Friday, 26 July 2024

ನಮ್ಮ ಮಕ್ಕಳು ಅಂಥವರಲ್ಲ ಎಂದು ಆರಾಮವಾಗಿ ಇರಬೇಡಿ..

 




ಕಳೆದ ಒಂದೇ ವಾರದಲ್ಲಿ ನಡೆದ ಘಟನೆಗಳಿವು-

ರೀಲ್ಸ್ ನ  ಹುಚ್ಚಿಗೆ ಬಿದ್ದು ಜೀವ ಕಳಕೊಳ್ಳುತ್ತಿರುವ ಯುವ ಸಮೂಹದ ಸುದ್ದಿಗಳು ಪ್ರತಿದಿನವೆಂಬಂತೆ  ವರದಿಯಾಗುತ್ತಿವೆ.  ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಹರೆಯದ ಯುವಕ-ಯುವತಿಯರು ನಡೆಸುತ್ತಿರುವ  ಕಸರತ್ತುಗಳಿಂದ ಮನೆಗಳು ಸ್ಮಶಾನಗಳಾಗುತ್ತಿವೆ. ಕರಣ್ ಪರ್ಮಾರ್ ಎಂಬ 7ನೇ ತರಗತಿ ವಿದ್ಯಾರ್ಥಿಯನ್ನೇ ಹುಡುಗನನ್ನೇ  ಈ ರೀಲ್ಸ್ ಹುಚ್ಚು ಬಿಟ್ಟಿಲ್ಲ ಎಂದ ಮೇಲೆ ಹರೆಯದ ಪೀಳಿಗೆಯಲ್ಲಿ ಈ ಭ್ರಮೆ ಎಷ್ಟಿರಬಹುದು?

ಮಧ್ಯಪ್ರದೇಶದ ಈ ಕರಣ್ ಪರ್ಮಾರ್ ರೀಲ್ಸ್ ಮಾಡಲು ಹೋಗಿ ಜೀವ ಕಳಕೊಂಡಿದ್ದಾನೆ. ಆತ್ಮಹತ್ಯೆಯ ರೀಲ್ಸ್  ಮಾಡುವುದಕ್ಕಾಗಿ ಈತ ಗೆಳೆಯರೊಂದಿಗೆ ಹೋಗಿದ್ದ. ಕುತ್ತಿಗೆಗೆ ಹಗ್ಗ ಬಿಗಿದು ಸಂಕಟ ಪಡುತ್ತಿರುವಂತೆ ನಟಿಸುವುದು  ರೀಲ್ಸ್ ನ  ಗುರಿ. ಆದರೆ, ಹಗ್ಗ ನಿಜಕ್ಕೂ ಆತನ ಕೊರಳನ್ನು ಬಿಗಿದಿದೆ. ಆತ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಶ್ರಮ ಪಡುತ್ತಿದ್ದರೂ ಉಳಿದ ಮಕ್ಕಳ ಅದನ್ನು ನಟನೆ ಎಂದುಕೊಂಡು  ಆಟಕ್ಕೆ ಮರಳಿದ್ದಾರೆ. ಹೀಗೆ ಆ ಬಾಲಕ ಪ್ರಾಣ ಬಿಟ್ಟಿದ್ದಾನೆ.  ಇದೊಂದೇ ಅಲ್ಲ
,
ಜೈಪುರದಲ್ಲಿ ಮದುವೆ ನಿಶ್ಚಿತವಾಗಿದ್ದ ವಧು-ವರರು ಮದುವೆಗೆ ಮುಂಚಿನ ಫೋಟೋ ಶೂಟಿಂಗ್ ವೇಳೆ ಗಂಭೀರ  ಗಾಯಗೊಂಡಿದ್ದಾರೆ. 22 ವರ್ಷದ ರಾಹುಲ್ ಮತ್ತು 20 ವರ್ಷದ ಜಾಹ್ನವಿ ರೈಲ್ವೆ ಸೇತುವೆಯ ಮೇಲೆ ನಿಂತು  ಶೂಟಿಂಗ್ ನಡೆಸುತ್ತಿದ್ದಾಗ ರೈಲು ಬಂದಿದೆ. ಭಯದಿಂದ ಇಬ್ಬರೂ 300 ಅಡಿ ಎತ್ತರದಿಂದ ಕೆಳಗೆ ಹಾರಿದ್ದಾರೆ. ಇಬ್ಬರೂ  ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಶ್ವೇತಾ ಎಂಬ 23 ವರ್ಷದ ಯುವತಿಯ ಸ್ಥಿತಿಯೂ  ಇದಕ್ಕಿಂತ ಭಿನ್ನವಲ್ಲ. ರೀಲ್ಸ್ ಗಾಗಿ  ಈಕೆ ಕಾರನ್ನು ಹಿಂದೆಗೆಯುವ ಪ್ರಯತ್ನದ ನಡುವೆ 300 ಅಡಿ ಪ್ರಪಾತಕ್ಕೆ ಬಿದ್ದು ಜೀವ  ಕಳಕೊಂಡಿದ್ದಾಳೆ. ಹಿಂದುಗಡೆ ಇರುವ ಭಾರೀ ಪ್ರಪಾತದ ಹತ್ತಿರ ಕಾರು ತಂದು ನಿಲ್ಲಿಸುವುದು ಆಕೆಯ ಉದ್ದೇಶವಾಗಿತ್ತು.  ಆದರೆ ಪ್ರಪಾತದ ಹತ್ತಿರ ಬಂದು ಬ್ರೇಕ್ ಹಾಕುವ ಬದಲು ಎಕ್ಸಿಲರೇಟರ್ ಒತ್ತಿದ್ದು ಈ ಸಾವಿಗೆ ಕಾರಣವಾಗಿತ್ತು.  ಮುಂಬೈಯ 27 ವರ್ಷದ ಆನ್ವಿ ಕಮ್‌ದಾರ್ ಎಂಬ ಯುವತಿ ಜೀವ ಕಳಕೊಂಡದ್ದೂ ರೀಲ್ಸ್ ಕಾರಣವೇ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿರುವ ಈಕೆಯ ಣhegಟoಛಿಚಿಟರಿouಡಿಟಿಚಿಟ ಖಾತೆ  ಬಹಳ ಜನಪ್ರಿಯ. ಜಲಪಾತದಂಥ ನೀರ ಹರಿವಿನ ಬಳಿ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ಈಕೆ ಕಾಲುಜಾರಿ 400  ಅಡಿ ಪ್ರಪಾತಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ವೀಡಿಯೋವೊಂದು ಹರಿದಾಡುತ್ತಿತ್ತು. ಎತ್ತರದ ಕಟ್ಟಡದಲ್ಲಿ ಯುವತಿ  ನೇತಾಡುತ್ತಿದ್ದರೆ ಯುವಕ ಆಕೆಯ ಕೈ ಹಿಡಿದಿದ್ದ. ಟೆರೇಸ್‌ನ ಮೇಲೆ ಕೊನೆಯಲ್ಲಿ ಮಲಗಿದ್ದ ಯುವಕ ಕೆಳಗೆ ಕೈ ಚಾಚಿ  ಯುವತಿಯನ್ನು ಕೈ ಹಿಡಿದು ನೇತಾಡಿಸುವ ಈ ವೀಡಿಯೋವನ್ನು ರೀಲ್ಸ್ ಗಾಗಿ  ಮಾಡಲಾಗಿತ್ತು. ಮಹಾರಾಷ್ಟ್ರದ  ಮೀನಾಕ್ಷಿ  ಸಾಲುಂಕೆ ಮತ್ತು ಮಿಹಿರ್ ಗಾಂಧಿ ಎಂಬಿಬ್ಬರನ್ನು ಪೊಲೀಸರು ಆ ಬಳಿಕ ಬಂಧಿಸಿದರು.. ಅಂದಹಾಗೆ, 

ಸೋಶಿಯಲ್  ಮೀಡಿಯಾದ ಈ ಕಾಲದಲ್ಲಿ ಇಂಥ ಬಂಧನಗಳಾಗಲಿ ಅಥವಾ ಸಾವಿನ ಸುದ್ದಿಗಳಾಗಲಿ ಯುವ ಸಮೂಹದಲ್ಲಿ ಭಾರೀ  ಪರಿವರ್ತನೆ ತರಬಲ್ಲುದು ಎಂದು ಹೇಳುವ ಹಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಇಂಥ ಸಾಹಸಮಯ  ರೀಲ್ಸ್ ಗಳು ಕಣ್ಣು   ಕುಕ್ಕುವಷ್ಟು ಸಿಗುತ್ತವೆ. ಅದೊಂದು ಹುಚ್ಚು. ಕ್ರೇಜು. ತನ್ನವರ ಎದುರು ಭಿನ್ನ ಐಡೆಂಟಿಟಿಯನ್ನು  ಸ್ಥಾಪಿಸುವ ಉಮೇದು. ಮಾಲು, ಮಾರುಕಟ್ಟೆ, ಮದುವೆ, ಮುಂಜಿ, ಪಾರ್ಟಿಗಳಲ್ಲಿ ಗುರುತಿಗೀಡಾಗುವ ಹಂಬಲ.  ಸಾರ್ವಜನಿಕವಾಗಿ ಹೆಚ್ಚೆಚ್ಚು ಗುರುತಿಗೀಡಾಗಲು ಪ್ರಾರಂಭವಾದಂತೆಯೇ ಹೊಸ ಹೊಸ ಸಾಹಸದ ರೀಲ್ಸ್ ಗಳನ್ನು  ಮಾಡಲೇಬೇಕಾದ ಒತ್ತಡಕ್ಕೆ ಇಂಥವರು ಒಳಗಾಗತೊಡಗುತ್ತಾರೆ. ಒಮ್ಮೆ ಮಾಡಿದಂಥ ಸಾಹಸವನ್ನು ಇನ್ನೊಮ್ಮೆ ಮಾಡಿದರೆ  ಅದಕ್ಕೆ ಮೆಚ್ಚುಗೆಯೂ ಸಿಗುವುದಿಲ್ಲ. ಅಪಾಯಕಾರಿ ಸಾಹಸಕ್ಕೆ ಆ ಪ್ರಾಯದವರಲ್ಲಿ ಹೆಚ್ಚು ಮೆಚ್ಚುಗೆ ಸಿಗುತ್ತವಾದ್ದರಿಂದ  ಅಂಥದಕ್ಕೆ ಪ್ರಯತ್ನಿಸಲೇಬೇಕಾದ ಅಗತ್ಯವೂ ಇರುತ್ತದೆ. ಹಾಗಂತ,

ಇಂಥ  ಸಾಹಸಪೂರ್ಣ ರೀಲ್ಸ್ ಗಾಗಿ  ಇವರೆಲ್ಲ ತರಬೇತಿ ಪಡೆದಿರುತ್ತಾರೆ ಎಂದಲ್ಲ. ಹುಂಬ ಧೈರ್ಯವೇ ಇಂಥ ರೀಲ್ಸ್ ದಾರರ  ಬಂಡವಾಳ. ಕೈಯಲ್ಲಿ ಮೊಬೈಲ್ ಇದೆ, ಹುಚ್ಚು ಪ್ರಾಯವಿದೆ ಮತ್ತು ಹುಂಬ ಧೈರ್ಯವೂ ಇದೆ.. ಈ ಮೂರು  ಸೇರಿಕೊಂಡಾಗ ಅಪಾಯಕಾರಿಯಾದ ಸಾಹಸಗಳೂ ಮಾಮೂಲಿಯಾಗಿ ಕಾಣಿಸ ತೊಡಗುತ್ತದೆ. ಒಂದಕ್ಕಿಂತ  ಭಿನ್ನವಾದ  ಮತ್ತು ಒಂದನ್ನೊಂದು  ಮೀರಿಸುವ ರೀಲ್ಸ್ ಪ್ರಯತ್ನಗಳೂ ನಡೆಯಲೇಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ವಿವಿಧ  ರೀಲ್ಸ್ ಗಳನ್ನು ವೀಕ್ಷಿಸುತ್ತಾ ಮತ್ತು ಅದಕ್ಕಿಂತ ಹೆಚ್ಚು ಸಾಹಸಮಯ ಮತ್ತು ಭಿನ್ನ ರೀಲ್ಸ್ ಗಳನ್ನು ಮಾಡಲು ಪ್ರಯತ್ನಿಸುತ್ತಾ  ಕೊನೆಗೆ ಹೀಗೆ ಜೀವಕಳಕೊಳ್ಳುವವರು ಧಾರಾಳ ಇದ್ದಾರೆ. 15 ರಿಂದ 30ರ ಪ್ರಾಯದ ಒಳಗಿನವರೇ ಹೆಚ್ಚಾಗಿ ಮಾಡುವ  ಇಂಥ ಅಪಾಯಕಾರಿ ಸಾಹಸದ ರೀಲ್ಸ್ ಗಳು ಅವರಿಗೆ ಮಾತ್ರ ಸೀಮಿತಗೊಳ್ಳುವುದಲ್ಲ ಎಂಬುದೇ ಈ ಬಗ್ಗೆ ಗಂಭೀರವಾಗಿ  ಆಲೋಚಿಸುವುದಕ್ಕೆ ಕಾರಣವಾಗಬೇಕಿದೆ. ಇಂಥ ರೀಲ್ಸ್ ಗಳು ಬೆಳೆಯುವ  ಪೀಳಿಗೆಯನ್ನು ಪ್ರಭಾವಿತಗೊಳಿಸುತ್ತದೆ ಮತ್ತು ಆ  ಪೀಳಿಗೆಯು ಇದಕ್ಕಿಂತಲೂ ಅಪಾಯಕಾರಿ ಸಾಹಸಕ್ಕೆ ಕೈ ಹಾಕಬಲ್ಲದು. ಇವುಗಳ ಪರಿಣಾಮವಾದರೋ ಅತ್ಯಂತ ಘೋರ.  ಹರೆಯದ ಮಗ ಅಥವಾ ಮಗಳನ್ನು ಕಳಕೊಳ್ಳುವ ಹೆತ್ತವರು ಜೀವನಪೂರ್ತಿ ಸಂಕಟಪಡಬೇಕಾಗುತ್ತದೆ. ದೇಶಕ್ಕೆ ಅಮೂಲ್ಯ  ಮಾನವ ಶಕ್ತಿ ನಷ್ಟವಾಗುತ್ತದೆ. ಹಾಗಂತ,

ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಯಿದೆ. ಸೋಶಿಯಲ್ ಮೀಡಿಯಾವಂತೂ ಸಮಾಜದ ಉಸಿರಾಟವೇ ಆಗಿ  ಹೋಗಿದೆ. ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಅದು ಬದುಕಿನ ಭಾಗವಾಗಿ ಹೋಗಿದೆ. ಆದ್ದರಿಂದ  ಜಾಗೃತಿಯೊಂದೇ ಏಕೈಕ ಪರಿಹಾರವಾಗಿ ಕಾಣಿಸುತ್ತಿದೆ. ಇದೇ ಸೋಶಿಯಲ್ ಮೀಡಿಯವನ್ನು ಬಳಸಿಯೇ ಈ ಜಾಗೃತಿ  ಮಾಡುವಂತಾಗಬೇಕು. ಅದೂ ಹದಿಹರೆಯದವರ ಮೆಚ್ಚಿನ ಇನ್‌ಸ್ಟಾಗ್ರಾಮ್ ಮೂಲಕವೇ ಈ ಪ್ರಯತ್ನ ನಡೆಯಬೇಕು. ಇನ್‌ಸ್ಟಾಗ್ರಾಮ್‌ನ ಸಾಮಾನ್ಯ ಬಳಕೆದಾರರು ಜಾಗೃತಿ ಮೂಡಿಸುವುದು ಒಂದಾದರೆ, ಸರ್ಕಾರವೇ ಈ ಬಗ್ಗೆ ನಿರ್ದಿಷ್ಟ  ಯೋಜನೆ ಮತ್ತು ಗುರಿಯೊಂದಿಗೆ ಕಾರ್ಯಪ್ರವೃತ್ತವಾಗುವುದು ಇನ್ನೊಂದು. ಸರ್ಕಾರವು ಒಂದು ಆಂದೋಲನದಂತೆ  ಇಂಥ  ಜಾಗೃತಿ ಕಾರ್ಯಕ್ಕಿಳಿದರೆ ಹುಚ್ಚು ಪ್ರಾಯದಲ್ಲಿ ವಿವೇಕಕ್ಕೂ ಮೂಡಿಸಬಲ್ಲುದು. ಅಲ್ಲದೆ, ಪ್ರತಿ ಮನೆಯ ಹಿರಿಯರೂ ಈ  ಕುರಿತಂತೆ ಎಚ್ಚರಿಕೆ ವಹಿಸಬೇಕು. ರೀಲ್ಸ್ ನ  ಸುತ್ತ ಹೆಣೆದುಕೊಂಡಿರುವವರ ಅಪಾಯಗಳ ಬಗ್ಗೆ ತಮ್ಮ ಮನೆಯ ಮಕ್ಕಳಲ್ಲಿ  ಆಗಾಗ ವಿಚಾರಿಸುತ್ತಿರಲೇಬೇಕು. ರೀಲ್ಸ್ ಮಾಡುವ ವೇಳೆ ಅಪಾಯಕ್ಕೆ ಸಿಲುಕಿದ ಸುದ್ದಿ, ಜೀವ ಕಳಕೊಂಡವರ ಸುದ್ದಿಗಳ ನ್ನು ಈ ಪ್ರಾಯದ ಮಕ್ಕಳಲ್ಲಿ ಮನೆಯವರು ಹಂಚುತ್ತಿರಬೇಕು. ಬಾಹ್ಯ ನೋಟಕ್ಕೆ ನಮ್ಮ ಮಕ್ಕಳು ಅಂಥವರಲ್ಲ ಎಂದೇ ಅನಿಸಬಹುದು. ಇವರು ಬರೇ ರೀಲ್ಸ್ ಮಾತ್ರ ನೋಡ್ತಾರೆ, ರೀಲ್ಸ್ ಮಾಡಲ್ಲ, ಮಾಡಿದ್ರೂ ಅಪಾಯಕಾರಿ ಸನ್ನಿವೇಶಗಳಲ್ಲಿ  ಚಿತ್ರೀಕರಿಸಲ್ಲ.. ಎಂಬೆಲ್ಲಾ ಅಭಿಪ್ರಾಯ ಹೆತ್ತವರಿಗಿರಬಹುದು. ಆದರೆ, ನಿರ್ಲಕ್ಷ್ಯ  ಸಲ್ಲದು. ಮಕ್ಕಳಲ್ಲಿ ಆಗಾಗ ಜಾಗೃತಿ  ಮೂಡಿಸುವ ಮಾತುಗಳನ್ನು ಹೇಳುತ್ತಿರಬೇಕು. ಮುಖ್ಯವಾಗಿ ಮನೆಯಿಂದ ಹೊರಗೆ ಗೆಳೆಯರೊಂದಿಗೆ ಸುತ್ತಾಟಕ್ಕೆ  ಹೋಗುವಾಗ ಈ ವಿಷಯದಲ್ಲಿ ಬಹಳ ಎಚ್ಚರಿಕೆ ಇರಬೇಕು.

ಇನ್‌ಸ್ಟಾಗ್ರಾಮ್ ಎಂಬುದು ಫೇಸ್‌ಬುಕ್ ಅಥವಾ ಎಕ್ಸ್ ನಂಥಲ್ಲ. ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ ಗಂಭೀರ ಚರ್ಚೆ,  ರಾಜಕೀಯ, ಕೋಮುವಾದ, ವಿಚಾರ ಮಂಥನಗಳು ನಡೆಯುವಾಗ ಈ ಇನ್‌ಸ್ಟಾಗ್ರಾಮ್ ಮನರಂಜನೆಯನ್ನೇ  ಮುಖ್ಯವಾಗಿಸಿ ಕೊಂಡಿರುತ್ತದೆ. ಮುಖ್ಯವಾಗಿ ರೀಲ್ಸ್ ನ  ದುನಿಯಾಕ್ಕೆ ಬಹಳ ದೊಡ್ಡ ಮಾರುಕಟ್ಟೆಯಿದೆ. ಹ ದಿಹರೆಯದವರಿಂದ ಹಿಡಿದು ಹಿರಿಯವರ ವರೆಗೆ ಅದರ ವ್ಯಾಪ್ತಿ ಬಹಳ ದೊಡ್ಡದು. ಭಾಷೆಯ ಹಂಗಿಲ್ಲದೇ ರೀಲ್ಸ್ ಗಳು  ಜಗತ್ತನ್ನಿಡೀ ಸುತ್ತುತ್ತಲೂ ಇರುತ್ತವೆ. ಹದಿಹರೆಯಕ್ಕೆ ಏನೆಲ್ಲಾ ಬೇಕೋ  ಅವೆಲ್ಲವನ್ನೂ ಒದಗಿಸುವ ಸಾಮರ್ಥ್ಯ ಈ ರೀಲ್ಸ್  ಜಗತ್ತಿನಲ್ಲಿದೆ. ಇಡೀ ದಿನ ಸ್ಕ್ರಾಲ್ ಮಾಡಿದರೂ ಮುಗಿಯದಷ್ಟು ಮತ್ತು ಹೊಸ ಹೊಸ ರೀಲ್ಸ್ ಗಳನ್ನು ಒದಗಿಸುವಷ್ಟು  ಯಥೇಚ್ಛ ರೀಲ್ಸ್ ಬಂಡವಾಳವೂ ಈ ಜಗತ್ತಿನಲ್ಲಿದೆ. ಆದ್ದರಿಂದಲೇ ರೀಲ್ಸ್ ಗಾಗಿ ಹದಿಹರೆಯದ ಜೀವಹಾನಿಯನ್ನು  ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲೋ ದೂರದ ಸಂಗತಿ ಎಂದು ಮೈ ಮರೆತರೆ ನಾಳೆ ಹತ್ತಿರದಿಂದಲೇ ಇಂಥ ಸುದ್ದಿಗಳನ್ನು ಅಲಿಸಬೇಕಾದಂಥ ಸ್ಥಿತಿಯೂ ಎದುರಾದೀತು.

Monday, 15 July 2024

ಬುಲ್ಡೋಜರ್‌ನ ‘ಧರ್ಮ’ವನ್ನು ತೆರೆದಿಟ್ಟ ಪತ್ರಕರ್ತ ಅನುಜ್ ಬೆಹಲ್

 



ಕಳೆದವಾರ ಫ್ರಂಟ್‌ಲೈನ್ ಪತ್ರಿಕೆ ಒಂದು ವರದಿಯನ್ನು ಪ್ರಕಟಿಸಿತ್ತು. ಅನುಜ್ ಬೆಹಲ್ ತಯಾರಿಸಿರುವ ಈ ವರದಿಯು  ಪ್ರಭುತ್ವದ ವಿನಾಶಕಾರಿ ಮತ್ತು ಪಕ್ಷಪಾತೀ ನೀತಿಯನ್ನು ಹಸಿಹಸಿಯಾಗಿ ಬಿಡಿಸಿಟ್ಟಿತ್ತು. 'ನ್ಯಾಯಾಲಯಗಳ ಅನುಮತಿ ಇಲ್ಲದೆ  ಕಳೆದ ಎರಡು ವರ್ಷಗಳಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮನೆ ಮತ್ತು ಕಟ್ಟಡಗಳನ್ನು ಬುಲ್ಡೋಜರ್ ಬಳಸಿ  ನೆಲಸಮಗೊಳಿಸಲಾಗಿದೆ, ಇದರಿಂದಾಗಿ 7 ಲಕ್ಷಕ್ಕಿಂತಲೂ ಅಧಿಕ ಮಂದಿ ನೆಲೆಯಿಲ್ಲದಂತಾಗಿದ್ದಾರೆ..’ ಎಂಬ ಮಾಹಿತಿಯನ್ನು  ಅನುಜ್ ಬೆಹಲ್ ಈ ವರದಿಯಲ್ಲಿ ನೀಡಿದ್ದಾರೆ. ಈ ಧ್ವಂಸ ಕಾರ್ಯಾಚರಣೆಯಿಂದಾಗಿ 2017ರಿಂದ 23ರ ನಡುವೆ  ಸುಮಾರು 17 ಲಕ್ಷ ಮಂದಿ ನೆಲೆ ಕಳಕೊಂಡಿದ್ದಾರೆ. ಕೇವಲ 2023ರಲ್ಲೇ  3 ಲಕ್ಷ ಮಂದಿಯನ್ನು ಈ ಬುಲ್ಡೋಜರ್ ರಾಜ್  ಬೀದಿಪಾಲು ಮಾಡಿದೆ. ಹಾಗಂತ,

ಈ ಬುಲ್ಡೋಜರ್ ಬಹಳ ಬುದ್ಧಿವಂತ. ಅದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಧ್ವಂಸ ಕಾರ್ಯಕ್ಕೆ ಇಳಿಯುವುದಿಲ್ಲ. ಅದು  ಧರ್ಮ, ಜಾತಿ, ಜನಾಂಗವನ್ನು ನೋಡಿಕೊಂಡೇ ನೆಲಸಮ ಕಾರ್ಯಾಚರಣೆಗೆ ಇಳಿಯುತ್ತದೆ. ಹೀಗೆ ಬುಲ್ಡೋಜರ್‌ಗೆ  ಸಿಲುಕಿ ಚಿಂದಿಯಾದ ಒಟ್ಟು ಮನೆಗಳ ಪೈಕಿ 44% ಮನೆಗಳು ಮುಸ್ಲಿಮರದ್ದೇ  ಆಗಿವೆ. ಬುಡಕಟ್ಟು ಸಮುದಾಯದ 23%  ಮನೆಗಳು ಧ್ವಂಸಗೊಂಡಿದ್ದರೆ ಹಿಂದುಳಿದ ಸಮುದಾಯದ 17% ಮನೆಗಳನ್ನು ಧ್ವಂಸಗೊಳಿಸಲಾಗಿದೆ. ದಲಿತ  ಸಮುದಾಯದ 5% ಮನೆಗಳೂ ಬುಲ್ಡೋಜರ್‌ಗೆ ಸಿಲುಕಿ ಧರಾಶಾಹಿಯಾಗಿವೆ. ಇದರ ಹೊರತಾಗಿ ವಿವಿಧ ಪ್ರಕರಣಗಳಲ್ಲಿ  ಆರೋಪಿಯಾಗಿರುವವರ ಮನೆಗಳನ್ನೂ ಧ್ವಂಸಗೊಳಿಸಲಾಗಿದೆ. ಒಂದು ವರದಿಯ ಪ್ರಕಾರ, ಇಂಥ 128 ಆರೋಪಿಗಳ  ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಮನೆಯನ್ನು ಧ್ವಂಸಗೊಳಿಸಲಾಯಿತು. ಅದಕ್ಕಿಂತ  ಮೊದಲು ಬೀಫ್ ಸಿಕ್ಕಿದೆ ಎಂಬ ಆರೋಪದಲ್ಲಿ ಆ ಮನೆಯವರನ್ನು ಬಂಧಿಸಲಾಗಿತ್ತು. ಬಳಿಕ ಮನೆಯನ್ನು  ಧ್ವಂಸಗೊಳಿಸಲಾಯಿತು. ಹಾಗಂತ, 

ಇಂಥ ನೆಲಸಮ ಕಾರ್ಯಾಚರಣೆಗೆ ನ್ಯಾಯಾಲಯದ ಅನುಮತಿ ಪಡಕೊಂಡದ್ದು  ವಿರಳಾತಿ ವಿರಳ. ನ್ಯಾಯಾಲಯ ಈ ಬಗ್ಗೆ ಪ್ರಶ್ನಿಸಿದರೆ ರಾಜ್ಯ ಸರಕಾರಗಳು ಕೊಡುತ್ತಿರುವ ಸಮರ್ಥನೆಗಳೂ ವಿಚಿತ್ರ. ಅವು  ಅಕ್ರಮವಾಗಿ ಕಟ್ಟಲಾಗಿರುವುದರಿಂದ ನಾವು ಧ್ವಂಸಗೊಳಿಸಿದ್ದೇವೆ ಎಂದು ಅವು ಹೇಳುತ್ತವೆಯೇ ಹೊರತು ನಿಜಸ್ಥಿತಿಯನ್ನು  ಅವು ಜಾಣತನದಿಂದ ಮರೆಸಿಡುತ್ತವೆ.

2022 ಮೇ 21ರಂದು ಅಸ್ಸಾಮ್‌ನ ನಗೋನ್ ಜಿಲ್ಲೆಯ ಸಲೊನೋಬಾರಿ ಗ್ರಾಮದ ಬಟದ್ರವ ಪೊಲೀಸ್ ಕಸ್ಟಡಿಯಲ್ಲಿ  ಶಫೀಕುಲ್ ಇಸ್ಲಾಮ್ ಎಂಬವರ ಸಾವು ಸಂಭವಿಸಿತ್ತು. ಇದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಕುಟುಂಬಿಕರು  ಆಕ್ರೋಶಗೊಂಡರು. ಇವರೊಂದಿಗೆ ಸ್ಥಳೀಯರೂ ಸೇರಿಕೊಂಡರು. ಆಕ್ರೋಶದ ಗುಂಪು ಪೊಲೀಸ್ ಠಾಣೆಗೆ ಬೆಂಕಿ  ಹಚ್ಚಿತು. ಈ ಶಫೀಕುಲ್ ಇಸ್ಲಾಮ್ ಬಡ ಮೀನು ಮಾರಾಟಗಾರ. ಈ ಘಟನೆಯ ಮರುದಿನ ಅಧಿಕಾರಿಗಳು 6 ಮಂದಿಯ  ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದರು. ಮಾತ್ರವಲ್ಲ, ಇವೆಲ್ಲ ಅಕ್ರಮವಾಗಿ ಕಟ್ಟಲಾದ ಮನೆಗಳಾಗಿದ್ದುವು  ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿರು. ವಿಶೇಷ ಏನೆಂದರೆ, ಈ ಧ್ವಂಸ ಘಟನೆಯ ಬೆನ್ನಿಗೇ ಅಸ್ಸಾಮ್  ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿತು. ರಾಜ್ಯದ ಬಿಜೆಪಿ ಸರಕಾರದ  ಪಾಲಿಗೆ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಅಲ್ಲದೇ, ಕಸ್ಟಡಿಯಲ್ಲಿ ಸಾವಿಗೀಡಾದ ಶಫೀಕುಲ್ ಇಸ್ಲಾಮ್‌ನ ಪತ್ನಿ  ರಶೀದಾ ಖಾತೂನ್ ಅವರು ಪರಿಹಾರವನ್ನು ಕೋರಿ ನ್ಯಾಯಾಲಯದ ಮೊರೆ ಹೋದರು. ಈ ಎರಡೂ ಬೆಳವಣಿಗೆಯ  ಬಳಿಕ ರಾಜ್ಯ ಸರಕಾರ ತನ್ನ ಮಾತಿನ ವರಸೆಯನ್ನು ಬದಲಿಸಿತು. ‘ಮಾರಕಾಯುಧಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯ  ಭಾಗವಾಗಿ ಮನೆ ಪರಿಶೀಲಿಸಿದೆವು, ಆದರೆ, ಪತ್ತೆ ಕಾರ್ಯಾಚರಣೆಯ ವೇಳೆ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗದೇ  ಇರುವುದರಿಂದ ಶಸ್ತ್ರಾಸ್ತ್ರಗಳನ್ನು ಮನೆಯೊಳಗೆ ನೆಲ ಅಗೆದು ಬಚ್ಚಿಟ್ಟಿರುವ ಸಾಧ್ಯತೆಯನ್ನು ಊಹಿಸಲಾಯಿತು ಮತ್ತು ಆ  ಕಾರಣಕ್ಕಾಗಿ ಮನೆಯನ್ನೇ ನೆಲಸಮಗೊಳಿಸಿ ಪತ್ತೆ ಕಾರ್ಯ ನಡೆಸಲಾಯಿತು.. ’ ಎಂದು ಕೋರ್ಟಿನ ಮುಂದೆ ಸರಕಾರ  ಹೇಳಿಕೊಂಡಿತು. ಮಾತ್ರವಲ್ಲ, ಈ ಕಾರ್ಯಾಚರಣೆಯಿಂದಾಗಿ ಬಂದೂಕು, 5 ಜೀವಂತ ಗುಂಡುಗಳು ಪತ್ತೆಯಾದುವು  ಎಂದೂ ಸಮರ್ಥಿಸಿಕೊಂಡಿತು. ಆದರೆ,

ನ್ಯಾಯಾಲಯ ಈ ಇಡೀ ಕಾರ್ಯಾಚರಣೆಯನ್ನೇ ಕಾನೂನುಬಾಹಿರ ಎಂದು ಹೇಳಿ ಸರಕಾರವನ್ನು ಕಟುವಾಗಿ ಟೀಕಿಸಿತು.  ಧ್ವಂಸಕಾರ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತು. ಮಾತ್ರವಲ್ಲ,  ಶಫೀಕುಲ್ ಇಸ್ಲಾಮ್, ಅವರ ಇಬ್ಬರು ಸಹೋದರರು ಮತ್ತು ಕುಟುಂಬದ ಮೂವರು ಸಹಿತ ಒಟ್ಟು ಧ್ವಂಸಗೊಳಿಸಲಾದ  ಆರು ಮನೆಗಳಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತು. ಕೊನೆಗೆ 2024 ಮೇ 22ರಂದು ಹಿಮಂತ್ ಬಿಸ್ವ ಶರ್ಮ  ಅವರ ಸರಕಾರ ಕೋರ್ಟಿನ ಮುಂದೆ ತಲೆಬಾಗಿತು. ಮಾತ್ರವಲ್ಲ, ಒಟ್ಟು 32 ಲಕ್ಷದ 50 ಸಾವಿರ ರೂಪಾಯಿ ಪರಿಹಾರ  ನೀಡಿರುವುದನ್ನು ದಾಖಲೆ ಸಮೇತ ನ್ಯಾಯಾಲಯಕ್ಕೆ ಸಮರ್ಪಿಸಿತು. ನಿಜವಾಗಿ,

ಈ ಶಫೀಕುಲ್ ಇಸ್ಲಾಮ್ ಪ್ರಕರಣವು ಭಾರತದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಸರಕಾರಗಳು ಹೇಗೆ ಮುಸ್ಲಿಮರನ್ನು  ದಮನಿಸುತ್ತಿವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಶಫೀಕುಲ್ ಇಸ್ಲಾಮ್‌ರನ್ನು ಬಂಧಿಸಿದ ಪೊಲೀಸರು  ಬಿಡುಗಡೆಗಾಗಿ ಕುಟುಂಬದಿಂದ  10 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪವಿದೆ. ಆದರೆ ಮರುದಿನ  ಕಸ್ಟಡಿಯಲ್ಲೇ  ಶಫೀಕುಲ್ ಇಸ್ಲಾಮ್‌ನ ಸಾವು ಸಂಭವಿಸಿತು. ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟಿತು.  ಇದಾದ ಮರುದಿನ ಪೊಲೀಸರು ಶಫೀಕ್‌ನ ಪತ್ನಿ, ಮಗಳು ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನನ್ನು ಬಂಧಿಸಿ  ಕೊಂಡೊಯ್ದರು. ಇವರ ಮೇಲೆ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಿದರು. ಇದೇ ಸಮಯದಲ್ಲಿ ಇವರ ಮನೆಯನ್ನು  ಅಧಿಕಾರಿಗಳು ಧ್ವಂಸಗೊಳಿಸಿದರು. ಅಲ್ಲದೇ, ಶಫೀಕ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಂಬಂಧಿಗಳ ಮನೆಯನ್ನೂ ಧ್ವಂಸಗೊಳಿಸಲಾಯಿತು. ಅಲ್ಲದೇ, ಮೇ 30ರಂದು ಇನ್ನೋರ್ವ ಆರೋಪಿ ಆಶಿಕುಲ್ ಇಸ್ಲಾಮ್ ಎಂಬವ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈತ ಪೊಲೀಸ್ ಕಸ್ಟಡಿಯಲ್ಲಿದ್ದು, ತಪ್ಪಿಸಿಕೊಳ್ಳುವ  ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸಮರ್ಥಿಸಿಕೊಂಡರು. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ  ಸಲೋನೋಬಾರಿ ಗ್ರಾಮದ ಯಾರೂ ಇರಲಿಲ್ಲ. ಇದು ನಕಲಿ ಎನ್‌ಕೌಂಟರ್ ಎಂದೇ ಅವರೆಲ್ಲ ವಾದಿಸಿದ್ದರು. ಈ  ಸಲೊನೋಬಾರಿ ಗ್ರಾಮದಲ್ಲಿ 3000 ಮಂದಿ ವಾಸಿಸುತ್ತಿದ್ದು, ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರಾಗಿದ್ದಾರೆ.  ನಿಜವಾಗಿ,

ಪ್ರಭುತ್ವಕ್ಕೆ ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ನೂರು ದಾರಿಗಳಿರುವಾಗ, ಜನಸಾಮಾನ್ಯರಿಗೆ ತಮ್ಮ ಸಕ್ರಮವನ್ನು  ಸಮರ್ಥಿಸಿಕೊಳ್ಳುವುದಕ್ಕೆ ಏಕೈಕ ದಾರಿಯೂ ಇರುವುದಿಲ್ಲ. ಏಕೆಂದರೆ, ಪ್ರಭುತ್ವದ ಕೈಯಲ್ಲಿ ಎಲ್ಲವೂ ಇರುತ್ತದೆ. ತನ್ನ  ಅಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿ ದಾಖಲೆಗಳನ್ನೂ ಸನ್ನಿವೇಶಗಳನ್ನೂ ಸೃಷ್ಟಿಸಿಕೊಳ್ಳುವುದಕ್ಕೆ ಅದು  ಶಕ್ತವಿದೆ. ಶಫೀಕುಲ್ ಇಸ್ಲಾಮ್ ಪ್ರಕರಣದಲ್ಲಿಯೇ ಇದಕ್ಕೆ ಆಧಾರವಿದೆ. ಆರಂಭದಲ್ಲಿ ತನ್ನ ಮನೆ ಧ್ವಂಸ  ಕಾರ್ಯಾಚರಣೆಯನ್ನು ಅಕ್ರಮದ ಹೆಸರಲ್ಲಿ ಸಮರ್ಥಿಸಿಕೊಂಡಿದ್ದ ಸರಕಾರ, ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು  ಗೊತ್ತಾದಾಗ ಶಸ್ತ್ರಾಸ್ತ್ರ ಪತ್ತೆಗಾಗಿ ಎಂಬ ಇನ್ನೊಂದು ಸಮರ್ಥನೆಯನ್ನು ಕಂಡುಕೊಂಡಿತ್ತು. ಮಾತ್ರವಲ್ಲ, ನೆಲದಲ್ಲಿ  ಹುದುಗಿಸಿಟ್ಟ ಬಂದೂಕು ಸಿಕ್ಕಿದೆ ಎಂದೂ ತನ್ನ ಧ್ವಂಸವನ್ನು ಸಮರ್ಥಿಸಿಕೊಂಡಿತ್ತು. ಹಾಗಂತ, ಅಕ್ರಮ ಎಂದು ಸುಳ್ಳು  ಹೇಳಿದ್ದ ಸರಕಾರಕ್ಕೆ ಬಂದೂಕು ಪತ್ತೆ ಎಂಬ ಇನ್ನೊಂದು ಸುಳ್ಳು ಹೇಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಹಜ. ಬಹುಶಃ,  ಈ ಸತ್ಯ ಮನವರಿಕೆಯಾದುದರಿಂದಲೇ ಪರಿಹಾರ ಕೊಡುವಂತೆ ಕೋರ್ಟು ಆದೇಶಿಸಿರಬೇಕು. ಇದು ಕೇವಲ ಒಂದೇ  ಒಂದು ನೆಲಸಮ ಕಾರ್ಯಾಚರಣೆಯ ಕತೆ. ಇಂಥ ನೆಲಸಮ ಕಾರ್ಯಾಚರಣೆಯು ಕಳೆದ ಎರಡು ವರ್ಷಗಳಲ್ಲಿ  ಒಂದೂವರೆ ಲಕ್ಷದಷ್ಟಾಗಿದೆ ಎಂದಾದರೆ, ಅದರಲ್ಲಿ ಇಂಥ ಸರಕಾರಿ ಪ್ರಣೀತ ಎಷ್ಟು ಕತೆಗಳಿರಬಹುದು? ನಗರಾಭಿವೃದ್ಧಿ,  ಸರಕಾರಿ ಭೂಮಿ ಒತ್ತುವರಿ, ಅಕ್ರಮ ನಿವಾಸ... ಎಂಬೆಲ್ಲಾ ಚಂದದ ಹೆಸರಲ್ಲಿ ನೆಲಸಮಗೊಳಿಸಲಾದ ಎಷ್ಟು ಸಕ್ರಮ  ನಿವಾಸಗಳಿರಬಹುದು? ಅದರಲ್ಲೂ ‘ಮುಸ್ಲಿಮರು’ ಎಂಬ ಕಾರಣಕ್ಕಾಗಿ ಎಷ್ಟು ಮನೆಗಳ ಮೇಲೆ ಬುಲ್ಡೋಜರ್ ಹರಿದಿರಬಹುದು?

ವರದಿಯನ್ನು ಪ್ರಕಟಿಸಿದ ಫ್ರಂಟ್‌ಲೈನ್ ಪತ್ರಿಕೆಗೂ ಮತ್ತು ವರದಿ ತಯಾರಿಸಿದ ಅನುಜ್ ಬೆಹಲ್‌ರಿಗೂ ಧನ್ಯವಾದ.

Monday, 8 July 2024

ಮುಹಮ್ಮದ್ ಸಿರಾಜ್ ನ 'ಅಲ್ಲಾಹ್' ಗೆ ವಿರೋಧ ಏಕೆ?





ಭಾರತದಲ್ಲಿ ಮುಸ್ಲಿಮ್ ದ್ವೇಷ ಎಷ್ಟು ಆಳವಾಗಿದೆ ಎಂಬುದಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮುಹಮ್ಮದ್ ಸಿರಾಜ್ ಒಂದೊಳ್ಳೆಯ  ಉದಾಹರಣೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿರುವಾಗ ಕೆಲವರಿಗೆ ಸಿರಾಜ್‌ನಲ್ಲಿ ಇಸ್ಲಾಮ್  ಕಾಣಿಸಿದೆ. ವಿಶ್ವಕಪ್ಪನ್ನು ಎತ್ತಿ ಹಿಡಿದ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಾಜ್, Thank you Almighty Allah ಎಂದು ಬರಕೊಂಡಿದ್ದರು. ಇದನ್ನೇ ಅಪರಾಧವಾಗಿ ಕಂಡಿರುವ ಅನೇಕರು ಸಿರಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು  ಭಾರತೀಯ ತಂಡದ ಗೆಲುವೇ ಹೊರತು ಅಲ್ಲಾಹನದ್ದಲ್ಲ’ ಎಂದು ಓರ್ವ ಬರೆದರೆ, ‘ಅಲ್ಲಾಹನಿಂದ ಇದು ಸಾಧ್ಯ ಎಂದಾಗಿದ್ದರೆ  ಪಾಕಿಸ್ತಾನ ವಿಶ್ವಕಪ್ ಗೆಲ್ಲುತ್ತಿತ್ತೇ ಹೊರತು ಭಾರತವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ‘ಭಾರತ ವಿಶ್ವಕಪ್ ಗೆದ್ದಿರೋದಕ್ಕೆ ಅ
ಲ್ಲಾಹನೂ  ಕಾರಣವಲ್ಲ, ಮುಸ್ಲಿಮ್ ಆಟಗಾರನೂ ಕಾರಣವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ಇಂಥ ದ್ವೇಷಪೂರಿತ ಇನ್ನಷ್ಟು ಪ್ರತಿಕ್ರಿಯೆಗಳು ಸಿರಾಜ್  ಇನ್‌ಸ್ಟಾಗ್ರಾಮ್ ನಲ್ಲಿದೆ..  ನಿಜವಾಗಿ,

ಅತೀವ ಆನಂದದ ವೇಳೆ ವ್ಯಕ್ತಪಡಿಸುವ ಭಾವನೆಗಳನ್ನು ಸನ್ನಿವೇಶದಿಂದ ಬೇರ್ಪಡಿಸಿ ಓದುವುದೇ ತಪ್ಪು. ಗೆದ್ದ ಖುಷಿಯಲ್ಲಿದ್ದ ಸಿರಾಜ್ ದೇವನನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಭಾಷೆಯಲ್ಲಿ ದೇವನನ್ನು ಅಲ್ಲಾಹ್ ಅನ್ನುತ್ತಾರೆ. ಹಾಗೆಯೇ, ವಿರಾಟ್ ಕೊಹ್ಲಿ ದೇವನನ್ನು ಗಾಡ್  ಅನ್ನುತ್ತಾರೆ. ಅದು ಅವರ ಭಾಷೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ವಿರಾಟ್ ಕೋಹ್ಲಿ ತನ್ನ ಸಂತಸವನ್ನು ವ್ಯಕ್ತಪಡಿಸಿರುವುದು ಹೀಗೆ:

This was my last T20 World Cup; this is exactly what we wanted to achieve. One day you feel like you can't get a run, and this happens, God is great..

ಕೊಹ್ಲಿ ಮತ್ತು ಸಿರಾಜ್ ಇಬ್ಬರೂ ತಮ್ಮ ತಂಡದ ಸಾಧನೆಗಾಗಿ ದೇವನನ್ನು ಸ್ಮರಿಸಿದ್ದಾರೆ. ಆದರೆ ಯಾರೂ ಕೊಹ್ಲಿಯನ್ನು ಟ್ರೋಲ್ ಮಾಡಿಲ್ಲ.  ‘ಫೈನಲ್ ಪಂದ್ಯದಲ್ಲಿ 76 ರನ್ ಮಾಡಿರುವುದು ಕೊಹ್ಲಿ, ಹೀಗಿರುವಾಗ, ದೇವನೇಕೆ ದೊಡ್ಡವನಾಗಬೇಕು, ಆಡಿದ್ದು ದೇವನಾ..’ ಎಂದು ಯಾರೂ  ಪ್ರಶ್ನಿಸಿಲ್ಲ. ಆದರೆ ಸಿರಾಜ್ ಅದನ್ನೇ ತನ್ನ ಭಾಷೆಯಲ್ಲಿ ಹೇಳಿದಾಗ ಅದು ಮಹಾ ಅಪರಾಧವಾಗುತ್ತದೆ. ಮಾತ್ರವಲ್ಲ, ದೇವರು ಒಂದುವೇಳೆ ಗೆಲ್ಲಿಸುವುದಾದರೆ, ಪಾಕಿಸ್ತಾನವನ್ನು ಗೆಲ್ಲಿಸಬೇಕೇ ಹೊರತು ಭಾರತವನ್ನಲ್ಲ ಎಂಬ ಅತೀ ಕಳಪೆ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುತ್ತಾರೆ. ಅಲ್ಲಾಹ್  ಎಂದರೆ ಮುಸ್ಲಿಮರ ದೇವ ಮತ್ತು ಆತ ಮುಸ್ಲಿಮ್ ಪಕ್ಷಪಾತಿ ಎಂಬ ಅವರ ಅಪಕ್ವ ಆಲೋಚನೆಯೇ ಈ ರೀತಿಯ ಪ್ರತಿಕ್ರಿಯೆಗೆ ಮೂಲ  ಕಾರಣ.

ಈ ಬಾರಿ ಸಂಸತ್ ಸದಸ್ಯರ ಪ್ರಮಾಣ ವಚನದ ವೇಳೆ ಪ್ರಮುಖ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರು ‘ಈಶ್ವರನ’ ಹೆಸರಲ್ಲಿ ಪ್ರತಿಜ್ಞೆ  ಸ್ವೀಕರಿಸಿದರು. ಹಾಗಂತ, ಯೂಸುಫ್ ಪಠಾಣ್ ಹಿಂದೂ ಅಲ್ಲ. ಅವರ ತಂದೆ ಓರ್ವ ಧರ್ಮಗುರು. ಧೋನಿ ನೇತೃತ್ವದ ತಂಡ 2007ರಲ್ಲಿ  ಟಿ20 ವಿಶ್ವಕಪ್ ಗೆದ್ದಾಗ ಅದರ ಭಾಗವಾಗಿದ್ದವರು ಇದೇ ಯೂಸುಫ್ ಪಠಾಣ್. ಧಾರ್ಮಿಕ ಕುಟುಂಬದಿಂದ  ಬಂದ ಮತ್ತು ಧರ್ಮವನ್ನು  ನಿಷ್ಠೆಯಿಂದ ಅನುಸರಿಸುವ ಯೂಸುಫ್ ಪಠಾಣ್, ಅಲ್ಲಾಹನನ್ನು ಈಶ್ವರ್ ಅಂದರು. ಸಿರಾಜ್ ನೇರವಾಗಿಯೇ ಅಲ್ಲಾಹ್ ಅಂದರು. ಎರಡರ  ಅರ್ಥವೂ ಭಿನ್ನವಾಗಿಲ್ಲ. ಅಲ್ಲದೆ, ಅಲ್ಲಾಹನನ್ನು ಈಶ್ವರ್ ಎಂದ ಯೂಸುಫ್ ಪಠಾಣ್‌ರನ್ನೂ ಮುಸ್ಲಿಮರು ಟೀಕಿಸಿಲ್ಲ, ಸಿರಾಜ್‌ನನ್ನೂ ಟೀಕಿಸಿಲ್ಲ.  ಯಾಕೆಂದರೆ, ಅಲ್ಲಾಹ್ ಎಂಬ ಪದದ ಅರ್ಥ ಏನು ಅನ್ನುವುದು ಅವರಿಗೆ ಗೊತ್ತಿದೆ. ಸರ್ವಶಕ್ತ, ಸೃಷ್ಟಿಕರ್ತ, ದೇವ ಎಂಬ ಅರ್ಥದಲ್ಲಿ  ಮುಸ್ಲಿಮರು ಅಲ್ಲಾಹ್ ಎಂಬ ಪದ ಬಳಸುತ್ತಾರೆ. ಅಲ್ಲಾಹ್ ಎಂದರೆ, ಮುಸ್ಲಿಮರ ದೇವ ಮತ್ತು ಈಶ್ವರ್ ಅಂದರೆ ಹಿಂದೂಗಳ ದೇವ ಎಂಬ  ಅರ್ಥ ಇಲ್ಲವೇ ಇಲ್ಲ. ಹಾಗಂತ, ಸಿರಾಜ್‌ನನ್ನು ಟೀಕಿಸಿದವರಿಗೆ ಈ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಈ ಟೀಕೆ ಈಗಾಗಲೇ ಈ ದೇಶದಲ್ಲಿ ಬೆಂಕಿ ಕೊಟ್ಟು ಹೊತ್ತಿಸಿ ಬಿಡಲಾಗಿರುವ ಮುಸ್ಲಿಮ್ ದ್ವೇಷಭಾವದ ಫಲಿತಾಂಶ ಎಂದು ಹೇಳುವುದೇ ಹೆಚ್ಚು ಸರಿ. ಯಾಕೆಂದರೆ,

ಈ ಬಗೆಯ ದ್ವೇಷಭಾವ ವ್ಯಕ್ತವಾಗಿರುವುದು ಇದೇ ಮೊದಲಲ್ಲ. 2021 ಅಕ್ಟೋಬರ್‌ನಲ್ಲೂ ಇಂಥದ್ದೇ  ಮುಸ್ಲಿಮ್ ದ್ವೇಷ ವ್ಯಕ್ತವಾಗಿತ್ತು. ಆಗ  ನಿಂದನೆಗೆ ಗುರಿಯಾದದ್ದು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ  ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಶಮಿಯ ಬೌಲಿಂಗ್ ಉತ್ತಮವಾಗಿರಲಿಲ್ಲ. ಪಾಕ್ ತಂಡ ಹತ್ತು ವಿಕೆಟ್‌ಗಳಿಂದ ಆ ಪಂದ್ಯವನ್ನು  ಗೆದ್ದುಕೊಂಡಿತ್ತು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶಮಿಯನ್ನು ತೀವ್ರವಾಗಿ ನಿಂದಿಸಲಾಯಿತು. ದ್ರೋಹಿ, ಪಾಕ್ ಬೆಂಬಲಿಗ, ಮ್ಯಾಚ್  ಫಿಕ್ಸಿಂಗ್ ಮಾಡಿದವ ಎಂದೆಲ್ಲಾ ಜರೆಯಲಾಯಿತು. ಹಾಗಂತ, ಆ ಪಂದ್ಯ ಸೋಲುವುದಕ್ಕೆ ಶಮಿ ಒಬ್ಬರೇ ಕಾರಣವಾಗಿರಲಿಲ್ಲ. ಬ್ಯಾಟುಗಾರರೂ  ಕಾರಣವಾಗಿದ್ದರು. ಇತರ ಬೌಲರ್‌ಗಳೂ ಕಾರಣವಾಗಿದ್ದರು. ಆದರೆ, ಅವೆಲ್ಲವನ್ನೂ ಅಡಗಿಸಿ ದುಬಾರಿ ಒಂದು ಓವರನ್ನೇ ಕಟಕಟೆಯಲ್ಲಿ ನಿಲ್ಲಿಸಿದುದೇಕೆ ಎಂಬ ಪ್ರಶ್ನೆಗೆ ಉತ್ತರ ಬೇರೇನೂ ಅಲ್ಲ- ಮುಸ್ಲಿಮ್ ದ್ವೇಷ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಆಳವಾಗಿದೆ. ರಾಜಕೀಯ ಕಾರಣಕ್ಕಾಗಿ ಮಣ್ಣು, ನೀರು, ಗೊಬ್ಬರ ಹಾಕಿ ಬೆಳೆಸಲಾದ ಈ ದ್ವೇಷವೆಂಬ ಸಸಿ  ಇವತ್ತು ಬೆಳೆದು ಹೆಮ್ಮರವಾಗಿದೆ. ಪ್ರತಿಯೊಂದರಲ್ಲೂ ಮುಸ್ಲಿಮ್ ದ್ವೇಷಕ್ಕೆ ಕಾರಣವನ್ನು ಹುಡುಕುವ ಅಪಾಯಕಾರಿ ಗುಂಪು ತಯಾರಾಗಿದೆ.  ಅಂದಹಾಗೆ, ಇಂಥ ಗುಂಪಿನಲ್ಲಿರುವವರ ಸಂಖ್ಯೆ ಸಣ್ಣದು ಎಂದು ಹೇಳಿ ನಮಗೆ ತಿರಸ್ಕರಿಸಬಹುದು. ಆದರೆ, ಈ ಸಣ್ಣ ಗುಂಪು ಸಮಾಜದ  ಮೇಲೆ ಬೀರುತ್ತಿರುವ ಪರಿಣಾಮಗಳು ಸಣ್ಣದಲ್ಲ ಮತ್ತು ಇಂಥವರು ತೀರಾ ಜನಸಾಮಾನ್ಯರೂ ಅಲ್ಲ. ಸಿರಾಜ್ ವಿರುದ್ಧ ವೆರಿಫೈಡ್  ಖಾತೆಗಳಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದೇ ಈ ಗುಂಪಿನ ಆಳ-ಅಗಲವನ್ನು ತಿಳಿಸುತ್ತದೆ. ಇಂಥ ಗುಂಪಿನ ಸಂಖ್ಯೆ ಎಷ್ಟೇ ಸಣ್ಣದಿರಲಿ,  ಅದು ತನ್ನ ದ್ವೇಷ ಭಾವವನ್ನು ಜನಸಾಮಾನ್ಯರ ಬಳಿಗೂ ತಲುಪಿಸುವಷ್ಟು ಪ್ರಭಾವಶಾಲಿಯಾಗಿದೆ. ದ್ವೇಷಕ್ಕೆ ಪೂರಕವಾದ ಏನೂ ಇಲ್ಲದಿದ್ದರೂ  ಅನಾವಶ್ಯಕವಾಗಿ ಅಂಥದ್ದೊಂದು  ಭಾವವನ್ನು ಸೃಷ್ಟಿಸಿ ಹಂಚುವುದು ಇಂಥ ಗುಂಪಿನ ಪೂರ್ಣಕಾಲಿಕ ಉದ್ಯೋಗ. ಮುಸ್ಲಿಮ್ ಜನಸಾಮಾ ನ್ಯರಿಂದ ಹಿಡಿದು ಸಿನಿಮಾ ರಂಗ, ಕ್ರೀಡಾ ರಂಗ, ಕಲಾರಂಗ, ಅಧಿಕಾರಿ ವರ್ಗ ಸಹಿತ ಎಲ್ಲರನ್ನೂ ಹಿಂದೂ ವಿರೋಧಿಗಳಂತೆ ಅಥವಾ  ಕರ್ಮಠರಂತೆ ಚಿತ್ರಿಸುವುದನ್ನು ಈ ಗುಂಪು ಮಾಡುತ್ತಾ ಬರುತ್ತಿದೆ. ಮಾತ್ರವಲ್ಲ, ಮುಸ್ಲಿಮರ ಜೊತೆ ಸ್ನೇಹಮಯ ಸಂಬಂಧವನ್ನು ಹೊಂದಿರುವ  ಮತ್ತು ಮುಸ್ಲಿಮ್ ದ್ವೇಷಭಾವವನ್ನು ಪ್ರಶ್ನಿಸುವ ಹಿಂದೂಗಳನ್ನೂ ಈ ಗುಂಪು ಟ್ರೋಲ್ ಮಾಡುತ್ತಿದೆ. ಈ ಗುಂಪಿಗೆ ಆಯಕಟ್ಟಿನ ಜಾಗದಲ್ಲಿರುವವರ ಬೆಂಬಲವೂ ಇದೆ. ರಾಜಕೀಯ ಆಶ್ರಯವೂ ಸಿಗುತ್ತಿದೆ. ಆದ್ದರಿಂದ,

ಗುಂಪು  ಸಣ್ಣದಾಗಿದ್ದರೂ ಅದು ಹುಟ್ಟು ಹಾಕುವ ಕಲ್ಪಿತ ಬರಹಗಳು ಮತ್ತು ಪ್ರತಿಕ್ರಿಯೆಗಳು ತಳಮಟ್ಟದ ಜನಸಾಮಾನ್ಯರನ್ನು ತಲುಪಬಲ್ಲಷ್ಟು  ಶಕ್ತಿಶಾಲಿಯಾಗಿದೆ. ಈ ಕಾರಣದಿಂದಲೇ ಸಿರಾಜ್‌ರ ವಿರುದ್ಧ ವ್ಯಕ್ತವಾಗಿರುವ ದ್ವೇಷಭಾವದ ಪ್ರತಿಕ್ರಿಯೆಗಳು ಮಹತ್ವ ಪಡೆಯುತ್ತವೆ. 11 ಮಂದಿಯ  ಸಾಂಘಿಕ ಆಟವಾಗಿ ಗುರುತಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಒಬ್ಬ ಮುಸ್ಲಿಮನ ಒಂದು ಬಾರಿಯ ಕಳಪೆ ಪ್ರದರ್ಶನವನ್ನು ಹೆಕ್ಕಿ ಜರೆಯುವುದೆಂದರೆ,  ಅದಕ್ಕೆ ಆಟದ ಮೇಲಿನ ಪ್ರೀತಿ ಕಾರಣ ಎಂದು ಹೇಳುವುದಕ್ಕಿಂತ ಆಟಗಾರನ ಧರ್ಮದ ಮೇಲಿನ ದ್ವೇಷವೇ ಕಾರಣ ಅನ್ನುವುದೇ ಸರಿ. ಇದಕ್ಕೆ  ಓರ್ವ ಸಿರಾಜ್ ಮಾತ್ರ ಉದಾಹರಣೆಯಲ್ಲ. ಮುಹಮ್ಮದ್ ಶಮಿಯನ್ನೂ ಹೀಗೆಯೇ ನಡೆಸಿಕೊಳ್ಳಲಾಗಿದೆ. ಮಾತ್ರವಲ್ಲ, ದೇಶದಾದ್ಯಂತ  ಮುಸ್ಲಿಮರ ಮೇಲೆ ಆಗುತ್ತಿರುವ ಅನ್ಯಾಯ-ದೌರ್ಜನ್ಯ ಮತ್ತು ಸುಳ್ಳು ಪ್ರಚಾರಗಳಲ್ಲೂ ಇದು ವ್ಯಕ್ತವಾಗುತ್ತಿದೆ. ನಿಜವಾಗಿ,

ಸಮಸ್ಯೆ ಸಿರಾಜ್‌ನ ಅಲ್ಲಾಹನದ್ದಲ್ಲ. ಈ ಅಲ್ಲಾಹನನ್ನು ದ್ವೇಷಿಸುತ್ತಿರುವ ನಿರ್ದಿಷ್ಟ ಮನಸ್ಥಿತಿಯದ್ದು. ಅಲ್ಲಾಹ್, ಈಶ್ವರ್, ಗಾಡ್ ಎಂಬುದೆಲ್ಲಾ  ದೇವನನ್ನು ಸಂಬೋಧಿಸುವ ವಿವಿಧ ಪದಗಳು ಎಂಬುದನ್ನು ಈ ಗುಂಪಿಗೆ ತಿಳಿಸಿಕೊಡಬೇಕಾದ ಅಗತ್ಯವೂ ಇಲ್ಲ. ಯಾಕೆಂದರೆ, ಗೊತ್ತಿದ್ದೇ  ಈ  ಗುಂಪು ಧರ್ಮ ದ್ವೇಷಕ್ಕೆ ಇಳಿದಿದೆ. ಒಂದುವೇಳೆ, ಅಲ್ಲಾಹ್ ಎಂಬ ಪದದ ಬದಲು ಈಶ್ವರ್ ಎಂದು ಸಿರಾಜ್ ಬರೆದುಕೊಂಡಿರುತ್ತಿದ್ದರೆ ಇದೇ  ಗುಂಪು ಸಿರಾಜ್‌ನನ್ನು ಹಾಡಿ ಹೊಗಳುತ್ತಿತ್ತು ಎಂಬುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿಲ್ಲ.

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?





ಕ್ರಿ.ಶ. 622, ಮುರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು? 

ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. ಇಸ್ಲಾಮೀ ಇತಿಹಾಸದ ಬಹುಮುಖ್ಯ ಮಗ್ಗುಲಾದ ಹುದೈಬಿಯಾ ಒಪ್ಪಂದ ನಡೆದಿರುವುದು ದುಲ್ ಕಅದ್ 6ರಂದು.  ಕ್ರಿ.ಶ. 630ರ ರಮಝಾನ್‌ನಲ್ಲಿ ಇಸ್ಲಾಮೀ ಇತಿಹಾಸದ ಮೈಲುಗಲ್ಲೆಂದೇ  ವಿಶ್ಲೇಷಿಸಲಾಗುವ ಮಕ್ಕಾ ವಿಜಯ ದೊರಕಿದೆ. ಇದಲ್ಲದೇ, ಇಸ್ಲಾಮೀ  ಇತಿಹಾಸದಲ್ಲಿ ಇಂಥ ಇನ್ನೂ ಒಂದಕ್ಕಿಂತ  ಹೆಚ್ಚು ಘಟನೆಗಳಿವೆ. ಆದರೆ, ಇವಾವುದನ್ನೂ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಿಗೆ  ಆಧಾರವಾಗಿ ಖಲೀಫಾ ಉಮರ್(ರ) ಬಳಸಿಕೊಳ್ಳದಿರಲು ಕಾರಣವೇನು? ಬದ್ರ‍್ ನಲ್ಲಿ  ಇಲ್ಲದ ಏನನ್ನು ಅವರು ಹಿಜ್‌ರಾದಲ್ಲಿ ಕಂಡುಕೊಂಡರು?  ಮಕ್ಕಾ ವಿಜಯಕ್ಕಿಂತ ಹಿಜ್‌ರಾ ಮುಖ್ಯವಾಗುವುದಕ್ಕೆ ಕಾರಣ ಏನಿರಬಹುದು?

ನಿಜವಾಗಿ, ತನ್ನ 53ನೇ ಪ್ರಾಯದಲ್ಲಿ ಪ್ರವಾದಿ(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸುತ್ತಾರೆ. ಅದಾಗಲೇ ಮಕ್ಕಾದಲ್ಲಿದ್ದ  ಹೆಚ್ಚಿನ ಪ್ರವಾದಿ(ಸ) ಅನುಯಾಯಿಗಳು ಮದೀನಾಕ್ಕೆ ವಲಸೆ ಹೋಗಿದ್ದರು. ಉಳಿದವರೂ ಮಕ್ಕಾವನ್ನು ಬಿಡಲಿದ್ದಾರೆ ಎಂಬುದು ಪ್ರವಾದಿ  ವಿರೋಧಿಗಳಿಗೆ ದಿಟವಾಗಿತ್ತು. ಆದ್ದರಿಂದ, ಈ ವಲಸೆಯನ್ನು ತಡೆಯಬೇಕು ಮತ್ತು ಅದಕ್ಕಾಗಿ ಪ್ರವಾದಿಯನ್ನು(ಸ) ವಧಿಸಬೇಕು ಎಂಬ ಸಂಚನ್ನು ಅವರು ಹೂಡಿದರು. ಎಲ್ಲ ಬುಡಕಟ್ಟುಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಗುಂಪು ರಚಿಸಿ  ಅರ್ಧರಾತ್ರಿ ಪ್ರವಾದಿ(ಸ) ಮನೆಯ ಸುತ್ತ ನಿಲ್ಲಿಸಿದರು.  ಪ್ರವಾದಿ(ಸ) ಹತ್ಯೆಯ ಬಳಿಕ ಸಂಭಾವ್ಯ ಪ್ರತೀಕಾರವನ್ನು ಈ ವಿರೋಧಿಗಳು ನಿರೀಕ್ಷಿಸಿದ್ದರು. ಆದರೆ ಮಕ್ಕಾದ ಎಲ್ಲ ಬುಡಕಟ್ಟುಗಳೂ ಜೊತೆ  ಸೇರಿ ಹತ್ಯೆ ನಡೆಸಿದರೆ ಪ್ರವಾದಿಯ ಹಾಶಿಮ್ ಮನೆತನಕ್ಕೆ ಈ ಎಲ್ಲ ಬುಡಕಟ್ಟುಗಳ ವಿರುದ್ಧ ಪ್ರತೀಕಾರ ತೀರಿಸಲು ಸಾಧ್ಯವಿಲ್ಲ ಎಂಬ ತಂತ್ರದ  ಭಾಗವಾಗಿಯೇ ಈ ವಿಶೇಷ ಗುಂಪನ್ನು ರಚಿಸಲಾಗಿತ್ತು. ಈ ಷಡ್ಯಂತ್ರವನ್ನು ಅಲ್ಲಾಹನು ಪ್ರವಾದಿಗೆ(ಸ) ತಿಳಿಸಿರುವುದನ್ನು ಪವಿತ್ರ ಕುರ್‌ಆನ್  (8:30) ಉಲ್ಲೇಖಿಸಿದೆ. ಪ್ರವಾದಿ ಹಿಡಿ ಮರಳನ್ನು ತೆಗೆದು ತನ್ನ ಮನೆ ಎದುರು ನಿಂತಿದ್ದ ಹತ್ಯೆಕೋರ ಗುಂಪಿನ ಮೇಲೆ ಎಸೆಯುತ್ತಾರೆ ಮತ್ತು  ಅವರ ಮುಂದೆಯೇ ಪ್ರವಾದಿ(ಸ) ಆ ರಾತ್ರಿ ಹೊರಟು ಹೋಗುತ್ತಾರೆ ಎಂಬುದು ಇಸ್ಲಾಮೀ ಇತಿಹಾಸದಲ್ಲಿ ದಾಖಲಾಗಿದೆ. ಅಲ್ಲದೇ, ವಲಸೆಯ  ಭಾಗವಾಗಿ ಪ್ರವಾದಿ(ಸ) ತನ್ನ ಸಂಗಾತಿ ಅಬೂಬಕರ್(ರ) ಜೊತೆ ತೂರ್ ಎಂಬ ಗುಹೆಯಲ್ಲಿ ಮೂರು ದಿನಗಳ ಕಾಲ ತಂಗಿದಾಗ ಗುಹೆಯ  ದ್ವಾರದಲ್ಲಿ ಪಾರಿವಾಳ ಗೂಡು ಕಟ್ಟಿ ಮೊಟ್ಟೆ ಇಡುವುದು, ಜೇಡ ಬಲೆ ಕಟ್ಟುವುದೂ ನಡೆಯುತ್ತದೆ. ಆ ಮೂಲಕ ಇವರನ್ನು ಹುಡುಕಿಕೊಂಡು  ಬಂದ ಶತ್ರುಗಳು ಈ ಗುಹೆಯಲ್ಲಿ ಅವರಿರಲು ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ. ಪ್ರವಾದಿಯನ್ನು ಹುಡುಕಿಕೊಂಡು ಬಂದ ಸುರಾಕಾ  ಎಂಬವನ ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುವುದು ಮತ್ತು ವಲಸೆಯ ದಾರಿಯಾಗಿ ಪ್ರವಾದಿಯವರು(ಸ) ಉಮ್ಮು ಮುಆದ್‌ರ  ಮನೆಯಲ್ಲಿ ತಂಗುವುದು, ಅವರ ಸಣಕಲು ಆಡು ದಷ್ಟಪುಷ್ಟವಾಗಿ ಹಾಲು ನೀಡುವುದೂ ನಡೆಯುತ್ತದೆ. ಆದರೆ,
ಈ ಪವಾಡಗಳ ಆಚೆಗೆ, ಹಿಜ್‌ರಾ ಮುಖ್ಯವಾಗುವುದು ಪ್ರವಾದಿಯ(ಸ) ದೂರದೃಷ್ಟಿ, ಧೈರ್ಯ, ಪ್ರತಿತಂತ್ರ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ  ವಿಧಾನಗಳಿಗಾಗಿ ಎಂದೇ ಹೇಳಬಹುದು. 

ತನ್ನ ಮನೆಯ ಸುತ್ತ ನಿಂತಿದ್ದ ಹತ್ಯೆಕೋರ ಗುಂಪಿನ ಕಡೆಗೆ ಮರಳನ್ನೆಸೆದು ಆ ಅರ್ಧರಾತ್ರಿ ಹೊರಟು  ಹೋಗುವ ಮೊದಲು ಪ್ರವಾದಿ(ಸ) ತನ್ನ ಜಾಗದಲ್ಲಿ ಆಪ್ತ ಅಲಿ(ರ)ರನ್ನು ಮಲಗಿಸಿದ್ದರು. ತನ್ನನ್ನು ಕೊಲ್ಲಲೆಂದು ಮನೆಯನ್ನು ಸುತ್ತುವರಿದು  ನಿಂತವರು ತಾನಿನ್ನೂ ಮನೆಯೊಳಗೆ ಮಲಗಿದ್ದೇನೆಂದು ಭಾವಿಸಲಿ ಎಂಬುದು ಅವರ ಉದ್ದೇಶವಾಗಿತ್ತು. ಅಲ್ಲಾಹನ ಸಹಾಯದ  ಹೊರತಾಗಿಯೂ ಪ್ರವಾದಿ(ಸ) ಇಂಥ ದ್ದೊಂದು ಪ್ರತಿತಂತ್ರವನ್ನು ಹೆಣೆದರು ಎಂಬುದು ಇಲ್ಲಿ ಬಹಳ ಮುಖ್ಯ. ಆ ಬಳಿಕ ಪ್ರವಾದಿ(ಸ)  ನೇರವಾಗಿ ಮದೀನಾದ ಕಡೆಗೆ ನಡೆಯಲಿಲ್ಲ. ಮದೀನಾಕ್ಕೆ ತೀರಾ ವಿರುದ್ಧ ದಾರಿಯಲ್ಲಿ ಸಾಗಿ ತೂರ್ ಎಂಬ ಗುಹೆಯ ಒಳಗೆ ಅಡಗಿಕೊಂಡರು.  ಬೆನ್ನಟ್ಟಿ ಬರುವ ಶತ್ರುಗಳ ದಾರಿ ತಪ್ಪಿಸುವುದೇ ಇದರ ಗುರಿಯಾಗಿತ್ತು. ಬಳಿಕ ಬೆನ್ನಟ್ಟಿ ಬಂದ ಶತ್ರುಗಳು ಈ ಗುಹೆಯ ಸಮೀಪಕ್ಕೆ ಬಂದುದು  ಮತ್ತು ಅವರ ಕಾಲ ಸಪ್ಪಳ ಕೇಳಿಸುವುದೂ ನಡೆಯಿತು. ಸಂಗಡಿಗ ಅಬೂಬಕರ್ ಆತಂಕಿತರಾದರು. ಶತ್ರುಗಳು ಇಣುಕಿ ನೋಡಿಬಿಟ್ಟರೆ ಎಂಬ  ಭಯವನ್ನು ಅವರು ತೋಡಿಕೊಂಡರು. ಆಗ, ‘ಭಯ ಪಡಬೇಡಿ, ಅಲ್ಲಾಹನು ನಮ್ಮ ಜೊತೆ ಇದ್ದಾನೆ’ (9:40) ಎಂದು ಪ್ರವಾದಿ(ಸ) ಸಾಂತ್ವನ ಪಡಿಸುವುದು ಕುರ್‌ಆನ್ ನಲ್ಲಿದೆ. ಶತ್ರುಗಳ ತಂತ್ರಕ್ಕೆ ಪ್ರತಿತಂತ್ರವನ್ನು ಹೆಣೆದ ಬಳಿಕ ಅಲ್ಲಾಹನ ಮೇಲೆ ಅಚಂಚಲ ಮತ್ತು ಕಲ್ಮಶವಿಲ್ಲದ ವಿಶ್ವಾಸ  ಇಟ್ಟುಕೊಳ್ಳಬೇಕು ಎಂಬ ಅತಿ ಪ್ರಬಲವಾದ ಸಂದೇಶವನ್ನು ಅವರು ನೀಡಿದರು. ಶತ್ರುಗಳು ಕೈಯಳತೆಯ ದೂರವಷ್ಟೇ ಇದ್ದಾಗ ಪ್ರವಾದಿ ಈ  ಆತ್ಮವಿಶ್ವಾಸದ ಮಾತನ್ನಾಡಿದ್ದರು ಎಂಬುದು ಇಲ್ಲಿ ಬಹಳ ಮುಖ್ಯ. ಅಲ್ಲಿಂದ ಪ್ರವಾದಿ(ಸ) ಮತ್ತು ಅಬೂಬಕರ್ ಹೊರಟು ಹೋಗುತ್ತಾರೆ. ಇತ್ತ  ಅವರನ್ನು ಹುಡುಕಿ ನಿರಾಶರಾದ ಶತ್ರುಗಳು ಅವರನ್ನು ಪತ್ತೆ ಹಚ್ಚುವವರಿಗೆ 100 ಒಂಟೆಗಳ ಇನಾಮು ಘೋಷಿಸುತ್ತಾರೆ. ಇದರಿಂದ ಪ್ರೇರಿತನಾದ  ಸುರಾಕಾ ಎಂಬ ಮರಳುಗಾಡಿನ ಚತುರ ವ್ಯಕ್ತಿ ಪ್ರವಾದಿ(ಸ)ರ ಬೆನ್ನಟ್ಟುತ್ತಾರೆ. ಮಾತ್ರವಲ್ಲ, ಪ್ರವಾದಿಯ ಹತ್ತಿರಕ್ಕೂ ತಲುಪುತ್ತಾರೆ. ಆದರೆ ಅವರ  ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುತ್ತದೆ. ಆಗ ಪ್ರವಾದಿ(ಸ) ಈ ಸುರಾಕಾನಲ್ಲಿ ಹೀಗೆ ಹೇಳುತ್ತಾರೆ,

 ‘ಒಂದು ದಿನ ರೋಮ್‌ನ  ಚಕ್ರಾಧಿಪತಿ ಕಿಸ್ರಾನ ಕೈಬಳೆ ನಿನ್ನ ಕೈಗೆ ಬರಲಿದೆ.’ ಅಂದರೆ ನಿನ್ನ ಜೀವಂತ ಕಾಲದಲ್ಲೇ  ರೋಮ್ ಸಾಮ್ರಾಜ್ಯವು ಇಸ್ಲಾಮೀ ಸಾಮ್ರಾಜ್ಯದ ಅಧೀನಕ್ಕೆ ಒಳಪಡಲಿದೆ ಎಂದು ಅರ್ಥ. ಇದು ಆ ಬಳಿಕ ನಿಜವೂ ಆಯಿತು. ನಿಜವಾಗಿ,
ಸುರಾಕಾನಲ್ಲಿ ಇಂಥದ್ದೊಂದು  ಮಾತನ್ನು ಹೇಳುವಾಗ ಪ್ರವಾದಿಗೆ(ಸ) ಮಕ್ಕಾದಲ್ಲಿ ಅಸ್ತಿತ್ವವೇ ಇರಲಿಲ್ಲ. ಮದೀನಾ  ಹೇಗೆ ಸ್ವೀಕರಿಸುತ್ತದೆ  ಎಂಬುದೂ ಅವರಿಗೆ ದೃಢವಿರಲಿಲ್ಲ. ತನ್ನದೆಂದು ಹೇಳಿಕೊಳ್ಳುವ ಒಂದು ಊರೇ ಇಲ್ಲದ ಸಮಯದಲ್ಲೂ ಪ್ರವಾದಿ(ಸ) ಆಡಿರುವ ಈ  ಮಾತುಗಳು ಓರ್ವ ಸತ್ಯವಿಶ್ವಾಸಿಯಲ್ಲಿ ಇರಬೇಕಾದ ಆತ್ಮವಿಶ್ವಾಸ, ದೂರದೃಷ್ಟಿ ಮತ್ತು ಅಚಲ ದೇವವಿಶ್ವಾಸದ ಮಹತ್ವವನ್ನು ಹೇಳುತ್ತದೆ.  ಒಂದುರೀತಿಯಲ್ಲಿ,

ಅಲ್ಲಾಹನ ಮಾರ್ಗದರ್ಶನದ ಹೊರತಾಗಿಯೂ ಪ್ರವಾದಿ(ಸ) ಹಲವು ಪ್ರಾಯೋಗಿಕ ಮತ್ತು ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡರು.  ಸಾಂದರ್ಭಿಕ ತಂತ್ರಗಳನ್ನು ಹೆಣೆದರು. ಅತ್ಯಪೂರ್ವವಾದ ದೂರದೃಷ್ಟಿಯನ್ನೂ ಹೊಂದಿದ್ದರು. ಜೊತೆಗೇ ಅಲ್ಲಾಹನ ಮೇಲೆ ಅಚಂಚಲವಾದ  ವಿಶ್ವಾಸವನ್ನೂ ಇಟ್ಟಿದ್ದರು. ಓರ್ವ ನಾಯಕ ಹೇಗಿರಬೇಕು ಮತ್ತು ಅತ್ಯಂತ ಸವಾಲಿನ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಮನಸ್ಥಿತಿ ಏನಿರಬೇಕು  ಎಂಬುದನ್ನು ಹಿಜ್‌ರಾ ಸ್ಪಷ್ಟಪಡಿಸುತ್ತದೆ. ಸುತ್ತುವರಿದಿರುವ ಶತ್ರುಗಳು ಇನ್ನೇನು ಗುರಿ ಸಾಧಿಸಿಯೇ ಬಿಡುತ್ತಾರೆ ಎಂಬಂತ  ಸ್ಥಿತಿಯಿದ್ದರೂ ಸ್ಥಿಮಿತ  ಕಳಕೊಳ್ಳದೇ ಪ್ರತಿತಂತ್ರವನ್ನು ಹೂಡುವುದು ಮತ್ತು ಅಲ್ಲಾಹನ ಮೇಲೆ ಅಣುವಿನಷ್ಟೂ ಕಲ್ಮಶವಿಲ್ಲದ ವಿಶ್ವಾಸವನ್ನು ಹೊಂದುವುದೇ ಮುಹರ‍್ರಮ್‌ನ  ಪಾಠ. ಬದ್ರ‍್ ನಲ್ಲಿ  ಪ್ರವಾದಿಯ ಜೊತೆ 313 ಮಂದಿ ಅನುಯಾಯಿಗಳು ಇದ್ದರು. ಹುದೈಬಿಯಾ ಒಪ್ಪಂದದ ವೇಳೆ 1400ರಷ್ಟು ಸಂಗಡಿಗರಿದ್ದರು.  ಮಕ್ಕಾ ವಿಜಯದ ಸಮಯದಲ್ಲಂತೂ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿತ್ತು. ಆದರೆ, ಮುಹರ‍್ರಂ 1ರಂದು ನಡೆದ ಹಿಜ್‌ರಾ ಹಾಗಲ್ಲ. ಪ್ರವಾದಿ  ಮುಹಮ್ಮದ್(ಸ) ಮತ್ತು ಅಬೂಬಕರ್(ರ) ಎಂಬ ಇಬ್ಬರ ಜೊತೆ ಮೂರನೆಯವನಾಗಿ ಇದ್ದುದು ಅಲ್ಲಾಹನು ಮಾತ್ರ. ಇನ್ನೊಂದು ಕಡೆ  ಮಕ್ಕಾದ ಅಷ್ಟೂ ಬುಡಕಟ್ಟುಗಳು ಕತ್ತಿ ಹಿರಿದು ನಿಂತಿದ್ದುವು. ಇದು ಇಸ್ಲಾಮಿನ ಪಾಲಿಗೆ ಪ್ರಪ್ರಥಮ ಅಳಿವು-ಉಳಿವಿನ ಸಂದರ್ಭವಾಗಿತ್ತು. ಈ  ಸಂದ ರ್ಭವನ್ನು ಪ್ರವಾದಿ(ಸ) ಹೇಗೆ ಎದುರಿಸುತ್ತಾರೆ ಎಂಬುದೂ ಐತಿಹಾಸಿಕವಾಗಿಯೂ ದಾಖಲಾಗುವುದಿತ್ತು. ಇಸ್ಲಾಮಿನ ಭವಿಷ್ಯವೂ ಪ್ರವಾದಿ  ಕೈಗೊಳ್ಳುವ ನಿರ್ಧಾರ ಮತ್ತು ತೋರುವ ಆತ್ಮವಿಶ್ವಾಸವನ್ನು ಹೊಂದಿಕೊಂಡಿತ್ತು. ಆ ಕಾರಣದಿಂದಲೇ ಮುಹರ‍್ರಂ ಒಂದರ ಹಿಜ್‌ರಾ  ಮುಖ್ಯವಾಗುತ್ತದೆ. ಬಹುಶಃ,

ಇತರೆಲ್ಲವುಗಳಿಗಿಂತ ಮುಹರ‍್ರಂ ಅನ್ನೇ ಖಲೀಫಾ ಉಮರ್ (ರ) ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಆಯ್ಕೆ ಮಾಡಿರುವುದಕ್ಕೆ ಇವೆಲ್ಲ  ಕಾರಣವಾಗಿರಬಹುದು.