2022 ಆಗಸ್ಟ್ 15ರಂದು ಈ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರಕಾರ ಬಿಡುಗಡೆಗೊಳಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ಅಪರಾಧಿಗಳು ಬಿಲ್ಕಿಸ್ ಬಾನು ಮತ್ತು ಅವರ ಕುಟುಂಬದ ಮೇಲೆ ಅತ್ಯಂತ ಪೈ ಶಾಚಿಕವಾಗಿ ನಡಕೊಂಡಿದ್ದರು. 21 ವರ್ಷದವಳಾಗಿದ್ದ ಮತ್ತು 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನುರನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಗಿತ್ತು. ಆಕೆಯ ಪುಟ್ಟ ಮಗಳನ್ನು ಕಣ್ಣೆದುರೇ ನೆಲಕ್ಕೆ ಬಡಿದು ಈ ದುರುಳರು ಹತ್ಯೆ ಮಾಡಿದ್ದರು. ಅಲ್ಲದೇ, ಆಕೆಯ ಕುಟುಂಬದ 7 ಮಂದಿಯ ಹತ್ಯೆಗೂ ಕಾರಣರಾಗಿದ್ದರು. ಗುಜರಾತ್ ಗಲಭೆಯ ವೇಳೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಟ್ರಕ್ ಒಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದ ಗುಂಪಿನಲ್ಲಿ ಈ ಬಿಲ್ಕಿಸ್ ಮತ್ತು ಹತ್ಯೆಗೀಡಾದ ಈ 7 ಮಂದಿಯೂ ಸೇರಿದ್ದರು. ಆ ಘಟನೆಯಲ್ಲಿ ಒಟ್ಟು 14 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಜ್ಞೆ ಕಳಕೊಂಡು ಬಿದ್ದಿದ್ದ ಬಿಲ್ಕಿಸ್‌ರನ್ನು ಈ ದುರುಳರು ಸತ್ತಿದ್ದಾರೆಂದು ಭಾವಿಸಿ ಬಿಟ್ಟು ಹೋಗಿದ್ದರು. ಪ್ರಜ್ಞೆ ಮರಳುವಾಗ ಬಿಲ್ಕಿಸ್ ನಗ್ನರಾಗಿದ್ದರು. ಬಳಿಕ ಹತ್ತಿರದ ಗುಡ್ಡ ಏರಿ ಅಲ್ಲಿಯ ಮನೆಯೊಂದರಲ್ಲಿ ಅವರು ಆಶ್ರಯ ಪಡೆದರು. ಈ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನ ಬದಲು ಮುಂಬೈಯಲ್ಲಿ ನಡೆಸುವಂತೆ ಸುಪ್ರೀಮ್ ಕೋರ್ಟು ಆದೇಶಿಸಿತ್ತು. ವಿಚಾರಣೆ ನಡೆಸಿದ ಸಿಬಿಐ ಈ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಮುಂಬೈ ಹೈಕೋರ್ಟು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು.
ಈ ನಡುವೆ ಬಿಲ್ಕಿಸ್ ಬಾನು ಹಲವು ಸವಾಲುಗಳನ್ನು ಎದುರಿಸಿದ್ದರು. ನಿರಂತರ ಜೀವ ಬೆದರಿಕೆ ಆಕೆಯನ್ನು ಬೆನ್ನಟ್ಟಿತ್ತು. ಮರ‍್ನಾಲ್ಕು ಬಾರಿ ಮನೆ ಬದಲಾಯಿಸಿದ್ದರು. ಒಂದುಕಡೆ, ಪುಟ್ಟ ಮಗಳೂ ಸೇರಿದಂತೆ ಕುಟುಂಬದ 7 ಮಂದಿಯನ್ನು ಕಣ್ಣೆದುರೇ ಕಳಕೊಂಡ ದುಃಖ ಮತ್ತು ಅತ್ಯಾಚಾರಕ್ಕೊಳಗಾದ ಆಘಾತ, ಇನ್ನೊಂದೆಡೆ ಜೀವ ಬೆದರಿಕೆ- ಇವೆರಡನ್ನೂ ಎದುರಿಸಿ ನಿಲ್ಲುವುದು ಆಕೆಗೆ ಸುಲಭವಾಗಿರಲಿಲ್ಲ. ಆಕೆಗೆ ಈ 11 ಮಂದಿ ದುಷ್ಕರ್ಮಿಗಳಷ್ಟೇ ಸವಾಲಾಗಿರಲಿಲ್ಲ, ಇಡೀ ಪ್ರಭುತ್ವವನ್ನೇ ಆಕೆ ಎದುರಿಸಬೇಕಿತ್ತು. ಪೊಲೀಸ್ ಠಾಣೆಯ ಕಂಭ ಕಂಭಗಳೂ ಬಿಲ್ಕಿಸ್‌ರನ್ನು ಬೆದರಿಸುತ್ತಿತ್ತು. ಅತ್ಯಾಚಾರದ ಸಂತ್ರಸ್ತೆ ಎಂಬೊಂದು ಹಣೆಪಟ್ಟಿಯನ್ನು ಅಂಟಿಸಿಕೊಂಡೇ ಆಕೆ ಬದುಕಬೇಕಿತ್ತು. ನ್ಯಾಯಾಲಯದ ವಿಚಾರಣೆಗೂ ಹಾಜರಾಗಬೇಕಿತ್ತು. ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಬೇಕಿತ್ತು. ಆದರೆ, ಬಿಲ್ಕಿಸ್ ಈ ಎಲ್ಲ ಸವಾಲನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದರು. ತನ್ನ ಮೇಲೆ ಅತ್ಯಾಚಾರಗೈದ ಮತ್ತು ಕುಟುಂಬ ಸದಸ್ಯರನ್ನು ಹತ್ಯೆಗೈದವರನ್ನು ಶಿಕ್ಷೆಯ ಕುಣಿಕೆಗೆ ತಲುಪಿಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದರು. ಈ ದಿಕ್ಕಿನಲ್ಲಿ ಎದುರಾದ ಸರ್ವ ಒತ್ತಡಗಳನ್ನೂ ಧಿಕ್ಕರಿಸಿದರು. ಈ ಹೋರಾಟ ಮನೋಭಾವದ ಪರಿಣಾಮವಾಗಿಯೇ ಈ 11 ಮಂದಿ ಕ್ರೂರಿಗಳಿಗೆ ಶಿಕ್ಷೆಯಾಯಿತು. ಸಾಮಾನ್ಯವಾಗಿ,
ಕೋಮುಗಲಭೆಯ ವೇಳೆ ಎಸಗಲಾಗುವ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವುದು ಬಹಳ ಕಡಿಮೆ. ಹೆಚ್ಚಿನ ವೇಳೆ ಸಂತ್ರಸ್ತರು ದೂರು ಕೊಡುವುದಿಲ್ಲ. ಒಂದುವೇಳೆ ಕೊಟ್ಟರೂ ದುಷ್ಕರ್ಮಿಗಳ ಒತ್ತಡದಿಂದಾಗಿ ನ್ಯಾಯಾಲಯದಲ್ಲಿ ಅವರು ಹೇಳಿಕೆ ಬದಲಿಸುವುದೇ ಹೆಚ್ಚು. ಗುಜರಾತ್‌ನ ಬೆಸ್ಟ್ ಬೇಕರಿ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ಅತ್ಯಾಚಾರಕ್ಕೊಳಗಾಗಿ ಜೀವಭಯದಿಂದ ಊರು ಬಿಟ್ಟವರು ಮರಳಿ ಊರಿಗೆ ಬರಬೇಕಾದರೆ ದುಷ್ಕರ್ಮಿಗಳೇ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಅದರಲ್ಲಿ, ದೂರು ನೀಡಬಾರದು ಮತ್ತು ನೀಡಿದ್ದರೆ ಅದನ್ನು ಹಿಂತೆಗೆದುಕೊಳ್ಳಬೇಕು ಎಂಬುದೂ ಒಂದು. ಬಹುತೇಕ ಪ್ರಕರಣಗಳಲ್ಲಿ ಈ ರಾಜಿ ಒಪ್ಪಂದವೇ ಮೇಲುಗೈ ಪಡೆಯುತ್ತದೆ. ಅಲ್ಲದೇ, ಪೊಲೀಸರೂ ಸೂಕ್ತ ಎಫ್‌ಐಆರ್ ದಾಖಲಿಸುವುದಿಲ್ಲ. ಪೂರಕ ಸಾಕ್ಷ್ಯಗಳನ್ನೂ ಸಂಗ್ರಹಿಸುವುದಿಲ್ಲ. ಅವರು ದುಷ್ಕರ್ಮಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ದುರ್ಬಲಗೊಳಿಸುವ ಸನ್ನಿವೇಶಗಳೇ ಹೆಚ್ಚು. ಇಂಥ ಹಲವು ಸವಾಲುಗಳ ನಡುವೆಯೂ ಬಿಲ್ಕಿಸ್ ಬಾನು ದುಷ್ಕರ್ಮಿಗಳನ್ನು ಕಟಕಟೆಗೆ ತಂದಿದ್ದಾರೆಂದರೆ ಮತ್ತು ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆಂದರೆ, ಅದು ಸಣ್ಣ ಸಾಹಸವಲ್ಲ. ನಿಜವಾಗಿ,
ಗುಜರಾತ್ ಸರಕಾರ ಬಿಲ್ಕಿಸ್ ಪರ ನಿಲ್ಲಬೇಕಿತ್ತು. ಆದರೆ, ಅದು ದುಷ್ಕರ್ಮಿಗಳ ಪರ ನಿಂತಿತು. ಈ ದುರುಳರನ್ನು ಬಿಡುಗಡೆಗೊಳಿಸುವುದಕ್ಕೆ ಅನುಮತಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಿತು. ದುರಂತ ಏನೆಂದರೆ, ಈ ಪತ್ರ ಬರೆದುದಕ್ಕಾಗಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಬೇಕಿದ್ದ ಕೇಂದ್ರ ಗೃಹ ಇಲಾಖೆಯು ಬಿಡುಗಡೆಗೆ ಅನುಮತಿಯನ್ನು ನೀಡಿ ಈ ಪಾಪ ಕಾರ್ಯದಲ್ಲಿ ತಾನೂ ಶಾಮೀಲಾಯಿತು. ಹಾಗಂತ, ಇಲ್ಲಿಗೇ ಮುಗಿದಿಲ್ಲ.
ಈ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು, ಸಂಸದೆ ಮಹುವಾ ಮೊಯಿತ್ರ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ನ್ಯಾಯಮೂರ್ತಿ ಕೆ.ಎ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವನ್ನು ಸುಪ್ರೀಮ್ ಕೋರ್ಟು ರಚಿಸಿತು. ಆದರೆ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಇಲ್ಲೂ ಆಟವಾಡತೊಡಗಿತು. ಪ್ರಕರಣದ ವಿಚಾರಣೆಯನ್ನು ಪದೇ ಪದೇ ಮೂಂದೂಡುವಂಥ ಸನ್ನಿವೇಶವನ್ನು ಸರಕಾರಗಳು ಸೃಷ್ಟಿಸತೊಡಗಿದುವು. ಕೆ.ಎ. ಜೋಸೆಫ್ ಈ ಪ್ರಕರಣದ ವಿಚಾರಣೆ ನಡೆಸುವುದು ಈ ಎರಡೂ ಸರಕಾರಗಳಿಗೂ ಬೇಕಿರಲಿಲ್ಲ. 2023 ಜೂನ್ 16ರಂದು ಅವರು ನಿವೃತ್ತಿಯಾಗಲಿದ್ದು, ಅಲ್ಲಿಯವರೆಗೆ ವಿವಿಧ ಕಾರಣಗಳನ್ನು ಮುಂದಿಟ್ಟು ವಿಚಾರಣೆ ನಡೆಸದಂತೆ ನೋಡಿಕೊಂಡವು. ಇದನ್ನು ಖುದ್ದು ಜೋಸೆಫ್ ಅವರೇ ಬಹಿರಂಗವಾಗಿ ಹೇಳಿಕೊಂಡರು. ಇದೀಗ ಅವರ ಜಾಗಕ್ಕೆ ನ್ಯಾಯಮೂರ್ತಿ ಉಜ್ವಲ್ ಭುಯಾನ್ ನೇಮಕವಾಗಿದ್ದಾರೆ ಮತ್ತು ವಿಚಾರಣೆ ಪ್ರಾರಂಭವಾಗಿದೆ. ನಿಜವಾಗಿ,
ಈ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಈ ದೇಶದ ವರ್ಚಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆಯನ್ನು ತಂದಿದೆ. ಅಲ್ಲದೇ, ಈ ಅಪರಾಧಿಗಳ ಬಗ್ಗೆ ಗುಜರಾತ್ ಸರಕಾರ ಎಷ್ಟು ಅನುಕಂಪವನ್ನು ಹೊಂದಿತ್ತು ಅನ್ನುವುದಕ್ಕೆ ಜೈಲಿನಲ್ಲಿರುವಾಗ ಅವರಿಗೆ ಸಿಕ್ಕಿರುವ ಪೆರೋಲ್‌ಗಳೇ ಸಾಕ್ಷಿ. ಈ ಅಪರಾಧಿಗಳಲ್ಲಿ ನಾಲ್ಕರಿಂದ 5 ಮಂದಿ ಶಿಕ್ಷಾವಧಿಯಲ್ಲೇ ಸಾವಿರಕ್ಕಿಂತಲೂ ಅಧಿಕ ದಿನಗಳನ್ನು ಜೈಲಿನ ಹೊರಗಡೆ ಕಳೆದಿದ್ದರು. ಜೈಲಧಿಕಾರಿಗಳು ಈ ಅಪರಾಧಿಗಳಿಗೆ ಇಂಥದ್ದೊಂದು ಬಿಡುಗಡೆ ಭಾಗ್ಯವನ್ನು ಕರುಣಿಸಿದ್ದರು. ಹಾಗಂತ, ಇಂಥ ಪೆರೋಲ್ ಭಾಗ್ಯಗಳು ಇತರ ಅಪರಾಧಿಗಳಿಗೆ ಲಭಿಸಿರುವ ಯಾವ ಮಾಹಿತಿಯೂ ಇಲ್ಲ. ಅಷ್ಟಕ್ಕೂ,
ಗುಜರಾತ್ ಸರಕಾರ ಈ ಅಪರಾಧಿಗಳನ್ನು ಇಷ್ಟೊಂದು ಕಾಳಜಿಯಿಂದ ನೋಡಿಕೊಳ್ಳಲು ಕಾರಣ ಏನು? ಗುಜರಾತ್ ಹತ್ಯಾಕಾಂಡವನ್ನು ಈ ಸರಕಾರ ಸಂಭ್ರಮಿಸುತ್ತಿದೆಯೇ? ಅಂಥದ್ದೊಂದು ಹತ್ಯಾಕಾಂಡವನ್ನು ಅದು ಬಯಸಿತ್ತೇ? ಅಲ್ಲದೇ, ಬಿಡುಗಡೆಗೊಂಡ ಈ ಅಪರಾಧಿಗಳನ್ನು ಜೈಲಿನ ಹೊರಗಡೆ ಆರತಿ ಎತ್ತಿ ಸ್ವಾಗತಿಸಲಾಗಿತ್ತು. ಸಿಹಿ ಹಂಚಿ ಸಂಭ್ರಮಿಸಲಾಗಿತ್ತು. ಹೀಗೆ ಬಿಡುಗಡೆಗೊಂಡ ಅಪರಾಧಿಗಳಲ್ಲಿ ಓರ್ವ ಆ ಬಳಿಕ ಬಿಜೆಪಿ ಸಚಿವರಿದ್ದ ವೇದಿಕೆಯನ್ನೂ ಹಂಚಿಕೊಂಡಿದ್ದ. ಇವೆಲ್ಲ ಏನು? ಈ ಅಪರಾಧಿಗಳ ಬಗ್ಗೆ ಗುಜರಾತ್ ಮತ್ತು ಕೇಂದ್ರ ಸರಕಾರಕ್ಕೆ ಇಷ್ಟು ಕಕ್ಕುಲಾತಿ ಏಕೆ? ದೇಶಕ್ಕೆ ಅಪಕೀರ್ತಿ ತಂದವರನ್ನು ಇವರೆಲ್ಲ ಇಷ್ಟು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವುದೇಕೆ? ಗುಜರಾತ್ ಹತ್ಯಾಕಾಂಡದಲ್ಲಿ ಪ್ರಭುತ್ವ ಭಾಗಿಯಾಗಿರುವುದರ ಸೂಚನೆಯೇ ಇದು? ತನ್ನ ನಿವೃತ್ತಿಯನ್ನು ಈ ಎರಡೂ ಸರಕಾರಗಳು ಕಾಯುತ್ತಿವೆ ಎಂದು ನ್ಯಾಯಮೂರ್ತಿ ಕೆ.ಎ. ಜೋಸೆಫ್ ಹೇಳಿರುವುದರ ಆಂತರ್ಯವೇನು? ನಿಜಕ್ಕೂ ನ್ಯಾಯಪ್ರಿಯರೆಲ್ಲ ತಲೆತಗ್ಗಿಸಬೇಕಾದ ಪ್ರಕರಣ ಇದು.
No comments:
Post a Comment