ಸನ್ಮಾರ್ಗ ಸಂಪಾದಕೀಯ
ಬಹುಸಂಖ್ಯಾತರ ಭಾವನೆಯನ್ನು ಕೆರಳಿಸಿ ಧರ್ಮಧ್ರುವೀಕರಣ ನಡೆಸಬಯಸಿದವರನ್ನು ಹುಬ್ಬಳ್ಳಿಯ ಮುಸ್ಲಿಮರು ಗಾಢ ನಿರಾಶೆಗೆ ತಳ್ಳಿದ್ದಾರೆ. ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿ ಹುಬ್ಬಳ್ಳಿಯ ಮುಸ್ಲಿಮ್ ಸಂಘಟನೆಗಳು ಮತ್ತು ನಾಗರಿಕರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧ ಮತ್ತು ಮಾದರಿಯೋಗ್ಯ. ಘಟನೆ ನಡೆದ ಬೆನ್ನಿಗೇ ಅಲ್ಲಿನ ಅಂಜುಮನೆ ಇಸ್ಲಾಮ್ ಎಂಬ ಪ್ರಭಾವಿ ಸಂಘಟನೆಯ ವಿವಿಧ ಶಾಖೆಯ ಅಧ್ಯಕ್ಷರುಗಳ ನಿಯೋಗ ಜಿಲ್ಲಾ ಪೊಲೀಸ್ ಕಮೀಶನರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತು. ಹತ್ಯೆಯನ್ನು ಖಂಡಿಸಿ ಶುಕ್ರವಾರದ ಜುಮಾ ನಮಾಝïನ ಬಳಿಕ ಮುಸ್ಲಿಮರು ಸವದತ್ತಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದರು. ಫಯಾಝïನ ತಂದೆ ಮತ್ತು ತಾಯಿಯೇ ಮಗನಿಂದ ಅಂತರ ಕಾಯ್ದುಕೊಂಡರು. ಆತನಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು. ಮಾತ್ರವಲ್ಲ, ಧಾರವಾಡ ಬಂದ್‌ಗೂ ಮುಸ್ಲಿಮ್ ಸಮುದಾಯ ಕರೆಕೊಟ್ಟಿತು. ಈ ಕ್ಷಿಪ್ರ ಬೆಳವಣಿಗೆಯಿಂದಾಗಿ ಆರೋಪಿ ಫಯಾಝïನನ್ನು ಎತ್ತಿಕೊಂಡು ಆ ಕ್ರೌರ್ಯವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಲು ಸಂಚು ಹೆಣೆದವರು ನಿರುತ್ತರರಾದರು. ಅಂದಹಾಗೆ,
ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಕೆಲವು ಪ್ರಶ್ನೆಗಳನ್ನೂ ಎತ್ತುತ್ತದೆ.
‘ವ್ಯಕ್ತಿಯ ತಪ್ಪಿಗೆ ಮುಸ್ಲಿಮ್ ಸಮುದಾಯ ಈ ಬಗೆಯಲ್ಲಿ ಪ್ರತಿಕ್ರಿಯಿಸುವ ಅಗತ್ಯ ಏನಿದೆ? ಅದೊಂದು ಕ್ರಿಮಿನಲ್ ಕೃತ್ಯ. ಕ್ರಿಮಿನಲ್‌ಗೆ ಧರ್ಮವೇ ಇರುವುದಿಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯ ಬೀದಿಗಿಳಿದು ಪ್ರತಿಕ್ರಿಯಿಸಬೇಕಾದ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದಲ್ಲಿ ಅಪರಾಧಿ ಭಾವ ಸೃಷ್ಟಿಯಾಗಿದೆಯೇ? ಪ್ರಜಾತಂತ್ರ ಭಾರತದಲ್ಲಿ ವ್ಯಕ್ತಿಯ ನಿಯಂತ್ರಣ ಸಮುದಾಯದ ಕೈಯಲ್ಲಿಲ್ಲ. ವ್ಯಕ್ತಿಯನ್ನು ಶಿಕ್ಷಿಸುವ ಅಧಿಕಾರವೂ ಸಮುದಾಯಕ್ಕಿಲ್ಲ. ಅದನ್ನು ನೋಡಿಕೊಳ್ಳಬೇಕಾದುದು ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ. ಹೀಗಿರುತ್ತಾ, ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಏನನ್ನು ಸೂಚಿಸುತ್ತದೆ? ಈ ಪ್ರಕರಣಕ್ಕಿಂತ ಒಂದು ದಿನ ಮೊದಲು ಪ್ರದೀಪ್ ಎಂಬವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರು. ರುಕ್ಸಾನ ಎಂಬ 21 ವರ್ಷದ ಯುವತಿಯನ್ನು ಪ್ರೀತಿಸಿ, ಆಕೆಯ ಮಗುವಿಗೆ ತಂದೆಯೂ ಆಗಿದ್ದ ಈತ ಮಾರ್ಚ್ 31ರಂದು ಆಕೆಯನ್ನು ಸುಟ್ಟು ಹಾಕಿದ್ದ. ಆಕೆಯ ಮಗುವನ್ನು ತಳ್ಳುಗಾಡಿಯಲ್ಲಿ ಬಿಟ್ಟು ಪರಾರಿಯಾಗಿದ್ದ. ಮಾತ್ರವಲ್ಲ, ತನಗೆ ಅದಾಗಲೇ ಮದುವೆಯಾಗಿರುವುದನ್ನು ರುಕ್ಸಾನಳಿಂದ ಅಡಗಿಸಿಯೂ ಇಟ್ಟಿದ್ದ. ಆದರೆ, ಆತನ ಅಪರಾಧವನ್ನು ಹಿಂದೂ ಸಮುದಾಯ ವಹಿಸಿಕೊಳ್ಳಲಿಲ್ಲ. ಪ್ರತಿಭಟನೆಯಾಗಲಿ, ರ‍್ಯಾಲಿಯಾಗಲಿ ಅಥವಾ ಬಂದ್‌ಗಾಗಲಿ ಕರೆಯನ್ನೂ ಕೊಡಲಿಲ್ಲ. ಅದೊಂದು ಮಾಮೂಲಿ ಕ್ರಿಮಿನಲ್ ಪ್ರಕರಣವಾಗಿ ಹತ್ತರಲ್ಲಿ ಹನ್ನೊಂದು ಎಂಬಂತೆ ಕಳೆದು ಹೋಯಿತು. ಇದಕ್ಕಿಂತ 5 ತಿಂಗಳ ಹಿಂದೆ ಉಡುಪಿಯ ನೇಜಾರಿನಲ್ಲಿ ಪ್ರವೀಣ್ ಚೌಗಲೆ ಎಂಬವ ತನ್ನ ಸಹೋದ್ಯೋಗಿ ಸಹಿತ ಮೂವರು ಮಹಿಳೆಯರು ಮತ್ತು ಓರ್ವ ಬಾಲಕನನ್ನು ಇರಿದು ಹತ್ಯೆ ಮಾಡಿದ. ಏಕಮುಖ ಪ್ರೇಮ ಪ್ರಕರಣದಿಂದಾದ ಈ ಕ್ರೌರ್ಯವನ್ನು ಖಂಡಿಸಿ ಹಿಂದೂ ಸಮುದಾಯ ಬೀದಿಗಿಳಿಯಲಿಲ್ಲ. ಬಂದ್‌ಗೆ ಕರೆ ಕೊಡಲಿಲ್ಲ. ರ‍್ಯಾಲಿಯನ್ನೂ ನಡೆಸಲಿಲ್ಲ. ಅದಕ್ಕಿಂತ ಮೊದಲು, ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಗುಜರಾತ್ ಸರಕಾರವೇ ಸನ್ನಡತೆಯ ಆಧಾರದಲ್ಲಿ ಬಿಟ್ಟು ಬಿಟ್ಟಾಗಲೂ ಹಿಂದೂ ಸಮುದಾಯ ಅದನ್ನು ವಹಿಸಿಕೊಳ್ಳಲಿಲ್ಲ. ಅಪರಾಧಿಗಳೆಲ್ಲ ಹಿಂದೂ ಮತ್ತು ಸಂತ್ರಸ್ತೆಯಾದ ಬಿಲ್ಕಿಸ್ ಬಾನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಹಿಂದೂ ಸಮುದಾಯ ಅಪರಾಧಿ ಭಾವದಿಂದ ಪ್ರತಿಕ್ರಿಯಿಸಲಿಲ್ಲ. ಅದು ಕಾನೂನು ವ್ಯವಸ್ಥೆಯ ಭಾಗವೆಂಬಂತೆ ನಡಕೊಂಡಿತು. ಬೌದ್ಧಿಕ ವಲಯದ ವಿರೋಧವನ್ನು ಬಿಟ್ಟರೆ ಪ್ರತಿಭಟನೆಯಾಗಲಿ, ರ‍್ಯಾಲಿಯಾಗಲಿ ನಡೆಯಲೇ ಇಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯವೇಕೆ ವ್ಯಕ್ತಿಯ ಅಪರಾಧವನ್ನು ಸ್ವಯಂ ವಹಿಸಿಕೊಂಡಂತೆ ವರ್ತಿಸುತ್ತಿದೆ? ಕಾನೂನು ನೋಡಿಕೊಳ್ಳಲಿ ಎಂದು ಸಹಜವಾಗಿ ಇದ್ದು ಬಿಡುವುದು ಒಳಿತಲ್ಲವೇ.. ಎಂಬೆಲ್ಲಾ ಪ್ರಶ್ನೆಗಳಿಗೂ ಇಂಥ ಪ್ರತಿಕ್ರಿಯೆಗಳು ಅವಕಾಶವನ್ನು ಒದಗಿಸುತ್ತದೆ. ನಿಜವಾಗಿ,
ಹುಬ್ಬಳ್ಳಿಯದ್ದಾಗಲಿ, ಬೆಂಗಳೂರು, ಗುಜರಾತ್ ಅಥವಾ ಜಮ್ಮುವಿನ ಆಸಿಫಾ ಎಂಬ 8ರ ಹರೆಯದ ಬಾಲೆಯದ್ದಾಗಲಿ ಎಲ್ಲವೂ ಕಾನೂನಿಗೆ ಸಂಬಂಧಿಸಿದ ಸಂಗತಿಗಳೇ ಹೊರತು ಹಿಂದೂ-ಮುಸ್ಲಿಮ್ ವಿಷಯಗಳಲ್ಲ. ಯಾವುದೇ ಅಪರಾಧವೂ ಅಪರಾಧವಾಗಿ ಗುರುತಿಸಿಕೊಳ್ಳಬೇಕೇ ಹೊರತು ಹಿಂದೂ ಅಪರಾಧಿ ಅಥವಾ ಮುಸ್ಲಿಮ್ ಅಪರಾಧಿ ಎಂದು ಗುರುತಿಸಿಕೊಳ್ಳುವುದು ಸಾಮಾಜಿಕ ಸೌಖ್ಯದ ದೃಷ್ಟಿ ಯಿಂದ ಅ ಪಾಯಕಾರಿ. ಅಪರಾಧಕ್ಕೂ ಧರ್ಮಕ್ಕೂ ಹೇಗೆ ಸಂಬಂಧ ಇಲ್ಲವೋ ಹಾಗೆಯೇ ಅಪರಾಧಿಗೂ ಸಮುದಾಯಕ್ಕೂ ಸಂಬಂಧ ಇಲ್ಲ. ಆದ್ದರಿಂದಲೇ, ಯಾವುದೇ ಸಮುದಾಯ ಸಾಧಕರನ್ನು ಸನ್ಮಾನಿಸಿ ಅವರೊಂದಿಗೆ ಗುರುತಿಸಿಕೊಳ್ಳುತ್ತದೆಯೇ ಹೊರತು ಅಪರಾಧಿಯೊಂದಿಗಲ್ಲ. ವಿಷಾದ ಏನೆಂದರೆ,
ಈ ದೇಶದಲ್ಲಿ ಬಹುಸಂಖ್ಯಾತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಡೆಯುತ್ತಿದೆ. ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಬಹು ಸಂಖ್ಯಾತ ಹಿಂದೂಗಳಲ್ಲಿ ಅಭದ್ರತಾ ಭಾವನೆಯನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಈ ಅಭದ್ರತೆಗೆ 20 ಕೋಟಿಯಷ್ಟಿರುವ ಮುಸ್ಲಿಮರೇ ಕಾರಣ ಎಂಬ ಅಪ್ಪಟ ಸುಳ್ಳನ್ನು ಹರಡಲಾಗುತ್ತಿದೆ. ಮುಸ್ಲಿಮ್ ದ್ವೇಷದ ಹತ್ತು ಹಲವು ಸುಳ್ಳುಗಳನ್ನು ಸೋಶಿಯಲ್ ಮೀಡಿಯಾ ಸಹಿತ ಲಭ್ಯವಿರುವ ಎಲ್ಲ ಮಾಧ್ಯಮ ಗಳ ಮೂಲಕ ಹಂಚಲಾಗುತ್ತಿದೆ. ಮುಸ್ಲಿಮರನ್ನು ಕ್ರಿಮಿನಲ್‌ಗಳು, ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸುವವರು, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಗೋಮಾಂಸ ಸೇವಿಸುವವರು, ಹಿಂದೂ ಧರ್ಮವನ್ನು ದ್ವೇಷಿಸುವವರು, ಭಾರತವನ್ನು ಇಸ್ಲಾಮ್ ರಾಷ್ಟ್ರವಾಗಿಸುವ ಸಂಚು ಹೆಣೆಯುತ್ತಿರುವವರು ಎಂಬಲ್ಲಿಂದ ತೊಡಗಿ ಈ ಹಿಂದೆ ಈ ಉಪಭೂಖಂಡವನ್ನು ಆಳಿದ್ದ ಮುಸ್ಲಿಮ್ ದೊರೆ ಗಳ ವರೆಗೆ ಅತ್ಯಂತ ಹೀನಾಯ ಕಟ್ಟುಕತೆಗಳನ್ನು ಹೇಳಲಾಗುತ್ತಿದೆ. ಇವಕ್ಕೆ ಫಯಾಝïನಂಥ ಕ್ರಿಮಿನಲ್‌ಗಳು ನಡೆಸುವ ಕ್ರೌರ್ಯಗಳನ್ನು ಆಧಾರವಾಗಿ ನೀಡಲಾಗುತ್ತಿದೆ. ಒಂದುವೇಳೆ,
ಇದು ಕಾನೂನು ಸಂಬಂಧಿ ವಿಷಯ ಎಂದು ಇಂಥ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯ ಮೌನವಾದರೆ, ಅದನ್ನೇ ಈ ಮಂದಿ ಅಪ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಈ ಮೌನವೇ ಮುಸ್ಲಿಮ್ ಸಮುದಾಯ ಅಪರಾಧಿಯ ಜೊತೆಗಿದೆ ಅನ್ನುವುದಕ್ಕೆ ಪುರಾವೆ ಎಂಬಂತೆ ಪ್ರಚಾರ ನಡೆಸುತ್ತಾರೆ. ಮಾತ್ರ ವಲ್ಲ, ಜನಸಾಮಾನ್ಯರು ಇದನ್ನು ನಂಬಿಬಿಡುವ ಸಂಭವವೂ ಇದೆ. ಇಂಥ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯ ಭಿನ್ನ ನಿಲುವನ್ನು ಸ್ವೀಕರಿಸುವುದೇ ಹೆಚ್ಚು ಯೋಗ್ಯವಾದುದು. ಆದ್ದರಿಂದಲೇ, ಹುಬ್ಬಳ್ಳಿ ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಅತ್ಯಂತ ಸಮಯೋಚಿತ ಮತ್ತು ಪ್ರಬುದ್ಧವಾಗಿ ಕಾಣಿಸುತ್ತದೆ. ಫಯಾಝïನ ಕ್ರೌರ್ಯದ ಹೊಣೆಯನ್ನು ಮುಸ್ಲಿಮ್ ಸಮುದಾಯದ ಮೇಲೆ ಹೊರಿಸಿ ಅಪಪ್ರಚಾರ ಮಾಡುವವರನ್ನು ಹುಬ್ಬಳ್ಳಿ ಮುಸ್ಲಿಮರ ಸಮಯೋಚಿತ ಪ್ರತಿಕ್ರಿಯೆ ಮಣ್ಣುಪಾಲು ಮಾಡಿದೆ. ಒಂದುವೇಳೆ, ಅದೊಂದು ಕ್ರಿಮಿನಲ್ ಕೃತ್ಯ ಮತ್ತು ಅದಕ್ಕೂ ಸಮುದಾಯಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮುಸ್ಲಿಮ್ ಸಮುದಾಯ ಮೌನಕ್ಕೆ ಜಾರಿರುತ್ತಿದ್ದರೆ ಇವತ್ತು ಹುಬ್ಬಳ್ಳಿ ಬಿಡಿ, ಇಡೀ ಕರ್ನಾಟಕವನ್ನೇ ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕೆ ದುಷ್ಟ ಶಕ್ತಿಗಳು ಯಶಸ್ವಿಯಾಗುತ್ತಿದ್ದರು. ನಿಜವಾಗಿ,
ಯಾವುದೇ ಅಪರಾಧ ಕೃತ್ಯವು ಹಿಂದೂ-ಮುಸ್ಲಿಮರಲ್ಲಿ ವಿಭಜನೆಯಾಗುವುದು ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಅಪಾಯಕಾರಿ. ಉಡುಪಿ ನೇಜಾರಿನ ಪ್ರಕರಣಕ್ಕೆ ಹೇಗೆ ಹಿಂದೂ ಸಮುದಾಯ ಹೊಣೆಯಲ್ಲವೋ ಹುಬ್ಬಳ್ಳಿ ಪ್ರಕರಣಕ್ಕೆ ಮುಸ್ಲಿಮ್ ಸಮುದಾಯವೂ ಹೊಣೆಯಲ್ಲ. 140 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಬರೇ 20 ಕೋಟಿಯಷ್ಟಿರುವ ಮುಸ್ಲಿಮ್ ಸಮುದಾಯದಿಂದ ಮಾತ್ರ ಸಂಪೂರ್ಣ ಕಾನೂನುಬದ್ಧ ಮತ್ತು ಶಿಸ್ತಿನ ನಡವಳಿಕೆಯನ್ನು ಬಯಸುವುದು ಅಪ್ರಾಯೋಗಿಕ ಮತ್ತು ಅತಾರ್ಕಿಕ. ಉಳಿದ 120 ಕೋಟಿ ಬೃಹತ್ ಜನಸಂಖ್ಯೆಯುಳ್ಳ ಸಮುದಾಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೇಗೆ ಸಹಜವೋ ಈ 20 ಕೋಟಿ ಜನಸಂಖ್ಯೆಯ ಸಮುದಾಯದಲ್ಲೂ ಅವೆಲ್ಲ ಸಹಜ. ಇವನ್ನು ಈ ದೇಶದ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಮಟ್ಟ ಹಾಕಬೇಕೇ ಹೊರತು ಸಮುದಾಯಗಳಲ್ಲ. ಕಾನೂನಿನೊಂದಿಗೆ ಸಹಕರಿಸುವುದಷ್ಟೇ ನಾಗರಿಕರ ಕರ್ತವ್ಯ. ಸದ್ಯ ಈ ಸತ್ಯವನ್ನು ಮರೆಮಾಚಿ ಒಂದು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ ಸಂಚು ನಡೆಯುತ್ತಿದೆ. ಮುಸ್ಲಿಮ್ ವ್ಯಕ್ತಿಯ ಕ್ರಿಮಿನಲ್ ಕೃತ್ಯವನ್ನು ಹಿಂದೂ ವಿರೋಧಿಯಂತೆ ಬಿಂಬಿಸಲಾಗುತ್ತಿದೆ. ಇದನ್ನು ತಡೆಯಬೇಕಿದ್ದರೆ ಮುಸ್ಲಿಮ್ ಸಮುದಾಯ ಮೌನ ಮರೆತು ಮಾತಾಡಲೇಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹುಬ್ಬಳ್ಳಿ ನಾಗರಿಕರು ಮತ್ತು ಅಂಜುಮನೆ ಇಸ್ಲಾಮ್ ಶ್ಲಾಘನೆಗೆ ಅರ್ಹವೆನಿಸುತ್ತದೆ.
No comments:
Post a Comment