Monday, 25 December 2023

ಹೆಣ್ಣು ಭ್ರೂಣ ಹತ್ಯೆ: ಈ ಮನಸ್ಥಿತಿಯನ್ನು ಬರೇ ಕಾನೂನಿನಿಂದ ಬದಲಿಸಬಹುದೇ?



ಇತ್ತೀಚೆಗೆ ರಾಜ್ಯದ ಮಂಡ್ಯದಲ್ಲಿ ಭಿನ್ನ ಪಾದಯಾತ್ರೆ ನಡೆಯಿತು. ಮದುವೆಗೆ ಹೆಣ್ಣು ಕರುಣಿಸು ಎಂದು ಕೋರಿ ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆ ಇದು. ಇವರು ಹೀಗೆ ಪಾದಯಾತ್ರೆ ನಡೆಸುತ್ತಿರುವಾಗ ಇದೇ ಮಂಡ್ಯದ ಲ್ಯಾಬ್‌ಗಳ ಮೇಲೆ  ಪೊಲೀಸರು ಕಣ್ಣಿಟ್ಟಿದ್ದರು. ಭಾರೀ ಸಂಖ್ಯೆಯಲ್ಲಿ ಇಲ್ಲಿ ಹೆಣ್ಣುಭ್ರೂಣ ಹತ್ಯೆಯಾಗುತ್ತಿದೆ ಎಂಬ ಸುಳಿವು ಅವರಿಗೆ ಲಭಿಸಿತ್ತು. ಆ ಬಳಿಕ  ಹಲವರನ್ನು ಬಂಧಿಸಿದರು. ಕೇವಲ ಮೂರೇ ಮೂರು ವರ್ಷಗಳಲ್ಲಿ ಈ ಮಂಡ್ಯ-ಮೈಸೂರು ಭಾಗದಲ್ಲಿ 900ರಷ್ಟು ಹೆಣ್ಣು ಭ್ರೂಣ  ಹತ್ಯೆಯಲ್ಲಿ ಈ ಬಂಧಿತರು ಭಾಗಿಯಾಗಿದ್ದಾರೆ ಅನ್ನುವುದು ಬೆಳಕಿಗೆ ಬಂತು. ಒಂದುಕಡೆ,

ಮದುವೆಗೆ ಹೆಣ್ಣಿಲ್ಲ ಎಂಬ ಸ್ಥಿತಿಯಾದರೆ ಇನ್ನೊಂದು ಕಡೆ ಇರುವ ಹೆಣ್ಣನ್ನೇ ಸಾಯಿಸುವ ಸ್ಥಿತಿ- ಇವೆರಡೂ ಒಂದೇ ಕಡೆ ನಡೆ ದಿರುವುದು ನಿಜಕ್ಕೂ ಅಚ್ಚರಿ. ಉತ್ತರ ಕನ್ನಡ, ಮಂಡ್ಯ-ಮೈಸೂರು, ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಹರೆಯದ ಹೆಣ್ಣು  ಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ವರದಿ ಇದೆ. ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ ಎರಡು ಮತ್ತು ಬಾಗಲಕೋಟೆ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ,  ಕಲಬುರಗಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಸಾವಿರ ಗಂಡು ಮಕ್ಕಳಿಗೆ 900ಕ್ಕಿಂತಲೂ ಕಡಿಮೆ ಹೆಣ್ಣು ಮಕ್ಕಳಿದ್ದು, ಸರ್ಕಾರದ ಕೆಂಪು  ಪಟ್ಟಿಯಲ್ಲಿದೆ. ಇದು ಸರಕಾರದ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ದತ್ತಾಂಶಗಳಂತೆ  ತಯಾರಿಸಲಾದ ಮಾಹಿತಿ.  ತಿಂಗಳುಗಳ ಹಿಂದೆ ಆದಿಚುಂಚನಗಿರಿ ಮಠದಲ್ಲಿ ವಧು-ವರ ಸಂಬಂಧ ಏರ್ಪಡಿಸುವುದಕ್ಕಾಗಿ ಸಮ್ಮೇಳನ ಏರ್ಪಡಿಸಲಾಗಿತ್ತು. ಇದರಲ್ಲಿ  10 ಸಾವಿರದಷ್ಟು ಯುವಕರಿಗೆ ಪ್ರತಿಯಾಗಿ ಕೇವಲ 300ರಷ್ಟು ಯುವತಿಯರು ಮಾತ್ರ ಪಾಲ್ಗೊಂಡಿದ್ದರು.

ಯಾಕೆ ಹೀಗಾಗುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತು ಈ ದೇಶದಲ್ಲಿ ಚಾಲ್ತಿಯಲ್ಲಿದೆ. ಹೆಣ್ಣಿನ ಪಾಲಿಗೆ ನಮ್ಮೆಲ್ಲ ಸಾಂಪ್ರದಾಯಿಕ ಆಚರಣೆಗಳು ಮತ್ತು ದೃಷ್ಟಿಕೋನಗಳು ಅಭದ್ರತೆಯನ್ನು ಸೂಚಿಸುತ್ತವೆಯೇ ಹೊರತು  ಆಕೆಯ ಬಗ್ಗೆ ಹೆಮ್ಮೆ, ಅಭಿಮಾನ ಮತ್ತು ಸಂತಸ ಪಡುವ ರೀತಿಯಲ್ಲಿ ಇಲ್ಲವೇ ಇಲ್ಲ. ವಂಶವನ್ನು ಮುಂದುವರಿಸಲು ಗಂಡು ಬೇಕು  ಎಂಬಲ್ಲಿಂದ ಹಿಡಿದು ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬಲ್ಲಿವರೆಗೆ ಹೆಣ್ಣು ವಂಶಕ್ಕೆ ಅನನುಕೂಲಕರವಾದ  ಪಟ್ಟಿಯನ್ನೇ ಸಮಾಜ ತಯಾರಿಸಿಟ್ಟುಕೊಂಡಿದೆ. ಹೆಣ್ಣನ್ನು ಎಷ್ಟೇ ಓದಿಸಿದರೂ ಅಂತಿಮವಾಗಿ ಆಕೆ ಪರರ ಪಾಲಾಗುತ್ತಾಳೆ ಎಂಬ ನಂಬಿಕೆ,  ಕೃಷಿ ಚಟುವಟಿಕೆಯಲ್ಲಿ ಹೆಣ್ಣಿಗಿಲ್ಲದ ಪ್ರಾಧಾನ್ಯತೆ, ಹೆಣ್ಣನ್ನು ಸದಾ ಕಾಡುವ ಸುರಕ್ಷಿತತೆಯ ಭೀತಿ ಮತ್ತು ಕೆಲವೊಮ್ಮೆ ಆಸ್ತಿಯಲ್ಲಿ ಹೆಣ್ಣು  ಮಕ್ಕಳಿಗೆ ಪಾಲು ಕೊಡಬೇಕಾಗುತ್ತದೆಂಬ ಭಯ.. ಇತ್ಯಾದಿಗಳೂ ಪಾಲಕರ ಹೆಣ್ಣು ದ್ವೇಷಕ್ಕೆ ಕಾರಣವಾಗುತ್ತದೆ. ಅಂದಹಾಗೆ,

ಕಾನೂನಿನ ಮೂಲಕ ಈ ಮಾನಸಿಕತೆಯನ್ನು ಪೂರ್ಣ ಮಟ್ಟದಲ್ಲಿ ಬದಲಿಸಬಹುದು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ, ಹೆಣ್ಣು  ಭ್ರೂಣ ಪತ್ತೆ ಮತ್ತು ಹತ್ಯೆಯನ್ನು ಸುಸಜ್ಜಿತ ಆಸ್ಪತ್ರೆಗಳಲ್ಲೇ  ನಡೆಸಬೇಕೆಂದಿಲ್ಲ. ಇದನ್ನು ತೀರಾ ಅಸುರಕ್ಷಿತವಾಗಿ ಮತ್ತು ನಗರದಿಂದ  ದೂರದ ಪ್ರದೇಶಗಳಲ್ಲೂ ಮಾಡಲಾಗುತ್ತದೆ. ಸ್ಥಾಪಿತ ಸ್ಕ್ಯಾನಿಂಗ್ ಕೇಂದ್ರಗಳ ಬದಲು ಮೊಬೈಲ್ ಪ್ರಯೋಗಾಲಯದಲ್ಲೂ ಇಂಥ ಪತ್ತೆ  ಮತ್ತು ಹತ್ಯೆ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ಇದರ ಸುಳಿವು ಸಿಗುವುದು ಸುಲಭವಲ್ಲ. ಇತ್ತೀಚೆಗೆ ಮಂಡ್ಯದಲ್ಲಿ ಪತ್ತೆ ಹಚ್ಚಲಾದ  ‘ಭ್ರೂಣಹತ್ಯೆ’ ಜಾಲವು ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಮಂಡ್ಯದ ಅಲೆಮನೆ ಸಮೀಪದ ಕೊಠಡಿಯಲ್ಲಿ ಯಾರಿಗೂ ಅನುಮಾನ ಬಾರದಂತೆಯೇ ಈ ಕೃತ್ಯ ನಡೆಯುತ್ತಿತ್ತು. ಸ್ಥಳೀಯರಿಗೆ ಈ ಬಗ್ಗೆ ಗೊತ್ತಾಗುವುದು ಸುಲಭವೂ ಅಲ್ಲ. ಇಲ್ಲಿ ಇನ್ನೊಂದು  ಸಂಗತಿಯೂ ಇದೆ, ಈ ಭ್ರೂಣ ಹತ್ಯೆಯ ವೈದ್ಯರ ಒತ್ತಾಸೆಯಿಂದ ನಡೆಯುತ್ತಿದೆ ಎನ್ನುವಂತೆಯೂ ಇಲ್ಲ. ದಂಪತಿಗಳ ಸಮ್ಮತಿಯಿಂದ  ಮತ್ತು ಒತ್ತಾಯದಿಂದಲೇ ಇಂಥವು ನಡೆಯುತ್ತಿರುವುದರಿಂದ ಇವು ಬಹಿರಂಗಕ್ಕೆ ಬರುವುದಕ್ಕೂ ಕಷ್ಟವಿದೆ. ಭ್ರೂಣಹತ್ಯೆಗಾಗಿ ನಿಗದಿ ಪಡಿಸಲಾದ ಶುಲ್ಕದಲ್ಲಿ ಏನಾದರೂ ಏರುಪೇರಾಗಿ ಜಗಳವಾದರೆ ಮಾತ್ರ ಇಂಥವು ಸಾರ್ವಜನಿಕ ಗಮನಕ್ಕೆ ಬರುತ್ತದೆ. ಆದ್ದರಿಂದಲೇ, ಈ  ಹೆಣ್ಣು ಭ್ರೂಣಹತ್ಯೆಯನ್ನು ಕಾನೂನು ತಕ್ಕಡಿಯಲ್ಲಷ್ಟೇ ಇಟ್ಟು ನೋಡದೇ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಪರಿಶೀ ಲಿಸಬೇಕಾಗಿದೆ.

ಈ ಇಡೀ ಪ್ರಕ್ರಿಯೆಯಲ್ಲಿ ದಂಪತಿಗಳ ಪಾತ್ರ ಬಹು ಅಮೂಲ್ಯವಾದುದು. ಅವರ ಒಪ್ಪಿಗೆಯಿಲ್ಲದೇ ಭ್ರೂಣಹತ್ಯೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಬಡ ಮತ್ತು ಅರೆ ಮಧ್ಯಮ ಕುಟುಂಬಗಳಲ್ಲಿ ಇಂಥ ಭ್ರೂಣಹತ್ಯೆ ಹೆಚ್ಚು. ಮೊದಲ ಮಗು ಹೆಣ್ಣಾದರೆ, ಎರಡನೇ ಮಗು  ಗಂಡಾಗಬೇಕೆಂದು  ಬಯಸುವುದು ಮತ್ತು ಅದು ಕೈಗೂಡುವುದಿಲ್ಲ ಎಂದು ಭ್ರೂಣ ಪತ್ತೆಯಲ್ಲಿ ಸ್ಪಷ್ಟವಾದರೆ ಹತ್ಯೆಗೆ ಮುಂದಾಗುವುದು  ನಡೆಯುತ್ತಿದೆ. ಇದು ಮನಸ್ಥಿತಿಯೊಂದರ ಫಲಿತಾಂಶ. ಹೆಣ್ಣು ಅಶಕ್ತೆ ಮತ್ತು ಕುಟುಂಬಕ್ಕೆ ಭಾರ ಅನ್ನುವ ಭಾವನೆಯೇ ಈ ಹತ್ಯೆಗೆ  ಕಾರಣ. ಬರೇ ಕಾನೂನು ಈ ಮನಸ್ಥಿತಿಯನ್ನು ಬದಲಿಸದು. ಪರಂಪರಾಗತವಾಗಿ ಮನಸ್ಸಲ್ಲಿ ಉಳಿದು ಬಿಟ್ಟಿರುವ ಈ ಮನಸ್ಥಿತಿಯನ್ನು ಬದಲಿಸುವುದಕ್ಕೂ ಸರಕಾರ ಅಭಿಯಾನ ರೂಪದ ಗಂಭೀರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆ ಮನೆ ಭೇಟಿಯಷ್ಟೇ  ಅಲ್ಲ, ಕೂಲಿಕಾರರಾಗಿ ಒಂದೂರಿನಿಂದ  ಮತ್ತೊಂದೂರಿಗೆ ವಲಸೆ ಹೋಗಿರುವ ದಂಪತಿಗಳನ್ನು ಭೇಟಿ ಮಾಡಿ ಅವರಲ್ಲಿ ಅರಿವು  ಮೂಡಿಸುವ ಪ್ರಯತ್ನಗಳಾಗಬೇಕು. ಉಚಿತ ಶಿಕ್ಷಣವೂ ಸೇರಿದಂತೆ ಹೆಣ್ಣು ಮಕ್ಕಳಿಗಾಗಿ ಸರಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಬೇಕು. ಇದರ ಜೊತೆಗೇ ಮಾನವ ಜೀವ ಎಷ್ಟು ಅಮೂಲ್ಯ ಎಂಬುದನ್ನು ಅವರು ಗಂಭೀರವಾಗಿ  ಅವಲೋಕಿಸುವಂತೆ ಮಾಡಬೇಕು. ಇದಕ್ಕಾಗಿ ವಿವಿಧ ಸರಕಾರೇತರ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಬೇಕು. ಒಂದುರೀತಿಯಲ್ಲಿ
,
ಭ್ರೂಣಹತ್ಯೆ ಎಂಬುದು 21ನೇ ಶತಮಾನದ ಪಿಡುಗಲ್ಲ. ಇದಕ್ಕೆ ಪುರಾತನ ಇತಿಹಾಸವಿದೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೂ ಈ  ಪಿಡುಗು ವ್ಯಾಪಕವಾಗಿತ್ತು. ಕೆಲವೊಂದು ಬುಡಕಟ್ಟುಗಳು ಹೆಣ್ಣು ಮಗುವನ್ನು ಅಪಾರವಾಗಿ ದ್ವೇಷಿಸುತ್ತಿದ್ದುವು. ಇವತ್ತಿನಂತೆ ಭ್ರೂಣಪತ್ತೆ  ಪರೀಕ್ಷೆ ಇಲ್ಲದ ಆ ಕಾಲದಲ್ಲಿ ಹುಟ್ಟಿದ ಕೂಡಲೇ ಹೆಣ್ಣು ಮಗುವನ್ನು ಹೂಳುವ ಪದ್ಧತಿ ಇತ್ತು. ಪ್ರವಾದಿ ಮುಹಮ್ಮದ್(ಸ)ರು ಈ  ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ಜನರ ಮನಸ್ಸಲ್ಲಿ ಅಪರಾಧಿ ಭಾವವನ್ನು ಹುಟ್ಟು ಹಾಕಿದರು. ಪ್ರತಿಯೊಬ್ಬರನ್ನೂ ಮರಣಾನಂತರ ದೇವನು ಎಬ್ಬಿಸುತ್ತಾನೆ ಮತ್ತು ಹತ್ಯೆಗೀಡಾದ ಹೆಣ್ಣು ಮಗುವಿನ ಮುಂದೆ ಆಕೆಯ ಹೆತ್ತವರನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿ  ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು. ಯಾವ ಹೆತ್ತವರು ಹೆಣ್ಣು ಮಗುವನ್ನು ಚೆನ್ನಾಗಿ ಲಾಲಿಸಿ ಪಾಲಿಸಿ ಬೆಳೆಸುತ್ತಾರೋ  ಅವರಿಗೆ ಸ್ವರ್ಗವಿದೆ ಎಂದು ಘೋಷಿಸಿದರು. ಮದುವೆಯ ವೇಳೆ ಹೆಣ್ಣಿಗೆ ವಧು ಧನ ಪಾವತಿಸಿ ಮದುವೆಯಾಗಬೇಕೆಂದು ಯುವಕರಿಗೆ  ಆದೇಶಿಸಿದರು. ಆ ಮೂಲಕ ವರದಕ್ಷಿಣೆ ಎಂಬ ಪರಿಕಲ್ಪನೆಗೇ ಕೊಡಲಿಯೇಟು ನೀಡಿದರು. ಶಿಕ್ಷಣ ಪ್ರತಿ ಹೆಣ್ಣು-ಗಂಡಿನ ಮೇಲೂ  ಕಡ್ಡಾಯ ಎಂದು ಸಾರಿದರು. ಗಂಡಿನಂತೆಯೇ ಹೆಣ್ಣಿಗೂ ಹೆತ್ತವರ ಆಸ್ತಿಯಲ್ಲಿ ಪಾಲಿದೆ ಎಂದರು. ಯುದ್ಧದಲ್ಲಿ ಮಹಿಳೆಯನ್ನು  ಪಾಲುಗೊಳಿಸಿದರು. ಮದೀನಾದ ಸಂತೆಯಲ್ಲಿ ಮಹಿಳೆಯರೂ ವ್ಯಾಪಾರಿಯಾದರು. ಮಹಿಳೆ ಮಸೀದಿಗೂ ಹೋಗಬಹುದು,  ಸಂತೆಯಲ್ಲಿ ವ್ಯಾಪಾರವನ್ನೂ ಮಾಡಬಹುದು, ಯುದ್ಧದಲ್ಲೂ ಭಾಗವಹಿಸಬಹುದು, ಮದುವೆಯ ವೇಳೆ ವರನೇ ಆಕೆಗೆ ವಧು ಧನ  ಪಾವತಿಸಿ ವಿವಾಹವಾಗಬೇಕು, ಬೇಡದ ವಿವಾಹದಿಂದ ಆಕೆ ವಿಚ್ಛೇದನ ಪಡಕೊಳ್ಳಬಹುದು, ಆಸ್ತಿಯಲ್ಲಿ ಆಕೆಗೂ ಪಾಲು ಇದೆ, ಯಾವ  ಮಕ್ಕಳು ತಾಯಿಯ ಕೋಪಕ್ಕೆ ಪಾತ್ರರಾಗುತ್ತಾರೋ ಅವರು ನರಕಕ್ಕೆ.. ಇತ್ಯಾದಿ ಇತ್ಯಾದಿ ಅಮೂಲ್ಯ ಮತ್ತು ಚೇತೋಹಾರಿ ನೀತಿಗಳನ್ನು  ಧರ್ಮದ ಭಾಗವಾಗಿ ಪ್ರಸ್ತುತಪಡಿಸಿದರು. ಅಲ್ಲದೇ, ಪವಿತ್ರ ಕುರ್‌ಆನಿನ 114 ಅಧ್ಯಾಯಗಳ ಪೈಕಿ 4ನೇ ಅಧ್ಯಾಯದ ಹೆಸರನ್ನೇ ‘ಮಹಿಳೆ’  ಎಂದಿಟ್ಟರು. ಮಹಿಳಾ ಪರ ಅವರ ಈ ಸರಣಿ ಕ್ರಮಗಳು ನಿಧಾನಕ್ಕೆ ಅಂದಿನ ಜನರ ಮೇಲೆ ಗಾಢ ಪರಿಣಾಮ ಬೀರತೊಡಗಿದವು.  ಅಂತಿಮವಾಗಿ, ಹೆಣ್ಣು ಮಗುವಿಗಾಗಿ ಆಸೆಪಡುವ ಮತ್ತು ಹೆಮ್ಮೆಪಡುವ ಸಮಾಜವೊಂದನ್ನು ಅವರು ಕಟ್ಟಿ ಬೆಳೆಸಿದರು.

ಸದ್ಯ ಕಾನೂನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಜನರನ್ನು ಸಂಸ್ಕರಿಸುವ ಪ್ರಯತ್ನ ನಡೆಯಬೇಕಾಗಿದೆ.

Friday, 22 December 2023

ಮುಸ್ಲಿಮ್ ಸಮುದಾಯದ ಚರ್ಚೆಗೆ ಹೊಸ ಸಾಧ್ಯತೆ ತೆರೆದುಕೊಟ್ಟ ಆಶಿಕ್




ದ.ಕ. ಜಿಲ್ಲೆಯ 24ರ ಯುವಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಗೀಡಾಗಿದ್ದಾರೆ. ಸೋನಿ ಟಿ.ವಿ. ನಡೆಸಿಕೊಡುವ ಮಾಸ್ಟರ್ ಶೆಫ್ ಇಂಡಿಯಾ ಎಂಬ  ಬಹುಪ್ರಸಿದ್ಧ ಅಡುಗೆ ಸ್ಪರ್ಧೆಯಲ್ಲಿ ಮಂಗಳೂರಿನ ಈ ಮುಹಮ್ಮದ್ ಆಶಿಕ್ ದೇಶದಾದ್ಯಂತದ 30 ಸಾವಿರ ಸ್ಪರ್ಧಾಳುಗಳನ್ನು ಹಿಂದಿಕ್ಕಿ  ಪ್ರಥಮ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ಕಳೆದ ವರ್ಷವೂ ಸೋನಿ ಟಿ.ವಿ.ಯ ಸ್ಪರ್ಧೆಯಲ್ಲಿ ಈ ಆಶಿಕ್ ಸ್ಪರ್ಧಿಸಿದ್ದರು.  ಆದರೆ ವಿಫಲರಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಿದರು. ಹೊಟೇಲ್ ಮ್ಯಾನೇಜ್‌ಮೆಂಟ್ ಕಲಿಯಬೇಕೆಂಬ ಬಯಕೆ ಇಟ್ಟುಕೊಂಡರೂ  ಆರ್ಥಿಕ ಪರಿಸ್ಥಿತಿಯಿಂದಾಗಿ ಅದನ್ನು ಕೈಬಿಟ್ಟ ಯುವಕನೋರ್ವ ಸ್ವಪ್ರಯತ್ನದಿಂದ ಅದ್ಭುತ ಸಾಧಕನಾಗಿ ಮೂಡಿ ಬಂದಿರುವುದನ್ನು ಒಟ್ಟು  ಸಮಾಜ ಅದರಲ್ಲೂ ಮುಸ್ಲಿಮ್ ಸಮುದಾಯ ಅವಲೋಕನಕ್ಕೆ ಒಳಪಡಿಸುವುದು ಸಕಾಲಿಕವಾದುದು.

ದಕ್ಷಿಣ  ಕನ್ನಡವನ್ನು ಕೋಮುಸೂಕ್ಷ್ಮ  ಜಿಲ್ಲೆ ಎಂದು ಕರೆಯುವುದಿದೆ. ಈ ಹೆಸರು ವಿನಾಕಾರಣ ಬಂದಿಲ್ಲ. ಅನೈತಿಕ ಪೊಲೀಸ್‌ಗಿರಿ, ಗುಂಪು  ಥಳಿತ, ದ್ವೇಷಭಾಷಣ, ಕೋಮುಗಲಭೆಗಳನ್ನು ಒಡಲಲ್ಲಿ ಇಟ್ಟುಕೊಂಡು ಆಗಾಗ ಅಷ್ಟಿಷ್ಟು ಹೊರಚೆಲ್ಲಿ ದಾವಾಗ್ನಿ ಸೃಷ್ಟಿಸುವ ಜಿಲ್ಲೆ ಇದು.  ಇದರ ಪರಿಣಾಮ ಇಲ್ಲಿನ ಜನಜೀವನದ ಮೇಲೂ ಆಗಿದೆ. ಮುಖ್ಯವಾಗಿ, ಮುಸ್ಲಿಮ್ ಸಮುದಾಯದ ಮೇಲೆ ಈ ವಾತಾವರಣ ಸಾಕಷ್ಟು  ಅಡ್ಡ ಪರಿಣಾಮವನ್ನೂ ಬೀರಿದೆ. ಸಮುದಾಯದ ಮಂದಿ ಒಂದುಕಡೆ ಒಟ್ಟು ಸೇರಿದರೆ ರಾಜಕೀಯ ಮಾತನಾಡದೇ ಮತ್ತು  ರಾಜಕಾರಣಿಗಳ ಕೋಮುದ್ವೇಷದ ಮಾತುಗಳನ್ನು ಉಲ್ಲೇಖಿಸಿ ಚರ್ಚಿಸದೇ ವಿರಮಿಸುವುದು ಕಡಿಮೆ. ವಾಟ್ಸಪ್ ಗ್ರೂಪ್‌ಗಳಲ್ಲೂ  ಇಂಥವುಗಳದ್ದೇ  ಕಾರುಬಾರು. ದ್ವೇಷಭಾಷಣಗಳನ್ನು ಖಂಡಿಸುವುದು, ರಾಜಕಾರಣಿಯ ಮುಸ್ಲಿಮ್ ದ್ವೇಷಿ ಹೇಳಿಕೆಯನ್ನು ಪ್ರಶ್ನಿಸುವುದು,  ಮುಸ್ಲಿಮ್ ಸಮುದಾಯ ರಾಜಕೀಯವಾಗಿ ಏನು ಮಾಡಬೇಕೆಂದು ಚರ್ಚಿಸುವುದು, ಯಾವ ರಾಜಕಾರಣಿ ಮತ್ತು ರಾಜಕೀಯ ಪಕ್ಷ  ಮುಸ್ಲಿಮರಿಗೆ ಅನಾನುಕೂಲ ಎಂದೆಲ್ಲಾ ವಿಶ್ಲೇಷಿಸುವುದನ್ನೇ ಮುಸ್ಲಿಮ್ ಸಮುದಾಯದ ಹೆಚ್ಚಿನ ವಾಟ್ಸಪ್ ಗ್ರೂಪ್‌ಗಳಲ್ಲಿ  ಮಾಡಲಾಗುತ್ತಿದೆ. ಇವುಗಳು ತಪ್ಪು ಎಂದಲ್ಲ. ಆದರೆ ಮುಸ್ಲಿಮ್ ಸಮುದಾಯದ ಆದ್ಯತೆಯೇ ಇದಾಗಿಬಿಟ್ಟರೆ, ಅದರ ನಕಾರಾತ್ಮಕ  ಪರಿಣಾಮವನ್ನು ಹೊಸ ತಲೆಮಾರು ಅನುಭವಿಸಬೇಕಾಗುತ್ತದೆ. ಇಂಥ ವಾಟ್ಸಾಪ್ ಚರ್ಚೆಗಳು ಅಲ್ಲೇ  ಉಳಿಯದೇ ಆ ಬಳಿಕ ಮನೆಯಲ್ಲೂ ಪ್ರಸ್ತಾಪವಾಗುತ್ತದೆ. ಪದೇಪದೇ ಇಂಥದ್ದೇ  ಚರ್ಚೆ-ವಿಶ್ಲೇಷಣೆಯನ್ನು ಓದುತ್ತಾ ಓದುತ್ತಾ ವ್ಯಕ್ತಿ ಅನಗತ್ಯ ಆತಂಕ ಮತ್ತು  ಗುಂಗಿಗೆ ಬೀಳಬಹುದು. ನಿಜವಾಗಿ,

ಅಭದ್ರತೆಯೇ ಬದುಕಾಗುವುದು ಅಪಾಯಕಾರಿ. ಎಲ್ಲೋ  ನಡೆಯುವ ದ್ವೇಷ ಭಾಷಣ, ಅಮಾನವೀಯ ಕೃತ್ಯಗಳನ್ನು ಇನ್ನೆಲ್ಲೋ  ಕುಳಿತು  ದಿನಾ ಚರ್ಚಿಸುವುದರಿಂದ ನಿರ್ಮಾಣಾತ್ಮಕ ಆಲೋಚನೆಗೆ ತಡೆ ಬೀಳಬಹುದು. ಅದು ಮನೆಯ ಮಕ್ಕಳ ಮೇಲೂ ಪರಿಣಾಮ  ಬೀರಬಹುದು. ಸ್ವತಂತ್ರ ಆಲೋಚನೆಗಳೊಂದಿಗೆ, ಸಮೃದ್ಧವಾಗಿ ಬೆಳೆಯಬೇಕಾದ ಮಕ್ಕಳು ಆತಂಕ, ಅನುಮಾನ ಮತ್ತು ನಕಾರಾತ್ಮಕ  ಧೋರಣೆಯೊಂದಿಗೆ ಬೆಳೆಯಬಹುದು. ಮುಹಮ್ಮದ್ ಆಶಿಕ್‌ನ ಸಾಧನೆ ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. ಈ ಯುವಕ ಈ  ಮಟ್ಟಕ್ಕೆ ಬೆಳೆದುದು ಪವಾಡದಿಂದಲ್ಲ. ಸ್ಪಷ್ಟ ಗುರಿ, ಅಪಾರ ಬದ್ಧತೆ ಮತ್ತು ಛಲವೇ ಈ ಆಶಿಕ್‌ನನ್ನು ದೇಶ-ವಿದೇಶದ ತೀರ್ಪುಗಾರರು  ಮಾಸ್ಟರ್ ಶೆಫ್ ಆಫ್ ಇಂಡಿಯಾವಾಗಿ ಗುರುತಿಸಿದ್ದಾರೆ. ಮನೆಯಲ್ಲೇ  ಶುಚಿ-ರುಚಿಯಾದ ಆಹಾರ ತಯಾರಿಸಿ ಕೊಡುವಲ್ಲಿಂದ  ಆರಂಭವಾದ ಈ ಯುವಕನ ಪ್ರಯಾಣವು, ಕಾಲೇಜುಗಳ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸ್ವತಃ ಸ್ಟಾಲ್ ಹಾಕಿ ವ್ಯಾಪಾರ ಮಾಡುವಲ್ಲಿ  ವರೆಗೆ ಮತ್ತು ಅಲ್ಲಿಂದ ಕುಲ್ಕಿ ಶರ್ಬತ್ ಎಂಬ ಪಾನೀಯ ಮಾರಾಟದವರೆಗೂ ಬೆಳೆಯಿತು. ದ್ವಿತೀಯ ಪಿಯುಸಿಯ ಬಳಿಕ ಆರ್ಥಿಕ  ಅಡಚಣೆಯಿಂದ ಕಲಿಕೆ ಮುಂದುವರಿಸಲಾಗದೇ ಸೇಲ್ಸ್ಮ್ಯಾನ್ ಕೆಲಸಕ್ಕೆ ಸೇರಿಕೊಂಡ ಆಶಿಕ್, 20ರ ಹರೆಯಲ್ಲೇ  `ಕುಲ್ಕಿ ಹಬ್' ಎಂಬ  ವಿವಿಧ ಪಾನೀಯಗಳ ಅಂಗಡಿ ತೆರೆದರು. ತಾನು ಶೆಫ್ ಆಗಬೇಕು ಎಂಬ ಕನಸನ್ನು ಎಂದೂ ಬಿಟ್ಟು ಕೊಡದ ಛಲದ ಸುಖವನ್ನು  ಇಂದು ಈ ಆಶಿಕ್ ಅನುಭವಿಸುತ್ತಿದ್ದಾರೆ. ಅಂದಹಾಗೆ,

ಕೋಮು ಸಂಬಂಧಿ  ವಿಷಯಗಳಿಗಾಗಿಯೇ ರಾಷ್ಟ್ರ ಮಟ್ಟದಲ್ಲಿ ಆಗಾಗ ಸುದ್ದಿಗೀಡಾಗುವ ಜಿಲ್ಲೆಯ ತರುಣನೋರ್ವ ಅತ್ಯಂತ  ಚೇತೋಹಾರಿ ಮತ್ತು ಪ್ರೇರಣದಾಯಿ ಸಂಗತಿಗಾಗಿ ರಾಷ್ಟçಮಟ್ಟದಲ್ಲಿ ಸುದ್ದಿಗೀಡಾಗುವುದು ಮುಸ್ಲಿಮ್ ಸಮುದಾಯದ ಚರ್ಚೆಯ ದಿಕ್ಕನ್ನು  ಬದಲಿಸುವುದಕ್ಕೆ ಪ್ರೇರಣೆಯಾಗಬೇಕು. ಈ ಮುಹಮ್ಮದ್ ಆಶಿಕ್ ಒಂದಷ್ಟು ಸಮಯದವರೆಗೆ ಸಮುದಾಯದ ವಾಟ್ಸಪ್ ಚರ್ಚೆಗಳಲ್ಲಿ  ಸ್ಥಾನ ಪಡೆಯಬೇಕು. ಪ್ರತಿ ಮನೆ ಮನೆಗಳಲ್ಲೂ ಈ ಆಶಿಕ್ ಚರ್ಚಾವಸ್ತುವಾಗಬೇಕು. ಹೊಸ ತಲೆಮಾರು ಇಂಥ ಸಾಧಕರ ಕತೆಗಳನ್ನು  ಕೇಳಿಕೊಂಡು ಬೆಳೆಯಬೇಕು. ದಿನವಿಡೀ ಕಾಂಗ್ರೆಸ್ಸು, ಬಿಜೆಪಿ, ಅದು, ಇದು ಎಂದು ಚರ್ಚಿಸುವುದಕ್ಕಿಂತ ಬೆಳೆಯುತ್ತಿರುವ ಪೀಳಿಗೆಯನ್ನು  ಅತ್ಯಂತ ನಿರ್ಮಾಣಾತ್ಮಕವಾಗಿ ಬೆಳೆಸುವುದು ಹೇಗೆ, ಅವರನ್ನು ಸಾಧಕರಾಗಿ ಪರಿವರ್ತಿಸುವುದು ಹೇಗೆ ಎಂಬ ಬಗ್ಗೆ ಗಂಭೀರ  ಅವಲೋಕನಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯಬೇಕು. ಅಷ್ಟೇ ತೀವ್ರವಾಗಿ ಇಂಥ ಚರ್ಚೆ ಗಳು ಪ್ರತಿ ಮನೆಮನೆಯಲ್ಲೂ  ನಡೆಯಬೇಕು. ಮಕ್ಕಳು ಈ ಚರ್ಚೆಯನ್ನು ಕೇಳಿ ಬೆಳೆಯುವುದರಿಂದ ಅವರಲ್ಲೂ ನಕಾರಾತ್ಮಕ ಭಾವಗಳು ಹೊರಟು ಹೋಗಿ ಆಶಾವಾದ  ತುಂಬಿಕೊಳ್ಳುತ್ತದೆ. ತಾವೂ ಆಶಿಕ್ ಆಗಬೇಕು ಅಥವಾ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂಬ ಛಲ ತುಂಬುತ್ತದೆ. 

ಈ ಬಾರಿಯ  ನೀಟ್ ಪರೀಕ್ಷೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿ ಮೊದಲ 100 ರ‍್ಯಾಂಕಲ್ಲೂ ಕಾಣಿಸಿಕೊಂಡಿಲ್ಲ. ಅಬ್ದುಲ್ ಬಾಸಿತ್ ಅನ್ನುವ  ಪ್ರತಿಭಾವಂತ ಪಡೆದಿರುವ 113ನೇ ರ‍್ಯಾಂಕೇ ಸಮುದಾಯದ ಪಾಲಿನ ಕಿರೀಟ. ತಮಿಳುನಾಡಿನ ಪ್ರಬಂಜನ್ ಮತ್ತು ಆಂಧ್ರದ ವರುಣ್  ಚಕ್ರವರ್ತಿ ಒಟ್ಟು 720 ಅಂಕಗಳಲ್ಲಿ 720 ಅಂಕಗಳನ್ನೂ ಪಡೆದು ಮೊದಲ ಸ್ಥಾನ ಪಡೆದಿದ್ದರು. ಈ ಬಗೆಯ ಪೈಪೋಟಿಯತ್ತ ಮುಸ್ಲಿಮ್  ಸಮುದಾಯದ ಮಕ್ಕಳನ್ನು ತರಬೇತುಗೊಳಿಸಬೇಕು. ಐಐಟಿ, ಐಐಐಟಿ, ಐಐಎಸ್‌ಇ, ಎನ್‌ಐಟಿ ಮತ್ತು ಐಐಎಂಗಳಲ್ಲಿ ಮುಸ್ಲಿಮ್  ಸಮುದಾಯದ ಅನುಪಾತ 1.92% ಎಂಬುದು ಈಗಿನ ಲೆಕ್ಕಾಚಾರ. ಈ ಅಂಕಿಅಂಶಗಳನ್ನು ಎತ್ತಿ ಉತ್ತಮಗೊಳಿಸುವುದಕ್ಕೆ ಪೂರಕ  ಯೋಚನೆ ಮತ್ತು ಯೋಜನೆಗಳಿಗೆ ಸಮುದಾಯ ಚಾಲನೆ ನೀಡಬೇಕು. ಅದಕ್ಕೆ ಪ್ರಥಮ ಹೆಜ್ಜೆಯಾಗಿ ಸಕಾರಾತ್ಮಕ ಆಲೋಚನೆಗಳಿಗೆ  ಆದ್ಯತೆ ನೀಡಬೇಕು. ಮುಸ್ಲಿಮ್ ಸಮುದಾಯ ಬರಹ, ಭಾಷಣ, ಸೋಶಿಯಲ್ ಮೀಡಿಯಾ ಚರ್ಚೆ ಗಳು ಮತ್ತು ಮನೆಯ  ಮಾತುಕತೆಗಳೆಲ್ಲವೂ ಹೊಸ ಪೀಳಿಗೆಯ ಪಾಲಿಗೆ ಆಸಕ್ತಿಕರವಾಗುವಂತೆ ಮತ್ತು ಸಾಧನೆಗೆ ಪ್ರೇರಣೆಯಾಗುವಂತೆ ಇರಬೇಕು. ಭಾರತದ  ಚಂದ್ರಯಾನದ ಯಶಸ್ಸಿನಲ್ಲಿ ಪಾತ್ರಧಾರಿಗಳಾಗಿರುವ ಸನಾ ಫೈರೋಝï, ಯಾಸಿರ್ ಅಮ್ಮಾರ್, ಮುಹಮ್ಮದ್ ಶಬೀರ್ ಆಲಂ, ಅರೀಬ್  ಅಹ್ಮದ್, ಅಖ್ತದಾರ್ ಅಬ್ಬಾಸ್, ಇಶ್ರತ್ ಜಮಾಲ್, ಖುಶ್ಬೂ ಮಿರ್ಝಾ ಮುಂತಾದ ವಿಜ್ಞಾನಿಗಳನ್ನು ಸಂದರ್ಭಾ ನುಸಾರ ಮಕ್ಕಳ  ಮುಂದೆ ಪ್ರಸ್ತಾಪಿಸಿ ಕನಸು ಕಟ್ಟಬೇಕು. ಇದೇನೂ ಅಸಾಧ್ಯವಲ್ಲ. ಪ್ರತಿ ಮಗುವೂ ವಿಶಿಷ್ಟ. ಸಾಹಸ ಮತ್ತು ಸಾಧನೆ ಮಕ್ಕಳನ್ನು  ಆಕರ್ಷಿಸುವಷ್ಟು ಇನ್ನಾವುದೂ ಆಕರ್ಷಿಸುವುದಿಲ್ಲ. ಒಂದುವೇಳೆ, ಮನೆಯನ್ನು ಸಾಧಕರ ಕುರಿತಾದ ಮಾತಿನ ಮಂಟಪವಾಗಿಸಿಬಿಟ್ಟರೆ  ಮತ್ತು ಕಠಿಣ ಸವಾಲುಗಳನ್ನೂ ಎದುರಿಸಿ ವಿಜಯಿಯಾದವರ ಸಾಹಸಗಾಥೆಗೆ ಮೀಸಲಾಗಿಸಿದರೆ ಅದನ್ನು ಆಲಿಸುತ್ತಾ ಬೆಳೆಯುವ ಮಗು  ಅದನ್ನೇ ಕನಸುತ್ತದೆ. ಅಂಥದ್ದೇ  ಬದುಕು ರೂಪಿಸಿಕೊಳ್ಳಲು ಹವಣಿಸುತ್ತದೆ. ಸದ್ಯ,

ಮುಹಮ್ಮದ್ ಆಶಿಕ್ ಪ್ರತಿ ಮನೆಯ ಬೆರಗಾಗಿ ಚರ್ಚೆಗೆ ಒಳಗಾಗುವುದರಿಂದ ಬೆಳೆಯುವ ಪೀಳಿಗೆಯಲ್ಲಿ ಹೊಸ ಕನಸು ಹುಟ್ಟಲು  ಅವಕಾಶ ಒದಗಿಸುತ್ತದೆ. ಬರೇ ಧರ್ಮ ದ್ವೇಷ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳನ್ನೇ ಇಡೀ ದಿನ ಚರ್ಚಿಸುತ್ತಾ ಅದನ್ನೇ ಮುಸ್ಲಿಮ್  ಸಮುದಾಯದ ಆದ್ಯತಾ ವಿಷಯವಾಗಿ ಮಾರ್ಪಡಿಸುವುದರಿಂದ ಮುಸ್ಲಿಮ್ ಸಮುದಾಯ ದೂರ ನಿಲ್ಲಬೇಕಾಗಿದೆ. ಮುಸ್ಲಿಮ್  ಸಮುದಾಯದ ಆದ್ಯತೆಗಳನ್ನು ಮುಸ್ಲಿಮ್ ಸಮುದಾಯವೇ ನಿರ್ಧರಿಸಬೇಕು. ಇನ್ನಾರೋ ಹಾಕಿ ಕೊಡುವ ರಂಗಸ್ಥಳದಲ್ಲಿ ನಿಂತು ಅವರ  ಆದೇಶದಂತೆ ಕುಣಿಯುವುದರಿಂದ ಸಮುದಾಯಕ್ಕೆ ಯಾವ ಲಾಭವೂ ಇಲ್ಲ. ಈ ಕುಣಿತವನ್ನೇ ಬೆಳೆಯುವ ಪೀಳಿಗೆಗಳೂ ಕಲಿಯುತ್ತವೆ  ಮತ್ತು ಅವೂ ಅದನ್ನೇ ಮುಂದುವರಿಸುತ್ತವೆ. ಭಯಪಡುವವರು ಇರುವವರೆಗೆ ಭಯಪಡಿಸುವವರು ಇದ್ದೇ  ಇರುತ್ತಾರೆ. ಇದೊಂದು  ಮುಗಿಯದ ನಾಟಕ. ಮುಸ್ಲಿಮ್ ಸಮುದಾಯ ಇಂಥ ನಕಾರಾತ್ಮಕ ಚರ್ಚೆಗಳಿಂದ ಹೊರಬಂದು ಸಕಾರಾತ್ಮಕ ಚರ್ಚೆಗಳಿಗೆ  ಹೊರಳಬೇಕು. ಪ್ರತಿ ಮನೆಯಲ್ಲೂ ಮುಹಮ್ಮದ್ ಆಶಿಕ್‌ನಂಥ ಸಾಧಕರು ಚರ್ಚಾ ವಿಷಯವಾಗಬೇಕು. ಹೊಸ ಪೀಳಿಗೆ ಇಂಥ  ಚರ್ಚೆಗಳನ್ನೇ ಆಲಿಸಿ ಬೆಳೆಯಬೇಕು. ಇದು ಖಂಡಿತ ಸಾಧ್ಯ. ತನ್ನ ಅಪೂರ್ವ ಛಲ ಮತ್ತು ಆತ್ಮವಿಶ್ವಾಸದಿಂದ ಅಮೋಘ ಸಾಧನೆ  ಮಾಡಿದ ಆಶಿಕ್‌ಗೆ ಅಭಿನಂದನೆಗಳು.

Tuesday, 12 December 2023

ಪಶ್ಚಾತ್ತಾಪಪಡುವ ಅಪ್ಪ, ಅಪರಾಧಿ ಮಗ ಮತ್ತು ಭ್ರೂಣಕ್ಕೇ ಕತ್ತಿಯಿಕ್ಕುವ ವೈದ್ಯರ ಮಧ್ಯೆ...



1. ಕೇರಳ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದರೆಂದು ಅನಾರೋಗ್ಯ ಪೀಡಿತ ತಂದೆಯನ್ನೇ ಕೊಂದ ಮಗ

2. 900 ಭ್ರೂಣಹತ್ಯೆ  ಮಾಡಿದ ವೈದ್ಯನ ಬಂಧನ ಮತ್ತು 

3. ಎಲ್ಲಾ ಆಸ್ತಿಯನ್ನೂ ಮಗನಿಗೆ ಕೊಟ್ಟು ತಪ್ಪು ಮಾಡಿದೆ ಎಂದ ರೇಮಂಡ್ ಸಂಸ್ಥಾಪಕ ಜಯಪತ್  ಸಿಂಘಾನಿಯಾ...

ಕಳೆದ ವಾರದ ಈ ಮೂರೂ ಸುದ್ದಿಗಳ ಕೇಂದ್ರ ಬಿಂದು ಮನುಷ್ಯ. ಮಾತ್ರವಲ್ಲ, ಬುದ್ಧಿ, ವಿವೇಕ, ಅಂತಃಕರಣ ಇರುವ ಮತ್ತು  ರಕ್ತಸಂಬಂಧ  ಹಾಗೂ ಮಾನವೀಯ ಸಂಬಂಧಗಳ ಪೋಷಕನಂತೆ ಬಿಂಬಿಸಿಕೊಳ್ಳುತ್ತಿರುವ ಮನುಷ್ಯ ಹೇಗೆ ಅವೆಲ್ಲವನ್ನೂ ಅವಗಣಿಸಬಲ್ಲ  ಮತ್ತು ರಾಕ್ಷಸನಂತೆ ವರ್ತಿಸಬಲ್ಲ ಎಂಬುದಕ್ಕೂ ಈ ಮೂರೂ ಸುದ್ದಿಗಳು ಒಳ್ಳೆಯ ಉದಾಹರಣೆ.

ಎಂಟು  ತಿಂಗಳ ಹಿಂದೆ 65 ವರ್ಷದ ಸೆಬಾಸ್ಟಿಯನ್ ಎಂಬ ತಂದೆ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಹಾಸಿಗೆಗೆ  ಸೀಮಿತರಾದರು. ಅವರ ಪತ್ನಿ ಈ ಅಪಘಾತದ ಆಸು-ಪಾಸಿನಲ್ಲೇ  ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಮಗ ಸೆಬಿನ್ ಕ್ರಿಶ್ಚಿಯನ್  ತಂದೆಯನ್ನು ನೋಡಿಕೊಳ್ಳುತ್ತಿದ್ದ. 64 ವರ್ಷಗಳ ವರೆಗೆ ಆರೋಗ್ಯವಂತರಾಗಿದ್ದ ಮತ್ತು ನಡೆಯುತ್ತಿದ್ದ ಈ ಅಪ್ಪನಿಗೆ ಈ ಮಗ  ಭಾರವಾಗಿರಲಿಲ್ಲ. ಆದರೆ, ಈ ಅಪ್ಪ ಎಂಟೇ ಎಂಟು ತಿಂಗಳಲ್ಲಿ ಮಗನಿಗೆ ಭಾರವಾದರು. ಇದೇ ಅಪ್ಪ ಈ 26 ವರ್ಷದ ಮಗನನ್ನು ಶಿಶುವಾದಾಗಿನಿಂದ ನಡೆಯುವ ಪ್ರಾಯದ ವರೆಗೆ ಮುದ್ದಾಡಿಸಿರಬಹುದು. ಕೈ ಹಿಡಿದು ನಡೆಸಿರಬಹುದು. ಮಾರುಕಟ್ಟೆಗೆ, ಶಾಲೆಗೆ,  ಪಾರ್ಕ್ ಗೆ  ಕರಕೊಂಡು ಹೋಗಿರಬಹುದು. ಆಗೆಲ್ಲ ಈ ಮಗನನ್ನು ಈ ಅಪ್ಪ ಭಾರ ಅಂದುಕೊಂಡಿರುತ್ತಿದ್ದರೆ ಈ ಕ್ರಿಶ್ಚಿಯನ್ ಜೀವಂತ  ಇರುತ್ತಲೇ ಇರಲಿಲ್ಲ. ಇದರ ಜೊತೆಗೆ ಓದಬಹುದಾದ ಇನ್ನೊಂದು ಸುದ್ದಿಯೆಂದರೆ, 1500 ಕೋಟಿ ರೂಪಾಯಿ ಬೆಲೆಬಾಳುವ  ರೇಮಂಡ್ ಬ್ರಾಂಡ್‌ನ ಸಂಸ್ಥಾಪಕ ವಿಜಯಪಥ್ ಸಿಂಘಾನಿಯಾ ಅವರದು. 85 ವರ್ಷದ ಇವರು ಇವತ್ತು ಬಾಡಿಗೆ ಮನೆಯಲ್ಲಿ  ವಾಸಿಸುತ್ತಿದ್ದಾರೆ. 2015ರಲ್ಲಿ ಇವರು ತಮ್ಮ ಎಲ್ಲಾ ಶೇರುಗಳು ಮತ್ತು ಕಂಪೆನಿಯನ್ನು ತನ್ನ ಏಕೈಕ ಮಗ ಗೌತಮ್ ಸಿಂಘಾನಿಯಾಗೆ  ನೀಡಿದರು. ಶೂನ್ಯದಿಂದ ರೇಮಂಡ್ ಎಂಬ ಬೃಹತ್ ಬಟ್ಟೆ ಉದ್ಯಮವನ್ನು ಕಟ್ಟಿ ಬೆಳೆಸಿದ ಈ ವಿಜಯಪಥ್ ಸಿಂಘಾನಿಯಾ, ಜಗತ್ತೇ  ಗುರುತಿಸುವಷ್ಟು ಪ್ರಸಿದ್ಧ ಉದ್ಯಮಿಯಾದರು. ಆದರೆ, ಯಾವಾಗ ತನ್ನ ಮಗನಿಗೆ ತನ್ನ ಸಂಪೂರ್ಣ ಆಸ್ತಿಯನ್ನು ಬರೆದು ಕೊಟ್ಟರೋ ಆ  ಬಳಿಕದಿಂದ ಅವರ ಕಷ್ಟದ ದಿನಗಳು ಆರಂಭವಾದುವು. ‘ಮಗನಿಗೆ ಆಸ್ತಿಯನ್ನು ಬರೆದು ಕೊಡುವಾಗ ಒಂದಿಷ್ಟು ಹಣವನ್ನು  ಉಳಿಸಿಕೊಳ್ಳದೇ ಇರುತ್ತಿದ್ದರೆ ಇವತ್ತು ಬೀದಿಯೇ ಗತಿಯಾಗುತ್ತಿತ್ತು..’ ಎಂದು ಈ ಅಪ್ಪ ಇವತ್ತು ನೊಂದು ನುಡಿಯುತ್ತಾರೆ. ಇವತ್ತು ಅಪ್ಪ-ಮಗನ ಸಂಬಂಧ ಹಳಸಿದೆ. ಅಪ್ಪನತ್ತ ತಿರುಗಿಯೂ ಈ ಮಗ ನೋಡುತ್ತಿಲ್ಲ. ಅಂದಹಾಗೆ,

ಈ ಎರಡು ಸುದ್ದಿಗಳಿಗಿಂತ ತುಸು ಭಿನ್ನವಾದ ಆದರೆ, ಈ ಎರಡೂ ಸುದ್ದಿಗಳಿಗಿಂತಲೂ ಅತಿ ಭೀಕರವಾದ ಸುದ್ದಿಯೇ ಭ್ರೂಣಹತ್ಯೆಗೆ  ಸಂಬಂಧಿಸಿದ್ದು. ಪತ್ರಿಕೆಗಳ ಪಾಲಿಗೆ ಮುಖಪುಟದ ಲೀಡಿಂಗ್ ಸುದ್ದಿಯಾಗಬೇಕಿದ್ದ ಈ ಭ್ರೂಣಹತ್ಯೆಯು ಹೆಚ್ಚಿನೆಲ್ಲಾ ಪತ್ರಿಕೆಗಳ ಒಳ ಪುಟವನ್ನು ಸೇರಿಕೊಂಡಿದೆ ಎಂಬುದೇ ಸಮಾಜದಲ್ಲಿ ಇದೆಷ್ಟು ಮಾಮೂಲು ಎಂಬುದನ್ನು ಹೇಳುತ್ತದೆ. ಬೆಂಗಳೂರು-ಮೈಸೂರು  ಸುತ್ತಮುತ್ತ ಹತ್ತರಷ್ಟು ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ವೈದ್ಯರು, ಲ್ಯಾಬ್ ಟೆಕ್ನೀಶಿಯನ್,  ಆಸ್ಪತ್ರೆ ಮುಖ್ಯಸ್ಥರೆಲ್ಲಾ ಇದ್ದಾರೆ. ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚಿ ಹತ್ಯೆ ಮಾಡುವುದೇ ಇವರ ಕಾಯಕ. ಒಂದು ಭ್ರೂಣಹತ್ಯೆಗೆ 25  ಸಾವಿರದಷ್ಟು ಹಣವನ್ನು ಪಡೆಯುತ್ತಾರೆ. ಇದೊಂದು ಜಾಲ. ಹಾಗಂತ, ಪೊಲೀಸರ ಕೈಗೆ ಸಿಗದೇ ಇರುವ ಇಂಥ ಕುಖ್ಯಾತ ಜಾಲಗಳು  ರಾಜ್ಯದಲ್ಲಿ ಇನ್ನೂ ಅನೇಕ ಇರಬಹುದು. ಇದನ್ನೇ ದೇಶಕ್ಕೆ ಅನ್ವಯಿಸಿ ನೋಡುವಾಗ ಭಯವಾಗುತ್ತದೆ. ದೇಶದಲ್ಲಿ ಒಂದು ದಿನದಲ್ಲಿ  ಎಷ್ಟು ಭ್ರೂಣಗಳು ಹತ್ಯೆಯಾಗುತ್ತಿರಬಹುದು ಮತ್ತು ಇದಕ್ಕೆ ನೆರವಾಗುವ ವೈದ್ಯರು ಮತ್ತು ಆಸ್ಪತ್ರೆಗಳು ಎಷ್ಟಿರಬಹುದು? ಅಂದಹಾಗೆ,

ಹೆತ್ತವರ ಬಗ್ಗೆ ಕಾಳಜಿಯ ಬೋಧನೆಯನ್ನು ನೀಡದ ಒಂದೇ ಒಂದು ಧರ್ಮ ಇಲ್ಲ. ಭಾರತವಂತೂ ಧರ್ಮಗಳೇ ತುಂಬಿಕೊಂಡಿರುವ  ಮಣ್ಣು. ಶ್ರವಣಕುಮಾರನ ಭಾವುಕ ಕತೆಯನ್ನು ಬಾಲ್ಯದಲ್ಲಿ ಓದಿ ಬೆಳೆಯುವ ಮಕ್ಕಳೇ ಇಲ್ಲಿ ಅಧಿಕವಿದ್ದಾರೆ. ಹೆಣ್ಣನ್ನು ಪೂಜಿಸುವ ಮತ್ತು  ದೇವತೆಯೆಂದು ಬಾಗುವ ಸಂಸ್ಕೃತಿಯೂ ಇಲ್ಲಿನದು. ಹಿಂದೂ, ಇಸ್ಲಾಮ್, ಕ್ರೈಸ್ತ- ಈ ಮೂರೂ ಧರ್ಮಗಳು ಹೆತ್ತವರ ಮತ್ತು ಹೆಣ್ಣಿನ  ಬಗ್ಗೆ ಗೌರವಾರ್ಹವಾದ ಚಿಂತನೆಯನ್ನೇ ಹೊಂದಿವೆ. ಹೆತ್ತವರ ವಿಷಯದಲ್ಲಿ ಇಸ್ಲಾಮ್ ಎಂಥ ಕಟು ಧೋರಣೆಯನ್ನು ಹೊಂದಿದೆ  ಎಂದರೆ, ವೃದ್ಧರಾಗಿರುವ ಹೆತ್ತವರ ಬಗ್ಗೆ ಛೆ ಎಂಬ ಉದ್ಗಾರವನ್ನೂ ಮಕ್ಕಳು ಹೊರಡಿಸಬಾರದು ಎನ್ನುತ್ತದೆ. ಹೆತ್ತವರ ಕೋಪಕ್ಕೆ  ತುತ್ತಾದ ಯಾವ ಮಕ್ಕಳೂ ಅವರೆಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂದೇ ಹೇಳಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ  ಮತ್ತು ನರಕ’ ಎಂದೂ ಹೇಳಿದೆ. ಮಗ ಮುಸ್ಲಿಮ್ ಆಗಿದ್ದು, ಹೆತ್ತಬ್ಬೆ ಮುಸ್ಲಿಮೇತರರಾಗಿದ್ದರೂ ಹೆತ್ತವರ ಮೇಲಿನ ಕರ್ತವ್ಯಗಳಲ್ಲಿ ಮಗನಿಗೆ ಯಾವ ರಿಯಾಯಿತಿಯೂ ಇರುವುದಿಲ್ಲ ಎಂದೂ ತಾಕೀತು ಮಾಡಿದೆ. ನಿತ್ರಾಣದ ಮೇಲೆ ನಿತ್ರಾಣವನ್ನು ಅನುಭವಿಸಿ ಮಗುವನ್ನು  ಹೆರುವ ತಾಯಿಗಾಗಿ ಮಕ್ಕಳು ಸದಾ ಪ್ರಾರ್ಥಿಸುತ್ತಿರಬೇಕೆಂದು ಕುರ್‌ಆನ್ ಹೇಳಿದೆಯಲ್ಲದೇ, ಆ ಪ್ರಾರ್ಥನಾ ವಿಧಾನವನ್ನೂ ಕಲಿಸಿಕೊಟ್ಟಿದೆ. ಇದಿಷ್ಟೇ ಅಲ್ಲ, ಹೆಣ್ಣು ಮಗುವನ್ನು ಪ್ರೀತಿಸುವ ಮತ್ತು ಕಾಳಜಿ ತೋರುವ ವಿಷಯದಲ್ಲಂತೂ ಇಸ್ಲಾಮ್ ಅತೀ  ಮುಂಚೂಣಿಯಲ್ಲಿದೆ. ಒಬ್ಬರು ತನ್ನ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಿ ಅವರ ಬದುಕು  ಚೆಲುವಾಗಿಸಿದರೆ ಆ ಹೆತ್ತವರಿಗೆ ಸ್ವರ್ಗ ಇದೆ ಎಂದು ಪ್ರವಾದಿ(ಸ) ಕಲಿಸಿದ್ದಾರೆ. ಹೆಣ್ಣು ಮಗುವಿನ ಕಾರಣಕ್ಕಾಗಿ ಹೆತ್ತವರಿಗೆ ಸ್ವರ್ಗದ  ವಾಗ್ದಾನವನ್ನು ನೀಡಿದ ಏಕೈಕ ಧರ್ಮವಾಗಿ ಇಸ್ಲಾಮ್ ಗುರುತಿಸಿಕೊಂಡಿದೆ. ಇದೇವೇಳೆ,

ಗಂಡು ಮಗುವಿನ ಹೆತ್ತವರಿಗೆ ಇಸ್ಲಾಮ್ ಈ ವಾಗ್ದಾನವನ್ನು ನೀಡಿಯೇ ಇಲ್ಲ. ಒಂದುವೇಳೆ, ಹೆಣ್ಣು ಮಗು ಎಂಬ ಕಾರಣಕ್ಕೆ ಹತ್ಯೆ  ನಡೆಸಿದರೆ, ಮರಣಾನಂತರ ವಿಚಾರಣೆಯ ವೇಳೆ ಅಂಥ ಹೆತ್ತವರನ್ನು ಆ ಮಗುವಿನ ಮುಂದೆಯೇ ಕಟಕಟೆಯಲ್ಲಿ ನಿಲ್ಲಿಸಲಾಗುವುದು  ಮತ್ತು ಯಾವ ಕಾರಣಕ್ಕಾಗಿ ನಿನ್ನನ್ನು ಹತ್ಯೆ ನಡೆಸಲಾಯಿತು ಮಗೂ ಎಂದೂ ಪ್ರಶ್ನಿಸಲಾಗುವುದು, ಅದು ಕೊಡುವ ಉತ್ತರದ  ಆಧಾರದಲ್ಲಿ ಹೆತ್ತವರಿಗೆ ಶಿಕ್ಷೆಯನ್ನು ನೀಡಲಾಗುವುದು ಎಂಬ ಗಂಭೀರ ಎಚ್ಚರಿಕೆಯನ್ನೂ ಕುರ್‌ಆನ್‌ನಲ್ಲಿ ನೀಡಲಾಗಿದೆ. ನಿಜವಾಗಿ,

ಇವತ್ತು ಹೊಸ ಮಂದಿರ-ಮಸೀದಿಗಳ ನಿರ್ಮಾಣ ಭರದಿಂದ ಸಾಗುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಮಂದಿರ-ಮಸೀದಿಗೆ ತೆರಳುವ  ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವೂ ಆಗುತ್ತಿದೆ. ಧರ್ಮದ ಹೆಸರಲ್ಲಿ ನಡೆಯುವ ಸಭೆ, ಸಮಾರಂಭ, ಪ್ರವಚನ, ಗೋಷ್ಠಿಗಳಿಗೆ ಜನರೂ ಭಾರೀ  ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಚಪ್ಪಾಳೆ, ಶಿಳ್ಳೆಗಳೂ ಬೀಳುತ್ತಿವೆ. ಆದರೆ, ಧರ್ಮಬೋಧನೆಗಳ ಪಾಲನೆಯಲ್ಲಿ ಮಾತ್ರ ಈ ಉತ್ಸಾಹ  ಕಾಣಿಸುವುದಿಲ್ಲ. ಧರ್ಮಿಷ್ಠರೆಂದು ಹೇಳಿಕೊಳ್ಳುವವರೇ ಮತ್ತು ಧರ್ಮದ ಪೋಷಾಕು ತೊಟ್ಟವರೇ ಅತ್ಯಾಚಾರಿಗಳು, ಭ್ರಷ್ಟರು, ವಂಚಕರಾಗಿ  ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮದ್ವೇಷದ ಭಾಷಣಗಳನ್ನೂ ಮಾಡುತ್ತಿದ್ದಾರೆ. ಧರ್ಮವು ಎಂಬುದು ವ್ಯಕ್ತಿಯ ಪೋಷಾಕಿಗೆ  ಸೀಮಿತಗೊಂಡು ಆಚರಣೆಯಲ್ಲಿ ನಾಸ್ತಿಯಾದ ಸ್ಥಿತಿಗೆ ಬಂದಿದೆ. ಇದು ಬದಲಾಗಬೇಕು.

 ಧರ್ಮ ಎಂಬುದು ನಾಗರಿಕ ಸಮಾಜದಲ್ಲಿ  ಮೌಲ್ಯಗಳನ್ನು ಬಿತ್ತುವ ಬೋಧನೆಗಳ ಹೆಸರು. ಆ ಬೋಧನೆಗಳನ್ನು ಚಾಚೂ ತಪ್ಪದೇ ಅಳವಡಿಸಿಕೊಂಡ ವ್ಯಕ್ತಿ ಸಮಾಜ ಕಂಟಕ  ಆಗಲಾರ. ಮಂದಿರ-ಮಸೀದಿಯನ್ನು ಕೆಡುಕಿಗೆ ಬಳಸಲಾರ. ಧರ್ಮದ ಪೋಷಾಕು ತೊಟ್ಟು ಧರ್ಮದ್ರೋಹಿ ಕೆಲಸಗಳಲ್ಲಿ  ಭಾಗಿಯಾಗಲಾರ. ಸದ್ಯ ಇದಕ್ಕೆ ವಿರುದ್ಧವಾದುದು ನಡೆಯುತ್ತಿದೆ ಎಂದಾದರೆ, ಅದು ಅಪಾಯಕಾರಿ. ಅಂದಹಾಗೆ,

ಈ ದೇಶದಲ್ಲಿ ಅಪರಾಧಗಳು  ನಡೆಯದೇ ಇರುವುದಕ್ಕೆ ಕಾನೂನುಗಳ ಭಯವೊಂದೇ ಕಾರಣ ಅಲ್ಲ, ಧರ್ಮ ಮತ್ತು ಅದು ಬಿತ್ತಿದ ದೇವಭಯವೂ ಕಾರಣ. ಇಲ್ಲಿ ಅ ಪರಾಧ ಕೃತ್ಯಗಳಲ್ಲಿ ಭಾಗಿಯಾದರೆ, ಮರಣಾನಂತರ ದೇವನು ಪ್ರಶ್ನಿಸುತ್ತಾನೆ ಮತ್ತು ಶಿಕ್ಷೆ ನೀಡುತ್ತಾನೆ ಎಂಬ ಬೋಧನೆಯೂ ಜನರ  ಬದುಕಿನ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ, ಧರ್ಮದ ಮೌಲ್ಯಗಳಿಗೆ ಮತ್ತೆ ಮತ್ತೆ ಪ್ರಸ್ತುತತೆಯನ್ನು ಕಲ್ಪಿಸುತ್ತಲೇ ಇರಬೇಕಾದ  ಹೊಣೆಗಾರಿಕೆ ಎಲ್ಲ ಧರ್ಮಿಷ್ಠರ ಮೇಲಿದೆ. ಪಶ್ಚಾತ್ತಾಪಪಡುವ ಸಿಂಘಾನಿಯಾರಂಥ  ತಂದೆ, ಕ್ರಿಶ್ಚಿಯನ್‌ನಂಥ ಮಗ ಮತ್ತು ಹೆಣ್ಣು  ಭ್ರೂಣವನ್ನು ಹತ್ಯೆ ಮಾಡುವ ವೈದ್ಯರು ಶೂನ್ಯವಾಗಬೇಕಾದುದು ಎಲ್ಲರ ಅಗತ್ಯ.