ಇತ್ತೀಚೆಗೆ ರಾಜ್ಯದ ಮಂಡ್ಯದಲ್ಲಿ ಭಿನ್ನ ಪಾದಯಾತ್ರೆ ನಡೆಯಿತು. ಮದುವೆಗೆ ಹೆಣ್ಣು ಕರುಣಿಸು ಎಂದು ಕೋರಿ ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆ ಇದು. ಇವರು ಹೀಗೆ ಪಾದಯಾತ್ರೆ ನಡೆಸುತ್ತಿರುವಾಗ ಇದೇ ಮಂಡ್ಯದ ಲ್ಯಾಬ್‌ಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಭಾರೀ ಸಂಖ್ಯೆಯಲ್ಲಿ ಇಲ್ಲಿ ಹೆಣ್ಣುಭ್ರೂಣ ಹತ್ಯೆಯಾಗುತ್ತಿದೆ ಎಂಬ ಸುಳಿವು ಅವರಿಗೆ ಲಭಿಸಿತ್ತು. ಆ ಬಳಿಕ ಹಲವರನ್ನು ಬಂಧಿಸಿದರು. ಕೇವಲ ಮೂರೇ ಮೂರು ವರ್ಷಗಳಲ್ಲಿ ಈ ಮಂಡ್ಯ-ಮೈಸೂರು ಭಾಗದಲ್ಲಿ 900ರಷ್ಟು ಹೆಣ್ಣು ಭ್ರೂಣ ಹತ್ಯೆಯಲ್ಲಿ ಈ ಬಂಧಿತರು ಭಾಗಿಯಾಗಿದ್ದಾರೆ ಅನ್ನುವುದು ಬೆಳಕಿಗೆ ಬಂತು. ಒಂದುಕಡೆ,
ಮದುವೆಗೆ ಹೆಣ್ಣಿಲ್ಲ ಎಂಬ ಸ್ಥಿತಿಯಾದರೆ ಇನ್ನೊಂದು ಕಡೆ ಇರುವ ಹೆಣ್ಣನ್ನೇ ಸಾಯಿಸುವ ಸ್ಥಿತಿ- ಇವೆರಡೂ ಒಂದೇ ಕಡೆ ನಡೆ ದಿರುವುದು ನಿಜಕ್ಕೂ ಅಚ್ಚರಿ. ಉತ್ತರ ಕನ್ನಡ, ಮಂಡ್ಯ-ಮೈಸೂರು, ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಹರೆಯದ ಹೆಣ್ಣು ಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ವರದಿ ಇದೆ. ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ ಎರಡು ಮತ್ತು ಬಾಗಲಕೋಟೆ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಸಾವಿರ ಗಂಡು ಮಕ್ಕಳಿಗೆ 900ಕ್ಕಿಂತಲೂ ಕಡಿಮೆ ಹೆಣ್ಣು ಮಕ್ಕಳಿದ್ದು, ಸರ್ಕಾರದ ಕೆಂಪು ಪಟ್ಟಿಯಲ್ಲಿದೆ. ಇದು ಸರಕಾರದ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ದತ್ತಾಂಶಗಳಂತೆ ತಯಾರಿಸಲಾದ ಮಾಹಿತಿ. ತಿಂಗಳುಗಳ ಹಿಂದೆ ಆದಿಚುಂಚನಗಿರಿ ಮಠದಲ್ಲಿ ವಧು-ವರ ಸಂಬಂಧ ಏರ್ಪಡಿಸುವುದಕ್ಕಾಗಿ ಸಮ್ಮೇಳನ ಏರ್ಪಡಿಸಲಾಗಿತ್ತು. ಇದರಲ್ಲಿ 10 ಸಾವಿರದಷ್ಟು ಯುವಕರಿಗೆ ಪ್ರತಿಯಾಗಿ ಕೇವಲ 300ರಷ್ಟು ಯುವತಿಯರು ಮಾತ್ರ ಪಾಲ್ಗೊಂಡಿದ್ದರು.
ಯಾಕೆ ಹೀಗಾಗುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತು ಈ ದೇಶದಲ್ಲಿ ಚಾಲ್ತಿಯಲ್ಲಿದೆ. ಹೆಣ್ಣಿನ ಪಾಲಿಗೆ ನಮ್ಮೆಲ್ಲ ಸಾಂಪ್ರದಾಯಿಕ ಆಚರಣೆಗಳು ಮತ್ತು ದೃಷ್ಟಿಕೋನಗಳು ಅಭದ್ರತೆಯನ್ನು ಸೂಚಿಸುತ್ತವೆಯೇ ಹೊರತು ಆಕೆಯ ಬಗ್ಗೆ ಹೆಮ್ಮೆ, ಅಭಿಮಾನ ಮತ್ತು ಸಂತಸ ಪಡುವ ರೀತಿಯಲ್ಲಿ ಇಲ್ಲವೇ ಇಲ್ಲ. ವಂಶವನ್ನು ಮುಂದುವರಿಸಲು ಗಂಡು ಬೇಕು ಎಂಬಲ್ಲಿಂದ ಹಿಡಿದು ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬಲ್ಲಿವರೆಗೆ ಹೆಣ್ಣು ವಂಶಕ್ಕೆ ಅನನುಕೂಲಕರವಾದ ಪಟ್ಟಿಯನ್ನೇ ಸಮಾಜ ತಯಾರಿಸಿಟ್ಟುಕೊಂಡಿದೆ. ಹೆಣ್ಣನ್ನು ಎಷ್ಟೇ ಓದಿಸಿದರೂ ಅಂತಿಮವಾಗಿ ಆಕೆ ಪರರ ಪಾಲಾಗುತ್ತಾಳೆ ಎಂಬ ನಂಬಿಕೆ, ಕೃಷಿ ಚಟುವಟಿಕೆಯಲ್ಲಿ ಹೆಣ್ಣಿಗಿಲ್ಲದ ಪ್ರಾಧಾನ್ಯತೆ, ಹೆಣ್ಣನ್ನು ಸದಾ ಕಾಡುವ ಸುರಕ್ಷಿತತೆಯ ಭೀತಿ ಮತ್ತು ಕೆಲವೊಮ್ಮೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಡಬೇಕಾಗುತ್ತದೆಂಬ ಭಯ.. ಇತ್ಯಾದಿಗಳೂ ಪಾಲಕರ ಹೆಣ್ಣು ದ್ವೇಷಕ್ಕೆ ಕಾರಣವಾಗುತ್ತದೆ. ಅಂದಹಾಗೆ,
ಕಾನೂನಿನ ಮೂಲಕ ಈ ಮಾನಸಿಕತೆಯನ್ನು ಪೂರ್ಣ ಮಟ್ಟದಲ್ಲಿ ಬದಲಿಸಬಹುದು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯನ್ನು ಸುಸಜ್ಜಿತ ಆಸ್ಪತ್ರೆಗಳಲ್ಲೇ ನಡೆಸಬೇಕೆಂದಿಲ್ಲ. ಇದನ್ನು ತೀರಾ ಅಸುರಕ್ಷಿತವಾಗಿ ಮತ್ತು ನಗರದಿಂದ ದೂರದ ಪ್ರದೇಶಗಳಲ್ಲೂ ಮಾಡಲಾಗುತ್ತದೆ. ಸ್ಥಾಪಿತ ಸ್ಕ್ಯಾನಿಂಗ್ ಕೇಂದ್ರಗಳ ಬದಲು ಮೊಬೈಲ್ ಪ್ರಯೋಗಾಲಯದಲ್ಲೂ ಇಂಥ ಪತ್ತೆ ಮತ್ತು ಹತ್ಯೆ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ಇದರ ಸುಳಿವು ಸಿಗುವುದು ಸುಲಭವಲ್ಲ. ಇತ್ತೀಚೆಗೆ ಮಂಡ್ಯದಲ್ಲಿ ಪತ್ತೆ ಹಚ್ಚಲಾದ ‘ಭ್ರೂಣಹತ್ಯೆ’ ಜಾಲವು ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಮಂಡ್ಯದ ಅಲೆಮನೆ ಸಮೀಪದ ಕೊಠಡಿಯಲ್ಲಿ ಯಾರಿಗೂ ಅನುಮಾನ ಬಾರದಂತೆಯೇ ಈ ಕೃತ್ಯ ನಡೆಯುತ್ತಿತ್ತು. ಸ್ಥಳೀಯರಿಗೆ ಈ ಬಗ್ಗೆ ಗೊತ್ತಾಗುವುದು ಸುಲಭವೂ ಅಲ್ಲ. ಇಲ್ಲಿ ಇನ್ನೊಂದು ಸಂಗತಿಯೂ ಇದೆ, ಈ ಭ್ರೂಣ ಹತ್ಯೆಯ ವೈದ್ಯರ ಒತ್ತಾಸೆಯಿಂದ ನಡೆಯುತ್ತಿದೆ ಎನ್ನುವಂತೆಯೂ ಇಲ್ಲ. ದಂಪತಿಗಳ ಸಮ್ಮತಿಯಿಂದ ಮತ್ತು ಒತ್ತಾಯದಿಂದಲೇ ಇಂಥವು ನಡೆಯುತ್ತಿರುವುದರಿಂದ ಇವು ಬಹಿರಂಗಕ್ಕೆ ಬರುವುದಕ್ಕೂ ಕಷ್ಟವಿದೆ. ಭ್ರೂಣಹತ್ಯೆಗಾಗಿ ನಿಗದಿ ಪಡಿಸಲಾದ ಶುಲ್ಕದಲ್ಲಿ ಏನಾದರೂ ಏರುಪೇರಾಗಿ ಜಗಳವಾದರೆ ಮಾತ್ರ ಇಂಥವು ಸಾರ್ವಜನಿಕ ಗಮನಕ್ಕೆ ಬರುತ್ತದೆ. ಆದ್ದರಿಂದಲೇ, ಈ ಹೆಣ್ಣು ಭ್ರೂಣಹತ್ಯೆಯನ್ನು ಕಾನೂನು ತಕ್ಕಡಿಯಲ್ಲಷ್ಟೇ ಇಟ್ಟು ನೋಡದೇ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಪರಿಶೀ ಲಿಸಬೇಕಾಗಿದೆ.
ಈ ಇಡೀ ಪ್ರಕ್ರಿಯೆಯಲ್ಲಿ ದಂಪತಿಗಳ ಪಾತ್ರ ಬಹು ಅಮೂಲ್ಯವಾದುದು. ಅವರ ಒಪ್ಪಿಗೆಯಿಲ್ಲದೇ ಭ್ರೂಣಹತ್ಯೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಬಡ ಮತ್ತು ಅರೆ ಮಧ್ಯಮ ಕುಟುಂಬಗಳಲ್ಲಿ ಇಂಥ ಭ್ರೂಣಹತ್ಯೆ ಹೆಚ್ಚು. ಮೊದಲ ಮಗು ಹೆಣ್ಣಾದರೆ, ಎರಡನೇ ಮಗು ಗಂಡಾಗಬೇಕೆಂದು ಬಯಸುವುದು ಮತ್ತು ಅದು ಕೈಗೂಡುವುದಿಲ್ಲ ಎಂದು ಭ್ರೂಣ ಪತ್ತೆಯಲ್ಲಿ ಸ್ಪಷ್ಟವಾದರೆ ಹತ್ಯೆಗೆ ಮುಂದಾಗುವುದು ನಡೆಯುತ್ತಿದೆ. ಇದು ಮನಸ್ಥಿತಿಯೊಂದರ ಫಲಿತಾಂಶ. ಹೆಣ್ಣು ಅಶಕ್ತೆ ಮತ್ತು ಕುಟುಂಬಕ್ಕೆ ಭಾರ ಅನ್ನುವ ಭಾವನೆಯೇ ಈ ಹತ್ಯೆಗೆ ಕಾರಣ. ಬರೇ ಕಾನೂನು ಈ ಮನಸ್ಥಿತಿಯನ್ನು ಬದಲಿಸದು. ಪರಂಪರಾಗತವಾಗಿ ಮನಸ್ಸಲ್ಲಿ ಉಳಿದು ಬಿಟ್ಟಿರುವ ಈ ಮನಸ್ಥಿತಿಯನ್ನು ಬದಲಿಸುವುದಕ್ಕೂ ಸರಕಾರ ಅಭಿಯಾನ ರೂಪದ ಗಂಭೀರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆ ಮನೆ ಭೇಟಿಯಷ್ಟೇ ಅಲ್ಲ, ಕೂಲಿಕಾರರಾಗಿ ಒಂದೂರಿನಿಂದ ಮತ್ತೊಂದೂರಿಗೆ ವಲಸೆ ಹೋಗಿರುವ ದಂಪತಿಗಳನ್ನು ಭೇಟಿ ಮಾಡಿ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಉಚಿತ ಶಿಕ್ಷಣವೂ ಸೇರಿದಂತೆ ಹೆಣ್ಣು ಮಕ್ಕಳಿಗಾಗಿ ಸರಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಬೇಕು. ಇದರ ಜೊತೆಗೇ ಮಾನವ ಜೀವ ಎಷ್ಟು ಅಮೂಲ್ಯ ಎಂಬುದನ್ನು ಅವರು ಗಂಭೀರವಾಗಿ ಅವಲೋಕಿಸುವಂತೆ ಮಾಡಬೇಕು. ಇದಕ್ಕಾಗಿ ವಿವಿಧ ಸರಕಾರೇತರ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಬೇಕು. ಒಂದುರೀತಿಯಲ್ಲಿ
,
ಭ್ರೂಣಹತ್ಯೆ ಎಂಬುದು 21ನೇ ಶತಮಾನದ ಪಿಡುಗಲ್ಲ. ಇದಕ್ಕೆ ಪುರಾತನ ಇತಿಹಾಸವಿದೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೂ ಈ ಪಿಡುಗು ವ್ಯಾಪಕವಾಗಿತ್ತು. ಕೆಲವೊಂದು ಬುಡಕಟ್ಟುಗಳು ಹೆಣ್ಣು ಮಗುವನ್ನು ಅಪಾರವಾಗಿ ದ್ವೇಷಿಸುತ್ತಿದ್ದುವು. ಇವತ್ತಿನಂತೆ ಭ್ರೂಣಪತ್ತೆ ಪರೀಕ್ಷೆ ಇಲ್ಲದ ಆ ಕಾಲದಲ್ಲಿ ಹುಟ್ಟಿದ ಕೂಡಲೇ ಹೆಣ್ಣು ಮಗುವನ್ನು ಹೂಳುವ ಪದ್ಧತಿ ಇತ್ತು. ಪ್ರವಾದಿ ಮುಹಮ್ಮದ್(ಸ)ರು ಈ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ಜನರ ಮನಸ್ಸಲ್ಲಿ ಅಪರಾಧಿ ಭಾವವನ್ನು ಹುಟ್ಟು ಹಾಕಿದರು. ಪ್ರತಿಯೊಬ್ಬರನ್ನೂ ಮರಣಾನಂತರ ದೇವನು ಎಬ್ಬಿಸುತ್ತಾನೆ ಮತ್ತು ಹತ್ಯೆಗೀಡಾದ ಹೆಣ್ಣು ಮಗುವಿನ ಮುಂದೆ ಆಕೆಯ ಹೆತ್ತವರನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು. ಯಾವ ಹೆತ್ತವರು ಹೆಣ್ಣು ಮಗುವನ್ನು ಚೆನ್ನಾಗಿ ಲಾಲಿಸಿ ಪಾಲಿಸಿ ಬೆಳೆಸುತ್ತಾರೋ ಅವರಿಗೆ ಸ್ವರ್ಗವಿದೆ ಎಂದು ಘೋಷಿಸಿದರು. ಮದುವೆಯ ವೇಳೆ ಹೆಣ್ಣಿಗೆ ವಧು ಧನ ಪಾವತಿಸಿ ಮದುವೆಯಾಗಬೇಕೆಂದು ಯುವಕರಿಗೆ ಆದೇಶಿಸಿದರು. ಆ ಮೂಲಕ ವರದಕ್ಷಿಣೆ ಎಂಬ ಪರಿಕಲ್ಪನೆಗೇ ಕೊಡಲಿಯೇಟು ನೀಡಿದರು. ಶಿಕ್ಷಣ ಪ್ರತಿ ಹೆಣ್ಣು-ಗಂಡಿನ ಮೇಲೂ ಕಡ್ಡಾಯ ಎಂದು ಸಾರಿದರು. ಗಂಡಿನಂತೆಯೇ ಹೆಣ್ಣಿಗೂ ಹೆತ್ತವರ ಆಸ್ತಿಯಲ್ಲಿ ಪಾಲಿದೆ ಎಂದರು. ಯುದ್ಧದಲ್ಲಿ ಮಹಿಳೆಯನ್ನು ಪಾಲುಗೊಳಿಸಿದರು. ಮದೀನಾದ ಸಂತೆಯಲ್ಲಿ ಮಹಿಳೆಯರೂ ವ್ಯಾಪಾರಿಯಾದರು. ಮಹಿಳೆ ಮಸೀದಿಗೂ ಹೋಗಬಹುದು, ಸಂತೆಯಲ್ಲಿ ವ್ಯಾಪಾರವನ್ನೂ ಮಾಡಬಹುದು, ಯುದ್ಧದಲ್ಲೂ ಭಾಗವಹಿಸಬಹುದು, ಮದುವೆಯ ವೇಳೆ ವರನೇ ಆಕೆಗೆ ವಧು ಧನ ಪಾವತಿಸಿ ವಿವಾಹವಾಗಬೇಕು, ಬೇಡದ ವಿವಾಹದಿಂದ ಆಕೆ ವಿಚ್ಛೇದನ ಪಡಕೊಳ್ಳಬಹುದು, ಆಸ್ತಿಯಲ್ಲಿ ಆಕೆಗೂ ಪಾಲು ಇದೆ, ಯಾವ ಮಕ್ಕಳು ತಾಯಿಯ ಕೋಪಕ್ಕೆ ಪಾತ್ರರಾಗುತ್ತಾರೋ ಅವರು ನರಕಕ್ಕೆ.. ಇತ್ಯಾದಿ ಇತ್ಯಾದಿ ಅಮೂಲ್ಯ ಮತ್ತು ಚೇತೋಹಾರಿ ನೀತಿಗಳನ್ನು ಧರ್ಮದ ಭಾಗವಾಗಿ ಪ್ರಸ್ತುತಪಡಿಸಿದರು. ಅಲ್ಲದೇ, ಪವಿತ್ರ ಕುರ್‌ಆನಿನ 114 ಅಧ್ಯಾಯಗಳ ಪೈಕಿ 4ನೇ ಅಧ್ಯಾಯದ ಹೆಸರನ್ನೇ ‘ಮಹಿಳೆ’ ಎಂದಿಟ್ಟರು. ಮಹಿಳಾ ಪರ ಅವರ ಈ ಸರಣಿ ಕ್ರಮಗಳು ನಿಧಾನಕ್ಕೆ ಅಂದಿನ ಜನರ ಮೇಲೆ ಗಾಢ ಪರಿಣಾಮ ಬೀರತೊಡಗಿದವು. ಅಂತಿಮವಾಗಿ, ಹೆಣ್ಣು ಮಗುವಿಗಾಗಿ ಆಸೆಪಡುವ ಮತ್ತು ಹೆಮ್ಮೆಪಡುವ ಸಮಾಜವೊಂದನ್ನು ಅವರು ಕಟ್ಟಿ ಬೆಳೆಸಿದರು.

ಸದ್ಯ ಕಾನೂನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಜನರನ್ನು ಸಂಸ್ಕರಿಸುವ ಪ್ರಯತ್ನ ನಡೆಯಬೇಕಾಗಿದೆ.
No comments:
Post a Comment