ಸನ್ಮಾರ್ಗಕ್ಕೆ 46 ವರ್ಷಗಳು ತುಂಬಿವೆ. 47ನೇ ವರ್ಷದ ಈ ಮೊದಲ ಸಂಚಿಕೆಯನ್ನು ಓದುವವರಲ್ಲಿ 1978 ಎಪ್ರಿಲ್ 23ರ ಚೊಚ್ಚಲ ಸಂಚಿಕೆಯನ್ನು ಓದಿದವರೂ ಇರಬಹುದು. ಅವರ ಭಾವನೆಗಳು ಏನಿರಬಹುದು ಅನ್ನುವ ಕುತೂಹಲ ಈಗಿನದು. ಯಾಕೆಂದರೆ,
46 ವರ್ಷಗಳ ಹಿಂದೆ ಪತ್ರಿಕೆಯೊಂದನ್ನು ಪ್ರಾರಂಭಿಸುವುದೇ ಬಹುದೊಡ್ಡ ಸಾಹಸದ ಕೆಲಸವಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದಿದ್ದ, ಅದರಲ್ಲೂ ಮುಸ್ಲಿಮ್ ಸಮುದಾಯವಂತೂ ಇನ್ನಷ್ಟು ಪ್ರಪಾತದಲ್ಲಿದ್ದ ಕಾಲ. ಅಕ್ಷರ ಬಲ್ಲವರೂ ಪತ್ರಿಕೆಯನ್ನು ಖರೀದಿಸಿ ಓದುವ ಉಮೇದು ತೋರದಿದ್ದ ಕಾಲ ಅದು. ಹಾಗಾದರೆ, ಇಂಥ ಸ್ಥಿತಿಯಲ್ಲಿ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸುವ ಸಾಹಸಕ್ಕೆ ಯಾಕೆ ಕೈ ಹಾಕಲಾಯಿತು ಎಂಬ ಪ್ರಶ್ನೆ ಸಹಜವಾದುದು. ಸನ್ಮಾರ್ಗ ಆ ಕಾಲದ ಅಗತ್ಯವಾಗಿತ್ತು. ಮುಖ್ಯ ವಾಹಿನಿಯ ಕನ್ನಡ ದಿನಪತ್ರಿಕೆಗಳು ಮತ್ತು ಕೆಲವೊಂದು ಸಾಪ್ತಾಹಿಕಗಳು ಸುದ್ದಿ ಮತ್ತು ವಿಶ್ಲೇಷಣೆಯ ಹೆಸರಲ್ಲಿ ತೀರಾ ಏಕಮುಖವಾದ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದುವು. ಮುಖ್ಯವಾಗಿ, ಇಸ್ಲಾಮ್‌ಗೆ ಸಂಬಂಧಿಸಿ ಅವು ಪ್ರಕಟಿಸುತ್ತಿದ್ದ ಸುದ್ದಿಗಳಲ್ಲಿ ಸತ್ಯವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು. ಮುಸ್ಲಿಮರ ವಿರುದ್ಧ ಮತ್ತು ಇಸ್ಲಾಮ್ ವಿರುದ್ಧ ಬಹುಸಂಖ್ಯಾತರ ಭಾವನೆಗಳನ್ನು ಬಡಿದೆಬ್ಬಿಸಿ ಎತ್ತಿಕಟ್ಟುವ ಪ್ರಯತ್ನಗಳನ್ನು ನಿರ್ದಿಷ್ಟ ಪತ್ರಿಕೆಗಳು ಯೋಜಿತವಾಗಿ ಮಾಡುತ್ತಿದ್ದುವು. ಯಾವುದೋ ಘಟನೆಯನ್ನು ಎತ್ತಿಕೊಂಡು ಮುಸ್ಲಿಮ್ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಮಾಮೂಲು ಎಂಬಂತಾಗಿತ್ತು. ಭಾರತವನ್ನಾಳಿದ ವಿವಿಧ ಮುಸ್ಲಿಮ್ ದೊರೆಗಳನ್ನು ನೆಪ ಮಾಡಿಕೊಂಡು ಭಾರತೀಯ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬುದ್ಧಿವಂತಿಕೆಯ ಬರಹಗಳೂ ಪ್ರಕಟವಾಗುತ್ತಿದ್ದುವು. ಇವನ್ನು ಪ್ರತಿಭಟಿಸಿ ಪ್ರತಿಕ್ರಿಯಿಸಿದರೆ ಅವು ಪ್ರಕಟಣೆಯ ಭಾಗ್ಯ ವನ್ನೂ ಕಾಣುತ್ತಿರಲಿಲ್ಲ. ‘ಆನೆ ನಡೆದದ್ದೇ ದಾರಿ’ ಎಂಬ ರೀತಿಯಲ್ಲಿ ನಡಕೊಳ್ಳುತ್ತಿದ್ದ ಈ ಪತ್ರಿಕೆಗಳ ಬಣ್ಣ ಬಯಲುಗೊಳಿಸುವ ಮತ್ತು ಸಾರ್ವಜನಿಕರಿಗೆ ಸತ್ಯ ಮಾಹಿತಿಯನ್ನು ತಿಳಿಸುವ ಜರೂರತ್ತು ಆಗಿನ ಕಾಲದಲ್ಲಿ ಬಹಳವೇ ಇತ್ತು. ಹಾಗೆಯೇ,
ಮುಸ್ಲಿಮ್ ಸಮುದಾಯಲ್ಲಿ ಬರಹಗಾರರನ್ನು ತಯಾರಿಸುವ ಅಗತ್ಯವೂ ಇತ್ತು. ಜೊತೆಗೇ, ಇಸ್ಲಾಮಿನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ನೀಗಿಸುವ ಹಾಗೂ ಸಮಾಜಕ್ಕೆ ಇಸ್ಲಾಮ್‌ನ ಸಮಗ್ರ ಪರಿಚಯ ಮಾಡಿಸುವ ಅನಿವಾರ್ಯತೆಯೂ ಇತ್ತು. ಈ ಎಲ್ಲವನ್ನೂ ಮನಗಂಡು 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಹಾಗಂತ,
ಸ್ಥಾಪಕ ಸಂಪಾದಕ ಇಬ್ರಾಹೀಮ್ ಸಈದ್‌ರಿಂದ ಹಿಡಿದು ನೂರ್ ಮುಹಮ್ಮದ್, ಸಾದುಲ್ಲಾ, ಕೆ.ಎಂ. ಶರೀಫ್ ಮತ್ತು ಇನ್ನಿತರ ಕನಸುಗಾರ ಯುವಕರಲ್ಲಿ ಬತ್ತದ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಬಿಟ್ಟರೆ ಇನ್ನಾವ ಪತ್ರಿಕಾ ಅನುಭವವೂ ಇರಲಿಲ್ಲ. ಕನ್ನಡ, ಉರ್ದು, ಇಂಗ್ಲಿಷ್, ಮಲಯಾಳಂ, ಅರಬಿ, ಹಿಂದಿ ಭಾಷೆ ತಿಳಿದಿದ್ದ ಈ ತಂಡ ಸನ್ಮಾರ್ಗ ಪತ್ರಿಕೆಯನ್ನು ಕಟ್ಟುವ ಕೆಲಸದಲ್ಲಿ ತೊಡಗಿದಾಗ ಕರಾವಳಿಯಲ್ಲಿ ಅದಾಗಲೇ ಇಂಥ ಒಂದೆರಡು ಪತ್ರಿಕೆಗಳು ಹುಟ್ಟಿ ತೆವಲುತ್ತಿದ್ದುವು. ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಬಲ್ಲ ಯಾರೂ ಇನ್ನೊಂದು ಪತ್ರಿಕೆಯನ್ನು ಆರಂಭಿಸುವ ಸಾಹಸ ಮಾಡಲಾರರು ಎಂಬಷ್ಟು ಅವು ದಯನೀಯ ಸ್ಥಿತಿಯಲ್ಲಿದ್ದುವು. ಬುದ್ಧಿವಂತರಾದ ಯಾರೂ ಕೂಡಾ ಪತ್ರಿಕೆಗೆ ಬಂಡವಾಳ ಹೂಡಲಾರರು ಎಂಬ ವಾತಾವರಣ ಎಷ್ಟು ಸಹಜವಾಗಿತ್ತೆಂದರೆ, ಅದನ್ನು ತಿರಸ್ಕರಿಸಿ ವಾದ ಮಂಡಿಸುವುದಕ್ಕೆ ಪೂರಕವಾದ ಏನೂ ಇರಲಿಲ್ಲ. ಅಲ್ಲದೇ,
ಇಬ್ರಾಹೀಮ್ ಸಈದ್ ಮತ್ತು ಅವರ ಬೆಂಬಲಿಗ ತಂಡದಲ್ಲಿ ಉತ್ಸಾಹ ಇತ್ತೇ ಹೊರತು ಆರ್ಥಿಕವಾಗಿ ಯಾವ ಶಕ್ತಿಯೂ ಇರಲಿಲ್ಲ. ಒಂದೈದು ವರ್ಷಗಳ ವರೆಗೆ ಪತ್ರಿಕೆಯನ್ನು ಆರ್ಥಿಕವಾಗಿ ತಾಳಿಕೊಳ್ಳಬಲ್ಲಷ್ಟು ಬಂಡವಾಳ ಸಿದ್ಧಪಡಿಸಿಕೊಂಡೂ ಇರಲಿಲ್ಲ. ಈ ಎಲ್ಲ ‘ಇಲ್ಲ’ಗಳ ನಡುವೆಯೂ ಈ ತಂಡ ಪತ್ರಿಕೆಯನ್ನು ಪ್ರಾರಂಭಿಸುವ ಧೈರ್ಯ ತೋರಿರುವುದಕ್ಕೆ ‘ಸತ್ಯವನ್ನು ಹೇಳಲೇಬೇಕು ಮತ್ತು ಸುಳ್ಳಿನ ಬಣ್ಣ ಬಯಲುಗೊಳಿಸಲೇ ಬೇಕು’ ಎಂಬ ಹಠವೊಂದೇ ಕಾರಣವಾಗಿತ್ತು. ‘ಎಷ್ಟು ವರ್ಷ ಈ ಪತ್ರಿಕೆ ಉಳಿಯುತ್ತದೆ ಎಂದಲ್ಲ, ಉಳಿದಷ್ಟು ವರ್ಷ ಈ ಪತ್ರಿಕೆ ಏನನ್ನು ಮಾಡಿದೆ ಎಂಬುದೇ ಮುಖ್ಯ...’ ಅನ್ನುವ ನಿಲುವು ಪತ್ರಿಕೆಯದ್ದಾಗಿತ್ತು. ಹೀಗೆ ಪ್ರಾರಂಭವಾದ ಪತ್ರಿಕೆ ಹತ್ತು-ಹಲವು ಸವಾಲುಗಳನ್ನು ಎದುರಿಸಿಯೂ 46 ವರ್ಷಗಳನ್ನು ಪೂರೈಸಿದೆ. ಮಾತ್ರವಲ್ಲ, ಈ ಪತ್ರಿಕೆಯ ಮೊದಲು ಮತ್ತು ನಂತರ ಹುಟ್ಟಿಕೊಂಡ ಅನೇಕ ಪತ್ರಿಕೆಗಳ ಸಾವಿಗೂ ಸನ್ಮಾರ್ಗ ಸಾಕ್ಷಿಯಾಗಿದೆ. ಆದರೆ, ಓದುಗರು ಈವರೆಗೂ ಸನ್ಮಾರ್ಗವನ್ನು ಉಳಿಸಿ ಬೆಳೆಸಿದ್ದಾರೆ. ಆರ್ಥಿಕವಾಗಿ ನೆರವಾಗಿದ್ದಾರೆ. ಓದುಗರು ಮತ್ತು ಹಿತೈಷಿಗಳೇ ಸನ್ಮಾರ್ಗದ ಶಕ್ತಿ ಎಂಬುದಕ್ಕೆ ಈ 46 ವರ್ಷಗಳೇ ಅತೀ ಪ್ರಮುಖ ಸಾಕ್ಷಿ.
ಕಳೆದ 46 ವರ್ಷಗಳ ಜರ್ನಿಯನ್ನು ಪರಿಶೀಲಿಸಿದರೆ, ಸನ್ಮಾರ್ಗ ಹೆಮ್ಮೆಪಟ್ಟುಕೊಳ್ಳುವುದಕ್ಕೆ ಹತ್ತು-ಹಲವು ಕಾರಣಗಳಿವೆ. ಮುಸ್ಲಿಮ್ ಸಮುದಾಯದಲ್ಲಿ ಅಕ್ಷರ ಪ್ರೀತಿಯನ್ನು ಹುಟ್ಟಿಸಿದ ಶ್ರೇಯಸ್ಸು ಸನ್ಮಾರ್ಗಕ್ಕೆ ಸಲ್ಲಬೇಕು. ಮುಸ್ಲಿಮ್ ಸಮುದಾಯದ ಬರಹಗಾರರನ್ನು ಸಂಪಾದಕರ ಪತ್ರ ವಿಭಾಗಕ್ಕೆ ಸೀಮಿತಗೊಳಿಸಿದ್ದ ಮುಖ್ಯವಾಹಿನಿಯ ಪತ್ರಿಕೆಗಳು ಬೆರಗುಗೊಳ್ಳುವಂತೆ ಸಮುದಾಯದಲ್ಲಿ ಬರಹಗಾರರನ್ನು, ಜರ್ನಲಿಸ್ಟ್ಗಳನ್ನು ಮತ್ತು ಸಾಹಿತಿಗಳನ್ನು ತಯಾರಿಸಿದ ಹೆಗ್ಗಳಿಕೆಯೂ ಸನ್ಮಾರ್ಗದ್ದು. ಮಹಿಳಾ ಬರಹಗಾರರನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಕೀರ್ತಿಯೂ ಸ ನ್ಮಾರ್ಗದ್ದೇ. ಮಹಿಳಾ ಬರಹಗಾರರನ್ನು ಪ್ರತಿವಾರ ತನ್ನ ಪುಟದಲ್ಲಿಟ್ಟು ಗೌರವಿಸಿದ ಸನ್ಮಾರ್ಗವು ಅಂತಿಮವಾಗಿ ‘ಅನುಪಮ’ ಎಂಬ ಮಹಿಳಾ ಮಾಸಿಕದ ಪ್ರಾರಂಭಕ್ಕೂ ನೇತೃತ್ವ ನೀಡಿತು. ಸಂಪಾದಕರಿಂದ ಹಿಡಿದು ಸಂಪಾದಕೀಯ ಬಳಗದ ವರೆಗೆ ಪ್ರತಿಯೊಂದನ್ನೂ ಮಹಿಳೆಯರೇ ನಿರ್ವಹಿಸುತ್ತಿರುವ ಈ ಪತ್ರಿಕೆಯ ಯಶಸ್ಸು ಕನ್ನಡ ಪತ್ರಿಕಾ ರಂಗದಲ್ಲೇ ವಿಶಿಷ್ಟ ಪ್ರಯೋಗ. 2 ದಶಕಗಳನ್ನು ದಾಟಿ ಅನುಪಮ ಮುಂದುವರಿಯುತ್ತಿರುವಾಗಲೇ, 2019ರಲ್ಲಿ ಸನ್ಮಾರ್ಗ ಇನ್ನೂ ಒಂದು ಸಾಹಸಕ್ಕೆ ಕೈ ಹಾಕಿತು. ಇಂಟರ್‌ನೆಟ್ ಯುಗದ ಬೇಡಿಕೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸನ್ಮಾರ್ಗ ನ್ಯೂಸ್‌ಪೋರ್ಟಲನ್ನು ಆರಂಭಿಸಿತು. ಸುಳ್ಳು ಸುದ್ದಿಗಳೇ ಪಾರಮ್ಯ ಸಾಧಿಸಿರುವ ಡಿಜಿಟಲ್ ಲೋಕದಲ್ಲಿ ‘ಸತ್ಯ ಸುದ್ದಿ’ಯನ್ನು ತಲುಪಿಸುವ ಗುರಿ ಇದರ ಹಿಂದಿತ್ತು. ಇದರ ಬೆನ್ನಿಗೇ 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಟಿ.ವಿ. ಚಾ ನೆಲ್‌ಗಳು ಮಂಕಾಗುತ್ತಿರುವ ಮತ್ತು ಡಿಜಿಟಲ್ ಚಾನೆಲ್‌ಗಳೇ ಜನರ ಪಾಲಿಗೆ ಅಚ್ಚುಮೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲ್ ತೀರಾ ಸಣ್ಣ ಅವಧಿಯಲ್ಲೇ ಭಾರೀ ಜನಪ್ರೀತಿಗೂ ಒಳಗಾಗಿದೆ. ಲಕ್ಷವನ್ನೂ ದಾಟಿದ ಚಂದಾದಾರರು ಮತ್ತು ರಾಜ್ಯದಾದ್ಯಂತದಿಂದ ಜನರು ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಹಾಗೂ ಬೆಂಬಲಗಳೇ ಈ ಚಾನೆಲ್ ಕಾಲದ ಅಗತ್ಯವಾಗಿತ್ತು ಅನ್ನುವುದನ್ನು ಹೇಳುತ್ತದೆ. ಹಾಗಂತ,
ಎಲ್ಲವೂ ಸರಾಗವಾಗಿದೆ ಎಂದಲ್ಲ. ಸನ್ಮಾರ್ಗ ಪತ್ರಿಕೆ, ಅನುಪಮ ಪತ್ರಿಕೆ, ಸನ್ಮಾರ್ಗ ವೆಬ್ ಪೋರ್ಟಲ್ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್- ಇವೆಲ್ಲವನ್ನೂ ನಿರ್ವಹಿಸುವುದಕ್ಕೆ ಅಪಾರ ಹಣಕಾಸಿನ ಅಗತ್ಯ ಇದೆ. ಸಿಬಂದಿಗಳು, ಅವರ ವೇತನ, ಪತ್ರಿಕೆಯ ಮುದ್ರಣ ವೆಚ್ಚ, ಸಾಗಾಟದ ವೆಚ್ಚ, ಚಾನೆಲ್‌ಗೆ ಬೇಕಾದ ಉಪಕರಣಗಳು.. ಇತ್ಯಾದಿಗಳನ್ನೆಲ್ಲ ಭರಿಸುವುದು ಸುಲಭ ಅಲ್ಲ. ಪ್ರತಿ ತಿಂಗಳು ಇವುಗಳಿಗೆಂದೇ ಬಹುದೊಡ್ಡ ಮೊತ್ತವನ್ನು ಎತ್ತಿ ಇಡಬೇಕಾಗುತ್ತದೆ. ಕೇವಲ ಪತ್ರಿಕೆಯ ಚಂದಾದಾರಿಕೆಯಿಂದ ಈ ಎಲ್ಲ ವೆಚ್ಚಗಳನ್ನು ಸರಿದೂಗಿಸುವುದಕ್ಕೆ ಸಾಧ್ಯವೂ ಇಲ್ಲ. ಅಲ್ಲದೇ, ಜಾಹೀರಾತುಗಳನ್ನು ಅಳೆದೂ ತೂಗಿ ಸ್ವೀಕರಿಸುವ ನಿಯಮವನ್ನು ಸನ್ಮಾರ್ಗ ತನಗೆ ತಾನೇ ವಿಧಿಸಿಕೊಂಡಿದೆ. ಮದ್ಯ, ಬ್ಯಾಂಕ್, ಜೂಜು, ಜ್ಯೋತಿಷ್ಯ, ಸಿನಿಮಾ ಇತ್ಯಾದಿ ಇತ್ಯಾದಿ ಜಾಹೀರಾತುಗಳನ್ನು ಸನ್ಮಾರ್ಗ ಪ್ರಕಟಿಸುವುದೂ ಇಲ್ಲ. ಹೆಚ್ಚಿನ ಜಾಹೀರಾತುಗಳು ಒಂದಲ್ಲ ಒಂದು ರೀತಿಯಲ್ಲಿ ‘ಪ್ರಕಟಿಸಬಾರದ ಕೆಟಗರಿಯಲ್ಲೇ ’ ಇರುತ್ತವಾದ್ದರಿಂದ ಜಾಹೀರಾತುಗಳ ಮೂಲಕ ಆದಾಯ ಗಳಿಸುವ ಅವಕಾಶಗಳೂ ಕಡಿಮೆ. ಆದ್ದರಿಂದ, ಸನ್ಮಾರ್ಗ ದಾನಿಗಳನ್ನೇ ಅವಲಂಬಿಸಿದೆ. ಅಂದಹಾಗೆ,
ಸನ್ಮಾರ್ಗದ ಪಾಲಿಗೆ ಓದುಗರು ಮತ್ತು ಹಿತೈಷಿಗಳ ದೊಡ್ಡದೊಂದು ಅಭಿಮಾನಿ ಬಳಗವಿದೆ. ಈ ಅಭಿಮಾನಿಗಳೇ ಸನ್ಮಾರ್ಗದ ಪಾಲಿಗೆ ಆಮ್ಲಜನಕ. ಸನ್ಮಾರ್ಗ ಈ ವರೆಗೆ ಉಳಿದಿರುವುದು ಮತ್ತು ಕಾಲದ ಅಗತ್ಯಕ್ಕೆ ಅನುಸಾರವಾಗಿ ಅನುಪಮ, ವೆಬ್ ಪೋರ್ಟಲ್ ಮತ್ತು ನ್ಯೂಸ್ ಚಾನೆಲ್ ಆರಂಭಿಸಿರುವುದೆಲ್ಲ ಅಲ್ಲಾಹನ ಅನುಗ್ರಹ ಮತ್ತು ಈ ಅಭಿಮಾನಿ ಬಳಗದ ಆರ್ಥಿಕ ಬೆಂಬಲ, ಪ್ರೋತ್ಸಾಹದಿಂದಾಗಿದೆ. ಈ ಬೆಂಬಲ ಇನ್ನು ಮುಂದಕ್ಕೂ ಸದಾ ಇರಲಿ ಎಂದು ಸನ್ಮಾರ್ಗ ಬಯಸುತ್ತದೆ. ಮಾತ್ರವಲ್ಲ, ಸನ್ಮಾರ್ಗ ಎಂಬ ಮಾಧ್ಯಮ ಪ್ಯಾಕೇಜನ್ನು ಇನ್ನಷ್ಟು ಪ್ರಬಲವಾಗಿ ಕಟ್ಟುವುದಕ್ಕೆ ಆರ್ಥಿಕವಾಗಿ ಸದಾ ನೆರವಾಗುತ್ತಲಿರಿ ಎಂದು ವಿನಂತಿಸುತ್ತದೆ.
No comments:
Post a Comment