Monday, 13 May 2024

ಧರ್ಮದ್ವೇಷದ ಮನಸ್ಥಿತಿಯನ್ನು ಬೆತ್ತಲೆಗೊಳಿಸಿದ ಓಂಕಾರಪ್ಪ

 




ಧರ್ಮದ್ವೇಷದ  ಕರಾಳ ಮುಖವನ್ನು ಮೀನಾ ಎಂಬ ಅಪ್ರಾಪ್ತೆ ಸಮಾಜದ ಮುಂದಿಟ್ಟಿದ್ದಾಳೆ. ಇದಕ್ಕಾಗಿ ಆಕೆ ತನ್ನ ರುಂಡವನ್ನೇ ತ್ಯಾಗ  ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿ ಬೆಳಿಗ್ಗೆ ಲವಲವಿಕೆಯಿಂದಿದ್ದ ಈಕೆಯನ್ನು ಸಂಜೆಯ ವೇಳೆ ಓಂಕಾರಪ್ಪ  ಎಂಬವ ರುಂಡ ಕಡಿದು ಹತ್ಯೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ್ದೇ  ಈ ಹತ್ಯೆಗೆ ಕಾರಣ. 18 ವರ್ಷಕ್ಕಿಂತ ಮೊದಲು ಮದುವೆಯಾಗುವುದು  ಕಾನೂನಿನ ಪ್ರಕಾರ ಅಪರಾಧ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಕಾರಣ ಮೀನಾ ಮತ್ತು ಓಂಕಾರಪ್ಪ ನಡುವಿನ ಮದುವೆ  ಸ್ಥಗಿತಗೊಂಡಿತ್ತು. ಇದೀಗ ಮೀನಾಳ ರುಂಡ ಪತ್ತೆಯಾಗಿದೆ. ಓಂಕಾರಪ್ಪನ ಬಂಧನವಾಗಿದೆ. ಆದರೆ,

ಈ ಪ್ರಕರಣ ನಡೆದ ಕೊಡಗಿನ ಸೋಮವಾರಪೇಟೆ ತಣ್ಣಗಿದೆ. ಸಾರ್ವಜನಿಕರ ಬಾಯಲ್ಲಿ ಈ ಕ್ರೌರ್ಯ ಚರ್ಚೆಯ ವಸ್ತುವಾಗಿದ್ದನ್ನು ಬಿಟ್ಟರೆ  ಉಳಿದಂತೆ ಹುಬ್ಬಳ್ಳಿಯ ನೇಹಾಳ ಹತ್ಯೆಗೆ ಸಿಕ್ಕ ಆಕ್ರೋಶದ ಒಂದು ಶೇಕಡಾ ಪ್ರತಿಕ್ರಿಯೆಯೂ ಈ ಹತ್ಯೆಗೆ ಸಿಕ್ಕಿಲ್ಲ. ಕ್ರೌರ್ಯದ ಪ್ರಮಾಣಕ್ಕೆ  ಹೋಲಿಸಿದರೆ ಈ ಎರಡೂ ಪ್ರಕರಣಗಳು ಒಂದನ್ನೊಂದು  ಮೀರಿಸುವಂಥವು. ಒಂದು ಹಂತದಲ್ಲಿ ಮೀನಾ ಹತ್ಯೆಯು ನೇಹಾ ಹತ್ಯೆಗಿಂತಲೂ  ಹೆಚ್ಚು ಭೀಕರ ಮತ್ತು ಭಯಾನಕವಾದುದು. ಓಂಕಾರಪ್ಪ ತನ್ನ ಪ್ರಿಯತಮೆಯ ರುಂಡವನ್ನೇ ಕತ್ತರಿಸಿದ್ದಾನೆ. ಫಯಾಝï ತನ್ನ ಪ್ರಿಯತಮೆಯನ್ನು  ಚೂರಿಯಿಂದ ಇರಿದು ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆಗೆ ಇಬ್ಬರು ನೀಡಿರುವ ಕಾರಣಗಳೂ ಒಂದೇ- ಪ್ರೇಮ. ಆದರೆ,

ಈ ಎರಡೂ ಪ್ರಕರಣಗಳಿಗೆ ನಾಗರಿಕ ಸಮಾಜ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಮಾತ್ರ ಭೂಮಿ-ಆಕಾಶದಷ್ಟು ವ್ಯತ್ಯಾಸವಿದೆ. ನೇಹ ಹತ್ಯೆಯ ಬೆನ್ನಿಗೇ ಟಿ.ವಿ. ಚಾನೆಲ್‌ಗಳು ಚುರುಕಾದವು. ಹತ್ಯೆ ನಡೆದ ಕಾಲೇಜು ಕ್ಯಾಂಪಸ್‌ನಲ್ಲಿ ನಿಂತು ಲೈವ್ ವರದಿಗಾರಿಕೆ ಮಾಡಿದುವು. ಕಾಲೇಜಿನ  ಅಧ್ಯಾಪಕರನ್ನು ಮಾತಾಡಿಸಿ ಅಭಿಪ್ರಾಯವನ್ನು ಪ್ರಸಾರ ಮಾಡಿದವು. ನೇಹಾ ಸಹಪಾಠಿಗಳ ಬಾಯಿಗೆ ಮೈಕ್ ಇಟ್ಟವು. ನಾಗರಿಕರನ್ನು ಮಾತಾಡಿಸಿ  ಅಭಿಪ್ರಾಯ ಪಡಕೊಂಡವು. ನೇಹಾ ತಾಯಿ ಮತ್ತು ತಂದೆ ಹಾಗೂ ಫಯಾಝï‌ನ ತಂದೆ ಮತ್ತು ತಾಯಿಯ ಅಭಿಪ್ರಾಯಗಳನ್ನು  ಸಮಾಜಕ್ಕೆ ತಲುಪಿಸಿದುವು. ಒಂದು ವಾರಕ್ಕಿಂತಲೂ ಅಧಿಕ ಸಮಯ ಈ ಹತ್ಯೆಯನ್ನು ರಾಜ್ಯದ ಅತಿ ಪ್ರಮುಖ ಚರ್ಚಾವಸ್ತುವಾಗಿ ಇವು  ಜೀವಂತ ಇಟ್ಟವು. ಚಾನೆಲ್‌ನಲ್ಲಿ ಸಂವಾದ, ಚರ್ಚೆ, ಸ್ಟೋರಿ ಇತ್ಯಾದಿಗಳನ್ನು ನಿರಂತರ ಪ್ರಸಾರ ಮಾಡಿ ಈ ಕ್ರೌರ್ಯದ ಕಾವು ಆರದಂತೆ  ನೋಡಿಕೊಂಡವು. ಕೇವಲ ಕನ್ನಡ ಚಾನೆಲ್‌ಗಳಷ್ಟೇ ಅಲ್ಲ, ರಾಷ್ಟ್ರ ಮಟ್ಟದ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳಲ್ಲೂ ನೇಹಾ ಹತ್ಯೆ ಸುದ್ದಿಗೆ  ಒಳಗಾಯಿತು. ಇದರ ಜೊತೆಜೊತೆಗೇ, ಬಿಜೆಪಿ ರಂಗಕ್ಕಿಳಿಯಿತು. ರಾಷ್ಟ್ರಾಧ್ಯಕ್ಷ ನಡ್ಡಾ ಅವರು ನೇರವಾಗಿ ದೆಹಲಿಯಿಂದ ಹುಬ್ಬಳ್ಳಿಗೆ ಬಂದರು.  ನೇಹಾ ಮನೆಗೆ ಭೇಟಿ ಕೊಟ್ಟದ್ದಲ್ಲದೇ ಮಾಧ್ಯಮಗಳಿಗೂ ಹೇಳಿಕೆಯನ್ನು ಕೊಟ್ಟರು. ಅಮಿತ್ ಶಾ ಅವರ ಚುನಾವಣಾ ರ‍್ಯಾಲಿಯಲ್ಲಿ ನೇಹಾ  ಹೆತ್ತವರರನ್ನು ತಂದು ಕೂರಿಸಿದರು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಫಯಾಝï‌ನನ್ನು ಗಲ್ಲಿಗೇರಿಸಿ ಎಂಬ ಕೂಗನ್ನು ಎಬ್ಬಿಸಿತು.  ನೇಹಾ ಓದಿನಲ್ಲಿ ಹೇಗಿದ್ದಳು, ಕ್ರೀಡೆಯಲ್ಲಿ ಎಷ್ಟು ಆಸಕ್ತಿ ಹೊಂದಿದ್ದಳು, ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಳು ಎಂಬಲ್ಲಿಂದ   ತೊಡಗಿ ಫಯಾಝï ಎಂಥ ಕ್ರೂರಿಯಾಗಿದ್ದ, ಆತನ ಹಿನ್ನೆಲೆ ಏನು, ಆತ ಧರ್ಮಾಂಧನೇ, ಡ್ರಗ್ಸ್ ಚಟ ಹೊಂದಿದ್ದನೇ, ಕ್ರಿಮಿನಲ್ ಕೃತ್ಯಗಳ  ಪೂರ್ವ ಇತಿಹಾಸ ಆತನಿಗಿತ್ತೇ, ಕ್ರೌರ್ಯದ ಬಳಿಕ ಆತನ ಮುಖಭಾವದಲ್ಲಿ ಪಶ್ಚಾತ್ತಾಪ ಭಾವ ಇತ್ತೇ, ಆತ ಎಷ್ಟು ಸಮಯದಿಂದ ಈ ಹತ್ಯೆಗೆ  ಸಂಚು ನಡೆಸಿದ್ದ, ಹತ್ಯೆಗೆ ಬಳಸಿದ ಚೂರಿಯನ್ನು ಎಲ್ಲಿಂದ, ಯಾವಾಗ ಖರೀದಿಸಿದ್ದ, ಆತನ ಜೊತೆ ಆತನ ಹೆತ್ತವರು ಭಾಗಿಯಾಗಿದ್ದಾರಾ,  ತಂದೆಯನ್ನೇ ಆತ ಹತ್ಯೆ ಮಾಡಲು ಯತ್ನಿಸಿದ್ದನಾ... ಇತ್ಯಾದಿ ಇತ್ಯಾದಿ ಪ್ರಶ್ನೆಗಳೊಂದಿಗೆ ಮಾಧ್ಯಮಗಳು ತನಿಖೆಗಿಳಿದುವು. ಇದೇವೇಳೆ, ಸಿನಿಮಾ  ನಟ-ನಟಿಯರೂ ರಂಗಕ್ಕಿಳಿದರು. ಹೆಣ್ಮಕ್ಕಳ ಸುರಕ್ಷಿತತೆಯ ಕುರಿತು ಆತಂಕ ತೋಡಿಕೊಂಡರು. ಆದರೆ,

ಇವರೆಲ್ಲರ ಈ ಆಕ್ರೋಶ, ಪ್ರತಿಭಟನೆ, ಕಣ್ಣೀರು ಬರೇ ಬೂಟಾಟಿಕೆ ಎಂಬುದನ್ನು ಇದೀಗ ಈ ಓಂಕಾರಪ್ಪ ಸಾಬೀತುಪಡಿಸಿದ್ದಾನೆ. ಈತ ಮೀನಾಳ ರುಂಡ ಕಡಿದು ದಿನಗಳೇ ಕಳೆದಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಬಿಡಿ ಬಿಜೆಪಿಯ ಒಬ್ಬನೇ ಒಬ್ಬ ರಾಜ್ಯ ಮುಖಂಡ ಈ ಮೀನಾಳ ಮನೆಗೆ  ಭೇಟಿ ಕೊಟ್ಟಿಲ್ಲ. ಹೇಳಿಕೆ ನೀಡಿಲ್ಲ. ನೇಹಾಳ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ, ಮೀನಾಳಿಗಾಗಿ ಕನಿಷ್ಠ  ಸೋಮವಾರಪೇಟೆಯಲ್ಲಾದರೂ ಒಂದು ಖಂಡನಾ ಮೆರವಣಿಗೆ ನಡೆಸಿಲ್ಲ. ಓಂಕಾರಪ್ಪನನ್ನು ನೇಣಿಗೇರಿಸಿ ಎಂದು ಕೂಗು ಹಾಕಿಲ್ಲ. ಅದರ  ವಿದ್ಯಾರ್ಥಿ ಘಟಕವಾದ ಎಬಿವಿಪಿಯೂ ಮೌನವಾಗಿದೆ. ನೇಹಾ ಹತ್ಯೆಯನ್ನು ಖಂಡಿಸಿ ಬೀದಿಗಿಳಿದಿದ್ದ ಮತ್ತು ಪ್ಲಕಾರ್ಡ್ ಹಿಡಿದು ಪ್ರತಿಭಟಿಸಿದ್ದ  ಎಬಿವಿಪಿಯು ಮೀನಾ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸುತ್ತಿದೆ. ಸಿನಿಮಾ ನಟ-ನಟಿಯರೂ ಕಾಣೆಯಾಗಿದ್ದಾರೆ. ನೇಹಾಳ ಹತ್ಯೆಯಲ್ಲಿ  ಹೆಣ್ಣು ಮಕ್ಕಳ ಅಸುರಕ್ಷಿತತೆಯನ್ನು ಕಂಡಿದ್ದ ಅವರೆಲ್ಲ ಈಗ ಮೀನಾ ಹತ್ಯೆಗೆ ಒಂದಕ್ಷರ ಪ್ರತಿಕ್ರಿಯಿಸಲೂ ಪುರುಸೊತ್ತು ಇಲ್ಲದವರಂತೆ  ಬ್ಯುಝಿಯಾಗಿದ್ದಾರೆ. ಮಾಧ್ಯಮಗಳಂತೂ ಸೋಮವಾರಪೇಟೆಯನ್ನೇ ಮರೆತಿವೆ. ಓಂಕಾರಪ್ಪನ ವ್ಯಕ್ತಿತ್ವ, ರುಂಡ ಕತ್ತರಿಸುವುದಕ್ಕೆ ಬಳಸಿದ  ಮಚ್ಚುನ ಹಿನ್ನೆಲೆ, ಅದನ್ನು ತಯಾರಿಸಿದ ವ್ಯಕ್ತಿಯ ಪೂರ್ವಾಪರ, ಓಂಕಾರಪ್ಪನ ತಂದೆ-ತಾಯಿಯ ಅಭಿಪ್ರಾಯ, ಅವರ ವೃತ್ತಿ, ಈ ಹತ್ಯೆಗೆ ಓಂಕಾರಪ್ಪ  ನಡೆಸಿರುವ ಸಂಚು, ಈ ಹತ್ಯೆಯಲ್ಲಿ ಭಾಗಿಯಾಗಿರಬಹುದಾದ ಇನ್ನಿತರರ ಮಾಹಿತಿ, ಈತ ಕುಡುಕನೇ, ಡ್ರಗ್ಸ್ ಹಿನ್ನೆಲೆ ಇದೆಯೇ, ಮೀನಾಳ  ಮನೆಯಿಂದ ಆತ ಬಂದೂಕು ಏಕೆ ಅಪಹರಿಸಿದ, ಆತ ದರೋಡೆಕೋರನೇ, ಆತನ ವಿಚಾರಧಾರೆ ಏನು, ಆತ ಓದಿರುವ ಗ್ರಂಥ ಯಾವುದು,  ಆತ ಮಂದಿರಕ್ಕೆ ಹೋಗುತ್ತಿದ್ದನೇ, ಪ್ರಾರ್ಥನೆ ಮಾಡುತ್ತಿದ್ದನೇ, ಮನೆಯಲ್ಲಿ ದೇವರ ಮೂರ್ತಿಗಳು ಇವೆಯೇ, ಯಾವ ಧರ್ಮಗ್ರಂಥವನ್ನು ಆತ  ಅನುಸರಿಸುತ್ತಿದ್ದ, ಬಂಧನ ವೇಳೆ ಆತನ ಮುಖಭಾವ ಹೇಗಿತ್ತು, ಆತನಿಗೆ ಮೀನಾಳ ಕುಟುಂಬವನ್ನೇ ಹತ್ಯೆ ಮಾಡುವ ಉದ್ದೇಶ ಇತ್ತಾ, ಆತ  ಎಷ್ಟು ಓದಿದ್ದಾನೆ, ಸ್ವಂತ ಹೆತ್ತವರನ್ನೇ ಹತ್ಯೆ ಮಾಡಲು ಈ ಹಿಂದೆ ಪ್ರಯತ್ನಿಸಿದ್ದನಾ, ಈ ಮೀನಾ ಹೇಗಿದ್ದಳು, ಕಲಿಕೆಯಲ್ಲಿ ಎಷ್ಟು ಮುಂದಿದ್ದಳು,  ಕ್ರೀಡೆಯಲ್ಲಿ ಎಷ್ಟು ಚುರುಕಾಗಿದ್ದಳು, ಆಕೆಯ ಕನಸುಗಳೇನಿತ್ತು, ಎಸೆಸ್ಸೆಲ್ಸಿ ನಂತರ ಆಕೆ ವೈದ್ಯೆಯಾಗುವ ಹಂಬಲ ಹೊಂದಿದ್ದಳೇ, ಅದನ್ನು ಆಕೆ  ಯಾರೊಂದಿಗೆ ತೋಡಿಕೊಂಡಿದ್ದಳು, ಆಕೆಗೆ ಕಲಿಸಿದ ಶಿಕ್ಷಕರ ಅಭಿಪ್ರಾಯವೇನು, ಗೆಳತಿಯರು ಏನು ಹೇಳುತ್ತಾರೆ, ಪರೀಕ್ಷೆಯಲ್ಲಿ  ತೇರ್ಗಡೆಯಾದ ವಿಷಯವನ್ನು ಹಂಚುವುದಕ್ಕಾಗಿ ತಂದ ಲಾಡು ಹಾಗೆಯೇ ಅನಾಥವಾಗಿ ಬಿದ್ದಿದೆಯಾ... ಎಂಬಿತ್ಯಾದಿ ತನಿಖಾ ವರದಿಗಾರಿಕೆ  ಮಾಡಿ ಕ್ರೌರ್ಯವನ್ನು ಜೀವಂತವಾಗಿ ಇಡಬೇಕಿದ್ದ ಮಾಧ್ಯಮಗಳು ಸಂಪೂರ್ಣ ಮೌನವಾಗಿವೆ. ಮಾತ್ರವಲ್ಲ, ಒಂದು ಸಾಮಾನ್ಯ ಕ್ರಿಮಿನಲ್ ಕೃತ್ಯ  ಎಂಬ ಭಾವದಿಂದ ಈ ಕ್ರೌರ್ಯ ಮೇಲೆದ್ದೇ  ಇಲ್ಲ. ರಾಜಕಾರಣಿಗಳಿಗೂ ಸೆಲೆಬ್ರಿಟಿಗಳಿಗೂ ಮತ್ತು ಮಾಧ್ಯಮ ಮಂದಿಗೂ ಇದೊಂದು  ಚರ್ಚಿಸಬೇಕಾದ ಮತ್ತು ಪ್ರಶ್ನಿಸಬೇಕಾದ ಕೃತ್ಯ ಎಂದು ಅನಿಸಿಯೇ ಇಲ್ಲ. ನಿಜವಾಗಿ,

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಆಕ್ರೋಶದ ಹಿಂದೆ ಹತ್ಯೆಗಿಂತ ಹತ್ಯೆ ಮಾಡಿದವನ ಧರ್ಮವೇ ಕಾರಣವಾಗಿತ್ತು ಎಂಬುದನ್ನು ಇವೆಲ್ಲ  ಸಾಬೀತುಪಡಿಸುತ್ತದೆ. ಸಮಾಜದ ಮನಸ್ಥಿತಿ ಇಷ್ಟೊಂದು ಗಬ್ಬೆದ್ದು ಹೋಗಲು ಕಾರಣ ಏನು? ಹತ್ಯೆಯನ್ನು ಖಂಡಿಸುವುದಕ್ಕಿಂತ  ಮೊದಲು  ಹತ್ಯೆಗೈದವನ ಧರ್ಮ ನೋಡುವಂಥ ಹೀನಾಯ ಮತ್ತು ಕಡು ಕೆಟ್ಟ ಮನಸ್ಸನ್ನು ನಾವೇಕೆ ಹೊಂದಿದ್ದೇವೆ? ನಾವು ಕಳಕೊಂಡದ್ದು ಇಬ್ಬರು  ಹೆಣ್ಣು ಮಕ್ಕಳನ್ನು. ಇವರಿಗೆ ಬದುಕುವ ಪೂರ್ಣ ಹಕ್ಕನ್ನು ಖಾತರಿಪಡಿಸಬೇಕಿದ್ದುದು ಇಲ್ಲಿನ ವ್ಯವಸ್ಥೆ. ಸಮಾಜ ಪ್ರಶ್ನಿಸಬೇಕಾದದ್ದು ಮತ್ತು  ಪ್ರತಿಭಟಿಸಬೇಕಾದದ್ದು ಈ ಖಾತರಿಯಲ್ಲಿ ಲೋಪವಾಗಿರುವುದನ್ನು. ಆದರೆ, ಈ ವಿವೇಕವನ್ನು ಪ್ರದರ್ಶಿಸುವ ಬದಲು ಧರ್ಮವನ್ನು ನೋಡಿ  ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣ ಯಾಕೆ ನಿರ್ಮಾಣವಾಯಿತು? ರಾಜಕಾರಣಿಗಳ ಅಧಿಕಾರ ದಾಹದ ದಾಳವಾಗಿ  ನಾಗರಿಕ ಸಮಾಜ ಯಾಕೆ ಮಾರ್ಪಾಟಾಗಿದೆ? ನೇಹಾಳ ಹತ್ಯೆಯನ್ನು ತನಿಖಿಸುವುದಕ್ಕೆ ತ್ವರಿತಗತಿ ನ್ಯಾಯಾಲಯದ ಸ್ಥಾಪನೆಯಾಗುವುದಾದರೆ  ಅಂಥದ್ದೇ ನ್ಯಾಯ ಮೀನಾಳಿಗೂ ಸಿಗಬೇಡವೇ? ಫಯಾಝï‌ನನ್ನು ಗಲ್ಲಿಗೇರಿಸಲು ಸಮಾಜ ತೋರಿದ ಉತ್ಸಾಹವನ್ನು ಓಂಕಾರಪ್ಪನ  ವಿಷಯದಲ್ಲೂ ತೋರಬೇಡವೇ?

ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ಅಂತಿಮವಾಗಿ ರಾಜಕೀಯ ಅಧಿಕಾರದಾಹಿಗಳಿಗೆ ಲಾಭವಾಗಬಹುದೇ ಹೊರತು  ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವುದಕ್ಕೆ ಅದು ಯಾವ ಕೊಡುಗೆಯನ್ನೂ ನೀಡದು. ಹೆಣ್ಣು ಮಕ್ಕಳ ಪ್ರಾಣಕ್ಕೂ ಮಾನಕ್ಕೂ ಈ ವಿಭಜನೆಯಿಂದ ಯಾವ ರಕ್ಷಣೆಯನ್ನೂ ನೀಡಲಾಗದು. 

No comments:

Post a Comment