Monday, 15 July 2024

ಬುಲ್ಡೋಜರ್‌ನ ‘ಧರ್ಮ’ವನ್ನು ತೆರೆದಿಟ್ಟ ಪತ್ರಕರ್ತ ಅನುಜ್ ಬೆಹಲ್

 



ಕಳೆದವಾರ ಫ್ರಂಟ್‌ಲೈನ್ ಪತ್ರಿಕೆ ಒಂದು ವರದಿಯನ್ನು ಪ್ರಕಟಿಸಿತ್ತು. ಅನುಜ್ ಬೆಹಲ್ ತಯಾರಿಸಿರುವ ಈ ವರದಿಯು  ಪ್ರಭುತ್ವದ ವಿನಾಶಕಾರಿ ಮತ್ತು ಪಕ್ಷಪಾತೀ ನೀತಿಯನ್ನು ಹಸಿಹಸಿಯಾಗಿ ಬಿಡಿಸಿಟ್ಟಿತ್ತು. 'ನ್ಯಾಯಾಲಯಗಳ ಅನುಮತಿ ಇಲ್ಲದೆ  ಕಳೆದ ಎರಡು ವರ್ಷಗಳಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮನೆ ಮತ್ತು ಕಟ್ಟಡಗಳನ್ನು ಬುಲ್ಡೋಜರ್ ಬಳಸಿ  ನೆಲಸಮಗೊಳಿಸಲಾಗಿದೆ, ಇದರಿಂದಾಗಿ 7 ಲಕ್ಷಕ್ಕಿಂತಲೂ ಅಧಿಕ ಮಂದಿ ನೆಲೆಯಿಲ್ಲದಂತಾಗಿದ್ದಾರೆ..’ ಎಂಬ ಮಾಹಿತಿಯನ್ನು  ಅನುಜ್ ಬೆಹಲ್ ಈ ವರದಿಯಲ್ಲಿ ನೀಡಿದ್ದಾರೆ. ಈ ಧ್ವಂಸ ಕಾರ್ಯಾಚರಣೆಯಿಂದಾಗಿ 2017ರಿಂದ 23ರ ನಡುವೆ  ಸುಮಾರು 17 ಲಕ್ಷ ಮಂದಿ ನೆಲೆ ಕಳಕೊಂಡಿದ್ದಾರೆ. ಕೇವಲ 2023ರಲ್ಲೇ  3 ಲಕ್ಷ ಮಂದಿಯನ್ನು ಈ ಬುಲ್ಡೋಜರ್ ರಾಜ್  ಬೀದಿಪಾಲು ಮಾಡಿದೆ. ಹಾಗಂತ,

ಈ ಬುಲ್ಡೋಜರ್ ಬಹಳ ಬುದ್ಧಿವಂತ. ಅದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಧ್ವಂಸ ಕಾರ್ಯಕ್ಕೆ ಇಳಿಯುವುದಿಲ್ಲ. ಅದು  ಧರ್ಮ, ಜಾತಿ, ಜನಾಂಗವನ್ನು ನೋಡಿಕೊಂಡೇ ನೆಲಸಮ ಕಾರ್ಯಾಚರಣೆಗೆ ಇಳಿಯುತ್ತದೆ. ಹೀಗೆ ಬುಲ್ಡೋಜರ್‌ಗೆ  ಸಿಲುಕಿ ಚಿಂದಿಯಾದ ಒಟ್ಟು ಮನೆಗಳ ಪೈಕಿ 44% ಮನೆಗಳು ಮುಸ್ಲಿಮರದ್ದೇ  ಆಗಿವೆ. ಬುಡಕಟ್ಟು ಸಮುದಾಯದ 23%  ಮನೆಗಳು ಧ್ವಂಸಗೊಂಡಿದ್ದರೆ ಹಿಂದುಳಿದ ಸಮುದಾಯದ 17% ಮನೆಗಳನ್ನು ಧ್ವಂಸಗೊಳಿಸಲಾಗಿದೆ. ದಲಿತ  ಸಮುದಾಯದ 5% ಮನೆಗಳೂ ಬುಲ್ಡೋಜರ್‌ಗೆ ಸಿಲುಕಿ ಧರಾಶಾಹಿಯಾಗಿವೆ. ಇದರ ಹೊರತಾಗಿ ವಿವಿಧ ಪ್ರಕರಣಗಳಲ್ಲಿ  ಆರೋಪಿಯಾಗಿರುವವರ ಮನೆಗಳನ್ನೂ ಧ್ವಂಸಗೊಳಿಸಲಾಗಿದೆ. ಒಂದು ವರದಿಯ ಪ್ರಕಾರ, ಇಂಥ 128 ಆರೋಪಿಗಳ  ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಮನೆಯನ್ನು ಧ್ವಂಸಗೊಳಿಸಲಾಯಿತು. ಅದಕ್ಕಿಂತ  ಮೊದಲು ಬೀಫ್ ಸಿಕ್ಕಿದೆ ಎಂಬ ಆರೋಪದಲ್ಲಿ ಆ ಮನೆಯವರನ್ನು ಬಂಧಿಸಲಾಗಿತ್ತು. ಬಳಿಕ ಮನೆಯನ್ನು  ಧ್ವಂಸಗೊಳಿಸಲಾಯಿತು. ಹಾಗಂತ, 

ಇಂಥ ನೆಲಸಮ ಕಾರ್ಯಾಚರಣೆಗೆ ನ್ಯಾಯಾಲಯದ ಅನುಮತಿ ಪಡಕೊಂಡದ್ದು  ವಿರಳಾತಿ ವಿರಳ. ನ್ಯಾಯಾಲಯ ಈ ಬಗ್ಗೆ ಪ್ರಶ್ನಿಸಿದರೆ ರಾಜ್ಯ ಸರಕಾರಗಳು ಕೊಡುತ್ತಿರುವ ಸಮರ್ಥನೆಗಳೂ ವಿಚಿತ್ರ. ಅವು  ಅಕ್ರಮವಾಗಿ ಕಟ್ಟಲಾಗಿರುವುದರಿಂದ ನಾವು ಧ್ವಂಸಗೊಳಿಸಿದ್ದೇವೆ ಎಂದು ಅವು ಹೇಳುತ್ತವೆಯೇ ಹೊರತು ನಿಜಸ್ಥಿತಿಯನ್ನು  ಅವು ಜಾಣತನದಿಂದ ಮರೆಸಿಡುತ್ತವೆ.

2022 ಮೇ 21ರಂದು ಅಸ್ಸಾಮ್‌ನ ನಗೋನ್ ಜಿಲ್ಲೆಯ ಸಲೊನೋಬಾರಿ ಗ್ರಾಮದ ಬಟದ್ರವ ಪೊಲೀಸ್ ಕಸ್ಟಡಿಯಲ್ಲಿ  ಶಫೀಕುಲ್ ಇಸ್ಲಾಮ್ ಎಂಬವರ ಸಾವು ಸಂಭವಿಸಿತ್ತು. ಇದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಕುಟುಂಬಿಕರು  ಆಕ್ರೋಶಗೊಂಡರು. ಇವರೊಂದಿಗೆ ಸ್ಥಳೀಯರೂ ಸೇರಿಕೊಂಡರು. ಆಕ್ರೋಶದ ಗುಂಪು ಪೊಲೀಸ್ ಠಾಣೆಗೆ ಬೆಂಕಿ  ಹಚ್ಚಿತು. ಈ ಶಫೀಕುಲ್ ಇಸ್ಲಾಮ್ ಬಡ ಮೀನು ಮಾರಾಟಗಾರ. ಈ ಘಟನೆಯ ಮರುದಿನ ಅಧಿಕಾರಿಗಳು 6 ಮಂದಿಯ  ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದರು. ಮಾತ್ರವಲ್ಲ, ಇವೆಲ್ಲ ಅಕ್ರಮವಾಗಿ ಕಟ್ಟಲಾದ ಮನೆಗಳಾಗಿದ್ದುವು  ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿರು. ವಿಶೇಷ ಏನೆಂದರೆ, ಈ ಧ್ವಂಸ ಘಟನೆಯ ಬೆನ್ನಿಗೇ ಅಸ್ಸಾಮ್  ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿತು. ರಾಜ್ಯದ ಬಿಜೆಪಿ ಸರಕಾರದ  ಪಾಲಿಗೆ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಅಲ್ಲದೇ, ಕಸ್ಟಡಿಯಲ್ಲಿ ಸಾವಿಗೀಡಾದ ಶಫೀಕುಲ್ ಇಸ್ಲಾಮ್‌ನ ಪತ್ನಿ  ರಶೀದಾ ಖಾತೂನ್ ಅವರು ಪರಿಹಾರವನ್ನು ಕೋರಿ ನ್ಯಾಯಾಲಯದ ಮೊರೆ ಹೋದರು. ಈ ಎರಡೂ ಬೆಳವಣಿಗೆಯ  ಬಳಿಕ ರಾಜ್ಯ ಸರಕಾರ ತನ್ನ ಮಾತಿನ ವರಸೆಯನ್ನು ಬದಲಿಸಿತು. ‘ಮಾರಕಾಯುಧಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯ  ಭಾಗವಾಗಿ ಮನೆ ಪರಿಶೀಲಿಸಿದೆವು, ಆದರೆ, ಪತ್ತೆ ಕಾರ್ಯಾಚರಣೆಯ ವೇಳೆ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗದೇ  ಇರುವುದರಿಂದ ಶಸ್ತ್ರಾಸ್ತ್ರಗಳನ್ನು ಮನೆಯೊಳಗೆ ನೆಲ ಅಗೆದು ಬಚ್ಚಿಟ್ಟಿರುವ ಸಾಧ್ಯತೆಯನ್ನು ಊಹಿಸಲಾಯಿತು ಮತ್ತು ಆ  ಕಾರಣಕ್ಕಾಗಿ ಮನೆಯನ್ನೇ ನೆಲಸಮಗೊಳಿಸಿ ಪತ್ತೆ ಕಾರ್ಯ ನಡೆಸಲಾಯಿತು.. ’ ಎಂದು ಕೋರ್ಟಿನ ಮುಂದೆ ಸರಕಾರ  ಹೇಳಿಕೊಂಡಿತು. ಮಾತ್ರವಲ್ಲ, ಈ ಕಾರ್ಯಾಚರಣೆಯಿಂದಾಗಿ ಬಂದೂಕು, 5 ಜೀವಂತ ಗುಂಡುಗಳು ಪತ್ತೆಯಾದುವು  ಎಂದೂ ಸಮರ್ಥಿಸಿಕೊಂಡಿತು. ಆದರೆ,

ನ್ಯಾಯಾಲಯ ಈ ಇಡೀ ಕಾರ್ಯಾಚರಣೆಯನ್ನೇ ಕಾನೂನುಬಾಹಿರ ಎಂದು ಹೇಳಿ ಸರಕಾರವನ್ನು ಕಟುವಾಗಿ ಟೀಕಿಸಿತು.  ಧ್ವಂಸಕಾರ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತು. ಮಾತ್ರವಲ್ಲ,  ಶಫೀಕುಲ್ ಇಸ್ಲಾಮ್, ಅವರ ಇಬ್ಬರು ಸಹೋದರರು ಮತ್ತು ಕುಟುಂಬದ ಮೂವರು ಸಹಿತ ಒಟ್ಟು ಧ್ವಂಸಗೊಳಿಸಲಾದ  ಆರು ಮನೆಗಳಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತು. ಕೊನೆಗೆ 2024 ಮೇ 22ರಂದು ಹಿಮಂತ್ ಬಿಸ್ವ ಶರ್ಮ  ಅವರ ಸರಕಾರ ಕೋರ್ಟಿನ ಮುಂದೆ ತಲೆಬಾಗಿತು. ಮಾತ್ರವಲ್ಲ, ಒಟ್ಟು 32 ಲಕ್ಷದ 50 ಸಾವಿರ ರೂಪಾಯಿ ಪರಿಹಾರ  ನೀಡಿರುವುದನ್ನು ದಾಖಲೆ ಸಮೇತ ನ್ಯಾಯಾಲಯಕ್ಕೆ ಸಮರ್ಪಿಸಿತು. ನಿಜವಾಗಿ,

ಈ ಶಫೀಕುಲ್ ಇಸ್ಲಾಮ್ ಪ್ರಕರಣವು ಭಾರತದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಸರಕಾರಗಳು ಹೇಗೆ ಮುಸ್ಲಿಮರನ್ನು  ದಮನಿಸುತ್ತಿವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಶಫೀಕುಲ್ ಇಸ್ಲಾಮ್‌ರನ್ನು ಬಂಧಿಸಿದ ಪೊಲೀಸರು  ಬಿಡುಗಡೆಗಾಗಿ ಕುಟುಂಬದಿಂದ  10 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪವಿದೆ. ಆದರೆ ಮರುದಿನ  ಕಸ್ಟಡಿಯಲ್ಲೇ  ಶಫೀಕುಲ್ ಇಸ್ಲಾಮ್‌ನ ಸಾವು ಸಂಭವಿಸಿತು. ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟಿತು.  ಇದಾದ ಮರುದಿನ ಪೊಲೀಸರು ಶಫೀಕ್‌ನ ಪತ್ನಿ, ಮಗಳು ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನನ್ನು ಬಂಧಿಸಿ  ಕೊಂಡೊಯ್ದರು. ಇವರ ಮೇಲೆ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಿದರು. ಇದೇ ಸಮಯದಲ್ಲಿ ಇವರ ಮನೆಯನ್ನು  ಅಧಿಕಾರಿಗಳು ಧ್ವಂಸಗೊಳಿಸಿದರು. ಅಲ್ಲದೇ, ಶಫೀಕ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಂಬಂಧಿಗಳ ಮನೆಯನ್ನೂ ಧ್ವಂಸಗೊಳಿಸಲಾಯಿತು. ಅಲ್ಲದೇ, ಮೇ 30ರಂದು ಇನ್ನೋರ್ವ ಆರೋಪಿ ಆಶಿಕುಲ್ ಇಸ್ಲಾಮ್ ಎಂಬವ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈತ ಪೊಲೀಸ್ ಕಸ್ಟಡಿಯಲ್ಲಿದ್ದು, ತಪ್ಪಿಸಿಕೊಳ್ಳುವ  ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸಮರ್ಥಿಸಿಕೊಂಡರು. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ  ಸಲೋನೋಬಾರಿ ಗ್ರಾಮದ ಯಾರೂ ಇರಲಿಲ್ಲ. ಇದು ನಕಲಿ ಎನ್‌ಕೌಂಟರ್ ಎಂದೇ ಅವರೆಲ್ಲ ವಾದಿಸಿದ್ದರು. ಈ  ಸಲೊನೋಬಾರಿ ಗ್ರಾಮದಲ್ಲಿ 3000 ಮಂದಿ ವಾಸಿಸುತ್ತಿದ್ದು, ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರಾಗಿದ್ದಾರೆ.  ನಿಜವಾಗಿ,

ಪ್ರಭುತ್ವಕ್ಕೆ ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ನೂರು ದಾರಿಗಳಿರುವಾಗ, ಜನಸಾಮಾನ್ಯರಿಗೆ ತಮ್ಮ ಸಕ್ರಮವನ್ನು  ಸಮರ್ಥಿಸಿಕೊಳ್ಳುವುದಕ್ಕೆ ಏಕೈಕ ದಾರಿಯೂ ಇರುವುದಿಲ್ಲ. ಏಕೆಂದರೆ, ಪ್ರಭುತ್ವದ ಕೈಯಲ್ಲಿ ಎಲ್ಲವೂ ಇರುತ್ತದೆ. ತನ್ನ  ಅಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿ ದಾಖಲೆಗಳನ್ನೂ ಸನ್ನಿವೇಶಗಳನ್ನೂ ಸೃಷ್ಟಿಸಿಕೊಳ್ಳುವುದಕ್ಕೆ ಅದು  ಶಕ್ತವಿದೆ. ಶಫೀಕುಲ್ ಇಸ್ಲಾಮ್ ಪ್ರಕರಣದಲ್ಲಿಯೇ ಇದಕ್ಕೆ ಆಧಾರವಿದೆ. ಆರಂಭದಲ್ಲಿ ತನ್ನ ಮನೆ ಧ್ವಂಸ  ಕಾರ್ಯಾಚರಣೆಯನ್ನು ಅಕ್ರಮದ ಹೆಸರಲ್ಲಿ ಸಮರ್ಥಿಸಿಕೊಂಡಿದ್ದ ಸರಕಾರ, ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು  ಗೊತ್ತಾದಾಗ ಶಸ್ತ್ರಾಸ್ತ್ರ ಪತ್ತೆಗಾಗಿ ಎಂಬ ಇನ್ನೊಂದು ಸಮರ್ಥನೆಯನ್ನು ಕಂಡುಕೊಂಡಿತ್ತು. ಮಾತ್ರವಲ್ಲ, ನೆಲದಲ್ಲಿ  ಹುದುಗಿಸಿಟ್ಟ ಬಂದೂಕು ಸಿಕ್ಕಿದೆ ಎಂದೂ ತನ್ನ ಧ್ವಂಸವನ್ನು ಸಮರ್ಥಿಸಿಕೊಂಡಿತ್ತು. ಹಾಗಂತ, ಅಕ್ರಮ ಎಂದು ಸುಳ್ಳು  ಹೇಳಿದ್ದ ಸರಕಾರಕ್ಕೆ ಬಂದೂಕು ಪತ್ತೆ ಎಂಬ ಇನ್ನೊಂದು ಸುಳ್ಳು ಹೇಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಹಜ. ಬಹುಶಃ,  ಈ ಸತ್ಯ ಮನವರಿಕೆಯಾದುದರಿಂದಲೇ ಪರಿಹಾರ ಕೊಡುವಂತೆ ಕೋರ್ಟು ಆದೇಶಿಸಿರಬೇಕು. ಇದು ಕೇವಲ ಒಂದೇ  ಒಂದು ನೆಲಸಮ ಕಾರ್ಯಾಚರಣೆಯ ಕತೆ. ಇಂಥ ನೆಲಸಮ ಕಾರ್ಯಾಚರಣೆಯು ಕಳೆದ ಎರಡು ವರ್ಷಗಳಲ್ಲಿ  ಒಂದೂವರೆ ಲಕ್ಷದಷ್ಟಾಗಿದೆ ಎಂದಾದರೆ, ಅದರಲ್ಲಿ ಇಂಥ ಸರಕಾರಿ ಪ್ರಣೀತ ಎಷ್ಟು ಕತೆಗಳಿರಬಹುದು? ನಗರಾಭಿವೃದ್ಧಿ,  ಸರಕಾರಿ ಭೂಮಿ ಒತ್ತುವರಿ, ಅಕ್ರಮ ನಿವಾಸ... ಎಂಬೆಲ್ಲಾ ಚಂದದ ಹೆಸರಲ್ಲಿ ನೆಲಸಮಗೊಳಿಸಲಾದ ಎಷ್ಟು ಸಕ್ರಮ  ನಿವಾಸಗಳಿರಬಹುದು? ಅದರಲ್ಲೂ ‘ಮುಸ್ಲಿಮರು’ ಎಂಬ ಕಾರಣಕ್ಕಾಗಿ ಎಷ್ಟು ಮನೆಗಳ ಮೇಲೆ ಬುಲ್ಡೋಜರ್ ಹರಿದಿರಬಹುದು?

ವರದಿಯನ್ನು ಪ್ರಕಟಿಸಿದ ಫ್ರಂಟ್‌ಲೈನ್ ಪತ್ರಿಕೆಗೂ ಮತ್ತು ವರದಿ ತಯಾರಿಸಿದ ಅನುಜ್ ಬೆಹಲ್‌ರಿಗೂ ಧನ್ಯವಾದ.

No comments:

Post a Comment