ಈ ಭಾರೀ ಪ್ರಮಾಣದ ಮಾದಕ ವಸ್ತುಗಳು ಸಾಗುವುದಾದರೂ ಎಲ್ಲಿಗೆ? ಇದರ ಗ್ರಾಹಕರು ಯಾರು? ಮಾರಾಟಗಾರರು ಯಾರು ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಪತ್ತೆ ಕಾರ್ಯಕ್ಕೆ ತೊಡಗಿದರೆ ಬೆಚ್ಚಿ ಬೀಳಿಸುವ ಮಾಹಿತಿಗಳು ಟನ್ನುಗಟ್ಟಲೆ ಸಿಗುತ್ತವೆ. ಕಳೆದವಾರ ಜಮ್ಮು- ಕಾಶ್ಮೀರದ ಡಿಜಿಪಿ ದಿಲ್‌ಬಾಗ್ ಸಿಂಗ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಕಾಶ್ಮೀರದ ನಿಜ ಸಮಸ್ಯೆ ಉಗ್ರವಾದವಲ್ಲ, ಮಾದಕ ಪದಾರ್ಥಗಳು ಎಂದೂ ಅವರು ಹೇಳಿದರು. 2019ರಿಂದ 2022ರ ನಡುವೆ ಕಾಶ್ಮೀರದಲ್ಲಿ ಹೆರಾಯಿನ್ ಪತ್ತೆಯಲ್ಲಿ 100% ಹೆಚ್ಚಳವಾಗಿದೆ, ಎಫ್‌ಐಆರ್‌ನಲ್ಲಿ 60% ಹೆಚ್ಚಳವಾಗಿದೆ ಎಂದೂ ಹೇಳಿದರು. ಕಾಕತಾಳೀಯವೆಂಬಂತೆ ದ ಕ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಕಮೀಶನರ್ ಕುಲದೀಪ್ ಕುಮಾರ್ ಜೈನ್ ಕೂಡಾ ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಕರೆದು, ಜಿಲ್ಲೆಯು ಹೇಗೆ ಮಾದಕ ಪದಾರ್ಥಗಳ ಅಡ್ಡೆಯಾಗುತ್ತಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟರು. 2023ರ ಜನವರಿಯಿಂದ ಡ್ರಗ್ಸ್ ಗೆ ಸಂಬಂಧಿಸಿ 243 ಪ್ರಕರಣಗಳು ದಾಖಲಾಗಿದ್ದು, 299 ಮಂದಿಯ ಮೇಲೆ ಕೇಸು ದಾಖಲಾಗಿದೆ. 1 ಕೋಟಿ ರೂಪಾಯಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, 106 ಡ್ರಗ್ಸ್ ಮಾರಾಟಗಾರರನ್ನು ಬಂಧಿಸಲಾಗಿದೆ ಎಂಬೆಲ್ಲಾ ಮಾಹಿತಿಯನ್ನು ಹಂಚಿಕೊಂಡರು. ನಿಜವಾಗಿ,
ನಾಲ್ಕು ಬಂದೂಕು, ಹತ್ತು ಜಿಲೆಟಿನ್ ಕಡ್ಡಿಗಳು, 6 ಚೂರಿ, 3 ಮೊಬೈಲ್ ಮತ್ತು ಒಂದು ನಕಾಶೆಯನ್ನು ಪೊಲೀಸರು ವಶ ಪಡಿಸಿಕೊಂಡರೆ ಅದರ ಸುತ್ತ ದಿನವಿಡೀ ಚರ್ಚೆ ನಡೆಸುವ ನಮ್ಮ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳು ಸಾವಿರಾರು ಕೋಟಿ ರೂ ಪಾಯಿ ಮೊತ್ತದ ಮಾದಕ ವಸ್ತುಗಳು ವಶವಾದುದನ್ನು ಚರ್ಚೆಗೆ ಅನರ್ಹ ವಿಷಯವೆಂಬಂತೆ ನಿರ್ಲಕ್ಷಿಸಿ ಬಿಡುತ್ತವೆ. ಒಂದುರೀತಿಯಲ್ಲಿ, ಬಾಂಬ್ಲೂ ಗಿಂತಲೂ ಈ ಮಾದಕ ವಸ್ತು ಅಪಾಯಕಾರಿ. ಅದು ಯುವ ಸಮೂಹವನ್ನು ಸಂಪೂರ್ಣ ಅನುತ್ಪಾದಕವಾಗಿ ಮಾರ್ಪಡಿಸಿ ಬಿಡುತ್ತದೆ. ಹೆತ್ತವರನ್ನೇ ಹತ್ಯೆ ಮಾಡುವುದಕ್ಕೂ ಹೇಸದಂಥ ಮಕ್ಕಳನ್ನು ತಯಾರಿಸುತ್ತದೆ. ಯಾವುದೇ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ ಮತ್ತು ಹತ್ಯೆ, ಅನ್ಯಾಯ ಎಸಗುವುದಕ್ಕೆ ಇಂಥವರು ಸುಲಭದಲ್ಲಿ ಬಳಕೆಯಾಗುತ್ತಾರೆ. ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಮಾದಕ ವಸ್ತು ಬಳಕೆದಾರನಿದ್ದಾನೆಂದರೆ ಆ ಮನೆಯ ನೆಮ್ಮದಿ ಮಾತ್ರವಲ್ಲ, ಆ ಮನೆಯ ಪರಿಸರದ ಮನೆಗಳ ನೆಮ್ಮದಿಯೂ ಕೆಟ್ಟು ಹೋಗುತ್ತದೆ. ಆತ ತನ್ನ ಅಕ್ಕ-ಪಕ್ಕದ ಮನೆಯ ಯುವಕರನ್ನೂ ಇದರ ದಾಸರನ್ನಾಗಿ ಮಾಡುತ್ತಾನೆ. ಆತನ ಇಚ್ಛೆಗೆ ಸ್ಪಂದಿಸದಿದ್ದರೆ ಹತ್ಯೆ ನಡೆಸುವುದಕ್ಕೂ ಮುಂದಾಗಬಹುದು.
ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳದ ಮತ್ತು ಸದಾ ಅಮಲಿನಲ್ಲೇ ತೇಲಾಡುವ ಒಂದು ನಿರುಪಯುಕ್ತ ಯುವ ತಲೆಮಾರನ್ನು ಈ ಮಾದಕ ವಸ್ತುಗಳು ನಿರ್ಮಿಸುತ್ತವೆ. ಕಾಶ್ಮೀರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ವರೆಗೆ ಸದ್ಯ ಈ ಅಪಾಯಕಾರಿ ಸ್ಥಿತಿ ಇದೆ. ಇದನ್ನು ಮಟ್ಟ ಹಾಕದಿದ್ದರೆ ಅದರ ಪರಿಣಾಮವನ್ನು ಮುಂದೆ ಪ್ರತಿ ಮನೆಯೂ ಎದುರಿಸಬೇಕಾಗಬಹುದು. ಈಗಾಗಲೇ ಕಾಶ್ಮೀರ ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ. ಕಾಶ್ಮೀರದ ಮಸೀದಿಯಿಂದ ಶಾಲೆಯ ವರೆಗೆ ಜನಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಧಾರ್ಮಿಕ ಮುಖಂಡರು, ಮೌಲಾನಾರು ಮತ್ತು ಶಿಕ್ಷಕರು ಈಗಾಗಲೇ ಡ್ರಗ್ಸ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. 2023ರಲ್ಲಿ ಈವರೆಗೆ 10 ಲಕ್ಷ ಮಂದಿ ಕಾಶ್ಮೀರಿಗಳು ಡ್ರಗ್ಸ್ ಮಾಯಾಜಾಲಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯು ಪ್ರತಿ ಮನೆ ಮತ್ತು ಮಸೀದಿಗಳ ನಿದ್ದೆಗೆಡಿಸಿದೆ. ಅಲ್ಲಿನ ಮುಗಮ್ ಇಮಾಂಬರ ಎಂಬ ಸಂಘಟನೆಯು ಮನೆ ಮನೆ ಅಭಿಯಾನಕ್ಕೆ ಇಳಿದಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಕ್ರೀನ್ ಟೆಸ್ಟ್ ಪ್ರಾರಂಭಿಸಲಾಗಿದೆ. ಅಂದಹಾಗೆ,
90%ಕ್ಕಿಂತಲೂ ಅಧಿಕ ಮುಸ್ಲಿಮರೇ ಇರುವ ನಾಡೊಂದು ಉಮ್ಮುಲ್ ಖಬಾಯಿಸ್ ಅಥವಾ ಕೆಡುಕುಗಳ ಮಾತೆ ಎಂದು ಇಸ್ಲಾಮ್ ಗುರುತಿಸಿರುವ ಅಮಲು ಪದಾರ್ಥಗಳಿಗೆ ಬಲಿಯಾಗಿರುವುದು ನಿಜಕ್ಕೂ ಆಘಾತಕಾರಿ. ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ ಭಾರೀ ಭಿನ್ನವೇನೂ ಇಲ್ಲ. ಇಲ್ಲಿನ ಮಾದಕ ವಸ್ತು ಮಾರಾಟಗಾರರು ಮತ್ತು ಸೇವಿಸುವವರಲ್ಲಿ ದೊಡ್ಡದೊಂದು ಸಂಖ್ಯೆ ಮುಸ್ಲಿಮರದ್ದಾಗಿದೆ. ಇದು ಕಹಿ ಸುದ್ದಿಯಾದರೂ ಜೀರ್ಣಿಸಿಕೊಳ್ಳಬೇಕಾಗಿದೆ. ವಾಸ್ತವವನ್ನು ಒಪ್ಪಿಕೊಳ್ಳದ ಹೊರತು ಪರಿಹಾರ ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯದ ಯುವ ಪೀಳಿಗೆಯು ಈ ಕೆಡುಕುಗಳ ಮಾತೆಯನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ಕಾರಣಗಳೇನು? ಅವರನ್ನು ಈ ಅಮಲು ಜಗತ್ತಿನೊಳಗೆ ವ್ಯವಸ್ಥಿತವಾಗಿ ತಳ್ಳಲಾಗುತ್ತಿದೆಯೇ? ಬಾಹ್ಯ ಸಂಚಿನ ಪರಿಣಾಮದಿಂದಾಗಿ ಅವರು ತಮಗರಿವಿಲ್ಲದಂತೆಯೇ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆಯೇ? ಅಥವಾ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ಅವರನ್ನು ಈ ಅಮಲು ಸೇವಕರನ್ನಾಗಿ ಮಾರ್ಪಡಿಸುತ್ತಿದೆಯೇ? ಅಥವಾ ಇದರಾಚೆಗೆ ಬೇರೇನಾದರೂ ಕಾರಣಗಳು ಇವೆಯೇ? ಇವು ಏನೇ ಇದ್ದರೂ,
ಮುಸ್ಲಿಮ್ ಸಮುದಾಯ ತುರ್ತಾಗಿ ಗಮನ ಹರಿಸಬೇಕಾದ ಸಂದರ್ಭ ಇದು. ಸಮುದಾಯದ ಯಾವನೇ ವ್ಯಕ್ತಿ ಯಾವುದಾದರೊಂದು ಮಸೀದಿಯ ಜೊತೆಗೇ ಗುರುತಿಸಿಕೊಂಡೇ ಇರುತ್ತಾನೆ. ಇಂಥದ್ದೊಂದು ವ್ಯವಸ್ಥೆ ಇನ್ನಾವ ಸಮುದಾಯದಲ್ಲೂ ಇಲ್ಲ. ಪ್ರತಿ ಮಸೀದಿಯೂ ಮನಸ್ಸು ಮಾಡಿದರೆ ಮತ್ತು ಒಂದು ಮಸೀದಿಯು ಇನ್ನೊಂದು ಮಸೀದಿಯೊಂದಿಗೆ ಸೇರಿಕೊಂಡು ಕಾರ್ಯಪ್ರವೃತ್ತವಾದರೆ ಯುವ ಸಮೂಹವನ್ನು ಅಪಾಯದಿಂದ ರಕ್ಷಿಸುವುದಕ್ಕೆ ಸಾಧ್ಯವಿದೆ. ಮಾದಕ ವಸ್ತುಗಳ ವಿರುದ್ಧ ಮಸೀದಿ ಕಮಿಟಿ ಜಿಹಾದ್ ಘೋಷಿಸಬೇಕು. ತನ್ನ ಮಸೀದಿ ವ್ಯಾಪ್ತಿಯಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಕೈಗೊಳ್ಳಬೇಕು. ಶುಕ್ರವಾರದ ಜುಮಾದಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಮಾದಕ ವಸ್ತುವಿನ ವಿರುದ್ಧ ಜನಜಾಗೃತಿ ಮೂಡಿಸಬೇಕು. ಮದ್ಯ ಮತ್ತು ಮಾದಕ ಪದಾರ್ಥಗಳ ಅಪಾಯದ ಕುರಿತು ಮದ್ರಸ ವಿದ್ಯಾರ್ಥಿಗಳಿಗೆ ನಿರಂತರ ತಿಳುವಳಿಕೆ ನೀಡಬೇಕು. ಮಸೀದಿ ಕಮಿಟಿಯು ಈ ವಿಷಯಗಳಿಗೆ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಿ ತನ್ನ ವ್ಯಾಪ್ತಿಯ ಪ್ರತಿ ಮನೆಗೂ ಆ ತಂಡ ಭೇಟಿ ಕೊಡುವ ಮತ್ತು ಮನೆಯ ಪರಿಸ್ಥಿತಿಯನ್ನು ತಿಳಿಯುವ ಪ್ರಯತ್ನಕ್ಕಿಳಿಯಬೇಕು. ತಮ್ಮ ಮಸೀದಿ ವ್ಯಾಪ್ತಿಯೊಳಗೆ ಮಾದಕ ಪದಾರ್ಥಗಳ ಮಾರಾಟ ಜಾಲ ಸಕ್ರಿಯವಾಗಿದ್ದರೆ ಪೊಲೀಸರಿಗೆ ಮಾಹಿತಿ ಕೊಡುವಂತಾಗಬೇಕು. ಅಂದಹಾಗೆ,
ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಈಗಾಗಲೇ ಮಾದಕ ವಸ್ತು ವಿರೋಧಿ ಅಭಿಯಾನ ಆರಂಭವಾಗಿದೆ. ಇದು ದೀರ್ಘಕಾಲೀನ ಜಿಹಾದ್. ವರದಕ್ಷಿಣೆಯ ವಿರುದ್ಧ ಯಶಸ್ವಿ ಜಿಹಾದ್ ನಡೆಸಿದ ಅನುಭವವೂ ಕರಾವಳಿ ಪ್ರದೇಶದ ಮುಸ್ಲಿಮ್ ಸಮುದಾಯಕ್ಕಿದೆ. ಈ ಯಶಸ್ಸು ಒಂದೆರಡು ತಿಂಗಳುಗಳಲ್ಲಿ ಸಾಧ್ಯವಾದುದಲ್ಲ. ಭಾಷಣ ವೇದಿಕೆಯಿಂದ ಹಿಡಿದು ಸಾಂಸ್ಕೃತಿಕ ವೇದಿಕೆಗಳ ವರೆಗೆ ಅಭೂತ ಪೂರ್ವ ಹೋರಾಟವೊಂದನ್ನು ಈ ವರದಕ್ಷಿಣೆಯ ವಿರುದ್ಧ ಕರಾವಳಿ ಭಾಗದ ಮುಸ್ಲಿಮ್ ಸಮು ದಾಯ ಸಾರಿತ್ತು. ಲೇಖನ, ಕವನ, ಹಾಡು, ನಾಟಕ, ಜಾಥಾ, ಕರಪತ್ರ, ಶುಕ್ರವಾರದ ಜುಮಾ ಖುತ್ಬಾ... ಹೀಗೆ ಸರ್ವ ಮಾಧ್ಯಮವನ್ನೂ ಬಳಸಿ ಸಮುದಾಯ ಸಾರಿದ ಹೋರಾಟದಿಂದ ವರದಕ್ಷಿಣೆಯು ಸದ್ಯ ಹಿನ್ನೆಲೆಗೆ ಸರಿದಿದೆ. ನಾಚಿಕೆ ಮುನ್ನೆಲೆಗೆ ಬಂದಿದೆ. ವರದಕ್ಷಿಣೆ ವಿರೋಧಿ ಕಾನೂನಿನಿಂದ ಮಾಡಲಾಗದ ಬೃಹತ್ ಬದಲಾವಣೆಯೊಂದನ್ನು ಸಾಮುದಾಯಿಕ ಜಾಗೃತಿ ಕಾರ್ಯಕ್ರಮದಿಂದ ಮಾಡಲು ಸಮುದಾಯಕ್ಕೆ ಸಾಧ್ಯವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧವೂ ಇಂಥದ್ದೇ ಸಂಘಟಿತ ಸಮರವೊಂದು ನಡೆಯಲೇಬೇಕಾಗಿದೆ. ಮಸೀ ದಿಗಳು, ಸಂಘಟನೆಗಳು, ಲೇಖಕರು, ಸಂಸ್ಕೃತಿ ಚಿಂತಕರು ಸಹಿತ ಸರ್ವರೂ ಪ್ರಯತ್ನಿಸಿದರೆ ಮತ್ತು ವಿವಿಧ ಸಂಘಟನೆಗಳು ಸಕ್ರಿಯವಾದರೆ ಕೆಡುಕುಗಳ ಮಾತೆಗೆ ಯುವ ತಲೆಮಾರು ಆಕರ್ಷಿತವಾಗುವುದನ್ನು ತಡೆಯುವುದಕ್ಕೆ ಖಂಡಿತ ಸಾಧ್ಯವಿದೆ.
No comments:
Post a Comment