1. ಕೇರಳ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದರೆಂದು ಅನಾರೋಗ್ಯ ಪೀಡಿತ ತಂದೆಯನ್ನೇ ಕೊಂದ ಮಗ
2. 900 ಭ್ರೂಣಹತ್ಯೆ ಮಾಡಿದ ವೈದ್ಯನ ಬಂಧನ ಮತ್ತು
3. ಎಲ್ಲಾ ಆಸ್ತಿಯನ್ನೂ ಮಗನಿಗೆ ಕೊಟ್ಟು ತಪ್ಪು ಮಾಡಿದೆ ಎಂದ ರೇಮಂಡ್ ಸಂಸ್ಥಾಪಕ ಜಯಪತ್ ಸಿಂಘಾನಿಯಾ...
ಕಳೆದ ವಾರದ ಈ ಮೂರೂ ಸುದ್ದಿಗಳ ಕೇಂದ್ರ ಬಿಂದು ಮನುಷ್ಯ. ಮಾತ್ರವಲ್ಲ, ಬುದ್ಧಿ, ವಿವೇಕ, ಅಂತಃಕರಣ ಇರುವ ಮತ್ತು ರಕ್ತಸಂಬಂಧ ಹಾಗೂ ಮಾನವೀಯ ಸಂಬಂಧಗಳ ಪೋಷಕನಂತೆ ಬಿಂಬಿಸಿಕೊಳ್ಳುತ್ತಿರುವ ಮನುಷ್ಯ ಹೇಗೆ ಅವೆಲ್ಲವನ್ನೂ ಅವಗಣಿಸಬಲ್ಲ ಮತ್ತು ರಾಕ್ಷಸನಂತೆ ವರ್ತಿಸಬಲ್ಲ ಎಂಬುದಕ್ಕೂ ಈ ಮೂರೂ ಸುದ್ದಿಗಳು ಒಳ್ಳೆಯ ಉದಾಹರಣೆ.
ಎಂಟು ತಿಂಗಳ ಹಿಂದೆ 65 ವರ್ಷದ ಸೆಬಾಸ್ಟಿಯನ್ ಎಂಬ ತಂದೆ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಹಾಸಿಗೆಗೆ ಸೀಮಿತರಾದರು. ಅವರ ಪತ್ನಿ ಈ ಅಪಘಾತದ ಆಸು-ಪಾಸಿನಲ್ಲೇ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಮಗ ಸೆಬಿನ್ ಕ್ರಿಶ್ಚಿಯನ್ ತಂದೆಯನ್ನು ನೋಡಿಕೊಳ್ಳುತ್ತಿದ್ದ. 64 ವರ್ಷಗಳ ವರೆಗೆ ಆರೋಗ್ಯವಂತರಾಗಿದ್ದ ಮತ್ತು ನಡೆಯುತ್ತಿದ್ದ ಈ ಅಪ್ಪನಿಗೆ ಈ ಮಗ ಭಾರವಾಗಿರಲಿಲ್ಲ. ಆದರೆ, ಈ ಅಪ್ಪ ಎಂಟೇ ಎಂಟು ತಿಂಗಳಲ್ಲಿ ಮಗನಿಗೆ ಭಾರವಾದರು. ಇದೇ ಅಪ್ಪ ಈ 26 ವರ್ಷದ ಮಗನನ್ನು ಶಿಶುವಾದಾಗಿನಿಂದ ನಡೆಯುವ ಪ್ರಾಯದ ವರೆಗೆ ಮುದ್ದಾಡಿಸಿರಬಹುದು. ಕೈ ಹಿಡಿದು ನಡೆಸಿರಬಹುದು. ಮಾರುಕಟ್ಟೆಗೆ, ಶಾಲೆಗೆ, ಪಾರ್ಕ್ ಗೆ ಕರಕೊಂಡು ಹೋಗಿರಬಹುದು. ಆಗೆಲ್ಲ ಈ ಮಗನನ್ನು ಈ ಅಪ್ಪ ಭಾರ ಅಂದುಕೊಂಡಿರುತ್ತಿದ್ದರೆ ಈ ಕ್ರಿಶ್ಚಿಯನ್ ಜೀವಂತ ಇರುತ್ತಲೇ ಇರಲಿಲ್ಲ. ಇದರ ಜೊತೆಗೆ ಓದಬಹುದಾದ ಇನ್ನೊಂದು ಸುದ್ದಿಯೆಂದರೆ, 1500 ಕೋಟಿ ರೂಪಾಯಿ ಬೆಲೆಬಾಳುವ ರೇಮಂಡ್ ಬ್ರಾಂಡ್‌ನ ಸಂಸ್ಥಾಪಕ ವಿಜಯಪಥ್ ಸಿಂಘಾನಿಯಾ ಅವರದು. 85 ವರ್ಷದ ಇವರು ಇವತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 2015ರಲ್ಲಿ ಇವರು ತಮ್ಮ ಎಲ್ಲಾ ಶೇರುಗಳು ಮತ್ತು ಕಂಪೆನಿಯನ್ನು ತನ್ನ ಏಕೈಕ ಮಗ ಗೌತಮ್ ಸಿಂಘಾನಿಯಾಗೆ ನೀಡಿದರು. ಶೂನ್ಯದಿಂದ ರೇಮಂಡ್ ಎಂಬ ಬೃಹತ್ ಬಟ್ಟೆ ಉದ್ಯಮವನ್ನು ಕಟ್ಟಿ ಬೆಳೆಸಿದ ಈ ವಿಜಯಪಥ್ ಸಿಂಘಾನಿಯಾ, ಜಗತ್ತೇ ಗುರುತಿಸುವಷ್ಟು ಪ್ರಸಿದ್ಧ ಉದ್ಯಮಿಯಾದರು. ಆದರೆ, ಯಾವಾಗ ತನ್ನ ಮಗನಿಗೆ ತನ್ನ ಸಂಪೂರ್ಣ ಆಸ್ತಿಯನ್ನು ಬರೆದು ಕೊಟ್ಟರೋ ಆ ಬಳಿಕದಿಂದ ಅವರ ಕಷ್ಟದ ದಿನಗಳು ಆರಂಭವಾದುವು. ‘ಮಗನಿಗೆ ಆಸ್ತಿಯನ್ನು ಬರೆದು ಕೊಡುವಾಗ ಒಂದಿಷ್ಟು ಹಣವನ್ನು ಉಳಿಸಿಕೊಳ್ಳದೇ ಇರುತ್ತಿದ್ದರೆ ಇವತ್ತು ಬೀದಿಯೇ ಗತಿಯಾಗುತ್ತಿತ್ತು..’ ಎಂದು ಈ ಅಪ್ಪ ಇವತ್ತು ನೊಂದು ನುಡಿಯುತ್ತಾರೆ. ಇವತ್ತು ಅಪ್ಪ-ಮಗನ ಸಂಬಂಧ ಹಳಸಿದೆ. ಅಪ್ಪನತ್ತ ತಿರುಗಿಯೂ ಈ ಮಗ ನೋಡುತ್ತಿಲ್ಲ. ಅಂದಹಾಗೆ,
ಈ ಎರಡು ಸುದ್ದಿಗಳಿಗಿಂತ ತುಸು ಭಿನ್ನವಾದ ಆದರೆ, ಈ ಎರಡೂ ಸುದ್ದಿಗಳಿಗಿಂತಲೂ ಅತಿ ಭೀಕರವಾದ ಸುದ್ದಿಯೇ ಭ್ರೂಣಹತ್ಯೆಗೆ ಸಂಬಂಧಿಸಿದ್ದು. ಪತ್ರಿಕೆಗಳ ಪಾಲಿಗೆ ಮುಖಪುಟದ ಲೀಡಿಂಗ್ ಸುದ್ದಿಯಾಗಬೇಕಿದ್ದ ಈ ಭ್ರೂಣಹತ್ಯೆಯು ಹೆಚ್ಚಿನೆಲ್ಲಾ ಪತ್ರಿಕೆಗಳ ಒಳ ಪುಟವನ್ನು ಸೇರಿಕೊಂಡಿದೆ ಎಂಬುದೇ ಸಮಾಜದಲ್ಲಿ ಇದೆಷ್ಟು ಮಾಮೂಲು ಎಂಬುದನ್ನು ಹೇಳುತ್ತದೆ. ಬೆಂಗಳೂರು-ಮೈಸೂರು ಸುತ್ತಮುತ್ತ ಹತ್ತರಷ್ಟು ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ವೈದ್ಯರು, ಲ್ಯಾಬ್ ಟೆಕ್ನೀಶಿಯನ್, ಆಸ್ಪತ್ರೆ ಮುಖ್ಯಸ್ಥರೆಲ್ಲಾ ಇದ್ದಾರೆ. ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚಿ ಹತ್ಯೆ ಮಾಡುವುದೇ ಇವರ ಕಾಯಕ. ಒಂದು ಭ್ರೂಣಹತ್ಯೆಗೆ 25 ಸಾವಿರದಷ್ಟು ಹಣವನ್ನು ಪಡೆಯುತ್ತಾರೆ. ಇದೊಂದು ಜಾಲ. ಹಾಗಂತ, ಪೊಲೀಸರ ಕೈಗೆ ಸಿಗದೇ ಇರುವ ಇಂಥ ಕುಖ್ಯಾತ ಜಾಲಗಳು ರಾಜ್ಯದಲ್ಲಿ ಇನ್ನೂ ಅನೇಕ ಇರಬಹುದು. ಇದನ್ನೇ ದೇಶಕ್ಕೆ ಅನ್ವಯಿಸಿ ನೋಡುವಾಗ ಭಯವಾಗುತ್ತದೆ. ದೇಶದಲ್ಲಿ ಒಂದು ದಿನದಲ್ಲಿ ಎಷ್ಟು ಭ್ರೂಣಗಳು ಹತ್ಯೆಯಾಗುತ್ತಿರಬಹುದು ಮತ್ತು ಇದಕ್ಕೆ ನೆರವಾಗುವ ವೈದ್ಯರು ಮತ್ತು ಆಸ್ಪತ್ರೆಗಳು ಎಷ್ಟಿರಬಹುದು? ಅಂದಹಾಗೆ,
ಹೆತ್ತವರ ಬಗ್ಗೆ ಕಾಳಜಿಯ ಬೋಧನೆಯನ್ನು ನೀಡದ ಒಂದೇ ಒಂದು ಧರ್ಮ ಇಲ್ಲ. ಭಾರತವಂತೂ ಧರ್ಮಗಳೇ ತುಂಬಿಕೊಂಡಿರುವ ಮಣ್ಣು. ಶ್ರವಣಕುಮಾರನ ಭಾವುಕ ಕತೆಯನ್ನು ಬಾಲ್ಯದಲ್ಲಿ ಓದಿ ಬೆಳೆಯುವ ಮಕ್ಕಳೇ ಇಲ್ಲಿ ಅಧಿಕವಿದ್ದಾರೆ. ಹೆಣ್ಣನ್ನು ಪೂಜಿಸುವ ಮತ್ತು ದೇವತೆಯೆಂದು ಬಾಗುವ ಸಂಸ್ಕೃತಿಯೂ ಇಲ್ಲಿನದು. ಹಿಂದೂ, ಇಸ್ಲಾಮ್, ಕ್ರೈಸ್ತ- ಈ ಮೂರೂ ಧರ್ಮಗಳು ಹೆತ್ತವರ ಮತ್ತು ಹೆಣ್ಣಿನ ಬಗ್ಗೆ ಗೌರವಾರ್ಹವಾದ ಚಿಂತನೆಯನ್ನೇ ಹೊಂದಿವೆ. ಹೆತ್ತವರ ವಿಷಯದಲ್ಲಿ ಇಸ್ಲಾಮ್ ಎಂಥ ಕಟು ಧೋರಣೆಯನ್ನು ಹೊಂದಿದೆ ಎಂದರೆ, ವೃದ್ಧರಾಗಿರುವ ಹೆತ್ತವರ ಬಗ್ಗೆ ಛೆ ಎಂಬ ಉದ್ಗಾರವನ್ನೂ ಮಕ್ಕಳು ಹೊರಡಿಸಬಾರದು ಎನ್ನುತ್ತದೆ. ಹೆತ್ತವರ ಕೋಪಕ್ಕೆ ತುತ್ತಾದ ಯಾವ ಮಕ್ಕಳೂ ಅವರೆಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂದೇ ಹೇಳಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ’ ಎಂದೂ ಹೇಳಿದೆ. ಮಗ ಮುಸ್ಲಿಮ್ ಆಗಿದ್ದು, ಹೆತ್ತಬ್ಬೆ ಮುಸ್ಲಿಮೇತರರಾಗಿದ್ದರೂ ಹೆತ್ತವರ ಮೇಲಿನ ಕರ್ತವ್ಯಗಳಲ್ಲಿ ಮಗನಿಗೆ ಯಾವ ರಿಯಾಯಿತಿಯೂ ಇರುವುದಿಲ್ಲ ಎಂದೂ ತಾಕೀತು ಮಾಡಿದೆ. ನಿತ್ರಾಣದ ಮೇಲೆ ನಿತ್ರಾಣವನ್ನು ಅನುಭವಿಸಿ ಮಗುವನ್ನು ಹೆರುವ ತಾಯಿಗಾಗಿ ಮಕ್ಕಳು ಸದಾ ಪ್ರಾರ್ಥಿಸುತ್ತಿರಬೇಕೆಂದು ಕುರ್‌ಆನ್ ಹೇಳಿದೆಯಲ್ಲದೇ, ಆ ಪ್ರಾರ್ಥನಾ ವಿಧಾನವನ್ನೂ ಕಲಿಸಿಕೊಟ್ಟಿದೆ. ಇದಿಷ್ಟೇ ಅಲ್ಲ, ಹೆಣ್ಣು ಮಗುವನ್ನು ಪ್ರೀತಿಸುವ ಮತ್ತು ಕಾಳಜಿ ತೋರುವ ವಿಷಯದಲ್ಲಂತೂ ಇಸ್ಲಾಮ್ ಅತೀ ಮುಂಚೂಣಿಯಲ್ಲಿದೆ. ಒಬ್ಬರು ತನ್ನ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಿ ಅವರ ಬದುಕು ಚೆಲುವಾಗಿಸಿದರೆ ಆ ಹೆತ್ತವರಿಗೆ ಸ್ವರ್ಗ ಇದೆ ಎಂದು ಪ್ರವಾದಿ(ಸ) ಕಲಿಸಿದ್ದಾರೆ. ಹೆಣ್ಣು ಮಗುವಿನ ಕಾರಣಕ್ಕಾಗಿ ಹೆತ್ತವರಿಗೆ ಸ್ವರ್ಗದ ವಾಗ್ದಾನವನ್ನು ನೀಡಿದ ಏಕೈಕ ಧರ್ಮವಾಗಿ ಇಸ್ಲಾಮ್ ಗುರುತಿಸಿಕೊಂಡಿದೆ. ಇದೇವೇಳೆ,
ಗಂಡು ಮಗುವಿನ ಹೆತ್ತವರಿಗೆ ಇಸ್ಲಾಮ್ ಈ ವಾಗ್ದಾನವನ್ನು ನೀಡಿಯೇ ಇಲ್ಲ. ಒಂದುವೇಳೆ, ಹೆಣ್ಣು ಮಗು ಎಂಬ ಕಾರಣಕ್ಕೆ ಹತ್ಯೆ ನಡೆಸಿದರೆ, ಮರಣಾನಂತರ ವಿಚಾರಣೆಯ ವೇಳೆ ಅಂಥ ಹೆತ್ತವರನ್ನು ಆ ಮಗುವಿನ ಮುಂದೆಯೇ ಕಟಕಟೆಯಲ್ಲಿ ನಿಲ್ಲಿಸಲಾಗುವುದು ಮತ್ತು ಯಾವ ಕಾರಣಕ್ಕಾಗಿ ನಿನ್ನನ್ನು ಹತ್ಯೆ ನಡೆಸಲಾಯಿತು ಮಗೂ ಎಂದೂ ಪ್ರಶ್ನಿಸಲಾಗುವುದು, ಅದು ಕೊಡುವ ಉತ್ತರದ ಆಧಾರದಲ್ಲಿ ಹೆತ್ತವರಿಗೆ ಶಿಕ್ಷೆಯನ್ನು ನೀಡಲಾಗುವುದು ಎಂಬ ಗಂಭೀರ ಎಚ್ಚರಿಕೆಯನ್ನೂ ಕುರ್‌ಆನ್‌ನಲ್ಲಿ ನೀಡಲಾಗಿದೆ. ನಿಜವಾಗಿ,
ಇವತ್ತು ಹೊಸ ಮಂದಿರ-ಮಸೀದಿಗಳ ನಿರ್ಮಾಣ ಭರದಿಂದ ಸಾಗುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಮಂದಿರ-ಮಸೀದಿಗೆ ತೆರಳುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವೂ ಆಗುತ್ತಿದೆ. ಧರ್ಮದ ಹೆಸರಲ್ಲಿ ನಡೆಯುವ ಸಭೆ, ಸಮಾರಂಭ, ಪ್ರವಚನ, ಗೋಷ್ಠಿಗಳಿಗೆ ಜನರೂ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಚಪ್ಪಾಳೆ, ಶಿಳ್ಳೆಗಳೂ ಬೀಳುತ್ತಿವೆ. ಆದರೆ, ಧರ್ಮಬೋಧನೆಗಳ ಪಾಲನೆಯಲ್ಲಿ ಮಾತ್ರ ಈ ಉತ್ಸಾಹ ಕಾಣಿಸುವುದಿಲ್ಲ. ಧರ್ಮಿಷ್ಠರೆಂದು ಹೇಳಿಕೊಳ್ಳುವವರೇ ಮತ್ತು ಧರ್ಮದ ಪೋಷಾಕು ತೊಟ್ಟವರೇ ಅತ್ಯಾಚಾರಿಗಳು, ಭ್ರಷ್ಟರು, ವಂಚಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮದ್ವೇಷದ ಭಾಷಣಗಳನ್ನೂ ಮಾಡುತ್ತಿದ್ದಾರೆ. ಧರ್ಮವು ಎಂಬುದು ವ್ಯಕ್ತಿಯ ಪೋಷಾಕಿಗೆ ಸೀಮಿತಗೊಂಡು ಆಚರಣೆಯಲ್ಲಿ ನಾಸ್ತಿಯಾದ ಸ್ಥಿತಿಗೆ ಬಂದಿದೆ. ಇದು ಬದಲಾಗಬೇಕು.
ಧರ್ಮ ಎಂಬುದು ನಾಗರಿಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುವ ಬೋಧನೆಗಳ ಹೆಸರು. ಆ ಬೋಧನೆಗಳನ್ನು ಚಾಚೂ ತಪ್ಪದೇ ಅಳವಡಿಸಿಕೊಂಡ ವ್ಯಕ್ತಿ ಸಮಾಜ ಕಂಟಕ ಆಗಲಾರ. ಮಂದಿರ-ಮಸೀದಿಯನ್ನು ಕೆಡುಕಿಗೆ ಬಳಸಲಾರ. ಧರ್ಮದ ಪೋಷಾಕು ತೊಟ್ಟು ಧರ್ಮದ್ರೋಹಿ ಕೆಲಸಗಳಲ್ಲಿ ಭಾಗಿಯಾಗಲಾರ. ಸದ್ಯ ಇದಕ್ಕೆ ವಿರುದ್ಧವಾದುದು ನಡೆಯುತ್ತಿದೆ ಎಂದಾದರೆ, ಅದು ಅಪಾಯಕಾರಿ. ಅಂದಹಾಗೆ,
ಈ ದೇಶದಲ್ಲಿ ಅಪರಾಧಗಳು ನಡೆಯದೇ ಇರುವುದಕ್ಕೆ ಕಾನೂನುಗಳ ಭಯವೊಂದೇ ಕಾರಣ ಅಲ್ಲ, ಧರ್ಮ ಮತ್ತು ಅದು ಬಿತ್ತಿದ ದೇವಭಯವೂ ಕಾರಣ. ಇಲ್ಲಿ ಅ ಪರಾಧ ಕೃತ್ಯಗಳಲ್ಲಿ ಭಾಗಿಯಾದರೆ, ಮರಣಾನಂತರ ದೇವನು ಪ್ರಶ್ನಿಸುತ್ತಾನೆ ಮತ್ತು ಶಿಕ್ಷೆ ನೀಡುತ್ತಾನೆ ಎಂಬ ಬೋಧನೆಯೂ ಜನರ ಬದುಕಿನ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ, ಧರ್ಮದ ಮೌಲ್ಯಗಳಿಗೆ ಮತ್ತೆ ಮತ್ತೆ ಪ್ರಸ್ತುತತೆಯನ್ನು ಕಲ್ಪಿಸುತ್ತಲೇ ಇರಬೇಕಾದ ಹೊಣೆಗಾರಿಕೆ ಎಲ್ಲ ಧರ್ಮಿಷ್ಠರ ಮೇಲಿದೆ. ಪಶ್ಚಾತ್ತಾಪಪಡುವ ಸಿಂಘಾನಿಯಾರಂಥ ತಂದೆ, ಕ್ರಿಶ್ಚಿಯನ್‌ನಂಥ ಮಗ ಮತ್ತು ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ವೈದ್ಯರು ಶೂನ್ಯವಾಗಬೇಕಾದುದು ಎಲ್ಲರ ಅಗತ್ಯ.
No comments:
Post a Comment