ಸನ್ಮಾರ್ಗ ಸಂಪಾದಕೀಯ
ಉತ್ತರಾಖಂಡದ ಉಧಂಸಿಂಗ್ ನಗರದ ಶಾಯರಾ ಬಾನು ಅವರನ್ನು 2002ರಲ್ಲಿ ರಿಝ್ವಾನ್ ಅಹ್ಮದ್ ಎಂಬವರು ವಿವಾಹವಾಗುತ್ತಾರೆ. 2015ರಲ್ಲಿ ಶಾಯರಾ ಬಾನುಗೆ ರಿಝ್ವಾನ್ ತಲಾಕ್ (ವಿಚ್ಛೇದನ) ನೀಡುತ್ತಾರೆ. ಶಾಯರಾ ಈ ವಿಚ್ಛೇದನ ಕ್ರಮವನ್ನು ಒಪ್ಪುವುದಿಲ್ಲ. ‘ತಲಾಕ್ ತಲಾಕ್ ತಲಾಕ್’ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ಕ್ರಮದ ಮೂಲಕ ತನಗೆ ವಿಚ್ಛೇದನ ನೀಡಲಾಗಿದ್ದು, ಈ ತಲಾಕನ್ನು ರದ್ದುಗೊಳಿಸಬೇಕೆಂದು ಕೋರಿ ಆಕೆ 2016 ಫೆಬ್ರವರಿಯಲ್ಲಿ ಸುಪ್ರೀಮ್ ಕೋರ್ಟ್ನ ಬಾಗಿಲು ತಟ್ಟುತ್ತಾರೆ. ಅಲ್ಲದೇ, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಎಂಬೆರಡು ಪದ್ಧತಿಗಳನ್ನೂ ರದ್ದುಗೊಳಿಸುವಂತೆ ಸುಪ್ರೀಮ್ ಕೋರ್ಟಿಗೆ ಮನವಿ ಮಾಡುತ್ತಾರೆ. ಈ ಅರ್ಜಿಯ ವಿಚಾರಣೆಗಾಗಿ 2017 ಮಾರ್ಚ್ 30ರಂದು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸುತ್ತದೆ. ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ನೇತೃತ್ವದಲ್ಲಿ ರಚಿಸಲಾದ ಈ ಸಮಿತಿಯಲ್ಲಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಯು.ಯು. ಲಲಿತ್ ಮತ್ತು ಅಬ್ದುಲ್ ನಝೀರ್‌ರನ್ನು ಸೇರಿಸಲಾಗುತ್ತದೆ. ಈ ಪೀಠವು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುತ್ತದೆ. ಆದರೆ,
2017 ಆಗಸ್ಟ್ 22ರಂದು ನೀಡಲಾದ ಈ ತೀರ್ಪು ಭಿನ್ನಮತದಿಂದ ಕೂಡಿತ್ತು. ಐವರು ನ್ಯಾಯಾ ಧೀಶರ ಪೈಕಿ ಮುಖ್ಯ ನ್ಯಾಯಾಧೀಶ ಕೇಹರ್ ಮತ್ತು ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುವುದಕ್ಕೆ ವಿರುದ್ಧ ಇದ್ದರು. ಆದರೆ ಇದಕ್ಕೆ ಇತರ ಮೂವರು ನ್ಯಾಯಾಧೀಶರ ಬೆಂಬಲ ಸಿಗಲಿಲ್ಲ. ಹೀಗೆ ತ್ರಿವಳಿ ತಲಾಕ್ ಅಸಿಂಧು ಎಂಬುದಾಗಿ 3:2 ಬಹುಮತದ ಮೂಲಕ ಸಾರಲಾಯಿತು. ಅಂದರೆ, ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದರೆ ಅದು ವಿಚ್ಛೇದನ ಆಗುವುದಿಲ್ಲ ಎಂದು ಅರ್ಥ ಮತ್ತು ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಮುಂದುವರಿಯುತ್ತಾರೆ ಎಂಬುದೇ ಇದರ ತಾತ್ಪರ್ಯ. ಆದರೆ 2019 ಜುಲೈಯಲ್ಲಿ ಕೇಂದ್ರ ಸರಕಾರ ತ್ರಿವಳಿ ತಲಾಕ್ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಿತು. ಅದರ ಪ್ರಕಾರ, ತ್ರಿವಳಿ ತಲಾಕ್ ಹೇಳುವುದು ಕ್ರಿಮಿನಲ್ ಅಪರಾಧ ಮತ್ತು ಅಂಥ ಅಪರಾಧ ಎಸಗಿದವರಿಗೆ 3 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಅಂದರೆ,
ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಸಿಂಧು ಎಂದು ಘೋಷಿಸುವಾಗ, ಕೇಂದ್ರ ಸರಕಾರವು ಈ ಕಾನೂನಿನ ಮೂಲಕ ತ್ರಿವಳಿ ತಲಾಕನ್ನೇ ಸಿಂಧು ಎಂದು ಪರೋಕ್ಷವಾಗಿ ಘೋಷಿಸಿದಂತಾಯಿತು. ಸುಪ್ರೀಮ್ ಕೋರ್ಟ್ ನ ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಬಳಿಕವೂ ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಉಳಿಯುತ್ತಾರೆ. ಆದರೆ, ಕೇಂದ್ರ ಸರಕಾರದ ಕಾನೂನಿನ ಪ್ರಕಾರ, ತ್ರಿವಳಿ ತಲಾಕ್ ಹೇಳಿದ ಪತಿ ಮೂರು ವರ್ಷ ಜೈಲು ಪಾಲಾಗುತ್ತಾನೆ. ಹಾಗಂತ, ಈ ಸಂದರ್ಭದಲ್ಲಿ ಪತ್ನಿ-ಮಕ್ಕಳ ಜೀವನಕ್ಕೇನು ದಾರಿ ಎಂಬುದರ ಬಗ್ಗೆ ಯಾವ ವಿವರಣೆಯೂ ಈ ಕಾನೂನಿನಲ್ಲಿಲ್ಲ. ಹೀಗೆ ಪತಿಯನ್ನೇ ಜೈಲಿಗಟ್ಟಿದ ಪತ್ನಿ ಆ ಬಳಿಕ ಸಾಮಾಜಿಕವಾಗಿ ಎದುರಿಸಬೇಕಾದ ಆರ್ಥಿಕ ಸವಾಲುಗಳಿಗೂ ಈ ಕಾನೂನಿನಲ್ಲಿ ಪರಿಹಾರಗಳಿಲ್ಲ. ಅಲ್ಲದೇ, ಪತಿ ಜೈಲಲ್ಲಿರುವ 3 ವರ್ಷಗಳ ವರೆಗೆ ಈ ಪತ್ನಿಗೆ ಬೇರೆ ವಿವಾಹ ಆಗುವಂತೆಯೂ ಇರುವುದಿಲ್ಲ. ಯಾಕೆಂದರೆ, ಅವರ ವಿಚ್ಛೇದನವೇ ನಡೆದಿಲ್ಲ. ಇನ್ನು, ಆತ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಬಳಿಕ ಆಕೆಯನ್ನು ಒಪ್ಪಿಕೊಳ್ಳುತ್ತಾನಾ ಅನ್ನುವ ಪ್ರಶ್ನೆಯೂ ಇದೆ. ತನ್ನನ್ನು ಜೈಲಿಗೆ ಹಾಕಿದವಳು ಎಂಬ ಆಕ್ರೋಶದಲ್ಲಿ ಗೃಹಹಿಂಸೆ, ದೌರ್ಜನ್ಯ, ನಿಂದನೆ ಇತ್ಯಾದಿ ಗಳಿಗೆ ಆಕೆ ತುತ್ತಾಗಲೂ ಬಹುದು. ಅಥವಾ ಸರಿಯಾದ ರೀತಿಯಲ್ಲಿ ವಿಚ್ಛೇದನ ಪಡಕೊಳ್ಳುವ ಪ್ರಕ್ರಿಯೆ ಆರಂಭವಾಗಬಹುದು. ಆದರೂ ಅಮೂಲ್ಯ 3 ವರ್ಷಗಳು ಅದಾಗಲೇ ಆಕೆಯ ಪಾಲಿಗೆ ನಷ್ಟವಾಗಿರುತ್ತದೆ. ಅತ್ತ ವಿಚ್ಛೇದನವೂ ಸಿಗದೇ ಮತ್ತು ಇತ್ತ ಪತಿಯೂ ಇಲ್ಲದೇ ಅಂತಿಮವಾಗಿ ಆಕೆಯೇ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಒಂದುರೀತಿಯಲ್ಲಿ, ಮುಸ್ಲಿಮ್ ಮಹಿಳೆಯರ ಪರ ಎಂಬ ಹಣೆಪಟ್ಟಿಯೊಂದಿಗೆ ಜಾರಿಗೊಂಡ ತ್ರಿವಳಿ ತಲಾಕ್ ಕಾನೂನಿನ ಒಳಗುಟ್ಟು ಇದು. ಅಸಿಂಧು ತಲಾಕ್ ಹೇಳಿದ ತಪ್ಪಿಗೆ ಪತಿ ಜೈಲು ಪಾಲಾಗುತ್ತಾನೆ ಅನ್ನುವುದನ್ನು ಬಿಟ್ಟರೆ, ಆಕೆಗೇನೂ ಸುಖ ಸಿಗುವುದಿಲ್ಲ. ಆತ ಜೈಲಲ್ಲಿರುವಷ್ಟು ಸಮಯ ಜೀವನ ಭದ್ರತೆಯೂ ಇಲ್ಲದೇ, ಇನ್ನೊಂದು ಮದುವೆಯಾಗುವುದಕ್ಕೆ ಅವಕಾಶವೂ ಇಲ್ಲದೇ ಆಕೆ ಕೊರಗಬೇಕಾಗುತ್ತದೆ. ಅಂದಹಾಗೆ,
ಪತ್ನಿಯನ್ನು ಏಕಾಏಕಿ ಬಿಟ್ಟುಹೋಗುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ ಎಂದಾಗಿದ್ದರೆ ಕೇಂದ್ರ ಸರಕಾರ ಹಿಂದೂ ಪತಿಗೂ ಇದೇ ಕಾನೂನನ್ನು ಅನ್ವಯಗೊಳಿಸಬೇಕಿತ್ತಲ್ಲವೇ? ಆದರೆ, ತ್ರಿವಳಿ ತಲಾಕ್ ಹೇಳುವುದನ್ನು ಕ್ರಿಮಿನಲ್ ಅಪರಾಧವೆಂದು ಸಾರಿರುವ ಕೇಂದ್ರ ಸರಕಾರ ಹಿಂದೂ ಪತಿಯ ಇಂಥದ್ದೇ ಕ್ರಮವನ್ನು ಸಿವಿಲ್ ಅಪರಾಧವಾಗಿ ದಾಖಲಿಸಿದೆ. ಆ ಕಾನೂನಿನಲ್ಲಿ ಇಂಥ ಯಾವ ತೀವ್ರತೆಯೂ ಇಲ್ಲ. ಸಮಾನ ನಾಗರಿಕ ಸಂಹಿತೆಯ ಬಗ್ಗೆ ನಿಂತಲ್ಲಿ ಕುಳಿತಲ್ಲಿ ಮಾತಾಡುವ ಇದೇ ಕೇಂದ್ರ ಸರಕಾರವೇ ಮುಸ್ಲಿಮರಿಗೊಂದು ಮತ್ತು ಹಿಂದೂಗಳಿಗೊಂದು ಕಾನೂನನ್ನು ರೂಪಿಸಿದೆ ಎಂಬುದೂ ಗಮನಾರ್ಹ. ನಿಜವಾಗಿ,
ತ್ರಿವಳಿ ತಲಾಕ್‌ನ ವಿರುದ್ಧ ಸುಪ್ರೀಮ್ ಕೋರ್ಟಿಗೆ ದೂರು ಸಲ್ಲಿಸಿದ ಶಾಯರಾ ಬಾನುರದ್ದೇ ಒಂದು ದೀರ್ಘ ಕತೆಯಿದೆ. ಈಕೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಬನ್ವಿಧರ್ ಭಾಗವತ್ ಸಮ್ಮುಖದಲ್ಲಿ 2020 ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಇದಕ್ಕಿಂತ ಎರಡು ವರ್ಷಗಳ ಮೊದಲೇ ತಾನು ಬಿಜೆಪಿ ಸೇರ್ಪಡೆಗೊಳ್ಳಲು ಬಯಸುವುದಾಗಿ ಹೇಳಿದ್ದರು. ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧ ಎಂದೂ ಘೋಷಿಸಿದ್ದರು. ಆಕೆಯ ಮಾತು, ವರ್ತನೆ ಮತ್ತು ನಡವಳಿಕೆಗಳಲ್ಲಿ ಅನುಮಾನಕ್ಕೆ ಪೂರಕವಾದ ಧಾರಾಳ ಇದ್ದುವು. ತನ್ನ ಅಜೆಂಡಾ ಜಾರಿಗೊಳಿಸುವುದಕ್ಕಾಗಿ ಬಿಜೆಪಿ ಆಕೆಯನ್ನು ಬಳಸಿಕೊಂಡಿದೆ ಎಂಬ ಸಂದೇಹವನ್ನು ಆಕೆಯ ಬಿಜೆಪಿ ಸೇರ್ಪಡೆ ಪುಷ್ಠೀಕರಿಸಿದಂತಿತ್ತು. ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸುವುದಕ್ಕೆ ಬಿಜೆಪಿ ಆಕೆಯನ್ನು ಧಾರಾಳ ಬಳಸಿಕೊಂಡಿತು. ಅಸಮರ್ಪಕ ಕಾನೂನೊಂದನ್ನು ಸಂತ್ರಸ್ತೆಯ ಮೂಲಕವೇ ಸಮರ್ಥಿಸಿಕೊಂಡ ಬಿಜೆಪಿ, ತನ್ನನ್ನು ಮುಸ್ಲಿಮ್ ಮಹಿಳೆಯರ ಪಾಲಿನ ಮಸೀಹನಂತೆ ಬಿಂಬಿಸಿಕೊಂಡಿತು. ಇದೀಗ,
ಪಶ್ಚಿಮ ಉತ್ತರ ಪ್ರದೇಶದ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡುತ್ತಾ ಪ್ರಧಾನಿ ಮತ್ತೆ ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮ್ ಮಹಿಳೆಯರ ಬದುಕಿಗೆ ಭದ್ರತೆ ನೀಡಿ ವಿಮೋಚನೆಗೊಳಿಸಿದ್ದೇವೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಆದರೆ, ತ್ರಿವಳಿ ತಲಾಕ್ ಕಾನೂನಿಗಿಂತ ಮೊದಲು ದೇಶದಲ್ಲಿ ಎಷ್ಟು ತ್ರಿವಳಿ ತಲಾಕ್ ಪ್ರಕರಣಗಳಿದ್ದುವು ಮತ್ತು ಕಾನೂನಿನ ನಂತರ ಎಷ್ಟು ಪ್ರಕರಣಗಳಿವೆ ಎಂಬ ಸಣ್ಣ ಅಂಕಿ-ಅಂಶವನ್ನಾದರೂ ಅವರು ನೀಡಿರುತ್ತಿದ್ದರೆ ಅವರ ಮಾತಿಗೆ ಗೌರವ ಇರುತ್ತಿತ್ತು. ತ್ರಿವಳಿ ತಲಾಕ್‌ನಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಮುಸ್ಲಿಮ್ ಸಮುದಾಯದ ಒಪ್ಪಿತ ನಿಲುವಾಗಿದೆ. ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇದೇ ನಿಲುವನ್ನು ಹೊಂದಿದೆ. ತ್ರಿವಳಿ ತಲಾಕ್ ಬಿಡಿ, ಒಂದೇ ಉಸಿರಿನಲ್ಲಿ ನೂರು ತಲಾಕ್ ಹೇಳಿದರೂ ಅದು ಪೂರ್ಣ ತಲಾಕ್ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಮುಸ್ಲಿಮ್ ವಿದ್ವಾಂಸರು ಈ ಮೊದಲೇ ಹೊಂದಿದ್ದರು. ವಿಚ್ಛೇದನದ ಕನಿಷ್ಠ ಅವಧಿ 3 ತಿಂಗಳು. ಗರಿಷ್ಠ ಎಷ್ಟೂ ಆಗಬಹುದು. ಒಂದುಬಾರಿ ತಲಾಕ್ ಹೇಳಿ ಒಂದು ಆರ್ತವ ಕಾಲದ ವರೆಗೆ ಕಾಯಬೇಕು. ಆ ನಡುವೆ ಅವರಿಬ್ಬರೂ ಒಂದೇ ಮನೆಯಲ್ಲಿ ಪತಿ ಪತ್ನಿಯಾಗಿಯೇ ಇರುತ್ತಾರೆ. ಈ ನಡುವೆ ಅವರ ನಡುವೆ ದೈಹಿಕ ಸಂಬಂಧ ಏರ್ಪಟ್ಟರೆ ಆ ತಲಾಕ್ ಮುರಿಯುತ್ತದೆ. ಒಂದುವೇಳೆ, ಇಂಥ ಕ್ರಿಯೆ ಏರ್ಪಡದಿದ್ದರೆ ಕುಟುಂಬಗಳ ನಡುವೆ ಮಾತುಕತೆಯಂಥ ವಿವಿಧ ಕ್ರಿಯೆಗಳು ನಡೆಯಬೇಕು. ಇವೆಲ್ಲ ನಡೆದೂ ಪತಿ ವಿಚ್ಛೇದನಕ್ಕೆ ಬದ್ಧವಾಗಿರುವುದಾದರೆ ದ್ವಿತೀಯ ತಲಾಕ್ ಹೇಳಬೇಕು. ಆ ಬಳಿಕವೂ ಅವರಿಬ್ಬರೂ ಜೊತೆಯಾಗಿಯೇ ಇರಬೇಕು. ಆಗಲೂ ಅವರ ನಡುವೆ ದೈಹಿಕ ಸಂಬಂಧ ಏರ್ಪಟ್ಟರೆ ತಲಾಕ್ ಮುರಿಯುತ್ತದೆ. ಒಂದು ವೇಳೆ, ಯಾವ ಮಾತುಕತೆ, ಕೌನ್ಸಿಲಿಂಗೂ ಯಶಸ್ವಿಯಾಗದಿದ್ದರೆ ಮೂರನೇ ತಲಾಕ್ ಮೂಲಕ ಆ ದಾಂಪತ್ಯ ಸಂಬಂಧ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಇದು ತಲಾಕ್‌ನ ಸರಿಯಾದ ಕ್ರಮ. ಆದರೆ,
ತಪ್ಪಾದ ಕ್ರಮದಿಂದ ಸರಿಯಾದ ಕ್ರಮದತ್ತ ಸಮಾಜವನ್ನು ಕೊಂಡೊಯ್ಯಬೇಕಾದ ಸರಕಾರ, ಪತಿಯನ್ನೇ ಜೈಲಲ್ಲಿಟ್ಟು ಪತ್ನಿಯನ್ನು ಅತಂತ್ರಗೊಳಿಸಿ ತಾನು ಮುಸ್ಲಿಮ್ ಮಹಿಳೆಯರ ಹಿತ ಕಾದಿದ್ದೇನೆ ಎಂದು ಹೇಳುತ್ತಿರುವುದು ನಾಚಿಕೆಗೇಡು.
No comments:
Post a Comment