Thursday, 22 September 2022

ಆಸಕ್ತಿ ಕಳಕೊಂಡ ಪೆನ್ನು-ಕ್ಯಾಮರಾಗಳಿಗೆ ಪಾಠ ಮಾಡಿದ ಪಿಯುಸಿಎಲ್




ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ನಲ್ಲಿ ವಾದ-ಪ್ರತಿವಾದಗಳು ನಡೆಯು ತ್ತಿರುವುದರ ನಡುವೆಯೇ ಪ್ರಮುಖ  ಸರಕಾರೇತರ ಸಂಸ್ಥೆಯಾದ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ಅಧ್ಯಯನ ವರದಿಯೊಂದನ್ನು  ಬಿಡುಗಡೆಗೊಳಿಸಿದೆ. 

2021 ಡಿಸೆಂಬರ್ ಕೊನೆಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ  ಈ ಹಿಜಾಬ್ ಪ್ರಕರಣವು 2022 ಫೆಬ್ರವರಿ 5ರಂದು ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೂಲಕ  ಬಿಗಡಾಯಿಸಿತು. ಉಡುಪಿಯ 6 ಮಂದಿ ವಿದ್ಯಾರ್ಥಿನಿ ಯರಿಗೆ ಸೀಮಿತವಾಗಿದ್ದ ಹಿಜಾಬ್ ಪ್ರಕರಣವು ರಾಜ್ಯವ್ಯಾಪಿಗೊಳ್ಳುವುದನ್ನು ರಾಜ್ಯ  ಸರ್ಕಾರ ಬಯಸಿತ್ತೇ ಎಂಬ ಅನುಮಾನವನ್ನು ಫೆಬ್ರವರಿ 5ರಂದು ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕಿಂತ ಮೊದಲು ನಡೆದ ವಿವಿಧ  ಬೆಳವಣಿಗೆಗಳು ಹುಟ್ಟು ಹಾಕಿದ್ದುವು. ಅಂದಹಾಗೆ,

ಉಡುಪಿಯ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿಯ ನಡುವಿನ ತೀರಾ ಸ್ಥಳೀಯ ಎಂಬAಥ ಪ್ರಕರಣವೊಂದು ರಾಜ್ಯವ್ಯಾಪಿ  ಶಾಲೆ-ಕಾಲೇಜುಗಳ ಸಮಸ್ಯೆಯಾಗಿ ವಿಸ್ತರಣೆಯಾದುದರಲ್ಲಿ ಯಾವ ಸಂಚೂ ಇಲ್ಲವೇ? ಈ ಪ್ರಕರಣ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು.  ಹೀಗಿದ್ದೂ ರಾಜ್ಯದ ಉಳಿದ ಕಾಲೇಜುಗಳಲ್ಲಿ ಗಂಡು ಮಕ್ಕಳು ಕೇಸರಿ ಶಾಲು ಧರಿಸಿ ಬಂದುದೇಕೆ? ಅವರಿಗೂ ಈ ಹಿಜಾಬ್‌ಗೂ ಏನು  ಸಂಬಂಧ? ಅವರೆಲ್ಲ ಸ್ವಯಂಪ್ರೇರಿತರಾಗಿ ಹೀಗೆ ಕೇಸರಿ ಶಾಲನ್ನು ಕುತ್ತಿಗೆಗೆ ಹಾಕಿಕೊಂಡರೇ ಅಥವಾ ಅದರ ಹಿಂದೆ ಷಡ್ಯಂತ್ರವೇ ನಾದರೂ ಇತ್ತೇ? ಇದ್ದರೆ ಆ ಷಡ್ಯಂತ್ರ ಹೆಣೆದವರು ಯಾರು, ಅವರ ಉದ್ದೇಶವೇನು? ಆವರೆಗೆ ಹಿಜಾಬ್ ಧರಿಸಿ ಬರುತ್ತಿದ್ದ  ವಿದ್ಯಾರ್ಥಿನಿಯರನ್ನು ಏಕಾಏಕಿ ತಡೆದು, ಗೇಟು ಮುಚ್ಚಿ ಹೊರ ಹಾಕಿರುವುದಕ್ಕೆ ಬರೇ ಪ್ರಾಂಶುಪಾಲರು ಮಾತ್ರ ಹೊಣೆಯೇ ಅಥವಾ  ಅವರನ್ನು ನಿರ್ಬಂಧಿಸಲಾಯಿತೇ, ವಿದ್ಯಾರ್ಥಿನಿಯರ ಶಿಕ್ಷಣಕ್ಕಿಂತ ರಾಜಕೀಯ ಲಾಭ-ನಷ್ಟಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿತೇ  ಎಂಬಿತ್ಯಾದಿ ಪ್ರಶ್ನೆಗಳು ಈ ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡವು. 2022 ಮಾರ್ಚ್ 25ರಂದು ರಾಜ್ಯ ಹೈಕೋರ್ಟ್ ಹಿಜಾಬ್  ನಿರ್ಬಂಧಿಸಿ ತೀರ್ಪು ನೀಡುವುದರೊಂದಿಗೆ ಆವರೆಗೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು  ಆಯ್ಕೆಯ ಕಗ್ಗಂಟಿಗೆ ನೂಕಿತು. ನಿಜವಾಗಿ,

ಹಿಜಾಬ್‌ಗೂ ಮುಸ್ಲಿಮ್ ಹೆಣ್ಣು ಮಕ್ಕಳಿಗೂ ಬಾಲ್ಯದಿಂದಲೇ ನಂಟಿದೆ. ಮನೆಯ ಒಳಗೂ ಹೊರಗೂ ಹಿಜಾಬ್ ಅವರ ಸಂಗಾತಿ.  ಅಲ್ಲದೇ, ಹಿಜಾಬ್ ನಿರ್ಬಂಧಿಸಿ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮುಂಚಿನ ದಿನದ ವರೆಗೂ ಹೆಣ್ಣು ಮಕ್ಕಳು  ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದರು. ಬಹುತೇಕ ಯಾವ ಶಾಲಾ-ಕಾಲೇಜುಗಳಲ್ಲೂ ಅದಕ್ಕೆ ನಿರ್ಬಂಧ ಇರಲಿಲ್ಲ.  ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಮತ್ತು ಮಾರ್ಚ್ 25ರಂದು ಈ ಆದೇಶವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್  ನೀಡಿದ ತೀರ್ಪು- ಇವೆರಡೂ ಅವರ ಸಹಜ ಕಲಿಕಾ ಬದುಕನ್ನೇ ಅಲ್ಲೋಲ ಕಲ್ಲೋಲಗೊಳಿಸಿತು. ಒಂದೋ ಹಿಜಾಬ್ ಕಳಚಿಟ್ಟು  ಶಾಲಾ-ಕಾಲೇಜುಗಳಿಗೆ ತೆರಳಬೇಕು ಇಲ್ಲವೇ ಶಿಕ್ಷಣವನ್ನೇ ಕೊನೆಗೊಳಿಸಬೇಕು ಅಥವಾ ಹಿಜಾಬ್‌ಗೆ ಅನುಮತಿ ಇರುವ ಖಾಸಗಿ  ಶಾಲೆಗಳಿಗೆ ಸೇರ್ಪಡೆಗೊಳ್ಳಬೇಕು ಎಂಬ ಸೀಮಿತ ಆಯ್ಕೆಯನ್ನು ಅವರ ಮುಂದಿಟ್ಟಿತು. ಇದೊಂದು ರೀತಿಯಲ್ಲಿ ಕತ್ತಿಯ ಅಲುಗಿನ  ಮೇಲಿನ ನಡಿಗೆಯಂಥ ಸ್ಥಿತಿ. ಶಿಕ್ಷಣ ಬೇಕೆಂದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬೇಕು ಮತ್ತು ಗಾಯವನ್ನು ಸಹಿಸಿಕೊಳ್ಳಲೇಬೇಕು  ಎಂಬ ಒತ್ತಡ ಸ್ಥಿತಿ. ಹಿಜಾಬನ್ನು ಕಳಚಿಡುವುದೆಂದರೆ, ಭಾವನಾತ್ಮಕವಾಗಿ ಆಳ ಇರಿತಕ್ಕೆ ಒಳಗಾಗುವುದೆಂದೇ ಅರ್ಥ. ಈ ಇರಿತವನ್ನು  ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬಾರದು ಅಥವಾ ಶಿಕ್ಷಣವನ್ನು ಅರ್ಧದಲ್ಲೇ   ಮೊಟಕುಗೊಳಿಸಬೇಕು. ಆದರೆ,

ಮಾರ್ಚ್ 25ರ ಬಳಿಕ ಇಂಥದ್ದೊಂದು  ಇಕ್ಕಟ್ಟಿಗೆ ಸಿಲುಕಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಸದ್ಯ ಹೇಗಿದ್ದಾರೆ ಮತ್ತು ಅವರ ಶೈಕ್ಷಣಿಕ  ಬದುಕು ಏನಾಗಿದೆ ಎಂಬ ಅಧ್ಯಯನಾತ್ಮಕ ವರದಿ ಬಹುತೇಕ ಬಿಡುಗಡೆಯಾದದ್ದೇ  ಇಲ್ಲ. ಹಿಜಾಬ್ ಪ್ರಕರಣ ಕಾವೇರಿದ್ದ ಸಮಯದಲ್ಲಿ  ಚುರುಕಾಗಿದ್ದ ಮಾಧ್ಯಮ ಕ್ಯಾಮರಾ ಮತ್ತು ಪೆನ್ನುಗಳು ಮಾರ್ಚ್ 25ರ ಬಳಿಕ ನಿಧಾನಕ್ಕೆ ತಮ್ಮ ದಿಕ್ಕನ್ನು ಬದಲಿಸಿದುವು. ಹಿಜಾಬ್  ನಿರ್ಬಂಧಿಸಿ ಹೊರಡಿಸಲಾದ ತೀರ್ಪು ವಿದ್ಯಾರ್ಥಿನಿಯರ ಮೇಲೆ, ಅವರ ಶೈಕ್ಷಣಿಕ ಬದುಕಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ  ಎಂಬ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಬೇಕಿದ್ದ ಮತ್ತು ವರದಿಯನ್ನು ತಯಾರಿಸಬೇಕಿದ್ದ ಮಾಧ್ಯಮಗಳು ಯಾಕೋ ಏನೋ  ಆಸಕ್ತಿಯನ್ನು ಕಳಕೊಂಡವು. ಇಂಥ ಅಸಮಾಧಾನಗಳ ಸಂದರ್ಭದಲ್ಲೇ  ಪಿಯುಸಿಎಲ್ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಿದೆ.  ಹಾಸನ ನಗರ, ಮಂಗಳೂರು ನಗರ, ಉಳ್ಳಾಲ, ಉಡುಪಿಯ ಹೂಡೆ, ಉಡುಪಿ ಪಟ್ಟಣ ಹಾಗೂ ರಾಯಚೂರು ಪಟ್ಟಣಗಳಲ್ಲಿ ಮೂರು  ತಿಂಗಳ ಕಾಲ ಅಧ್ಯಯನ ನಡೆಸಿದ ಐಶ್ವರ್ಯ ರವಿಕುಮಾರ್, ಕಿಶೋರ್ ಗೋವಿಂದ, ರಾಮದಾಸ್ ರಾವ್, ನ್ಯಾಯವಾದಿ ಪ್ರಕಾಶ್  ರವಿಶಂಕರ್, ಪಿಯುಸಿಎಲ್ ರಾಜ್ಯ ಜಂಟಿ ಕಾರ್ಯದರ್ಶಿ ಶಶಾಂಕ್ ಮತ್ತು ಪತ್ರಕರ್ತೆ ಸ್ವಾತಿ ಶುಕ್ಲಾ ಅವರಿದ್ದ ಅಧ್ಯಯನ ತಂಡವು ಕೆಲವು  ಮಹತ್ವಪೂರ್ಣ ಮಾಹಿತಿಗಳನ್ನು ಕಲೆ ಹಾಕಿದೆ. ಮುಖ್ಯವಾಗಿ ,

ವಿದ್ಯಾರ್ಥಿನಿಯರ ಹೊರತಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರು,  ಸಂಬAಧಿತ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮುಸ್ಲಿಮ್ ಜನಸಾಮಾನ್ಯರನ್ನು ಭೇಟಿಯಾಗಿ, ಅವರ  ಮಾತುಗಳಿಗೆ ಕಿವಿಯಾಗಿದೆ. ಮುಸ್ಲಿಮ್ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳೂ ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದು,  ಇತರ ಸಮುದಾಯದ ವಿದ್ಯಾರ್ಥಿಗಳ ಜೊತೆಗಿನ ಸ್ನೇಹ ಮತ್ತು ಸಂಪರ್ಕವನ್ನು ಕಳಕೊಳ್ಳುತ್ತಿದ್ದಾರೆ, ಹಾಗೆಯೇ ಈ ಸ್ಥಿತಿಯು ಅವರಲ್ಲಿ  ಖಿನ್ನತೆಯ ಭಾವವನ್ನು ಮೂಡಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜಾಬ್ ಮತ್ತು ಶಿಕ್ಷಣವನ್ನು ಎರಡಾಗಿ  ವಿಭಜಿಸಿರುವುದನ್ನು ಕೃತಕ ಸೃಷ್ಟಿ ಎಂದಿರುವ ವರದಿಯು ಇದು ವಿದ್ಯಾರ್ಥಿನಿಯರ ಕನಸನ್ನೇ ಚಿವುಟಿ ಹಾಕಿದೆ ಮತ್ತು ಮುಸ್ಲಿಮ್  ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಮೊಟಕುಗೊಳ್ಳುವಂತೆ ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ, 

ಹಿಜಾಬನ್ನು  ನಿರ್ಬಂಧಿಸಿ ರಾಜ್ಯ ಸರ್ಕಾರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿನಿಯರು ಹಾಗೂ  ಅವರ ಕುಟುಂಬ ಅನುಭವಿಸಿರುವ ನಷ್ಟಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಹಾರ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ  ನಿರ್ದೇಶಿಸಬೇಕು ಎಂದೂ ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತ  ಆಯೋಗವು ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಕಾಲೇಜು ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ  ಸಮಿತಿಗಳ ವಿರುದ್ಧ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಬೇಕು ಹಾಗೂ ಈಗಿನ ಕಾಲೇಜು ಅಭಿವೃದ್ಧಿ ಮಂಡಳಿಯನ್ನು ರದ್ದು  ಮಾಡಿ, ಎಲ್ಲ ಸಮುದಾಯಗಳ ಸದಸ್ಯರು, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಸದಸ್ಯರು ಮತ್ತು  ಮಹಿಳೆಯರೂ ಸೇರಿದಂತೆ ಎಲ್ಲರ ಪ್ರಾತಿನಿಧ್ಯವನ್ನು ಹೊಂದಿರುವ ಹೊಸ ಸಮಿತಿಯನ್ನು ರಚಿಸಬೇಕು ಎಂದೂ ವರದಿಯಲ್ಲಿ ಸಲಹೆ  ನೀಡಲಾಗಿದೆ. ಅಂದಹಾಗೆ,
ಇದು ಮಧ್ಯಂತರ ವರದಿಯಾಗಿದ್ದು, ಪೂರ್ಣ ಪ್ರಮಾಣದ ವರದಿಯಲ್ಲಿ ಇನ್ನಷ್ಟು ಮಾಹಿತಿ ಮತ್ತು ಸಲಹೆಗಳಿರಬಹುದಾದ ಸಾಧ್ಯತೆ  ಇದೆಯಾದರೂ, ಒಂದು ಗಂಭೀರ ಪ್ರಕರಣದ ಮೇಲೆ ಅಧ್ಯಯನ ನಡೆಸಲು ಮುಂದಾದ ಪಿಯುಸಿಎಲ್‌ಗೆ ಕೃತಜ್ಞತೆಯನ್ನು ಸಲ್ಲಿಸಬೇಕು.  ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಉದ್ದೇಶದಿಂದ 1976ರಲ್ಲಿ ಹುಟ್ಟಿಕೊಂಡ ಸಂಸ್ಥೆಯೊAದು ಇಷ್ಟು ದೀರ್ಘಾವಧಿಯ  ಬಳಿಕವೂ ತನ್ನ ಉದ್ದೇಶಿತ ನಿಲುವಿನಲ್ಲಿ ಅಚಲವಾಗಿದೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ. ಅಷ್ಟಕ್ಕೂ,

ಹಿಜಾಬ್- ಸರ್ಕಾರಕ್ಕೆ ಒಂದು ತುಂಡು ಬಟ್ಟೆಯಾಗಿ ಕಾಣಿಸಿರಬಹುದು ಮತ್ತು ಅದನ್ನು ವಿದ್ಯಾರ್ಥಿನಿಯರ ತಲೆಯಿಂದ ಕಳಚುವುದರಿಂದ  ರಾಜಕೀಯವಾಗಿ ಸಿಗುವ ಲಾಭವನ್ನು ಲೆಕ್ಕ ಹಾಕಿರಬಹುದು. ಆದರೆ ಮುಸ್ಲಿಮ್ ಸಮಾಜ ಎಂದೂ ಕೂಡ ಹಿಜಾಬನ್ನು ಒಂದು  ಬಟ್ಟೆಯಾಗಿ ಪರಿಗಣಿಸಿಲ್ಲ ಮತ್ತು ಅದನ್ನು ಧರಿಸದಂತೆ ನಿರ್ಬಂಧಿಸುವ ಸರ್ಕಾರ ಸುತ್ತೋಲೆಯನ್ನು ಇತರೆಲ್ಲ ಸುತ್ತೋಲೆಗಳಂತೆ  ಪರಿಗಣಿಸುವ ಸ್ಥಿತಿಯಲ್ಲೂ ಇಲ್ಲ. ಅಂದಹಾಗೆ, ‘ಯುನಿಫಾರ್ಮ್ ನ  ಭಾಗವಾಗಿ ವಿದ್ಯಾರ್ಥಿನಿಯರ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ  ಹಾಕಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ..’ ಎಂಬ ಒಂದು ಗೆರೆಯ ಸುತ್ತೋಲೆಯನ್ನು ಹೊರಡಿಸುವುದರಿಂದ ಈ ಸರ್ಕಾರ  ಕಳಕೊಳ್ಳುವಂಥz್ದÉÃನೂ ಇರಲಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿತ್ತು. ವಿದ್ಯಾರ್ಥಿನಿಯರ ಭವಿಷ್ಯಕ್ಕಿಂತ ತನ್ನ ಅಧಿಕಾರದ ಭವಿಷ್ಯಕ್ಕೆ ಆದ್ಯತೆ  ನೀಡಿತು. ಮಾತ್ರವಲ್ಲ, ಹಿಜಾಬನ್ನು ಹಿಂದೂ-ಮುಸ್ಲಿಮ್ ನಡುವಿನ ಸಮಸ್ಯೆ ಎಂಬAತೆ ಬಿಂಬಿಸಿ ಸಾಮಾಜಿಕ ವಿಭಜನೆಗೂ ವೇದಿಕೆ ಕ ಲ್ಪಿಸಿತು.

ಸುಪ್ರೀಮ್ ಕೋರ್ಟಿನ ತೀರ್ಪು ಏನೇ ಬರಲಿ, ಪಿಯುಸಿಎಲ್ ಪ್ರಯತ್ನ ಶ್ಲಾಘನೀಯ.

No comments:

Post a Comment