದಿತ್ತು. ಆಗ ವಿಧಾನಸೌಧ ಚಲೋ ರ‍್ಯಾಲಿ ನಡೆಸಿ ಸಾರ್ವಜನಿಕ ಗಮನ ಸೆಳೆಯಲಾಗಿತ್ತು. ಆದರೆ, ಮಲಿನ ಮನಸ್ಸುಗಳು ಇನ್ನು ಉಳಿದುಕೊಂಡಿವೆ. ಈ ದೇಶದಲ್ಲಿ 9,315ರಷ್ಟು ಜಾತಿಗಳಿವೆ ಎಂಬ ವರ ದಿಯಿದೆ. ಅದರಲ್ಲೂ 1,600ರಷ್ಟು ಉಪಜಾತಿಗಳು ಪರಿಶಿಷ್ಟರಲ್ಲೇ ಇವೆ. ಪರಿಶಿಷ್ಟರೊಳಗಿನ ಈ ಉಪಜಾತಿಗಳಲ್ಲೂ ಮೇಲು ಮತ್ತು ಕೀಳು ಜಾತಿಗಳಿವೆ. ಇದೊಂದು ಸಾಮಾಜಿಕ ಪಿಡುಗು. ಇದು ಧರ್ಮದ ಪೋಷಾಕು ತೊಟ್ಟಿರುವುದರಿಂದ ಸಂತ್ರಸ್ತರಲ್ಲಿ ಪ್ರಶ್ನೆ ಮಾಡುವ ಧೈರ್ಯವೂ ಕಡಿಮೆ. ಮೇಲು-ಕೀಳು ಎಂಬುದು ಧಾರ್ಮಿಕ ಕಟ್ಟಳೆಯಾಗಿದ್ದು, ಅದನ್ನು ಉಲ್ಲಂಘಿಸುವುದು ಅಪರಾಧ ಎಂಬ ಭಾವ ಸಾರ್ವಜನಿಕರಲ್ಲಿದೆ. ದರೋಡೆ, ಹತ್ಯೆ, ಕಳ್ಳತನ, ಅತ್ಯಾಚಾರ, ವಂಚನೆ ಇತ್ಯಾದಿಗಳಂತೆ ಇಂಥ ಅಸ್ಪೃಶ್ಯ ಆಚರಣೆಗಳು ಅಪರಾಧವಾಗಿ ಗುರುತಿಗೆ ಒಳಗಾಗಿಲ್ಲ. ಆದ್ದರಿಂದಲೇ,
ಈ ಉಳ್ಳೇರಹಳ್ಳಿ ಪ್ರಕರಣ ಕೂಡ ಬೆಳಕಿಗೆ ಬರಲು 12 ದಿನಗಳನ್ನೇ ತೆಗೆದುಕೊಂಡಿತು. ಸಾಮಾನ್ಯವಾಗಿ,
ಈ ಉಳ್ಳೇರಹಳ್ಳಿ ಪ್ರಕರಣ ಕೂಡ ಬೆಳಕಿಗೆ ಬರಲು 12 ದಿನಗಳನ್ನೇ ತೆಗೆದುಕೊಂಡಿತು. ಸಾಮಾನ್ಯವಾಗಿ,
ಇಂಥ ಹೆಚ್ಚಿನ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದೂ ಇಲ್ಲ. ರಾಜಿ ಸಂಧಾನದಲ್ಲೇ ಹೆಚ್ಚಿನವು ಕೊನೆಗೊಳ್ಳುತ್ತದೆ. ಸಂತ್ರಸ್ತರು ಬಹುತೇಕ ಬಡ ಜ ನರೇ ಆಗಿರುವುದರಿಂದ ಮತ್ತು ತಾರತಮ್ಯ ಮಾಡುವವರು ಪ್ರಬಲರು ಮತ್ತು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಿಕೊಂಡು ಊರಲ್ಲಿ ಬದುಕುವುದಕ್ಕೆ ಇಂಥ ದುರ್ಬಲ ಕುಟುಂಬಗಳಿಗೆ ಸಾಧ್ಯವಿರುವುದಿಲ್ಲ. ಆದ್ದರಿಂದ, ಅವರು ಎಲ್ಲ ತಾರತಮ್ಯವನ್ನು ಅವುಡುಗಚ್ಚಿ ಸಹಿಸಿಕೊಂಡು ಬದುಕಬೇಕಾಗುತ್ತದೆ. ಊರಿನ ವಾತಾವರಣ ಹದಗೆಡುವುದು ಬೇಡ ಎಂದು ಹೇಳಿ ಕಾನೂನು ಪಾಲಿಸಬೇಕಾದವರೇ ಸಂತ್ರಸ್ತರನ್ನು ಸುಮ್ಮನಾಗಿಸುವುದೂ ಇದೆ. ಈ ಮೂಲಕ ತಾರತಮ್ಯಕ್ಕೆ ಒಳಗಾಗುವುದಷ್ಟೇ ಅಲ್ಲ, ಊರ ಗೌರವವನ್ನು ಕಾಪಾಡುವ ಹೊಣೆಗಾರಿಕೆಯನ್ನೂ ಈ ಸಂತ್ರಸ್ತರ ಮೇಲೆಯೇ ಹೊರಿಸಲಾಗುತ್ತದೆ. ಅಂದಹಾಗೆ,
ದೇಶ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ 2022 ಜುಲೈಯಲ್ಲಿ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಅಜಯ್ ಕುಮಾರ್ ಮಿಶ್ರಾ ಅವರು ಲೋಕಸಭೆಯ ಮುಂದಿಟ್ಟ ಅಂಕಿಅAಶಗಳೇ ಧಾರಾಳ ಸಾಕು. ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ 2018ರಲ್ಲಿ 42,793 ಹಲ್ಲೆ ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಆ ಸಂಖ್ಯೆ 50 ಸಾವಿರವನ್ನೂ ಮೀರಿದೆ. ಅದೇವೇಳೆ, ಪರಿಶಿಷ್ಟ ಪಂಗಡಗಳ ಮೇಲೆ 2018ರಲ್ಲಿ 6,528ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಅದು 8,272ಕ್ಕೆ ಏರಿದೆ. ಈ ವಿವರಗಳ ಪ್ರಕಾರ, ಪರಿಶಿಷ್ಟ ಜಾತಿಯ ಮಂದಿಯ ಮೇಲೆ ಈ ದೇಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ದೌರ್ಜನ್ಯ ನಡೆಯುತ್ತಿದೆ. ಪರಿಶಿಷ್ಟ ಪಂಗಡಗಳ ಮೇಲಿನ ಹಲ್ಲೆಯಲ್ಲೂ ಏರಿಕೆಯಾಗುತ್ತಲೇ ಇವೆ. ಹಾಗಂತ, ಇವೆಲ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಅಧಿಕೃತ ಪ್ರಕರಣಗಳು ಅಷ್ಟೇ. ಇನ್ನು, ರಾಜಿ ಸಂಧಾನದಲ್ಲಿ ಮುಗಿಯುವ, ದಂಡ ಪಾವತಿಸಿ ಕೊನೆಗೊಳ್ಳುವ ಮತ್ತು ದೌರ್ಜನ್ಯಕ್ಕೆ ಒಳಗಾದರೂ ಪೊಲೀಸರಿಗೆ ದೂರು ಕೊಡದೇ ಸತ್ತು ಹೋಗುವ ಪ್ರಕರಣಗಳನ್ನು ಪರಿಗಣಿಸಿದರೆ ಪ್ರತಿ ಸೆಕೆಂಡಿಗೊಂದು ದೌರ್ಜನ್ಯ ಮತ್ತು ತಾರತಮ್ಯದ ಲೆಕ್ಕ ಸಿಗಬಹುದೇ ಏನೋ?
ದೇಶ ಸ್ವತಂತ್ರಗೊಂಡು 75 ವರ್ಷಗಳಾದ ಬಳಿಕದ ಸ್ಥಿತಿ ಇದು. ನಿಜವಾಗಿ, ಇದು ಜನರ ಮನಸ್ಸಿನ ಕಾಯಿಲೆ. ಕೇವಲ ಕಾನೂನೊಂದೇ ಈ ಕಾಯಿಲೆಗೆ ಔಷಧವಾಗಲು ಸಾಧ್ಯವಿಲ್ಲ. ಈಗ ಆಗಬೇಕಾಗಿರುವುದು ಮನಸ್ಸಿಗೆ ಔಷಧ ಕೊಡುವ ಪ್ರಯತ್ನ. ಮಾನವರೆಲ್ಲರೂ ಸಮಾ ನರು ಎಂಬ ಭಾವವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದಕ್ಕೆ ಎಲ್ಲ ಮಠ-ಮಂದಿರಗಳೂ ಸ್ವಾಮೀಜಿ-ಧರ್ಮಗುರುಗಳೂ ಸಂಕಲ್ಪ ಮಾಡಬೇಕು. ಹಾಗಂತ, ಇಂಥ ಪರಿವರ್ತನೆ ರಾತ್ರಿ-ಬೆಳಗಾಗುವುದರೊಳಗೆ ಸಾಧ್ಯವಾಗುವಂಥದ್ದಲ್ಲ. ಆದರೆ ಅಸಾಧ್ಯವೂ ಅಲ್ಲ. ಪ್ರವಾದಿ ಮುಹಮ್ಮದರು ಕೇವಲ 23 ವರ್ಷಗಳೊಳಗೆ ಇಂಥದ್ದೊಂದು ಕ್ರಾಂತಿಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ. ಸಮಾಜದ ಎಲ್ಲರನ್ನೂ ಮನುಷ್ಯರು ಮತ್ತು ಒಂದೇ ತಂದೆ-ತಾಯಿಯ ಮಕ್ಕಳು ಎಂಬ ಪಟ್ಟಿಗೆ ಸೇರಿಸಿ ಎಲ್ಲರೊಂದಿಗೆ ಬೆರೆಯುವ, ಎಲ್ಲರೊಂದಿಗೆ ವಿವಾಹ ಸಂಬಂಧ ಏರ್ಪಡಿಸುವ, ಜೊತೆಗೇ ಊಟ ಮಾಡುವ, ಒಟ್ಟಿಗೆ ಮಸೀದಿಯಲ್ಲಿ ಅಂತರವಿಲ್ಲದೇ ಪ್ರಾರ್ಥನೆಗೆ ನಿಲ್ಲುವ ಮತ್ತು ನಮಾಝïಗೆ ನೇತೃತ್ವ ನೀಡುವಲ್ಲಿಂದ ಹಿಡಿದು ಮಸೀದಿ ಧರ್ಮ ಗುರುವಾಗುವ ವರೆಗೆ ಎಲ್ಲವನ್ನೂ ಎಲ್ಲರಿಗೂ ಮುಕ್ತವಾಗಿಸಿ ಸಮಾನತೆಯನ್ನು ಸಾಧ್ಯವಾಗಿಸಿದ್ದಾರೆ. ಅಂದಹಾಗೆ,
ಅಸಮಾನತೆಯೇ ಮೈವೆತ್ತ ಮಕ್ಕಾದ ಸಾಮಾಜಿಕ ಬದುಕಿನಲ್ಲಿ ಅವರು ತಂದ ಪರಿವರ್ತನೆ ಭಾರತದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧ್ಯಯನಯೋಗ್ಯ.
No comments:
Post a Comment