Friday, 29 September 2023

ಹಿಂದೂ ಧರ್ಮದ ರಕ್ಷಣೆಗೆ ಮುಸ್ಲಿಮರನ್ನು ನಿಂದಿಸಲೇಬೇಕಾ?

 



ಸನ್ಮಾರ್ಗ ಸಂಪಾದಕೀಯ

ಕುಂದಾಪುರ ಕಾಳಿ, ದುರ್ಗೆ, ಹಿಂದುತ್ವ ಭಾಷಣಗಾರ್ತಿ, ಕಾದಂಬರಿಗಾರ್ತಿ, ಚಿಂತಕಿ ಎಂಬೆಲ್ಲಾ  ಬಿರುದನ್ನು ಅಂಟಿಸಿಕೊಂಡ  ಮತ್ತು  ಮುಸ್ಲಿಮರನ್ನು ತಿವಿಯುವುದನ್ನೇ ಹಿಂದೂ ಧರ್ಮದ ಉದ್ಧಾರವಾಗಿ ಕಂಡಿದ್ದ ಚೈತ್ರಾ ಕುಂದಾಪುರ ಎಂಬ ಯುವತಿ ದಿನ  ಬೆಳಗಾಗುವುದರೊಳಗೆ ವಂಚಕಿಯಾಗಿ ಮಾರ್ಪಟ್ಟಿದ್ದಾಳೆ. ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ  ಎದುರಿಸುತ್ತಿದ್ದಾಳೆ. ಆಕೆಯ ವಂಚನೆಯ ವಿವಿಧ ಕರಾಳ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಆಕೆ ಈ ಹಿಂದೆ ಮಾಡಿರುವ  ಬೆಂಕಿ ಭಾಷಣಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕೆಯನ್ನು ಎತ್ತಿ ಮೆರೆದಾಡಿದವರು ಮತ್ತು ಹಿಂದೂ ಧರ್ಮದ  ಪ್ರಚಾರಕಿ ಎಂದು ತಲೆ ಮೇಲೆ ಕೂರಿಸಿದವರೆಲ್ಲ ಗಾಢ ಮೌನಕ್ಕೆ ಜಾರಿದ್ದಾರೆ. ಆಕೆಯ ಭಾಷಣಗಳಿಂದ ಗರಿಷ್ಠ ಲಾಭ  ಪಡೆದುಕೊಂಡಿರುವ ಬಿಜೆಪಿ ಈಗಾಗಲೇ ಆಕೆಯಿಂದ ಅಂತರ ಕಾಯ್ದುಕೊಂಡಿದೆ. ಆಕೆ ಯಾರೆಂದೇ ಗೊತ್ತಿಲ್ಲ ಎಂದು ಹೇಳಿ  ಕೈತೊಳೆದುಕೊಂಡಿದೆ. ಆಕೆಯನ್ನು ಕರೆಸಿ ಭಾಷಣ ಮಾಡಿಸಿರುವ ಊರವರು ಇದೀಗ ಪ್ರಾಯಶ್ಚಿತ್ತ ಪೂಜೆ ಮಾಡಿಕೊಂಡದ್ದೂ ನಡೆದಿದೆ.  ಮೊನ್ನೆ ಮೊನ್ನೆವರೆಗೆ ಬೃಹತ್ ವೇದಿಕೆಯನ್ನೇರಿ ದ್ವೇಷ ಭಾಷಣ ಮಾಡುತ್ತಾ ಭಾರೀ ಜನಸ್ತೋಮದಿಂದ ಚಪ್ಪಾಳೆ, ಶಿಳ್ಳೆ, ಜೈಕಾರ  ಪಡೆಯುತ್ತಿದ್ದ ಯುವತಿಯೊಬ್ಬಳ ಸ್ಥಿತಿ ಇದು. 

ಅಷ್ಟಕ್ಕೂ,

ಈ ಬೆಳವಣಿಗೆಯಿಂದ ಯಾರು, ಏನನ್ನು ಕಳಕೊಂಡರು? ಯಾರ ವರ್ಚಸ್ಸಿಗೆ ಹಾನಿಯಾಗಿದೆ? ಮುಖಭಂಗವಾದ ಅನುಭವ  ಯಾರಿಗಾಗಿದೆ? ಚೈತ್ರ ಜಾಮೀನಿನ ಮೂಲಕ ನಾಳೆ ಬಿಡುಗಡೆಗೊಳ್ಳಬಹುದು. ಭಾಷಣದ ಬದಲು ಬೇರೆಯದೇ ಉದ್ಯೋಗವನ್ನು  ನೋಡಿಕೊಳ್ಳಲೂ ಬಹುದು ಅಥವಾ ತಾನು ಸಂತ್ರಸ್ತೆ ಎಂಬ ಅವತಾರವನ್ನು ತಾಳಲೂ ಬಹುದು. ಆದರೆ, ಆಕೆಯಿಂದಾಗಿ ಹಿಂದೂ  ಧರ್ಮದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಇಷ್ಟು ಸುಲಭದಲ್ಲಿ ನಿವಾರಿಸಿಬಿಡಲು ಸಾಧ್ಯವಿಲ್ಲ. ಆಕೆ ವೇದಿಕೆಯೇರಿ ತನ್ನನ್ನು ಹಿಂದೂ  ಧರ್ಮದ ವಕ್ತಾರೆಯಂತೆ ಬಿಂಬಿಸಿಕೊಳ್ಳುತ್ತಿದ್ದಳು. ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡುತ್ತಿರುವ ಕಾರ್ಯಕರ್ತೆಯಂತೆ  ಆಡಿಕೊಳ್ಳುತ್ತಿದ್ದಳು. ಮುಸ್ಲಿಮರ ವಿರುದ್ಧ ಮಾಡುತ್ತಿದ್ದ ಭಾಷಣಕ್ಕೂ ಹಿಂದೂ ಧರ್ಮದ ರಕ್ಷಣೆಯ ಕವಚವನ್ನು ತೊಡಿಸುತ್ತಿದ್ದಳು.  ಅಲ್ಲದೇ, ಆಕೆಗೆ ವೇದಿಕೆ ಒದಗಿಸುತ್ತಿದ್ದುದೂ ಹಿಂದುತ್ವ ಸಂಘಟನೆಗಳೇ. ಸ್ವಾಮೀಜಿಗಳು, ಧರ್ಮಪ್ರೇಮಿಗಳೆಂದು ಕರೆಸಿಕೊಳ್ಳುತ್ತಿದ್ದವರು  ಹಂಚಿಕೊಳ್ಳುತ್ತಿದ್ದ ವೇದಿಕೆಗಳನ್ನೇ ಈಕೆಯೂ ಹಂಚಿಕೊಳ್ಳುತ್ತಿದ್ದಳು. ಮಾತ್ರವಲ್ಲ, ಈಕೆಯ ಭಾಷಣವನ್ನು ಖಂಡಿಸಿ ಹಿಂದೂ ಧರ್ಮದ  ಸ್ವಾಮೀಜಿಗಳಾಗಲಿ, ವಿದ್ವಾಂಸರಾಗಲಿ ಬಹಿರಂಗ ಹೇಳಿಕೆ ಕೊಟ್ಟದ್ದೂ ಇಲ್ಲ. ಆದ್ದರಿಂದ ಆಕೆಯ ಮಾತುಗಳನ್ನು ಹಿಂದೂ ಧರ್ಮದ  ರಕ್ಷಣೆಯ ಭಾಗವಾಗಿ ಮತ್ತು ಹಿಂದೂ ಧರ್ಮದ ಅಗತ್ಯವಾಗಿ ಜನರು ಭಾವಿಸಿಕೊಂಡಿದ್ದರೆ, ಅದು ತಪ್ಪಾಗುವುದಿಲ್ಲ. ನಿಜವಾಗಿ, ಚೈತ್ರಾಳ  ವರ್ಚಸ್ಸಿಗೆ ಆಗಿರುವ ಹಾನಿಗಿಂತ ಆಕೆ ಪ್ರಚಾರ ಮಾಡುತ್ತಿದ್ದ ವಿಚಾರಧಾರೆಗೆ ಆಗಿರುವ ಹಾನಿ ಎಷ್ಟೋ ಪಟ್ಟು ದೊಡ್ಡದು. ಚೈತ್ರಾಳಿಂದಾಗಿ  ಇವತ್ತು ಹಿಂದೂ ಸಮುದಾಯ ನಾಚಿಕೆಯಿಂದ ತಲೆತಗ್ಗಿಸಿದೆ. ಆಕೆಯಿಂದ ಅಂತರ ಕಾಯ್ದುಕೊಂಡು ಮಾತಾಡುತ್ತಿದೆ. 

ಅಂದಹಾಗೆ,

ವಂಚನೆ ಎಂಬುದು ಈ ಸಮಾಜಕ್ಕೆ ಹೊಸತಲ್ಲ. ವಂಚನೆ ಆರೋಪ ಹೊತ್ತುಕೊಂಡವರಲ್ಲಿ ಚೈತ್ರ ಮೊಟ್ಟಮೊದಲಿಗಳೂ ಅಲ್ಲ.  ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಬೇಧ ಇಲ್ಲದೇ ವಂಚಕರು ಪ್ರತಿದಿನ ಬಂಧನಕ್ಕೀಡಾಗುತ್ತಲೂ ಇದ್ದಾರೆ. ಹಾಗಿದ್ದ ಮೇಲೂ  ಚೈತ್ರಳಿಂದಾಗಿ ಒಂದು ಸಮುದಾಯ ಅವಮಾನಕ್ಕೆ ಒಳಗಾದ ಭಾವದಲ್ಲಿ ಮಾತಾಡಲು ಕಾರಣವೇನು? ಒಂದೇ ಕಾರಣ, ಆಕೆ ಧರ್ಮದ  ವಕ್ತಾರೆಯಂತೆ, ರಕ್ಷಕಿಯಂತೆ ಮತ್ತು ಉದ್ಧಾರಕಿಯಂತೆ ಬಿಂಬಿಸಿಕೊಂಡದ್ದು ಮತ್ತು ಸಂಘಟನೆಗಳು ಅದಕ್ಕೆ ಪೂರಕ ವೇದಿಕೆಗಳನ್ನು  ನಿರ್ಮಿಸಿಕೊಟ್ಟು ಆಕೆಯ ಮಾತುಗಳಿಗೆ ಮೌನಸಮ್ಮತಿ ನೀಡಿದ್ದು. ಇಸ್ಲಾಮ್ ಧರ್ಮವನ್ನು ಬೈಯುವುದು ಹಿಂದೂ ಧರ್ಮದ  ರಕ್ಷಣೆಯಾಗಲು ಸಾಧ್ಯವಿಲ್ಲ ಎಂಬ ಬುದ್ಧಿವಾದವನ್ನು ಆಕೆಗೆ ಬಹಿರಂಗವಾಗಿ ಯಾರೂ ನೀಡಿಲ್ಲ. ಸಣ್ಣ ವಯಸ್ಸಿನ ಯುವತಿಗೆ ಹಿಂದೂ  ಧರ್ಮದ ಹೆಸರಲ್ಲಿ ಅಂಥ ವೇದಿಕೆಯನ್ನು ಕೊಡಬೇಡಿ ಎಂದು ಕಾರ್ಯಕ್ರಮ ಆಯೋಜಕರಿಗೆ ಬಹಿರಂಗವಾಗಿ ತಿಳಿ ಹೇಳಿದ ಯಾವ  ಸನ್ನಿವೇಶವೂ ನಡೆದಿಲ್ಲ. ಹಿಂದೂ ಧರ್ಮದ ಪಾಲನೆಯೇ ಧರ್ಮರಕ್ಷಣೆ ಎಂಬ ವಿವೇಕದ ಮಾತನ್ನೂ ಯಾರೂ ಬಹಿರಂಗವಾಗಿ  ಹೇಳಲಿಲ್ಲ. ಹಾಗಂತ, ಆಂತರಿಕವಾಗಿ ಇಂಥ ಪ್ರಕ್ರಿಯೆಗಳು ನಡೆದಿರಲೂ ಬಹುದು. ಹಿಂದೂ ಧರ್ಮದ ತಜ್ಞರು ಆಕೆಗೆ ಬುದ್ಧಿಮಾತು  ಹೇಳಿರಲೂಬಹುದು. ಆದರೆ, ಆಕೆಗೆ ಪದೇ ಪದೇ ವೇದಿಕೆ ಸಿಗುತ್ತಿದ್ದುದನ್ನು ನೋಡಿದರೆ ಮತ್ತು ಅಲ್ಲೆಲ್ಲಾ  ಮುಸ್ಲಿಮ್ ದ್ವೇಷವನ್ನೇ ತನ್ನ  ಭಾಷಣದ ವಿಷಯವನ್ನಾಗಿಸಿದ್ದನ್ನು ಪರಿಗಣಿಸಿದರೆ ಒಂದೋ ಆಕೆ ಬುದ್ಧಿಮಾತನ್ನು ತಿರಸ್ಕರಿಸಿದ್ದಾಳೆ ಅಥವಾ ಬುದ್ಧಿಮಾತನ್ನು ಯಾರೂ  ಹೇಳಿಯೇ ಇಲ್ಲ ಎಂದೇ ಅಂದುಕೊಳ್ಳಬೇಕಾಗುತ್ತದೆ.

ಯಾವುದೇ ಧರ್ಮದ ಅಳಿವು ಮತ್ತು ಉಳಿವು ಆಯಾ ಧರ್ಮವನ್ನು ಅನುಸರಿಸುವವರ ಕೈಯಲ್ಲಿದೆ. ಧರ್ಮವನ್ನು ಬದ್ಧತೆಯಿಂದ ಪಾಲಿಸುವುದೇ ಆಯಾ ಧರ್ಮಕ್ಕೆ ಅನುಯಾಯಿಗಳು ಮಾಡುವ ಅತಿದೊಡ್ಡ ಸೇವೆ. ಮುಸ್ಲಿಮರನ್ನು ಬೈಯುವುದರಿಂದ ಹಿಂದೂ ಧರ್ಮದ  ರಕ್ಷಣೆಯಾಗುತ್ತದೆ ಎಂಬುದು ಬರೇ ಭ್ರಮೆ. ಮುಸ್ಲಿಮರನ್ನು ಬೈಯುವ ಭಾಷಣಕಾರರಿಗೆ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡ  ಸಂಘಟನೆಗಳು ವೇದಿಕೆ ನಿರ್ಮಿಸಿ ಕೊಡುವುದರಿಂದ ಹಿಂದೂಗಳ ಬಗ್ಗೆ ಮುಸ್ಲಿಮರಲ್ಲಿ ನಕಾರಾತ್ಮಕ ಭಾವನೆ ಬರಲು  ಕಾರಣವಾಗಬಹುದೇ ಹೊರತು ಅದರಿಂದ ಹಿಂದೂ ಧರ್ಮಕ್ಕೆ ಸಾಮಾಜಿಕವಾಗಿ ಯಾವ ಲಾಭವೂ ಉಂಟಾಗದು. ಮುಸ್ಲಿಮರಿಗೆ  ಸಂಬಂಧಿಸಿಯೂ ಇವೇ ಮಾತು ಅನ್ವಯ. ಹಿಂದೂಗಳನ್ನು ಬೈಯುವ ಯಾವುದೇ ಭಾಷಣಕಾರ ಇಸ್ಲಾಮ್‌ಗೆ ಹಾನಿಯನ್ನಲ್ಲದೇ  ಯಾವ ಉಪಕಾರವನ್ನೂ ಮಾಡಲಾರ. ವ್ಯಕ್ತಿಯ ತಪ್ಪನ್ನು ಸಮುದಾಯದ ಮೇಲೆ ಹೊರಿಸಿ ಬೈಯುವುದರಿಂದ ಭಾಷಣವೇನೋ  ಆಕರ್ಷಕವಾಗಬಹುದು. ಆದರೆ, ಅದು ಭಾಷಣಕಾರ ಪ್ರತಿನಿಧಿಸುವ ಧರ್ಮದ ಬಗ್ಗೆ ನಾಗರಿಕರಲ್ಲಿ ನಕಾರಾತ್ಮಕ ಭಾವ ಸೃಷ್ಟಿಸುತ್ತದೆ. ತಪ್ಪು  ಚೈತ್ರಾಳದ್ದಾದರೂ ಹಾಲಶ್ರೀ ಸ್ವಾಮೀಜಿಗಳದ್ದಾದರೂ ವ್ಯಕ್ತಿಗತವಾಗಿ ನೋಡಬೇಕೇ ಹೊರತು ಒಂದು ಸಮುದಾಯದ್ದೋ  ಧರ್ಮದ್ದೋ   ಭಾಗವಾಗಿ ಅಲ್ಲ. ಆದರೆ, ಚೈತ್ರ ಇದಕ್ಕಿಂತ ಹೊರತಾಗಿದ್ದಾಳೆ. ಆಕೆ ತನ್ನ ಧರ್ಮದ ವಕ್ತಾರೆಯಂತೆ, ಧರ್ಮರಕ್ಷಕಿಯಂತೆ  ಬಿಂಬಿಸಿಕೊಂಡದ್ದಷ್ಟೇ ಅಲ್ಲ, ಆಕೆಗಾಗಿ ಪದೇ ಪದೇ ವೇದಿಕೆಗಳನ್ನು ಒದಗಿಸಿದ ಸಂಘಟನೆಗಳೂ ಕೂಡಾ ಧಾರ್ಮಿಕವಾಗಿ  ಗುರುತಿಸಿಕೊಂಡಿವೆ. ಪ್ರತಿ ಭಾಷಣದಲ್ಲೂ ಆಕೆ ಇಸ್ಲಾಮ್ ಮತ್ತು ಮುಸ್ಲಿಮರನ್ನು ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುತ್ತಿದ್ದಾಗಲೂ ಚಪ್ಪಾಳೆ  ಬೀಳುತ್ತಿತ್ತೇ ಹೊರತು ಆಕೆಗೆ ವೇದಿಕೆಗಳೇನೂ ಕಡಿಮೆಯಾಗಲಿಲ್ಲ. ಆದ್ದರಿಂದಲೇ, ಆಕೆಯ ವ್ಯಕ್ತಿಗತ ತಪ್ಪು ಒಂದು ಸಮುದಾಯವನ್ನೇ  ಪ್ರಶ್ನೆಯಾಗಿ ಇರಿಯುತ್ತಿದೆ. 

ನಿಜವಾಗಿ,

ಮುಸ್ಲಿಮರನ್ನು ನಿಂದಿಸಿ ಭಾಷಣ ಮಾಡುವವರಲ್ಲಿ ಚೈತ್ರ ಮೊದಲಿಗಳಲ್ಲ. ಇಂಥವರು ಅನೇಕರಿದ್ದಾರೆ. ವ್ಯಕ್ತಿಗತ ತಪ್ಪುಗಳನ್ನು ಒಂದು  ಸಮುದಾಯದ ಮತ್ತು ಧರ್ಮದ ಮೇಲೆ ಹೊರಿಸಿ ಅವಮಾನಿಸುವುದನ್ನೇ ಇವರೆಲ್ಲ ಕಸುಬಾಗಿಸಿಕೊಂಡಿದ್ದಾರೆ. ಇದನ್ನೇ ಧರ್ಮರಕ್ಷಣೆ  ಎಂದೂ ನಂಬಿಸುತ್ತಿದ್ದಾರೆ. ಅಂದಹಾಗೆ, ಹಿಂದೂ ಆಗಲಿ, ಮುಸ್ಲಿಮ್ ಆಗಲಿ ಅಥವಾ ಇನ್ನಾವುದೇ ಸಮುದಾಯವಾಗಲಿ ತಪ್ಪಿತಸ್ತರನ್ನು  ದಂಡಿಸುವ ಅಧಿಕಾರವನ್ನು ಈ ದೇಶದಲ್ಲಿ ಪಡೆದಿಲ್ಲ. ಅದಿರುವುದು ಸರಕಾರದ ಕೈಯಲ್ಲಿ. ಆದ್ದರಿಂದ ಮುಸ್ಲಿಮ್ ವ್ಯಕ್ತಿಯ ತಪ್ಪನ್ನು ಆ  ಸಮುದಾಯ ಖಂಡಿಸಬಹುದೇ ಹೊರತು ದಂಡಿಸುವುದು ಅಪರಾಧವಾಗುತ್ತದೆ. ಆದ್ದರಿಂದ, ಅಪರಾಧ ಕೃತ್ಯವೆಸಗುವ ಮುಸ್ಲಿಮ್  ವ್ಯಕ್ತಿಯನ್ನು ಮುಸ್ಲಿಮ್ ಸಮುದಾಯ ಯಾಕೆ ದಂಡಿಸುವುದಿಲ್ಲ ಎಂಬ ಪ್ರಶ್ನೆಯೊಂದನ್ನು ಎಸೆದು ಆ ಬಳಿಕ ಮುಸ್ಲಿಮ್ ಸಮುದಾಯ  ಆತನ ಅಪರಾಧದ ಜೊತೆಗಿದೆ ಎಂಬ ತೀರ್ಪು ಕೊಡುತ್ತಾ ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಬಿತ್ತುವ ಪ್ರಯತ್ನ ಈ ಎಲ್ಲ  ಭಾಷಣಕಾರರಿಂದ ಸಾಮಾನ್ಯವಾಗಿ ನಡೆಯುತ್ತಿದೆ. ವ್ಯಕ್ತಿಗತ ತಪ್ಪನ್ನೇ ಮುಸ್ಲಿಮ್ ಸಮುದಾಯವನ್ನು ನಿಂದಿಸುವುದಕ್ಕೆ ಈ ಎಲ್ಲ ದ್ವೇಷ  ಭಾಷಣಕಾರರು ಬಳಸುತ್ತಿದ್ದಾರೆ. ಇದನ್ನು ಹಿಂದೂ-ಮುಸ್ಲಿಮರೆಲ್ಲರೂ ವಿರೋಧಿಸುವ ಪ್ರಕ್ರಿಯೆ ಪ್ರಾರಂಭವಾಗಬೇಕು. ದ್ವೇಷಭಾಷಣ  ಮಾಡುವ ಯಾರೇ ಇರಲಿ, ತಕ್ಷಣ ಅವರನ್ನು ವೇದಿಕೆಯಿಂದ ಕೆಳಗಿಳಿಸುವ ಮತ್ತು ಮುಂದೆ ಅವರಿಗೆ ವೇದಿಕೆ ಒದಗಿಸದಿರುವ  ನಿರ್ಧಾರವನ್ನು ಹಿಂದೂ-ಮುಸ್ಲಿಮರು ಕೈಗೊಳ್ಳಬೇಕು. ಹಿಂದೂ ಧರ್ಮದ ಬಗ್ಗೆ ಹಿಂದೂ ವಿದ್ವಾಂಸರು ಮಾತಾಡಲಿ. ಮುಸ್ಲಿಮರಲ್ಲೂ  ಇದೇ ಬೆಳವಣಿಗೆ ನಡೆಯಲಿ. ದ್ವೇಷ ಭಾಷಣಕಾರರು ಧರ್ಮಕ್ಕೆ ಅಪಾಯಕಾರಿಗಳೇ ಹೊರತು ಧರ್ಮರಕ್ಷಕರಲ್ಲ. ಚೈತ್ರ ಎಲ್ಲರಿಗೂ  ಪಾಠವಾಗಲಿ.

No comments:

Post a Comment