Monday, 3 June 2024

ಮರ್ದಕರೇ, ಮರ್ದಿತರ ಪ್ರಾರ್ಥನೆಯನ್ನು ಕಡೆಗಣಿಸದಿರಿ...

 




ಮರ್ದಿತರಿಗೂ ದೇವನಿಗೂ ನಡುವೆ ಪರದೆಗಳಿಲ್ಲ ಎಂಬುದು ಇಸ್ಲಾಮಿನ ನಿಲುವು. ಅಧಿಕಾರದ ಮದದಿಂದಲೋ ಧರ್ಮದ್ವೇಷದ ವ್ಯಸನದಿಂದಲೋ ಅಥವಾ ಹಣಬಲ, ತೋಳ್ಬಲ, ಜಾತಿಬಲದ ಮೇಲ್ಮೆಯಿಂದಲೋ ದುರ್ಬಲರ ಮೇಲೆ ಅನ್ಯಾಯ ಎಸಗುವವರನ್ನು ಎಚ್ಚರಿಸುವುದಕ್ಕಾಗಿಯೇ ಬಂದಿರುವ ಸೂಚನೆ ಇದು. ಮರ್ದಿತರು ದೇವನಲ್ಲಿ ಪ್ರಾರ್ಥಿಸಿದರೆ ತಕ್ಷಣ ಅವರ ಪ್ರಾರ್ಥನೆಯನ್ನು ದೇವನು ಆಲಿಸುತ್ತಾನೆ, ಅಲ್ಲಿ ಪರದೆಯೇ ಇರುವುದಿಲ್ಲ ಎಂಬುದಾಗಿ ಇಲ್ಲಿ ಮರ್ದಕರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗಂತ, ಮರ್ದಿತರು ಎಂಬ ಪದಕ್ಕೆ  ಇಸ್ಲಾಮ್ ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗವನ್ನು ಅಂಟಿಸಿಲ್ಲ. ಅದು ಧರ್ಮಾತೀತ, ದೇಶಾತೀತ, ಭಾಷಾತೀತ ಪದ. ಅನ್ಯಾಯಕ್ಕೆ  ಒಳಗಾಗುವ ಸರ್ವರೂ ಆ ಚೌಕಟ್ಟಿನೊಳಗೆ ಬರುತ್ತಾರೆ. ಇಂಥವರ ಸಂಖ್ಯೆಯೇ ಜಗತ್ತಿನಲ್ಲಿ ಅತ್ಯಧಿಕವಿದೆ ಎಂಬುದೂ ಗಮನಾರ್ಹ. ಇದೀಗ  ಇಂಥದ್ದೇ  ಒಂದು ಚರ್ಚೆಗೆ ಉಡುಪಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದ್ದಾರೆ. ಹಿಜಾಬ್ ವಿವಾದ ನನ್ನ ಸೃಷ್ಟಿಯಲ್ಲ  ಎಂದವರು ಹೇಳಿದ್ದಾರೆ. ಅದರಲ್ಲಿ ತನ್ನ ಪಾತ್ರವಿಲ್ಲ ಎಂಬಂತೆ ಹೇಳಿಕೆ ನೀಡಿದ್ದಾರೆ. ಆದರೆ,

ಹಿಜಾಬ್ ವಿವಾದದ ಸಮಯದಲ್ಲಿ ಉಡುಪಿಯ ಶಾಸಕರಾಗಿದ್ದವರು ಇದೇ ರಘುಪತಿ ಭಟ್. ಹಿಜಾಬ್ ವಿವಾದಕ್ಕೆ ಕಾರಣವಾದ ಉಡುಪಿ  ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಚೇರ್ಮನ್ಗಿ ಆಗಿದ್ದವರೂ ಇದೇ ರಘುಪತಿ ಭಟ್. ಹಿಜಾಬ್ ವಿವಾದ ಎಂಬ ಹೆಸರಲ್ಲಿ ಖಳರಂತೆ  ಬಿಂಬಿಸಲಾದ ಆ ಹೆಣ್ಮಕ್ಕಳು ಬುರ್ಖಾ ಹಾಕುತ್ತೇವೆಂದೋ ಮುಖ ಮುಚ್ಚುವ ನಕಾಬ್ ಧರಿಸುತ್ತೇವೆಂದೋ ಹೇಳಿರಲಿಲ್ಲ. ಸಮವಸ್ತ್ರದ  ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕುವುದಕ್ಕೆ ಅನುಮತಿ ಕೊಡಿ ಎಂದಷ್ಟೇ ವಿನಂತಿಸಿದ್ದರು. ‘ಸರಿ ಹಾಕ್ಕೊಳ್ಳಿ’ ಎಂದು ಹೇಳಿ  ಮುಗಿಸಬಹುದಾಗಿದ್ದ ತೀರಾತೀರಾ ಸಾಮಾನ್ಯ ಸಂಗತಿಯೊಂದು ರಾಜ್ಯದ ಶಾಲಾ-ಕಾಲೇಜುಗಳನ್ನೇ ಬಂದ್ ಮಾಡಿಡಬೇಕಾದಷ್ಟು ತೀವ್ರರೂಪಕ್ಕೆ  ಯಾಕೆ ಹೊರಳಿತು ಎಂಬುದನ್ನು ಅವರು ವಿವರಿಸಿಲ್ಲ. ‘ಹಿಜಾಬ್ ವಿವಾದ ತನ್ನ ಸೃಷ್ಟಿಯಲ್ಲ ಮತ್ತು ಅದರಲ್ಲಿ ತಾನಿಲ್ಲ’ ಎಂಬ ಅವರ ಮಾತು  ಇನ್ನಾರದೋ ಕಡೆಗೆ ಕೈ ತೋರಿಸುತ್ತದೆ. ಅವರು ಯಾರು? ಶಾಸಕನನ್ನೂ ಮೀರಿ ಅಲ್ಲಿ ಅಧಿಕಾರ ಚಲಾಯಿಸಿದವರು ಯಾರು? ಆ ಹೆಣ್ಮಕ್ಕಳ  ಬೇಡಿಕೆಯನ್ನು ತಿರಸ್ಕರಿಸುವುದರಿಂದ ಯಾರಿಗೆ ಲಾಭ ಇತ್ತು? ಆ ಲಾಭ ಏನು? ಶಾಸಕನಾಗಿಯೂ ರಘುಪತಿ ಭಟ್ ಇವೆಲ್ಲವನ್ನೂ ನೋಡಿ  ಸುಮ್ಮನಿರಲು ಕಾರಣವೇನು? ರಾಜಕೀಯ ಲೆಕ್ಕಾಚಾರವೇ? ಅಸಾಮರ್ಥ್ಯವೇ? ನಿಜವಾಗಿ,

ಹಿಜಾಬ್ ವಿವಾದದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರುವ ರಘುಪತಿ ಭಟ್ರು, ವಿವಾದದ ಸಮಯದಲ್ಲಿ ಶಾಸಕರಾಗಿ ಕರ್ತವ್ಯ ನಿಭಾಯಿಸಿರಲಿಲ್ಲ  ಎಂಬುದಕ್ಕೆ ಆಧಾರಗಳೇ ಬೇಕಿಲ್ಲ. ಆ ವಿವಾದವನ್ನು ಅಲ್ಲಿಗೇ ಮುಗಿಸುವ ಮತ್ತು ಆ ಹೆಣ್ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಎಲ್ಲ ಅವಕಾಶಗಳೂ ಅವರಿಗಿದ್ದುವು. ಆದರೆ, ಅವರು ಹಾಗೆ ಮಾಡಲಿಲ್ಲ. ಅದಕ್ಕೆ ರಾಜಕೀಯ ಕಾರಣಗಳಿದ್ದುವು. ಅದನ್ನು ಎದುರಿಸಿ ನಿಲ್ಲುವ ನಿಷ್ಠುರತೆಯನ್ನು  ಅವರು ಪ್ರದರ್ಶಿಸಲಿಲ್ಲ. ಅದಕ್ಕೂ ರಾಜಕೀಯ ಲೆಕ್ಕಾಚಾರವೇ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವಿಗೆ ಈ ವಿವಾದ  ಮೆಟ್ಟಿಲಾದೀತು ಎಂದವರು ಭಾವಿಸಿರುವ ಸಾಧ್ಯತೆಯೂ ಇದೆ. ಅಥವಾ ಅವರನ್ನು ಹಾಗೆ ಮನವೊಲಿಸಿರಲೂ ಬಹುದು. ಅಥವಾ ಪಕ್ಷದ ಉನ್ನತ  ನಾಯಕರು ಅವರಿಗೆ ಅಂಥ ಆದೇಶ ನೀಡಿರಲೂ ಬಹುದು. ಆದರೆ, ಆ ಬಳಿಕದ ಪರಿಸ್ಥಿತಿ ಎಷ್ಟು ಬದಲಾಯಿತೆಂದರೆ, ಪಕ್ಷ ಅವರನ್ನೇ  ಕಡೆಗಣಿಸಿತು. ಅವರಿಗೆ ಪಕ್ಷ ವಿಧಾನಸಭಾ ಟಿಕೇಟನ್ನೇ ನಿರಾಕರಿಸಿತು. ಒಂದುಕಡೆ, ಅವರನ್ನು ಭರಪೂರ ಬಳಸಿಕೊಂಡ ಅವರ ಪಕ್ಷ ಇನ್ನೊಂದು  ಕಡೆ ಅವರನ್ನು ತಿಪ್ಪೆಗೆಸೆಯಿತು. ಆದರೆ, ಆಗಲೂ ಅವರು ಹಿಜಾಬ್‌ನಲ್ಲಿ ತನ್ನ ಪಾತ್ರವಿಲ್ಲ ಎಂಬ ಹೇಳಿಕೆಯನ್ನು ಕೊಡಲಿಲ್ಲ. ಯಾಕೆಂದರೆ,  ಹಿಜಾಬ್ ವಿವಾದದಲ್ಲಿ ಅವರನ್ನು ಪಕ್ಷ ಹೇಗೆ ದುರುಪ ಯೋಗಪಡಿಸಿಕೊಂಡಿತೋ ಈ ಟಿಕೆಟ್ ನಿರಾಕರಣೆಯ ಬಳಿಕವೂ ಅವರಿಗೆ ಉನ್ನತ  ಹುದ್ದೆಯ ಆಮಿಷ ವನ್ನು ಒಡ್ಡಿತು. ಅದನ್ನು ಅವರು ನಂಬಿದರು ಮತ್ತು ಹಿಜಾಬ್ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ಇರುವ ಆರೋಪಗಳಿಗೆ  ಉತ್ತರಿಸುವುದರಿಂದ ನುಣುಚಿಕೊಂಡರು. ಇದಾಗಿ ಎರಡು ವರ್ಷಗಳ ಬಳಿಕ ಇದೀಗ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪದವೀಧರ  ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಇದೀಗ ಅವರು  ಎರಡು ವರ್ಷಗಳ ಹಿಂದಿನ ವಿವಾದದ ಅಸಲಿ ಕತೆಯನ್ನು ಹೇಳಿಕೊಂಡಿದ್ದಾರೆ. ಒಂದುರೀತಿಯಲ್ಲಿ,

ಇದೊಂದು ಬಗೆಯ ಆತ್ಮಾವಲೋಕನ. ರಾಜಕೀಯದಲ್ಲಿ ಸಕ್ರಿಯರಾಗಿದ್ದೂ ಮತ್ತು ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಅನಿರೀಕ್ಷಿತವಾಗಿ ಟಿಕೆಟ್ ಕೈ  ತಪ್ಪುವುದು ಮತ್ತು ತನ್ನ ಸುತ್ತಲಿದ್ದವರೆಲ್ಲ ಮಾಯವಾಗಿ ತಾನು ಒಂಟಿಯಾಗುವುದನ್ನೆಲ್ಲ ಜೀರ್ಣಿಸಿಕೊಳ್ಳುವುದು ರಘುಪತಿ ಭಟ್ ಸಹಿತ ಯಾವ  ರಾಜಕಾರಣಿಗಳಿಗೂ ಸುಲಭ ಅಲ್ಲ. ಇಂಥ ಸ್ಥಿತಿ ಅವರನ್ನು ದಿನೇ ದಿನೇ ಸುಡುತ್ತಿರುತ್ತದೆ. ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾದ  ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರಬಹುದು. ಹಾಗಂತ, ಇದು ರಘುಪತಿ ಭಟ್ ಒಬ್ಬರ ಸಮಸ್ಯೆಯಲ್ಲ. ಈಶ್ವರಪ್ಪ ಕೂಡ ಇವರದ್ದೇ   ಸ್ಥಿತಿಯಲ್ಲಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸ ಲಾಗಿದೆ. ಅವರದ್ದು ಉರಿನಾಲಗೆ. ಮುಸ್ಲಿಮ್ ಸಮುದಾಯವನ್ನು ಮತ್ತು ಅವರ ಅಸ್ಮಿತೆಯ ನ್ನು ಸಂದರ್ಭ ಸೃಷ್ಟಿಸಿಕೊಂಡೇ ಪ್ರಶ್ನಿಸುತ್ತಿದ್ದವರು ಈಶ್ವರಪ್ಪ. ಬಹಿರಂಗ ಭಾಷಣದಲ್ಲಿ ಅವರು ಅದಾನನ್ನು ತಮಾಷೆ ಮಾಡಿದ್ದರು. ಮುಸ್ಲಿಮರನ್ನು  ವಿನಾ ಕಾರಣ ಆಡಿಕೊಳ್ಳುವುದು ಮತ್ತು ಸಭಿಕರಲ್ಲಿ ಆವೇಶವನ್ನು ಹುಟ್ಟಿಸುವುದು ಅವರ ಚಾಳಿಯಾಗಿತ್ತು. ಅವರಿಗೂ ಕಳೆದ ವಿಧಾನಸಭಾ ಚು ನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು ಮತ್ತು ಪಕ್ಷದಿಂದಲೇ  ಉಚ್ಚಾಟನೆಗೊಂಡರು. ಇದೀಗ ಅವರೂ ಒಂಟಿ. ರಸ್ತೆಗಿಳಿದರೆ ಸಾಕು ಅಭಿಮಾನಿಗಳ ದಂಡೇ ಸೇರುತ್ತಿದ್ದ ಅವರನ್ನು ಈಗ ಯಾರೂ ಹತ್ತಿರ  ಸೇರಿಸಿಕೊಳ್ಳುತ್ತಿಲ್ಲ. ಅವರ ಹೇಳಿಕೆಗಳಿಗೆ ಮಾಧ್ಯಮಗಳಲ್ಲಿ ಕವರೇಜೂ ಸಿಗುತ್ತಿಲ್ಲ. ಇಂಥ ದಯನೀಯ ಸ್ಥಿತಿಯನ್ನು ಇವತ್ತು ಎದುರಿಸುತ್ತಿರುವರಲ್ಲಿ  ಅನಂತ್ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಸಿಟಿ ರವಿಯಂಥ ಹಲವು ರಾಜ್ಯ ನಾಯಕರಿದ್ದಾರೆ. ರಾಷ್ಟçಮಟ್ಟದಲ್ಲಿ ಇನ್ನೂ ಅ ನೇಕರಿದ್ದಾರೆ. ಕಾರಣವೇ ಇಲ್ಲದೇ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಮತ್ತು ಮುಸ್ಲಿಮರ ಆಚಾರ-ಸಂಸ್ಕೃತಿಯನ್ನು ವ್ಯಂಗ್ಯವಾಗಿ ಆಡಿಕೊಳ್ಳುವ  ಇವರೆಲ್ಲ ಇವತ್ತು ಬಹುತೇಕ ಒಂಟಿಯಾಗಿದ್ದಾರೆ. ಅಧಿಕಾರ ಬಲ ಇದ್ದಾಗ ಅಮಲೇರಿಸಿಕೊಂಡವರು ಅಧಿಕಾರ ನಷ್ಟವಾದಾಗ ಅದನ್ನು  ಜೀರ್ಣಿಸಿಕೊಳ್ಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಅಂದಹಾಗೆ,

ಅನ್ಯಾಯಕ್ಕೆ ಒಳಗಾದವರು ಬೇರೆ ದಾರಿಯೇ  ಕಾಣದಾದಾಗ ಮತ್ತು ತಮಗಾರೂ ಇಲ್ಲ ಎಂಬ ಭಾವುಕತೆಗೆ ಒಳಗಾದಾಗ ಮಾಡುವ ಪ್ರಾರ್ಥನೆ  ಅತ್ಯಂತ ಅಪಾಯಕಾರಿ ಎಂಬುದು ಐತಿಹಾಸಿಕವಾಗಿ ಅನೇಕ ಬಾರಿ ರುಜುವಾತಾಗಿದೆ. ದೇವರು ಅಂಥ ಪ್ರಾರ್ಥನೆಯನ್ನು ಆಲಿಸುತ್ತಾನೆ  ಎಂಬುದು ಇಸ್ಲಾಮಿನ ಬೋಧನೆಯೂ ಆಗಿದೆ. ಸಂತ್ರಸ್ತರ ಪಾಲಿನ ಕೊನೆಯ ಆಯುಧವೇ ಪ್ರಾರ್ಥನೆ. ಹಾಗಂತ, ಅನ್ಯಾಯ ಎಸಗಿದವರು  ಮತ್ತು ಪರಮ ಕ್ರೂರಿಗಳು ಯಾವ ಶಿಕ್ಷೆಗೂ ಒಳಗಾಗದೇ ತುಂಬು ಬಾಳುವೆ ನಡೆಸಿ ಹೊರಟು ಹೋಗಿಲ್ಲವೇ ಎಂಬ ಪ್ರಶ್ನೆ ಇರಬಹುದು.  ಬಾಹ್ಯನೋಟಕ್ಕೆ ನಮಗೆ ಅವರು ಚೆನ್ನಾಗಿದ್ದಾರೆಂದು ಕಂಡರೂ ಆಂತರಿಕವಾಗಿ ಅವರ ಸ್ಥಿತಿ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅವರ  ಶಾರೀರಿಕ ಹಾಗೂ ಮಾನಸಿಕ ತೊಂದರೆಗಳು ಹೊರಜಗತ್ತಿಗೆ ಗೊತ್ತಾಗಬೇಕೆಂದೇನೂ ಇಲ್ಲ. ಅದರಾಚೆಗೆ, ಮರ್ದಕರನ್ನು ಪರಲೋಕದಲ್ಲಿ  ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಸಂದೇಶವನ್ನೂ ಇಸ್ಲಾಮ್ ನೀಡುತ್ತದೆ. ಇಹಲೋಕದಲ್ಲಿ ಮರ್ದಕರು ತಕ್ಕ ಶಿಕ್ಷೆ ಅನುಭವಿಸುತ್ತಾರೋ ಇಲ್ಲವೋ ಆದರೆ ಪರಲೋಕದಲ್ಲಂತೂ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು ಎಂಬುದೇ ಇಸ್ಲಾಮಿನ ಪ್ರಬಲ ನಿಲುವು.  ಆದ್ದರಿಂದ, ‘ದುರ್ಬಲರ ಮೇಲೆ ಸವಾರಿ ಮಾಡದಿರಿ, ಅವರ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ..’ ಎಂದು ಇಸ್ಲಾಮ್ ಹೇಳುತ್ತದೆ. ರಘುಪತಿ ಭಟ್  ಮತ್ತು ಇನ್ನಿತರರ ಇಂದಿನ ಸ್ಥಿತಿಯು ಮರ್ದಕರ ಕಣ್ಣು ತೆರೆಸಲು ಧಾರಾಳ ಸಾಕು. ಹಾಗಂತ,

‘ಮರ್ದಕರು’ ಎಂಬ ಗುಂಪು ರಾಜಕೀಯದಲ್ಲಿ ಮಾತ್ರ ಇರುವುದಲ್ಲ ಮತ್ತು ಅವರು ನಿರ್ದಿಷ್ಟ ಧರ್ಮ, ಲಿಂಗ, ದೇಶಕ್ಕೆ ಸೀಮಿತರೂ ಅಲ್ಲ.  ಮರ್ದಕರು ಮತ್ತು ಮರ್ದಿತರು ಎಂಬ ಈ ಎರಡು ಗುಂಪಿನಲ್ಲಿ ಬಾಹ್ಯನೋಟಕ್ಕೆ ಮರ್ದಕರೇ ಮೇಲುಗೈ ಪಡೆದಂತೆ ಕಾಣಿಸುತ್ತಾರೆ. ಆದರೆ  ಮರ್ದಿತರ ಪ್ರಾರ್ಥನೆಗೆ ಮರ್ದಕರನ್ನು ಪಶ್ಚಾತ್ತಾಪಕ್ಕೆ ದೂಡುವ ಸಾಮರ್ಥ್ಯವಿದೆ ಎಂಬುದನ್ನು ಮರೆಯಬಾರದು.

No comments:

Post a Comment