Friday, 21 June 2024

7 ಲಕ್ಷ ಯಹೂದಿಯರನ್ನು ಅವಲಂಬಿಸಿದೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ?


ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತಂತೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆ ಮತ್ತು ಪರಾಮರ್ಶೆಗಳು ನಡೆಯುತ್ತಿವೆ. ಇಸ್ರೇಲ್ ಮತ್ತು  ಫೆಲೆಸ್ತೀನ್ ನಡುವಿನ ಸಂಘರ್ಷವನ್ನು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ದಿನೇ ದಿ ನೇ ಬಲ ಬರುತ್ತಿದೆ. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಅಂಗೀಕರಿಸುವ ರಾಷ್ಟ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಂತೆ  ಐರ್ಲ್ಯಾಂಡ್, ನಾರ್ವೆ ಮತ್ತು ಸ್ಪೈನ್‌ಗಳು ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿವೆ. ಫೆಲೆಸ್ತೀನ್ ಎಂಬ ವಿಶಾಲ ಭೂಭಾಗದಲ್ಲಿ 1948ರಲ್ಲಿ  ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪನೆಯಾಗುವಾಗ ಅದರ ವ್ಯಾಪ್ತಿ ತೀರಾ ಕಿರಿದಾಗಿತ್ತು ಮತ್ತು ಜನಸಂಖ್ಯೆಯೂ ಕಡಿಮೆ ಇತ್ತು. ಆದರೆ ಇವತ್ತು  ಇಡೀ ಫೆಲೆಸ್ತೀನನ್ನು ಇಸ್ರೇಲ್ ಆಳುತ್ತಿದೆ ಮತ್ತು ಜಗತ್ತಿನಾದ್ಯಂತ ಇರುವ ಯಹೂದಿಯರನ್ನು ತನ್ನಲ್ಲಿಗೆ ಕರೆಸಿಕೊಂಡು ಜನಸಂಖ್ಯೆಯನ್ನು ಅ ಪಾರ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದೆ. ನಿಜವಾಗಿ,


ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ರಾಷ್ಟ್ರಗಳ ಪರಿಕಲ್ಪನೆ 1948ರಿಂದ ಆರಂಭವಾದುದಲ್ಲ. ಫೆಲೆಸ್ತೀನನ್ನು ಆಳುತ್ತಿದ್ದ ಬ್ರಿಟಿಷರು  1936ರಲ್ಲೇ  ಈ ಕುರಿತಂತೆ ಲಾರ್ಡ್ ವಿಲಿಯಂ ರಾಬರ್ಟ್ ಪೀಲ್ ಎಂಬವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದ್ದರು. ಆ ಆಯೋಗವು  ಸ್ವತಂತ್ರ ಫೆಲೆಸ್ತೀನ್ ಮತ್ತು ಇಸ್ರೇಲ್ ರಾಷ್ಟ್ರದ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಪಶ್ಚಿಮ ದಂಡೆ, ಗಾಝಾ ಮತ್ತು ಸೆರೇವ್  ಮರುಭೂಮಿಯನ್ನು ಒಳಗೊಂಡ ಫೆಲೆಸ್ತೀನ್ ರಾಷ್ಟ್ರ ನಿರ್ಮಿಸುವುದು ಈ ಪ್ರಸ್ತಾವನೆಯಲ್ಲಿ ಸೇರಿತ್ತು. ಎರಡನೇ ವಿಶ್ವಯುದ್ಧದ ಬಳಿಕ ಫೆಲೆಸ್ತೀನ್  ವಿಷಯದಲ್ಲಿ ವಿಶೇಷ ಆಯೋಗವನ್ನು ವಿಶ್ವಸಂಸ್ಥೆ ರೂಪಿಸಿತು. ಇದೂ ಕೂಡಾ ಫೆಲೆಸ್ತೀನ್ ಭೂಭಾಗವನ್ನು ಎರಡಾಗಿ ವಿಂಗಡಿ ಸುವ ಉದ್ದೇಶವನ್ನೇ ಹೊಂದಿತ್ತು. ಈ ಆಯೋಗದ ಪ್ರಸ್ತಾವನೆಗೆ ಅರಬ್ ರಾಷ್ಟ್ರಗಳಷ್ಟೇ ಅಲ್ಲ, ಭಾರತವೂ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಪ್ರಸ್ತಾವನೆಯ  ಪ್ರಕಾರ ಒಟ್ಟು ಫೆಲೆಸ್ತೀನ್ ಭೂಭಾಗದ 32% ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಬೇಕಿತ್ತು. ಈ ನಡುವೆ 1948 ಮೇ 14ರಂದು  ಏಕಾಏಕಿ ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯಾಯಿತು. ಇದರ ವಿರುದ್ಧ ಅರಬ್ ರಾಷ್ಟ್ರಗಳು ಸಿಡಿದು ನಿಂತವು. 1949ರಲ್ಲಿ ಪ್ರಥಮ  ಇಸ್ರೇಲ್-ಅರಬ್ ಯುದ್ಧ ನಡೆಯಿತು ಮತ್ತು ಅಮೇರಿಕ ಮತ್ತು ಅದರ ಬೆಂಬಲಿಗರ ನೆರವಿನಿಂದ ಇಸ್ರೇಲ್ ಆ ಯುದ್ಧದಲ್ಲಿ ಜಯಶಾಲಿಯಾಯಿತು. ಮಾತ್ರವಲ್ಲ, ವಿಶ್ವಸಂಸ್ಥೆ ಪ್ರಸ್ತಾಪ ಮಾಡಿದ್ದ 32% ಭೂಮಿಯ ಬದಲಾಗಿ ಇನ್ನೂ 22% ಹೆಚ್ಚುವರಿ ಭೂಮಿಯನ್ನು ಅದು ವಶ ಪಡಿಸಿಕೊಂಡಿತು. 1967ರ ಎರಡನೇ ಇಸ್ರೇಲ್-ಅರಬ್ ಯುದ್ಧವಂತೂ ಫೆಲೆಸ್ತೀನ್‌ಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿತು. ಆರು ದಿನಗಳ  ಕಾಲ ನಡೆದ ಈ ಯುದ್ಧದಲ್ಲಿ ಪಶ್ಚಿಮ ದಂಡೆ, ಪಶ್ಚಿಮ ಜೆರುಸಲೇಮ್, ಗಾಝಾ ಪಟ್ಟಿ ಮತ್ತು ಸಿರಿಯದ ವಶದಲ್ಲಿದ್ದ ಗೋಲಾನ್ ಬೆಟ್ಟವನ್ನೂ ವಶಪಡಿಸಿಕೊಂಡು ಇಸ್ರೇಲ್ ವಿಶಾಲ ರಾಷ್ಟ್ರವಾಗಿ ಮಾರ್ಪಟ್ಟಿತು. ಈ ಯುದ್ಧವನ್ನು ಗೆಲ್ಲಿಸಿಕೊಟ್ಟದ್ದೂ ಅಮೇರಿಕ ಮತ್ತು ಅದರ  ಮಿತ್ರ ರಾಷ್ಟ್ರಗಳೇ.

 1993 ಮತ್ತು 1995ರಲ್ಲಿ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಮತ್ತು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್‌ನ ಮುಖ್ಯಸ್ಥ  ಯಾಸಿರ್ ಅರಫಾತ್‌ರ ನಡುವೆ ಐತಿಹಾಸಿಕ ಓಸ್ಲೋ ಒಪ್ಪಂದ ನಡೆಯಿತು. ಎರಡು ಸ್ವತಂತ್ರ ರಾಷ್ಟ್ರಗಳ ಸ್ಥಾಪನೆಯನ್ನು ಅನುಮೋದಿಸಿದ ಒಪ್ಪಂದ ಎಂಬ ನೆಲೆಯಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಲಭಿಸಿತು. ದುರಂತ ಏನೆಂದರೆ,

ಈ ಒಪ್ಪಂದವನ್ನು ಪ್ರಬಲವಾಗಿ ವಿರೋಧಿಸಿದ್ದು ಯಹೂದಿ ಉಗ್ರವಾದಿಗಳು. ಈ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಿ ಇಝಾಕ್ ರಬಿನ್‌ರನ್ನು  1995ರಲ್ಲಿ ಈ ಉಗ್ರವಾದಿಗಳು ಹತ್ಯೆ ಮಾಡಿದರು. ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಅವರ ಲೇಬರ್ ಪಾರ್ಟಿಯನ್ನು ಇಸ್ರೇಲಿನ  ಮತದಾರರು ಸೋಲಿಸಿದರಲ್ಲದೇ ಬಲಪಂಥೀಯ ತೀವ್ರವಾದಿ ನಿಲುವಿನ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಗೆಲ್ಲಿಸಿದರು.  ಆದರೆ, ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದ ಯಾಸಿರ್ ಅರಫಾತ್‌ರ ಬಗ್ಗೆ ಫೆಲೆಸ್ತೀನ್‌ನಲ್ಲಿ ವಿರೋಧ ಇತ್ತಾದರೂ ಮತ್ತು ವಿಶೇಷವಾಗಿ ಹಮಾಸ್  ಈ ಒಪ್ಪಂದವನ್ನು ತಿರಸ್ಕರಿಸಿತ್ತಾದರೂ ಅದು ಎಂದೂ ಯಾಸಿರ್ ಅರಫಾತ್‌ರನ್ನು ಹತ್ಯೆ ಮಾಡುವುದು ಬಿಡಿ, ಅವರಿಗೆ ಸಣ್ಣ ಮಟ್ಟದ ಹಲ್ಲೆ   ಮಾಡುವುದಕ್ಕೂ ಮುಂದಾಗಲಿಲ್ಲ. ಒಂದುರೀತಿಯಲ್ಲಿ, ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಲೇಬಾರದೆಂಬ ಉಗ್ರ ನಿಲುವಿನ ಯಹೂದಿಗಳಿಗೆ  ಹೋಲಿಸಿದರೆ ಫೆಲೆಸ್ತೀನಿಯರು ಉದಾರವಾದಿಗಳಾಗಿದ್ದರು. 1967ಕ್ಕಿಂತ ಮೊದಲಿನ ಗಡಿ ರೇಖೆಯ ಆಧಾರದಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಗೆ ಅವರು ಸಿದ್ಧವಾಗಿದ್ದರು. ಆದರೆ ಇಸ್ರೇಲ್‌ನಲ್ಲಿ ಇಂಥ ವಾತಾವರಣವೇ ಇದ್ದಿರಲಿಲ್ಲ. ಫೆಲೆಸ್ತೀನ್ ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರವೊಂದೇ  ಇರಬೇಕು ಮತ್ತು ಫೆಲೆಸ್ತೀನಿಯರು ತಮ್ಮಿಂದ ಆಳಿಸಿಕೊಂಡಿರಬೇಕು ಎಂಬ ಮನಸ್ಥಿತಿ ನೇತನ್ಯಾಹು ಮತ್ತು ಅವರನ್ನು ಬೆಂಬಲಿಸುವವರದ್ದಾಗಿದೆ.  ಆದ್ದರಿಂದ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಹಮಾಸೂ ಅಲ್ಲ ಅಥವಾ ಗಾಝಾದ ಸಶಸ್ತ್ರ  ಹೋರಾಟಗಾರರೂ  ಅಲ್ಲ, ತನ್ನ ಪಕ್ಕ ಇನ್ನೊಂದು ರಾಷ್ಟ್ರವನ್ನು ಇಸ್ರೇಲ್‌ನ ರಾಜಕೀಯ ನಾಯಕರು ಬಯಸುತ್ತಿಲ್ಲ. ಒಂದುವೇಳೆ, ಅವರು ಒಪ್ಪಿಕೊಂಡರೆ ಉಗ್ರವಾದಿಗಳ ಬೆದರಿಕೆಯಡಿ ಅವರು ಬದುಕಬೇಕಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ,

ಇಸ್ರೇಲ್‌ಗೆ ನಿರ್ದಿಷ್ಟ ಗಡಿಯೆಂಬುದೇ ಇಲ್ಲ. ಅದು ವಿಸ್ತರಣಾವಾದಿ ದೇಶ. 1948ರಲ್ಲಿ ಸ್ಥಾಪನೆಯಾಗುವಾಗಲೇ ಅದು ವಿಶ್ವಸಂಸ್ಥೆಯ ಭೂ ನಕ್ಷೆಯನ್ನು ಉಲ್ಲಂಘಿಸಿತ್ತು. ವಿಶ್ವಸಂಸ್ಥೆ ಹೇಳಿದುದಕ್ಕಿಂತ ಹೆಚ್ಚಿನ ಭೂಮಿಯನ್ನು ಆಗಲೇ ಅದು ವಶಪಡಿಸಿಕೊಂಡಿತ್ತು. 1967ರಲ್ಲಂತೂ ಫೆಲೆಸ್ತೀ ನಿನ ಐತಿಹಾಸಿಕ ಭೂಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. 1970ರಿಂದ ಫೆಲೆಸ್ತೀನಿ ಭೂಭಾಗದಲ್ಲಿ ಅದು ಯಹೂದಿಯರಿಗಾಗಿ ಅಕ್ರಮ  ವಸತಿಯನ್ನು ನಿರ್ಮಿಸುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವು 1967ರ ಮೊದಲಿನ ಗಡಿ ಗುರುತಿನಂತೆ ಆಗಬೇಕು ಎಂದು ಫೆಲೆಸ್ತೀನಿಯರು ಆಗ್ರಹಿಸುತ್ತಿದ್ದರೂ ಇಸ್ರೇಲ್ ಅದಕ್ಕೆ ಒಪ್ಪಿಕೊಳ್ಳು ತ್ತಿಲ್ಲ. ಯಾಕೆಂದರೆ, 1970ರಿಂದ ಅದು ಫೆಲೆಸ್ತೀನ್ ಭೂಭಾಗವಾದ ಪಶ್ಚಿಮ ದಂಡೆ  ಮತ್ತು ಪಶ್ಚಿಮ ಜೆರುಸಲೇಮ್‌ನಲ್ಲಿ 7 ಲಕ್ಷ ಯಹೂದಿಯರನ್ನು ಅಕ್ರಮವಾಗಿ ತಂದು ಕೂರಿಸಿದೆ. ಒಂದುವೇಳೆ, 1967ರ ಮೊದಲಿನ ಸ್ಥಿತಿಗೆ  ಇಸ್ರೇಲ್ ಮರಳಬೇಕಾದರೆ ಮತ್ತು ಅದೇ ಗಡಿ ಗುರುತಿನೊಂದಿಗೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಒಪ್ಪಿಕೊಳ್ಳಬೇಕಾದರೆ ಈ 7 ಲಕ್ಷ ಯಹೂದಿಯರನ್ನು ಹೊರದಬ್ಬಬೇಕಾಗುತ್ತದೆ ಅಥವಾ 1967ರ ಮೊದಲಿದ್ದ ಇಸ್ರೇಲ್ ಎಂಬ ಭೂಭಾಗದೊಳಗೆ ಇವರನ್ನೆಲ್ಲಾ ಕರೆಸಿಕೊಳ್ಳಬೇಕಾಗುತ್ತದೆ.  ಆದರೆ, ಇದು ಸುಲಭ ಅಲ್ಲ. ಈ 7 ಲಕ್ಷ ಜನಸಂಖ್ಯೆ ಎಂಬುದು ಇಸ್ರೇಲ್ ರಾಜಕೀಯದ ಮಟ್ಟಿಗೆ ಅತ್ಯಂತ ಪ್ರಭಾವಶಾಲಿ ಸಂಖ್ಯೆಯಾಗಿದೆ.  ಇವರ ವಿರೋಧವನ್ನು ಕಟ್ಟಿಕೊಳ್ಳಲು ಇಸ್ರೇಲಿನ ಯಾವುದೇ ರಾಜಕೀಯ ಪಕ್ಷ ಸಿದ್ಧವಾಗಲಾರದು. ಹಾಗೆಯೇ,

1948ರಲ್ಲಿ ಇಸ್ರೇಲ್ ಸ್ಥಾಪನೆಯ ಸಂದರ್ಭದಲ್ಲಿ ಯಹೂದಿ ಸಶಸ್ತ್ರ  ದಳವು ವ್ಯಾಪಕ ಹಿಂಸಾಚಾರ ನಡೆಸಿತ್ತಲ್ಲದೇ, ಲಕ್ಷಾಂತರ ಫೆಲೆಸ್ತೀನಿಯರನ್ನು  ತಮ್ಮ ನೆಲದಿಂದ ಓಡಿಸಿ ವಿಶ್ವಸಂಸ್ಥೆ ನಿಗದಿಪಡಿಸಿದ ಭೂಮಿಗಿಂತಲೂ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಹೀಗೆ ಸುಮಾರು  7 ಲಕ್ಷ ಫೆಲೆಸ್ತೀನಿಯರು ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಮರಳುವ ಅವಕಾಶ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ  ಕಾನೂನು ಹೇಳುತ್ತದೆ. ಆದರೆ, ಫೆಲೆಸ್ತೀನಿ ನಿರಾಶ್ರಿತರು ತಾಯ್ನಾಡಿಗೆ ಮರಳುವುದಕ್ಕೆ ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ. ಹಾಗೆಯೇ, ಅಲ್ ಅಕ್ಸಾ  ಮಸೀದಿ ಒಳಗೊಂಡ ಜೆರುಸಲೇಮ್ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ದ ರಾಜಧಾನಿಯಾಗಬೇಕು ಎಂಬುದು ಫೆಲೆಸ್ತೀನಿಯರ ವಾದವಾಗಿದೆ. ಆದರೆ,  ಇಸ್ರೇಲ್ ಅದಕ್ಕೂ ಸಮ್ಮತಿಸುತ್ತಿಲ್ಲ.

2023 ನವೆಂಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕದಿಂದ ಗಾಝಾದಲ್ಲಿ ಆಗಿರುವ ಜೀವಹಾನಿ ಮತ್ತು ಆರ್ಥಿಕ ನಷ್ಟದ  ಚರ್ಚೆಗಳ ನಡುವೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತೂ ಬಲವಾದ ಕೂಗು ಕೇಳಿಬರುತ್ತಿದೆ. ಒಂದಲ್ಲ ಒಂದು ದಿನ ತಮ್ಮ ಕ ನಸಿನ ರಾಷ್ಟ್ರ ಸ್ಥಾಪನೆಯ ಬಗ್ಗೆ ಫೆಲೆಸ್ತೀನಿಯರು ಆಶಾವಾದಿಗಳಾಗಿದ್ದಾರೆ. ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳೆಲ್ಲ ಇಸ್ರೇಲ್‌ನ ಬೆನ್ನಿಗಿದ್ದೂ  ಫೆಲೆಸ್ತೀನಿಯರು ತಮ್ಮ ಹೋರಾಟ ಮನೋಭಾವದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಜೊತೆಜೊತೆಗೇ ಫೆಲೆಸ್ತೀನ್ ಅಕ್ಕಪಕ್ಕದ ರಾಷ್ಟ್ರಗಳ ಸಹಿತ  ಅರಬ್ ರಾಷ್ಟ್ರಗಳ ಗಾಢ ಮೌನವೂ ಆಯಾ ರಾಷ್ಟ್ರಗಳ ನಾಗರಿಕರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತಿದೆ. 2023 ನವೆಂಬರ್‌ನಲ್ಲಿ ಹಮಾಸ್  ನಡೆಸಿರುವ ದಾಳಿಯನ್ನು ಯಾರೂ ಬೆಂಬಲಿಸುತ್ತಿಲ್ಲವಾದರೂ ಆ ದಾಳಿಯು ಜಾಗತಿಕವಾಗಿಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ  ಗಂಭೀರ ಚರ್ಚೆಯೊಂದಕ್ಕೆ ಕಾರಣವಾಗಿದೆ ಎಂಬುದಂತೂ  ಸ್ಪಷ್ಟ.

No comments:

Post a Comment