ಸನ್ಮಾರ್ಗ ಸಂಪಾದಕೀಯ
1947 ಆಗಸ್ಟ್ 15ರಂದು ಗಾಂಧೀಜಿ ಕೊಲ್ಕತ್ತಾ ಬಳಿಯ ನೌಕಾಲಿಯಲ್ಲಿದ್ದರು. ಆಗಸ್ಟ್ 6ರಂದೇ ಅವರು ಲಾಹೋರ್‌ನಿಂದ ಕೊಲ್ಕತ್ತಾಕ್ಕೆಂದು ಹೊರಟಿದ್ದರು. ಅಲ್ಲಿಂದ ನೌಕಾಲಿಗೆ ಹೋಗುವುದು ಅವರ ಉದ್ದೇಶ. ಭಾರತ ಮತ್ತು ಪಾಕಿಸ್ತಾನ ಎಂಬ ಹೆಸರಲ್ಲಿ ಭಾರತ ವಿಭಜನೆಗೊಂಡು ಸ್ವತಂತ್ರಗೊಳ್ಳುವುದು ಅದಾಗಲೇ ದೇಶಕ್ಕೆ ದೇಶವೇ ತಿಳಿದಿರುವ ಕಾರಣ ಉತ್ತರ ಭಾರತದಲ್ಲಿ ಹಿಂದೂ- ಮುಸ್ಲಿಮ್ ಘರ್ಷಣೆ ಸ್ಫೋಟಗೊಂಡಿತ್ತು. ಇವತ್ತು ಬಾಂಗ್ಲಾದೇಶದ ಭಾಗವಾಗಿರುವ ನೌಕಾಲಿಯಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರು. ಕೊಲ್ಕತ್ತಾದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. ಮುಸ್ಲಿಮ್ ಪಾಕಿಸ್ತಾನ ಮತ್ತು ಹಿಂದೂ ಭಾರತ ಎಂಬ ಕರಿಛಾಯೆಗೆ ಬಡಜನರು ಸಿಲುಕಿಕೊಂಡರು. ನೌಕಾಲಿಯಲ್ಲಿ ಹಿಂದೂಗಳು ಸಂತ್ರಸ್ತರಾದರೆ ಕೊಲ್ಕತ್ತಾದಲ್ಲಿ ಮುಸ್ಲಿಮರು ಸಂತ್ರಸ್ತರಾದರು. ನೌಕಾಲಿಗೆಂದು ಹೊರಟ ಗಾಂಧೀಜಿಯವರು ಆಗಸ್ಟ್ 9ರಂದು ಕೊಲ್ಕತ್ತಾ ತಲುಪಿದರು. ಆಗ ಅವರನ್ನು ಪ್ರಮುಖ ಮುಸ್ಲಿಮ್ ಮುಖಂಡ ಹುಸೈನ್ ಶಹೀದ್ ಸುಹ್ರವರ್ದಿ ಭೇಟಿಯಾಗಿ ಕೊಲ್ಕತ್ತಾದಲ್ಲೇ ಉಳಕೊಳ್ಳುವಂತೆ ಮತ್ತು ಮುಸ್ಲಿಮರ ಮೇಲಿನ ದಾಳಿಯನ್ನು ತಡೆಯುವುದಕ್ಕೆ ನೆರವಾಗುವಂತೆ ವಿನಂತಿಸಿದರು. ನೌಕಾಲಿಯಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ತಡೆಯಲು ನೀವು ನೆರವಾದರೆ, ಕೊಲ್ಕತ್ತಾದಲ್ಲಿ ಮುಸ್ಲಿಮರ ಮೇಲಿನ ದಾಳಿಯನ್ನು ತಡೆಯಲು ನೆರವಾಗುವೆ.. ಎಂದು ಗಾಂಧೀಜಿ ಮಾತು ಕೊಟ್ಟರು. ಆ ಬಳಿಕ ಅವರಿಬ್ಬರೂ ಭುಜಕ್ಕೆ ಭುಜ ಸೇರಿಸಿ ಕೋಮುಗಲಭೆಯನ್ನು ನಿಯಂತ್ರಿಸುವುದಕ್ಕೆ ಶ್ರಮಿಸಿದರು. ಗಾಂಧೀಜಿ ಅಮರಣಾಂತ ಉಪವಾಸ ವ್ರತ ಘೋಷಿಸಿದರು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲೂ ಗಾಂಧೀಜಿ ಜನರ ನಡುವೆ ನಿಂತರು. ಹಿಂದೂಗಳಿಗೆ ಸುಹ್ರವರ್ದಿಯ ಮೇಲೆ ಆಕ್ರೋಶವಿತ್ತು. ಹಿಂದೂಗಳ ಮೇಲಿನ ದಾಳಿಯ ವೇಳೆ ಅವರ ನಿಲುವಿನ ಬಗ್ಗೆ ಆಕ್ಷೇಪವಿತ್ತು. ಆದರೆ, ಗಾಂಧೀಜಿ ನಿಜ ನಾಯಕನಂತೆ ಎಲ್ಲರನ್ನೂ ಸೇರಿಸಿಕೊಂಡು ಹಿಂದೂ-ಮುಸ್ಲಿಮರನ್ನು ದ್ವೇಷದ ಕುಲುಮೆಯಿಂದ ಹೊರತಂದರು. ಹಿಂದೂಗಳನ್ನು ಮಂದಿರದಲ್ಲೂ ಮುಸ್ಲಿಮರನ್ನು ಮಸೀದಿಯಲ್ಲೂ ಸೇರಿಸಿದರು. ಎಲ್ಲಿಯವರೆಗೆಂದರೆ, ಆಗಸ್ಟ್ 26ರ ಈದುಲ್ ಫಿತರ್ ಹಬ್ಬವನ್ನು ಎಲ್ಲರ ಜೊತೆ ಸೇರಿ ಆಚರಿಸಿದರು. ಜನರು ಸಂಕಷ್ಟದಲ್ಲಿರುವಾಗ ಓರ್ವ ಜವಾಬ್ದಾರಿಯುತ ವ್ಯಕ್ತಿ ಏನು ಮಾಡಬಹುದು ಎನ್ನುವುದಕ್ಕೆ ನಿದರ್ಶನ ಇದು. ದುರಂತ ಏನೆಂದರೆ,1947 ಆಗಸ್ಟ್ 15ರ ಆಸುಪಾಸಿನಲ್ಲಿ ಕೊಲ್ಕತ್ತಾ, ನೌಕಾಲಿ ಕೋಮುದ್ವೇಷದಿಂದ ಉರಿದಿದ್ದರೆ ಈ 2023ರ ಆಗಸ್ಟ್ ಆಸುಪಾಸಿನಲ್ಲಿ ಮಣಿಪುರ, ಹರ್ಯಾಣಗಳು ಉರಿಯುತ್ತಿವೆ. ಸ್ವಾತಂತ್ರ‍್ಯ ಲಭ್ಯವಾಗಿ 75 ವರ್ಷಗಳಾದ ಬಳಿಕವೂ ಧರ್ಮದ ಹೆಸರಿನಲ್ಲಿ ನಡೆಯುವ ಅತ್ಯಾಚಾರಕ್ಕೆ ತೆರೆಬಿದ್ದಿಲ್ಲ. ಮಣಿಪುರದಲ್ಲಿ ಮೇಥಿಗಳು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿ ಅತ್ಯಾಚಾರ ನಡೆಸಿದ್ದಾರೆ. 150ಕ್ಕಿಂತಲೂ ಅಧಿಕ ಮಂದಿಯ ಪ್ರಾಣಹಾನಿಯಾಗಿದೆ. ಮೇಥಿಗಳು ಮತ್ತು ಕುಕಿಗಳು ಶಸ್ತಾಸ್ತ್ರ ಹಿಡಿದು ಹೋರಾಡುತ್ತಿದ್ದಾರೆ. ಮೇ 3ರಿಂದ ಆರಂಭವಾಗಿರುವ ಧರ್ಮದ್ವೇಷದ ಈ ಚಟುವಟಿಕೆ ಇನ್ನೂ ನಿಂತಿಲ್ಲ. ನೌಖಾಲಿಯಲ್ಲಿ ಹಿಂದೂಗಳ ವಿರುದ್ಧ ತಿರುಗಿ ಬಿದ್ದಿದ್ದ ಮುಸ್ಲಿಮರನ್ನು ಮತ್ತು ಕೊಲ್ಕತ್ತಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಹಿಂದೂಗಳನ್ನು ಮನುಷ್ಯರಾಗಿ ಆಲೋಚಿಸುವಂತೆ ಮಾಡುವುದಕ್ಕೆ ಗಾಂಧೀಜಿಗೆ ಸಾಧ್ಯವಾಗಿತ್ತು. ಅವರು ಆ ಪ್ರದೇಶಗಳಿಗೆ ಭೇಟಿಕೊಟ್ಟು, ಜನರೊಂದಿಗೆ ಬೆರೆತು, ಉಪವಾಸ ಆಚರಿಸಿ ಜನರ ಭಾವನೆಯಲ್ಲಿ ಬದಲಾವಣೆಯನ್ನು ತರಲು ಯಶಸ್ವಿಯಾಗಿದ್ದರು. ಆದರೆ ಇವತ್ತು ಇಂಥ ನಾಯಕರೇ ಕಾಣಿಸುತ್ತಿಲ್ಲ. ಸರ್ವರನ್ನೂ ಜೊತೆಗೆ ಕೊಂಡೊಯ್ಯಬೇಕಾದ ಮತ್ತು ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸಬೇಕಿದ್ದ ಪ್ರಧಾನಿ ಆ ಹೊಣೆಗಾರಿಕೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮಣಿಪುರಕ್ಕೆ ಬೆಂಕಿ ಬಿದ್ದು ಮೂರು ತಿಂಗಳು ಕಳೆದ ಬಳಿಕ ಮಣಿಪುರದ ಬಗ್ಗೆ ಕೇವಲ ಎರಡೇ ಎರಡು ನಿಮಿಷ ಪ್ರಧಾನಿ ಮಾತನಾಡಿದ್ದಾರೆ. ಅದೂ ಕೂಡಾ ಪ್ರತಿಪಕ್ಷಗಳು ಪಾರ್ಲಿಮೆಂಟ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಪ್ರಧಾನಿ ಮಾತಾಡಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ನಿರ್ಮಿಸಿದ ಬಳಿಕ. ನೌಕಾಲಿ ಭಾರತದ ಭಾಗವಾಗುವುದಿಲ್ಲವೆಂದು ಗೊತ್ತಿದ್ದೂ ಕೂಡಾ ಗಾಂಧೀಜಿ ಅಲ್ಲಿಗೆ ತೆರಳಿದ್ದರು. ಜನರೊಂದಿಗೆ ಬೆರೆತಿದ್ದರು. ಭೂಮಿ ಯಾರ ಪಾಲಾಗುತ್ತದೆ ಎಂಬುದರ ಆಚೆಗೆ ಅಲ್ಲಿ ಬದುಕುತ್ತಿರುವವರ ಪ್ರಾಣ-ಮಾನಕ್ಕೆ ಅವರು ಪ್ರಾಮುಖ್ಯತೆ ನೀಡಿದ್ದರು. ಹಾಗಂತ,
ಗಾಂಧೀಜಿ ದೇಶದ ಪ್ರಧಾನಿಯೋ ರಾಷ್ಟ್ರಪತಿಯೋ ಏನೂ ಆಗಿರಲಿಲ್ಲ. ಆದರೆ ಮಣಿಪುರ ಈ ದೇಶದ್ದೇ ಒಂದು ತುಂಡು ಭಾಗ. ಅಲ್ಲದೇ, ಈಗಿನ ಗಾಂಧಿರಹಿತ ಭಾರತಕ್ಕೆ ಪ್ರಧಾನಿಯೇ ನಾಯಕ. ಆದರೆ ಈಗಿನ ಪ್ರಧಾನಿ ಮಣಿಪುರಕ್ಕೆ ಈವರೆಗೆ ಭೇಟಿ ಕೊಟ್ಟಿಲ್ಲ. ಅಲ್ಲಿನ ಜನರ ಭಾವನೆಗಳನ್ನು ಆಲಿಸಿಲ್ಲ. ಅತ್ಯಂತ ಸಂಕಷ್ಟದಲ್ಲಿರುವ ಸಮಯದಲ್ಲಿ ಜನರು ಪ್ರಧಾನಿಯ ಉಪಸ್ಥಿತಿಯನ್ನು ಬಯಸುತ್ತಾರೆ. ಅವರಲ್ಲಿ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಹಗುರವಾಗುತ್ತಾರೆ. ಆದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ ಇತರ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ಪ್ರಯಾಣಿಸಿರುವ ಪ್ರಧಾನಿ ಮಣಿಪುರಕ್ಕೆ ಭೇಟಿ ಕೊಡುವುದು ಬಿಡಿ, ಮಣಿಪುರಿಗಳಲ್ಲಿ ಧೈರ್ಯ ತುಂಬುವುದಕ್ಕೆ ಒಂದೈದು ನಿಮಿಷವನ್ನೂ ವ್ಯಯಿಸಿಲ್ಲ. ಇಲ್ಲಿ ಇನ್ನೂ ಒಂದು ಆಘಾತಕಾರಿ ಅಂಶವಿದೆ. ಅದೇನೆಂದರೆ,
ಕಳೆದ ಆಗಸ್ಟ್ ನಲ್ಲಿ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿತ್ತು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಧರ್ಮದ್ವೇಷದ ಹಿಂಸೆಯ ವೇಳೆ ಬಿಲ್ಕಿಸ್ ಬಾನು ಎಂಬ 22 ವರ್ಷದ ಗರ್ಭಿಣಿಯ ಮೇಲೆ ಅತ್ಯಾಚಾರಗೈದ, ಆಕೆಯ ಮಗಳನ್ನು ನೆಲಕ್ಕೆ ಬಡಿದು ಹತ್ಯೆಗೈದುದೂ ಸೇರಿದಂತೆ 7 ಮಂದಿಯ ಹತ್ಯೆ ನಡೆಸಿದ ಅಪರಾಧಿಗಳು ಇವರು. ಇವರು ಜೀವನಪರ್ಯಂತ ಜೈಲಲ್ಲಿರಬೇಕು ಎಂಬುದು ನ್ಯಾಯಾಲಯದ ನಿಲುವಾಗಿತ್ತು. ಆದರೆ ಇವರನ್ನು ಬಿಡುಗಡೆಗೊಳಿಸಲು ಗುಜರಾತ್ ಸರಕಾರ ನಿರ್ಧರಿಸಿತು. ಹಾಗಂತ, ಈ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಕೇಂದ್ರ ಸರಕಾರದ ಒಪ್ಪಿಗೆಯ ಹೊರತು ಬಿಡುಗಡೆ ಅಸಾಧ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ಅನುಮತಿ ಕೋರಿ ಗುಜರಾತ್ ಸರಕಾರ ಪತ್ರ ಬರೆಯಿತು. ಕೇಂದ್ರ ಸರಕಾರ ಈ ಬಿಡುಗಡೆಗೆ ಅನುಮತಿಯನ್ನೂ ನೀಡಿತು. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ನಡೆಯುತ್ತಿರುವ ವೇಳೆಯಲ್ಲೇ ಈ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರಧಾನಿ ಮನಸ್ಸು ಮಾಡಿದ್ದಿದ್ದರೆ ಈ ಬಿಡುಗಡೆ ಸಾಧ್ಯವೇ ಇರಲಿಲ್ಲ. ಸ್ವತಂತ್ರಗೊಂಡು 75 ವರ್ಷಗಳಾಗುವಾಗ ದೇಶ ಎತ್ತ ಕಡೆ ಮುಖ ಮಾಡಿದೆ ಎಂಬುದನ್ನು ಇದು ಸೂಚಿಸುತ್ತದೆ.
ನಿಜವಾಗಿ, ಗಾಂಧೀಜಿಯ ಹೆಸರನ್ನು ಉಚ್ಚರಿಸಲೂ ಲಾಯಕ್ಕಲ್ಲದ ಹೆಚ್ಚಿನವರು ಇವತ್ತು ಜನಪ್ರತಿನಿಧಿಗಳಾಗಿದ್ದಾರೆ. ಹಲ್ಲೆ, ಹತ್ಯೆ, ಅತ್ಯಾಚಾರ, ದ್ವೇಷಭಾಷಣ, ಭ್ರಷ್ಟಾಚಾರ ಇತ್ಯಾದಿ ಕೊಳಕುಗಳನ್ನು ಅಂಟಿಸಿಕೊಳ್ಳದೇ ಸ್ವಚ್ಛವಾಗಿರುವ ಜನಪ್ರತಿನಿಧಿಗಳ ಸಂಖ್ಯೆ ವರ್ಷಂಪ್ರತಿ ಕಡಿಮೆಯಾಗುತ್ತಿದೆ. ಸ್ವಾತಂತ್ರ‍್ಯದ 75 ವರ್ಷಗಳಲ್ಲಿ ಪ್ರಾಮಾಣಿಕತೆ, ನೈತಿಕತೆ, ಧರ್ಮ, ಮೌಲ್ಯ ಇತ್ಯಾದಿಗಳ ಅರ್ಥವೇ ಬದಲಾಗಿದೆ. ಪ್ರಧಾನಿ ಸಹಿತ ಜನಪ್ರತಿನಿಧಿಗಳು ಪ್ರತಿ ಮಾತನ್ನೂ ಓಟಿನ ಲೆಕ್ಕಾಚಾರದಿಂದಲೇ ಆಡುತ್ತಾರೆ. ಮುಸ್ಲಿಮರ ಮತಗಳೇ ಬೇಡ ಎಂದು ಹೇಳುವಷ್ಟು ರಾಜಕೀಯ ಕೊಳೆತು ಹೋಗಿದೆ. ಕೋಮುಗಲಭೆಯನ್ನೂ ಓಟಿನ ದೃಷ್ಟಿಕೋನದಿಂದಲೇ ನೋಡಲಾಗುತ್ತದೆ. ಭ್ರಷ್ಟಾಚಾರಿ ತಮ್ಮ ಪಕ್ಷದವರಾದರೆ ಸಮರ್ಥಿಸುವುದು ಮತ್ತು ಅನ್ಯ ಪಕ್ಷದವನಾದರೆ ಪ್ರತಿಭಟಿಸುವುದು ಎಂಬಲ್ಲಿಗೆ ನೈತಿಕತೆ ಕುಸಿದು ಹೋಗಿದೆ. ರೈಲು ಅಪಘಾತದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿ ಇವತ್ತಿನ ರಾಜಕಾರಣದಲ್ಲಿ ದಡ್ಡ ಅನಿಸಿಕೊಂಡಿದ್ದಾರೆ. ಅಂದಹಾಗೆ,
1947ರ ಭಾರತ ಮತ್ತು 2023ರ ಭಾರತವನ್ನು ತಕ್ಕಡಿಯಲ್ಲಿಟ್ಟು ತೂಗುವಾಗ ಖುಷಿ ಮತ್ತು ದುಃಖ ಎರಡರ ಅನುಭವವೂ ಉಂಟಾಗುತ್ತದೆ. 47ರ ಭಾರತ ಸ್ವತಃ ಸೂಜಿಯನ್ನು ತಯಾರಿಸಲಾರದಷ್ಟು ಬಡವಾಗಿತ್ತು. ಆದರೆ, ಹೃದಯದಲ್ಲಿ ಶ್ರೀಮಂತವಾಗಿತ್ತು. 2023ರ ಭಾರತ ಚಂದ್ರನಲ್ಲಿಗೆ ರಾಕೆಟ್ ಕಳುಹಿಸುವಷ್ಟು ಶ್ರೀಮಂತವಾಗಿದೆ. ಆದರೆ, ಹೃದಯದಲ್ಲಿ ಬಡವಾಗಿದೆ. ಬರಬರುತ್ತಾ ಹಿಂದೂ ಮತ್ತು ಮುಸ್ಲಿಮರನ್ನು ಅಥವಾ ಹಿಂದೂ ಮತ್ತು ಕ್ರೈಸ್ತರನ್ನು ಕಿಡಿ ಹೊತ್ತಿಕೊಳ್ಳುವ ಎರಡು ವೈರಿ ವಸ್ತುಗಳಂತೆ ಪರಿವರ್ತಿಸಿ ಬಿಡಲಾಗಿದೆ. ಅಭಿವೃದ್ಧಿ ರಾಜಕಾರಣ ಸರಿದು ಹೋಗಿ ದ್ವೇಷ ರಾಜಕಾರಣ ಮುನ್ನೆಲೆಗೆ ಬಂದಿದೆ. ನಿಜವಾಗಿ, 2023ರ ಭಾರತವನ್ನು ಕಂಡು 47ರ ಭಾರತ ಸಂಭ್ರಮಿಸಬೇಕಿತ್ತು. ಆದರೆ, ಅಂಥದ್ದೊಂದು ಸಂತಸಕ್ಕೆ ಮಣಿಪುರಗಳು, ಹರ್ಯಾಣಗಳು ಅವಕಾಶ ಕೊಡುತ್ತಿಲ್ಲ. ಆ 11 ಮಂದಿ ಅಪರಾಧಿಗಳಂತೂ 47ರ ಭಾರತ ನಾಚುವಂತೆ ಎದೆ ಸೆಟೆದು ನಡೆದಾಡುತ್ತಿದ್ದಾರೆ. ಇದು ನಿಜಕ್ಕೂ ವಿಷಾದನೀಯ.
No comments:
Post a Comment