Thursday, 9 May 2024

ಪ್ರಧಾನಿ ಸ್ಥಾನದ ಘನತೆಗೆ ಕಳಂಕ ತಂದ ಮೋದಿ

 



ಸನ್ಮಾರ್ಗ ಸಂಪಾದಕೀಯ


1. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಸಮುದಾಯಕ್ಕೆ ಹಂಚಲಿದೆ. ನಿಮ್ಮ ಪರಿಶ್ರಮದ ಹಣ  ನುಸುಳುಕೋರರಲ್ಲಿ ಹಂಚಿಕೆಯಾಗಬೇಕೇ?

2. ದಲಿತ್ ಮತ್ತು ಓಬಿಸಿ ಮೀಸಲಾತಿಯನ್ನು ಕಿತ್ತು ಅದನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸುತ್ತಿದೆ.

ಈ ಎರಡೂ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ರದ್ದೋ, ಅನಂತ ಕುಮಾರ್ ಹೆಗ್ಡೆಯದ್ದೋ, ಜಗದೀಶ್ ಕಾರಂತರದ್ದೋ ಅಥವಾ ದ್ವೇಷ  ಭಾಷಣಗಳಲ್ಲಿ ಕುಖ್ಯಾತಿಯನ್ನು ಪಡೆದಿರುವ ಪ್ರಜ್ಞಾಸಿಂಗ್ ಠಾಕೂರ್, ಗೋಲಿ ಮಾರೋ ಸಾಲೋಂಕೋ ಕುಖ್ಯಾತಿಯ ಅನುರಾಗ್ ಠಾಕೂರ್,  ಶಂಕರ್ ಬಿದೂರಿಯದ್ದೋ ಅಲ್ಲ. 140 ಕೋಟಿ ಭಾರತೀಯರನ್ನು ಸರಿಸಮಾನವಾಗಿ ನೋಡುವ ಪ್ರತಿಜ್ಞೆಯೊಂದಿಗೆ ಪ್ರಧಾನಿ ಹುದ್ದೆಯನ್ನು  ಅಲಂಕರಿಸಿರುವ ನರೇಂದ್ರ ಮೋದಿಯದ್ದು. ಮೊದಲ ಹೇಳಿಕೆಯನ್ನು ರಾಜಸ್ತಾನದ ಚುನಾವಣಾ ಸಭೆಯಲ್ಲಿ ನೀಡಿದ್ದರೆ ಎರಡನೇ ಹೇಳಿಕೆಯನ್ನು  ತೆಲಂಗಾಣದಲ್ಲಿ ನೀಡಿದ್ದಾರೆ. ಭಾರತೀಯ ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂಗಳ ವಿರುದ್ಧ ಓರ್ವ ಪ್ರಧಾನಿಯೇ ಈ ರೀತಿಯಲ್ಲಿ ಎತ್ತಿ  ಕಟ್ಟುತ್ತಾರೆಂದರೆ, ಅವರ ಸಬ್ಕಾ ಸಾಥ್ ಘೋಷಣೆಯ ಅರ್ಥವೇನು?

ಪ್ರಧಾನಿ ಒಂದು ಪಕ್ಷದ ಪ್ರತಿನಿಧಿಯಲ್ಲ. ದೇಶದ ಎಲ್ಲ ನಾಗರಿಕರ ಪ್ರತಿನಿಧಿ. ಅವರ ಮಾತು ಮತ್ತು ವರ್ತನೆಗಳಲ್ಲಿ ಈ ಸಮಗ್ರಭಾವ  ಬಿಂಬಿತವಾಗಬೇಕು. ದೇಶದ ಪ್ರತಿಯೋರ್ವ ನಾಗರಿಕರಲ್ಲೂ `ನಾನು ನಿಮ್ಮವನು' ಎಂಬ ಭದ್ರತಾ ಭಾವವನ್ನು ತುಂಬುವಂತಿರಬೇಕು. ಆದರೆ,  ಪ್ರಧಾನಿ ಮೋದಿಯ ಮಾತುಗಳಲ್ಲಿ ಈ ಭಾವ ಇದೆಯೇ? ಅವರೇಕೆ ಭಾರತೀಯ ಮುಸ್ಲಿಮರನ್ನು ಪದೇ ಪದೇ ನಿಂದಿಸುವ, ಅವಮಾನಿಸುವ  ಮತ್ತು ಅಪರಾಧಿಗಳಂತೆ ಬಿಂಬಿಸುವ ಮಾತುಗಳನ್ನು ಆಡುತ್ತಿದ್ದಾರೆ? ಹೀಗೆ ಹೇಳುವುದರಿಂದ ಹಿಂದೂಗಳು ತನಗೆ ಮತ ಚಲಾಯಿಸುತ್ತಾರೆ  ಎಂಬ ನಂಬಿಕೆಯೇ? ಒಂದು ವೇಳೆ ಹೀಗೆ ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಲಭಿಸಿದರೂ ಮತ್ತು ಮತ್ತೆ ಪ್ರಧಾನಿಯಾಗುವ ಅವಕಾಶ  ಲಭ್ಯವಾದರೂ `ಮುಸ್ಲಿಮ್ ನಿಂದಕ, ದ್ವೇಷ ಭಾಷಣಕಾರ' ಎಂಬ ಕಳಂಕದಿಂದ ಮುಕ್ತವಾಗಲು ಅವರಿಗೆ ಸಾಧ್ಯವಿದೆಯೇ? ಪ್ರಧಾನಿ ಪಟ್ಟ ಶಾಶ್ವತವಲ್ಲ; ಒಂದಿನ ಆ ಪಟ್ಟದಿಂದ ಕೆಳಗಿಳಿಯಲೇಬೇಕು ಮತ್ತು ಇತಿಹಾಸದ ಪುಟದಲ್ಲಿ `ಪ್ರಧಾನಿ'ಯಾಗಿ ಗುರುತಿಸಿಕೊಳ್ಳಲೇಬೇಕು. ಆದರೆ, ` ಪ್ರಧಾನಿ ಮೋದಿ' ಎಂದು ಇತಿಹಾಸದ ಪುಸ್ತಕಗಳಲ್ಲಿ ಓದುವಾಗಲೋ, ಕೇಳುವಾಗಲೋ ಅಥವಾ ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸು ವಾಗಲೋ,  ಈ ದೇಶದ ಬೃಹತ್ ಸಮುದಾಯವೊಂದು ಹೆಮ್ಮೆ ಪಡದ ಮತ್ತು ಅಸಮಾಧಾನ ಸೂಚಿಸುವ ವಾತಾವರಣವೊಂದು ನಿರ್ಮಾಣವಾಗುವುದು  ಒಳ್ಳೆಯದೇ? ಇತಿಹಾಸವನ್ನು ಅಧ್ಯಯನ ಮಾಡುವ ಭವಿಷ್ಯದ ವಿದ್ಯಾರ್ಥಿಗಳು ನೆಹರೂ, ಶಾಸ್ತ್ರಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ,  ದೇವೇಗೌಡ, ಮನ್‌ಮೋಹನ್ ಸಿಂಗ್ ಇತ್ಯಾದಿ ಹೆಸರುಗಳನ್ನು ಯಾವ ಭಾವದಲ್ಲಿ ಓದುತ್ತಾರೋ ಅದೇ ಭಾವದಲ್ಲಿ ನರೇಂದ್ರ ಮೋದಿ ಹೆಸರನ್ನು ಓದಲಾಗದಿದ್ದರೆ ಅದಕ್ಕೆ ಯಾರು ಹೊಣೆ?
ಈ ದೇಶದಲ್ಲಿ ಮುಸ್ಲಿಮರು 25 ಕೋಟಿಯಷ್ಟಿದ್ದಾರೆ ಮತ್ತು ಮೋದಿಯಾಗಲಿ ಇನ್ನಾರೇ ಆಗಲಿ ಎಷ್ಟೇ ಅವಮಾನಿಸಿದರೂ, ನಿಂದಿಸಿದರೂ  ಮತ್ತು ಗೇಲಿ ಮಾಡಿದರೂ ಈ ಬೃಹತ್ ಸಮುದಾಯವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೋ ಸಮೂಲ ನಾಶ ಮಾಡುವುದಕ್ಕೋ ಸಾಧ್ಯವೇ  ಇಲ್ಲ. ಅಂದರೆ, ಒಂದು ಸಮುದಾಯವನ್ನು ದ್ವೇಷಿಸುವುದರಿಂದ ಒಂದು ನಿರ್ದಿಷ್ಟ ಗುಂಪಿನ ಮನಸ್ಸನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸಬಹುದು  ಮತ್ತು ನಿರ್ದಿಷ್ಟ ಅವಧಿವರೆಗೆ ಅಧಿಕಾರ ಹಿಡಿಯಬಹುದು. ಆದರೆ, ಅಧಿಕಾರಕ್ಕಾಗಿ ಮಾಡುವ ಈ ವಿಭಜನವಾದಿ ತಂತ್ರವು ದೇಶದ ಅಭಿವೃದ್ಧಿ ಮತ್ತು ಒಗ್ಗಟ್ಟಿನ ಮೇಲೆ ಬೀರುವ ಅಡ್ಡ ಪರಿಣಾಮಗಳು ಇಷ್ಟೇ ತಾತ್ಕಾಲಿಕವಾಗಿರುತ್ತದೆಯೇ? 25 ಕೋಟಿಯಷ್ಟಿರುವ ಸಮುದಾಯವೊಂದನ್ನು 80 ಕೋಟಿಯಷ್ಟಿರುವ ಸಮುದಾಯದ  ವೈರಿ ಎಂದು ಬಿಂಬಿಸುವುದೇ  ದೇಶದ ನಾಗರಿಕರ ನಡುವೆ ಇರಲೇಬೇಕಾದ ವಿಶ್ವಾಸಾರ್ಹತೆಗೆ ಅತಿ ದೊಡ್ಡ ಪೆಟ್ಟು. ದೇಶದ ಅಭಿವೃದ್ಧಿ ನಾಗರಿಕರ ಒಗ್ಗಟ್ಟನ್ನು ಅವಲಂಬಿಸಿದೆ.

ಈ ದೇಶದಲ್ಲಿ ನಾಗರಿಕನೋರ್ವ ಉತ್ತು ಬಿತ್ತಿ ಬೆಳೆಯಬೇಕಾದರೆ, ಮೊದಲು ಆತ/ಕೆಯಲ್ಲಿ ಭದ್ರತಾಭಾವ ಮೂಡಿರಬೇಕು. ತನಗೆ ಈ ದೇಶದಲ್ಲಿ  ರಕ್ಷಣೆಯಿದೆ ಮತ್ತು ತನ್ನನ್ನು ಯಾವುದೇ ಪಕ್ಷಪಾತ ಭಾವವಿಲ್ಲದೇ ಇಲ್ಲಿನ ಸರ್ಕಾರ ನಡೆಸಿಕೊಳ್ಳುತ್ತದೆ ಎಂಬ ನಂಬಿಕೆ ಅವರಲ್ಲಿರಬೇಕು. ಈ ದೇಶದಲ್ಲಿ ಹೂಡಿಕೆ ಮಾಡುವವರೂ ಮೊದಲು ಇಂಥ ಭಾವ ಸೃಷ್ಟಿಯನ್ನೇ ಬಯಸುತ್ತಾರೆ. ತನ್ನ ದೇಶದ ಬಗ್ಗೆ ಓರ್ವ ನಾಗರಿಕ ಹೆಮ್ಮೆಪಡುವುದಕ್ಕೆ  ಆ ದೇಶ ಅವನನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ರಾಜಕೀಯ ಕಾರಣಕ್ಕಾಗಿ ತನ್ನ ದೇಶ ತನ್ನನ್ನು `ಹೊರೆ' ಎಂಬಂತೆ   ಬಿಂಬಿಸತೊಡಗಿದರೆ ಮತ್ತು ತನ್ನ ಕೊಡುಗೆಯನ್ನು ನಿಕೃಷ್ಟವಾಗಿ ಕಾಣತೊಡಗಿದರೆ, ಆತ/ಕೆ ಆ ದೇಶದ ಬಗ್ಗೆ ಹೆಮ್ಮೆಪಡುವುದಕ್ಕೆ ಸಾಧ್ಯವೇ ಇಲ್ಲ.  ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯು ಇಂಥ ನಕಾರಾತ್ಮಕ ರೂಪದಲ್ಲಿದೆ. ಈ ದೇಶದ ಮುಸ್ಲಿಮರಲ್ಲಿ ಅಭದ್ರತೆಯನ್ನು ಹುಟ್ಟು  ಹಾಕುವುದು ಅವರ ಉದ್ದೇಶದಂತಿದೆ. ತಾತ್ಕಾಲಿಕವಾಗಿ ಈ ತಂತ್ರ ಯಶಸ್ಸು ತಂದುಕೊಟ್ಟರೂ ದೀರ್ಘಕಾಲಿಕ ದೃಷ್ಟಿಯಿಂದ ಈ ತಂತ್ರ ಅತ್ಯಂತ  ಅಪಾಯಕಾರಿ.

ಅಧಿಕಾರ ಲಾಭಕ್ಕಾಗಿ ದೇಶದ ನಾಗರಿಕರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದರಿಂದ ದೇಶದ ಐಕ್ಯ ಭಾವಕ್ಕೆ ಆಳ ಗಾಯವಾಗುತ್ತದೆ.  ಒಂದು ಸಮುದಾಯವನ್ನು ಇನ್ನೊಂದು ಸಮುದಾಯ ಅನುಮಾನದಿಂದ ನೋಡತೊಡಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ಈ ಅನುಮಾನಿತ  ವಾತಾವರಣದಲ್ಲಿ ಬೆಳೆಯ ತೊಡಗುತ್ತಾರೆ. ಅವರ ಮನಸ್ಸಿನಲ್ಲಿ ಇನ್ನೊಂದು ಸಮುದಾಯದ ಬಗ್ಗೆ ಆತಂಕ ಮತ್ತು ದುರಾಭಿಪ್ರಾಯ ಅಚ್ಚೊತ್ತ  ತೊಡಗುತ್ತದೆ. ಇದು ಏಕ ಮುಖ ಅಲ್ಲ. ಮುಸ್ಲಿಮ್ ಸಮುದಾಯವನ್ನು ಯಾರು ನಿಂದಿಸುತ್ತಾರೋ ಅದೇ ವ್ಯಕ್ತಿಗೆ ಮತ್ತೆ ಮತ್ತೆ ಅಧಿಕಾರ  ಸಿಗತೊಡಗಿದಾಗ ಬಹುಸಂಖ್ಯಾತ ಸಮುದಾಯದ ಕುರಿತು ಮುಸ್ಲಿಮ್ ಸಮುದಾಯದಲ್ಲೂ ದುರಾಭಿಪ್ರಾಯ ಮೂಡ ತೊಡಗುತ್ತದೆ. ಅವರೆಲ್ಲ  ಮುಸ್ಲಿಮರನ್ನು ದ್ವೇಷಿಸುತ್ತಾರೆ ಎಂಬ ಭಾವದೊಂದಿಗೆ ಆ ಸಮುದಾಯದ ಎಳೆ ಪೀಳಿಗೆಯೂ ಬೆಳೆಯ ತೊಡಗುತ್ತದೆ. ಈ ಎರಡೂ  ಬೆಳವಣಿಗೆಯೂ ಅಪಾಯಕಾರಿ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಅನ್ಯಗೊಳಿಸುವ ಈ ತಂತ್ರವು ಮೋದಿ ಅಧಿಕಾರಿಂದ ಇಳಿದ ಬಳಿಕವೂ ನಾಗರಿಕರಲ್ಲಿ ಸುಪ್ತವಾಗಿ ಉಳಿದುಕೊಳ್ಳಲಾರದು ಎನ್ನುವ ಹಾಗಿಲ್ಲ. ಯಾವುದಾದರೊಂದು ಘಟನೆ ಸಂಭವಿಸಿದಾಗ  ಈ ಸುಪ್ತಭಾವ ಮತ್ತೆ ಜಾಗೃತಗೊಳ್ಳಬಹುದು. ಮುಸ್ಲಿಮ್ ಹುಡುಗಿಯೊಂದಿಗೆ ಹಿಂದೂ ಯುವಕ ಪರಾರಿಯಾದಾಗ ಅಥವಾ ಇದಕ್ಕೆ ತದ್ವಿರುದ್ಧ  ಘಟನೆ ಸಂಭವಿಸಿದಾಗ, ಈ ಸುಪ್ತಭಾವ ಮತ್ತೆ ಎಚ್ಚರಗೊಂಡು ಸಾರ್ವಜನಿಕ ಭಾವವಾಗಿ ಪರಿವರ್ತನೆಯಾಗಬಹುದು. ಪ್ರತಿಭಟನೆಗಳು, ಬಂದ್  ಕರೆಗಳು, ವದಂತಿಗಳು ಉಂಟಾಗಬಹುದು. ಇದು ಬರೇ ಊಹೆ ಅಲ್ಲ.

ಈಗಾಗಲೇ ಈ ದೇಶದಲ್ಲಿ ಇಂಥ ಭಾವ ಜಾಗೃತವಾಗಿಯೇ ಇದೆ. ಮತ್ತು ಬಹಿರಂಗದಲ್ಲೂ ಕಾಣಿಸಿಕೊಳ್ಳುತ್ತಿದೆ. ತೀರಾ ತೀರಾ ವೈಯಕ್ತಿಕ  ಪ್ರಕರಣಕ್ಕೂ ಹಿಂದೂ-ಮುಸ್ಲಿಮ್ ಬಣ್ಣವನ್ನು ಕಟ್ಟಿ ಸಮಾಜದ ಶಾಂತಿಯನ್ನು ಕೆಡಿಸುವುದಕ್ಕೆ ಇವತ್ತು ಸಾಧ್ಯವಾಗಿರುವುದೇ ಸಮಾಜದಲ್ಲಿ ಈ  ಭಾವ ಆಳವಾಗಿ ಬೇರೂರಿರುವುದನ್ನು ಸೂಚಿಸುತ್ತದೆ. ಈ ದ್ವೇಷ ಭಾವ ಇರುವಷ್ಟು ಸಮಯ ಈ ದೇಶ ಜಾಗತಿಕ ಶಕ್ತಿಯಾಗಲು ಸಾಧ್ಯವೇ  ಇಲ್ಲ. ಒಂದು ಬೃಹತ್ ಸಮುದಾಯವನ್ನು ಅನ್ಯರಂತೆ ಮತ್ತು ವೈರಿಗಳಂತೆ ಕಾಣುವ ದೇಶವು ಅಂತಿಮವಾಗಿ ಆ ವಿಭಜನೆ ಹುಟ್ಟು ಹಾಕುವ  ಸಮಸ್ಯೆಗಳಲ್ಲೇ ಬಿದ್ದುಕೊಂಡು ಸ್ವಯಂ ಕುಸಿದು ಹೋಗುತ್ತದೆ. ಇದಕ್ಕೆ ನೆರೆಯ ಮ್ಯಾನ್ಮಾರ್, ಶ್ರೀಲಂಕಾಗಳಿಂದ  ಹಿಡಿದು ಸುಡಾನ್, ಸೋಮಾ ಲಿಯಗಳ ವರೆಗೆ ಧಾರಾಳ ಉದಾಹರಣೆಗಳಿವೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ಮೋದಿ ತನ್ನ ಸಾಧನೆಗಳ ಆಧಾರದಲ್ಲಿ ಮತಯಾಚಿಸುವುದನ್ನು ಬಿಟ್ಟು ಮುಸ್ಲಿಮರ ವಿರುದ್ಧ  ಹಿಂದೂಗಳನ್ನು ಎತ್ತಿ ಕಟ್ಟುವ ಮೂಲಕ ಮತ ಯಾಚಿಸುತ್ತಿದ್ದಾರೆಂದರೆ, ಅವರು ಈ ದೇಶವನ್ನಾಳುವುದಕ್ಕೆ ಅನರ್ಹರು ಎಂದೇ ಅರ್ಥ. ಈ ದೇ ಶದಲ್ಲಿ ಮುಸ್ಲಿಮರು 2014 ರಿಂದ ದಿಢೀರ್ ಉದ್ಭವವಾದವರಲ್ಲ. ಅವರಿಗೆ ಈ ಮಣ್ಣಿನಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಪೂರ್ವ  ಇತಿಹಾಸವಿದೆ. ಈ ದೇಶದ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಅತಿ ಪ್ರಾಮುಖ್ಯ ಹೊಣೆಗಾರಿಕೆ ನಿಭಾಯಿಸಿದ ಕೀರ್ತಿಯೂ ಇವರಿಗಿದೆ. 800 ವರ್ಷಗಳ  ಕಾಲ ಈ ಮಣ್ಣಿನಲ್ಲಿ ಆಡಳಿತ ನಡೆಸಿದ ಮತ್ತು ಈ ಮಣ್ಣಿಗೆ ಹತ್ತು ಹಲವು ಗಮನಾರ್ಹ ಕೊಡುಗೆಗಳನ್ನು ನೀಡಿದವರ ಇತಿಹಾಸವೂ ಇದೆ.  ಅವರ ಕೊಡುಗೆಯ ಕುರುಹಾಗಿ ತಾಜ್‌ಮಹಲೂ ಇದೆ. ಗೋಲ್‌ಗುಂಬಜೂ ಇದೆ ಮತ್ತು ರೇಶ್ಮೆ ಕೃಷಿ, ಬಡ್ಡಿರಹಿತ ರೈತ ಸಾಲ, ರಾಕೆಟ್  ತಂತ್ರಜ್ಞಾನದ ಅಭಿವೃದ್ಧಿಯಂಥ ನೂರಾರು ಸಾಕ್ಷಿಗಳೂ ಇವೆ. ಇವೆಲ್ಲವನ್ನೂ ನಿರಾಕರಿಸಿಕೊಂಡ ರೀತಿಯಲ್ಲಿ ಪ್ರಧಾನಿ ಮಾತು ಆಡುತ್ತಾರೆಂದರೆ  ಅದು ಅವರ ಸಣ್ಣತನಕ್ಕೆ ಆಧಾರವೇ ಹೊರತು ಇನ್ನೇನಲ್ಲ.

No comments:

Post a Comment